Monday, March 5, 2007

ಕ್ಲೀನರ್ ಹುಡುಗನ ಖಾಲಿ ಕಣ್ಣು

ಹೊರಗೆ ಸಣ್ಣ ಮಳೆ,

ರಸ್ತೆಯ ಮೇಲೆ ನೀರಾಗಿ ಹರಿಯುವ ಕೊಳೆ;

ಕೆಫೆಟೋರಿಯಾದ ಮೂಲೆ ಮೇಜು ಬೆಚ್ಚಗಿತ್ತು,

ಜೊತೆಗೆ ಗೆಳೆಯನಿದ್ದ; ಕಾಫಿ ಸ್ಟ್ರಾಂಗಿತ್ತು,

ನೆಂಚಿಕೊಳ್ಳಲು ಗಂಭೀರ ಚರ್ಚೆಯಿತ್ತು.


ಪಕ್ಕದ ಮೇಜಿನ ಎಂಜಲೊರೆಸುವ

ಕ್ಲೀನರ್ ಹುಡುಗನಿಗೆ ದಿವ್ಯ ನಿರ್ಲಕ್ಷ್ಯ,

ನನ್ನ ಮೈಗೆ ಅಗುಳು ಸಿಡಿದು ಸಿಟ್ಟಿಗೆದ್ದೆ,

ಅವನ ಹರಿದು ಹೋಗಿದ್ದ ಕಾಲರ್ ಹಿಡಿದೆ,

ತಲೆ ಮೇಲೆತ್ತಿ ನನ್ನ ನೋಡಿದ ಕಂಗಳು

ಖಾಲಿಯಿದ್ದವು;

ಬಹುಶಃ ಎಂಜಲೊರಸೀ... ಒರಸೀ.


ಹೆದರಿದ್ದರೂ ಕೊಂಕಿದ್ದ ತುಟಿಗಳಂಚಲ್ಲಿ ಅಸಡ್ಡೆಯಿತ್ತು,

ಶಾಲೆಯಲ್ಲಿ ಓದದೇ ಬಿಟ್ಟುಬಂದ ಪದ್ಯಗಳ ಪಲ್ಲವಿಯಿತ್ತು,

ಜಿಡ್ಡುಗಟ್ಟಿದ ಕೆನ್ನೆಗಳ ಮೇಲೆ ಸೀನಿಯರ್ ಭಟ್ಟರೆಳೆದ ಬರೆಯಿತ್ತು,

ಕೆಂಪಾಗಿ ಕೆದರಿದ್ದ ಕೂದಲಡಿಯಲ್ಲಿ
ಅವನನ್ನಿಲ್ಲಿಗೆ ಕಳಿಸಿ ಕಣ್ಣೀರಿಟ್ಟ ಅಮ್ಮನಕ್ಕರೆಯಿತ್ತು,

ಜಾರುತ್ತಿದ್ದ ಚಡ್ಡಿಯ ಬೆಲ್ಟ್ ಹುಕ್ಕಿನಲ್ಲಿ

ಅವನಪ್ಪ ಕೊಟ್ಟ ಉಡಿದಾರವಿತ್ತು,


ಅವನ ಮೈಯಿಡೀ ತಿರಸ್ಕಾರವೇ ಮೂರ್ತಿವೆತ್ತಂತಿತ್ತು

ತನಗೆಟುಕದ ಎಲ್ಲ ಚಂದದ ವಿಷಯಗಳ ಬಗ್ಗೆ -

ಇಸ್ತ್ರಿ ಮಾಡಿದ ಅಂಗಿ, ಬೈಂಡು ಹಾಕಿದ ಪುಸ್ತಕ,ತಿದ್ದಿ ತೀಡಿದ ತಲೆ,

ಜೇಬುಗಳಿಂದಿಣುಕುವ, ಅಮ್ಮನೋ ಅಮ್ಮಾವ್ರೋ ಮಡಿಚಿಕೊಟ್ಟ ಕರ್ಛೀಫು -

ಎಲ್ಲದರ ಬಗ್ಗೆ ತಿರಸ್ಕಾರವಿತ್ತು.


