ಎರಡು ದಿನದಿಂದ ಆಕಾಶಕ್ಕೆ ತೂತು ಬಿದ್ದಂತೆ ಜಡಿಯುತ್ತಿದ್ದ ಮಳೆ ಸುಸ್ತಾಗಿ ಗಿರಿಧಾಮಗಳಿಗೆ ವಿಶ್ರಾಂತಿಗೆ ಹೋಗಿತ್ತು. ಸಧ್ಯ ಅಂಧುಕೊಳ್ಳುತ್ತ ಬೆಳಗ್ಗೆ ಸ್ವಲ್ಪ ಪುಕ್ಕಲುತನದಲ್ಲೆ ಮೋಡದ ಮರೆಯಿಂದ ಹೊರಗೆ ಇಣುಕಿದ್ದ ಸೂರ್ಯ, ಮಳೆಯ ಬೆನ್ನು ನೋಡಿದವನೆ ಓಹೊ.. ಚಿಗಿತುಕೊಂಡು ಚುರುಚುರು ಸುಡಲು ಶುರು ಮಾಡಿದ್ದ.
ನಾನೇನೋ ಜೋರಿನಿಂದಲೆ ಹೆಜ್ಜೆ ಇಟ್ಟು ಬಸ್ಟಾಪಿಗೆ ಬಂದು ನೋಡುತ್ತೇನೆ; ಅರೆ ಇವಳು ಇನ್ನೂ ಅಲ್ಲೆ ತಿರುವಿನಲ್ಲೆ ಇದ್ದಾಳೆ. ನಿಧಾನವಾಗಿ ಇಟ್ಟು ಬರುತ್ತಿದ್ದ ಹೆಜ್ಜೆ, ಹತ್ತಿರವಾಗುತ್ತಲೆ ಮುಖ ನೋಡಿದೆ. ನಿರಿಬಿದ್ದ ಕೆನ್ನೆಯ ಬಂಗಾರಕಾಂತಿಗೆ ಕಣ್ಣುಗಳು ತಮ್ಮ ಬೆಳ್ಳಿ ಬೆಳಕಿಂದ ಎಂದಿನಂತೆ ಸ್ಫರ್ಧೆ ಹೂಡಿದ್ದುವಾದರೂ ಹಣೆಯ ಮೇಲೆ ಮುತ್ತಿನ ಮಣಿಗಳು ಮೂಡಿದ್ದವು. ಹರೆಯವಿಡೀ ನನ್ನ ಇಷ್ಟಾನಿಷ್ಟಗಳಿಗೆ ಓಗೊಟ್ಟು ನನ್ನ ಸಮಕ್ಕೂ ಮನೆಯಲ್ಲಿ ದುಡಿದು, ಮಕ್ಕಳ ದೇಖರೇಖೆ ನೋಡಿಕೊಂಡ ಗೃಹ ಲಕ್ಷ್ಮಿ. ಮೊಮ್ಮಕ್ಕಳು ಹೈಸ್ಕೂಲಿನಲ್ಲಿದ್ದರೂ ಇವತ್ತಿಗೂ ಅಜ್ಜಿಯ ಕೈತುತ್ತೇ ಆಹಾರ. ಈಗ ಸ್ಕೂಲಿಗೆ ರಜೆ ಬಂತೆಂದು ಅವರು ಮಾವನ ಮನೆಗೆ ಹೋಗಿ ಅಜ್ಜಿಗೂ ಬಿಡುವಿನ ಕಾಲ. ಇಂದಿರಾನಗರದಲ್ಲಿದ್ದ ಬಾಲ್ಯಸಖಿ, ತಂಗಿಯ ಮನೆಗೆ ಒಂದು ವಿರಾಮದ ಭೇಟಿಗಾಗಿ ನಿನ್ನೆ ಕೇಳಿದಾಗ ನನಗಂತೂ ಖುಷಿಯೇ ಆಗಿತ್ತು. ನಾನೇನು ತಿರುಗಾಲ ತಿಪ್ಪ, ಇವಳಿಗಾದರೋ ದಿನಾ ಮನೆಯಲ್ಲಿ ಬೆಳಿಗ್ಗೆ ಮೊಮ್ಮಕ್ಕಳ ಸವರಣೆ, ಪಕ್ಕದ ಬೀದಿಯ ದೇವಸ್ಥಾನದ ಹೂಬತ್ತಿ, ಮಧ್ಯಾಹ್ನದ ಟೀವಿ ಧಾರಾವಾಹಿ, ಕೋಳಿನಿದ್ದೆ, ಸಾಯಂಕಾಲದ ಬಾಯ್ರುಚಿಗಳ ತಯಾರಿಕೆ, ಸಂಜೆ ಯಥಾಪ್ರಕಾರ ಟೀವಿ, ಹೀಗೇ ಸಮಯ ಕಳೆದುಬಿಡುತ್ತಾಳೆ. ನಾನು ಗುಂಡುಗೋವಿ ಮನೇಲೆ ಕುಳಿತು ಮಾಡೋದಾದ್ರೂ ಏನು? ಮನೇಲಿದ್ರೆ ಇವಳೆಲ್ಲಿ ಸುಮ್ಮನೆ ಬಿಡುತ್ತಾಳೆ? ನಾನು ಮನೆಯಲ್ಲಿದ್ದಾಗಲೇ ಇವಳಿಗೆ ಕೊತ್ತಂಬರಿ ಕಟ್ಟು ಬೇಕನ್ನಿಸುತ್ತದೆ. ನಿಂಬೆ ಹಣ್ಣು ಖಾಲಿಯಾಗಿಬಿಟ್ಟಿರುತ್ತದೆ. ಏನೂ ಇಲ್ಲದಿದ್ದರೆ ಲೈಟು ಬಿಲ್ಲು ಕಾಯುತ್ತಿರುತ್ತದೆ. ಹೀಗಾಗೇ ನಾನು ಬೆಳಿಗ್ಗೆಯ ತಿಂದಿ ಕರಗುವುದಕ್ಕೆ ಮುಂಚೆ ಇವಳ ಕೈಯಿಂಧ ಸ್ಟ್ರಾಂಗ್ ಕಾಫಿ ಒಂದು ಲೋಟ ಇಳಿಸಿ ಗಡೀಪಾರಾಗಿಬಿಟ್ಟರೆ ಅಡಿಗೆಮನೆಯಿಂದ ಇಂಗಿನ ಒಗ್ಗರಣೆ ತಂಬುಳಿಯಲ್ಲಿ ಸೊಂಯ್ಯೆನ್ನುವಾಗಲೆ ವಾಪಸ್ಸಾಗುವುದು.
ಊಟವಾದ ಮೇಲೆ ಒಂದೊಂದು ದಿನ ಅವಳ ಕರಕರೆಗೆ ಅವಳ ಮೆಚ್ಚಿನ ಸೀರಿಯಲ್ಲು ನೋಡಿ ವಾದವಿವಾದಲ್ಲಿ ತೊಡಗುತ್ತೇನಾದ್ರೂ ದಿನಾ ಊಟ ಮುಗಿದ ಕೂಡಲೆ ನಿದ್ರಾದೇವತೆಯ ಅರ್ಚನೆಯಲ್ಲೆ ಸಮಯಹೋಗಿಬಿಡುತ್ತದೆ. ಸಂಜೆ ಕಾಫಿಯ ಘಮಘಮ ಬರುತ್ತಲೂ ಅದು ಹ್ಯಾಗೋ ಪಂಚೇಂದ್ರಿಯಗಳು ಸರ್ರನೆ ಎಚ್ಚರಾಗಿ ಇಹಲೋಕಕ್ಕಿಳಿಯುತ್ತೇನೆ. ಕಾಫಿ ಬೀಳುತ್ತಲೇ ಗಾಡಿ ಓವರಾಯಿಲ್ಲಾಗಿ ಚುರುಕಾಗುತ್ತದೆ(ಮೊನ್ನೆ ಮೊಮ್ಮಗ ನಾನು ಹೀಗೆ ಹೇಳಿದಾಗ ನಗುತ್ತಿದ್ದ - ಅಜ್ಜಯ್ಯ ಅದು ಓವರಾಯಿಲ್ಲಲ್ಲ ಓವರ್ ಹಾಲ್ ಅನ್ ಬೇಕು.. ಅಂತ). ಸ್ನೇಹಿತರೊಡನೆ ವಾಯುವಿಹಾರ,ಹರಟೆಗಳನ್ನು ಮುಗಿಸಿ, ಮನೆಗೆ ವಾಪಸ್ಸಾದರೆ ಅಲ್ಲಿ ಧಾರಾವಾಹಿ ಲೋಕ. ಅದು ಕೊನೆಗೊಳ್ಳುತ್ತಲೆ ನನ್ನವಳೂ,ಸೊಸೆಯೂ ಬಡಿಸುವ ನಳಪಾಕ, ಇದು ಮುಗಿದೊಡನೆ ಮೊಮ್ಮಕ್ಕಳೊಡನೆ ಕಥಾಲೋಕ, ಅದು ಮುಗಿಯುವಷ್ಟರಲ್ಲಿ ತನ್ನೊಳಗೆ ಜಾರಿಸಿಕೊಳ್ಳುವ ನಿದ್ರಾಲೋಕ. ಹೀಗೇ ಲೋಕಾಂತರಗಳ ಪಯಣದಲ್ಲಿ ನಾನೊಬ್ಬ ನಿತ್ಯ ಪಯಣಿಗ.
ನನ್ನ ಕರಕರೆ ಹಾಗಿರಲಿ, ಅದೋ ಇವಳು ಬಂದು ಬಸ್ಟಾಪಿನಲ್ಲಿ ಎರಡು ಕ್ಷಣ ಕೂತು ಬೆವರೊರೆಸಿಕೊಳ್ಳುವಷ್ಟ್ರಲ್ಲಿ ಬಂದೇ ಬಿಡ್ತು 201. ಕೈ ಮಾಡಿ ಹತ್ತುವಷ್ಟರಲ್ಲಿ ಸಾಕಾಯ್ತಪ್ಪ. ಡ್ರೈವರನಂತೂ ತಾನೇ ಪೆಟ್ರೋಲು ಕುಡಿದುಬಿಟ್ಟಿದ್ದಾನೋ ಎಂಬಥ ಯಮಸ್ಪೀಡಿನಲ್ಲಿದ್ದ. ಯಾವಾಗಲೂ ಬಸ್ಸಲ್ಲಿ ಓಡಿಯಾಡುವ ನಾನೇ ಉಸಿರು ಬಿಡುತ್ತಿದ್ದರೆ ಇನ್ನು ನನ್ನವಳ ಪಾಡೇನು. ಪುಣ್ಯಕ್ಕೆ ಇಬ್ಬರಿಗೂ ಜೊತೆಗೇ ಸೀಟು ಸಿಕ್ಕಿತು. ನಾವು ಹತ್ತಿದ್ದು ಪುಷ್ಪಕ್ ಬಸ್ಸು ಬೇರೆ. ಹಿಂದೆ ಒರಗಲು ಆರಾಮಾಗಿತ್ತು. ಟಿಕೆಟ್ ಕೊಳ್ಳಲು ಪರ್ಸಿಗೆ ಕೈಹಾಕಿದಾಗ ಸಿಕ್ಕಿಬಿಟ್ಟಿತು. ಗುಂಡಗೆ, ತಣ್ಣಗೆ ಇದ್ದ ಮ್ಯಾಂಗೋಬೈಟ್. ಟಿಕೆಟ್ ಕೊಂಡವನೆ ಅತ್ತಿತ್ತ ನೋಡಿದೆ. ಎಲ್ಲ ಆಫೀಸಿಗೆ ಹೊರಡುವ ಗಡಿಬಿಡಿಯಲ್ಲಿದ್ದವರು. ನಾವು ಕೂತಿದ್ದು ಮೂರು ಜನ ಕೂರುವ ಸೀಟು. ಕಿಟಕಿಯ ಪಕ್ಕದಲ್ಲಿ ಯಾರೋ ಯುವತಿ. ಆಫೀಸಿಗೆ ಹೊರಟವಳಿರಬೇಕು, ಕೈಯಲ್ಲೊಂದು ಕಥೆಪುಸ್ತಕ ಬೇರೆ ಇತ್ತು. ನನ್ನವಳು ನನ್ನ ಆ ಯುವತಿಯ ಮಧ್ಯದಲ್ಲಿ ಸುಧಾರಿಸಿಕೊಳ್ಳುತ್ತಾ ಕುಳಿತಿದ್ದಳು. ನನಗೆ ಮಮತೆ ಉಕ್ಕಿ ಬಂತು.
