Wednesday, December 13, 2017

ಕವಿತೆ ಬರೆಯುವಾ

ಮೊಗ್ಗಾಗುವಾ
ಹೂವಾಗುವಾ
ಜೇನಾಗುವಾ
ಬಗ್ಗೆ ಎಲ್ಲ ಒಂದು ಕವಿತೆ ಬರೆಯುವಾ

ನವೋದಯ ಅಲ್ಲ ಮಾರ್ರೆ
ನವ್ಯೋತ್ತರವೇ ಮುಗಿಯುತ್ತ ಬಂದಿದೆ
ಕಾಲವಲ್ಲದ ಕಾಲದಲಿ
ಹೂಗಿಡಗಳೆಲ್ಲ ಅಂಗಳದಿಂದ
ಇನ್ ಡೋರಾದ ಸಮಯದಲಿ

ಉದ್ಯಾನನಗರಿಯಲಿ ಉದ್ಯೋಗಪರ್ವದಲಿ
ಯಕ್ಷಪ್ರಶ್ನೆಯ ಗಾಣದಲಿ ನೊರೆನೊರೆಯಾದ ಕಬ್ಬಿನ ಹಾಲು
ಕೂಪನ್ ಇಟ್ಟರೆ ಮನೆಬಾಗಿಲಿನಲಿ ಕೊಟ್ಟೆಯಲಿ ತುಂಬಿ ತುಳುಕದ ಹಸುವಿನ ಹಾಲು
ಪೇಪರು,ತಂಗಳು, ಹಾರ್ಮೋನ್ ಹಿಂಡಿಯ ಮೆದ್ದು ನಡೆದಾಡಲಾಗದ ಆಕಳು 

ಅನ್ನುತ್ತದೆ ಈಗಲೂ ಅಂಬಾ
ಗೊಬ್ಬರಕೂ ಆಗದ ಸಗಣಿ ರಸ್ತೆ ತುಂಬಾ
-ಇದ್ದರೂ
ಮಳೆಮುಗಿದ ಬೆಳಗಲಿ, ಚುಮುಗುಡುವ ಚಳಿನಸುಕಲಿ, ಬೇಸಗೆಯ ಎಳೆಬಿಸಿಲಲಿ
ಹೂಚೆಲ್ಲಿದ ಪಾದಪಥ
-ದ ಮೇಲೇ ಎರಡು ಗಾಲಿಯ ನಗರರಥ
ರುಮ್ಮೆನ್ನುತ್ತದೆ


ಲಾಂಗ್ ವೀಕೆಂಡಿನ ಜಂಗುಳಿಯೋಟದಲಿ
ರೆಸಾರ್ಟಿನ ಹಿತ್ತಲಲಿ ಬಣ್ ಬಣ್ಣವಾಗಿ ಅರಳಿದ ದಾಸವಾಳದಲಿ
ಗೈಡನು ಕೈದೋರುವ ಬೆಟ್ಟದಂಚಲಿ ಅರಳಿದ ಕುರಿಂಜಿಯಲಿ
ಕೊಳದ ಅಂಚಿನ ಬಿದಿರುಮೆಳೆಯಲಿ ತೂಗುಬಿದ್ದಿಹ ನಿಜ ಗೀಜಗನ ಗೂಡಲಿ

ಸಂಜೆ ಅಚಾನಕ್ಕಾಗಿ ಸುರಿದು ನಿಂತ ಮಳೆನೆಂದ ಬೀದಿಯಂಚಿನ ಮರಮರದೆದೆಯಲಿ
ಅಲ್ಲಲ್ಲಿ ಇಲ್ಲಿಲ್ಲಿ ಉಳಿದಿರಬಹುದು ಒಂದೊಂದು ಕುಕಿಲು
ಟೆರೇಸು ಬಾಲ್ಕನಿಯ ಕೈದೋಟದಿ ಅರಳು ಹೂಗಳ ನೆರಳಲಿ
ಬೆಕ್ಕು ಕಬಳಿಸದೆ ಉಳಿದ ಪಿಕಳಾರ ಮೈನಾದ ಗೂಡುಗಳಲಿ
ಟೀವಿಗೆ ಕಣ್ಣು ನೆಟ್ಟ ಮಗು ಬಾಗಿಲೆಡೆ ಕಣ್ಣು ಹಾಯಿಸಿ ಅರಳುವ -
ಅಮ್ಮ ಮನೆಗೆ ಮರಳುವ ಕ್ಷಣದಲಿ...
ನಾವು ಕವಿತೆ ಬರೆಯುವಾ
ಮೊಗ್ಗಾಗುವಾ
ಹೂವಾಗುವಾ
ಜೇನಾಗುವಾ
ಕ್ಷಣಗಳ ಬಗ್ಗೆ


