Friday, March 9, 2007

ಮಗಳ ಕಣ್ಣಲ್ಲಿ ನಾವು ಕಂಡ ಕನಸು..

ಮಧ್ಯಾಹ್ನವಿಡೀ ಯಕ್ಷ ಕುಣಿತ ಕುಣಿದ ಮಳೆ, ಸಂಜೆಯ ಹೊತ್ತಿಗೆ ಮೋಡದ ಹಿಂದೆ ಪಾಪದ ಮುಖ ಮಾಡಿ ನಿಂತಿದ್ದ ಸೂರ್ಯನ ದೈನ್ಯ ನೋಡಲಾಗದೆ, ಹೋಗ್ಲಿ ಆಡ್ಕೊ ಅಂತ ಬಿಟ್ಟ ಕೂಡಲೆ, ಸೂರ್ಯ ಒಂದು ನಿಮಿಷವನ್ನೂ ವೇಸ್ಟು ಮಾಡದೆ ಇಳಿ ಸಂಜೆಯಲ್ಲೆ ಕಣ್ಣಿಗೆ ಕಂಡಲೆಲ್ಲ ಸಂಜೆಯ ಕೆಂಪು ಎರಚಿದ. ಗಡಿಬಿಡಿಯಲ್ಲಿ ಬಣ್ಣ ಮಡಕೆಯಿಂದ ಚೆಲ್ಲಿ ಹೋಗಿ ಬಾನಿಡೀ ಹರಡಿ, ಆಕಾಶದ ನೀಲಿಯೇ ಫೇಡ್ ಆಗಿಹೋಯಿತು. ಯಾರಾದ್ರೂ ನೋಡಿ ಏನಂತಾರೋ ಎಂಬ ಧಾವಂತದಿಂದ ಸೂರ್ಯ ಸರಸರನೆ ಹತ್ತಿರವೇ ಸಿಕ್ಕ ಗುಡ್ಡದ ಹಿಂದೆ ಜಾರತೊಡಗಿದ. ಮನೆಗೆ ಮರಳುವ ದಾರಿಯಲ್ಲಿದ್ದ ಹಕ್ಕಿಗಳಿಗೆ ಈ ಗುಟ್ಟು ಗೊತ್ತಾಗಿ ಸುಮ್ಮನಿರಲಾಗದೆ ದಾರಿಯಲ್ಲಿ ಸಿಕ್ಕಸಿಕ್ಕವರಿಗೆಲ್ಲಾ ಹೇಳತೊಡಗಿದವು. ಎಲ್ಲೆಲ್ಲೂ ಹಕ್ಕಿಗಳ ಚಿಲಿಪಿಲಿ.

ರಾಮಚಂದ್ರ ರಾಯರು ಮಳೆಯ ಪ್ರತಾಪದಿಂದ ಗದ್ದೆಯಲ್ಲಿ ಏನೇನು ಹೆಚ್ಚುಕಡಿಮೆಯಾಗಿದೆ ನೋಡಲು ಹೋದವರು ಮನೆಗೆ

ವಾಪಸಾಗುತ್ತಿದ್ದರು. ಕ್ಷಣ ಕಾಲ ಅಲ್ಲೇ ಬ್ಯಾಣದ ಬದಿಯಲ್ಲಿ ನಿಂತಿದ್ದು ಸೂರ್ಯನ ಚೇಷ್ಟೆ ನೋಡಿ ಹೊರಟವರಿಗೆ ಹಕ್ಕಿಗಳ ಗಾಸಿಪ್ ನಗು ತರಿಸಿತು. ಹಾಗೆ ಮುಂದರಿದವರಿಗೆ ಶಾಲೆಯ ಬಯಲ ಹತ್ತಿರ ಬಂದಾಗ ಒಂದಿಷ್ಟು ಹುಡುಗರೂ ಮತ್ತು ಮಾಷ್ಟ್ರೂ ಅಲ್ಲೇ ಏನೋ ಬ್ಯಾನರ್ ಕಟ್ಟುತ್ತಾ ನಿಂತಿದ್ದು ಕಾಣಿಸಿತು. ಹತ್ತಿರ ಹೋಗಿ ವಿಚಾರಿಸಿದರು. ಮರುದಿನ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಿತ್ತು. ಹಿರಿಯ ಶಿಕ್ಷಣ ತಜ್ಞರೊಬ್ಬರು ಅಥಿತಿಯಾಗಿ ಬರುವವರಿದ್ದರು. ಹಿಂದಿನ ವರ್ಷ ಎಸ್ಸೆಲ್ಸಿಯಲ್ಲಿ ಹೆಚ್ಚಿನ ಸಾಧನೆ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಹುಮಾನ, ಕ್ವಿಝ್, ಹಲವು ಬೌಧ್ಧಿಕ ಆಟಗಳು ಇನ್ನೂ ಏನೇನೋ ಇತ್ತು. ಊರ ಹಿರಿಯರಿಗೂ ಆಹ್ವಾನವಿತ್ತು. ಮಾಷ್ಟ್ರು ರಾಯರನ್ನೂ ಕರೆದರು. ಅವರಿಗೆ ಏನು ಉತ್ತರ ಹೇಳಿದರೋ ನೆನಪಿಲ್ಲ.

ಕೂಡಲೆ ಮನೆಯ ಹಾದಿ ಹಿಡಿದ ರಾಯರಿಗೆ ಮನೆಯ ದಣಪೆ ಅಡ್ಡ ಬಂದಾಗಲೆ ಎಚ್ಚರ. ಒಳ ಹೋದವರೇ ಕೈಕಾಲು ತೊಳೆದು ದೇವರಿಗೆ ನಮಸ್ಕಾರ ಮಾಡಿದವರು ಜಗುಲಿಯಲ್ಲಿದ್ದ ಆರಾಮಕುರ್ಚಿಯಲ್ಲಿ ಕೂತುಬಿಟ್ಟರು. ಮಡದಿ ಜಯಲಕ್ಷ್ಮಿ ಸಂಜೆಯ ಸೀರಿಯಲ್ ನೋಡಲು ಕರೆಯುತ್ತಿದ್ದರೂ ಒಳಗೆ ಹೋಗದೆ ಅಲ್ಲೇ ಕೂತರು. ಸಂಜೆಯ ದೀಪ ಹೊತ್ತಿತ್ತು. ಕಿಟಕಿಯ ಕಬ್ಬಿಣದ ಡಿಸೈನು ಗೋಡೆಗಳ ಮೇಲೆ ಇನ್ನೋಂದೇ ವಿನ್ಯಾಸ ರಚಿಸಿತ್ತು.

ಆ ವಿನ್ಯಾಸಗಳನ್ನೇ ನೋಡುತ್ತಿದ್ದ ರಾಯರ ಕಣ್ಣು ಕಂಡ ನೋಟ ಮಾತ್ರ ಬೇರೆಯದೇ. ಆ ವಿನ್ಯಾಸಗಳ ಮರೆಯಿಂದ ಮಗಳು ಮಧುರಳ ನಿಲುವು ಊಂಹೂ ಎರಡು ಮಕ್ಕಳ ಅಮ್ಮ ಈಗಿನ ಮಧುರ ಅಲ್ಲ, ಅವತ್ತಿನ ಎರಡು ಜಡೆಯ ಪುಟ್ಟಿಯದು ಮೂಡತೊಡಗಿತ್ತು. ಬೆಳಿಗ್ಗೆ ಅವಳನ್ನು ಎಬ್ಬಿಸುವುದೇ ಒಂದು ಹರಸಾಹಸ ರಾಯರಿಗೆ. ದಿನಾ ರಾತ್ರಿ ಮಲಗುವಾಗ, 'ಅಪ್ಪಾಜಿ

ಬೆಳಿಗ್ಗೆ ಐದು ಗಂಟೆಗೇ ಎಬ್ಬಿಸು,' ಅಂತ ಹೇಳಿ ಮಲಗುತ್ತಿದ್ದ ಮಗಳ ಅಹವಾಲಿಗೆ ಉತ್ತರವಾಗಿ ರಾಯರು ನಾಲ್ಕೂಮುಕ್ಕಾಲಿಗೆ ಅಲಾರ್ಮ್ ಇಟ್ಟು ಎದ್ದು ಬಚ್ಚಲೊಲೆಗೆ ಬೆಂಕಿ ಹಾಕಿ, ಮಧುರಳನ್ನು ಎಬ್ಬಿಸುವ ಹೊತ್ತಿಗೆ ಐದೂವರೆಯಾಗಿ ಹಂಡೆಯಲ್ಲಿನ ನೀರು ಕುದಿಯತೊಡಗುತ್ತಿತ್ತು. ಅಷ್ಟು ಹೊತ್ತಿಗೆ ಎದ್ದೂ ಮಧುರಳಿಗೆ ಇನ್ನೂ ಕಣ್ಣು ಕೂತೇ ಇರುತ್ತಿತ್ತು. ಪತ್ನಿಗೆ ಎದ್ದು ಕಾಫಿ ಮಾಡಿಕೊಡೆ ಪಾಪ ಮಗೂಗೆ ಎಂದರೆ ಅವಳಿಗೆ ಸಿಟ್ಟೋ ಸಿಟ್ಟು. "ಅವಳು ಎದ್ದು ಓದೋ ವೇಷಕ್ಕೆ ಕಾಫಿ ಬೇರೆ. ಒಂದಿನ ತಾನಾಗೆ ಅಲಾರ್ಮ್ ಇಟ್ಟು ಐದು ಗಂಟೆಗೆ ಏಳಲಿ. ಒಂದಿನ ಏಳಲಿ ಸಾಕು, ದಿನಾ ಕಾಫಿ ಮಾಡಿಕೊಡ್ದೆ ಇದ್ರೆ ಕೇಳಿ. ಅಂತ ಸಿಡುಕುವಳು. ಹಂಗೂ ಹಿಂಗೂ ಅವಳನ್ನ ಪುಸಲಾಯಿಸಿ ಕಾಫಿ ಮಾಡಿಸಿಕೊಳ್ಳುವಾಗ ಆರು ಗಂಟೆಯೇ ಆಗಿರುತ್ತಿತ್ತು. ಮತ್ತೆ ಅರ್ಧ ಗಂಟೆಗೆಲ್ಲ ಮಗಳು ಪುಸ್ತಕ ಬ್ಯಾಗಿಗೆ ತುಂಬಿ ಹಿತ್ತಲಲ್ಲಿ ಗಿಡಕ್ಕೆ ನೀರು ಹೊಯ್ಯುತ್ತಿರುತ್ತಿದ್ದಳು.

