Friday, October 14, 2016

ಹರಿಗೋಲು

ಕಡುಗತ್ತಲ ಹಿನ್ನೆಲೆಯಲ್ಲಿ
ಹೊಳಪಾಗಿ ನಗುವ ಬೆಳದಿಂಗಳು
ಆವರ್ತಕ್ಕೊಮ್ಮೆ ಬದಲಾಗುವ ಕಾಲ
ಬೆಳೆಯುವ ಕರಗುವ ಚಂದ್ರಬಿಂಬ
ಸದ್ದು ಮಾಡದೆ ಹರಿವ ಹೊಳೆಯ
ಜತೆಗೆ ಸರಿವ ಗಾಳಿ
ಬಾಗಿ ತೊನೆಯುವ ಮರಗಳು
ದಡದಿಂದ ದಡಕ್ಕೆ
ದಾಟಿಸುವ ಅಂಬಿಗನ ದೋಣಿ
ಸುಮ್ಮನೆ ದೂಡಿದಂತೆ ಅನಿಸುವ
ಹರಿಗೋಲು ಇಲ್ಲದೆ ದಾಟಬಹುದೆ
ಈಜಬಲ್ಲವರು ಬಹಳವಿದ್ದರೂ
ದಿನದಿನದ ಓಡಾಟಕಿದೆ ಸಹಜ
ಎನಿಸುವ ಊರಿನಂಚಿನ
ಬಯಲ ದಿಬ್ಬದಲಿ ನಾನು:
ಹರಿವ ಹೊಳೆ,
ಸರಿವ ಗಾಳಿ,
ತೊನೆವ ಮರ,
ಕಾಲ ಕೆಳಗೆ ಅಲುಗುವ ಹುಲ್ಲು,
ನಿಶ್ಚಲ ನೆಲದಲ್ಲಿಯೇ ಸರಿಯುವ ಮಣ್ಣು.

ಹರಿಗೋಲು ದೋಣಿಗೆ ಮಾತ್ರವೇ ಬೇಕೆ?

ಹೀಗೆಲ್ಲ ಯೋಚಿಸುವಾಗ ಇಂದು
ಕದ್ದಿಂಗಳ ರಾತ್ರಿ.
ಬೆಳ್ದಿಂಗಳಿಗಿಂತ ಮೋಹಕ
ಆಗಸದಲ್ಲಿ ಬೆರಳಿಡಲು ಜಾಗವಿಲ್ಲದಷ್ಟು ಮಿನುಗು ಚುಕ್ಕಿ
ವೈರುಧ್ಯಗಳಲ್ಲೂ ಎಷ್ಟೊಂದು ಸೊಗಸು.

ನದಿಯ ಮೇಲುದ ಸರಿಸಿದ ಗಾಳಿ
ಇಲ್ಲಿ ಕಾಲ ಕೆಳಗಿನ ಹುಲ್ಲನ್ನೂ ಅಲುಗಿಸುತ್ತಿದೆ.
ಹೊಳೆಹರಿದು ದಣಿವಾಗಿ ಬೆವರಿಳಿದಂತೆ
ನಿಂತವಳ ಹಣೆಯ ಮೇಲೆ ಸಾಲುಮಣಿ.

1 comment:

sunaath said...

ನವ್ಯಕಾವ್ಯದಲ್ಲಿ ಚಿಂತನೆಗೆ ಒಂದು ಮಹತ್ವದ ಸ್ಥಾನವಿರುತ್ತದೆ. ನೀವು ನವ್ಯಕಾವ್ಯದ ರೀತಿಯಲ್ಲಿಯೇ ಭಾವಗೀತೆಯನ್ನು ಬರೆಯಬಹುದು ಎನ್ನುವುದನ್ನು ಈ ಕವನದ ಮೂಲಕ (ಹಾಗು ತಮ್ಮ ಇನ್ನೂ ಕೆಲವು ಕವನಗಳ ಮೂಲಕ) ತೋರಿಸಿಕೊಟ್ಟಿದ್ದೀರಿ. ಸೊಗಸಾದ ಕವನಕ್ಕಾಗಿ ಅಭಿನಂದನೆಗಳು.