ಈಗಷ್ಟೆ ನಿಂತ ಮಳೆ,
ಮರಮರದ ಹಸಿರೆಲೆಯ
ತುದಿಮೂಗಲ್ಲಿ ಪುಟ್ಟ ಪುಟ್ಟಹನಿ,
ಮೋಡ ಚೆದುರಿ, ಕೊನೆಯ ಕಿರಣಗಳು
ಕೆಂಪಗೆ ನೀಲಿಯಲ್ಲಿ ಹರಡುತ್ತಾ
ಹಿತವಾದ ಸಂಜೆ,
ದಾರಿ ಇಕ್ಕೆಲದ ಕಳೆಗಿಡಕ್ಕೂ
ಮಳೆಹನಿಯ ಸವಿದು
ಎಂತದೋ ಬಳುಕು ;
ದಾರಿಬದಿಯ ನೀರಹರಿವಿನಲ್ಲಿ
ಚಿಣ್ಣರ ಪುಟ್ಟ ಕಾಲಾಟ;
ತುಂಬಿಬಂದಿದೆ ಮನ
ಮನೆಗೆ ಬಂದವಳು ಕದವ ತೆರೆದೆ
ಬಾಲ್ಕನಿಯಾಚೆಗೆ ದೂರದಲಿ
ಸಾವನದುರ್ಗದ ಮೇರುನೋಟ;
ನೀನಿಲ್ಲ ಜತೆಯಲ್ಲಿ
ಅಕ್ಷಾಂಶವೇ ಬೇರೆ
ಹರಡಿಬಿದ್ದಿದೆ ಗುರುತು ಹಾಕಿಟ್ಟ ಭೂಪಟ
ಗೊತ್ತು ಕೆಲದಿನಗಳ ದೂರ
ಹೇಗೆ ಇಳುಕಲಿ ಮನದ ಭಾರ?
ಕೈ ಮುಗಿದು ಕೂತಿದ್ದೇನೆ
ಬಿಸಿಹಾಲಿನ ಬಟ್ಟಲ ಮುಂದೆ..
ಗೊತ್ತು ನೀನಲ್ಲೆ ಇದ್ದರೂ
ಮನಸು ಇಲ್ಲೆ ಉಳಿದಿದೆ..!
Thursday, November 13, 2008
Thursday, November 6, 2008
ಕಾಗದದ ದೋಣಿ..
ವಸು ಆಸ್ಪತ್ರೆಯ ಮಧ್ಯಾಹ್ನದ ಸುತ್ತಿಗೆ ಬಂದಾಗ ಸಿಕ್ಕಿದ ವ್ಯಕ್ತಿಯ ಮುಖದಲ್ಲಿ ಬಾಲ್ಯದ ಗೆಳತಿ ಮಂಜುವಿನ ಕುರುಹಿತ್ತು. ಕಾಫಿ ಹಂಚಿಕೊಳ್ಳುತ್ತಾ ಇಬ್ಬರ ದಾರಿಯ ಮೈಲಿಗಲ್ಲುಗಳ ಪರಿಚಯವಾಗಿ, ಈಗ ಗೀತಾಂಟಿ ಮಂಜುವಿನ ಮನೆಯಲ್ಲಿರುವುದು, ಹುಶಾರಿಲ್ಲದ ಆಂಟಿಯನ್ನು ಈ ಆಸ್ಪತ್ರೆಗೆ ಸೇರಿಸಿರುವುದು ತಿಳಿಯಿತು. ಮಂಜುವಿನ ಜೊತೆಗೆ ಬಿಳಿಬಿಳಿ ವಾರ್ಡಿನ ಒಳಹೊಕ್ಕವಳಿಗೆ ಹಸಿರು ಹೊದಿಕೆಯಡಿಯ ಕ್ಷೀಣಜೀವ ಏನೆಲ್ಲ ನೆನಪನ್ನ ತಂದಿತೋ ಹೇಳುವುದು ಕಷ್ಟ.. ಒಂದು ರೀತಿಯ ಎಚ್ಚರದ ಕನಸು..
ಟಪ್ಪ ಟಪ್ಪ ಅಂತ ಶುರುವಾದ ಮಳೆಹನಿ ತನ್ನ ತಾಳದಲ್ಲಿ ತಾನೇ ಮುಳುಗಿ ಕಪ್ಪು ರಸ್ತೆಯುದ್ದಕ್ಕೆ ಕೆಂಪು ನೀರಾಗಿ ಹರಿಯತೊಡಗಿತು. ಇಕ್ಕೆಲದಲ್ಲಿದ್ದ ಚರಂಡಿಗಳು ತುಂಬಿದ ನದಿಯ ರಭಸದಲ್ಲಿ ಭೋರ್ಗರೆಯತೊಡಗಿದವು. ರಸ್ತೆಯಂಚಿನಿಂದ ಮೇಲೇರಿ ಹೋಗಿದ್ದ ಮೆಟ್ಟಿಲುಗಳ ತುದಿಯ ಕಟ್ಟೆಯಲ್ಲಿ ಜನರೋ ಜನ. ಮಳೆ ಜೋರಾಗುವುದಕ್ಕೂ ಬಸ್ಸು ಬರದೇ ಇರುವುದಕ್ಕೂ ಅವಿನಾಭಾವ ಸಂಬಂಧ. ಹಬ್ಬಸಂತೆಯ ಹಿಂದಿನ ದಿನವೇ ಈ ರೀತಿ ಮಳೆಹಿಡಿಯಿತಲ್ಲಾ ಅಂತ ಊರಿಗೆ ಹೋಗಲು ಚೀಲ ತುಂಬಿ ಕಾಯುತ್ತಿರುವ ಜನರೆಲ್ಲ ತಲೆಗೊಂದೊಂದು ಮಾತನಾಡಿ ಕವಿದ ಮಳೆಚಳಿಯಿಂದ ತಪ್ಪಿಸಿಕೊಳ್ಳಲು ಮಾತಿನ ಕಾವಿನ ಮೊರೆಹೊಕ್ಕಿದ್ದರು.