ಅವಳು ಬೇಲಿಯಂಚಲ್ಲಿದ್ದ ಗಂಟೆದಾಸವಾಳದ ಹೂವು ಕೊಯ್ಯುವಾಗ, ಪತ್ನಿ ದೂರು ಹೇಳುತ್ತಿದ್ದಳು. ನೋಡಿ ಅರ್ಧ ಗಂಟೆಯೂ ಓದಿಲ್ಲ ಎಸ್ಸಲ್ಸಿ ಬೇರೆ, ನಾನು ಹೇಳಿದರಂತೂ ಅವಳ ಕಿವಿಗೇ ಹೋಗುವುದಿಲ್ಲ. ನೀವಾದ್ರೂ ಹೇಳಬಾರದೆ. ಸರಿ ಹೇಗೂ ಹೂವು ಕೀಳುತ್ತಾ ಇದ್ದಾಳೆ ಮಾತಾಡೋಣ ಅಂತ ಹೋಗುವಾಗ ಅವಳು ತುಂಬೆಯ ಹೂವು ಕೊಯ್ಯುತ್ತಿದ್ದವಳು, ನಾನು ಹತ್ತಿರ ಹೋದಕೂಡಲೇ ಅಲ್ಲಿ ಹೊಸದಾಗಿ ಮೊಳಕೆಯೊಡೆದಿದ್ದ ಸಿಕ್ಸ್‌ಮಂತ್ ತೋರಿಸುತ್ತಾಳೆ. ಅದು ನೋಡಿ ಮುಗಿಯುವಾಗ ಅಲ್ಲಿ ಬಿದಿರಮಟ್ಟಿಯಲ್ಲಿ ಬಂದು ಗೂಡು ಕಟ್ಟಿದ ಅದ್ಯಾವುದೋ ಹೆಸರು ಗೊತ್ತಿಲ್ಲದ ಹಕ್ಕಿಯ ಕೂಗು ಕೇಳಿಸುತ್ತದೆ. ಅದನ್ನ ನಾವಿಬ್ಬರೂ ನೋಡಿ ಬರುವಾಗ ನನಗೆ ಅಲ್ಲಿ ಬೇಲಿಯ ಸಾಲಿನಲ್ಲಿ ನೆಟ್ಟಿದ್ದ ಅನಾನಸ್ ನೆನಪಾಗುತ್ತದೆ. ಇಬ್ಬರೂ ಅದರ ಬೆಳವಣಿಗೆ ನೋಡಿಕೊಂಡು ಹಿಂದಿರುಗುವಾಗ ಗುಲಾಬಿ ಗಿಡಗಳ ಕಟ್ಟಿಂಗ್ ಮಾಡಬೇಕಾಗಿದ್ದು ನೆನಪಾಗುತ್ತದೆ. ಅದನ್ನೆಲ್ಲ ಮಾಡಿ ಮುಗಿಸಿ ಮನೆಯೊಳ ಹೋಗುವಾಗ ರೇಡಿಯೋದಲ್ಲಿ ಏಳೂವರೆಯ ವಾರ್ತೆ ಅರ್ಧ ಮುಗಿದಿರುತ್ತದೆ. ಆಗ ಹೆಂಡತಿ ತಂದುಕೊಡುವ ಕಾಫಿಯಂತೆ ಅವಳ ಕಣ್ಣೂ ಹೊಗೆಯುಗುಳುತ್ತದೆ. ಹೋಗಿ ಹೋಗಿ ನಿಮಗೆ ಹೇಳಿದೆನಲ್ಲಾ ಎಂಬ ಸಂತಾಪದಿಂದ. ಮಧುರಳಿಗೆ ಅಮ್ಮನ ಸಿಟ್ಟು ತಾಗುವುದೇ ಇಲ್ಲ.

ಮಧುರಳಿಗೆ ಅಮ್ಮನ ಸಿಟ್ಟು ತಾಗುವುದೇ ಇಲ್ಲ. ನನ್ನವಳು ಈಗ ಇಷ್ಟು ಸಿಟ್ಟು ಮಾಡಿದರೂ ಅವಳು ಶಾಲೆಗೆ ಹೊರಡುವಾಗ ಮಾತ್ರ ಮಧುನ ಕೈನೋಯುತ್ತೇನೋ ಎಂಬಂತೆ ಅವಳ ಶಾಲೆಯ ಬ್ಯಾಗ್ ಕೈಯಲ್ಲಿ ಹಿಡಿದು ಅವಳನ್ನು ಸೈಕಲ್ ಹತ್ತಿಸಿ ಟಾಟಾ ಮಾಡುತ್ತಾಳೆ. ಏನಿದೂ ಇಷ್ಟೊಂದು ಉಪಚಾರ ಎಂದು ಛೇಡಿಸಿದರೆ ಸಾಕು ಅವಳ ಚೆಹರೆಯೇ ಬದಲಾಗುತ್ತದೆ. ಎಂದಿನ ಉತ್ತರ ರೆಡೀ ಇರುತ್ತದೆ. "ಏನೋ ನಮ್ಗೆಲ್ಲ ಶಾಲೆಯ ಕಟ್ಟೆ ಹತ್ತಲಿಕ್ಕಾಗಲಿಲ್ಲ, ಮಗಳು ಹತ್ತಿದವಳು ಚೆನ್ನಾಗಿ ಓದಲಿ ಅಂತ ಆಸೆಯಪ್ಪಾ...


