Thursday, January 12, 2012

ಹೂವು ಚೆಲ್ಲಿ-ದ ಹಾದಿ

ಉದಾತ್ತ ಹೆಜ್ಜೆಗಳ
ಭಾರಕ್ಕೆ
ನಲುಗಿದ ಕಾಲ ಕೆಳಗಿನ ಹೂಗಳ ಬಣ್ಣ
ಮಾಸಲು ಮಾಸಲು,
ಆಗಸಕ್ಕೆ ಮುಖವೆತ್ತರಿಸಿದ
ಕನಸುಕೊಂಬೆಗಳ ತುದಿಗೆ
ಬಿರಿಯದ ಮೊಗ್ಗುಗಳ ಬಣ್ಣದ ಹಂಬಲು.
ಬೇರುಗಳ ಮಾತು ಬೇಡ
ಕಂಪೌಂಡಿಗೆ ಘಾತವಾಗುತ್ತೇಂತ
ಬೇರಿಳಿವ ಜಾತಿಯ ನೆಡುವುದಿಲ್ಲ.

ತೆರೆದ ಬಾಗಿಲಿನ
ಮುಖಮಂಟಪ
-ದ ಒಳಗೆ ಹರಿದ ದಾರಿ
-ಯ ಕೊನೆಗೆ
ಮುಚ್ಚಿದ ಕೊಠಡಿ
ತುಂಬ ಕಿಟಕಿಗಳು
ಭಾರದ ಕದ ತಿರುಗಣೆಯಲ್ಲಿ
ಸಿಕ್ಕಿಹಾಕಿಕೊಂಡಿದೆ
ತೆಗೆಯಲಾಗುವುದಿಲ್ಲ.
ಹೊರಗಿನ ಬೆಳಕು ಬೇಕು ಯಾಕೆ
ಒಳಗೆ ಝಗಮಗಿಸುವ ದೀಪ
ಏಸಿಯ ವೆಂಟು
ಬಾಯಲ್ಲಿ ಕರಗುವ ಐಸ್ಕ್ರೀಮು
ತಿನ್ನುತ್ತ
ನೆನಪಾಗುವ ನಿಂಬೆಹುಳಿ ಪೆಪ್ಪರ್ ಮಿಂಟು.

ದಾರಿಬದಿಯಲಿ ಹೂಬಿಟ್ಟ ಸಂಪಿಗೆಮರ
ಜಡಿದು ಕೂರಿಸಿದ್ದರೂ ಎಲ್ಲೋ ಸಂದಿನಲ್ಲಿ
ತೂರಿಬರುವ ಗಾಢ ಕಂಪು.
ಅರೆಗತ್ತಲ ಬೀದಿಯ
ಹೂವು ಸುರಿವ ಸಂಜೆಯಲಿ
ಜತೆಗೆ ಹೋದ ಒದ್ದೆ ಹೆಜ್ಜೆಗಳು
ಮೋಡ ತುಂಬಿದ
ಆಗಸದಲಿ ಕದ್ದು ಹೊಳೆವ
ತಿಂಗಳು
ಇರುಳ ಹೆರಳಿನ ತುಂಬ
ರಾತ್ರಿರಾಣಿ ಘಮಘಮಿಸಿ
ಅಲ್ಲಿ ಕತ್ತಲಲ್ಲೂ ಬೆಳಗು
ಕತ್ತಲಿಲ್ಲಿ ಒಳಗೂ ಹೊರಗೂ!

ಈ ನೆನಪಿನ ಮಾತು ಬೇಡ ಈಗ
ಇದೊಂದು ಹುಚ್ಚು ಮಂಪರು
ಮಲಗಲು ಒಳ್ಳೆ ಸ್ಲೀಪ್ ವೆಲ್ ಹಾಸಿಗೆಯಿದೆಯಲ್ಲ
ಸುಮ್ಮನೆ ಮಲಗು
ಬೆಳಿಗ್ಗೆ ಬೇಗ ಏಳಬೇಕು.

ಪಾಟಿನೊಳಗಿನ ಮಲ್ಲಿಗೆ ಬಳ್ಳಿಯ
ಕರುಣೆ
ದಿನದಿನವೂ
ಎರಡೆರಡೇ ಅರಳು ಮೊಗ್ಗು.

ಕಲ್ಲುಮುಳ್ಳು ಹಾದಿಯ
ನೋವನುಂಡು ನಡೆದವರು
ಹೂವು ಚೆಲ್ಲಿ-ದ ಹಾದಿಯ
ನುಣ್ಪು ದುಃಖದಿ
ಜಾರಿ ಬಿದ್ದರು,
ಉದಾತ್ತ ಹೆಜ್ಜೆಗಳು ಬಲು ಭಾರ!

4 comments:

Swarna said...

ತುಂಬಾ ಚೆನ್ನಾಗಿದೇ ಮೇಡಂ.
ಮೊದಲ ನಾಲ್ಕು ಸಾಲುಗಳ ಓದುತ್ತಿದ್ದಂತೆ
ಯಾವುದೋ ಲೋಖಕ್ಕೆ ಹೋದ ಅನುಭವ.
ರಾತ್ರಿ ರಾಣಿಯ ಕಂಪು ಈಗ ನೆನಪು ಮಾತ್ರ
ನಮಗೆ ಮುಖ್ಯ ಕಂಪೌಂಡಿನ ಗಾತ್ರ

sunaath said...

ನೆನಪೇ ಗಂಧಮಯ;
ವಾಸ್ತವತೆಗೆ ಕೆಲವೊಮ್ಮೆ
ಪ್ಲ್ಯಾಸ್ಟಿಕ್ ಹೂಗಳ ಮಾಲೆ!

Santhosh Rao said...

Tumba chennagide.. nice one

ಸಿಂಧು sindhu said...

@ gold 13 : ