Thursday, January 30, 2014

ಒಂದೊಂದೇ ಒಗಟು...

ಹೇಳಿದ ಹಾಗೆ ಕೇಳದೆ ಇದ್ರೆ
ನಾನು ಹೋಗಿ ಬಿಡ್ತೀನಿ ನೋಡು..
ಊಮ್..... ಬೇಡಾ... ಅಮ್ಮ ಬೇಕೂ.
ಸರಿ ವಾಪಸ ಬಂದೆ, ಈಗ ಹಟ ನಿಲ್ಲಿಸು.
ಆತು.. ನಂಗೆ ಇದು ಬೇಕು.
ಹಾಕಮ್ಮಾ ಬೇಕು...
ಸರೀ...ಇರು ಒಂದ್ನಿಮಿಷ...
ಇದು ಮೊನ್ನಿನ ಮಾತುಕತೆ.

ಇವತ್ತು....

ಏ ಹಟಾ ಮಾಡ್ಬೇಡಾ ಇರು
ಪುಟ್ಟಾ ಏನು ಮಾಡ್ತಿದೀ
ಹೋಗು ಆಪೀಚ್ ಹೋಗು...
ಉಹ್..
ಇನ್ನು ಹೋಗಲೇ ಬೇಕಾಯ್ತಲ್ಲಾ
ನಾನು 
ಹೊರಟೆ..
ನೀನು
ಬೇಕು ಅಮ್ಮಾ ಬೇಕು ಅಂತ ಲಂಗ ಹಿಡಿದೆ.

ನಾಳೆ
ಇನ್ನೇನು ಕಾದಿದೆಯೋ.!?

ತೊದಲಲ್ಲಿ ಮೊದ ಮೊದಲು ಜೊತೆಗಿದ್ದು
ತೊಡರಲ್ಲಿ ಅಲ್ಲಲ್ಲಿ ಕೈ ಹಿಡಿದು
ಬೆಳೆ ಬೆಳೆಯುತ್ತಾ
ನನ್ನ ಕನಸಿನಿಂದ
ನಿನ್ನ ಕನಸಿಗೆ
ನೀನು ರವಾನೆಯಾಗುವ ಹೊತ್ತು
ಬರುವುದು ಬಲುಬೇಗ ಅಂತ ಗೊತ್ತು.
ಹೂವು ಅರಳಿದ ಮೇಲೆ
ಗಂಧ ಗಾಳೀ ಪಾಲು.
ನನ್ನ ಬೇರು ನೆಲದಲ್ಲೇ
ನಿನ್ನ ಚಿಗುರು ಗೊಂಚಲು ಆಕಾಶದಲ್ಲೇ.
ಮಕ್ಕಳು ನಮ್ಮವರು. ನಾವೇ ಅಲ್ಲ.

ನಾಳೆ...
ಇದ್ದೆನೋ ಬಿಟ್ಟೆನೋ ಗೊತ್ತಾಗದ ಹಾಗೆ ನಾನೂ
ಇರುವೆಯೋ ಇಲ್ಲವೋ ಗೊತ್ತಾಗದ ಹಾಗೇ ನೀನೂ
ಬದುಕಿಬಿಡುವುದು
ಎಂಬುದು ಸಾರ್ವಕಾಲಿಕ ಸತ್ಯ.
ಅದೇನೇ ಇರಲಿ
ಈಗ ಮಾತ್ರ ಕೆನ್ನೆ ಕೆನ್ನೆಗೆ
ಗಲ್ಲಕ್ಕೆ, ಮೂಗಿನ ತುದಿಗೆ
ಹಣೆಗೆ, ಕಣ್ ಕಣ್ಣಿಗೆ
ನೆತ್ತಿಗೆ ಒತ್ತಿ ಒತ್ತಿ
ಸರಪಣಿ ಮುತ್ತು.

ಅಮೋಘವರ್ಷ
[ಒಂದೂವರೆ ವರುಷದ ಅಮ್ಮುಶಿ ಅವನಮ್ಮನಿಗೆ ಅರ್ಥ ಮಾಡಿಸಿದ ಒಂದು ಒಗಟು.]

4 comments:

Sushrutha Dodderi said...

ಟೆಂಡರ್ ಟೆಂಡರ್ ಪದ್ಯ.. ಅಮೋಘನ ಮುದ್ದು ಕೆನ್ನೆಯಷ್ಟೇ.

sunaath said...

ಯಶೋದೆ-ಕೃಷ್ಣರ ಸಂಭಾಷಣೆಯಂತೆ ಇದೆ ಈ ಕವನ!

Anuradha said...

ನಿನ್ನ ಅಮ್ಮುಶಿ ಬಿಡಿಸುವ ಅನೇಕ ಒಗಟುಗಳಿವೆ ಸಿಂಧು .. ಚೆನ್ನಾಗಿದೆ . ಅಭಿನಂದನೆಗಳು .

Anuradha said...

ನಿನ್ನ ಅಮ್ಮುಶಿ ಬಿಡಿಸುವ ಅನೇಕ ಒಗಟುಗಳಿವೆ ಸಿಂಧು .. ಚೆನ್ನಾಗಿದೆ . ಅಭಿನಂದನೆಗಳು .