ಅದೋ ನೋಡ ನೋಡುತ್ತ ಚರಂಡಿಯ ನೀರೂ, ರಸ್ತೆಯ ಮೇಲೆ ಹರಿಯುವ ನೀರೂ ಸೇರಿ ಅಲ್ಲೆ ಮುಂದಿನ ಗೋಪಿ ಸರ್ಕಲ್ಲಿನಲ್ಲಿ ಹಳ್ಳವೆ ಆಗಿಬಿಟ್ಟಿತು. ನಾಕೂ ದಿಕ್ಕಿನಿಂದ ಮಳೆಯನ್ನು ಲೆಕ್ಕಿಸದೆ ಓಡುತ್ತ ಬಂದ ವಾಹನಗಳು ಈ ನೀರಿನ ರಭಸ ನೋಡಿ ದಿಕ್ಕುಕಾಣದೆ ಸರ್ಕಲ್ಲಿನ ಸುತ್ತ ನಿಂತರು. ಸರ್ಕಲ್ಲಿನ ಮೂಲೆಯಲ್ಲಿದ್ದ ಗೋಪಾಲನ ಗೂಡಂಗಡಿಯಲ್ಲಿ ಬರಬ್ಬರಿ ವ್ಯಾಪಾರ, ಗಣೇಶ ಮಾರ್ಕಿನ ಬೀಡಿಗಳೆಲ್ಲ ಖರ್ಚಾದವು.. ಪಾರುಹಮಾಲನ ಕಂಬಳಿಗೊಬ್ಬೆ, ಭಟ್ಟರ ಮನೆಯ ಕಿಟಕಿತಳಿಗೆ ಸಿಕ್ಕಿಸಿದ್ದು ಕೆಳಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ಅಲ್ಲಿ ಎದ್ದಿತು, ಇಲ್ಲಿ ಬಿತ್ತು ಅಂತ ನೋಡುತ್ತ ನಿಂತ ಹಮಾಲರ ಗುಂಪಿನೆದುರು ಅದು ಕೊನೆಯಬಾರಿಗೆ ಸರ್ಕಲ್ಲಿನಲ್ಲೊಂದು ಸುತ್ತು ಹೊಡೆದು ಕಣ್ಮರೆಯಾಯಿತು. ಇಕ್ಬಾಲನು ಕವಳ ತಿಂದು ಕೆಂಪು ಹಿಡಿದ ಬಾಯಲ್ಲಿ ದೊಡ್ಡಕೆ ನಗುತ್ತಾ ಪಾರು ಮಳೆ ನಿಂತ್ರೆ ವರದಾ ನದಿ ಸೇತ್ವೆ ಹತ್ರ ಹೋಗಿ ನಾಳೆ ಹುಡ್ಕು. ಸಿಕ್ಕಿದ್ರೂ ಸಿಕ್ಬೋದು ನಶೀಬಿದ್ರೆ ಅನ್ನುತ್ತಿದ್ದರೆ ಉಳಿದವರೆಲ್ಲ ಸಣ್ಣಗೆ ನಗುತ್ತ ಹೌದೇ ಹೌದೆಂದರು. ಮೊದಲೇ ಪುಟ್ಟ ಮುಖದ ಪಾರು, ಗೊಬ್ಬೆ ಕಳೆದುಕೊಂಡು ಇನ್ನಷ್ಟು ಚಿಕ್ಕ ಮುಖ ಮಾಡಿ ನಿಂತನು. ಅಷ್ಟೊತ್ತಿಗೆ ಹೊಳೆಬಾಗಿಲು ಬಸ್ ಬಂದೇಬಿಡ್ತು. ಎಲ್ಲರೂ ಹರಿವ ನೀರಿಗಿಂತ, ಬೀಳುವ ಮಳೆಗಿಂತ ವೇಗವಾಗಿ, ತುಂಬಿ ನಿಂತ ಚೀಲದಿಂದ ಒಂದೇ ಒಂದು ಸಾಮಾನೂ ಬೀಳದ ಹಾಗೆ, ಅದು ಹ್ಯಾಗೋ ಬ್ಯಾಲನ್ಸು ಮಾಡುತ್ತ ಬಸ್ ಹತ್ತಿಯೇ ಬಿಟ್ಟರು. ಹಾ ಹೂ ಅನ್ನುವಷ್ಟರಲ್ಲಿ ಬಸ್ಸು ತುಂಬಿ ಪ್ಯಾಕಾಗಿ ಹೊರಟೂ ಬಿಟ್ಟಿತು. ಈಗ ಅಲ್ಲಿನ ಗಜಿಬಿಜಿ ಕಡಿಮೆಯಾಯಿತು. ಕಟ್ಟೆ ಖಾಲಿಯಾಯಿತು. ಅಲ್ಲಲ್ಲಿ ಒಬ್ಬೊಬ್ಬ ಹಮಾಲರು ಬೀಡಿ ಹಚ್ಚಿಕೊಂಡು ಕುಕ್ಕರುಗಾಲಲ್ಲಿ ಕೂತುಕೊಂಡಿದ್ದರಷ್ಟೆ. ಪೇಟೆ ಬೀದಿಯೇ ಮಂಕಾಗಿ ಕೂತಿದ್ದರೆ ಮನೆಗಳಾದರೂ ಏನು ಮಾಡುತ್ತವೆ ಮಳೆಯ ಹೊಡೆತಕ್ಕೆ. ಎಲ್ಲರೂ ಮಧ್ಯಾಹ್ನದ ನಿದ್ದೆಯನ್ನ ಇನ್ನೊಂಚೂರು ಮುಂದುವರಿಸುತ್ತ ಮಗ್ಗಲು ಬದಲಾಯಿಸಿದರು.