ಇವಳೇ ಅಲ್ಲವೆ ನನಗೆ ಜಾಂಡೀಸಾದಾಗ ದಿನವಿಡೀ ಮಗ್ಗುಲಲ್ಲಿ ಕೂತು ನನ್ನ ಇಷ್ಟದ ಪುಸ್ತಕಗಳನ್ನು ಓದಿ ಹೇಳಿದ್ದು, ಬೇಳೆ ಸಾರಿನ ಚಪ್ಪೆ ಊಟ ರುಚಿಸದೆ ನಾನು ಹಟ ಮಾಡುವಾಗ ನಯದಿಂದ, ನಲವಿಂದ ನನ್ನ ಮನವೊಲಿಸಿ ತಟ್ಟೆ ಖಾಲಿ ಮಾಡಿಸುತ್ತಿದ್ದಿದ್ದು. ಇವಳಲ್ಲವೆ ನಾನು ಕಾಲುನೋವೆಂದಾಗಲೆಲ್ಲ ಛೇಡಿಸುವ ಮಾತುಗಳನ್ನಾಡುತ್ತಲೇ ಎಣ್ಣೆ ಸವರಿ ಒತ್ತುವುದು, ಮಧ್ಯಾಹ್ನ ಬಳಲಿದಂತೆ ಕಂಡರೆ ನಿಂಬೆ ಹುಳಿ ಹಿಂಡಿ ಪಾನಕ ಕೊಡುವುದು. ಸಣ್ಣ ಸಣ್ಣ ವಿಷಯಕ್ಕೆಲ್ಲಾ ಗಾಬರಿ ಪಟ್ಟುಕೊಳ್ಳುವ ಹೆಂಡತಿಯ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಲೇ, ಕಣ್ಣೂ ಕೈಕಾಲು ಆಡದ ಧಾವಂತದಲ್ಲಿ ನನ್ನ ಕೈಹಿಡಿದು ನಡೆಸಿಕೊಂಡು ಹೋಗುವವಳು. ಧಾರಾವಾಹಿಯ ಕ್ಷುಲ್ಲಕ ಸಂಗತಿಗಳಿಗೂ ನನ್ನೊಂದಿಗೆ ವಾದ ಮಾಡಿ ಪ್ರತಿಪಕ್ಷದಲ್ಲೆ ಇಧ್ಧುಕೊಂಡೂ ಈ ಬದುಕಿನ ಒಗಟನ್ನ ನನ್ನೊಡನೆ ಜೊತೆಜೊತೆಯಾಗೇ ಬಿಡಿಸಿದವಳು...
ಇಂತಹ ಅಪರೂಪದ ದೇವಿ ಈಗ ಬಸ್ಸಿನ ಕುಲುಕಿಗೆ, ಬಿಸಿಲ ಧಗೆಗೆ ಪಕ್ಕಾಗಿ ಮುದುಡಿ ಕುಳಿತಿದ್ದರೆ ಸುಮ್ಮನಿರಲು ನನಗೆ ಮನಸ್ಸಾದ್ರೂ ಹ್ಯಾಗೆ ಬರುತ್ತೆ ನೀವೇ ಹೇಳಿ. ಮ್ಯಾಂಗೋಬೈಟನ್ನ ತೆಗೆದು ಅವಳ ಮುದುರುಮುದುರಾಗಿದ್ದ ಅಂಗೈ ಬಿಡಿಸಿ ಇಟ್ಟೆ. ಬಸ್ಸಿನ ಕುಲುಕಾಟದಲ್ಲಿ ಅವಳಿಗೆ ಬಿಡಿಸಲು ಆಗಲಿಲ್ಲ. ಕೊಡಿಲ್ಲಿ ಎಂದವನೆ ಬಿಡಿಸಿ ಬಾಯಲ್ಲಿಟ್ಟುಬಿಟ್ಟೆ.
