Saturday, November 4, 2017

ಪರ್ವತದಲ್ಲಿ ಪವಾಡ - ಸಂಯುಕ್ತಾ ಪುಲಿಗಲ್

ಇಂಗ್ಲಿಷ್ ಮೂಲದ ಉರುಗ್ವೆ ಲೇಖಕನ ಅನುಭವ ಕಥನ ಮಿರಾಕಲ್ ಇನ್ ದಿ ಆಂಡೀಸ್, ನ ಕನ್ನಡ ಅನುವಾದವನ್ನು ಗೆಳತಿ ಸಂಯುಕ್ತ ಪುಲಿಗಲ್ ಮಾಡಿದ್ದಾರೆ. ಪ್ರಪಂಚಕ್ಕೆಲ್ಲ ಹರಡಿರುವ ವಿಸ್ತಾರವಾದ ನೀಲಿ ಆಕಾಶವು, ಇಲ್ಲಿ ದೊಡ್ದ ಊರಿನ ಹಾದಿಗಳ ಬದಿಯಲ್ಲಿನ ಪುಟ್ಟ ಜಾಗದಲ್ಲಿ ನಿಂತ ಚಿಕ್ಕ ಹುಡುಗಿಯ ಪುಟಾಣಿ ಕಣ್ಣುಗಳಲ್ಲಿ ತುಂಬಿಕೊಳ್ಳುವ ಸಹಜ ಬೆರಗನ್ನು ನಾನು ಈ ಪುಸ್ತಕದ ಅನುವಾದ ಓದುವಾಗ ಅನುಭವಿಸಿದೆ. ವಿಸ್ತಾರ ಎಷ್ಟು ಇರಬಹುದು. ಹಿಡಿದಿಡಬಲ್ಲೆ ಎಂಬ ಆತ್ಮವಿಶ್ವಾಸ ಬೇಕು. ಒಂದೊಂದು ಇಂಚಿನಷ್ಟೆ ಇರಬಹುದಾದ ಭೌತಿಕ ಕಣ್ಣು ವಿಸ್ತಾರವನ್ನು ತುಂಬಿಕೊಳ್ಳುತ್ತ ತನ್ನನ್ನೇ ತಾನು ವಿಸ್ತರಿಸಿಕೊಳ್ಳುತ್ತದೆ. ಅದನ್ನು ಸಂಯುಕ್ತ ಸಾಧ್ಯವಾಗಿಸಿದ್ದಾರೆ.
" ಆಂಡೀಸ್ ಪರ್ವತದ ಎತ್ತರದ ಹಿಮಬಂಡೆಗಳ ನಡುವೆಯೆಲ್ಲೋ ತಪ್ಪಿಸಿಕೊಂಡಿದ್ದೇವೆ ಎಂಬುದು ತಿಳಿದಿತ್ತು. ಆದರೆ ನಮ್ಮನ್ನು ಸುತ್ತುವರೆದಿದ್ದ ಆ ಬೆಟ್ಟಗಳು ನಮ್ಮ ಸುತ್ತಲೂ ಎತ್ತರೆತ್ತರ್ದ ಶಿಖರಗಳಾಗಿ ನಿಂತಿದ್ದವು. ಅದರ ತುದಿಯನ್ನು ನೋಡಲು ನನ್ನ ತಲೆ ನನ್ನ ಕತ್ತಿನ ಹಿಂಭಾಗದ ತಳವನ್ನು ಮುಟ್ಟಬೇಕಿತ್ತು! ...
ಆ ಅಪೂರ್ವ ನೋಟವನ್ನು ನಾನು ನೋಡುತ್ತಿದ್ದಾಗ ಭ್ರಮಾಲೋಕದಂತೆ ಕಾಣುತ್ತಿದ್ದ ಆ ಸ್ಥಳದಲ್ಲಿ ನಾವಿದ್ದೇವೆ ಎಂಬ ಸತ್ಯವನ್ನು ಸುಳ್ಳೆಂದು ಭಾವಿಸಲು ಪ್ರಯತ್ನಿಸುತ್ತಿದ್ದೆ. ಬೆಟ್ಟಗಳು ಬೃಹತ್ತಾಗಿದ್ದು ಪರಿಶುದ್ಧತೆ ಮತ್ತು ಗಾಂಭೀರ್ಯತೆಯ ರೂಪ ತಾಳಿದ್ದವು. ಅವುಗಳ ನೋಟ ಮತ್ತು ಮೌನ ನಾನು ಜೀವಮಾನದಲ್ಲಿ ನೋಡಿದ ಯಾವುದೇ ವಿಷಯ, ವಸ್ತುವಿಗಿಂತ ಖಂಡಿತವಾಗಿ ಭಿನ್ನವಾಗಿತ್ತು. ನನಗೆ ಸೇರುವ ನನ್ನ ಪರಿಧಿಗೆ ಒಳಗೊಳ್ಳುವ ಯಾವ ಅಣುವೂ ಅಲ್ಲಿರಲಿಲ್ಲ...."


ಈ ವಾಕ್ಯಗಳು ಈ ಇಡೀ ಅನುಭವಕಥನಕ್ಕೆ ಹಿಡಿದ ಕಿರುಗನ್ನಡಿಯಾಗಿ ನಾನು ಭಾವಿಸುತ್ತೇನೆ. ತನ್ನ ಬಾಲ್ಯಕಾಲ ಅದರ ಮೂಲಕ ಕುಟುಂಬದ ಹಿನ್ನೆಲೆ, ಇತ್ಯಾದಿಗಳಿಗೆ ಸರಾಗವಾಗಿ ಹಿಮ್ಮುಖವಾಗಿ ಹರಿಯುವ ಲೇಖಕನ ನೆನಪು ತನ್ನ ಪ್ರಸ್ತುತ ಪರಿಸ್ಥಿತಿಯ ದಾರುಣತೆಯನ್ನು....- ಬರಿ ಆಟವಾಡುವ ಕಾಲವಷ್ಟೆ ಎಂದು ಮಜವಾಗಿದ್ದ ಆರೋಗ್ಯವಂತ ಸದೃಢ ಮತ್ತು ಜೀವನೋತ್ಸಾಹಿ ಆಟಗಾರರ ತಂಡವು ತನ್ನ ಆಟ ಆಡುವ ಮೊದಲೆ ಸೋತು ಅಸಹಾಯವಾಗಿ ನೆಲಕಚ್ಚಿದ ವಿಲಕ್ಷಣ ಪರಿಸ್ಥಿತಿಯಲ್ಲಿ ಮತ್ತೆ ಹುಮ್ಮಸದಿಂದ ಹಗುರು ಹೆಜ್ಜೆಯಲ್ಲಿ ಬದುಕಿನ ಬಯಲಲ್ಲಿ ಓಡುವ ಭರವಸೆಯೆಲ್ಲ ಮುರುಟಿ ಮಕಾಡೆ ಮಲಗಿದ ಹೊತ್ತಿನಲ್ಲಿ...- ಲೇಖಕ ನಾಂದೋ ಆ ಪರಿಸ್ಥಿತಿಯ ದಾರುಣತೆಯನ್ನು ತನ್ನ ನೆನಪುಗಳ ಮೂಲಕ ಎದುರಿಸುತ್ತಾನೆ. ಆ ನೆನಪುಗಳು ಮೂಡಿದ ಕ್ಷಣಗಳ ಮುಗ್ಧತೆ, ಜೀವನ್ಮುಖತೆ, ತಿಳುವಳಿಕೆ, ಭರವಸೆಗಳನ್ನೆ ಉಂಡು ಬದುಕುವ ಹೊಸದಾದ ಭೀಭತ್ಸ ಆಟದ ಪಟ್ಟುಗಳನ್ನ ಕಲಿಯುತ್ತಾನೆ.