ಮನೆಯ ಕಿಟಕಿಯಲ್ಲಿ ಇದನ್ನೆಲ್ಲ ನೋಡುತ್ತ, ಬಿಡಬೇಕೆಂದು ಇಟ್ಟುಕೊಂಡಿದ್ದ ಕಾಗದದ ದೋಣಿಯನ್ನ ಕೈಯಲ್ಲೇ ಹಿಡಿದುಕೊಂಡು ಕೂತಿದ್ದ ವಸುಗೆ ಮಾತ್ರ ನಿದ್ದೆ ಬಂದಿರಲಿಲ್ಲ. ಅಲ್ಲೆ ಹೊರಗೆ ಕೂತಿದ್ದ ಪಾರೂನ್ನ ಕೂಗಿ ದೋಣಿ ಕೊಟ್ಟು ಹೇಳಿದಳು - ಇದನ್ನ ಬಿಡು ನೀರಿಗೆ, ಇದರ ಒಳಗಡೆ ನಿನ್ ಗೊಬ್ಬೆ ಯಾರಾದ್ರೂ ನೋಡಿದ್ರೆ ತೆಗೆದಿಡಿ ಅಂತ ಬರ್ದಿದೀನಿ ನೋಡಿದವ್ರು ತೆಕ್ಕೊಡ್ತಾರೆ - ಪಾರೂ ಕಣ್ಣಲ್ಲಿ ಹನಿಯೊಡೆಯಿತು. ಆಯಿತು ಅಮ್ಮೀ ನೀವೊಬ್ರು ಬಾಕಿ ಇದ್ರಿ. ಸರಿ ಅದ್ನೂ ಮಾಡಿ ನೋಡುವ ಅಂತ ಮಳೆಯಲ್ಲೇ ಮೆಟ್ಟಿಲಿಳಿದು ಹರಿವ ನೀರಲ್ಲಿ ದೋಣಿಯನ್ನು ತೇಲಿಬಿಟ್ಟನು. ಈಗ ಮಳೆಯ ಜೊತೆ ಅವನ ಕಣ್ಣ ಹನಿಯೂ ಸೇರಿ ಮುಗಿಲು ಮತ್ತಷ್ಟು ಕಪ್ಪಾಗಿ ಮಳೆ ಬಿರುಸಾಯಿತು. ಹಾಗೇ ನೋಡುತ್ತ ಕೂತ ವಸುಗೆ ಎದುರು ಮನೆಯ ಕಿಟಕಿಯಲ್ಲಿ ಗೀತಾ ಆಂಟಿಯ ನಗುಮೊಗ ಕಾಣಿಸಿತು. ಕೂತಲ್ಲಿಂದಲೇ ಖುಶಿಯಾಗಿ ದೋಣಿಯ ಕಡೆ ಸನ್ನೆ ಮಾಡಿ ತೋರ್‍ಇಸಿದರು. ತನಗೂ ಒಂದು ಬೇಕೆಂಬಂತೆ ಸನ್ನೆ ಮಾಡಿದರು. ಇವಳು ಕೂಡಲೇ ಕೂತು ಅವರಿಗೆ ಕಾಣುವ ಹಾಗೆ ಅವತ್ತಿನ ಪತ್ರಿಕೆಯ ಹಿಂಬದಿ ಹಾಳೆ ಹರಿದು ಪುಟ್ಟ ಕತ್ತಿದೋಣಿ ಮಾಡತೊಡಗಿದಳು.. ಅವರು ಇನ್ನೂ ಖುಶಿಯಿಂದ ಚಪ್ಪಾಳೆ ತಟ್ಟತೊಡಗಿರುವುದು ದೂರದಿಂದಲೇ ಗೊತ್ತಾಗುತ್ತಿತ್ತು.. ಮಾಡಿ ಮುಗಿಯುವಷ್ಟರಲ್ಲಿ ಮಳೆಯ ರಭಸ ನಿಂತು ಸಣ್ಣ ಹನಿಯಾಯಿತು. ಚರಂಡಿ ಎಂದಿನಂತೆ ಮಟ್ಟವಾಗಿ ಹರಿಯುತ್ತಿತ್ತು. ಸರ್ಕಲ್ಲಿನಲ್ಲಿ ನಿಂತ ವಾಹನಗಳೆಲ್ಲ ತಮ್ಮ ದಾರಿ ಹಿಡಿದು ಹೊರಟಿದ್ದವು. ಮನೆಗಳ ಬಾಗಿಲೂ ತುಸುವೇ ತೆರೆಯತೊಡಗಿತು. ಅಂಗಡಿಗಳೆಲ್ಲ ಝಳಝಳ.. ಅಲ್ಲಲ್ಲಿ ಒಬ್ಬೊಬ್ಬ ಗಿರಾಕಿ. ಅಜ್ಜ ಎದ್ದು ಬಂದು ಜಗಲಿಯ ಬಾಗಿಲು ತೆಗೆದ ಕೂಡಲೆ ವಸು ಈಗ ಬಂದೆ ಇರಜ್ಜ ಎನ್ನುತ್ತ ಹೊರಗೋಡಿದಳು..ಆಕಡೆ ಈಕಡೆ ನೋಡಿ ರಸ್ತೆ ದಾಟುತ್ತ ಎದುರು ಮನೆಯ ಕಿಟಕಿಯಲ್ಲಿ ಆಂಟಿಯ ಕೈಯಲ್ಲಿ ಕತ್ತಿದೋಣಿ ಕೊಟ್ಟಳು. ಅವರು ಪುಟ್ಟ ತಮ್ಮನಷ್ಟೇ ಚಂದವಾಗಿ ನಕ್ಕದ್ದನ್ನು ನೋಡುತ್ತ ಆಮೇಲೆ ಬರುತ್ತೇನೆ, ಮಂಜುನ ನಮ್ಮನೆಗೆ ಕಳಿಸಿ ಆಟಕ್ಕೆ ಅಂತ ಹೇಳುತ್ತ ಮೆಟ್ಟಿಲಿಳಿದು ರಸ್ತೆ ದಾಟಿ ಮನೆಯ ಹತ್ತಿರ ಬಂದರೆ ಪಾರು ಅವನ ಒದ್ದೆ ಗೊಬ್ಬೆ ಕೈಲಿ ಹಿಡಿದು ಓಡೋಡಿ ಬಂದ. ಅಮ್ಮೀ ನನ್ನ ಗೊಬ್ಬೆ ಸೊಸೇಟಿ ಪಕ್ಕದ ಹಣ್ಣಿನಂಗಡಿಯ ಕಟ್ಟೆಗೆ ಸಿಕ್ಕಿಹಾಕಿಕೊಂಡಿತ್ತು ಜೊತೆಗೇ ನಾವು ಬಿಟ್ಟ ದೋಣಿಯೂ ಇತ್ತು ನೋಡಿ ಅಂತ ಹುಳುಕುಹಲ್ಲು ಕಿರಿದನು. ಅಷ್ಟೊತ್ತಿಗೆ ಸಂಜೆಯ ಅಲ್ಲಾ ಕೂಗು ಕೇಳಿಸಿ ಇಬ್ಬರೂ ಸಮಾಧಾನವಾಗಿ ನಕ್ಕರು.
