Friday, March 2, 2012

ಬಿಳಿ ಬಿಳೀ ಹಣ್ಣಣ್ಣು ಕೈಯಲ್ಲಿ ಬಣ್ ಬಣ್ಣದ ಹೂಚಿಗುರು ಬೆರಳು...

ಒಂದು ಹಣ್ಣಣ್ಣು ಕೈ ಯನ್ನು ಜಗ್ಗಿ ಹಿಡಿದ ಪುಟ್ಟ ಕೈ, ಬಿಳೀ ಬಟ್ಟೆಗೆ ಬಣ್ ಬಣ್ಣದ ಕರವಸ್ತ್ರದ ಹಾಗೆ, ಅಗೋ ಅಲ್ಲಿ ಹಸಿರು ಕೆಂಪುಗುಡ್ಡದ ಬಳಸು ಹಾದಿಯಲ್ಲಿ ಬಿಳಿ ಖದ್ದರ್ ಅಜ್ಜನ ಉಸ್ ಗುಡುವಿಕೆಗೆ ಸುಯ್ ಗುಡುತ್ತಾ ಬಣ್ಣಾಡಗಿತ್ತಿ ಮೊಮ್ಮಗಳು

ಎಲ್ ಹೋಗುತ್ತಿದ್ದಾರೆ? ಇಲ್ಲೆ ಎಲ್ಲೋ ಹೀಗೇ ದರೆ ಹತ್ತಿ ಇಳಿದು, ತೋಟದ ಬದಿಗೆ, ಹಳ್ಳದಂಚಿಗೆ, ಕಾಡುಗುಡ್ಡದಲ್ಲಿ ಒಂದು ಓಡಾಟ, ಮಾತು ಸೋಲುವ ಒಡನಾಟ. ಅಷ್ಟೇಯೇ ಇಲ್ಲ ದಾರಿ ಸಾಗಲು ಕಟ್ಟಿದ ಕತೆಗಳು ಕರೆದೊಯ್ವ ಊರುಗಳ ಹೆಸರು ಹಳೇ ಪುರಾಣದ ಓಲೆಗರಿಗಳಲ್ಲಿ ಸಿಗಬಹುದೇನೋ, ಆ ಕತೆಗಳೊಳಗೆ ಆಡುವವರು ಇಲ್ಲೆ ಮರಸಾಲುಗಳ ನೆರಳಲ್ಲೆ ಮರ್ಮರಗುಡುತ್ತಾ, ಪುಟ್ಟ ತಲೆಯಲ್ಲೊಂದು ಅಗಾಧ ಮಾಯಾಲೋಕ. ಅಜ್ಜ ಬಿಡುವುದೇ ಇಲ್ಲ. ಕೀಲಿ ಕೊಡುತ್ತಲೇ ಇರುವನು ಆ ಮಾಯಾಕುದುರೆಗೆ.
ರೆಕ್ಕೆಗಳಿವೆಯೋ ಹಾಗಾದ್ರೆ, ಇದೆಯೋ ಇಲ್ವೋ ಯಾರಿಗೆ ಬೇಕು. ಹಾರುವುದಷ್ಟೆ ನಮಗೆ ಬೇಕು. ಏಳು ಸಮುದ್ರ, ದೊಡ್ಡ ಕಾನು, ಸೌಗಂಧಿಕಾ ಪುಷ್ಪ, ಸ್ವರ್ಗದ ಗಡಿ, ಗಂಧರ್ವರ ಸೀಮೆ, ಐರಾವತ ಇಳಿದು ಬಂದ ಕಣಿವೆ, ಕಣ್ವಾಶ್ರಮ, ಕಾಳಿದಾಸನ ಉಜ್ಜಯಿನಿ,ಕನಕ ಲಂಕೆ,ಕಿಷ್ಕಿಂಧೆ,ಚಿತ್ರಕೂಟ,ಪಂಚವಟಿ, ಶಬರಿಯ ಮನೆಯಿದ್ದ ಬೆಟ್ಟದೂರು, ಗುಹನ ದೋಣಿ ತೇಲುವ ಸರಯೂ, ಮಂಥರೆಯ ಸುಟ್ಟು ಕೊಲ್ಲುವ ಕಾಳ್ಗಿಚ್ಚು ನಂದಿದ ಕಾಡು, ಹೊಂಚಿ ಕುಳಿತ ಅಭಿಲಾಷೆ, ಸ್ತ್ರೀ ಸಹಜ ಆಸೆ, ರೆಕ್ಕೆ ಮುರಿದ ಜಟಾಯು, ವಾಲಿಯ ಕಣ್ಣಾಲಿಯಲಿ ತೊನೆಯುವ ಪರ್ವತಶ್ರೇಣಿ, ಮರೆಯಲಿ ನಿಂತ ಕೆಚ್ಚು, ನೀನೆ ಹನುಮಂತನೆಂಬ ಎಚ್ಚರಿಕೆಯ ಮಾತು ಕೇಳಿಸಿದ ಕಡಲಂಚಿನ ಕಲ್ಲು, ಮೂರು ಗೆರೆಯೆಳೆಸಿಕೊಂಡ ಅಳಿಲು, ಭ್ರಮೆ ಹುಟ್ಟಿಸುವ ಮಂಡೋದರಿ, ನಮ್ರ ವಿಭೀಷಣ, ಘೋರ ಯುದ್ದ, ಕಷ್ಟ ಸಾಧ್ಯ ಸಂಜೀವಿನಿ, ಗೆಲುವಿನ ಹೊಸ್ತಿಲಲ್ಲಿ ಹಚ್ಚಿದ ಅಗ್ನಿದಿವ್ಯ, ಪುಷ್ಪಕವಿಮಾನದಲ್ಲಿ ಮನೆಕಡೆ ಸವಾರಿ, ಕಾದ ಕಣ್ಣುಗಳ ಭರತ, ವಿಜಯೋತ್ಸವದ ನಗರಿ, ಕೊಂಕುಮಾತಿನ ಅಗಸ, ಪ್ರಜಾಪ್ರೇಮಿ ರಾಜಾರಾಮ, ವನವಿಹಾರ, ಬೇಕೆಂದೆ ಕಳೆದುಕೊಳ್ಳುವ ಸೀತೆ, ಋಷಿಮನೆಯಲ್ಲಿ ಜನ್ಮೋತ್ಸವ, ಮಕ್ಕಳುಲಿ ಕೇಳಿ ಮಾತು ಮರೆವ ಅಮ್ಮನ ದಿನಗಳು,... ಅಶ್ವಮೇಧದ ಸ್ವರ್ಣಸೀತೆ, ಕರ್ತವ್ಯ ಮತ್ತು ಒಲವಿನ ಮುಖಾಮುಖಿಯಲ್ಲಿ ಆಲ್ ಅಕಾಮಡೇಟಿವ್ ಒಲವು ಬೆನ್ನು ತಿರುಗಿಸಿ ಅಮ್ಮನ ಒಡಲು ಹೊಕ್ಕಲ್ಲಿಯವರೆಗೆ, ಇಷ್ಟೇ ಅಷ್ಟೇ ಅನ್ನದೆ ದಿನದ ಕಣ್ಣು ಮುಚ್ಚುವವರೆಗೆ ರಾತ್ರಿಯ ತೆಕ್ಕೆ ಮಗ್ಗುಲಾಗುವವರೆಗೆ ಹೇಳಿದ ಕಥೆಗಳು, ಕಂಡ ನೋಟಗಳು, ಹೊಳೆಯದ ಅರ್ಥಗಳು, ನೋಟಗಳಾಚೆಗಿನ ಚಿತ್ರಗಳು - ಇಲ್ಲಿ ಬಿಳಿ ಬಟ್ಟೆಯೊಳಗಣ ಹಣ್ಣಣ್ಣು ಕೈ ಹಿಡಿದ ಬಣ್ಣ ಬಣ್ಣದ ಅಂಗಿಯೊಳಗಿನ ಚಿಗುರು ಬೆರಳು.
ಕಥೆಗಳ ಬರೆಯುವ ಕಥೆಗಾರ.. ನಿನ್ನ ಮಹಿಮೆ ಅಪಾರ ಎಂದಿದ್ದರು ಪುತಿನ. ಅದು ನಿಜವೇ. ಆದರೆ ಮಾಡುವವನದಲ್ಲ ಹಾಡು ಹಾಡುವವನದು ಅನ್ನುವುದು ಅದಕ್ಕಿಂತ ಗಟ್ಟಿಯಾಗಿ ಹೊಳೆದ ನಿಜ. ಅದನ್ನಂದವರೂ ಅವರೆ. ಕಥೆ ಹೇಳುವವನೊಬ್ಬ, ಚೆಂದಕೆ ಕಥೆ ಹೇಳುವವನೊಬ್ಬ ಬಾಲ್ಯಕ್ಕೆ ದಕ್ಕದಿದ್ದರೆ, ಕಥೆಯ ಕಥೆ, ಕಥೆಗಾರಿಕೆಯ ಕಥೆ ಮುಗಿದ ಹಾಗೆ ಅಲ್ಲವೆ?


