ಅಲ್ಲಿ ಚಂದ ಗೋಡೆಯ, ಗಟ್ಟಿ ಮಾಡಿನ ಬೆಚ್ಚನೆ ಮನೆಯಲ್ಲಿ
ಒಡೆದ ಕನ್ನಡಿ ಅಶುಭಸೂಚಕ.
ಇಲ್ಲಿ ಮೋಟು ಗೋಡೆಯ, ಸೋಗೆ ಮಾಡಿನ, ಅರೆಮನೆಯಲ್ಲಿ,
ಗೋಡೆ ತೂತು ಮುಚ್ಚಲೇನೊ ಎಂಬಂತೆ, ಹಚ್ಚಿರುವ
ಒಡೆದ ಕನ್ನಡಿಯ ಚೂರಲ್ಲಿ, ಇಣಿಕಿ ನೋಡುತ್ತಿದ್ದಾಳೆ ಪೋರಿ,
ಮುಗ್ಧ ಮೊಗದ ಮೇಲೆ ಬೆಳಕಿನ ಮಾಯಾಲೋಕ..!
ನನಗಾದ ಅನ್ಯಾಯ, ಅವನಿಗೆ ಅತ್ಯವಶ್ಯಕ ಅನುಕೂಲ... :-)
[ ;-) ತಮ್ಮ ಹೇಳುತ್ತಾನೆ, ನೀನೆ ಅವಕಾಶ ಕೊಡದೆ ನಿನಗ್ಯಾರೂ ಅನ್ಯಾಯ ಮಾಡುವುದಿಲ್ಲ.. ]
ನನಗೆ ಮೆಚ್ಚಿದ ಮೊಗ್ಗಿನ ದಂಡೆಯ
ತಾಯಿ ಬಳ್ಳಿ ಅಳುತ್ತಿರಬಹುದು, ಮಕ್ಕಳಿಲ್ಲ,
ಇವರು ಮುಡಿದು ಮುದುಡಿಸಲು,
ನನ್ನ ಹೊಕ್ಕಳ ಹೂವ ಕೊಯ್ದರಲ್ಲಾ..! :(
ಆಟವಾಡಿ ನಲಿಯಬೇಕಿದೆ ತುಂಟ ಕಂದನಿಗೆ,
ಕೈ ತುಂಬ ಕೊಳೆ, ಜೇಬಲ್ಲೆರಡು ಕಲ್ಲು.
ಅಮ್ಮ ಬಿಡುವುದಿಲ್ಲ, ಆರೋಗ್ಯಕ್ಕೆ ಒಳ್ಳೆಯದಲ್ಲ,
ಇರಲಿ ಕೈ ಕಾಲು ಶುಭ್ರ,
ಕಂದ ಕೇಳುವುದಿಲ್ಲ - ಮನೆಯೆಲ್ಲ ಗುಲ್ಲು..
ಅಮ್ಮ ಕಿವಿಗೊಡಳು, ಬಾಗಿಲ ಚಿಲುಕ ಗಟ್ಟಿ ಹಾಕಿಹಳು,
ಅವಳಿಗೆ ಗೊತ್ತು ಕಂದನಿಗೇನು ಒಳ್ಳೆಯದೆಂದು.
ಕಂದನ ಕನಸು ಅಮ್ಮನದ್ದಾಗುವುದು ಹೇಗೆ?
ಕಂದನ ಖುಷಿಯ ಚಿಲುಮೆ ಕಲ್ಲು ಮಣ್ಣಾಟ,
ಅಮ್ಮನಿಗೋ ಬೇರೆಯದೆ ನೋಟ!
ಕನ್ನಡಿ ಚೂರು,ನನಗಾದ ಅನ್ಯಾಯ, ಮೊಗ್ಗಿನ ದಂಡೆ, ಮಕ್ಕಳಾಟ..
ಎಲ್ಲೆ ನೋಡಿ - ಎಲ್ಲ ವಿರುಧ್ಧ ಭಾವನೆಗಳ ಹೊಯ್ದಾಟ
ಆದರೂ..
ಒಡೆದ ಕನ್ನಡಿ ಚೂರಲ್ಲೆ ಬೆಳಕ ಪ್ರತಿಫಲನ
ಕೊಳೆ ಕೈಗಳ ಬೊಗಸೆಯಲ್ಲೆ ನಲಿವಿನ ಅನುರಣನ
ತನ್ನ ಜೀವಜಲ ಹಿಂಡಿ ಕೊಟ್ಟ ಬಳ್ಳಿಯ ಮೊಗ್ಗೆಯಲ್ಲೆ ಘಮಘಮಿಸುವ ಚೇತನ
ಪಟ್ಟ ಸಾವಿರ ನೋವೆ,
ಒಂದು ನಲಿವಿನ ಕ್ಷಣಕ್ಕೆ ಜೀವನವಿಡೀ ಕಾಯುವ ಭರವಸೆ ತುಂಬುವುದು...