ವನದಿಂದ ಉಪವನಕ್ಕೆ,
ಅಂಗಳದಿಂದ ಪುಸ್ತಕಕ್ಕೆ,
ಕಾನಿನಿಂದ ಹೋರಾಟದಂಗಳಕ್ಕೆ
ಬದಲಾದ ಪರಿಸರದಲ್ಲಿ
ನಾವು ಕವಿತೆ ಬರೆಯುವಾ


ಯಾರೂ ಪ್ರಕಟಿಸುವುದಿಲ್ಲ
ಸಾಪ್ತಾಹಿಕಗಳ ತುಂಬ ದೂರದೇಶದ ಹೂವಿನ ಕೊಲ್ಲಿ
ನದಿಯ ಹರಿವು, ಸುಖಬದುಕಿಗೆ ಟಿಪ್ಸು,
ನವಜೀವನದ ಜಾಹೀರಾತು
ಒಂದರ್ಧ ಬಂಡಾಯ, ಇನ್ನೊಂದರ್ಧ ಸ್ತ್ರೀ ಸಂ ವೇದನೆ
ಹಳೆ ಹಳೆಯ ಸಿದ್ಧಾಂತಗಳ ಮರು ಪರಿಶೋಧನೆ
ಅದು ಹೇಗೋ ಮಧ್ಯಕ್ಕೆ ಸಿಕ್ಕಿಬಿದ್ದ ಮಕ್ಕಳ ಪುಟದಲಿ
ಕತೆ,ಚಿತ್ರಕತೆ,ಚಿತ್ತಾರ ಮತ್ತು ಛಾಯಾಚಿತ್ರ ನೆರಳಲಿ
ಕಿರಿ(ಕಿರಿ)ಕಥೆಯಾದ್ರೆ ಹಾಕಿದ್ರೂ ಹಾಕಿಯಾರೆ
ಕವಿತೆಗೆ ಜಾಗವಿಲ್ಲ

ಆದರೂ ನಾವು ಕವಿತೆ ಬರೆಯುವಾ
ಹೀಗೆಲ್ಲ ಬರೆಯದೆ
ಈಗಿತ್ಲಾಗೆ
ಮೊಗ್ಗಾದ
ಹೂವಾದ
ಜೇನಾದ
ಮತ್ತು ದುಂಬಿ ಗುಂಗುಂ ಎಂದ ವಿಷಯ
ಬೇಕಾದವರಿಗೆ ಗೊತ್ತಾಗುವುದು ಹೇಗೆ?
ನಾವು ಕವಿತೆ ಬರೆಯುವಾ
ನ್ಯೂಸ್ ಬ್ರೇಕಿನ ಸುಂಟರಗಾಳಿಯಲಿ
ಒಮ್ಮೊಮ್ಮೆ ಹೂಗಂಧ ಹಕ್ಕಿ ಕುಕಿಲು ಹಾಯಲಿ
ಬ್ಲಾಗ್ದಾಣದಲಿ
ದೊಡ್ಡ ಬೂರುಗದ ಮರ
ಮುತ್ತುಗದ ಹೂವು
ಹಬ್ಬಿದ ಕಾಡುಮಲ್ಲಿಗೆಯ ಬಳ್ಳಿ
ಬಿರಿವ ಹೊಂಗೆಹೂವ ಗೊಂಚಲಲಿ ದುಂಬಿದಂಡು
ಎಲ್ಲಿಂದಲೋ ತಂದ ಕಾಳು ಮರಿಗಳಿಗೂಡುವ ಹಕ್ಕಿವಿಂಡು
ಕಣ್ಮುಚ್ಚಿದರೆ ತಂಗಾಳಿ
ಕ್ರೌಂಚದ ಜೋಡಿಗಳಿಗೆ
ಹೂಡುವ ಮೊದಲೆ ಬಾಣ... ಬೇಡ
ಎನ್ನುವ ಋಷಿಗಣ
ಇಲ್ಲಿ ಬರೆಯುವವರಿಗೂ ಓದುವವರಿಗೂ
ಬರೀ ಖುಷಿ ಕಣಾ...
ನಾವು ಕವಿತೆ ಬರೆಯುವಾ.

1 comment:

sunaath said...

ಓದುಗನೀಗ ಧನ್ಯನಾದ. ಇದು ಬರೆದ ಕವನವಲ್ಲ; ಸಂ-ಭವಿಸಿದ ಕವನ.