ಕುಡಿದ, ಕುಡಿಯದ, ಚೆಲ್ಲಿದ ಕಾಫಿ ಅವನಿಗೆ ಒಂದೇ ಆಗಿತ್ತು.

ತಿಂಡಿ ಆಗಷ್ಟೇ ಸರ್ವ್ ಮಾಡಿದ್ದೂ,ಉಂಡು ಬಿಟ್ಟೆದ್ದಿದ್ದೂ ಅವನಿಗೆ ಸಮಾನವಿತ್ತು.

ಈಗಾಗಲೇ ಹರಿದಿದ್ದ ಕಾಲರ್ ಮತ್ತಷ್ಟು ಹರಿವುದೆಂಬ ಆತಂಕವಿತ್ತು.

ಗಲ್ಲಾದ ಹಿಂದಿದ್ದ ಯಜಮಾನನ ಕಾಲಿಂದ ಒದೆ ತಿನ್ನುವ ಹೆದರಿಕೆಯಿತ್ತು.


ಹೊರಗೆ ಸಂಘ, ಸಂಘಟನೆಗೆಳ ಕೂಗು ಆಕಾಶಕ್ಕೇರಿತ್ತು

ಬಾಲಕಾರ್ಮಿಕರ ಬವಣೆಯ ವಿರುಧ್ಧ.

ಆಯೋಗಗಳ ಮೇಲೆ ಬೆಣ್ಣೆ ಸವರಲು ಸರ್ಕಾರವಿತ್ತು.


ಆಕಾಶಕ್ಕೇರಿದ ಕೂಗು ಹೋಟೆಲೊಳ ಹೊಕ್ಕಿರಲಿಲ್ಲ

ನಮ್ಮೊಳಹೊಕ್ಕಿರಲಿಲ್ಲ.

ಒಬ್ಬ ಹುಡುಗ ಲೋಟ ತೊಳೆದಾಗ

ಇನ್ನೊಬ್ಬ ಕಡೆದ ಬೆಣ್ಣೆ ತೆಗೆಯುತ್ತಿದ್ದ

ದೋಸೆಗೆ ಸವರಲು,


ನಾನು ಕಾಲರ್ ಹಿಡಿದ ಹುಡುಗನ ಕಣ್ಣು ಖಾಲಿಯಾಗಿತ್ತು

ಬಹುಶಃ ಎಂಜಲೊರಸೀ.. ಒರಸೀ. . .

5 comments:

Ganesha Lingadahalli said...

ಜಗದ ಬದುಕಿನ ಕಡೆಗೆ ನಿಸ್ತೇಜ ಕಣ್ಣು,
ನಾಳೆಯ ಜಂಜಡದೆಡೆಗೆ ನಿರ್ಲಿಪ್ತ ನೋಟ,
ಅಭಾವ ವೈರಾಗ್ಯದ ವಿಡಂಬನಾತ್ಮಕ ಆಟ,
ಕಣ್ಣು ಖಾಲಿಯಿದೆ, ಕನಸ ತುಂಬುವರ್ಯಾರು?
ಬದುಕು ಖಾಲಿಯಿದೆ, ಬೆಳಕ ತುಂಬುವರ್ಯಾರು?

-ಎಲ್.ಡೀ.

ಸಿಂಧು sindhu said...

ಇದಕ್ಕಿಂತ ಆಪ್ಟ್ ಟಿಪ್ಪಣಿ ನನಗೆ ತೋಚುತ್ತಿಲ್ಲ
ನನ್ನ ಭಾವನೆಗಳನ್ನ ಸರಿಯಾಗಿ ಗ್ರಹಿಸಿ ಫ್ರೇಮ್ ಕಟ್ಟಿದ್ದಕ್ಕೆ ಧನ್ಯವಾದಗಳು
ಎಲ್ಲರೂ ಯೋಚನೆ ಮಾಡಬೇಕಿದೆ.. ಅಷ್ಟೇ ಅಲ್ಲ, ಏನಾದರೂ ಮಾಡಬೇಕಿದೆ...