ಈ ಎಲ್ಲ ಚಿತ್ರಗಳಾಚೆ ಇರುವ ಇನ್ಯಾವುದೊ ಚಿತ್ರ ನೋಡಲು
ಬೇಕಿದೆ ಕವಿಯೆ,
ನಿಮ್ಮ ಕಣ್ಗಳ ಕಾಣ್ಕೆ;
ನೀವೆ ಹೇಳಿದ್ದಿರಲ್ಲ:
ನೊಂದ ಹೃದಯವೇ ಹಾಡ ಕಟ್ಟುವುದು...!
6 comments:
" ಈ ಎಲ್ಲ ಚಿತ್ರಗಳಾಚೆ ಇರುವ ಇನ್ಯಾವುದೊ ಚಿತ್ರ ನೋಡಲು
ಬೇಕಿದೆ ಕವಿಯೆ,
ನಿಮ್ಮ ಕಣ್ಗಳ ಕಾಣ್ಕೆ;
ನೀವೆ ಹೇಳಿದ್ದಿರಲ್ಲ:
ನೊಂದ ಹೃದಯವೇ ಹಾಡ ಕಟ್ಟುವುದು...!"
ಮಾತೇ ಇಲ್ಲ ಸಿಂಧು ಮೇಡಮ್! ಬಲು ಮಧುರವಾಗಿದೆ.. ಅಂದ ಹಾಗೆ, ನಿಮ್ಮ ಬ್ಲಾಗನ್ನ, ನನ್ನ ಬ್ಲಾಗಿನ ಲಿಸ್ಟಿನೊಳಗೆ ಸೇರಿಸಿದ್ದೇನೆ, ಅನುಮತಿ ಇಲ್ಲದೆ!
Wov! both the poems are nice! 'ತೇಲಿಸಿತು ನನ್ನ ಎಲ್ಲೆಲ್ಲೋ ಒಂದರೆಕ್ಷಣ...' Thanx
ಶ್ರೀನಿಧಿಯವರೆ, ಮೆಚ್ಚುಗೆಗೆ ಧನ್ಯವಾದಗಳು.. ಈ ಕವನದ ಪ್ರೇರಕಳಾದ, ಸ್ಲಂ ಮನೆಯ ಮುರುಕು ಗೋಡೆಯ ಒಡಕು ಕನ್ನಡಿಯಲ್ಲಿ ಹಣಿಕಿ ನೋಡುತ್ತಿದ್ದ ಪೋರಿಗೆ ನನ್ನ ನಮನ. ಕವನ ಕೊನೆಗೊಳಿಸಲು ಎಂದಿನಂತೆ ಬೆನ್ನು ಕಟ್ಟಿದ ಕೆ.ಎಸ್.ನ ಅವರಿಗೆ ನನ್ನ ವಿಶೇಷ ನಮನ. ಇತ್ತೀಚೆಗೆ ನೋಡಿದ ಮೈಸೂರು ಮಲ್ಲಿಗೆ ನಾಟಕದಲ್ಲಿ, ಬಳೆಗಾರ ಚೆನ್ನಯ್ಯ, ನೋವಿನ ಸಂದರ್ಭವೊಂದರಲ್ಲಿ, ಕವಿಗೆ ನೊಂದ್ಕೋಬೇಡಿ ಅಯ್ಯಾ ಎಂದು ಸಮಾಧಾನ ಹೇಳ್ತಾನೆ.. ಅದಕ್ಕೆ ಕವಿ ಕೊಟ್ಟ ಉತ್ತರವೇ ಅದು.. ನೊಂದ್ಕೊಳ್ಳದೆ ಹಾಡು ಹುಟ್ಟುತ್ತೇನಯ್ಯಾ.. ಆ ದೃಶ್ಯದ ಗುಂಗಿನಿಂದ ನಾನಿನ್ನೂ ಹೊರಬಂದಿಲ್ಲ..
ಸು...ಎಲ್ಲೆಲ್ಲೋ ತೇಲಿ ಹೋಗಡ ಮಾರಾಯಾ...ಮೆಚ್ಚುಗೆಗೆ ಥ್ಯಾಂಕ್ಸ್..
ವಿಮರ್ಶಿಸುವಷ್ಟರ ಮಟ್ಟಿಗೆ ಬೆಳೆದಿಲ್ಲದಿದ್ದರೂ, ಒಂದೆರಡು ಸಾಲುಗಳನ್ನ ಬರೆಸದೇ ಹಾಗೆ ಕಳಿಸುವುದಿಲ್ಲ ನಿಮ್ಮ ಈ blog!
ಮುಂದುವರೆಯಲಿ...
