Friday, March 2, 2007

ಕೇಳಬಾರದಿತ್ತು . . ಆದ್ರೂ. .

ಹೆಜ್ಜೆ ಮೂಡಿರದ ಹಾದಿ,

ಗುರಿಯಿರದ ಪಯಣ,

ನಾನು ಹಿಡಿದಿದ್ದೇ ದಿಕ್ಕು.


ಕಗ್ಗತ್ತಲ ದಾರಿಗೆ

ಬೆಳಕು ಚೆಲ್ಲಿದ್ದು

ನಿನ್ನ ಕಣ್ಗಳ ಜೋಡಿ ನಕ್ಷತ್ರ.


ಹೆಜ್ಜೆಗೊಮ್ಮೆ ಧುಮ್ಮಿಕ್ಕುವ

ಅಳಲಿನ ಜಲಪಾತಕ್ಕೆ

ಕಟ್ಟೆ ಕಟ್ಟಿದ್ದು

ನಿನ್ನ ನೇವರಿಕೆ.


ಏನೂ ಬೇಡವೆನಿಸಿ

ಎಲ್ಲ ಕಳಚಿಕೊಳ್ಳಲು

ನಿರ್ಧರಿಸಿದಾಗ-

ಎದೆಗೊತ್ತಿ ಹಿಡಿದು,

ಅಲ್ಲಿ ದೂರದ ಹಸಿರುಕಾಡಿನ

ಬೆಟ್ಟದಂಚಿಂದ ಮೂಡುತಿದ್ದ

ಸೂರ್ಯನ ಎಳೆಗಿರಣಗಳನ್ನ

ಕಣ್ಮುಂದೆ ಹರಡಿದ್ದು

ನಿನ್ನ ನೋಟ.


ರಾತ್ರಿಯ ನೀರವತೆಗೆ

ಕಂಗೆಟ್ಟು ಮನ ಮರುಗಿದಾಗ -

ಹರಿವ ನದಿಯ ನೀರ ಜತೆ

ಮಿಲನಗೊಂಡ,

ಬೆಳದಿಂಗಳ ಪ್ರತಿಫಲನದ ರಾಗಮಾಲಿಕೆ

ಕೇಳಿಸಿದ್ದು ನಿನ್ನ ಜಾದೂ.


ಈ ಪಯಣ ಮುಗಿವವರೆಗೂ

ಜೊತೆಗಿರುವ ಭಾಷೆ ಕೊಟ್ಟಿದೀಯ.


ಹೀಗೆ ಕೇಳಬಾರದು

ಆದರೆ ಜೀವ ಸುಮ್ಮನಿರುತ್ತಿಲ್ಲ. . .


ದೇವರೇ

ಈ ಪಯಣ ಮುಗಿಯದಿರಲಿ,

ಕೊನೆಯ ತಿರುವಿಗೆ

ಬರುವ ಮೊದಲೇ

ದಾರಿ ತಪ್ಪಿ ಹೋಗಲಿ.

**************

ಅವತ್ಯಾವತ್ತೋ ವರ್ಷಗಳ ಹಿಂದೆ ಬರೆದಿದ್ದು..
ಇವತ್ತೂ ಇನ್ನೂ ಹಂಗೇ ಅನ್ನಿಸ್ತಿದೆ.. ನಾಳೆಯೂ ಅಷ್ಟೆ..,
ಅದೃಷ್ಟದ ಸಂಗತಿಯೆಂದರೆ ದೇವರು ಒಪ್ಪಿಕೊಂಡಿದ್ದಾನೆ.. :-)

8 comments:

Sree said...

ಮೌನಗಾಳಕ್ಕೆ ಸಿಕ್ಕಿ ಇಲ್ಲಿ ಬಂದೆ, ತುಂಬಾ ಚೆನ್ನಾಗ್ ಬರೀತೀರ...ಈ ಕವನ ಇಷ್ಟ ಆಯ್ತು... ಹೀಗೇಸುಮ್ಮನೆ ನನ್ನ ಬ್ಲಾಗ್ ನಲ್ಲಿ ಲಿಂಕ್ ಹಾಕಿಕೊಳ್ಳಲಾ?