ಈ ಪುಸ್ತಕದ ಕೆಲವು ಪುಟಗಳು ನಿಮ್ಮ ಓದಿಗೆ:

ಜೀವಂತಿಕೆ ಎಂಬುದು ಆ ಸ್ಥಳದಲ್ಲಿ ಅಸಾಧ್ಯವಾಗಿತ್ತು ಎಂಬ ಆತಂಕ ಮತ್ತು ಅಪಾಯಕಾರೀ ಎಚ್ಚರಿಕೆ ಆಳವಾಗಿ ನಾಟಿದ್ದ ಲೇಖಕ ನಾಂದೋ ಬಹುಶಃ ಇವತ್ತು/ಮುಂದೆ ಈ ಅನುಭವ ಕಥನವನ್ನು ಬರೆಯುವಾಗ ಮತ್ತೆ ಅದೇ ಕ್ಷಣಗಳನ್ನು ಮರುಬದುಕುವಾಗ ಕಣ್ಣು ಮುಚ್ಚಿದಾಗ ಕಂಡಿದ್ದು ಈ ಅಪಾಯದ ಸಾಧ್ಯತೆಗಳ ನಡುವೆ ನೆಟ್ಟಗೆ ಎದ್ದು ನಿಂತ ಆಂಡೀಸ್ ಪರ್ವತಶ್ರೇಣಿಯ ರುದ್ರಸೌಂದರ್ಯ. ಸುವಿಸ್ತಾರವಾದ ಖಾಲಿತನದ ಜೊತೆಜೊತೆಗೆ ಭೂಮಿಯೂ ಆಕಾಶವೂ ಸೇರಿನಿಂತ ಹಾಗಿನ ಮಿಲನದ ಸಾಧ್ಯತೆ ಮತ್ತು ಅಗಾಧತೆ. ಬಹುಶಃ ಲೇಖಕರ ಈ ಗ್ರಹಿಕೆ... ತಾನು ನಂಬಿದ ತಿಳಿದ ಮಾಡಬಹುದಾದ ಎಲ್ಲವೂ ನುಚ್ಚು ನೂರಾಗಿ ಬೀಳುತ್ತಿರುವಾಗಲೂ ಇನ್ನೊಂದೇನೋ ದಾರಿ ಇರಬಹುದು ಬದುಕಿಗೆ ಎಂಬ ಆಶಾಪೂರ್ಣ ನೋಟ, ಸೋಲುವ ಪಂದ್ಯದಲ್ಲೆ ಅತ್ಯುತ್ತಮವಾಗಿ ಆಡುವ ಆಟಗಾರನಂತೆ ಇದೇ ಇವರನ್ನು ಬದುಕಿಸಿಟ್ಟಿತೋ ಎನಿಸುತ್ತದೆ ಈ ಕಥನವನ್ನು ಓದಿದಾಗ.
ಬದುಕು ನಮಗೆ ಒಡ್ಡುವ ಎಲ್ಲಾ ಸವಾಲುಗಳಿಗೂ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ನಮ್ಮ ಬದುಕುಳಿಯುವಿಕೆ ಆಧರಿಸಿದೆ ಎಂಬ ಕರಾಳ ಸತ್ಯಕ್ಕೆ ಅತ್ಯಂತ ನೋವಿನ, ಹತಾಶೆಯ, ದಿಕ್ಕೆಟ್ಟ ಪರಿಸ್ಥಿತಿಯಲ್ಲಿ ಮುಖಾಮುಖಿಯಾಗುವ ಸೂಕ್ಷ್ಮಗ್ರಾಹಿಯಾದ ನಾಂದೋ...ಈ ಅನೂಹ್ಯ ಬದುಕಿನ ಪಂದ್ಯದ ನಿಯಮಗಳನ್ನು ಬಂದಂತೆ ಸ್ವೀಕರಿಸುತ್ತ ಹೋಗಿ ಗೆದ್ದೇಬಿಡುವ ಪಂದ್ಯದ ಈ ಕಥನ ಓದುವವರನ್ನು ಮೆತ್ತಗಾಗಿಸುತ್ತದೆ.
ಸ್ವತಃ ಲೇಖಕ ಈ ಪುನರ್ಜನ್ಮವನ್ನು ಹೊಂದಿದ ನಂತರ ಅದರ ಬಗ್ಗೆ ಸಾಮಾನ್ಯವಾಗಿ ಬರುವ ಹಮ್ಮಿನಿಂದ ಒರಟಾಗಿ ದೊರಗಾಗಿ ಮಾರ್ದವರಹಿತವಾಗಿ ಉಳಿದುಬಿಡದೆ......ಬದುಕನ್ನು ಅತಿಹೆಚ್ಚಿನ ಜೀವಪ್ರೀತಿಯಿಂದ ಆಲಂಗಿಸಿಕೊಂಡ ರೀತಿಗೆ ಮನಸ್ಸು ಮಾರುಹೋಗುತ್ತದೆ. ಅವನು ಅಲ್ಲಿಂದ ಬದುಕಿದ್ದು ಒಂದು ಸಾಂಕೇತಿಕ ಪವಾಡವಾಗಿದ್ದರೆ, ಅವನೊಳಗಿನ ಆರ್ದ್ರತೆಯ ಸೆಲೆ ಜಿನುಗುತ್ತಲೇ ಇರುವುದು ಅನಾದಿಕಾಲದಿಂದಲೂ ಘಟಿಸಿಕೊಂಡೇ ಬಂದ ಮನುಷ್ಯನೊಳಗಿರುವ ಪವಾಡವಾಗಿ ಸಾಬೀತಾಗುತ್ತದೆ. ಆ ವಿಷಯದಲ್ಲಿ ಮೂಲ ಪುಸ್ತಕ ಮತ್ತು ಅನುವಾದ ಎರಡೂ ಸುಲಲಿತವಾಗಿ ಗೆದ್ದುಬಿಟ್ಟಿವೆ. ಓದುವವರ ಮನಸ್ಸನ್ನು ಮೆತ್ತಗಾಗಿಸುವ ಈ ಕಥನ ನೈಜ ನಿರೂಪಣೆಯಲ್ಲಿ, ಕಸಿವಿಸಿ ಮೂಡಿಸದೆ ನಿಮ್ಮನ್ನು ತನ್ನೊಳಗೆ ಸೇರಿಸಿಕೊಳ್ಳುವಲ್ಲಿ, ಮಿಡಿಸುವುದರಲ್ಲಿ ಯಶಸ್ವಿಯಾಗಿದೆ.
