Wednesday, December 5, 2012

ಅವಳಿಗನ್ನಿಸಿದ್ದು...

ಮಲಗಿದ್ದೇನೆ. ಛಾವಣಿಯನ್ನು ದಿಟ್ಟಿಸುತ್ತಾ.
ಅಲ್ಲೇನಿದೆ.
ಧೂಳು ಹೊಡೆಯಬೇಕಿರುವ ಫ್ಯಾನು, ಮೂಲೆಯಲ್ಲಿ ಅಲುಗಾಡುವ ಜೇಡರ ಬಲೆ. ಕಿಟಕಿಯಿಂದ ತೂರಿಬಂದ ಹೊರಗಿನ ದೀಪದ ಬೆಳಕಿನ ಕಿಂಡಿಕಿಂಡಿ ಪ್ರತಿಫಲನ. ಒಳಗಿನ ಕತ್ತಲೆಯಲ್ಲಿ ಸಣ್ಣಗೆ ಮಳೆಯಂತೆ ಹನಿಯುತ್ತಿರುವ ರಾಗ್ ಭೀಮ್ ಪಲಾಶೀ. ದಿನದ ಅಂಚಲ್ಲಿ ಮನೆಗೆ ಬಂದು ಸುಸ್ತಾಗಿ ಮಲಗಿದ್ದೀ ನೀನು. ಇರುಳಲ್ಲೇ ದಿನವನ್ನರಸುವ ವ್ಯರ್ಥ ಪ್ರಯತ್ನ ದುರಂಧರೆ ನಾನು.
ಮಗ್ಗುಲು ಹೊರಳಿ ನಿನ್ನ ಕೈಯ ಬೆರಳು ಸೋಕಲಿ ಅಂತ ಬಯಸಿ ನಿನ್ನ ಬದಿಗೇ ಇನ್ನೊಂಚೂರು ಸರಿದು ಅಲುಗಾಡದೆ ಮಲಗಿದ್ದೇನೆ. ನೀನೂ ಮಲಗಿದ್ದೀಯ ಅಲುಗಾಡದೆ, ಬದಿಗೆ ಸರಿಯದೆ. ಅತ್ತಿತ್ತ ಹೊರಳದೆ. ಅಲ್ಲಿಗೆ ಎಚ್ಚರದ ಆಟ ಮುಗಿಯಿತು.
ಇನ್ನೊಂಚೂರು ಬದಿಗೆ ಸರಿವ ಆಸೆ, ಸೋಕಿಸಿಕೊಳ್ಳುವ ಬಯಕೆಗಣ್ಣಿಗೆ ನಿದ್ದೆ ಬಂದು ಈಗ ಕನಸಿನ ಜೋಕಾಲಿ, ಇದ ಜೀಕುವಾಗಲೂ ಸೋಕದ ಹಾಗೆ ಎಚ್ಚರದಿ ತೂಗುವವನಲ್ಲ ಇವನೇ ಆ ನಲ್ಲ?! ಇಲ್ಲಿಗೆ ಕನಸು ಕೊನೆಯಾಯಿತು.
ಬೆಳಗ್ಗೆ ನಿದ್ದೆಗಣ್ಣಿನ ಅಲಾರ್ಮ್ ಕೂಗುವಾಗ ನಾನೇಳದೆ ನೀನು ಮೇಲಿನಿಂದ ಕೈಸಾರಿ ಆಫ್ ಮಾಡುವಾಗ ಅದು ಹ್ಯಾಗೋ ಒಂಚೂರು ಕೈ ಸೋಕಿ ನನ್ನ ನಿದ್ದೆ ಪೂರ್ತಿ ಎಚ್ಚರಗೊಂಡರೆ ನೀನು ಸಾ--ರಿ ಗೊಣಗುತ್ತಾ ಸಣ್ಣಗೆ ಗೊರಕೆ ಹೊಡೆಯುತ್ತಿದ್ದೀ. ಅಲ್ಲಿಗೆ ಮತ್ತೊಂದು ಕನಸು ಬಯಕೆಗಳ ನಿರೀಕ್ಷೆಯ ಎಚ್ಚರದ ಬೆಳಕು ಹರಿಯಿತು.
ಇಡೀ ದಿನವನ್ನ ಎಲ್ಲ ಕೆಲಸಗಳ ಓಣಿಯಲ್ಲಿ ಹರಿದಾಡಿಸಿ, ಅಷ್ಟಿಷ್ಟು ಬಿಡುವಲ್ಲಿ ಇನ್ಯಾರದೋ ಕನಸು ಬಯಕೆಗಳ ಓದಿಕೊಂಡು ಮನೆಯಿಡೀ ನಲಿವ ಸಗ್ಗದ ನಲಿವೊಂದನ್ನು ಸಾಕುತ್ತಾ, ಮತ್ತೆ ಕಾಯುತ್ತಿದ್ದೇನೆ ಇರುಳಿಗೆ - ಗಾಜಿನ ಚಪ್ಪಲಿ ತೊಟ್ಟು ಚುಕ್ಕಿಗಳಂಗಿ ತೊಟ್ಟು ಮಾಯಾವಿ ರಥದಲ್ಲಿ ಹೋಗುವ ಕನಸಿನಿರುಳು ಇಂದಿರಬಹುದೇ ಎಂದು.