ಸಿಂಧು sindhu said...
This comment has been removed by the author.
ಸಿಂಧು sindhu said...

ಅಯ್ಯೊ ಮಾರಾಯ್ರೆ ಅದಕ್ಕೆಲ್ಲ ಏನು ಕೇಳುತ್ತೀರಿ.. ನಿಮ್ಮ ಕನಸುಗಳಿಗೆ, ನನ್ನ ಬರಹವೊಂಚೂರು ಬಣ್ಣ ತುಂಬುವುದಾದರೆ ನಂಗೆ ತುಂಬ ಖುಷಿ..
ನಿಮ್ ಫೋಟೊ ಸೆಷನ್ ಬಗ್ಗೆ ಜಗಲಿ ಭಾಗವತ್ರ ಪಟ್ಟಾಂಗದಲ್ಲಿ ಓದಿದೆ.. ಚೆನ್ನಾಗಿದೆ..

ಬರಹದಂತೆ ಬರಹಗಾತಿಯೂ ಚಂದವೇ..!

ಪ್ರೀತಿಯಿರಲಿ

Sree said...

ಹ್ಹ ಹ್ಹ! ಹಾಕಿದ್ದೀನಿ ಲಿಂಕ್:)

ಫೋಟೋ ಸೆಷನ್?? ಏನು ಅದು? ಪಟ್ಟಾಂಗದಲ್ಲಿ ನನ್ನ ಎನ್ಟ್ರೀ ಯಾವಾಗ ಆಯ್ತಪ್ಪ?!?!

ಸಿಂಧು sindhu said...

ಹ್ಹಿ ಹ್ಹಿ.. ಇನ್ನೇನು ಬರೆಯಲಿಕ್ಕಿಲ್ಲ.. ನಿಮ್ಮ ಬ್ಲಾಗಲ್ಲೇ
[http://heegesummne.blogspot.com/]ಟಿಪ್ಪಣಿಸಿದ್ದೇನೆ.
ನಿಮ್ಮನ್ನ ಮನಸ್ಸು ಮಾತಾಡ್ತಿದೆ ಶ್ರೀ ಜೊತೆ ಕನ್ ಫ್ಯೂಸ್ ಮಾಡ್ಕೊಂಡಿದ್ದೆ..
ತಪ್ಪು ತಿದ್ದಿ.. ಇರುವುದೆಲ್ಲವ ಬಿಟ್ಟು ಲಿಂಕ್ ಕೊಟ್ಟಿದ್ದೇನೆ. ;D

Jagali bhaagavata said...

ನನಗನಿಸ್ತದೆ, ನೀವು confuse ಮಾಡ್ಕೊಂಡಿದೀರಾ ಅಂತ. ಪಟ್ಟಾಂಗದಲ್ಲಿ ಫೋಟೊ ಸೆಷನ್ ಎಲ್ಲಿ ಪ್ರಸ್ತಾಪವಾಗಿದೆ?
'ಪಟ್ಟಾಂಗ'ಕ್ಕೂ 'ಹರಟೆಕಟ್ಟೆ'ಗೂ confuse ಆಗಿದೀರಾ?

Unknown said...

ತು೦ಬಾ ಚೆನ್ನಾಗಿ ಬರೆದಿದ್ದೀರ

Anonymous said...

ನಿಮ್ಮ ಕವಿತೆ ಓದದೆ ಬಹಳ ವರ್ಷವೇ ಆಗಿತ್ತು. ಹೇಗೋ ಅಚಾನಕ್ಕಾಗಿ ನಿಮ್ಮ ಬ್ಲಾಗ್್ ಸಿಕ್ಕಿ ಓದಿದೆ. ಥ್ಯಾಂಕ್ಸ್! ಕವಿತೆ- ಮತ್ತೆ ಆ ನಿಮ್ಮ ಕತೆ ಎರಡೂ ಇಷ್ಟವಾದವು. ಮತ್ತೆ!! ಒಕೆ ಬೈ!!