ಕವನಗಳು/ಪದ್ಯ/ಕಾವ್ಯ ಪ್ರಕಾರವೆಂದರೆ ನನಗೆ ನವ್ಯದ ಮೇಲೆ ಕೆಟ್ಟ ಕೋಪವಿದೆ. ಲಾಲಿತ್ಯವಿಲ್ಲದ, ಪ್ರಾಸಬದ್ಧವಲ್ಲದ ಯಾವುದೂ ಕಾವ್ಯ-ಪ್ರಕಾರವಾಗಲಿಕ್ಕೆ ಸಾಧ್ಯವಿಲ್ಲ ಅಂದುಕೊಂಡಿರೋ ನನಗೆ (ನಾನೇನೂ ದೊಡ್ಡ ತೋಲಾಂಡಿ ಅಲ್ಲ) ಕೆಲವೇ ಕೆಲವು ಪೊಯೆಟ್ರಿಗಳು ಯರ್ರಾಬಿರ್ರಿ ಇಷ್ಟ ಆಗಿಬಿಡುತ್ವೆ ರೀ. ಈ ಕವನಾನೂ ಹಾಗೇ ಅನಿಸಿಬಿಟ್ಟಿತು!
ಎಷ್ಟೋ ಕಡೆ ಬೆರಗು ಹುಟ್ಟಿಸುವಂತೆ ಶುರುವಾದ ಸಾಲುಗಳು, ಗೊಂದಲಕ್ಕೊಳಗಾಗಿ, ಮೂಲವಸ್ತುವನ್ನು ಬಿಟ್ಟು, ಪ್ರಾಸಾಂತ್ಯಕ್ಕಾಗಿ ಒದ್ದಾಡಿ, ಪದ್ಯಗಳಾಗದೇ ಸತ್ತುಬಿಡುತ್ತವೆ. ಬೆರಗು ಪಟ್ಟ ತಪ್ಪಿಗೆ ನಮ್ಮನ್ನು ಮರುಗುವಂತೆ ಮಾಡುತ್ತವೆ. ಇಲ್ಲವಾದರೆ, ಬರೀ ಸಾಹಿತ್ಯಕವೆನಿಸುವ ಪದಗಳೇ ಪದ್ಯದ ಸಾಲುಗಳಾಗಿ, (ಅವರವರ ಪ್ರಕಾರ) ಕವಿಯ ಮನಸಿನ ಭಾವನೆಗಳನ್ನು ನವಿರು ನವಿರಾಗಿ ಹೊರ ಹೊಮ್ಮಿಸಿ ಮಲಗಿ ಬಿಡುತ್ತವೆ.
ಇದೊಂದು ಪದ್ಯ ಮಾತ್ರ ಎಲ್ಲ ಬೆರಗಿನೊಂದಿಗೆ ಶುರುವಾಗಿ, ಪ್ರಾಸಾಂತ್ಯದ, ಸಾಲುಗಳ ಸಮೀಕರಣದ ಹಂಗಿಲ್ಲದೇ, ಅತ್ತಿತ್ತ ಹೊಯ್ದಾಡಿ, ಹೇಳುವಷ್ಟನ್ನೇ ಹೇಳಿ, ಇನ್ನೆಲ್ಲವನ್ನನ್ನೂ ನಮ್ಮ ಮನಸಿಗೇ ಚಿತ್ರಿಸಿಕೊಳ್ಳಲು ಬಿಟ್ಟು, ಅದೇ ಬೆರಗನ್ನುಳಿಸಿ, ನಿರ್ಧಾರಕವಾಗಿ ಕೊನೆಗೊಂಡು ನಮ್ಮನ್ನು ಇನ್ನಷ್ಟು ಇರಬೇಕಾಗಿತ್ತು (ಅದು ಕವಿತೆಯನ್ನು ಕೆಡಿಸುವ ಕಂಟಕವೆಂದು ಗೊತ್ತಿದ್ದೂ) ಅನ್ನಿಸುವಂತೆ ಮಾಡುತ್ತದೆ.
ತುಂಬಾ ಅಂದ್ರೆ ತುಂಬಾನೇ ಚೆನ್ನಾಗಿದೆ.
ಓಹ್, ದೊಡ್ಡ ಮಾತು ಶಿವ್,
ವಿಜಯಾ ಕಾಲೇಜಿನ್ ಮಕ್ಕಳು (ಬೆಂಗಳೂರು) ಪ್ರಸ್ತುತ ಪಡಿಸಿದ ಮೈಸೂರು ಮಲ್ಲಿಗೆ ನಾಟಕದ ಗುಂಗು, ಸುತ್ತೆಲ್ಲ ವಿದ್ಯಮಾನಗಳನ್ನು ಬೆರಗಿನಿಂದ ನೋಡಿಸಿತು. ಪದಗಳಲ್ಲಿ ಇಳಿಯಿತು. ಬೆರಗು ಅಲ್ಲಿ ಇಲ್ಲಿ ಎಲ್ಲಿಯೂ..
ಮೆಚ್ಚುಗೆಗೆ ಖುಷೀ.. ಆಗಾಗ ಬಂದು ನನ್ನ ಬ್ಲಾಗೋದಿ ಟಿಪ್ಪಣಿಸಿ ತಿದ್ದಿ..
Post a Comment