ವಸೂ ಎಂದು ಕೂಗುತ್ತ ಬಂದ ಮಂಜುಳ ನಡುಮನೆಯ ಕತ್ತಲು ದಾಟಿಬರಲು ಹೆದರಿಕೆಯಾಗಿ ಜಗಲಿಯಲ್ಲೆ ನಿಂತಳು. ವಸು ಒಳಗಿನಿಂದ ಧಿಗಣ ಹಾಕುತ್ತ ಏನು ಹೆದರುಪುಕ್ಕಿ ಮಾರಾಯ್ತಿ ನೀನು ಅನ್ನುತ್ತ ಅವಳ ಕೈಹಿಡಿದು ಎಳೆದುಕೊಂಡು ಹೋದಳು.ಇಬ್ಬರ ಅಡಿಗೆ ಆಟವೂ ಮುಗಿಯುವಾಗ ಸಂಜೆ ದೀಪ ಹೊತ್ತಿಸುವ ವೇಳೆ. ಅಜ್ಜ ಜಗಲಿಯಿಂದ ಮಂಜುವಿನ ಮನೆಯಲ್ಲಿ ಕರೆಯುತ್ತಿದ್ದಾರೆ ಎಂದು ಕೂಗು ಹಾಕುತ್ತಿದ್ದ. ಇಬ್ಬರೂ ಒಟ್ಟಿಗೇ ಅವಳ ಮನೆಗೆ ಹೊರಟರು. ಒಳಗೆ ಹೋದ ಕೂಡಲೆ ಮಂಜು ಕಣ್ಮರೆಯಾಗಿಬಿಟ್ಟಳು. ಗೀತಾ ಆಂಟಿ ಬೆಂಚಿನ ತುದಿಯಲ್ಲಿ ಕಾಗದದ ದೋಣಿ ಹಿಡಿದುಕೊಂಡು ಕೂತೇ ಇದ್ದಾರೆ. ಬಾ ಹತ್ತಿರ ಅಂತ ಸನ್ನೆ ಮಾಡಿದರು. ನೀವು ದೋಣಿ ಅಂತ ಹೇಳಿ ನೋಡೋಣ ಇನ್ನೊಂದು ದೊಡ್ಡ ದೋಣಿ ಮಾಡಿಕೊಡುತ್ತೇನೆ ಅಂದ ಕೂಡಲೆ ಅವರು ದ ದ ದ... ಅಂಅತ ಶಬ್ದ ಮಾಡಿ ನಗತೊಡಗಿದರು. ಇವಳು ಇನ್ನೂ ಖುಶಿಯಿಂದ ಅವರ ಬಾಯಿಂದ ರಸ್ತೆ, ಸರ್ಕಲ್ಲು, ಅಂಗಡಿ, ಕಿಟಕಿ ಮತ್ತು ಕಣ್ಣಿಗೆ ಕಂಡ ಎಲ್ಲ ವಸ್ತುಗಳನ್ನೂ ಹೇಳಿಸಲು ಹೊರಟು ಏನೇನೋ ಅರ್ಥವಿಲ್ಲದ ಶಬ್ಧಗಳ ಮಾಲೆಯಲ್ಲಿ ಬಿದ್ದು ನಗಾಡತೊಡಗಿದಳು. ಆಂಟಿಗೂ ಖುಶಿ ತೊದಲುತ್ತ ಉಗ್ಗುತ್ತ ಏನೇನೋ ಹೇಳುತ್ತ ನಗುತ್ತಿದ್ದಾರೆ.. ಅಷ್ಟರಲ್ಲಿ ಅಲ್ಲಿಗೆ ಬಂದ ಮಂಜು ಕೈಬಾಯೊರೆಸುತ್ತ ತಾನೂ ಸೇರಿಕೊಂಡಳು ಮೂವರೂ ಶಬ್ಧಬ್ರಹ್ಮನ ಉಪಾಸನೆಯಲ್ಲಿ ಮುಳುಗಿ ತೇಲುತ್ತ ಇದ್ದರೆ ನಗು ಸುತ್ತಲೂ ಪ್ರಭಾವಲಿಯಾಗಿ ಕೂತಿತ್ತು. ಅಷ್ಟೊತ್ತಿಗೆ ಮನೆಗೆ ಬಂದ ಮಂಜುವಿನ ಮಾವ -ಏನಿದು ಬೀದಿಬಾಗಿಲಲ್ಲಿ ಕೂತು ಹುಚ್ಚಾಟ. ನಿಮ್ಮಮ್ಮ ಹುಚ್ಚಿ ಎಂದರೆ ನಿಂಗೂ ಗೊತ್ತಾಗಲ್ಲವೇನೇ ಮಂಜೂ, ಹೀಗೇ ನಗ್ತಾ ಇದ್ರೆ ನಾಳೆ ನೀನೂ ಆ ಕಡೆ ಕಿಟಕಿ ಬದಿಗೆ ಹಲ್ಲು ಕಿರಿದುಕೊಂಡು ಕೂರಬೇಕಷ್ಟೇ. ಶಾಲೆ ಪಾಠ ಅಂತ ಮಾನವಾಗಿ ಇರೋದ್ ಬಿಟ್ಟು ಏನಿದು ಗಲಾಟೆ, ಎಂದು ಗೊಣಗುತ್ತ ಗಂಟುಮುಖದಲ್ಲಿ ಒಳಗೆ ಹೋದರು.
ನಗುವೆಲ್ಲ ನಿಂತು ಆಂಟಿಯ ಮುಖ ಪೆಚ್ಚಾಯಿತು. ಮಂಜುವಿನ ಕಣ್ಣಲ್ಲಿ ಆಗಲೇ ನೀರಹನಿ.. ವಸು ತಲೆತಗ್ಗಿಸಿ ನಾಳೆ ಬರ್ತೀನಿ ಅಂತ ಹೇಳುತ್ತಾ ಅವರ ಮನೆಗೆ ಹೋದಳು. ಒಳಗೆ ಹೋದ ಕೂಡಲೆ ಅಜ್ಜ ಆಟವೆಲ್ಲ ಮುಗಿಯಿತೇನೇ, ಓದಿಕೊಳ್ಳುವುದೇನೂ ಇಲ್ಲವೋ ಅನ್ನುತ್ತಿದ್ದರೆ ಉತ್ತರಿಸಲು ತೋಚದೆ ಸುಮ್ಮನೆ ಒಳಗೆ ಹೋಗಿ ಅಮ್ಮಮ್ಮನ ಮರಿಗೆ ಹತ್ತಿ ಕತ್ತಲಲ್ಲಿ ಮಲಗಿದಳು.
