Wednesday, March 28, 2007

ಹೊಸ ಬಗೆಯ ಹೂವು

ಹೂಗಳೆಂದರೆ ಚಂದ,ಆಹ್ಲಾದ,
ಕಿರಿಕಿರಿಗೊಂಡ ಮನಸ್ಸಿಗೂ ಮುದದ ಗಂಧ!
ಹೂಗಳೆಂದರೆ ಊರಿನ ನೆನಪು, ಅವಳ ಒನಪು,
ಬೆಳಿಗ್ಗೆ ಕಣ್ಬಿಟ್ಟು ಹಿತ್ತಲಲ್ಲಿಣುಕಿದರೆ ಕಿಲಕಿಲ ಕಿನ್ನರಿಯರ ಕಂಪು!


ಹೂಗಳೆಂದರೆ ಮಹಾನಗರದ ಎಲೈಟ್ ಮತ್ತು ಸೋಲೈಟ್
ಮದುವೆಗಳ ಬಿಂಕಬಿನ್ನಾಣ,
ಎಲ್ಲ ಫಾರ್ಮಲ್ ಭೇಟಿಗಳ ಮೊದಲಲಂಕಾರ,
ಸಾವ ಹೊಸ್ತಿಲಲಿ ಹಿರಿಕಿರಿಯ ನಮಸ್ಕಾರ!

ಹೂಗಳೆಂದರೆ ಹೂವಾಡಗಿತ್ತಿ,
ಅವಳ ಮಕ್ಕಳ ಸ್ಕೂಲ್ ಫೀಸು,
ಸಂಜೆಹೊತ್ತಲಿ ರಸ್ತೆಯಂಚಲಿ ಬುಟ್ಟಿ ಬುಟ್ಟಿ ಕನಸು - ದೇವರಿಗೆ
ಮತ್ತು ಮನೆ ಬೆಳಗುವ ದೇವತೆಯರ ಮುಡಿಗೆ!
ಹೂಗಳೆಂದರೆ ಸರ್ವಋತು ಸೂಚಕ,

ಕೆ.ಎಸ್.ನ. ರೂಪಕ!

ಮೊನ್ನೆ ಹೊಸ ಬಗೆಯ ಹೂವೊಂದರ ಪರಿಚಯವಾಯಿತು..
ನೋಡಿ ಮನ ಭಯಪಟ್ಟಿತು,
ಗಾಬರಿಯ ಕಟ್ಟೆಯಲಿ ಆತಂಕದ ಚಿಲುಮೆ
ಜೀವ ಹೌಹಾರಿ ಡಾಕ್ಟರ ಬಳಿಗೋಡಿ
ಇಂದು ಬೆಳಿಗ್ಗೆ ಆಪರೇಶನ್ನು
ಅಪ್ಪಾಜಿಯ ಕಣ್ಣಲಿ ಪೊರೆಬಂದು ಹೂವು.. :(
ಕೀಳಿಸದೆ ಹೋದರೆ ನೋವು,
ಹೋಗಿಯೇಬಿಡಬಹುದು ನೋಟದ ಕಸುವು!



ಇದೂ ಹೂವೆ!
ಬಳ್ಳಿಯಲಿ ಬಿಡುವಂತಿಲ್ಲ, ಕಿತ್ತು ದೂರವಿಡಬೇಕು..



6 comments:

Chevar said...

a good narration... nice to read your blog...

Sandeepa said...

(visit)

Sushrutha Dodderi said...

ಕಣ್ಣ ಕೊಳದಲ್ಲಿ ಬಿಟ್ಟ ಹೂವಾದ್ದರಿಂದ ಅದನ್ನು 'ಕಮಲ'ವೆನ್ನಬಹುದೇ??! ಇನ್ನೂ ನಾನು ಹೂವು ನೀಡಿದ ಹೊಸ ಆಹ್ಲಾದದಿಂದ ಹೊರ ಬಂದಿರಲಿಲ್ಲ; ಅಷ್ಟರೊಳಗೆ ಮತ್ತೊಮ್ಮೆ ಆಹ್ಲಾದ :)

ಅಂದಹಾಗೇ, ಈಗ ಹೆಂಗಿದ್ದ ಅಪ್ಪ? ಎಲ್ಲಾ ಸರಿಯಾಗಿ ಕಾಣ್ತು ತಾನೆ?

ಸಿಂಧು sindhu said...

ಮಹೇಶ್ ನನ್ನ ಬ್ಲಾಗಿಗೆ ಸ್ವಾಗತ, ಮೆಚ್ಚುಗೆಗೆ ಧನ್ಯವಾದಗಳು.

ಸಂದೀಪ್ ನಿಮ್ಮ ಕಣ್ಣೀರ ಬ್ಲಾಗ್ ಓದಿದೆ.. :)

ಸು: ಅದು ಆಡುಭಾಷೆಯ ಪ್ರಕಾರ ಹೂವು ಅಷ್ಟೆ.. ನಿಜ್ವಾಗ್ಲೂ ಅದನ್ನ ನೋಡಿ ನಂಗೆ ಕೈಕಾಲೆ ಆಡ್ಲಿಲ್ಲ.. :( ಕಮಲದ ಹೂವೆಂದು ಕರೆದು ಅಡಿಗರ ಕೆಂದಾವರೆ ಅಪಚಾರ ಮಾಡಲಾರೆ.. ;)

ಅಪ್ಪ ಈಗ ಆರಾಮು. ಕಣ್ಣು ಸರಿಹೋಗಿದೆ..

ಸಿಂಧು sindhu said...

ಕೆಂದಾವರೆ*ಗೆ

ಶ್ರೀನಿಧಿ.ಡಿ.ಎಸ್ said...

ಎಲ್ಲರೂ ಹೂಗಳ ಹಿಂದೆ ಬಿದ್ದಿದ್ದಾರಲ್ಲ!!:)

ಹೂಗಳೆಂದರೆ ಹೂವಾಡಗಿತ್ತಿ,
ಅವಳ ಮಕ್ಕಳ ಸ್ಕೂಲ್ ಫೀಸು,
ಸಂಜೆಹೊತ್ತಲಿ ರಸ್ತೆಯಂಚಲಿ ಬುಟ್ಟಿ ಬುಟ್ಟಿ ಕನಸು - ದೇವರಿಗೆ
ಮತ್ತು ಮನೆ ಬೆಳಗುವ ದೇವತೆಯರ ಮುಡಿಗೆ!

ಈ ಸಾಲುಗಳು ಹಿಡಿಸಿದವು.
ಅಪ್ಪ ಮತ್ತೆ ಮೊದಲಿನಂತಾಗಲಿ.