Thursday, January 2, 2014

ಆ ಲಯ

ವಿಶಾಲ ಬಯಲ ನಡುವೆ
ಎತ್ತರಿಸಿದ ಜಗುಲಿಯ
ಮೇಲೆ ಆಕಾಶಕ್ಕೆ
ಮೊಗವಿಟ್ಟ ಮಂದಿರ,
ಕಥೆ ಹೇಳುವ ಕಲ್ಲು,
ಹಾಡುಲಿಯುವ ಚಿತ್ತಾರ..
ಎಲ್ಲದರ ಮೂಲ
ಒಳಗೆ ಗರ್ಭಗುಡಿಯಲಿ
ಉಳಿಪೆಟ್ಟಲಿ
ಹದಗೊಂಡ ದೇವಮೂರ್ತಿ.


ವಿಸ್ತರಣೆಯ ದಾಹಕೆ
ಸೈನ್ಯ ಪೊರೆದು, ರಕ್ತವೆರೆದು,
ಗಡಿಗಳ ಮೇರೆ ಮೀರಿದ,
ರಾಜಾಧಿರಾಜರ
ಕಟ್ಟಿದ್ದು ಕಳೆದೀತು
ಸಿಕ್ಕಿದ್ದು ಅಳಿದೀತು
ಎಂಬ ಅಳುಕನ್ನ
ಸೋಸಿ,
ದೇವರ ಮೊರೆಹೋದ
ಮೆರವಣಿಗೆಯಲ್ಲಿ
ಸಾಲು ಸಾಲು
ಶಿಲ್ಪಿಗಳ ಕುಶಲಕರ್ಮಿಗಳ
ಬದುಕು.
ಅಂತಃಸಾಕ್ಷಿಗೆ ನಡುಗಿದ
ರಾಜರು
ಮುಂಬರುವ ದಾಳಿಗೆ ಅಂಜಲಿಲ್ಲ.

ಬಯಲಲ್ಲಿ

ಚಿತ್ತರದಿ
ಬತ್ತಲಾದ ಆಲಯದ
ಮೈ ಗಾಯವ
ನೇವರಿಸುವ
ಎಳೆಬಿಸಿಲಿನಲ್ಲಿ
ಅದೇನು ಆಲ್ಕೆಮಿ..!
ಕಲ್ಲೇ ಬಂಗಾರ!

ಎಲ್ಲಿಯ ರಕ್ತದಾಹ
ಎಲ್ಲಿಯ ಸಾಮ್ರಾಜ್ಯ
ಎಲ್ಲಿಯ ಕಲ್ಲು
ಎಲ್ಲಿನ ಉಳಿ
ಸುತ್ತ ಬಯಲ
ನಡುವೆ ನೆಟ್ಟಗೆ ಗಟ್ಟಿಯಾಗಿ
ಎದ್ದು ನಿಂತ
ಆಲಯ.
ಹೊರಾಂಗಣಕ್ಕಿಂತ
ಮೊದಲು
ನವರಂಗದಲ್ಲೇ
ಮುಖದೋರುವ ಬೇರು,
ಹುಲ್ಲು, ಮಣ್ಣು.
ಹೊರಗೋಡೆಯ ಮಾತೇಕಿನ್ನು?
ಅಲ್ಲಿನದು ಬರಿಯ ಮಣ್ಣು.
ಹೆಸರಲ್ಲೇ ಲಯ
ಹುಟ್ಟಿದ್ದು ಬಯಲೇ
ಸೇರಲಿಕ್ಕಿರುವುದೂ ಅದೇ.

ಇವತ್ತಿನ ಆವೃತ್ತಿಯೇ ಬೇರೆ.
ಕಲ್ಲುಕುಟಿಗರು ಕಳೆದಿದ್ದಾರೆ,
ಅಕ್ಕಸಾಲಿಗದೇ ವಜನು,
ದೇವನೊಬ್ಬನೇ ಆದರೂ
ಬಗೆಬಗೆಯ ಹೊನ್ನು,
ಮಣಿ, ಕಿರೀಟ.
"ದೀನಗಿಂತ ದೇವ ಬಡವ"
ಹೀಗಂತ
ಸಿರಿವಂತರಿಂಗಿತ.
ಹಬ್ಬಸಾಲುಗಳಲ್ಲಿ
ಸಂತರ್ಪಣೆ, ಅಭಿಷೇಕ,
ಕಾಣಿಕೆ ಹುಂಡಿ ಭರ್ತಿ.
ಈಗಿನ ದಾಹಕ್ಕೆ
ಸಾಕ್ಷಿಯಿಲ್ಲ,,
ತೋರಿದರೆ ಟ್ಯಾಕ್ಸಿನವರ ದಾಳಿ

ಅಂತಃಸಾಕ್ಷಿ..!!!

ಹಾಗೆಂದರೇನು ಹೇಳಿ..!

4 comments:

Swarna said...

ನಮ್ಮಲ್ಲಿ ಬಹಳ ಜನರನ್ನು ಕಾಡುವ ಪ್ರಶ್ನೆ
ನೀವದನು ಆಲಯದಿಂದ ಬಯಲಿಗೆ ತಂದ ಪರಿ ಸೊಗಸು

Swarna said...

ನಮ್ಮಲ್ಲಿ ಬಹಳ ಜನರನ್ನು ಕಾಡುವ ಪ್ರಶ್ನೆ
ನೀವದನು ಆಲಯದಿಂದ ಬಯಲಿಗೆ ತಂದ ಪರಿ ಸೊಗಸು

sunaath said...

ನಿಮ್ಮ ಕಾವ್ಯಲಯಕ್ಕೆ ನಾನು ಶರಣು!

ಸಿಂಧು sindhu said...

ಪ್ರಿಯ ಕಾಕಾ, ಮತ್ತು ಸ್ವರ್ಣ.

ನಿಮ್ಮ ಆದರಕ್ಕೆ ಮತ್ತು ಪ್ರೀತಿಗೆ ನನ್ನ ಧನ್ಯವಾದಗಳು.
ಪ್ರೀತಿಯಿಂದ,
ಸಿಂಧು