ಬಿಸಿಲ ಧಗೆಯ ಕಡಲ ನಾಡಿನ
ಆಸು ಪಾಸಿನ ಹಳ್ಳಿ
ಇಲ್ಲಿ ಭೋರ್ಗರೆವ ಕಡಲಿಲ್ಲ,
ಆಡು ಬಾ ಎಂದು ಕರೆವ ನುಣ್ಪು ಮರಳಿಲ್ಲ
ವೀಕೆಂಡಿಗೆ ಬೀಚಿಗೆ ಧಾವಿಸುವ ಜನಜಂಗುಳಿಯಿಲ್ಲ
ಮೌನ ಹೊದ್ದು ಕಾದಿರುವ ಕಾಡ ಸೆರಗು
ಅಲ್ಲೊಂದು ಇಲ್ಲೊಂದು ತಪಸ್ಸಿಗೆ ಕೂತ ಮನೆ
ಕಾನ ಗಾನದ ಮೌನರಾಗಕೆ ಲಯ ಬೆರೆಸಿ
ಹಾದಿಗರಿಗೆ ಕಾದು ಮಲಗಿರುವ ದಾರಿ..
ಸುಮ್ಮನಿರಲಿ ಹೇಗೆ..
ನೋಡಲ್ಲಿ ಮುಳುಗುತಿಹ ದಿನಮಣಿ ಎಂದು
ಉಲಿದುಲಿದು ಗೂಡು ಸೇರುತ್ತಿರುವ
ಹಕ್ಕಿ ಪ್ರಪಂಚ..
ನಾವು ಹೊರಟ ದಿಕ್ಕು,
ಅರಿಶಿಣಕುಂಕುಮದ ಕಳೆ ಹೊತ್ತು
ಕಾಡುಹೂಗಳ ಪರಿಮಳ ಮುಡಿಗಿಟ್ಟು,
ಕಾಲ್ದೊಳೆಯಲು ಬೆಚ್ಚನೆ ನೀರಿನೊಡನೆ ಕಾದು ನಿಂತಿತ್ತು..
ಇಲ್ಲ ಕಡಲಿಲ್ಲ,
ಸಾಗರದೊಡಲ ತುಂಬುವ ನದಿಯಿತ್ತು,
ಹಗಲಿನ ಬಿಸಿಲು ಆಗಷ್ಟೇ ಸ್ನಾನ ಮಾಡಿ ಹೋಗಿತ್ತೇನೋ,
ಸಂಜೆಗೆಂಪಲಿ ಹೊಳೆದ ನೀರು ಇನ್ನೂ ಬೆಚ್ಚಗಿತ್ತು
ಸಾಗರ ಸಮಾಗಮದ ಬೆವರು ಬೆರೆತು ಉಪ್ಪಾಗಿತ್ತು
ಅಜ್ಜನೊಬ್ಬನಿದ್ದ ಆಚೆ ದಡದಲಿ,
ಮರದ ದೋಣಿಯ ಕೈಗೋಲು ಹಿಡಿದು..
ನಾವು ಅಭ್ಯಾಗತರ ದಡ ಸೇರಿಸಲು ಬಂದವನ
ಬಾಯ ಬೀಡಿಯಲಿ
ಪಡುವಣದಲಿ ಮುಳುಗುವವನ ಕಿಡಿಯಿತ್ತು.
ಚಂದದ ಹೊಳೆಮಧ್ಯ..
ದೋಣಿ ಚಲನ ನಿಂತರೆಕ್ಷಣ..
ಅನಾವರಣಗೊಂಡಿತ್ತೊಂದು ಸುಂದರ ಸಂಜೆ!
ಅಲ್ಲಿ ಹೊಳೆಯಿರಲಿಲ್ಲ,
ಹೊಳವಿತ್ತು
ಗಾಳಿಯದು ಬೀಸುತ್ತಿಲ್ಲ,
ಸಂಜೆ ಕಟ್ಟಿದ ಕವನಗಳ ಪಿಸುನುಡಿಯುತ್ತಿತ್ತು
ನೀರಲೆಗಳಲ್ಲಿ
ಸೂರ್ಯ ಮೂಡಿಸಿ ಹೋದ ಭಾವಚಿತ್ತಾರವಿತ್ತು
ಧಾವಿಸಿ ಬರುವ ಕತ್ತಲ ಮೊಗದಿ
ಸಂಜೆಬೆಳಕಿನ ಮುಂದಲೆಬೊಟ್ಟು..
ಕವಿಯುವ ಕತ್ತಲೆಯೂ ಮುದವೆನಿಸಿತ್ತು.
ಮೋಡಗಳ ಕಿಟಕಿ ಸರಿಸಿ ತೂರಿಬಂದ
ಚೂರಾದ ಚಂದ್ರ..
ಬಾನ ಬೆಳದಿಂಗಳು ಮನಸ್ಸಿಗಿಳಿಯುವುದೆಂತು..
ಗ್ರಹಗತಿ ಜಾತಕ ಹೊಂದಬೇಕೆ?
ಕಾಡಸೆರಗಿನ ಈ ಹೊಳೆ ದಾಟುವುದೆ ಸಾಕೆ!
ಜಾತಕ ಗ್ರಹಗತಿಯೋ, ಹೊಳೆದಾಟುವುದೋ
ಅನುಭವಿಸುವ ಮನ ಭಾವತೀವ್ರತೆಯಲಿ ತೊಯ್ದಿರಲು
ಬೇರಾವ ಹೊಂದಾಣಿಕೆ ಯಾಕೆ?
6 comments:
..ಕತೆ ಹೇಳುತ್ತಿರುವ ಸುಂದರ ಭಾವಭರಿತ ಕವಿತೆ...
ಕವಿತೆ ತುಂಬಾ ಚೆನ್ನಾಗಿದೆ.....
-ಎಲ್.ಡೀ.
Ganesh.. Vishwa idu kaviteya amta keLtiddane.. ;)
su.. neenu idu kate haagide annodakke heege comment bardeya..? ;)
baraha ishta aytalla, thank u.
ಕವಿತೆ ಉದ್ದವಾಯಿತು ಅನ್ನಿಸಲ್ವಾ.
@Radhakrishna :
ನಾವು ಹೋದ ತೀರ ಸಮುದ್ರದಿಂದ ಸುಮಾರು ೭-೮ ಕಿ.ಮೀ ದೂರದಲ್ಲಿತ್ತು ಮಾರಾಯ್ರೆ,, ಹಾಗಾಗಿ ಬರಹ ಉದ್ದವಾಯಿತು.. ಇನ್ನು ಅದು ಕವಿತೆಯಾ ಅಂತ ನಂಗೆ ಅನುಮಾನವಿದೆ.. :-)
Post a Comment