ಸ್ವಲ್ಪ ಹೊತ್ತಿಗೆ ಸಂಜೆಯ ಕೆಲಸ ಮುಗಿಸಿ ಬಂದ ಅಮ್ಮ ಒಳಗಿನ ದೀಪ ಹಾಕಿದಾಗ ಕಣ್ಣುಬಿಡುತ್ತ ಮಲಗಿದ್ದ ವಸು ಕಾಣಿಸಿದಳು. ಅಮ್ಮನಿಗೆ ಅಚ್ಚರಿ. ಕುಣಿದುಕೊಂಡು, ಜೇಬಲ್ಲಿ ಏನಾದರೂ ತುಂಬಿಕೊಂಡು ಮುಕ್ಕುತ್ತಾ, ಅಜ್ಜನನ್ನು ಕತೆ ಹೇಳಲು ಪೀಡಿಸುತ್ತ ಕೂರುವ ಹುಡುಗಿ ಯಾಕೆ ಇಲ್ಲಿ ಸುಮ್ಮನೆ ಮಲಗಿದಾಳೆ ಅಂತ ಹೊಳೆಯದೆ ಹೋಯಿತು. ಅಮ್ಮಾ ಅಂತ ಮಾತು ಹೊರಡುತ್ತಿದ್ದ ಹಾಗೆ ಗೊತ್ತಾಯಿತು. ಓಹೋ ಇನ್ನೇನು ಅಳು ಬರುವುದರಲ್ಲಿದೆ ಅಂತ. ನಿಧಾನವಾಗಿ ಕೂತು ಅವಳನ್ನೆಬ್ಬಿಸಿಕೊಂದು ಅವುಚಿಕೊಳ್ಳುತ್ತಾ ಏನು ಪುಟ್ಟೀ ಅನ್ನುವುದೇ ತಡ ಅಷ್ಟೊತ್ತಿನವರೆಗೂ ತಡೆದಿಟ್ಟಿದ್ದೆಲ್ಲ ಹೊರಗೆ ಬಂತು. ಅಮ್ಮಾ ಗೀತಾಂಟಿ ಯಾಕೆ ಮಾತಾಡುವುದಿಲ್ಲ, ಅವರ ಗಂಡ ಎಲ್ಲಿ, ಮಂಜುಗೆ ಯಾಕೆ ಯಾವಾಗಲೂ ಅವರ ಮಾವ ಬಯ್ಯುತ್ತಾನೆ? ಅಷ್ಟು ಬೈದರೂ ಇವರಿಬ್ಬರೂ ಯಾಕೆ ಇಲ್ಲಿರಬೇಕು. ಅವಳಿಗೆ ಅಜ್ಜನೂ ಇಲ್ಲವಲ್ಲ ಯಾಕೆ.. ಹೀಗೇ.. ಅಮ್ಮ ನಿಧಾನವಾಗಿ ಹೇಳತೊಡಗಿದರು. ಗೀತಾಆಂಟಿ ಸ್ವಲ್ಪ ಪೆದ್ದಿ . ಉಗ್ಗು ಮಾತು ಅದರಲ್ಲೂ ಪೂರ್ತಿ ಪದ ಹೊರಡುವುದಿಲ್ಲ. ಅವಳಪ್ಪ ಅಂದ್ರೆ ಮಂಜುವಿನ ಅಜ್ಜ ಇದ್ದಾಗ ಈ ಮಗಳು ಹೀಗಿರುವುದು ನೋಡಿ ಯಾರೂ ಮದುವೆಯಾಗುವುದಿಲ್ಲ, ಪೆದ್ದಿಯಾಗಿದ್ದರಿಂದ ಮದುವೆಯಾದರೂ ಗೋಳು ಹೊಯ್ದುಕೊಳ್ಳುತ್ತಾರೆ ಎಂದು ಅವರ ಗದ್ದೆಯಲ್ಲಿ ಕೆಲಸಕ್ಕಿದ್ದ ಅವರ ಜಾತಿಯವನೇ ಒಬ್ಬನಿಗೆ ಕೊಟ್ಟು ಮದುವೆ ಮಾಡಿದರು. ಅವನನ್ನು ಮನೆ ಅಳಿಯ ಅಂತ ಕರೆದರು. ಅವನೂ ಒಂದಷ್ಟು ದಿನ ಇಲ್ಲೇ ಇದ್ದ. ಮಂಜು ಹುಟ್ಟಿದಳು. ಹೆಸರಿಟ್ಟಿದ್ದು ಅವಳ ಅಜ್ಜನೇ. ಗೀತನಿಗೆ ಏನೂ ಗೊತ್ತಾಗುವುದಿಲ್ಲ. ಮಂಜು ತನ್ನ ಮಗಳು ಮುದ್ದು ಮಾಡಬೇಕು ಅಂತಲೂ ತಿಳಿಯುವುದಿಲ್ಲ. ಅವರಜ್ಜ ಸತ್ತು ಹೋದರು. ಮನೆ ಈಗ ಗೀತನ ಅಣ್ಣನ ಯಜಮಾನಿಕೆಯಲ್ಲಿದೆ. ಕಾಲಕಸಕ್ಕಿಂತ ಕೀಳಾಗಿ ಕಂಡರೆ ಆಳೂ ಹೊರಟುಹೋಗುತ್ತಾನೆ. ಮಂಜುವಿನ ಅಪ್ಪನೂ ಮನೆ ಬಿಟ್ಟು ಹೋದ್ರು. ಅವನು ಹೋಗಿದ್ದೂ ಇವಳಿಗೆ ಗೊತ್ತಾಗುವುದಿಲ್ಲ. ಇದ್ದಿದ್ದೂ ಗೊತ್ತಿತ್ತೋ ಇಲ್ಲವೋ.. ಈಗ ಇವರಿಬ್ಬರೂ ಮನೆಗೆ ಭಾರ. ನೀನು ಈ ವಿಷಯವೆಲ್ಲ ಅವರ ಹತ್ತಿರ ಮಾತಾಡಬೇಡ. ಆದರೆ ಅವರ ಮನೆಗೆ ಹೋದಾಗ ಗೀತಾಂಟಿಯ ಜೊತೆ ಒಳ್ಳೆಯವಳಾಗಿ ನಡೆದುಕೋ. ಮಂಜು ಜೊತೆ ಜಗಳವಾಡಬೇಡ, ಸಮಾಧಾನವಾಗಿರು. ಏನಾದರೂ ಬೇಕು ಅಂತ ಕೇಳಿದರೆ ಕೊಟ್ಟುಬಿಡು..ಅವರ ಅಪ್ಪನ ಬಗ್ಗೆ ಅವಳ ಹತ್ತಿರ ಕೇಳಬೇಡ..ಆಯಿತಾ... ವಸು ಸುಮ್ಮನೆ ಹೂಂಗುಟ್ಟಿದಳು.