ಹೀಗೆ ಉರುಳಿದ ದಿನಗಳ ಕೊನೆಗೆ ಒಂದು ಏಪ್ರಿಲ್ ಬಂತು. ಮೊದಲ ವಾರವಿಡೀ ಮಧುರಳಿಗೆ ಪರೀಕ್ಷೆ. ಅವಳು ಎಂದಿನಂತೆ ಆರುಗಂಟೆಗೆ ನಿದ್ದೆಕಣ್ಣಲ್ಲೆ ಎದ್ದು ಓದಿ ಹಿತ್ತಲಲ್ಲಿ ನಲಿದು ಪರೀಕ್ಷೆಗೆ ತಯಾರಾಗಿ ಹೋದಳು. ದೇವರಿಗೆ ಮಾತ್ರಾ ನನ್ನವಳಿಂದ ದಿನಾ ಒಂದು ಎಕ್ಸ್‌ಟ್ರಾ ತುಪ್ಪದ ದೀಪ! ಏಪ್ರಿಲ್ ಮುಗಿದು ಮೇಯ ಕೊನೆಯ ವಾರ ಒಂದಿನ ಮಧ್ಯಾಹ್ನ ಊಟ ಮಾಡುವಾಗ ಪ್ರದೇಶಸಮಾಚಾರದಲ್ಲಿ ಎಸ್ಸಲ್ಸಿ ರಿಸಲ್ಟು ಪ್ರಕಟವಾಗಿದೆ ಅಂತ ಗೊತ್ತಾಗಿದ್ದೆ ಮಧುರಳ ಊಟ ಚುಟುಕಾಯಿತು. ಅವಳಮ್ಮನ ಆತಂಕ ಇಲ್ಲಿ ಬರೆಯಲಿಕ್ಕೆ ಬರುವುದಿಲ್ಲ. ನನಗೂ ಏನೋ ಎಂಬ ಆತಂಕವಿದ್ದರೂ ಮಧುರಳ ಚುರುಕುಬುಧ್ದಿಯ ಬಗ್ಗೆ ವಿಶ್ವಾಸವಿತ್ತು. ಮರುದಿನ ರಿಸಲ್ಟು ನೋಡಲು ಶಾಲೆಗೆ ಹೊರಟವಳನ್ನ ನಾನೂ ಜೊತೆಗೇ ಬರಲಾ ಅಂತ ಕೇಳಿದೆ. ಬೇಡವೆಂದು ತಲೆಯಾಡಿಸಿದವಳೇ ಸೈಕಲ್ ಹತ್ತಿ ಬಾಣದಂತೆ ಸಾಗಿದ್ದಳು. ಮತ್ತೆ ಅರ್ಧ ಗಂಟೆಗೆ ವಾಪಸ್ಸಾದವಳ ಮುಖದ ಮೇಲೆ ಮೂಡಿದ ಬೆವರು ಹನಿಗಳಲ್ಲಿ ಬೆಳಗಿನ ಸೂರ್ಯ ಹೊಳೆಯುತ್ತಿದ್ದ. ತುಟಿಗಳಂಚಲ್ಲಿ ಗೆದ್ದ ನಗುವಿತ್ತು. ಕಣ್ಣಮಿಂಚಲ್ಲಿ ಸಂತಸದ ಹೊಳಪು.