ನಿನ್ನ ಯಾತ್ರೆ ಮುಗಿಸಿದೆ ಅಂತ ಅಮ್ಮ ಫೋನು ಮಾಡಿದಾಗ, ಕಳೆದು ಹೋದೆ ನೀನು ಅಂದುಕೊಂಡಿದ್ದೆ ನಾನು. ಇಲ್ಲ. ಇಲ್ಲೆ ಇದ್ದೀಯಲ್ಲ ಕಣ್ಮುಚ್ಚಿ ಕಥೆಯ ನೆನೆದರೆ ನಾನು ಓದಿದ ಕತೆಗಳನ್ನೆಲ್ಲ ಕೈಹಿಡಿದು ನಡೆಸುವ ನೀನೇ ಸಿಗುತ್ತೀ.ಈಗ ಇಲ್ಲಿ ಮೊಳಕೆಯೊಡೆದಿರುವ ಚಿಗುರಿಗೆ ಎರೆಯಲು ನೂರು ಕತೆಗಳ ರಂಗು ರಂಗಿನ ಜೀವ ಜಲ. ಹೌದು ನಿನ್ನ ಬಟ್ಟೆ ಮಾತ್ರ ಬಿಳೀಗಿತ್ತು.ಓದು ಓದು, ಇನ್ನೂ ಓದು ಅಂದ ಮಾತು ನೆನಪಿನಲಿ ಯಾವತ್ತೂ. ದಶರಥನ ಸಮೀಕರಣದಲ್ಲಿ ನೀನು ನೊಂದ ದಿನಗಳ ನೆನಪು ನನಗೆ. ನೀನು ಹಾಗಂದ ಕೂಡಲೆ, ನಾನೇನು ಕೈಕೆಯಾ ಹಂಗರೆ ಅಂತ ಸಿಟ್ಮಾಡಿದ ಅಮ್ಮಮ್ಮನೂ. ಅಲ್ಲ ಅವಳಿಗ್ಯಾಕೆ ತಾನು ಕೌಸಲ್ಯೆ ಎನಿಸುವುದಿಲ್ಲ ಅಂತ ಅವತ್ತು ಅಚ್ಚರಿಪಟ್ಟು, ಅದನ್ನೇ ಕೇಳಿ ಬೈಸಿಕೊಂಡ ನೆನಪೂ. ಕೆ.ಎಸ್.ನ ಬರೆದಿದ್ದರು - ಜಾತಕಗಳೊಪ್ಪಿದರೆ ಮದುವೆಯೇ.ಅಲ್ಲವೇ? ಹೌದೇ?