ರಾತ್ರಿ ಅಮ್ಮನನ್ನೇ ಅಪ್ಪಿಕೊಂಡು ಮಲಗಿದ್ದರೂ ಏನೇನೋ ಕನಸುಬಿತ್ತು. ಕಿಟಕಿಯಿಂದ ಕೈ ಹೊರಗೆ ಹಾಕಿ ಗೀತಾ ಆಂಟಿ ಗ.ಗ..ಗ..ಗ... ಅಂತ ಏನನ್ನೋ ಹೇಳುತ್ತಿದ್ದರು. ವಸು ಕಂಡ ಕೂಡಲೇ ನಗು ನಗುತ್ತ ಕರೆದು ಮತ್ತೆ ಗ..ಗ..ಗ.. ಅಂತ ಹೇಳತೊಡಗಿದರು? ಏನು ಏನು ಅಂತ ವಸು ಕೇಳಿದರೆ ನಿ..ನಿ... ಗ...ಗ... ಅಂತ ಅಭಿನಯಿಸಿ ತೋರಿಸಿದರು.. ವಸುಗೆ ಅಳು ಬಂದುಬಿಟ್ಟಿತು. ನಿನ್ನ ಗಂಡನಿಗೆ ಮಾತು ಬರುತ್ತಾ ಅಂತ ನಗಾಡ್ತಾ ಇದಾರೆ ಆಂಟಿ, ವಸು ಏನೋ ಹೇಳಲು ಹೊರಟರೆ ಮಾತೇ ಹೊರಡುತ್ತಿಲ್ಲ.. ಎಲ್ಲಿ ಗಂಡ ಅಂತ ಹೇಳು ನೋಡಣಾ ಅಂತ ಮಂಜು ಇವಳ ಬಾಯಿಂದ ಶಬ್ದ ಹೊರಡಿಸಲು ಪ್ರಯತ್ನಿಸುತ್ತಾ ಬಿದ್ದು ಬಿದ್ದು ನಗುತ್ತಿದಾಳೆ. ವಸುವಿನ ಕಣ್ಣ ತುಂಬ ನೀರು.. ಆದರೆ ಅಳಲು ಶಬ್ದವೇ ಬರುತ್ತಿಲ್ಲ..ಎಚ್ಚರಾದಾಗ ಬೆಳ್ಳಂಬೆಳಗು, ಹಾಸಿಗೆಯಾಚೆಗಿನ ಕಿಟಕಿಯಲ್ಲಿ ಕಂಡ ಅಂಗಳದ ಮೇಲಿನ ಹುಲ್ಲ ಮೇಲೆಲ್ಲ ರಾತ್ರೆಯಿಡೀ ಸುರಿದ ಮಳೆಯ ಹನಿ.. ಹಿತ್ತಲಲ್ಲಿದ್ದ ಮರಗಳ ಎಲೆಯಿಂದಲೂ ತೊಟ್ಟಿಕ್ಕುತ್ತಿತ್ತು. ಪಕ್ಕದಲ್ಲೆ ಹಬ್ಬಿದ ಮಲ್ಲಿಗೆ ಹಂಬಿನ ತುಂಬ ಬಿಳಿಬಿಳಿಯಾಗಿ ಅರಳಿದ ಹೂಗಳು. ಹಸಿರು ಬಣ್ಣ ಗಾಢವೋ ಬಿಳಿಯೋ ಹೇಳಲಾಗದಷ್ಟು ಅಚ್ಚ ಹಸಿರು ಬಿಳಿ ಬಣ್ಣಗಳು.. ಅರಳಿ ಎಷ್ಟೋ ಹೊತ್ತಾಗಿದ್ದರೂ ಘಮಘಮ ಹಾಗೇ ಇತ್ತು. ಹಿತ್ತಲ ಕೊಟ್ಟಿಗೆಯಲ್ಲಿ ಕೆಂಪಿದನದ ಕರು ಅಂಬಾ ಎನ್ನುವುದು ಕೇಳುತ್ತಲೆ ಇತ್ತು. ನಿನ್ನೆಯ ತಳಮಳಗಳೆಲ್ಲ ಒದ್ದೆ ರಾತ್ರಿಯಲ್ಲಿ ಒರಸಿಹೋಗಿ, ಬೆಳಗಿನ ಬೆಳಕಲ್ಲಿ ಮನಸು ನಿಚ್ಚಳವಾಗಿತ್ತು.
ಸಂಗೀತ ಕಲಿಯುವ ವಸುವನ್ನು ಗೀತಾ ಆಂಟಿ ಹಾಡಲು ಪೀಡಿಸುತ್ತಿದ್ದರು. ಶನಿವಾರ ಮಧ್ಯಾಹ್ನ ಅವರ ಮನೆಯ ಬಾಲ್ಕನಿಯಲ್ಲಿ ವಸು ಹಾಡಬೇಕು. ಆಂಟಿಗೆ ಅವಳು ಕಲಿತ ಭಾವಗೀತೆಯೊಂದು ತುಂಬ ಇಷ್ಟ..ಅದನ್ನೇ ಯಾವಾಗಲೂ ಕೇಳುವುದು ಅವರು.
ದೇವ ನಿನ್ನ ಮಾಯೆಗಂಜಿ ನಡುಗಿ ಬಾಡೆನು..
ಎಲ್ಲವನ್ನು ಕೊಟ್ಟಿರುವೆ ಏನ ಬೇಡಲಿ, ಜಗವ ನನಗೆ ಬಿಟ್ಟಿರುವೆ ಏಕೆ ಕಾಡಲಿ..!
ಹಾಡಿನ ಭಾವಾರ್ಥ ಹಾಡುವ ವಸೂಗೆ, ಕೇಳುವ ಮಂಜು, ಗೀತಾಂಟಿ ಯಾರಿಗೂ ಗೊತ್ತಿಲ್ಲ. ಆದರೆ ಹಾಡಲ್ಲಿ ಒಸರುವ ದೀನತೆಯ ಸ್ವರ ಎಲ್ಲರ ಮನಸ್ಸನ್ನೂ ಮೀಟಿ ಆವರಿಸಿಕೊಳ್ಳುತ್ತದೆ. ಗೀತಾಂಟಿ ಕೇಳುತ್ತ ಕೇಳುತ್ತ ಹನಿಗಣ್ಣಾಗುತ್ತಾರೆ. ಮಕ್ಕಳು ಹಾಡು ಮುಗಿದ ಕೂಡಲೆ ಎದ್ದು ಹೋಗುತ್ತಾರೆ. ಆಂಟಿ ಸುಮ್ಮನೆ ಅಲ್ಲೆ ಕೂತಲ್ಲೆ. ಹೀಗೇ ಕಳೆದ ದಿನಗಳು ವರ್ಷಗಳ ಗಾಲಿಗೆ ಸಿಕ್ಕಿ ಎಲ್ಲರ ದಾರಿಯೂ ಬೇರೆ ಬೇರೆಯಾಯಿತು.
