Tuesday, July 12, 2016

ಪಾತಾಳದಲ್ಲಿ ಪಾಪಚ್ಚಿಗೆ ಕಂಡ ವಂಡರ್ ಲ್ಯಾಂಡ್..

ಇದು ಹೀಗೆ. ಇದು ಹಾಗೆ
ಹೀಗೆ ಮಾಡಬಹುದು, ಹಾಗೆ ಮಾಡಬಾರದು
ಎಲ್ಲ ಎರಡು ವಿಷಯಗಳ ಮಧ್ಯೆ ಒಂದು ಗೆರೆ
ಗೆರೆ ದಾಟುವವರು, ದಾಟಿದವರು
ವ್ಯತ್ಯಾಸ ಹೇಳುತ್ತಲೇ ಇರುತ್ತಾರೆ
ಅವರಿರುವುದೇ ಹೇಳಲಿಕ್ಕೆ.
ಮೊಗ್ಗು ಚಿಗುರಿ ಹೂವಾಗಿ ಅರಳಿ
ಗಂಧ ಬೀರುವ ಹೊತ್ತು
ಗೆರೆ ಕಾಣದ ಮತ್ತು
ಹೇಳಿದ್ದು ಹೇಳದ್ದು ಎಲ್ಲವೂ ಗೊತ್ತು
ಎಂಬ ಗತ್ತು
ಇವೆಲ್ಲ ಮುಗಿದು
ಕವಲು ದಾರಿಯ ಹಾದಿ ಸವೆದು
ಬಯಲಿಗೆ ಬಂದಾಯಿತು
ಬಹುದೂರ ನಡೆದ ಮೇಲೀಗ
ಹಿಂದೆ ತಿರುಗಿ ನೋಡಿದರೆ
ನೂರಾರು ಪಥಿಕರು.
ನಿಲ್ದಾಣದ ಹಂಗಿಲ್ಲದೆ
ಹೊರಟ ಪಯಣ
ಗುರಿತಪ್ಪುವುದಿಲ್ಲ.
ಇಂತಲ್ಲೇ ಹೋಗಬೇಕೆಂದಿಲ್ಲದವರಿಗೆ
ಎಲ್ಲಿ ಹೋದರೂ ಆದೀತೆಂದ ಲೂಯಿ ಕೆರೊಲ್
ಮಾತು ಎಷ್ಟು ಹದವಾದ ನಿಜ!!
ತಲೆಕೆಳಗಾದರೂ ಸುಳ್ಳಾಗದ ನಿಜ.
ಪುಟ್ಟ ಜನರಿಗೆ ದೊಡ್ಡಕೆ ಕಂಡ ಅಲಿಸ್ ನಿಜ.

ಗುರಿ ಮತ್ತು ದಾರಿ
ಅಜ್ಜ ಹೇಳಿದ್ದು ಸರಿ.
ಇರುವ, ಇಲ್ಲದಿರುವ, ಮಾಡಬೇಕಿರುವ... ದಾರಿ
"ಮುಖ್ಯ."
ಪಯಣವೇ ಗುರಿ.

2 comments:

sunaath said...

ಬಾಳದಾರಿಯಲಿ
(ಗುರಿ ಇರಲಿ, ಇಲ್ಲದಿರಲಿ)
ಇಂತಹ ಕವನಹೂವುಗಳು
ಘಮಘಮಿಸುತಿರೆ ಎರಡು ಬದಿಗಳಲ್ಲಿ
ಮನದ ಸಂಭ್ರಮಕೆ ಬೇರೇನು ಬೇಕು?
God bless you!
-ಕಾಕಾ

prabhamani nagaraja said...

`ಇರುವ, ಇಲ್ಲದಿರುವ, ಮಾಡಬೇಕಿರುವ... ದಾರಿ
"ಮುಖ್ಯ."
ಪಯಣವೇ ಗುರಿ.' ಉತ್ತಮ ಸಾಲುಗಳ ಅರ್ಥಗರ್ಭಿತ ಕವನ :)