ಏನೆಲ್ಲ ಹಾರಾಡಿಯೂ ನಿನ್ನ ಜರ್ಝರಿತ ಕೊನೆದಿನಗಳ ನೊಗ ಹೊತ್ತವಳು ಅವಳೇ ಅಲ್ಲವೇ? ನೀನು ಕಣ್ಮರೆಯಾದ ಮೇಲೆ, ಅಂದಿನ ನಿನ್ನನ್ನು ಅಕ್ಷರಶಃ ನೆನಪುಗಳಲ್ಲಿ ಮಾತಿನಲ್ಲಿ ಕಣ್ಣ ಮುಂದೆ ತರುತ್ತಿದ್ದವಳು. ಅವಳು ಹೋದ ಮೇಲೆ ನಿನ್ನ ಯಾರು ನೆನಪಿಟ್ಟುಕೊಂಡಿದಾರೆ ಅಂತ ಕೇಳಬೇಡ. ಇದ್ದೀವಿ ನಾವಿಬ್ಬರು - ಅಕ್ಕ,ತಮ್ಮ. ನಿನ್ನ ಅಮೃತವುಂಡವರು, ಬೆನ್ನು ನುಗ್ಗಾಗಿಸಿದವರು, ಬೆರಳು ಜಗ್ಗಿದವರು, ನಿನ್ನ ಕಥೆಗಳಿಗೆ ಕಿವಿಯಾದವರು, ಪೊರೆ ಬಂದ ಕಣ್ಣುಗಳಿಗೆ ಓದಿ ಹೇಳಿದವರು, ಸ್ಕೋರು ಕಾಣಿಸದ ಕಣ್ಣಿಗೆ ಅಂಗಳದ ಮಾಹಿತಿ ಕೊಟ್ಟವರು, ನೆನಪು ಮಾಡಿಕೊಂಡರೆ ಕಣ್ಣು ತುಂಬಿಸಿಕೊಳ್ಳುವವರು, ಅದನ್ನೇ ಹೇಳಲು ಹೋದೆ.

ನನ್ನ ಪುಟ್ಟ ಮಗಳಿಗೆ ಗೊತ್ತು. ತನ್ನಮ್ಮನಿಗೆ ಇಷ್ಟು ಹೇರಾಳ ಕತೆ ಹೇಳಿದವನೊಬ್ಬನಿದ್ದ ಅಜ್ಜ ಅಂತ. ನೀನಿರುತ್ತೀ ನಾನು ಹೋದರೂ ಅವಳ ನೆನಪುಗಳಲ್ಲಿ.ಅದೇ ಪುನರಾವರ್ತನೆ.

ಬಿಳಿ ಬಿಳೀ ಹಣ್ಣಣ್ಣು ಕೈಯಲ್ಲಿ ಬಣ್ ಬಣ್ಣದ ಹೂಚಿಗುರು ಬೆರಳು.

2 comments:

sunaath said...

ಸಿಂಧು,
ಅಜ್ಜ, ಮೊಮ್ಮಕ್ಕಳ ಮಧುರ ಭಾವನಾಲೋಕವನ್ನು ನವಿರಾಗಿ ಚಿತ್ರಿಸಿದ್ದೀರಿ. ಬದುಕಿನ ಅಮೂಲ್ಯ ನೆನಪುಗಳ ದಾಖಲೆ ಇದು.
ಬದುಕಿನ ಅನಂತವಾದ ಝರಿ ಇದು.

ಸಿಂಧು sindhu said...

ಸುನಾಥ ಕಾಕಾ,
ನಿಮ್ಮ ಮಾತು ನಿಜ. ಈ ನೆನಪುಗಳು ಅಮೂಲ್ಯ ಅನುಪಮ.

ಪ್ರೀತಿಯಿಂದ,ಸಿಂಧು