ಶಿವಮೊಗ್ಗದಲ್ಲಿ ಡಾಕ್ಟರಾದ ವಸುಗೆ ಅಪರೂಪಕ್ಕೆ ಊರಿಗೆ ಹೋಗುವ ಅವಕಾಶವಿದ್ದರೂ ಹೊರಗಿನ ಒಡನಾಟವಿರಲಿಲ್ಲ. ಹೀಗಾಯಿತಂತೆ ಅಂತ ಕತೆ ಹೇಳಲು ಅಜ್ಜ ಅಮ್ಮಮ್ಮ ಇರದೆ ತುಂಬ ದಿನಗಳಾಗಿತ್ತು. ಅಮ್ಮನಿಗೋ ಮೊಮ್ಮಗಳ ಜತೆ ಮಾತಾಡಿಯೇ ಮುಗಿಯುವುದಿಲ್ಲ, ವಸುವನ್ನೆಲ್ಲಿ ಮಾತನಾಡಿಸುತ್ತಾಳೆ! ಪುಟ್ಟ ವಸುಗೆ ದೊಡ್ಡದಾಗಿ ಅಗಲವಾಗಿ ಎತ್ತರೆತ್ತರಕ್ಕೆ ನಿಂತ ಪೇಟೆ ಬೀದಿ, ಅಲ್ಲಿಯ ಮನೆಗಳು, ರಸ್ತೆ, ಸರ್ಕಲ್ ಎಲ್ಲ ಈಗ ಕಾಲಿಡಲೂ ಜಾಗವಿಲ್ಲದೆ ಇಡುಕಿನಿಂತಂತೆ ಕಾಣುತ್ತಿತ್ತು. ರಸ್ತೆಯ ಗಿಜಿಗಿಜಿಯನ್ನು ಕಾರ್ಯಕಾರಣವೆನ್ನದೆ ಸುತ್ತುವ ಬೈಕುಗಳು, ದೊಡ್ಡ ದೊಡ್ಡ ಕಾರುಗಳು, ಇಕ್ಕೆಲಕ್ಕೆ ಹಚ್ಚಿ ನಿಂತ ತರಕಾರಿ ಅಂಗಡಿಗಳು, ಇನ್ನೂ ಹೆಚ್ಚು ಮಾಡಿದ್ದವು. ಸೈಕಲ್ಲಿನಲ್ಲಿ ಸಾಗುವವರು ಅಲ್ಲೊಬ್ಬರು ಇಲ್ಲೊಬ್ಬರು ಇದ್ದರೆ, ಕೂಲಿಗಾಡಿಗಳೆಲ್ಲ ಹೆಚ್ಚು ಕಮ್ಮಿ ಕಾಣದೆ ಹೋಗಿತ್ತು. ಪಾರು ಹಮಾಲನು ರೈಟ್ ಹೇಳಿ ವರ್ಷಗಳೇ ಆಗಿದ್ದವು. ಅಳಿದುಳಿದವರು ತುಂಬ ವಯಸ್ಸಾಗಿದ್ದರೂ ದಿನವೂ ಬಂದು ಬಸ್ ಸ್ಟಾಂಡ್ ಕಟ್ಟೆಯಲ್ಲಿ ಕೂತು ಬಸ್ಸುಗಳನ್ನು ನೋಡುತ್ತ ಕೂತಿರುತ್ತಿದ್ದರು. ಹಾಗೂ ಹೀಗೂ ಯಾವಾಗಲೋ ಯಾರಿಂದಲೋ ಮಂಜುಳ ಮದುವೆಯಾಗಿ ಶಿವಮೊಗ್ಗದಲ್ಲಿಯೇ ಇರುವಳೆಂದು ತಿಳಿದಿತ್ತು.
ಪುಟ್ಟ ಬಲಹೀನ ಕೈಯೊಂದು ತನ್ನ ಕೈಹಿಡಿದು ಎಳೆಯುವ ಅನುಭವ ವಸುವಿನ ಎಚ್ಚರದ ಕನಸನ್ನು ಅಲ್ಲಿಗೆ ಮುಗಿಸಿತು. ಹಸಿರು ಬೆಡ್ಶೀಟ್ ಹೊದ್ದು ಮಲಗಿದ್ದ ಸೋತ ಮುಖದಲ್ಲಿ ಅವತ್ತು ಅಷ್ಟುವರ್ಷಗಳ ಹಿಂದೆ ದಿನವೂ ನೋಡಿದ್ದ ನಗುವಿತ್ತು. ಮಂಜು -ಅಮ್ಮಾ ಇವಳು ನಮ್ಮ ವಸು, ಡಾಕ್ಟರಮ್ಮಾ ಈಗ.. ಅವಳೇ ನೋಡುತ್ತಾಳೆ ನಿನ್ನ-ಹೇಳುತ್ತಿದ್ದಳು.. ಆ ಮುಖದಲ್ಲಿ ಅದೇ ನಗು.. ಬಾಯಲ್ಲಿ ಎಂದಿನ ಅಸ್ಪಷ್ಟ ಶಬ್ದಗಳ ತೊದಲು.. ಮಂಜು ಹೇಳಿದಳು.. ನಿನ್ ಗಂಡ ಎಲ್ಲಿ ಅಂತ ಕೇಳ್ತಾ ಇದ್ದಾಳೆ.. ವಸು ಗೀತಾಂಟಿಯ ಕ್ಷೀಣ ನಾಡಿ ಹಿಡಿಯುತ್ತಾ ಅವಳ ಮುಖಕ್ಕೆ ಸಮೀಪವಾಗಿ ಬಗ್ಗಿ ಹೇಳಿದಳು. ನಾಳೆ ಕರೆದುಕೊಂಡು ಬರುತ್ತೇನೆ. ನೀವಿಲ್ಲಿರುವುದು ಗೊತ್ತಿರಲಿಲ್ಲ. ಮನೆಯಿಂದ ಏನಾದರೂ ಮಾಡಿಕೊಂಡು ತರಲಾ ಆಂಟಿ.. ಸುಮ್ಮನೆ ನಕ್ಕಿತು ಸೋತ ಜೀವ. ಮರುದಿನ ಮಧ್ಯಾಹ್ನ ವಸು ಗಂಡನೊಡನೆ ಬಂದಾಗ ಆಂಟಿ ಕಿಟಕಿಯಾಚೆಗೆ ಹನಿಯುತ್ತಿರುವ ಮಳೆಯನ್ನೂ ರಸ್ತೆಯಲ್ಲಿ ಹರಿಯುವ ನೀರನ್ನೂ ನೋಡುತ್ತಿದ್ದರು. ಅವರಿಬ್ಬರನ್ನೂ ನೋಡಿದ ಕೂಡಲೇ.. ವ..ವ..ವ.. ಗ... ಗ...ಗ.. ಗ.. ಅಂತ ನಗತೊಡಗಿದರು.. ವಸು ಗಂಡ ಎಂದು ಹೇಳ್ತಿದಾರೆ ಅಂತ ಗಂಡನಿಗೆ ವಸು ಪರಿಚಯಿಸಿದಳು. ಇಬ್ಬರನ್ನೂ ನೋಡಿ ನಕ್ಕ ಆಂಟಿ ಇದ್ದಕ್ಕಿದ್ದ ಹಾಗೆ ಮ.. ಮ..ಮ.. ದ..ದ..ದ.. ಅಂತ ಹೊರಗೆ ಕೈ ಮಾಡಿ ತೋರತೊಡಗಿದರು. ವಸು ಎಮರ್ಜೆನ್ಸಿಯ ಗಡಿಬಿಡಿಯಲ್ಲಿ ಅಲ್ಲೇ ಇದ್ದ ಪತ್ರಿಕೆಯನ್ನು ಹರಿದು ದೋಣಿ ಮಾಡಿ ಕೊಟ್ಟಳು. ಆಂಟಿ ಖುಶಿಯಿಂದ ದೋಣಿಯನ್ನು ಕೈಲಿ ಹಿಡಿದು ಆಚೆ ಸುರಿವ ಮಳೆಯನ್ನೂ ಈ ಕಡೆ ತಿರುಗಿ ವಸು ಮಂಜುವನ್ನೂ ನೋಡುತ್ತ ತಮ್ಮಷ್ಟಕ್ಕೆ ತಾವೇ ನಗತೊಡಗಿದರು...