ಆಂಡೀಸ್ ಪರ್ವತದ ಹಿಮಹೊದ್ದ ಕಣಿವೆಗಳಲ್ಲಿ ಉರುಗ್ವೆಯ ರಗ್ಬಿ ಆಟಗಾರರ ತಂಡದ ವಿಮಾನವು ಅಪಘಾತಕ್ಕೀಡಾಗಿ ಹೋಳಾಗಿ ಬೀಳುತ್ತದೆ. ಯಶಸ್ವಿ ಆಟಗಾರರ ತಂಡ ತಮ್ಮ ಹತ್ತಿರದವರನ್ನು ಕಣ್ಣೆದುರೆ ಕಳೆದುಕೊಂಡು ಸಾವು, ಗಾಯ, ನೋವು, ಆಘಾತಗಳಲ್ಲಿ ತತ್ತರಿಸುತ್ತ ತಿಂಗಳುಗಟ್ಟಲೆ ಹೊರಪ್ರಪಂಚದ ಸಹಾಯವನ್ನು ಎದುರುನೋಡುತ್ತ ನಿರ್ಜನ ಮತ್ತು ದುರ್ಗಮ ಕಣಿವೆಯಲ್ಲಿ ಒದ್ದಾಡುತ್ತಿದೆ. ವಿಪರೀತ ಚಳಿ, ಹಸಿವು, ಬಾಯಾರಿಕೆಗಳಲ್ಲಿ ಬದುಕು ಉಳಿಸಿಕೊಳ್ಳಲು ಅತ್ಯಂತ ದಯನೀಯ ಸ್ಥಿತಿಯಲ್ಲಿ ಸತ್ತು ಹೋದ ತನ್ನವರನ್ನೆ ತಿಂದು ತನ್ನ ಸಾವನ್ನು ದೂರ ನೂಕುವ ದುರಂತ ಕಥನವು ಈ ಪುಸ್ತಕದ ಒಂದು ಆಯಾಮ ಮಾತ್ರ. ಆ ಹೆಪ್ಪುಗಟ್ಟಿಸುವ ಹಿಮವು ನಾಗರಿಕ ಸಂವೇದನೆಗಳನ್ನೆಲ್ಲ ಫ್ರೀಝ್ ಮಾಡುತ್ತಾ ಬದುಕಬೇಕು ಎಂಬ ಜೀವಿಸಹಜ ಆಕಾಂಕ್ಷೆಯೊಂದನ್ನ ಮಾತ್ರವೇ ಫೋಕಸ್ ಮಾಡಿದ ಹಾಗಿದೆ. ವಿಸ್ತಾರವಾದ ಜೀವತುಡಿತದ ಕಥನವು ಇಲ್ಲಿ ಗಟ್ಟಿ ನೆಲವನ್ನು ಸೀಳಿಕೊಂಡು ಹೊರಬರುವ ಸುಕೋಮಲ ಮೊಳಕೆಯನ್ನ ನೆನಪಿಸುವ ಹಾಗೆ ಚಿತ್ರಿತವಾಗಿದೆ.
ಬದುಕಿಗಾಗಿ ಅವರು ಇನ್ನಿಲ್ಲದಂತೆ ನಡೆಸುವ ಪ್ರಯತ್ನದ ಜೊತೆಜೊತೆಗೆ ಅದನ್ನು ಸಾಧ್ಯವಾಗಿಸಿದ ಹಲವಾರು ಒಂದಕ್ಕೊಂದು ಸಂಬಧವಿಲ್ಲದ ಹಾಗೆ ಕಾಣುವ ಆದರೆ ನಿಜಕ್ಕೂ ಆಳದಲ್ಲಿ ಒಂದನ್ನೊಂದು ಪ್ರಭಾವಿಸಿರುವ ಹಲವು ವಿಷಯಗಳ ಬಗ್ಗೆ ಈ ಪುಸ್ತಕದ ಮೂಲಕ ಲೇಖಕ ನಾಂದೊ ಬೆಳಕು ಚೆಲ್ಲುತ್ತಾರೆ. ಹೇಗೆ ರಗ್ಬೀ ಎಂಬ ಚೆಂಡಾಟದ ತಂಡ ಮತ್ತು ಕ್ರೀಡಾ ಮನೋಭಾವವು ಆ ದುರ್ಗಮ ಮನಸ್ಥಿತಿಯಲ್ಲಿ ಅವರನ್ನು ಮುನ್ನಡೆಸಿತು. ಸನ್ನಿವೇಶಗಳನ್ನು ಎದುರಿಸಲು, ಒಪ್ಪಿಕೊಳ್ಳಲು, ಬದಲಾಗಲು. ಕಲಿಯಲು, ಆ ಮೂಲಕ ಬದುಕಲು ಪ್ರೇರೇಪಿಸಿತು ಎಂಬುದನ್ನ ಸವಿವರವಾಗಿ ಆಪ್ತವಾಗಿ ಕಟ್ಟಿಕೊಡುತ್ತದೆ ಈ ಕಥನ. ಈ ನೆಲೆಯಲ್ಲಿ ಇದನ್ನು ಅನುಭಾವ ಕಥನ ಎಂದೂ ಕರೆಯಬಹುದೇನೋ. ಬಹುಶಃ ಈ ಮನೋಭಾವವೇ ಮುಂದೆ ಇದರಿಂದ ಹೊರಬಂದು ಬದುಕು ಕಟ್ಟಿಕೊಳ್ಳುವಾಗ ಒಂದು ಪರಿಪೂರ್ಣ ಅಥವಾ ಹಗುರಾದ ನೋಟವನ್ನು, ಯಾವ ಒಜ್ಜೆಗಳೂ ಇಲ್ಲದೆ ಸ್ವೀಕೃತಿಯ, ಒಪ್ಪಿಕೊಳ್ಳುವಿಕೆಯ ನಿಲುವನ್ನು ಲೇಖಕರಿಗೆ ಕೊಡುತ್ತದೆ. ಈ ನಿಲುವು, ಈ ವ್ಯಕ್ತಿತ್ವ ಇದು ಈ ಕಥನದುದ್ದಕ್ಕೂ ನಮ್ಮ ಅರಿವಿನ ಭಾಗವಾಗಿ ನಿಲ್ಲುತ್ತದೆ. ಧಾರಣ- ಭರಿಸುವುದು ಎಂಬುದರ ವಿಶ್ವರೂಪವನ್ನ ಈ ಪುಸ್ತಕ ಹಿಡಿದಿಟ್ಟಿದೆ ಎಂದನಿಸುತ್ತದೆ ನನಗೆ.
ಈ ಪುಸ್ತಕ ಓದಿ ಅದನ್ನ ಅನುಭವಿಸಿಯೇ ನಿಮ್ಮದಾಗಿಸಿಕೊಳ್ಳಬೇಕು. ನಿಮ್ಮ ನಿಮ್ಮ ಬದುಕಿನ ಮಸೂರದಲ್ಲಿ ಈ ಕಥನ ಹಾಯುವಾಗ ನಾವಿರುವ ರೆಫರೆನ್ಸ್ ಪಾಯಿಂಟಿನಿಂದ ಕಾಣಬಹುದಾದ ಕಾಮನಬಿಲ್ಲಿನ ಬಣ್ಣಗಳು ಮತ್ತು ಕಮಾನು ಅವರವರ ಓದಿನ ಖಾಸಗಿಕ್ಷಣಗಳಿಗೆ ಮಾತ್ರ ದಕ್ಕಬಹುದಾದದ್ದು ಎಂದು ನಮ್ರತೆಯಿಂದ ಹೇಳಬಯಸುತ್ತೇನೆ.
