Wednesday, June 21, 2017

ಸೃಷ್ಟಿ ಶುಭದಾಯಿನಿಯೆಂಬವಳನ್ನು ಸಾಕುತ್ತಿರುವವಳ ಕಥೆ ಕವಿತೆ ಇತ್ಯಾದಿ...

ಉಬ್ಬು ಕೆನ್ನೆ,
ಥಳಥಳಿಸುವ ಕಣ್ಣು,
ನೇರ ಮೂಗು,
ಮುಂದೆ ಬಂದು ಹಣೆ ನೋಡುವ ಗಲ್ಲ,
ಹಾರಾಡುವ ಕೂದಲು-
ಜಡೆಯೊಳಗೆ ನಿಲ್ಲುವುದೇ ಇಲ್ಲ,
ಕುಣಿವ ಕಾಲ್ಗೆ, ಆಡುವ ಕೈಗೆ ಕುಣಿಕೆಯಿಲ್ಲ,
ಚೈತನ್ಯದ ಚಿಲುಮೆ ಬತ್ತುವುದೇ ಇಲ್ಲ,
ಹೇಳಿದ ಮಾತು ಕೇಳುವುದಿಲ್ಲ -
ಸ್ವೆಷಲೀ -
ಅಮ್ಮ ಹೇಳಿದ ಮಾತು.
ಅಮ್ಮ ಸುಮ್ಮನಾಗೋಲ್ಲ,
ಮಗಳು ಸುಮ್ಮನಿರೋಲ್ಲ,

ಇದೆಲ್ಲ ಬೆಳ್ಬೆಳಗ್ಗೆಯಿಂದ ತೀರಾ ತಡರಾತ್ರಿವರೆಗೂ
ಆಗುತ್ತಾಗುತ್ತಾ
ಮಧ್ಯಾಹ್ನದೊತ್ತಿಗೆ ಅನಿಸುತ್ತಿರುತ್ತದೆ
ಅಲ್ಲ ಯಾಕಷ್ಟು ಹೇಳಬೇಕು
ಅಮ್ಮ ಯಾಕೆ ತನ್ನ ಬಾಲ್ಯ ಮರೆತುಬಿಟ್ಟು ಬರೀ ಅಮ್ಮನೇ ಆಗಿಬಿಡುತ್ತಾಳೆ ಅಂತ.

ಬೆಳಗ್ಗೆ ಬಂದು ನೋಡಿ
ದಶಾವತಾರ
ಮಧ್ಯಾಹ್ನ ದಿಂದ ಸಂಜೆಗೆ ಬೃಂದಾನವ
ರಾತ್ರಿ ಊಟದಿಂದ ಮಲಗುವವರೆಗೂ
ಕುರುಕ್ಷೇತ್ರ
ಧರ್ಮಕ್ಷೇತ್ರೆ ಕುರುಕ್ಷೇತ್ರೇ
ಕಥಾಮೃತಸಾರದಿಂದ ಸ್ವಲ್ಪ ಬಿಳಿ ಬಾವುಟ
ಹಾರಿ ಕಣ್ಣೆವೆಗಳು ಮುಚ್ಚುವಾಗ

ಇವತ್ತಿನ ದಿನ ಹೊಸಿಲು ದಾಟಿ ನಾಳೆಗಡಿಯಿಡುತ್ತಿರುತ್ತದೆ.

1 comment:

sunaath said...

ಅಮ್ಮ,ಮಗಳಿಗೆ ಜಯವಾಗಲಿ. ಈ ಬೃಂದಾವನ ಹಾಗು ಕುರುಕ್ಷೇತ್ರ ಹೀಗೇ ಸಾಗುತ್ತಿರಲಿ!