Thursday, December 13, 2012

ಉಲ್ಕಾಪಾತ..

ಪರಿಚಯವಿಲ್ಲದ ದೇವರಿಗಿಂತ
ಲಾಗಾಯ್ತಿನಿಂದ ಗೊತ್ತಿರುವ ದೆವ್ವವೇ ಮೇಲು
ಎಂದ ಮಾತು
ನಿಜವಿರಬಹುದು,
ಆದರೆ
ಈಗ ಬೆಂಕಿಯಿಂದ ಬಾಣಲೆಗೆ
ಹಾರಲೇಬೇಕಿರುವ ಸಮಯ.
ಯೋಚನೆ ಮಾಡಿದಷ್ಟೂ
ಗೊಂದಲದ ಅಲೆಗಳೇ.
ಸುಮ್ಮನೆ ಕುಳಿತಿರಲೂ
ಆಗದಷ್ಟು ಬ್ಯುಸಿಯಾಗಿದ್ದೇನ್ಬಂತು
ನಾಳೆ ಬೆಳಗಿನ ಆಗಸದಲ್ಲಿ
ನೋಡಬೇಕು:
ಜೆಮಿನೈಡ್ ಉಲ್ಕಾಪಾತವಿದೆಯಂತೆ!
ಹಳೆಯದೊಂದು
ಉತ್ಸಾಹದ ಚಂದಿರನೂ
ಉದುರಲಿದ್ದಾನೆ ಜೊತೆಗೆ,
ಉರಿದು ಬಿದ್ದ ಉಲ್ಕೆಯ ಚೂರಿನಂತೆ.
ಇದು ಬಹಳ ಮೊದಲೆ
ನಿಶ್ಚಯವಿದ್ದ ಹಾಗೆ,
ಈಗ ಅಂದುಕೊಂಡಿದ್ದು
ಅವತ್ತೇ ಯಾವತ್ತೋ
ಬುಕ್ಕಾಗಿದ್ದ ಹಾಗೆ.
ಮುಂದೆ
ಇಂತಹದೇ ಒಂದು ಸಂಜೆಯಲ್ಲಿ
ಅವಳನ್ನಬಹುದು
ನೀನು ಹಾಗ್ ಮಾಡಬಾರದಿತ್ತು
ಅಥವಾ ಇದೇ ಒಳ್ಳೆಯದು.
ಅವಳೊಬ್ಬಳೇ ಏನು,
ಜೊತೆಗೆ ಇನ್ನೊಬ್ಬನೂ ಇದ್ದಾನೆ.

ಹಾಗಂತ....
ಇವತ್ತು,
ಅಂತಹದೇ ಒಂದು ಸಂಜೆಯಲ್ಲಿ
ನಾನು ನಿರ್ಧರಿಸುವುದು ಹ್ಯಾಗೆ?
ಇಷ್ಟಕ್ಕೂ..
ನನ್ನ ಶಿಲುಬೆ ನನ್ನ ಬೆನ್ನಿಗೇ ಇರಬೇಕಲ್ಲದೆ
ಅವರ ಕನಸುಗಳನ್ನು ನಾನು ಕಾಣುವುದು ಹ್ಯಾಗೆ?
ನನ್ನ ಕನಸುಗಳನ್ನು ಅವರ ಮೇಲೆ ಹೇರದ ಹಾಗೆ-
ಹಳೆಯದೆಲ್ಲವನ್ನು ಕಟ್ಟಿಟ್ಟು ಸುಮ್ಮನೆ ಹೀಗೆ-
ಇರುವುದಕ್ಕೆ ಕಲಿಯಬೇಕಿದೆ.
ಎಲ್ಲ ದಾರಿಗಳಲ್ಲೂ ಅಷ್ಟು ದೂರ ನಡೆದು
ತಿರುವು ಹಿಡಿದವಳಿಗೆ
ಕಲಿಯುವುದು ಕಷ್ಟವಿರಲಾರದು.
ಬದುಕು ಚಂದವಿದೆ.

4 comments:

sunaath said...

ಸಿಂಧು,
ನಿಮ್ಮ ಕವನದ ಉಲ್ಕಾಪಾತಕ್ಕಾಗಿ ಡಿಶಂಬರದವರೆಗೆ ಕಾಯಬೇಕಾಯಿತು. ಆದರೆ ಕಾದದ್ದು ಸಾರ್ಥಕವಾಗಿದೆ. ನನ್ನ ತಾಳ್ಮೆಗೆ ತೃಪ್ತಿಕರ ಫಲ ಸಿಕ್ಕಿದೆ. ನಿಮ್ಮ ಕವನ ಎಂದಿನಂತೆ ಕಾವ್ಯಮಯವಾಗಿದೆ.

ತೇಜಸ್ವಿನಿ ಹೆಗಡೆ said...

ಎಲ್ಲ ದಾರಿಗಳಲ್ಲೂ ಅಷ್ಟು ದೂರ ನಡೆದು
ತಿರುವು ಹಿಡಿದವಳಿಗೆ
ಕಲಿಯುವುದು ಕಷ್ಟವಿರಲಾರದು.
ಬದುಕು ಚಂದವಿದೆ. ----- True True and very True.. Sadhyavide.. go ahead :)

nenapina sanchy inda said...

The last stanza sums it all..
lovely kavana Dear Sindhu..
:-)
akka

ಸಿಂಧು sindhu said...

@ ಸುನಾಥ ಕಾಕಾ,
ನಿಮ್ಮ ಅಭಿಮಾನ ದೊಡ್ಡದು ಮತ್ತು ನನಗೆ ರಕ್ಷೆ.
ಕಾವ್ಯವೆನ್ನುವುದು ನನ್ನ ಮೋಟುಗೋಡೆ. ಓದಲೂ ಬರೆಯಲೂ ಎರಡಕ್ಕೂ.

@ತೇಜ್,
ನಿಮ್ಮ ಶಕುನ ಸಿಕ್ಕಿದ ಮೇಲೆ ಮುಂದುವರಿಯೋದೆ.
ಹೊರಳ್ತಾ ಇದ್ದವರಿಗೆ ಸುಮ್ಮನೆ ನೆಟ್ಟಗೋಗದು ಕಷ್ಟ ಇರಲಕ್ಕು ನನ್ ತರ.

@ಮಾಲ್ತಕ್ಕಾ
ಥ್ಯಾಂಕ್ಯೂ. ನೀವೋದಿದ್ದೆ ಖುಶಿ ನಂಗೆ.

ಪ್ರೀತಿಯಿಂದ,
ಸಿಂಧು