Monday, January 19, 2015

ನಿಲುವು

ನನ್ನ ನಿಲುವೇ ಬೇರೆ.
ಗುರುವೆಂದರೆ
ಗುರು ಸಾಕ್ಷ್ಯಾತ್ ಪರಬ್ರಹ್ಮ
ಎಂದು ಕಲಿತವಳು, ಬೆಳೆದವಳು
ಗುರುವೆಂದರೆ ದಾರಿಯಲ್ಲ
ಬಯಲಿಗೆ ಧುಮುಕುವುದಕ್ಕೆ

ಇರುವ ಪುಟ್ಟ ಮೆಟ್ಟುಕಲ್ಲು ಎಂಬ ಅರೆ ಅರಿವು.

ಬೆನ್ನು ಸೆಟೆದಾಗೊಮ್ಮೆ
ಕಾಲು ಸೋತಾಗೊಮ್ಮೆ
ಕತ್ತು ಮೇಲೆತ್ತಲು
ಹೊಳೆವ ಮುಗಿಲು, ಧೃವತಾರೆ
ಆಕಾಶದ ಅವಕಾಶವೇ ಎಂದಂದುಕೊಂಡವಳು!

ಆ ಗಗನಕೊ ಕರಿಗೆರೆಯಿರಬಹುದು
ಸಹಜದಲ್ಲಿ ಸಹಜ..
ಹಾಗಂತ ಅದರ ವಿಸ್ತಾರ
ಮರೆಸಲುಂಟೇ
ಇದನ್ಯಾರೋ ನಿಮ್ಮ ತಿಳುವಳಿಕೆಗೂ ಇರಲಿ
ಎಂದರೆಂದು ಅದಷ್ಟೇ ಗುರುವೆಂದು
ಭಾವಿಸಲುಂಟೇ..
ಅವರವರ ಭಾವಕ್ಕೆ ಅವರವರ ಭಕುತಿಗೆ
ಅವರವರ ಬೊಗಸೆಗೆ
ಅವರವರ ಮನಸಿಗೆ
ಸಿಕ್ಕಿದ್ದು ಅವರ ಪಾಲಿನ ಪಂಚಾಮೃತ
ಹೀಗಿರಲು ಹೊಡೆದಾಟವೇಕೆ?
ಹೀಗಳಿಕೆ ಯಾಕೆ
ಇದನೆಲ್ಲ ಮಾಡಲು
ಹೆಂಗಳೆಯರ ನಾಮಭೂಷಣವೇಕೆ?

ಅಲ್ಲಿಂದಲೆ ಬಂದವರಿಗೆ
ಅಲ್ಲಿನ ಗುಂಗು ಸಹಜವಾದರೂ
ಅಲ್ಲೆ ಇರಲಾಗದು.

ಇವರ ಫೋಕಸ್ ಸರಿಯಿಲ್ಲ, ನಿಜ
ಅವರ ಎಕ್ಸ್ ಪೋಷರ್ ಸರಿಯಿಲ್ಲವೆಂಬುದೂ ಅಷ್ಟೆ ನಿಜವಲ್ಲವೆ.
ನಾನು ಅವರೊಡನೆ ಇಲ್ಲ
ಇವರಲ್ಲಿ ಸೇರಲಾರೆ.

ನಿಲುವು ಅಂತೊಂದಿದ್ದರೆ
ಅದು ಬೇರೆ. ಇದಲ್ಲ.
ತಪ್ಪು ತಿದ್ದಿಕೊಳ್ಳುವ, ಹೊಸತನ್ನು ಕಲಿಯುವ
ಹಳೆಯ ಮನೆಯ ಜಗುಲಿಯಿಂದ
ಹೊಸ ಸೂರ್ಯೋದಯಕೆ ಮುಖವೊಡ್ಡುವ
ನಿಲುವು.
ಅಜ್ಜನ ಮಾತು ಕೇಳುವ
ಮಗುವಿನ ಆಟ ನೋಡುವ
ಅಮ್ಮನ ನಿಲುವು.
ಒಳಗೊಳ್ಳುವ ನಿಲುವು
ಹೊರಹಾಕದ ನಿಲುವು.

2 comments:

sunaath said...

ನಿಮ್ಮ ‘ನಿಲುವಿ’ಗೆ ಬೆರಗಾದೆನಯ್ಯಾ! ಇದು ಬೆಳೆಯುವ, ಬೆಳಸುವ ನಿಲುವು ಕಾಣಯ್ಯಾ!

Badarinath Palavalli said...

'ಅವರವರ ಬೊಗಸೆಗೆ
ಅವರವರ ಮನಸಿಗೆ
ಸಿಕ್ಕಿದ್ದು ಅವರ ಪಾಲಿನ ಪಂಚಾಮೃತ'
ನಿಜವಾದ ಮಾತು.

ಸರಿಯಾದ ನಿಲುವು ತಾಳುವ ಶಕ್ತಿ ಕೊಡಲಿ ಎನಗೆ ವಿಧಾತನೂ!