ಸೂಕ್ಷ್ಮವಾಗಿ ಬದುಕನ್ನು ಗ್ರಹಿಸುವ ನಮಗೆ ಅದನ್ನು ಸ್ಥೂಲವಾಗಿ ಗ್ರಹಿಸುವ ವಿಷಯದಲ್ಲಿ ಸ್ವಲ್ಪ ಸಮತೋಲ ತಪ್ಪುತ್ತದೆ. ಅನಿರೀಕ್ಷಿತ ಘಟನೆಗಳು ಸಂದರ್ಭಗಳು ನಮ್ಮ ಗ್ರಹಿಕೆಯನ್ನು ತಿದ್ದುವ ಸವಾಲುಗಳನ್ನು ಒಡ್ದುತ್ತವೆ. ನಮ್ಮ ಪರಿಧಿ ಇದೇ ಇಷ್ಟೆ ಎಂದುಕೊಳ್ಳದೆ ಅದನ್ನು ಮೀರುವ, ಕೊನೆಪಕ್ಷ ಮೀರಲು ಪ್ರಯತ್ನಿಸುವ ಒಪ್ಪಿಕೊಳ್ಳುವ ಮನೋಭಾವವು ಸ್ಥೂಲವಾದ ಸುವಿಸ್ತಾರವಾದ ಈ ಜಗತ್ತಿನ ಬ್ರಹ್ಮಾಂಡದಲ್ಲಿ ನಮ್ಮ ಅಣುತನವನ್ನೂ ಮತ್ತು ಹೇಗೆ ಈ ಅಣುವೇ ಬ್ರಹ್ಮಾಂಡದ ಮೂಲಧಾತು ಎಂಬುದನ್ನೂ ಮನದಟ್ಟು ಮಾಡಿಸುತ್ತದೆ. ಈ ಅಂಶವು ಈ ಪುಸ್ತಕದಲ್ಲಿ ಕಲ್ಪಿಸಲೂ ಅಸಾಧ್ಯವಾದ ಘಟನೆಗಳ ಮೂಲಕ ಅನಾವರಣಗೊಂಡಿದೆ.
ಮೂಲಲೇಖಕ ನಾಂದೋ ಮೊದಲು ಈ ದುರಂತಕ್ಕೀಡಾದಾಗ, ಎರಡನೆಯ ಸಲ ಬರೆದಾಗ ಅನುಭವಿಸಿದ ಈ ಅವಾಕ್ಕಾಗಿಸುವ ಕಥನ ಮತ್ತೆ ಸಂಯುಕ್ತ ಬರೆಯುವಾಗ ಸಮರ್ಥವಾಗಿ ಸಶಕ್ತವಾಗಿ ಬಂದಿದೆ. ಸಂಯುಕ್ತ ತನಗೆ ತೀವ್ರವಾಗಿ ತಟ್ಟಿದ ಈ ಕಥನವನ್ನು ಮೂಲದ ಆಶಯ, ಕಟ್ಟೋಣ, ನಿರೂಪಣೆ, ವಿಷಯ ವಿಸ್ತಾರ ಮತ್ತು ಆಳ ಎಲ್ಲಕ್ಕೂ ಬದ್ಧವಾಗಿಯೇ ನಮ್ಮ ಕನ್ನಡದ ಓದಿಗೆ ಒಗ್ಗಿಸಿದ್ದಾರೆ. ಇದೊಂದು ಅತ್ಯುತ್ತಮ ಪ್ರಯತ್ನ.ಲೇಖಕಿಯ ಮೊದಲ ಪ್ರಯತ್ನವಾಗಿಯೂ ಇದು ಅತ್ಯಂತ ಸಶಕ್ತ ಆಪ್ತ ಅನುವಾದ. ಮೂಲವನ್ನು ಓದಿಯೂ ಇದನ್ನೂ ಓದಲೇಬೇಕಿನ್ನಿಸುವಷ್ಟು ಸೊಗಸಾದ ಅನುವಾದ ಎಂದು ನನಗನ್ನಿಸಿರುವುದರಲ್ಲಿ ಉತ್ಪ್ರೇಕ್ಷೆಯಿಲ್ಲ - ಈ ಪುಸ್ತಕವನ್ನು ಓದಿದರೆ ಅದು ನಿಮಗೆ ಮನದಟ್ಟಾಗುತ್ತದೆ. ಈ ವರ್ಷದ ಒಂದು ಮಸ್ಟ್ ರೀಡ್ ಪಟ್ಟಿಯಲ್ಲಿ ಇರಬೇಕಾದ ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಛಂದ ಪ್ರಕಾಶನಕ್ಕೆ ಅಭಿನಂದನೆಗಳು. ನಮ್ಮ ಸಂಯುಕ್ತಾ ಪುಲಿಗಲ್ ಅವರ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ತಕ್ಕದಾಗಿ ಬರುತ್ತಿರುವ ಈ ಮೊದ ಮೊದಲ ಪುಸ್ತಕ ಅವರ ಬರಹದ ಬದುಕಿನ ಮೊದಲ ಮೈಲಿಗಲ್ಲು. ಅವರೊಡನೆ ಇನ್ನೂ ದೂರದಾರಿಯಲ್ಲಿ ಓದೋದುತ್ತ ಹೋಗುವ ಖುಷಿ ನನ್ನದು ಮತ್ತು ಓದುಪ್ರೀತಿಯ ನಿಮ್ಮೆಲ್ಲರದೂ ಆಗಲಿ ಎಂದು ಹಾರೈಸುತ್ತೇನೆ. ಅನುವಾದಸಾಗರದ ಮೊದಲ ಜಲಯಾನವನ್ನ ಯಶಸ್ವಿಯಾಗಿ ಪೂರೈಸಿರುವ ಸಂಯುಕ್ತಾಗೆ ಅಭಿನಂದನೆಗಳು. ಹೊಸ ಹೊಸ ಮೇರೆಗಳನ್ನ ಹುಡುಕುವ ಈ ಹುಡುಕಾಟ ನಿರಂತರವಾಗಿರಲಿ ಅಕ್ಷರವಾಗಲಿ.



ಎಂಟನೆಯ ದಿನದ ಮಧ್ಯಾಹ್ನ ಸೂಜಿಯ ಮೇಲೆ ತೋಳು ಬಳಸಿ ಮಲಗಿದ್ದೆ. ಆಗ ಅವಳಲ್ಲಿ ಏನೋ ಬದಲಾವಣೆಯಾದ ಅನುಭವವಾಯಿತು. ಅವಳ ಮುಖದಿಂದ ನೋವಿನ ಛಾಯೆ ಮಾಯವಾಗಿತ್ತು. ದೇಹದ ಬಿಗಿ ಸಡಿಲವಾಗಿತ್ತು. ಅವಳ ಉಸಿರಾಟ ತೆಳುವಾಗಿ, ನಿಧಾನವಾಗಿತ್ತು. ನನ್ನ ತೋಳಬಂಧಿಯಿಂದ ಅವಳ ಜೀವ ಜಾರಿಹೋಗುತ್ತಿದ್ದಂತೆ ಭಾಸವಾಗುತ್ತಿತ್ತು. ಆದರೆ ಅದಕ್ಕಾಗಿ ನಾನು ಏನನ್ನೂ ಮಾಡದ ಅಸಹಾಯಕತೆಯಲ್ಲಿ ಇದ್ದೆ. ಕೊನೆಗೆ ಅವಳ ಉಸಿರಾಟ ಸಂಪೂರ್ಣ ನಿಂತಿತ್ತು, ಅವಳು ನಿಶ್ಚಲವಾದಳು.