ಓಹ್! ನನಗೆ ನನ್ನನ್ನೇ ಮರೆತುಹೋದಂತಾಯಿತು. ಅವತ್ತು ಮದುವೆ ಮುಗಿದು ನಮ್ಮನೆಯ ಗೃಹ ಪ್ರವೇಶ ಮಾಡುವಾಗ, ನನ್ನ ತಂಗಿ ಇವಳ ಕೈಹಿಡಿದು ನಿಲ್ಲಿಸಿ ನನ್ನ ಹೆಸರು ಹೇಳಲು ತಡೆದಾಗ ಬಂತಲ್ಲಾ ಅದೇ ನಾಚಿಕೆಯ ತೆರೆ, ಈಗ ಇಲ್ಲಿ!
"ಶ್ಶಿ, ಸುಮ್ಮನಿರಿ ಯಾರಾದರೂ ನೋಡಿ ಏನೆಂದುಕೊಂಡಾರು" ಅಂತ ಬಯ್ಯುತ್ತಾ ಪಕ್ಕದಲ್ಲಿ ಕುಳಿತಿದ್ದ ಹುಡುಗಿಯ ಕಡೆ ಕಡೆಗಣ್ಣಿನ ನೋಟ ಬೀರಿದಳು. ಆ ಹುಡುಗಿ ನಮ್ಮನ್ನ ಗಮನಿಸಿಬಿಟ್ಟಿದ್ದಳು. ಏನೂ ನೋಡದವರ ಹಾಗೆಯೇ ಅವಳು ಕುಳಿತಿದ್ದರೂ ಅವಳ ತುಟಿಯಂಚಿನಲ್ಲಿ ಹುಟ್ಟಿದ ನಗುವಿನ ಚಿಗುರು ಕೆನ್ನೆಯ ಕುಳಿಗಳವರೆಗೂ ಬೆಳೆದೇ ಬಿಟ್ಟಿತ್ತು.
ಆದ್ರೆ ನನಗೇನೂ ನಾಚಿಕೆಯಾಗಿರಲಿಲ್ಲ. ಯಾಕಾಗ್ಬೇಕೂಂತೀನಿ. ಅದನ್ನೆ ಕೇಳಿದೆ ನನ್ನವಳನ್ನ. "ಏನಂದ್ಕೋತಾರೆ ಯಾರಾದ್ರೂ? ಅಜ್ಜನಿಗೆ ಅಜ್ಜಿಯೆಂದರೆ ತುಂಬ ಪ್ರೀತಿ ಅಂತ ಅಂದುಕೊಳ್ತಾರೆ. ಅದರಲ್ಲೇನಪ್ಪಾ ತಪ್ಪು? ಅದು ಸತ್ಯ ತಾನೇ. ಸ್ವಲ್ಪ ರೊಮ್ಯಾಂಟಿಕ್ ಆಗಿರೋವ್ರೇನಾದ್ರೂ ನೋಡಿದ್ರೆ ಆ ದೇವರ ಹತ್ರ "ನಾನೂ ಅಜ್ಜಿಯಾದಾಗ, ನನ್ನ ಮೊಮ್ಮಕ್ಕಳ ಅಜ್ಜ ನನಗೂ ಹೀಗೇ ಬಾಯಲ್ಲಿ ಚಾಕಲೇಟಿಡುವಂತೆ ಮಾಡಪ್ಪಾ, ತಿರುಗಿ ಅವನ ಬಾಯಿಗೆ ಹಾಕಲು ನಾನೂ ಒಂದು ಚಾಕಲೇಟು ಇಟ್ಕೊಂಡಿರ್ತೀನಿ" ಅಂತ ಪ್ರಾರ್ಥಿಸಿರುತ್ತಾರೆ. ಏನಂತೀಯಾ ಅಂದೆ. ನನ್ನವಳ ಕಣ್ಣ ಕಾಂತಿ ಹೌದು ಹೌದು ಅಂತ ಕೂಗಾಡುತ್ತಿದರೂ ಕೇಳಿಸಿಕೊಳ್ಳದ ಹಾಗೆ ಆ ಪುಟ್ಟ ಬಾಯಿ "ಶ್ಶಿ ಹೋಗಿ, ನಿಮ್ ದೊಂದು ಮಳ್ಳು ವೇಷ" ಅಂತ ಸುಳ್ಳಾಡಿಯೇಬಿಟ್ಟಿತು. ಆ ಸುಳ್ಳಿಗೆ ತಕ್ಕ ಶಿಕ್ಷೆ ಕೊಡಲು ಅದು ತಕ್ಕ ಸಮಯ ಮತ್ತು ಜಾಗ ಎರಡೂ ಆಗಿರಲಿಲ್ಲವಾಗಿ ಅವಳ ತುಂಟ ಬಾಯಿ ಬಚಾವಾಯ್ತೆನ್ನಿ. ಈಗ ನಾನೂ ಸ್ವಲ್ಪ ಕಡೆಗಣ್ಣಿನಿಂದಲೇ ಕಿಟಕಿಯ ಹುಡುಗಿಯ ಮುಖ ನೋಡಿದೆ. ಹೋ ಈಗಂತೂ ನಮ್ಮ ಮಾತು ಅವಳಿಗೆ ಚಾಚೂ ತಪ್ಪದೆ ಕೇಳಿಸಿದ್ದರ ಫಲವಾಗಿ, ಆಗ ಕೆನ್ನೆಯ ಕುಳಿಯವರೆಗಷ್ಟೆ ಬಂದಿದ್ದ ನಗುವಿನ ಚಿಗುರು ಈಗ ಮುಖಮಂಡಲವಿಡೀ ಹಬ್ಬಿ ಹೂಬಿಟ್ಟಿತ್ತು. ಆದರೂ ಸಭ್ಯತೆಯ ಎಲೆಯ ಮರೆಯಡಿ ಆ ನಗೆಹೂಗಳನ್ನ ಅಡಗಿಸಿಡಲು ಆಕೆ ಪ್ರಯತ್ನವನ್ನಂತೂ ಮಾಡುತ್ತಿದ್ದಳು.
ಒಂದೆರಡು ಸಾರಿ ಚಾಕಲೇಟನ್ನು ಚೀಪುವಷ್ಟರಲ್ಲಿ ನನ್ನವಳ ತಲೆಯ ಬಲ್ಬು ಹೊತ್ತಿಕೊಂಡಿತು. "ಅರೇ ನಿಮಗೆಲ್ಲಿ, ನೀವು ತಿನ್ನಲೆ ಇಲ್ಲ್ವೇ" ಎಂದುಲಿಯುವಾಗ ಅವಳ ಕಂಠದಲ್ಲಿ ಕ್ಷಣಗಳ ಮುಂಚೆ ಕಾಣಿಸಿದ್ದ ನಾಚಿಕೆಯ ಸೋಂಕೂ ಇರಲಿಲ್ಲ. ಆದರೆ ನನಗೆ ಮಾತ್ರ ಸ್ವಲ್ಪ ನಾಚಿಕೆಯಾಯ್ತು. ಮಾತು ಕೇಳಿಸದವನಂತೆ ಆ ಕಡೆ ತಿರುಗುವ ಮುನ್ನ ಕಿಟಕಿಯ ಹುಡುಗಿಯ ಕಡೆಗೊಮ್ಮೆ ನೋಡಿದರೆ ಈಗ ಅವಳ ನಗುವಿನ ಚಿಗುರು ಕಂಗಳಿಂದಲೂ ಇಣುಕುತ್ತಿತ್ತು. ಇದಾವುದನ್ನೂ ಗಮನಿಸದ ನನ್ನಾಕೆಯ ಮಾತು ನನ್ನ ಸಂಕಷ್ಟಕ್ಕೆ ಮತ್ತೂ ತುಪ್ಪ ಹೊಯ್ದಿತು.