ಅವಳು, ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದಳು. ಶಾಲೆಗೆ ಫಸ್ಟು. ರಾಜ್ಯಮಟ್ಟದಲ್ಲೂ ನೂರರ ಸ್ಥಾನದೊಳಗೆ. ಅವಳಮ್ಮನ ಹೆಮ್ಮೆಯನ್ನ ಇಲ್ಲಿ ಮಾತಿನಲ್ಲಿ ಬಣ್ಣಿಸಲಾಗುವುದಿಲ್ಲ. ಪುಟ್ಟ ಊರಿನ ಕನ್ನಡ ಶಾಲೆಯಲ್ಲಿ ಟ್ಯೂಷನ್ನಿನ ಆಸರೆಯಿಲ್ಲದೆ, ಮಗಳು ಇಷ್ಟು ಸಾಧನೆ ಮಾಡಿದ್ದು ಅಮ್ಮನಿಗೆ ಹೆಮ್ಮೆ. ತಾನು ಪಡೆಯಲಾಗದ್ದನ್ನು ಮಗಳು ಪಡೆದು ಗೆದ್ದಳಲ್ಲಾ ಅಂತ ಸಂತಸ. ಒಂದು ವಾರವಿಡೀ ಅವಳು ಏನು ಓದಬಹುದು ಮುಂದಕ್ಕೆ ಅಂತ ಮೂರು ಜನಕ್ಕೂ ಚರ್ಚೆ. ಕೊನೆಗೆ ಅವಳು ಬೆಂಗಳೂರಿನಲ್ಲಿ ನನ್ನವಳ ಅಣ್ಣನ ಮನೆಯಲ್ಲಿ ಎಲೆಕ್ಟ್ರಾನಿಕ್ಸ್ ಪಿ.ಯು.ಸಿ ಓದಲಿ ಅಂತ ನಿರ್ಧಾರವಾಯಿತು. ಎಲೆಕ್ಟ್ರಾನಿಕ್ಸ್ ಮಧುರಳ ಇಷ್ಟ. ಬೆಂಗಳೂರಿನ ಒಳ್ಳೆಯ ಕಾಲೇಜಿನಲ್ಲೇ ಮಗಳು ಓದಬೇಕೆಂದು ಅವಳಮ್ಮನ ಇಷ್ಟ. ಸರಿ ಎಲ್ಲ ರೆಡಿಯಾಯಿತು.

ಬೆಂಗಳೂರಿಗೆ ಹೋಗುವ ದಿನ ಬೆಳಿಗ್ಗೆ ಮಧುರ ಐದು ಗಂಟೆಗೇ ಎದ್ದಿದ್ದಳು. ನಾನು ಎಬ್ಬಿಸದೆಯೇ. ಕಾಫಿಯ ಪರಿಮಳ ಮೂಗಿಗೆ ಬಂದು ಎಚ್ಚರಾಗಿ ನೋಡಿದೆ. ಅವಳಮ್ಮನೂ ಎದ್ದಿದ್ದಾಳೆ ಕೈಯಲ್ಲಿ ಬಿಸಿಬಿಸಿ ಕಾಫಿ. ಕಣ್ಣು ಮೂಗು ಕೆಂಪಾಗಿದ್ದವು. ಮಗಳಿನ್ನು ಜೊತೆಯಲ್ಲಿರುವುದಿಲ್ಲವಲ್ಲಾ ಅನ್ನುವ ತಳಮಳ.

ಮಧುರಳನ್ನು ಬೆಂಗಳೂರಿಗೆ ಕಳಿಸಿ ತುಂಬಾ ದಿನಗಳವರೆಗೂ ನಾನು ಐದು ಗಂಟೆಗೆ ಅಲಾರ್ಮ್ ಇಡುತ್ತಿದ್ದೆ. ಆದರೆ ಕೂಡಲೇ ಏಳುತ್ತಿರಲಿಲ್ಲ. ಹೂ ಕೀಳುವಾಗ ಬೇಲಿತುದಿಯ ಗಂಟೆದಾಸವಾಳ ಕೀಳಬೇಕು ಅಂತಲೇ ಅನ್ನಿಸುತ್ತಿರಲಿಲ್ಲ. ಸಿಕ್ಸ್‌ಮಂತ್ ಹೂಗಳು ಅರಳಿ ಒಣಗುತ್ತ ಹೋಗಿದ್ದವು. ಬಿದಿರು ಮಟ್ಟಿಯ ಹಕ್ಕಿ ಗೂಡು ತೊರೆದು ಬೇರೆ ಕಡೆ ಹೋಗಿತ್ತು. ಅನಾನಸ್ ಗಿಡ ಫಲ ಬಿಟ್ಟಿದ್ದರೂ ಕೀಳುವ ಮನಸ್ಸಿರಲಿಲ್ಲ. ಗುಲಾಬಿ ಕಟ್ಟಿಂಗಿನ ಕತ್ತರಿಗೆ ತುಕ್ಕು ಹಿಡಿಯುತ್ತಿತ್ತು. ನನ್ನವಳು ದಿನಾ ಮಧುರಳ ಬಿ.ಎಸ್.ಎ. ಸೈಕಲ್ ಒರೆಸಿಡುತ್ತಿದ್ದಳು.