“ಸೂಜಿ? ಓ ದೇವರೇ, ದಯವಿಟ್ಟು ನಿಲ್ಲು...ಸೂಜಿ! ನಾನು ಅರಚಿದೆ.
ನಾನು ಮೊಣಕಾಲೂರಿ ಕೂತು ಅವಳ ಬೆನ್ನನ್ನು ನೆಲಕ್ಕೆ ತಾಗಿಸಿ ಅವಳ ತುಟಿಯಲ್ಲಿ ತುಟಿಯೊತ್ತಿ ಗಾಳಿ ಊದಲು ಪ್ರಯತ್ನಿಸಿದೆ. ಅದನ್ನು ಹೇಗೆ ಮಾಡುವುದು ಎಂದೂ ನನಗೆ ಸರಿಯಾಗಿ ತಿಳಿದಿರಲಿಲ್ಲ. ಹೇಗಾದರೂ ಮಾಡಿ ಅವಳನ್ನು ಕಾಪಾಡುವ ಆತುರದಲ್ಲಿದ್ದೆ. “ಸೂಜಿ, ದಯವಿಟ್ಟು, ನನ್ನೊಬ್ಬನನ್ನೇ ಬಿಟ್ಟು ಹೋಗಬೇಡ ಎಂದು ಕೂಗಿದೆ. ನಾನು ನಿತ್ರಾಣನಾಗುವವರೆಗೂ ಅವಳ ಜೀವವನ್ನು ಹಿಡಿದಿಡಲುಯತ್ನಿಸಿದೆ. ನನ್ನೊಟ್ಟಿಗೆ ರಾಬರ್ಟೊ ಮತ್ತು ಕಾರ್ಲಿಟೊಸ್ ಪ್ರಯತ್ನಿಸಿದರು. ಆದರೆ ಯಾವುದೂ ಫಲಕಾರಿಯಾಗಲಿಲ್ಲ. ಇತರರು ಮೌನವಾಗಿ ನನ್ನ ಸುತ್ತುವರೆದಿದ್ದರು
ರಾಬರ್ಟೊ ನನ್ನ ಬಳಿ ಬಂದು, “ಅವಳು ದೇಹ ತ್ಯಜಿಸಿದ್ದಾಳೆ ನ್ಯಾಂಡೊ ಎಂದು ನನ್ನ ಬೆನ್ನು ಸವರಿ, “ಈ ರಾತ್ರಿ ಅವಳೊಟ್ಟಿಗೆ ಇರು. ನಾಳೆ ಅವಳ ದೇಹವನ್ನು ಸಮಾಧಿ ಮಾಡೋಣ ಎಂದ. ನಾನು ನನ್ನ ತಂಗಿಯನ್ನು ತೋಳುಗಳಲ್ಲಿ ಬಂಧಿಸಿದೆ. ನಾನು ಆ ಕ್ಷಣದಲ್ಲಿ ನನ್ನ ತಂಗಿಗೆ ಯಾವ ನೋವೂ ಆಗದಂತೆ, ಗಟ್ಟಿಯಾಗಿ ಬಿಗಿದಪ್ಪಬಹುದಾಗಿತ್ತು. ಅವಳ ದೇಹವಿನ್ನೂ ಬೆಚ್ಚಗಿತ್ತು. ಅವಳ ಕೂದಲು ನನ್ನ ಕೆನ್ನೆಯ ಮೇಲೆ ಮೃದುವಾಗಿ ಸವರುತ್ತಿತ್ತು. ಆದರೆ, ನನ್ನ ಕೆನ್ನೆಯನ್ನು ಅವಳ ತುಟಿಗೆ ತಾಗಿಸಿದಾಗ ಅವಳ ಬೆಚ್ಚನೆಯ ಉಸಿರು ನನಗೆ ತಾಕಲಿಲ್ಲ. ನನ್ನ ಸೂಜಿ ಇನ್ನಿಲ್ಲವಾಗಿದ್ದಳು. ನಾನು ಅವಳ ದೇಹದ ಪರಿಮಳ, ಕೂದಲಿನ ಮೃದುತ್ವ, ಸೌಮ್ಯ ಶರೀರ ಎಲ್ಲವನ್ನೂ ನನ್ನ ನೆನಪಿನಲ್ಲಿ ತುಂಬಿಡಲು ವ್ರಯತ್ನಿಸಿದೆ. ನಾನು ಅವನ್ನೆಲ್ಲ ಕಳೆದುಕೊಳ್ಳುತ್ತಿದ್ದೇನೆ ಎಂದು ನೆನೆದು ದುಃಖ ಒತ್ತರಿಸಿ ಬರುತ್ತಿತ್ತು. ನನ್ನ ದೇಹ ಮನಸ್ಸೆಲ್ಲಾ ನೋವಿನಿಂದ ಚೀತ್ಕರಿಸಿತು. ದುಃಖನನ್ನನ್ನಾವರಿಸುತ್ತಿದ್ದಂತೆಯೇ, ಮತ್ತೊಮ್ಮೆ ಆ ಗಂಭೀರ ಧ್ವನಿ ನನ್ನ ಕಿವಿಯಲ್ಲಿ ಹೇಳಿತು
“ಅಳು ದೇಹದ ಉಪ್ಪನ್ನು ಕಡಿಮೆ ಮಾಡುತ್ತದೆ." 
ನಾನು ಇಡೀ ರಾತ್ರಿ ಅವಳೊಟ್ಟಿಗೆ ಎಚ್ಚರವಾಗಿಯೇ ಕಳೆದೆ. ನನ್ನ ಎದೆ ದುಃಖದಿಂದ ಭಾರವಾಗಿತ್ತು. ಆದರೆ ಅಳು, ಕಣ್ಣೀರು ಆ ಸಮಯದಲ್ಲಿ ನನಗೆ ದುಬಾರಿಯಾಗಿತ್ತು. ಮರುದಿನ ಮುಂಜಾನೆ ಸೂಜಿಗೆ ನೈಲಾನ್ ದಾರಗಳನ್ನು ಕಟ್ಟಿ ವಿಮಾನದ ಹೊರಗೆ ಎಳೆದೊಯ್ದರು. ಅವಳನ್ನು ಹಿಮದ ನೆಲದ ಮೇಲೆ ಎಳೆದೊಯ್ಯುವುದನ್ನು ನಾನು ನೋಡುತ್ತಿದ್ದೆ. ಆ ಒರಟಾದ, ಜರೆದಂತಹ ಎಳೆಯುವಿಕೆ ನನಗೆ ನೋಡಲು ಕಷ್ಟವಾಗುತ್ತಿತ್ತು. ಆದರೆ ಇತರರಿಗೆ ಅದು ಅಭ್ಯಾಸವಾಗಿಹೋಗಿತ್ತು. ಸತ್ತ ನಂತರ ದೇಹ ಹೆಚ್ಚು ಭಾರವಾಗಿ ಹೊತ್ತೊಯ್ಯಲು ಕಷ್ಟವಾಗಿ, ಆ ಹಿಮದಲ್ಲಿ ಇನ್ನೂ ಅಸಾಧ್ಯವಾಗಿ ತೋರುತ್ತಿತ್ತು. ಅದಕ್ಕೆ ಹಾಗೆ ಎಳೆದೊಯ್ಯುವುದು ಸುಲಭವಾಗುತ್ತಿತ್ತು. ಆದ್ದರಿಂದ ನಾನೂ ಅದನ್ನು ಅನಿವಾರ್ಯವೆಂದು ಒಪ್ಪಿದೆ.