"ನನ್ನ ಬಾಯಿಗೆ ಚಾಕಲೇಟು ಇಡುವಾಗ ಮಾತ್ರ ನಿಮಗೆ ನಾಚಿಕೆ ಗೀಚಿಕೆ ಏನೂ ಇರಲಿಲ್ಲ, ಈಗೆಲ್ಲಿಂದ ಬಂತೋ. ಅದೂ ಪಾಪ ವಯಸ್ಸಾಗಿದೆ, ಬಿಸಿಲೂ, ಶೆಖೆಗೆ ಒಂದು ಚಾಕಲೇಟು ತೆಗೆದು ನೀವೇ ಬಾಯಲ್ಲಿಟ್ಟುಕೊಳ್ಳಿ ಅಂತ ನಾನು ಹೇಳಿದ್ದಕ್ಕೆ ಇಷ್ಟು ನಾಚಿಕೆಯೇ! ರಾಮ ರಾಮ,ಈ ಗಂಡಸರ ಹಣೆಬರಹವೆ ಇಷ್ಟು" ಅಂತ ನನ್ನ ಜಾತಿಗಿಷ್ಟು ಮಂತ್ರ ಹೇಳಿದಳು. ಅವಳ ಕಳಕಳಿಯೇ ಹೀಗೆ. ಯಾವಾಗಲೂ ಸಿಡುಕಿನ ಸೀರೆ ಹೊದ್ದುಕೊಂಡೇ ಇರುತ್ತದೆ. ಒಂದೊಂದು ಸಲ ಕಿವಿಹಿಂಡುವ ರೇಶ್ಮೆ ಸೀರೆಯೂ ಇರುತ್ತದೆ. ಆದರೆ ಅದು ಎಲ್ಲರ ಎದುರಿಗಲ್ಲ. ಗರ್ಭಗುಡಿಯ ಮಿಣುಕುದೀಪದ ಬೆಳಕಿನಲ್ಲಿ ಮಾತ್ರ. ನನ್ನ ದೇವತೆಯ ಆಗ್ರಹ ಅನುಗ್ರಹಗಳ ಬಗ್ಗೆ ಬರೆಯಲು ಹೊರಟರೆ ಕಾದಂಬರಿಯೇ ಆದೀತು ಬಿಡಿ.
ಅರೆ ಆ ಕಿಟಕಿಯ ಹುಡುಗಿಯ ಸ್ಟಾಪು ಬಂತೂಂತ ಕಾಣುತ್ತೆ. ಎದ್ದು ಹೊರಡಲು ಸವರಿಸುತ್ತಿದ್ದಾಳೆ. ಎಷ್ಟೇ ಮರೆಮಾಚಿದರೂ ಆ ತುಟಿಯಂಚಿನ ಕಿರುನಗೆಯ ಹೂವೊಂದು ಹೊರಗೆ ಇಣುಕುತ್ತಲೇ ಇದೆ. ಅವಳು ಅಜ್ಜಿಯಾದಾಗ ಹೇಗಿರುತ್ತಾಳೋ ಅನ್ನಿಸಿತು.
ಅಷ್ಟರಲ್ಲೆ ಆ ಹುಡುಗಿ ಎರಡು ಮ್ಯಾಂಗೋ ಬೈಟುಗಳನ್ನ ಹೊರತೆಗೆದು ನನ್ನವಳ ಅಂಗೈ ಬಿಡಿಸಿ ಇಟ್ಟು, ನಾನು ಹೇಗೂ ಇಳಿಯುತ್ತಿದ್ದೀನಿ, ಮುಂದಿನ ಸ್ಟಾಪು ಬರುವುದರಲ್ಲಿ ಇಬ್ಬರೂ ಬಿಡಿಸಿ ಬಾಯಿಗಿಟ್ಟುಬಿಡಿ, ಅಂದು ನನ್ನವಳ ಸುಕ್ಕು ಕೆನ್ನೆಯನ್ನು ಒಮ್ಮೆ ಮೆತ್ತಗೆ ಹಿಂಡಿ ನನ್ನೆಡೆ ತುಂಟ ನಗು ಬೀರಿ ಹೊರಟಳು. ಹೋಗುತ್ತಾ ನನಗೆ ಹೀಗೆ ಹೇಳಿ ಹೋದಳು.