VENU VINOD said...

ಕಾಲರ್‍ ಹಿಡಿದ್ರೂ ಆ ಬಳಿಕ ಹುಡುಗನ ಕಣ್ಣೊಳಗೆ ಹೊಕ್ಕು ಅಂತರಂಗ ದರ್ಶನ ಮಾಡಿದ್ರಲ್ಲ ಅಷ್ಟು ಸಾಕು.
ತುಂಬಾನೇ ಹಿಡಿಸ್ತು ನಿಮ್ಮ ಕವನ

ರಾಧಾಕೃಷ್ಣ ಆನೆಗುಂಡಿ. said...

ಎಲ್ಲರೂ ಕವನದ ಬಗ್ಗೆ ವಿಮರ್ಶಿಸಿದ್ದಾರೆ. ಆ ಕಾರಣಕ್ಕೆ ನನ್ನದೊಂದೆ ಪ್ರಶ್ನೆ ನಿಮ್ಮ ಕಣ್ಣಲ್ಲಿ ಏನಿತ್ತು.

ಸಿಂಧು sindhu said...

ರಾಧಾಕೃಷ್ಣ ಅವರಿಗೆ..

ನನ್ನ ಕಣ್ಣು ಅವತ್ತು ನೋಡಿದ್ದು ನನ್ನನ್ನೇ ಗಾಬರಿಗೊಳಿಸಿತ್ತು.. ಬದುಕಿನ ಹಲವು ಮುಖಗಳು ಯಾವಾಗಲೂ ನನ್ನನ್ನ ಇಷ್ಟೇ ಎಂದು ಪೂರ್ಣವಿರಾಮ ಬರೆಯಲಾರದ ಅಪೂರ್ಣ ವಾಕ್ಯಗಳಂತೆ ಕಾಡುತ್ತವೆ. ಇಲ್ಲ ಎಲ್ಲ ಬಾರಿಯೂ ಕಂಗೆಡಿಸುವುದಿಲ್ಲವಾದರೂ,, ಈಗೀಗ ಕಂಗೆಡಿಸುವ ಸಂಗತಿಗಳು, ಅಸಹಾಯಕತೆಗೆ ದೂಡುವ ಕ್ಷಣಗಳು ಹೆಚ್ಚಾಗುತ್ತಿವೆ. ಅವತ್ತು ನಂಗೆ ನನ್ನ ಬಗ್ಗೆಯೇ ಛೇ ಎನ್ನಿಸಿತ್ತು.. ನಂಗೆ ನನ್ನ ಬಟ್ಟೆ ಕೊಳೆಯಾಗುವ ಚಿಂತೆ, ಅವನಿಗೇನು ಚಿಂತೆಯಿತ್ತೋ ನನಗೆ ಸ್ಪಷ್ಟವಾಗಿ ಹಿಡಿದಿಡಲಾಗಲಿಲ್ಲ.. ನನ್ನನ್ನ ತಳಮಳಗೊಳಿಸಿದ್ದು ಅವನ ಖಾಲಿ ನೋಟ.. ಯಾಕೆ ಖಾಲಿಯಾಗಿದ್ದಿರಬಹುದು ಎಂದು ನನಗನ್ನಿಸಿದ್ದನ್ನ ಇಲ್ಲಿ ಹಿಡಿದಿಡುವ ಒಂದು ನಮ್ರ ಪ್ರಯತ್ನ. ನಾನು ಬರೆದ ಬರೆಯುವ ಬಹುತೇಕ ಬರಹಗಳು ನಾನು ಕಂಡಿದ್ದನ್ನ, ನಾನು ಅನುಭವಿಸಿದ್ದನ್ನ ನನಗೇ ಸ್ಪಷ್ಟಗೊಳಿಸಿಕೊಳ್ಳುವ ಪ್ರಯತ್ನ. ಅದರಲ್ಲಿ ಯಶಸ್ಸು ಪಡೆದಿಲ್ಲವಾದರೂ, ಗೊಂದಲಗಳು, ಅಚ್ಚರಿಗಳು ತಿಳಿಯಾದದ್ದಂತೂ ಹೌದು. ಈ ತಳಮಳಗಳ ಅನುಭವದ ನಡುವೆ ಅವತ್ತು ನಾನೊಂದು ಪಾಠ ಕಲಿತೆ. ನಂಗೆ ನನ್ನದೇ ಆದ ಸಮಸ್ಯೆಗಳಿದ್ದವು, ಅವು ನನಗೆ ಬೆಟ್ಟಹೊತ್ತ ಭಾರವಾಗಿತ್ತು.. ಅಥವಾ ನಾನು ಹಾಗಂದುಕೊಂಡಿದ್ದೆ.. ಆ ಪುಟ್ಟ ಕ್ಲೀನರ್ ಹುಡುಗನನ್ನ ನೋಡಿ ನನಗೆ ನನ್ನ ಬಗ್ಗೆ ನಾಚಿಕೆಯಾಗಿಹೋಯಿತು.. ಕನಿಷ್ಠ ಪಕ್ಷ ನನಗೆ ನನ್ನ ಸಮಸ್ಯೆಗಳನ್ನ ಪರಿಹರಿಸಿಕೊಳ್ಳುವ ಅವಕಾಶ ಸಾಮರ್ಥ್ಯ ಎರಡೂ ಇದ್ದವು, ಗುಣಾತ್ಮಕವಾಗಿ ನೋಡುವ ಮನಸ್ಸಿರಲಿಲ್ಲ. ಬರೆದಿಡುವ ಹೊತ್ತಿಗೆ ನನಗೆ ನನ್ನ ಬದುಕನ್ನ ಹೊರಗಿನ ಕೈಗಳು ನಿಯಂತ್ರಿಸಬಾರದೆಂಬ ತಿಳಿವು, ನನ್ನ ಬದುಕನ್ನ ನಾನೇ ಕಟ್ಟಬಲ್ಲೆ ಎಂಬ ವಿಶ್ವಾಸ, ಮುಂದೊಂದು ದಿನ ಒಂದೆರಡು ಕ್ಲೀನರ್ ಪುಟ್ಟರ ಬದುಕನ್ನು ತಿಳಿಗೊಳಿಸಬಹುದೇನೋ ಎಂಬ ಭರವಸೆ ತುಂಬಿ ಬಂದಿತು. ಈಗಲೂ ಇದೆ. ನನ್ನೆಲ್ಲ ಬರಹದ ವಸ್ತುಗಳು ಯಾವಾಗಲೂ ನನ್ನನ್ನ ಮುಂದೆ ನಡೆಸಿದ, ಕಂಗೆಟ್ಟಾಗ ನೇವರಿಸಿದ, ಅಚ್ಚರಿಗೊಂಡಾಗ ತಿಳಿವು ಹೊಳೆಸಿದ, ಸಂತಸಗೊಂಡಾಗ ನಗೆ ಚೆಲ್ಲಿಸಿದ ಇಷ್ಟೇ ಅಲ್ಲ " ಎಲ್ಲ ನೋಟಗಳಾಚೆಗೆ ಇನ್ನೊಂದು ಚಿತ್ರವಿದೆ" ಅನ್ನುವುದನ್ನ ನನಗೆ ಅರ್ಥ ಮಾಡಿಸಿದ ಗುರುಸಮಾನ ಸಂಗತಿಗಳು.

ಬರಹಕ್ಕಿಂತ ಟಿಪ್ಪಣಿ ಜಾಸ್ತಿ ಬರೆದಿದ್ದೇನೆ. ಪ್ರಶ್ನೆ ಕೇಳಿ, ಹಿನ್ನೋಟದ ಪ್ರೇರಣೆ ನೀಡಿದ್ದಕ್ಕೆ ಧನ್ಯವಾದಗಳು.