ಉಳಿದ ಶರೀರಗಳ ಸಮಾಧಿಯಾಗಿದ್ದ, ವಿಮಾನದ ಎಡಭಾಗದತ್ತ ಸೂಜಿಯನ್ನು ಎಳೆದೊಯ್ದೆವು. ಹೆಪ್ಪುಗಟ್ಟಿದ ಕಳೇಬರಗಳು ಮಂಜಿನ ನಡುವೆ ನಿಖರವಾಗಿ ಕಂಡುಬರುತ್ತಿದ್ದವು. ಆ ದೇಹಗಳು ಕೆಲವೇ ಇಂಚುಗಳ ಹಿಮದ ಲೇಪನದಿಂದ ಆವೃತಗೊಂಡಿದ್ದವು. ಅಲ್ಲಿ ನೋಡುತ್ತಿದ್ದಂತೆ ಸುಲಭವಾಗಿ ನನಗೆ ನನ್ನ ತಾಯಿಯ ನೀಲಿ ಅಂಗಿ ಕಾಣಿಸಿತು. ಅವಳ ಪಕ್ಕದಲ್ಲೇ ಸೂಜಿಗಾಗಿ ಸಣ್ಣ ಹಳ್ಳವನ್ನು ತೋಡಿದೆ. ಸೂಜಿಯನ್ನು ಅಲ್ಲಿ ಮಲಗಿಸಿ, ಅವಳ ಕೂದಲು ಸವರಿದೆ. ನಂತರ ಅವಳ ದೇಹವನ್ನು ನಿಧಾನವಾಗಿ ಮಂಜಿನ ಮರಳಿನಿಂದ ಮುಚ್ಚಿದೆ. ಇಡೀ ದೇಹ ಹಿಮದಲ್ಲಿ ಮುಚ್ಚಿಹೋಗುವವರೆಗೂ ಮುಖವನ್ನು ತೆರೆದೇ ಇಟ್ಟಿದ್ದೆ. ಅವಳ ಮುಖ ಬೆಚ್ಚನೆಯ ಹೊದಿಕೆಯಡಿ ನೆಮ್ಮದಿಯ ನಿದ್ರೆಯಲ್ಲಿ ಜಾರಿದಂತೆ ಕಾಣುತ್ತಿತ್ತು. ನಾನೊಮ್ಮೆ ಕಡೇ ಬಾರಿಗೆ ಅವಳ ಮುಖವನ್ನು ನೋಡಿ ನನ್ನ ಮನಸಾರೆ ತುಂಬಿಕೊಂಡು ಅವಳನ್ನು ಸಂಪೂರ್ಣ ಹಿಮಾವೃತಗೊಳಿಸಿದೆ. ನನ್ನ ಪ್ರೀತಿಯ ಸೂಜಿ ನನ್ನಿಂದ ಶಾಶ್ವತವಾಗಿ ದೂರವಾಗಿದ್ದಳು.
ಕೆಲಸ ಮುಗಿದ ನಂತರ ಜೊತೆಗಾರರೆಲ್ಲರೂ ವಿಮಾನದತ್ತ ತೆರಳಿದರು. ನಾನು ಪರ್ವತದ ಎತ್ತರವನ್ನು ಗಮನಿಸಿದೆ. ಪಶ್ಚಿಮದತ್ತ ಬೆಟ್ಟದ ನಡುವಿನ ದಾರಿಯನ್ನು ಹುಡುಕುತ್ತಾ ನನ್ನ ಕಣ್ಣು ಸುತ್ತಾಡಿತು. ಕಣ್ಣೆತ್ತರಿಸಿದಷ್ಟು ಎತ್ತರಕ್ಕೆ ಬೆಟ್ಟದ ತುದಿ ಸಾಗುತ್ತಲೇ ಇದೆ. ನಾವು ವಿಮಾನಾಪಘಾತದಲ್ಲಿ ಆಳದಾಳದೊಳಕ್ಕೆ ಉರುಳಿ ಬಿದ್ದಿದ್ದೇವೆ. ಇದು ಹೇಗಾಗಲು ಸಾಧ್ಯ? ನಾವು ಚಿಲಿಯಲ್ಲಿ ಒಂದು ಪಂದ್ಯವಾಡಲು ಹೊರಟಿದ್ದೆವು! ಇದ್ದಕ್ಕಿದ್ದಂತೆ ನನ್ನೊಳಗೆಲ್ಲ ಒಂದು ರೀತಿಯ ಶೂನ್ಯವಾವರಿಸಿತು. ಖಾಲಿತನ ಕಾಡಿತು. ಅಲ್ಲಿವರೆಗಿನ ನನ್ನೆಲ್ಲ ಸಮಯ ತಂಗಿ ಸೂಜಿಯ ಆರೈಕೆಯಲ್ಲಿ ಕಳೆದಿದ್ದೆ. ನನ್ನ ಸ್ವಂತದ ನೋವು, ಹೆದರಿಕೆಗಳನ್ನು ಅವಳ ಆರೈಕೆಯ ಜವಾಬ್ದಾರಿ ಮುಚ್ಚಿಟ್ಟಿತ್ತು. ಆದರೆ ಈಗ ನಾನು ಸಂಪೂರ್ಣ ಏಕಾಂಗಿಯಾಗಿದ್ದೆ. ನನ್ನ ಸುತ್ತುವರೆದಿದ್ದ ಭಯಾನಕ ಸತ್ಯದಿಂದ ನನ್ನನ್ನು ದೂರವಾಗಿಸುವ ಇನ್ಯಾವ ಕಾರಣವೂ ನನ್ನ ಬಳಿ ಇರಲಿಲ್ಲ. ನನ್ನ ತಾಯಿ, ತಂಗಿ ಸತ್ತಿದ್ದರು. ಸ್ನೇಹಿತರೂ ಇಲ್ಲವಾಗಿದ್ದರು. ನಾವು ಗಾಯಗೊಂಡು, ಹೊಟ್ಟೆ ಹಸಿದು, ಚಳಿಗೆ ನಡುಗಿ ಮರಗಟ್ಟುತ್ತಿದ್ದೆವು. ಒಂದು ವಾರಕ್ಕಿಂತ ಹೆಚ್ಚು ದಿನಗಳು ಕಳೆದಿದ್ದರೂ ರಕ್ಷಣಾಪಡೆಯ ಯಾವ ಸುದ್ದಿಯೂಇರಲಿಲ್ಲ. ಆ ಪರ್ವತಗಳ ಭಯಾನಕ ಶಕ್ತಿ ನಮ್ಮನ್ನು ಆವರಿಸುತ್ತ ತನ್ನ ನಿರ್ದಾಕ್ಷಿಣ್ಯ, ನಿಷ್ಕರುಣ ರೌದ್ರತೆಯನ್ನು ನಮಗೆ ತೋರಿಸುತ್ತಿದೆ ಎಂಬ ಅನುಭವ. ಆ ಕ್ಷಣದಲ್ಲಿ ನಾನು ಸುತ್ತಲೂ ಗಮನಿಸಿ, ಮನೆಯಿಂದ ಎಷ್ಟು ದೂರ ಗಮಿಸಿ ಈ ತಾಣದಲ್ಲಿ ಅನಾಥನಾಗಿದ್ದೆ ಎಂಬ ಕಲ್ಪನೆಯಿಂದ, ಹತಾಶೆಯಿಂದ ಕುಸಿದುಬಿದ್ದೆ. ಮೊಟ್ಟಮೊದಲ ಬಾರಿಗೆ ನಾನಿನ್ನು ಉಳಿಯಲಾರೆ ಎನಿಸಿತ್ತು.
