ಮಳೆಯಲ್ಲಿ ನೆಂದ ಹಚ್ಚಹಸಿರಲ್ಲಿ
ಮೊಗ್ಗು ಮೂಡಿ,
ಹೂವರಳಿ, ಕಾಯಿ ಜಗ್ಗಿ,
ಹಣ್ಣಾಗಿ, ಎಲೆಗಳುದುರಿ. . . .
ಹಾವಸೆ ಹಿಡಿದ ಜಾರುದಾರಿಯಲ್ಲೀಗ
ನೆಲಕಚ್ಚಿದ ತರಗೆಲೆಗಳ ಮರ್ಮರ;
ದಿಟ್ಟಿ ಹಾಯುವವರೆಗೆ
ಹಸಿರ ತಂಪಿನ, ಕಂಪು ಸೂಸಿದಲ್ಲೀಗ
ನೆಳಲೂ ನೀಡದ
ಬೋಳು ಬೋಳು ಗಿಡಮರ.
ನಿಸರ್ಗವೇ ಹೀಗೆ. . .
ಋತುಋತುವಿಗೆ ಬದಲಾಗಿ,
ಕೊನೆಯಾಗಿ, ಮೊದಲಾಗಿ,
ಕ್ಷಣ ಕಾಯದೆ, ಕ್ಷಣ ನಿಲ್ಲದೆ
ನಿರಂತರ ಪರಿವರ್ತನೆ, ಚಲನೆ.
ಈಗ ಗೊತ್ತಾಗಿದೆ. . .
ನಾನು ನಿನ್ನ ನಿಸರ್ಗಕನ್ಯೆ ಅಂತ
ಕರೆದಿದ್ದು ಸುಳ್ಳಲ್ಲ,
ಉತ್ಪ್ರೇಕ್ಷೆ ಖಂಡಿತಾ ಅಲ್ಲ.
ನನ್ನ ನೋಡಿ ಮಿಂಚಿದ್ದ
ನಿನ್ನ ಕಣ್ಣಲ್ಲೀಗ ಕಪ್ಪು ಮೋಡ,
ಕೊನೆಯಿರದ ಮಳೆಗಾಲ;
ಪ್ರಪಂಚ ಗೆದ್ದ ಭಾವದಲ್ಲಿ
ನನ್ನ ಕೈಗಳನ್ನ ಹಿಡಿದಿದ್ದ
ನಿನ್ನ ಕೈಗಳಲ್ಲೀಗ ಬರಗಾಲ;
ನನ್ನ ಬರುವಿಕೆಯ ತಂಗಾಳಿಗೆ
ತೂಗಿದ್ದ ನಿನ್ನ ಮನದಲ್ಲೀಗ
ಚಂಡಮಾರುತ. . . .
ರುದ್ರ ರಮಣೀಯ ನಿಸರ್ಗದ ರಮ್ಯತೆ,
ಮಾನವಸಹಜ ಕ್ಷುಲ್ಲಕತೆಗೆ
ಬಲಿಬಿದ್ದು
ರೌದ್ರತೆಯಷ್ಟೇ ಉಳಿದಿರುವುದು
ಮಾತ್ರ, ಅನ್ಯಾಯ... :<(
6 comments:
ಅದು ಹೇಗೆ ಪರಕಾಯ ಪ್ರವೇಶ ಮಾಡಿ ಬರೀತೀರೋ ಗೊತ್ತಿಲ್ಲ... ಈ ಕವನದ ನವಿರಾದ ಹಾಸ್ಯ ತು೦ಬ್ ಚೆನ್ನಾಗಿದೆ... ಇ೦ಥ ಆರೋಗ್ಯಕರ ಹಾಸ್ಯ ಇನ್ನೂ ಹೆಚ್ಚು ಬರ್ತಿರಲಿ...
ಸಿಂಧು, ನಿಮ್ಮ ಕವನ, ಲೇಖನಗಳು ಬಹಳ ಸೊಗಸಾಗಿವೆ. ಹೀಗೇ ಮುಂದುವರಿಸಿ.
ಸಿಂಧು, ಬದಲಾದ ಮನೋ-ಸ್ಥಿತಿಗೆ ಪರಿಸರವನ್ನು ಉಪಯೋಗಿಸಿದ ರೀತಿ ಸೊಗಸಾಗಿದೆ. ಬರೆಯುತ್ತಿರಿ.
ಸಿಂಧು ಅವರೆ,
ಈ ಕವನ ತುಂಬಾ ಚನ್ನಾಗಿ ಇದೆ. ಸಂಬಂಧಗಳು ಮುರಿಯುತ್ತಿರುವುದನ್ನು, ಬದಲಾಗುತ್ತಿರುವುದನ್ನು ಪ್ರಕೃತಿಗೆ ಹೋಲಿಸಿ ಹೇಳಿರುವುದು ನಿಜಕ್ಕು ಅದ್ಭುತ.
ಈ ಪ್ರಕೃತಿಯೇ ಬದಲಾಗುವಾಗ ನಾವು ಬದಲಾಗುವುದರಲ್ಲಿ ಏನು ತಪ್ಪಿಲ್ಲಾ ಅನ್ನಿಸುತ್ತೆ ಅಲ್ವಾ?
ಓಹ್,
ನಾನು ಈ ಕವಿತೆ ಬರೆದಾಗ ನನ್ನ ಮನದಲ್ಲಿ ತುಂಬಿದ್ದು ವಿಷಾದ. ಮನುಷ್ಯ ಬದಲಾಗುತ್ತಾನೆ ಆಗಬೇಕು ನಿಜ. ಆದರೆ ಅದೇ ಸರಿ, ಯಾರಿಗೆ ಏನೆನಿಸಿದರೆ ನನಗೇನು ಎಂಬ ಭಾವನೆಯಿಂದಲ್ಲ. ಈ ಕವಿತೆ ಒಂದರ್ಥದಲ್ಲಿ ಸ್ವಗತ. ನಿಮಗೆ, ಬರೆದವಳು ನಾನು ಎಂದು ಗೊತ್ತಿರುವುದರಿಂದ ಒಂದು ಬಗೆಯ ಒಪೀನಿಯನ್ ಫಾರ್ಮ್ ಆಗಿರುತ್ತದೆ ಓದುವ ಮೊದಲೆ.
ನಾವು ಬದಲಾಗುವಾಗ, ಸಂಬಂಧಿಸಿದ ವ್ಯಕ್ತಿಯ/ಗಳ ಭಾವನೆಗು ಹೆಚ್ಚಿನ ಗಮನ ಕೊಡಬೇಕು ಅಂತ ನನ್ನ ಅಭಿಪ್ರಾಯ. ಇದನ್ನು ಬರೆದಾಗ ನಾನು ಅಷ್ಟು ಪ್ರೀತಿಸುವ ಪ್ರಕೃತಿಯ ಛಾಯೆ ವ್ಯಕ್ತಿತ್ವದಲ್ಲೇ ಸೇರಿಹೋದಾಗ ಆಗಬಹುದಾದ ವಿಪರ್ಯಾಸ ನನ್ನನ್ನು ನೋವಿಗೆ ತಳ್ಳಿತ್ತು.
ಮೆಚ್ಚಿದ ಎಲ್ಲ ಸಹೃದಯರಿಗೆ ಧನ್ಯವಾದಗಳು.
thumba chennaagide.
Post a Comment