Thursday, March 15, 2007

ಈ ಹೊಸ್ತಿಲಲ್ಲೇ. . .

ಇಲ್ಲೇ ಈ ಹೊಸ್ತಿಲಲ್ಲೇ
ನೀನು ಮೊದಲ ಬಾರಿ ನಿಂತಿದ್ದು;
ಕಣ್ಣ ಹನಿ ಒರೆಸುತ್ತ,
ನನ್ನ ನೋಡಿ ನಗುವಿನ ಹೂವರಳಿಸಿದ್ದು;
ನಿನ್ನ ಬಾಳನದಿ
ನನ್ನ ಬದುಕಲ್ಲಿ ಸೇರಿಹೋಗಿದ್ದು;
ನೆಮ್ಮದಿಯ ದಿನಗಳ
ರಂಗೋಲಿಯಿಟ್ಟಿದ್ದು;
ಪ್ರತಿ ಬೆಳಗೂ
ನನ್ನ ಕೆನ್ನೆಗೊಂದು ಮುತ್ತನೊತ್ತಿದ್ದು;
ಪ್ರತಿಸಂಜೆಯೂ
ನಿರೀಕ್ಷೆಯ ನಕ್ಷತ್ರ ನಿನ್ನ ಕಣ್ಣಲ್ಲಿ ಮಿನುಗಿದ್ದು;
ದಿನದಿನವೂ
ಬಾಳ ಹಣತೆ ಬೆಳಗಿದ್ದು;
ದಣಿದು ಬಂದ ನನ್ನ
ಬೆವರನ್ನೊರೆಸಿ ತಂಪು ನೀಡಿದ್ದು;
ಪಡುವಣದಂಚಿನಲ್ಲಿ ಅಡಗಹೊರಟ
ಸೂರ್ಯನ ಹೊಂಗಿರಣಗಳೆಡೆ
ನೀನು ಬೆರಳು ಮಾಡಿದ್ದು. . .


ಇಲ್ಲೆ ಈ ಹೊಸ್ತಿಲಲ್ಲೇ

ನಿನ್ನ ನಗುವಿನ ಹೂವು
ಬಾಡಿ ಹೋಗಿದ್ದು;
ರಂಗೋಲಿ ಅಳಿಸಿಹೋಗಿದ್ದು;
ಮುತ್ತು ಕಳೆದುಹೋಗಿದ್ದು;
ಕಣ್ಣ ನಕ್ಷತ್ರ ಆರಿಹೋಗಿದ್ದು;
ಬದುಕು ಕತ್ತಲಾಗಿದ್ದು;
ಕೊನೆಯ ಬಾರಿ
ನನ್ನೆಡೆ ತಿರುಗಿನೋಡಿದ್ದು;
ಬೆನ್ನು ತಿರುಗಿಸಿ
ಹರಿವು ಬದಲಿಸಿ
ದೂರ ಹೋಗಿದ್ದು. .


ಇನ್ನೇನಿಲ್ಲ, ಮನೆಯೊಳಬರುತ್ತ
ಹೊಸ್ತಿಲೆಡವಿದೆ,
ಎಲ್ಲ ನೆನಪಾಯಿತಷ್ಟೆ.


[ಒಂದು ಹಳೆಯ ನೆನಪಿನ ನೇವರಿಕೆ.. 02.06.2001]

7 comments:

Sree said...

ಸರಳವಾಗಿ ಓದಿಸಿಕೊಂಡು ಹೋಗುತ್ತಾ ಎಲ್ಲೋ ಒಂದು ಗಾಢವಾದ ನಿಟ್ಟುಸಿರನ್ನೂ ಬಚ್ಚಿಟ್ಟುಕೊಂಡಿದೆ! ಒಳ್ಳೇ ಕವನ ರೀ, ಇನ್ನೂ ಎಷ್ಟೂ ಹೀಗೇ ಬುತ್ತಿ ಕಟ್ಟಿಟ್ಟುಕೊಂಡಿದೀರಿ ಹಳೆಯ ನೆನಪಿನನೇವರಿಕೆಗಳನ್ನ?!:)

ರಾಧಾಕೃಷ್ಣ ಆನೆಗುಂಡಿ. said...

ಗಾಢವಾದ ನಿಟ್ಟುಸಿರು, Sree ಬರೆದ ಸಾಲು ಅರ್ಥ ಗರ್ಭಿತ.