ಇಷ್ಟಕ್ಕೂ ನಾನೀಗಾಗಲೆ ಸತ್ತಿದ್ದೆ. ನನ್ನ ಬದುಕಿನ ಸತ್ವವನ್ನೆಲ್ಲ ನನ್ನಿಂದ ಕಸಿದುಕೊಂಡಾಗಿತ್ತು. ನಾನು ಕನಸು ಕಂಡ ಭವಿಷ್ಯ ನನ್ನದಾಗಿ ಉಳಿದಿರಲಿಲ್ಲ. ನಾನು ಮದುವೆಯಾಗಬಹುದಾದ ಹೆಣ್ಣಿಗೆ ನಾನು ಯಾರೆಂದು ತಿಳಿಯುವುದೂ ಇಲ್ಲ. ನನಗೆ ಹುಟ್ಟಬಹುದಾದ ಮಕ್ಕಳೂ ಹುಟ್ಟಲಾರರು. ನಾನು ಇನ್ನೆಂದಿಗೂ ನನ್ನ ಅಜ್ಜಿಯ ಪ್ರೀತಿಯ ನೋಟವನ್ನಾಗಲಿ, ಅಕ್ಕ ಗ್ರೆಸಿಲ್ಲಾಳ ಆತ್ಮೀಯ ಅಪ್ಪುಗೆಯನ್ನಾಗಲಿ ಅನುಭವಿಸಲಾರೆ. ನನ್ನ ತಂದೆಯ ಬಳಿಗೆ ಇನ್ನೆಂದಿಗೂ ಮರಳಲಾರೆ!
ಈ ಗಾಢ ಆಲೋಚನೆಗಳ ನಡುವೆಯೇ ನನ್ನ ಮನದಲ್ಲಿ ತಂದೆಯ ಚಿತ್ರಣ ಮೂಡಿಬಂತು. ಅವರು ಅನುಭವಿಸುತ್ತಿರಬಹುದಾದ ಏಕಾಂಗಿತನ ನನ್ನನ್ನು ಘಾಸಿಗೊಳಿಸಿತು. ಆ ಕ್ಷಣವೇ ಅವರ ಬಳಿ ಓಡಿ ಹೋಗಬೇಕೆಂಬ ವಿಚಿತ್ರ ಸೆಳತಕ್ಕೆ ಒಳಗಾದೆ. ಆದರೆ, ನನ್ನೆಲ್ಲ ನಿಶ್ಶಕ್ತಿ, ಅಸಹಾಯಕತೆ ಹುಚ್ಚನನ್ನಾಗಿಸುತ್ತಿದ್ದವು. ಆಗ, ಆ ಕ್ಷಣ, ನನ್ನ ತಂದೆ ಅರ್ಜೆಂಟಿನಾ ನದಿಯ ದೋಣಿಯಲ್ಲಿ ಸೋಲುತ್ತಾ ಸೋಲುತ್ತಾ ಗೆದ್ದ ಚಿತ್ರಣ ಕಣ್ಣ ಮುಂದೆ ಬಂತು. ಅವರ ಮಾತುಗಳು ನನಗೆ ನೆನಪಾದವು: “ನಾನು ಸೋಲೊಪ್ಪುವುದಿಲ್ಲ ಎಂದು ನಿರ್ಧರಿಸಿದೆ. ನಾನು ಇನ್ನೂ ಸ್ವಲ್ಪ ಕ ಷ್ಟಪಡುತ್ತೇನೆ ಎಂದು ನಿರ್ಧರಿಸಿದೆ.
ಅದು ನನ್ನಿಷ್ಟದ ಕಥೆಯಾಗಿತ್ತು. ಆದರೆ ಆ ಕ್ಷಣ ನನಗೆ ಅದು ಕಥೆಗಿಂತ ಮಿಗಿಲಾದ್ದು ಎಂಬ ಅರಿವಾಯಿತು. ಅದು ನನ್ನ ತಂದೆ ನನಗೆ ಬಳುವಳಿಯಾಗಿ ಕೊಟ್ಟ ಧೈರ್ಯ ಮತ್ತು ವಿವೇಕದ ಸಂಕೇತವಾಗಿತ್ತು. ಒಂದು ಕ್ಷಣ ನನ್ನಲ್ಲೇ ಅವರಿರುವ ಅನುಭವವಾಯಿತು. ಅದರ ನಂತರ ಒಂದು ತೀವ್ರ ನಿಶ್ಶಬ್ದ ನನ್ನೊಳಸುಳಿದಿತ್ತು.
ಪಶ್ಚಿಮದ ಬೆಟ್ಟತಪ್ಪಲಿನತ್ತ ನನ್ನ ಕಣ್ಣು ಹಾಯಿಸಿದೆ. ಅದರ ಉದ್ದಕ್ಕೂ ನನ್ನನ್ನು ನನ್ನ ಮನೆ ತಲುಪಿಸುವ ದಾರಿಯನ್ನು ಕಣ್ಣಲ್ಲೇ ಹೆಣೆದೆ. ಆ ದಾರಿ ನನ್ನ ತಂದೆಯ ಪ್ರೀತಿ ತುಂಬಿದ ಜೀವಧಾರೆಯಂತೆ ಭಾಸವಾಯಿತು. ಪಶ್ಚಿಮದತ್ತ ನೋಡುತ್ತಲೇ ಮೌನವಾಗಿನನ್ನ ತಂದೆಗೆ ಒಂದು ವಾಗ್ದಾನವಿತ್ತೆ. “ನಾನು ಕಷ್ಟಪಡುತ್ತೇನೆ, ಹೋರಾಡುತ್ತೇನೆ. ಮನೆಗೆ ಬರುತ್ತೇನೆ. ನಮ್ಮಿಬ್ಬರ ನಡುವಿನ ಜೀವತಂತುವನ್ನು ಈ ರೀತಿ ಮುರಿದು ಬೀಳಲು ನಾನು ಬಿಡುವುದಿಲ್ಲ. ನಿನಗಿದೋ ನನ್ನ ವಾಗ್ದಾನ. ನಾನು ಈ ಬೆಟ್ಟತಪ್ಪಲಿನಲ್ಲಿ ಸಾಯುವುದಿಲ್ಲ! ಇಲ್ಲಿ ಸಾಯುವುದಿಲ್ಲ!