ಹೀಗಿರುವಾಗ ಒಂದು ದಿನ ಮಧುರಳ ಶಾಲೆಯ ಮಾಷ್ಟ್ರು ಹೇಳಿಕಳಿಸಿದ್ದರು. ಪ್ರತಿಭಾ ಪುರಸ್ಕಾರವಿದೆ. ಮಧುರಳಿಗೆ ಮೊದಲ ಬಹುಮಾನ, ಅವಳ ಬದಲು ನೀವು ತಂದೆತಾಯಿ ಬರಬೇಕೂಂತ. ನಿಗದಿಯಾದ ದಿನ ನಾನೂ ನನ್ನವಳೂ ಮಧುರಳ ಶಾಲೆಯ ಕಟ್ಟೆ ಹತ್ತಿದೆವು. ಅಲ್ಲಿ ಹಿಂದಿನ ಸಾಲಿನ ಕುರ್ಚಿಯಲ್ಲಿ ಕುಳಿತಿದ್ದ ನಮ್ಮನ್ನ ಡಯಾಸಿಗೆ ಕರ್ಕೊಂಡು ಹೋಗಿ ಕೂರಿಸಿದಾಗ ಮಾತ್ರ ತಬ್ಬಿಬ್ಬಾದೆವು. ಅಲ್ಲಿ ನಮ್ಮನ್ನ ಯಶಸ್ವೀ ಪ್ರತಿಭೆಯ ತಂದೆತಾಯಿಗಳು ಅಂತ ಹಾರವಿಟ್ಟು ಮಧುರಳಿಗೆ ಸಲ್ಲಬೇಕಾದ ಬಹುಮಾನವನ್ನ ನಮ್ಮ ಕೈಯಲ್ಲಿಟ್ಟಾಗ ಮಾತ್ರ ನಮ್ಮಿಬ್ಬರ ಕಣ್ಗಳು ತುಂಬಿ ಬಂದಿದ್ದವು.. ಮಾತು ಹೊರಡಲಿಲ್ಲ.

ವಿದ್ಯೆಯ ಕನಸು ಮಾತ್ರ ಕಂಡ ನಮಗೆ ವಿದ್ಯೆಯನ್ನೇ ಸಾಕ್ಷಾತ್ಕರಿಸಿಕೊಂಡ ಮಗಳು. ಅವಳ ಮೂಲಕ ಶಾಲೆಯ ಕಟ್ಟೆ ಹತ್ತಿ ಈ ಸನ್ಮಾನ ಸಿಕ್ಕಿತಲ್ಲ ಎಂಬ ಭಾವದಲ್ಲಿ ನಾವು ಮೂಕರಾಗಿಹೋಗಿದ್ದೆವು. ಮನೆಗೆ ಬರುವಾಗ ದಾರಿಯಲ್ಲಿ ನನ್ನವಳು ಹೇಳಿದಳು. ಇದನ್ನು ನೋಡಲು ಈಗಿಲ್ಲಿ ಮಧುರ ಇರಬೇಕಿತ್ತು. ನಾನು ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಅವತ್ತು ರಾತ್ರೆ ಇಬ್ಬರೂ ಮಧುರಂಗೆ ಎಸ್.ಟಿ.ಡಿ ಮಾಡಿ ಮಾತಾಡಿಸಿದ್ದೆವು. ಇದೆಲ್ಲ ಈಗ ನಿನ್ನೆ ನಡಿಯಿತೇನೋ ಎಂಬಷ್ಟು ಹಸಿರಾಗಿದೆ. ಆಮೇಲೆ ಎಷ್ಟೊಂದು ವರ್ಷಗಳು ಕಳೆದಿವೆ.

ಅವಳು ಒಂದೊಂದೇ ವರ್ಷವನ್ನೂ ಚೆನ್ನಾಗಿ ಓದಿ ಇಂಜಿನಿಯರ್ರಾದಳು. ಮುಂದೆ ಮೆಚ್ಚಿದವನೊಂದಿಗೆ ಮದುವೆಯಾದಳು. ಈಗ ಎರಡು ಪುಟ್ಟ ಮಕ್ಕಳ ಪ್ರೀತಿಯ ಅಮ್ಮನಾಗಿದ್ದಾಳೆ. ಪ್ರತೀವರ್ಷವೂ ಮಳೆಗಾಲದಲ್ಲಿ ಹದಿನೈದಿಪ್ಪತ್ತು ದಿನ ಊರಲ್ಲಿರಲು ಬರುತ್ತಾಳೆ. ಅವಳು ಬಂದಾಗ ಮಾತ್ರ ಅವಳೇ ಕೊಯ್ದು ತರುವ ಗಂಟೆದಾಸವಾಳ ಹೂಗಳ ಪೂಜೆ. ಸಂಜೆ ಅವಳ ಶಾಲೆಯವರೆಗೂ ಎಲ್ಲರೂ ವಾಕಿಂಗ್ ಹೋಗುತ್ತೇವೆ. ಎಲ್ಲ ಸಂತಸದ ಅಧ್ಯಾಯಗಳೇ ತುಂಬಿವೆ. ಆದ್ರೂ ಈ ಎಲ್ಲ ಸಂತಸಕ್ಕಿಟ್ಟ ಕಿರೀಟ ಅವತ್ತು ನಾವು ಅವಳ ಶಾಲೆಯ ಡಯಾಸಲ್ಲಿ ಅನುಭವಿಸಿದ್ದು.


