Thursday, March 29, 2007

ಜಯಂತ ಕಾಯ್ಕಿಣಿಯವರ ಹೊಸ ಕತೆ - ನೀರು

ನಿದ್ದೆ, ಎಚ್ಚರ ,ನೀರು, ಬೆಳಕು, ಪಯಣ, ಭಯ, ದಣಿವುಗಳ ಮಾದಕ ಮಿಶ್ರಣದಂತಿರುವ ಒದ್ದೆ ಇರುಳಲ್ಲಿ
ಒಂದು ಸ್ವಪ್ನದಲ್ಲಿ ನಡೆದಂತೆ ನಡೆದರು. ಅದಾಗಲೇ ಅವರ ನಡುವೆ ಎಷ್ಟೋ ವರುಷಗಳಿಂದ ಜತೆಗಿದ್ದಂತಿದ್ದ
ಸಲುಗೆಯ ದಣಿವು ಇತ್ತು.

"ಕಾಳಜಿ ಮಾಡಬೇಡಿ ಸಾಬ್, ಬೇಗ ಬಲುಬೇಗ ಗುಣವಾಗ್ತೀರಿ, ನಿಮ್ಮ ಮೊಮ್ಮಗಳ ಮದುವೆ ಖಂಡಿತ
ನೋಡ್ತೀರಿ. ನನ್ನ ಈ ರಾತ್ರಿಯ ದುವಾ ಇದೆ ನಿಮಗೆ"

ಲಕ್ಷಾಂತರ ಮನೆಗಳನ್ನು ನಡುನೀರಿನಲ್ಲಿ ಬಿಟ್ಟು ಲಕ್ಷಾಂತರ ಜನರನ್ನು ಅಂಚಿಗೆ ತಳ್ಳಿದ ಈ ಜಲಪ್ರಳಯದ ಅನಂತರದ ಈ ಸುದೀರ್ಘ ನೀರವದ ಬೀದಿಯಲ್ಲಿ, ಇರುಳಿನ ಕೊನೆಗಳಿಗೆಯಲ್ಲಿ, ಆರಾಧ್ಯ ಜೀವದ ಲೇಸಿಗೆಂದು ಹೃದಯ ತುಂಬಿ ತಂದ ಪುಟ್ಟ ಬಿಂದಿಗೆಯೊಂದು ಚಲಿಸಿ ಹೋದ ರೀತಿಯನ್ನು ಸುಮ್ಮನೆ ನೋಡಿದ ಸಂತೋಷನ್ ಗೆ ದೇವರನ್ನೇ ಕಂಡಂತಾಯಿತು..

ಮೇಲಿನ ಈ ಮೂರೂ ಪಂಕ್ತಿಗಳು ನನ್ನ ಪ್ರೀತಿಯ ಕತೆಗಾರ ಜಯಂತ್ ಕಾಯ್ಕಿಣಿಯವರ ಇತ್ತೀಚಿನ ಪ್ರಕಟಿತ ಕತೆ - ನೀರು - ಇಂದ ಆಯ್ದದ್ದು. ತರಂಗದ ಈ ಬಾರಿಯ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದೆ.


ಜಯಂತ್ ನನ್ನ ಪ್ರೀತಿಯ ಬರಹಗಾರರು. ಒಬ್ಬ ಲೇಖಕರಾಗಿ ಮತ್ತು ವ್ಯಕ್ತಿಯಾಗಿ ನಾನು ಅವರನ್ನು ತುಂಬ ಇಷ್ಟಪಡುತ್ತೇನೆ. ಅವರ ಸಹವಾಸವೇ, ಮಾತುಕತೆಯೇ ಒಂದು ಆಹ್ಲಾದ.. ಕಡಲ ದಂಡೆಯ ಸಂಜೆ ಗಾಳಿಯಂತೆ... ಅವರ ಬರಹಗಳು ಮಬ್ಬು ಕವಿದ ಮನಸ್ಸಿನಲ್ಲಿ ಮಿನುಗುವ ಪುಟ್ಟ ದೀಪಗಳಾಗಿ ಚಿಂತನೆಯ ಬೆಳಕು ಹಚ್ಚುತ್ತವೆ. ಇಲ್ಲ ಅವರೇನು ಉಪದೇಶ ಮಾಡುವುದಿಲ್ಲ, ದಾರಿದೀಪವೂ ಅಲ್ಲ - ಕತ್ತಲ ಹಾದಿಯುದ್ದದ ಮನೆಗಳ ದೀಪದ ಕೋಲಿನಂತೆ ಅವರ ಬರಹ/ಕತೆ/ಕವನಗಳು. ಅದು ಕಣ್ಣೂ ಕುಕ್ಕುವ ಪ್ರಖರ ಬೆಳಕಲ್ಲ, ಇದೇ ದಾರಿಯಲ್ಲಿ ಹೋಗಿ ಎಂದು ಹೇಳುವ ಕೈಮರವಲ್ಲ.. ನಿಮ್ಮ ದಾರಿಯ ನೀವೇ ಹುಡುಕಿಕೊಳ್ಳಲು ಸುಲಭವಾಗುವಂತೆ, ನಿಮಗೇ ಉದ್ದೇಶಿಸದಂತೆ, ಆದರೆ ನಿಮಗಾಗೇ ಕಾದಿರುವಂತೆ ಬೆಳಗಿರುವ ಬೆಳಕಿನ ಕೋಲುಗಳು. ಓದತೊಡಗಿದಂತೆ ಆಪ್ತವಾಗಿ ತೆರೆದುಕೊಳ್ಳುವ ಕಥಾಲೋಕದೊಂದಿಗೆ ನಿಮ್ಮೊಳಹೊಕ್ಕು, ನಿಮ್ಮ ನಡೆ ನುಡಿ ಆಲೋಚನೆಗಳಲ್ಲಿ ನಿಮ್ಮವೇ ಆಗಿ ಹೊರಹೊಮ್ಮುವ ಭಾವ ದೀಪಗಳು.