ಎಂದಿನಂತೆ ಮಾಂಟೆವಿಡಿಯೊನಲ್ಲಿ ಸಾಧಾರಣ ಬದುಕು ಜೀವಿಸುತ್ತಿದ್ದನನಗೆ ಆ ಸಮಯದಲ್ಲಿ ಸೂಜಿ ನನ್ನಿಂದ ದೂರಾಗಿದ್ದಿದ್ದರೆ ಬಹುಶಃ ತಿಂಗಳಾನುಗಟ್ಟಲೆ ಆ ಆಘಾತದಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಸಂದರ್ಭ ಹಾಗಿರಲಿಲ್ಲ. ಇಲ್ಲಿನ ಯಾವುದೇ ನಿಷ್ಕರುಣ ರಿಸರ ನನಗೆ ದುಃಖದಲ್ಲಿ ಮುಳುಗಿ ನೋವಿನಲ್ಲಿ ಉನ್ಮತ್ತನಾಗುವಷ್ಟು ಸ್ವಾತಂತ್ರ್ಯವನ್ನು ಕೊಟ್ಟಿರಲಿಲ್ಲ. ಮತ್ತೊಮ್ಮೆ ನನ್ನೊಳಗಣ ಆ ನಿರ್ದಾಕ್ಷಿಣ್ಯ,ತಣ್ಣನೆಯ ಧ್ವನಿ ನನ್ನೆಲ್ಲ ಮಾನಸಿಕ ಖಿನ್ನತೆಗಳನ್ನು ಮೀರಿ ಹೊರಜಿಗಿದುನನಗೆ ಕೇಳಿಸಿತು. ಮುಂದಿನದನ್ನು ಆಲೋಚಿಸು. ನೀನು ಮುಂzಬದಲಿಸಬಲ್ಲ ಕ್ಷಣಗಳಿಗಾಗಿ ನಿನ್ನ ಶಕ್ತಿಯನ್ನು ಉಳಿಸಿಕೊ. ಹಿಂದಿನದನ್ನುನೆನೆಸಿಕೊಂಡು ಕೊರಗುತ್ತಿದ್ದರೆ ನೀನು ಸಾಯಿತ್ತೀಯೆ. ನನ್ನ ದುಃಖದ ಮಡುವನ್ನು ಅಷ್ಟು ಸುಲಭವಾಗಿ ಇಲ್ಲವಾಗಿಸಲು ನನಗೆ ಸಾಧ್ಯವಾಗಲಿಲ್ಲ. ಆ ಸ್ಥಳದಲ್ಲಿ ಅಂದಿನವರೆಗೂ ನನ್ನ ಜೊತೆಗಿದ್ದ ಸೂಜಿಯ ಇಲ್ಲದಿರುವಿಕೆನನ್ನನ್ನು ಕಾಡಿತು. ಅವಳಿಗಾಗಿನ ನನ್ನ ದುಃಖವೇ ಈಗ ನನಗೂ ಅವಳಿಗೂ ಇದ್ದ ಸಂಬಂಧವಾಗಿ ಉಳಿದುಬಿಟ್ಟಿತು. ಒಂದು ಮೌನದ ಕಣ್ಣೀರು ಬಿಟ್ಟರೆ ನನಗೆ ಮತ್ತೇನೂ ತೋಚಲಿಲ್ಲ. ಮೈ ಕೊರೆಯುವ ಚಳಿಯನ್ನು ಮೀರಲು ಯತ್ನಿಸುತ್ತ ದೀರ್ಘವಾದ ಆ ರಾತ್ರಿ ಕಳೆಯತೊಡಗಿದೆ. ನನ್ನೊಳಗಿನ ಭಾವುಕತೆ ನಿಧಾನವಾಗಿ ಬತ್ತತೊಡಗಿತ್ತು. ಇರುಳು ಕಳೆದು ನಿದ್ದೆಯಿಂದ ಎದ್ದಾಗ ದುಃಸ್ವಪ್ನದ ತೀವ್ರತೆ ಕಳೆವಂತೆನನ್ನೊಳಗೇ ಕಾಡುತ್ತಿದ್ದ ತಂಗಿಯ ಸಾವಿನ ದುಃಖ ತನ್ನ ತೀವ್ರತೆ ಕಳೆದುಕೊಳ್ಳತೊಡಗಿತು. ಬೆಳಗಾಗುವಷ್ಟರಲ್ಲಿ ನಾನು ಖಾಲಿತನವನ್ನು ಅನುಭವಿಸಿದ್ದೆ. ನನ್ನ ಕಾಡುವ ಮನಸ್ಸಿನಿಂದ ಸೂಜಿ ಹೊರಬಂದುನನ್ನ ತಾಯಿ ಮತ್ತು ಪಂಚಿಟೋರ ಜೊತೆ ಸೇರಿಹೋಗಿದ್ದಳು. ಈಗ ಎಲ್ಲರೂ ನನ್ನ ಭೂತದಲ್ಲಿ ಲೀನರಾಗಿದ್ದರು. ಅಷ್ಟು ಬೇಗ ನನ್ನಿಂದ ದೂರವಾಗಿ ಹೋಗಿದ್ದರು. ಪರ್ವತ ಶ್ರೇಣಿಗಳು ನನ್ನನ್ನು ಬದಲಾಗುವಂತೆ ಬಲವಂತ ಮಾಡುತ್ತಿದ್ದವು. ಹೊಸ ಸತ್ಯಗಳಿಗೆ ನಾನು ತೆರೆದುಕೊಂಡುಹೋದಷ್ಟೂ ನನ್ನ ಮನಸ್ಸು ಹಗುರ ಮತ್ತು ನಿರ್ದಾಕ್ಷಿಣ್ಯವಾಗುತ್ತಿತ್ತು. ನನ್ನ ಮುಂದಿನ ಜೀವನಒಂದು ಪ್ರಾಣಿ ತನ್ನುಳಿವಿಗಾಗಿ ಹೋರಾಡುವಷ್ಟು ನೇರವಾಗಿ ಕಾಣುತ್ತಿತ್ತು. ಸೋಲು-ಗೆಲುವಿನ ಒಂದು ಸರಳ ಪಂದ್ಯಸಾವು ಅಥವಾ ಬದುಕು. ಕಷ್ಟ ಮತ್ತು ಅವಕಾಶ! ಮನಸ್ಸಿನ ಸಂಕೀರ್ಣ ಭಾವನೆಗಳನ್ನು ಮೀರಿದ ಮನುಷ್ಯನ ಸರಳ ಸ್ವಭಾವಗಳು ಮೇಲೇರಲಾರಂಭಿಸಿದ್ದವು. ನನ್ನ ಬದುಕಿನ ಎಲ್ಲ ಅಸ್ತಿತ್ವಗಳು ಎರಡೇ ಸೂತ್ರಗಳ ಸುತ್ತ ಸುತ್ತುತ್ತಿದ್ದವು. ನಾನು ಸಾಯುತ್ತಿದ್ದೇನೆ ಎಂಬ ಹೆದರಿಕೆ ಮತ್ತು ಹೇಗಾದರೂ ಮಾಡಿ ನನ್ನ ತಂದೆಯೊಡನೆ ಇರಬೇಕು ಎಂಬ ಹಂಬಲ.....

1 comment:

sunaath said...

ಕಥೆಯ ಹಾಗು ಅನುವಾದದ ಗುಣಗಳನ್ನು ಸಮರ್ಪಕವಾಗಿ ವಿವರಿಸಿದ್ದೀರಿ. ‘ಅಗಳಿನ ಮೇಲಿಂದ ಅನ್ನದ ಪರೀಕ್ಷೆ ಮಾಡು’ ಎಂದು ಹೇಳುತ್ತಾರಲ್ಲವೆ, ಹಾಗೆ, ನೀವು ಕೊಟ್ಟ ಕಥಾಭಾಗದಿಂದಲೇ, ಕಥೆಯ ಸತ್ವದ (ಹಾಗು ಅನುವಾದದ ಸತ್ವದ) ಅರಿವಾಗುತ್ತದೆ. ಪರಿಚಯಕ್ಕಾಗಿ ನಿಮಗೆ ಧನ್ಯವಾದಗಳು.