ನಮ್ಮ ಎಳೆತನದ ಕನಸಿನ ಚೂರೊಂದನ್ನ ನಾವು ಕೇಳದೆಯೇ ಆ ಪುಟ್ಟ ಹುಡುಗಿ ನಮಗೆ ಹೆಕ್ಕಿಕೊಟ್ಟಿದ್ದಳು. ನಮ್ಮ ಎದೆಗೂಡಲ್ಲಷ್ಟೆ ಉಳಿದು ಹೋದ ಆಸೆಯ ಮೊಟ್ಟೆಗೆ ಆ ಚಿನ್ನಾರಿ ಕಾವು ಕೊಟ್ಟು ಮರಿಮಾಡಿ ಹಾರಿಬಿಟ್ಟಿದ್ದಳು. ನಮ್ಮ ನೆನಪಿನ ನೆಲದಾಳದಲ್ಲಿ ಉಳಿದಿದ್ದ ಬಯಕೆಯ ಗಡ್ಡೆಯಲ್ಲಿ ಅವಳು ನೀರೆರದು ಮೊಳಕೆಯೊಡೆಸಿದ್ದಳು. ನಾವೆಂದೂ ಹತ್ತಲಾಗದೇ ಹೋದ ಮೆಟ್ಟಿಲನ್ನ ಆ ಪುಟಾಣಿ ಕೈಗಳು ಹತ್ತಿಸಿದ್ದವು.


ಇವತ್ತು ಸಂಜೆ ಮಾಷ್ಟ್ರು ನಾಳಿನ ಪ್ರತಿಭಾ ಪುರಸ್ಕಾರಕ್ಕೆ ಕರೆದಾಗ ಈ ಎಲ್ಲ ಸಂಗತಿಗಳು ಒಮ್ಮಿಂದೊಮ್ಮೆಗೇ ಮನದ ಕೊಳದಲ್ಲಿ ಅಲೆಯೆಬ್ಬಿಸಿದವು. ಅಲೆಗಳ ಚಿನ್ನಾಟವನ್ನ ನೀವು ನೋಡಿದಿರಷ್ಟೆ. ಇರಿ, ನನ್ನವಳಿಗೆ ನಾಳಿನ ಸಮಾರಂಭಕ್ಕೆ ರೆಡಿಯಾಗಿರಲು ಹೇಳಬೇಕು. ನಾಳೆ ಇನ್ಯಾವುದೋ ತಾಯ್ತಂದೆಗಳ ಕನಸು ನನಸಾಗಿರುತ್ತೆ. ಅದನ್ನು ನೋಡಲೆಂತಹ ಖುಶಿ. ತುಂಬ ಚೆನ್ನಾಗಿರತ್ತೆ. ನೀವೂ ಬನ್ನಿ.

9 comments:

Sushrutha Dodderi said...

ಎಷ್ಟೊಳ್ಳೆ ಕಥೆ! ಪ್ರಾರಂಭದ ಸಂಜೆಯ ವರ್ಣನೆಯಷ್ಟೇ ಕತೆಯ ಹಂದರವೂ ಸುಂದರವಾಗಿದೆ. ಮಧುರಳ ಅಪ್ಪ-ಅಮ್ಮರ ಕಣ್ಣಲ್ಲಿ ನಾನು ನನ್ನ ಅಪ್ಪ-ಅಮ್ಮರನ್ನು ಕಂಡೆ.

Shree said...

simply superb... heegene baritha iri..

ರಾಧಾಕೃಷ್ಣ ಆನೆಗುಂಡಿ. said...

ದೂರ ದೂರಿನ ಅಪ್ಪ - ಅಮ್ಮನ ನೆನೆಸಿ ಒಂದು ದೀರ್ಘ ಉಸಿರಿಗೆ ಕಾರಣವಾದ ನಿಮಗೆ ಬೈಯ ಬೇಕೋ ಬೆನ್ನು ತಟ್ಟಬೇಕೋ..............

Praveen BV said...

Nimma bhaashe tumba chennagide...aadare ashtu olle bhaasheya madhye yello ondondu english pada drushti bottu itta haagide...idu nanage ansiddu...Tumba olleya kalpane ide nimage...mundvarisiri...dodda kaviyathri agteera.

ಸಿಂಧು sindhu said...

@ ಸುಶ್ರುತ ಮತ್ತು ಶ್ರೀ
ಮೆಚ್ಚುಗೆಗೆ ಧನ್ಯವಾದಗಳು.

@ ರಾಧಾಕೃಷ್ಣ
ಬೈಯುತ್ತ ಬೆನ್ನು ತಟ್ಟಿಬಿಡಿ..:D ನಿಮ್ಮನ್ನು ಈ ಕತೆ ಕಸಿವಿಸಿಗೆ ದೂಡಿದ್ದರೆ ಕ್ಷಮಿಸಿ, ನನ್ನ ಉದ್ದೇಶ ನಾವು ಎದುರಿಗೆ ಕಾಣುವ ವ್ಯಕ್ತಿತ್ವದ ಹಿಂದೆ ಒಂದು ಆಳ ಮತ್ತು ಹೊಸತು(ನಮಗೆ ಗೊತ್ತಿಲ್ಲದ) ನೋಟ ಇರುತ್ತದೆ ಅನ್ನುವುದನ್ನು ಸ್ಪಷ್ಟಗೊಳಿಸಿಕೊಳ್ಳುವ ಪ್ರಯತ್ನ.

