Friday, January 31, 2014

ಸೃಷ್ಟಿ ನಿಯಮ.

ನನ್ನ ಗ್ರಹಗತಿಗಳು ಹೇಗಿವೆ
ನೋಡಿ ಹೇಳೆಂದು
ಕೈಬಿಡಿಸಿ ನಿನ್ನ ಕೈಯೊಳಗಿಟ್ಟೆ.
ಅಂಗೈಯಲ್ಲೆ ತಾರಗೆಯೊಂದು ಬಿದ್ದಿರೆ
ಹೇಳಲಿ ನಾನಾದರೂ ಏನೆಂದು
ನೀನು ಮುಗುಳ್ನಗು ಬಿರಿದೆ.
ಓಹ್..
ಮಬ್ಬುಸಂಜೆಯ ಆಗಸದಿ
ಮೂಡಿದ ಬಿದಿಗೆಯ ಬಿಂಬ
ಒಂದರೆಗಳಿಗೆ
ಸುತ್ತಲ ಜಗತ್ತು ಫೇಡ್ ಆಯಿತು.

ಮಳೆಯೊದ್ದೆ ಹಾದಿಯುದ್ದಕೆ
ತೂಗಿತೊನೆಯುವ ಮರಮರಸಾಲು
ನೋವ ಮರೆತು ನಡೆನಡೆವ ಕಾಲು
ಕೆಂಪಿಮಣ್ಣಿನ
ಇದ್ದಿಲೊಲೆಯ ಮೇಲೆ
ನೊರೆನೊರೆಯಾಗಿ ಉಕ್ಕಿದ
ಬಿಳಿಬಿಳಿ ಹಾಲು
ಚಿತ್ರಿಸಿದಂತಹ
ಮಾತು

ದನಿಯೊಡೆಯದೆಯೆ ಮೀಟಿದ
ಬರಿಯ ಭಾವತಂತು
ಹೇಳಲಿ ಹೇಗೆ
ನಾನಾದರೂ ಈಗ ಏನು ಎಂತು?


ಅವತ್ತು
ಅಲ್ಲಿ
ಎಷ್ಟು ಪಯಣಿಸಬೇಕಿತ್ತೋ
ಇವತ್ತು
ಇಲ್ಲಿ ಅಷ್ಟೇ ನೆಲೆಯಾಗಬೇಕಿದೆ.

ಚಿಗುರು ಹಳದಿಯಾಗಬೇಕಿರುವುದೇ ಸೃಷ್ಟಿ ನಿಯಮ.

2 comments:

sunaath said...

ಅಬ್ಬಾ, ಎಂಥಾ ಕವನ ಸಿಂಧು! ಎಳೆವಯದ ರೋಮಾಂಚನದಿಂದ ಪ್ರಾರಂಭಿಸಿ, ಪ್ರೌಢತೆಯವರೆಗೆ, ಬದುಕನ್ನು ಭಾವನೆಯಲ್ಲಿ ಹರಿಬಿಟ್ಟಿದ್ದೀರಿ! ‘ಇವತ್ತು ಇಲ್ಲಿ ಅಷ್ಟೇ ನೆಲೆಯಾಗಬೇಕಾಗಿದೆ’ ಎನ್ನುವ ನಿಮ್ಮ ಆಶಯಕ್ಕೆ ಹಿರಿಯನಾದ ನಾನು ‘ತಥಾಸ್ತು’ ಎನ್ನಲೆ?

Badarinath Palavalli said...

ನಿಮ್ಮ ಕವಿತೆಗಳ ವೈಶಿಷ್ಟ್ಯವೆಂದರೆ ಅವು ನಮ್ಮನ್ನು ಊಹಾ ಲೋಕಕ್ಕೆ ಕೊಂಡೊಯ್ದು ನಿಲ್ಲಿಸುತ್ತವೆ.