ಕೆಲದಿನಗಳ ಹಿಂದೆ ದೇಶಕಾಲದಲ್ಲಿ ಅವರ ಚಾರ್ ಮಿನಾರ ಕತೆಯ ನೈಋತ್ಯ-ಪುನರ್ವಸು ಚಿತ್ರಣದಿಂದ ನಾನಿನ್ನೂ ಹೊರಬಂದಿರಲಿಲ್ಲ.. ಈಗ ನೀರು ಓದಿದೆ.


ಮುಂಬೈ ಎಂಬ ಮಹಾನಗರಿಯ ಬಗ್ಗೆ ಆಗೀಗ ಓದುವಾಗ ಹುಟ್ಟುವ ಪರಕೀಯಭಾವ ಜಯಂತರ ಕತೆಯ ಮೂಲಕ ನೀಗುತ್ತದೆ. ಮುಂಬೈ ಶಹರು (ಜಯಂತರದೇ ಭಾಷೆ) ನನ್ನ ಪುಟ್ಟ ಊರಿನ, ಮಲೆನಾಡಿನ ಸೆರಗಾಗಿ ಭಾಸವಾಗುತ್ತದೆ. ನಗರದ ಎಲ್ಲ ಮಹಾಚಿತ್ರಗಳ ನಡುವೆ ಒಂದು ಮಾನವೀಯತೆಯ ಚಿತ್ರ ಮೂಡಿನಿಲ್ಲುತ್ತದೆ.


ನೀರು ಕತೆಯ ಬಗ್ಗೆ ನಾನೇನೂ ಹೆಚ್ಚು ಬರೆಯುವಷ್ಟಿಲ್ಲ.. ಜಯಂತರ ಕತೆಗಳನ್ನು ಕತೆಯಾಗಿ ಓದಿಯೇ ಅನುಭವಿಸಬೇಕು. ಅವಕ್ಕೆ ವಿಮರ್ಶೆಯ ಬಿಂಕ ಬಿನ್ನಾಣವಿಲ್ಲ. ಪರಿಚಯದ ಸಡಗರ ಬೇಕಿಲ್ಲ. ಆಫೀಸಿನಿಂದ ಬಂದು ಸುಮ್ಮನೆ ಕಿಟಕಿ ಬದಿಯ ಕುರ್ಚಿಯಲ್ಲಿ ಕೂತು, ಕತೆ ಓದಲು ಪ್ರಾರಂಭಿಸಿದರೆ ಕೊನೆಯ ಸಾಲಿಗೆ ಬಂದಾಗಲೇ ಕಣ್ಣು ಮೇಲೆತ್ತಲಾಗುವುದು..ಉಹ್ ಎಂಬ ನಿಟ್ಟುಸಿರು ತನ್ನಿಂತಾನೆ ಜಾರುತ್ತದೆ. ಇಲ್ಲೆ ಮನೆಯ ಮೂಲೆಯಿಂದ ಲೋಕಾಂತರದ ಟ್ರೇನ್ ಹಿಡಿದಿರುತ್ತೇವೆ.. ಅಲ್ಲೆಲ್ಲ ಓಡಾಡಿ, ಕತೆಯ ಪಾತ್ರಗಳೊಡನಾಡಿ ಅವರ ಸಂಕಟಕ್ಕೆ ಬಿಕ್ಕಿ, ಚಿಕ್ಕ ಖುಷಿಗಳಿಗೆ ನಗು ಸೂಸಿ, ಅವರ ತಳಮಳಕ್ಕೆ ಒಡಲಾಗಿ ಸಹಪ್ರಯಾಣ ಮಾಡುತ್ತೇವೆ.