@ಪ್ರವೀಣ್

ಮೆಚ್ಚುಗೆಗೆ ಧನ್ಯವಾದಗಳು.. ನಾನು ಪ್ರಯತ್ನಪೂರ್ವಕವಾಗಿ ಕನ್ನಡ ಬಳಸುವುದಿಲ್ಲ. ಅದು ನನ್ನ ಸಹಜ ಭಾಷೆ. ಮತ್ತೆ ವೈಯುಕ್ತಿಕವಾಗಿ ನನಗೆ ಸರಳ ಅಭಿವ್ಯಕ್ತಿ ಬರಹಗಳಲ್ಲಿ ಬುಕಿಶ್ ಭಾಷೆ ಇಷ್ಟವಾಗುವುದಿಲ್ಲ. ಉದಾಹರಣೆಗೆ ಪೋಸ್ಟ್, ಸಿಕ್ಸ್ ಮಂತ್, ಮಾಷ್ಟ್ರು, ಬ್ಯಾನರ್ ಇವುಗಳನ್ನ ಕನ್ನಡದಲ್ಲಿ ಅಂಚೆ, ಆರುತಿಂಗಳ ಹೂವು, ಉಪಾಧ್ಯಾಯರು, ಪಟ ಅಂತ ಬರೆದರೆ ನಾನು ಬರೆದ ಬರಹದ ಕಾಲ ಮತ್ತು ಓಘಕ್ಕೆ ಹೊಂದುವುದಿಲ್ಲ. ಆಕಾಶದ ನೀಲಿಯೇ ಫೇಡ್ ಆಯಿತು ಅಂತ ಒಂದ್ಕಡೆ ಬರ್ದಿದೀನಿ - ಆಕಾಶದ ನೀಲಿ ಮಂಕಾಯಿತು ಅನ್ನುವುದು ಆ ಮೂಡನ್ನೇ ಮಂಕಾಗಿಸುತ್ತದೆಯೇನೋ.. :) ಕನ್ನಡವನ್ನ ಕಂಗ್ಲಿಷಿನಂತೆ ಬಳಸಬೇಕೆಂಬುದು ನನ್ನ ಅಭಿಪ್ರಾಯವಲ್ಲ. ಸ್ವಂತಿಕೆ ಉಳಿಸಿಕೊಂಡು ಪರಭಾಷೆಯ -ಇಂಗ್ಲಿಷ್,ಹಿಂದಿ, ಸಂಸ್ಕೃತದ- ಸುಲಲಿತ ಮತ್ತು ಹೆಚ್ಚಾಗಿ ಎಲ್ಲರಿಗೆ ಪರಿಚಯವಿರುವ ಪದಗಳನ್ನ ಬಳಸಬೇಕೂಂತ ನನ್ನ ಅನಿಸಿಕೆ. ಕಾವ್ಯದ ಮಾತು ಬೇರೆ.. ಅದರಲ್ಲಿ ಪ್ರಯತ್ನಪೂರ್ವಕವಾಗಿ ಎಚ್ಚರಿಕೆಯಿಂದ ಭಾಷೆ ಬಳಸಬೇಕು. ತಪ್ಪಿದ್ದರೆ ತಿಳಿಸಿ, ಕಲಿಯುತ್ತೇನೆ.

Shrilatha Puthi said...

ವಾವ್!! ಓದುತ್ತಾ ಹೋದಾಗ ಒಂತರಾ ಆಪ್ಯಾಯಮಾನ ಅನುಭವ. ಕೊನೆಯಲ್ಲಂತೂ ಕಣ್ಣಲ್ಲಿ ನೀರಾಡಿತು.. u made us nostalgic!!

Ganesh said...

ಕಥೆ ತುಂಬಾ ಇಷ್ಟವಾಯಿತು

Anonymous said...

ಕಥೆ ಚೆನ್ನಾಗಿದೆ. ಸೂರ್ಯಾಸ್ತದ ವರ್ಣನೆ ಇನ್ನೂ ಚೆನ್ನಾಗಿದೆ. ಗಡಿಬಿಡಿಯಲ್ಲಿ ಬಣ್ಣ ಮಡಕೆಯಿಂದ ಚೆಲ್ಲಿ ಹೋಗಿ...ಆಕಾಶದ ನೀಲಿಯೇ ಫೇಡ್ ಆಗಿ....ಧಾವಂತದಿಂದ ಸೂರ್ಯ ಸರಸರನೆ ಹತ್ತಿರವೇ ಸಿಕ್ಕ ಗುಡ್ಡದ ಹಿಂದೆ.....ಹಕ್ಕಿಗಳ ಗಾಸಿಪ್. ವ್ಹಾಹ್! ಅದ್ಭುತವಾಗಿ ಮೂಡಿಬಂದಿದೆ.

ಕಿಟಕಿಯ ಕಬ್ಬಿಣದ ಡಿಸೈನು ಇನ್ನೋಂದೇ ವಿನ್ಯಾಸ ರಚಿಸಿತ್ತು, ಸೈಕಲ್ ಹತ್ತಿ ಬಾಣದಂತೆ ಸಾಗಿದ್ದಳು.....

It seems you are gifted to see (her) other possibilities easily! Thanks for sharing.

chethan said...

ಹಕ್ಕಿಗಳ ಗಾಸಿಪ್ ತುಂಬಾ ಹಿಡಿಸಿತು. ಚೆನ್ನಾಗಿ ಬರೆದಿದ್ದೀರಿ :)