"ನಾನೂ, ನನ್ನವನೂ ಅಜ್ಜ, ಅಜ್ಜಿಯರಾಗಿ ಚಾಕಲೇಟು ಬಾಯಿಗಿಡುವಾಗ, ಜೊತೆಯಲ್ಲಿ ಹೀಗೇ ನನ್ನಂತ ತುಂಟಿಯೊಬ್ಬಳು ಇದ್ದರೆ ಇನ್ನೂ ಚೆನ್ನಾಗಿರುತ್ತಲ್ವಾ ತಾತ?"
ಅವಳು ಇಳಿದು ಹೋದ ಮೇಲೆ ನನ್ನವಳೆಡೆ ನೋಡಿದೆ. ಅರೆ.. ಆ ಹುಡುಗಿಯ ನಗುವಿನ ಚಿಗುರು ನನ್ನವಳ ಮುಖದಲ್ಲೂ ಹಬ್ಬಿ ಹೂಬಿಟ್ಟಿದೆ!
.................
ಬಹಳ ದಿನಗಳ ಹಿಂದೆ ಬರೆದಿದ್ದು.. ಆದ್ರೆ ಹೂಬಳ್ಳಿ ಇನ್ನೂ ಫ್ರೆಶ್ ಆಗೇ ಇದೆ ಅಂತ ನನಗನ್ನಿಸುತ್ತೆ.. ಜೊತೆಯಾಗಿ ನಗುತ್ತ ಅಳುತ್ತ ದಾರಿ ಸಾಗಿದ ಈ ಜೋಡಿ ಪಯಣಿಗರ ಹೂಬನ ಹೀಗೇ ಸದಾ ತಂಪಾಗಿ, ಇಂಪಾಗಿ, ಕಂಪಾಗಿ... ಗೊಂಚಲು ಗೊಂಚಲು ಹೂ ತೂಗಿ...
7 comments:
Tumba chennagide Sindhu. Manamuttuva katHe.
Idonde, Odoke samaya sikkiddu. Nidanavaagi ellanu oduve.
Hege barita iri.
Beautiful Imagination and Superb naration :-)
ajay, shyam,
hey.. nimagishtavaagiddu namgu khushi... thanx..
ಬಹು ಸುಂದರವಾಗಿದೆ. :)
ಸಿಂಧು,
ಇದನ್ನ ಓದಿದ ಮೇಲೆ ನಾನು ಬೇಗ ಅಜ್ಜಿ ಆಗವು ಅಂತಾ ಅನ್ನಿಸ್ತಾ ಇದ್ದು. ಹಂಗೆ ಅಷ್ಟು ಪ್ರೀತಿ ಮಾಡೋ ಅಜ್ಜಾ ನು ಜೋತೆಗೆ ಇರಕು ಅನ್ನಿಸ್ತಾ ಇದ್ದು.
super ಆಗಿ ಬರದ್ದಿ.
ಧಾರಾಳವಾಗಿ ರಂಜು. ನೀನು ಒಳ್ಳೆ ಅಜ್ಜಿನೇ ಆಗ್ತಿ. :) ಪ್ರೀತಿ ಮಾಡೋ ಅಜ್ಜ ನಿನ್ನೊಡನೆ ಸದಾ ಇರಲಿ. ದಾರಿಯಲ್ಲಿ, ಬಸ್ಸಿನಲ್ಲಿ, ಪಾರ್ಕಿನಲ್ಲಿ ಆಗಾಗ ನೋಡಿದ ಒಲವಿನ ಅಜ್ಜ-ಅಜ್ಜಿಯರೇ ಇದಕ್ಕೆ ಸ್ಪೂರ್ತಿ. ಅವರಿಗೇ ಅರ್ಪಣೆ.
ಸಿಂಧು ಅವರೆ, ತುಂಬಾ ಚೆನ್ನಾಗಿ ಬರೆದಿದ್ದೀರಿ.
"ಸಿಡುಕಿನ ಸೀರೆ","ರೇಶ್ಮೆ ಸೀರೆ" ಈಗಾಗಲೇ ಬಳಕೆಯಲ್ಲಿರುವುವೋ ಅಥವಾ ನಿಮ್ಮ ಸೃಷ್ಠಿಯೋ?
Post a Comment