ಹಾರಗುದುರಿ ಬೆನ್ನನೇರಿ ಮಲ್ಲಿಗೆ ಮಂಟಪದಾಗ ಗಲ್ಲ ಗಲ್ಲ ಹಚ್ಚಿ ಕೂತ ಹಾಗೆ ನೆನಪು. ಲಾಲಲಾ ಅಂತ ಫ್ರಾಕನ್ನೆತ್ತಿ ಸಿಂಡ್ರೆಲಾ ನೃತ್ಯ ನಟಿಸುವ ಮಗಳ ಒನಪು. ನೆನಪಿಗೆ ಕೂತ ಧೂಳು ಹೆಚ್ಚಾಗಿ ನಿನಗೆ ಅಲರ್ಜಿ ನೆಗಡಿ. ಸುತ್ತ ಅಮೃತಾಂಜನದ ಘಾಟು ವಾಸನೆ. ಓಹ್ ಅಲ್ಲೇಳುತ್ತಿದೆ ಕನಸಿನಾವಿಯ ಉಂಗುರ. ಅಮ್ಮ ಧರಿಸುವುದು ಥರವೇ ಹುಡುಗು ದಿನಗಳ ಕನಸು ಕಂಗಳ ಅಂತ ಕೇಳುತ್ತಾ.. ಓಡುವ ದಿನದ ಬೈಕು ಹತ್ತುವ ಅಪ್ಪ ಬರುವ ರಾತ್ರಿಗೆ ಮತ್ತೆ ಬೇಡ ಬೇಡೆಂದರೂ ಕನಸಿನ ಫಾಸ್ಟ್ ಟ್ರ್ಯಾಕ್ ಲೆನ್ಸು!

ಮಲಗಿದ್ದೇನೆ ಛಾವಣಿಯನ್ನು ದಿಟ್ಟಿಸುತ್ತಾ..
ಅಲ್ಲೇನಿದೆ? ಏನಿಲ್ಲ?
ಹಗಲಿರುಳ ಜೀಕುಜೀವನದ ಛಾಯಾಕನ್ನಡಿ!

5 comments:

sunaath said...

ಸಿಂಧು,
ಭೀಮಪಲಾಸ ರಾಗದಂತೆಯೇ ಹರಿಯುವ ಭಾವಲಹರಿ ಇದು! ದಿನವೆಲ್ಲ ಕಾಯಕ, ಕನಸು ಕಾಣಲು ರಾತ್ರಿಯವರೆಗೂ ಕಾಯಬೇಕು! ಹಗಲಿನಲ್ಲಿಯೂ ಕನಸು ಕಂಡರೆ ತಪ್ಪೇನಿದೆ?
ನಿಮ್ಮ ಲೇಖನದಲ್ಲಿ ತಾಯ ಅಪ್ಪುಗೆಯ ಸುಖಾನುಭವವಿದೆ.

Badarinath Palavalli said...

ಲಘು ಪ್ರಬಂಧ ಅಮೋಘವಾಗಿದೆ.

Ranganath S said...

ತುಂಬಾ ಚೆನ್ನಾಗಿದೆ..

ಶ್ಯಾಮಾ said...

ನನ್ನ ಮನಸ್ಸಿನ ನಾಕು ಭಾವಗಳನ್ನ ಹೆಕ್ಕಿ ಬರೆದಿರಬಹುದೇ ಅಂತ ಒಂದು ಕ್ಷಣ ಅನ್ನಿಸಿತು... ತುಂಬಾ ಚಂದದ ಬರಹ

ಸಿಂಧು Sindhu said...

@ ಸುನಾಥ ಕಾಕಾ,
ಸರಿ ನಿಮ್ಮ ಮಾತೆ ಮಾತು. ಹಗಲಿನಲ್ಲೂ ಬೀಳುವ ಕನಸಿಗೆ ಭರಪೂರ ಅನುಮತಿ ಕೊಡಲಾಗಿದೆ. :)

@ರಂಗನಾಥ ಮತ್ತು ಬದರಿನಾಥ್,
ನಿಮ್ಮ ಅನಿಸಿಕೆಗಳಿಗೆ ಧನ್ಯವಾದ

@ಶಾಮಾ,
ಎಲ್ಲಿ ಕಳೆದಿದ್ದೆ ನೀನು? ಸೂಕ್ಷ್ಮ ಮನಸಿನ ನಾಕು ಭಾವಗಳ ತಂತಿ ಹೆಣಿಗೆಯೇ ಇದು.
ಒಂದು ಕ್ಷಣ ನಿನ್ನ ವಿಹ್ವಲತೆಗೆ ಹಾಯೆನಿಸಿದ್ದರೆ ಅದು ನನ್ನ ಸಾಲುಗಳ ಸಾರ್ಥಕತೆ.