Monday, November 3, 2008
ಸ್ಪಂದನೆ..
ನನ್ನ ಭಾವಲಹರಿಗೆ ಸ್ಪಂದಿಸಿದ ಮತ್ತು ಸ್ಪಂದಿಸುತ್ತಲೇ ಇರುವ ಎಲ್ಲರಿಗೂ ಪ್ರೀತಿಯ ವಂದನೆಗಳು.
ಕೆಲಸ ಮತ್ತು ವೈಯಕ್ತಿಕ ಒತ್ತಡಗಳಿಂದ ಪ್ರತಿಸ್ಪಂದನೆ, ಬ್ಲಾಗ್ ಬರಹ ಮತ್ತು ಓದು ಎರಡೂ ತುಂಬ ನಿಧಾನವಾಗಿಬಿಟ್ಟಿದೆ.
ನನ್ನ ಲಹರಿಗೆ (ಹಿಂದಿನ ಬರಹ/ಕವಿತೆ) ಸ್ಪಂದಿಸಿದವರಲ್ಲಿ ಹೆಚ್ಚಿನವರು ನಾನು ಬ್ಲಾಗ್ ಮುಚ್ಚುತ್ತಿದ್ದೇನಾಗಿ ತಿಳಿದುಕೊಂಡಿದ್ದೀರಿ. ಆ ಅರ್ಥ ಬರುವ ಹಾಗೆ ಬರೆದಿದ್ದರೆ ಕ್ಷಮಿಸಿ.
ನಾನು ಬರೆಯುವುದು ನನ್ನ ಮನದ ಮೇಲೆ ಹಾಯುವ ಎಷ್ಟೋ ಕಾಲದ ಮತ್ತು ದಿನದಿನವೂ ಘಟಿಸಿದ ನೆನಪುಗಳನ್ನ ನೇವರಿಸಿದ ಭಾವಲಹರಿಯನ್ನ. ಓದಿದ ನೀವೂ ಇದನ್ನ ಪ್ರೀತಿಯಿಂದ ಆಸ್ಥೆಯಿಂದ ನೇವರಿಸಿದ್ದೀರಿ ಪ್ರತಿಸ್ಪಂದಿಸಿದ್ದೀರಿ. ಎಷ್ಟೋ ಬಾರಿ ಈ ಎಲ್ಲವೂ ನಾನಂದುಕೊಂಡ ಆಯಾಮವನ್ನು ದಾಟಿ ಇನ್ನೆಲ್ಲೋ ಸಾಗಿವೆ. ಬಿಟ್ಟ ಬಾಣದ ಗತಿಯಲ್ಲಿ ಬರೆದ ಮಾತುಗಳು ನನ್ನ ಪರಿಧಿ ಮೀರಿ ಸಾಗುತ್ತವೆ ನಾಟುತ್ತವೆ. ಇದು ಎಲ್ಲರ ಬರಹದ ಮಿತಿ ಮತ್ತು ಸಾಮರ್ಥ್ಯ. ಹೀಗಾದಾಗ ಭಾವುಕ ಮನಸ್ಸು ಗೊಂದಲದಲ್ಲಿ ಬೀಳುತ್ತದೆ. ತಾರ್ಕಿಕ ನೆಲೆಗಟ್ಟು ಗಟ್ಟಿಯಿರದ ಭಾವಸಂವೇದನೆಗಳು ದಿಕ್ಕೆಡುತ್ತವೆ. ಹೀಗಿದ್ದೂ ತಡವರಿಸಿಕೊಂಡೂ ಭಾವಲಹರಿಗಳು ಹರಿಯುತ್ತಲೇ ಇರುತ್ತವೆ. ಇದರ ಜೊತೆಗೆ ನನ್ನ ಕೆಲಸದ ಒತ್ತಡ, ವೈಯಕ್ತಿಕ ಒತ್ತಡಗಳು ಇನ್ನೊಂದಿಷ್ಟು ಒಜ್ಜೆ ಹೇರಿವೆ.
ಬರೆಯದೆ ಕೂರಬಹುದಾದ ಹುಟ್ಟಲ್ಲ ನನ್ನದು. ಬರೆಯಲು ಬಿಂಕ ಬಿಗುಮಾನವೆರಡೂ ಇಲ್ಲ. ಬರೆದಾಗ ಇಲ್ಲಿ ಖಂಡಿತ ಹಂಚಿಕೊಳ್ಳುತ್ತೇನೆ. ನಿಮ್ಮ ಅನಿಸಿಕೆಗಳಲ್ಲಿ ಕಲಿಯಬಯಸುತ್ತೇನೆ.
ಮೊದಲೆ ಹೇಳಿದ ಹಾಗೆ ಇದು - ಆಶೆಯೆಂಬ ತಳ ಒಡೆದ ದೋಣಿಯ ದೂರ ತೀರ ಯಾನ. ಎಲ್ಲೂ ಮುಳುಗಬಹುದು. ತೇಲಿ ಇನ್ನೆಲ್ಲೋ ಸಾಗಲೂ ಬಹುದು. ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ.. ಎಂಬ ಸಾಲು ದೋಣಿಯ ಹುಟ್ಟಾಗಿರುವುದು ನನ್ನ ಯಾನದ ಅದೃಷ್ಟವಿರಬಹುದು.
ಪ್ರೀತಿಯಿರಲಿ
ಸಿಂಧು

Subscribe to:
Posts (Atom)