ಮತ್ತೆ ಮೇಲೆ ಹೇಳಿದ ಅವರ ನೀರು ಕತೆಯ ಸಾಲುಗಳಿಂದಲೇ ಈ ಬರಹವನ್ನು ಮುಗಿಸಬಯಸುತ್ತೇನೆ. - ಲಕ್ಷಾಂತರ ಮನೆಗಳನ್ನು ನಡುನೀರಿನಲ್ಲಿ ಬಿಟ್ಟು ಲಕ್ಷಾಂತರ ಜನರನ್ನು ಅಂಚಿಗೆ ತಳ್ಳಿದ ಈ ಜಲಪ್ರಳಯದ ಅನಂತರದ ಈ ಸುದೀರ್ಘ ನೀರವದ ಬೀದಿಯಲ್ಲಿ, ಇರುಳಿನ ಕೊನೆಗಳಿಗೆಯಲ್ಲಿ, ಆರಾಧ್ಯ ಜೀವದ ಲೇಸಿಗೆಂದು ಹೃದಯ ತುಂಬಿ ತಂದ ಪುಟ್ಟ ಬಿಂದಿಗೆಯೊಂದು ಚಲಿಸಿ ಹೋದ ರೀತಿಯನ್ನು ಸುಮ್ಮನೆ ನೋಡಿದ ಸಂತೋಷನ್ ಗೆ ದೇವರನ್ನೇ ಕಂಡಂತಾಯಿತು.. -


ಮಳೆಯ ಪ್ರಳಯದಲ್ಲಿ ಭಾವನೆಗಳನ್ನು ಲಯಗೊಳಿಸಿ ಹೊಸ ಸೃಷ್ಟಿ ನಡೆಸಿದ ಸೃಜನಶೀಲ ಕತೆಯಿದು.. ತಪ್ಪದೇ ಓದಿ.

6 comments:

Sushrutha Dodderi said...

i'm not able to get a copy of Tharanga... yava angadiyalli kELidroo 'illa saar' anthidaare... :(

Sree said...

ಬಹಳ ಆತ್ಮೀಯವಾದ ಚಿತ್ರಣ(ವಿಮರ್ಶೆಗೆ substitute!) ನೀಡಿದ್ದೀರಿ! ಯುಗಾದಿ ವಿಶೇಷಾಂಕದ ಬೇಟೆ ಷುರು ಹಚ್ಚಿಕೋತೀನಿ!:)

VENU VINOD said...

KaYkiNI nijaKKU tuMbA cheNNAgi barEtare.
i liked his his style of ariting as well as things he writes on.

ಭಾವಜೀವಿ... said...

ನಿಜಕ್ಕೂ ಒಂದು ಉತ್ತಮ ವಿಮರ್ಶೆಯಲ್ಲದ ವಿಮರ್ಶೆ!!
ನಿಮ್ಮಂತೆ ನನಗೂ ಕಾಯ್ಕಿಣಿಯವರು ಪಾತ್ರಗಳನ್ನು ಚಿತ್ರಿಸುವ ರೀತಿ, ಅವುಗಳ ಭಾವನೆಗಳನ್ನು, ಮನಸ್ಸಿನ ಹೊಯ್ದಾಟಗಳನ್ನು ವಿವರಿಸುವ ರೀತಿ ಅಮೋಘವೆನಿಸುತ್ತದೆ... ಚಿತ್ತಾಲ, ವ್ಯಾಸರಾಯ ಬಲ್ಲಾಳ ವಿವೇಕ್ ಶಾನುಭಾಗ್ ಶೈಲಿಯನ್ನು ಒಂದಿಷ್ತು ಹೋಲುವ ಅವರ ಬರೆಯುವ ವೈಖರಿ ನನ್ನನ್ನು ಇಡಿ ಕತೆಯ ಒಳಗೆ ಎಳೆದುಕೊಂಡು ಅದರೆಲ್ಲೆ ಒಂದಾಗಿಸಿಕೊಳ್ಳುತ್ತದೆ!
ಈಗ ಅವರ "ಶಬ್ಧ-ತೀರ" ಓದ್ತಾ ಇದ್ದೀನಿ..!

ಶ್ರೀನಿಧಿ.ಡಿ.ಎಸ್ said...

ನಾನೂ ಹುಡ್ಕತಿ ಸುಶ್,
ಸಿಕ್ಕಿರೆ ನಿಂಗೆ ಕೊಡೋಣವಂತೆ!

ಸುಪ್ತದೀಪ್ತಿ suptadeepti said...

ಜಯಂತ್ ಕಾಯ್ಕಿಣಿ ಬಗ್ಗೆ ಆತ್ಮೀಯ ಮಾತುಗಳು... ಸತ್ಯ. ಅವರ ಒಂದಿಷ್ಟು ಪರಿಚಯ ನನಗೂ ಇದೆ, ಸ್ನೇಹಿತನಂತೆ ಹರಟುವ ಜಯಂತ್ ನಾವು ತನ್ನಿಂದ ಕಿರಿಯರೆಂದು ಭೇದ ಮಾಡದ ಅಪರೂಪದ ವ್ಯಕ್ತಿ. ಅವರ ಬಗ್ಗೆ ಬರೆದದ್ದಕ್ಕೆ ಧನ್ಯವಾದಗಳು.