ಹಳೆಯ ನೆನಪುಗಳು ಕವನವಾದಾಗಿನ ಅನುಭವ ಭಿನ್ನ ಬಿಡಿ.
ಕಣ್ಣೀರು ಒರಸಿದವರು, ಬಾಳ ನದಿ ಬದುಕಲ್ಲಿ ಸೇರಿದ್ದು ಒಂದು ನಿಟ್ಟುಸಿರಾದರೆ, ರಂಗೋಲಿ ಅಳಿಸಿದ್ದು, ಬದುಕು ಕತ್ತಲಾಗಿದ್ದು ಮತ್ತೊಂದು ನಿಟ್ಟುಸಿರು.

ನನಗಂತೂ ಕವನ ತುಂಬಾ ಇಷ್ಟವಾಯಿತು. ಅಂದ ನಿಮ್ಮ ಕವನಗಳು ಪತ್ರಿಕಾ ಕಚೇರಿಗಳಿಗೆ ಹೋಗುವುದಿಲ್ಲವೇ

ಸುಪ್ತದೀಪ್ತಿ suptadeepti said...

ಸಿಂಧು, ಒಳ್ಳೆಯ ಕವನ. ನನ್ನ ಹಳೆಯ ಒಂದು ಕವನವನ್ನು ನೆನಪಿಸಿತು, ಸಧ್ಯದಲ್ಲೇ ಅದನ್ನು ನನ್ನ ಪುಟದಲ್ಲಿ ಪ್ರಕಟಿಸುತ್ತೇನೆ, ನೋಡಿ.

VENU VINOD said...

'ಇನ್ನೇನಿಲ್ಲ, ಮನೆಯೊಳಬರುತ್ತ
ಹೊಸ್ತಿಲೆಡವಿದೆ,
ಎಲ್ಲ ನೆನಪಾಯಿತಷ್ಟೆ'

ಈ ಸಾಲು ತುಂಬ ಹಿಡಿಸ್ತು.

ಭಾವಜೀವಿ... said...

ವಾವ್ ಅದ್ಭುತ!!
ಒಮ್ಮೆಗೆ ಕಣ್ಣು ಮಂಜಾಗಿಸಿತು, ಆ ಕೊನೆಯ ಸಾಲುಗಳು..!!
ನಿಜಕ್ಕೂ ಒಂದು ಪಂಚ್ ಇದೇರಿ!!
ವಿಷಾದದ ನೀರವತೆಯನ್ನು ಮನದ ಮೂಲೆಗಳಿಗೂ ಅಂಟಿಸಿ ಬಿಡುತ್ತದೆ ಈ ಸಾಲುಗಳು!!
ಇನ್ನಷ್ಟು ಈ ತರಹದ ನೆನವರಿಕೆಗಳನ್ನು ಒಗೆಯಿರಿ!!
ನೆನಪೆ ಕೆಲಸವೇ ಅಂತದ್ದು..
"ನೆನಪು ಬೆಂಕಿಯಾದರೆ ಮುಂದಿನದು ಬೂದಿ
ತಂಪು ನೆರಳಾದರೆ ಮುಂದಿನದು ಹಾದಿ.. "(ದಯಾನಂದ್, ಮಯೂರ ಮಾರ್ಚ್ ೨೦೦೭)
ಹಾದಿ ಅಥವ ಬೂದಿ ಎರಡಕ್ಕೂ ಕಾರಣವಾಗಬಲ್ಲದು!!

ಸಿಂಧು sindhu said...

ವಿದಾಯ ಒಂದು ವಿಷಾದಕರ ಅಧ್ಯಾಯ. ಮುಂದೆ ನೆನಪಿನ ನೇವರಿಕೆಯಲ್ಲಿ ಸಹನೀಯವಾದರೂ, ಆ ಕ್ಷಣದಲ್ಲಿ ಅದು ನೋವಿನ ಬುಗ್ಗೆ. ಹೌದು ಭಾವಜೀವಿಯವರ ಕೋಟ್ , ನಿಜ! "ನೆನಪು ಬೆಂಕಿಯಾದರೆ ಮುಂದಿನದು ಬೂದಿ
ತಂಪು ನೆರಳಾದರೆ ಮುಂದಿನದು ಹಾದಿ.." ತಂಪು ನೆರಳೇ ಎಲ್ಲರಿಗೂ ಸಿಗದಿದ್ದರೂ, ಉರಿಬೆಂಕಿಯ ಕಾವು ತಟ್ಟದಿರಲಿ ಎಂಬುದಷ್ಟೇ ಈ ಅಲ್ಪಳ ಆಶಯ.

ಸಿಂಧು sindhu said...

ಕವಿತೆಯನ್ನು ಮೆಚ್ಚಿಕೊಂಡ ಎಲ್ಲರಿಗೂ ವಂದನೆಗಳು.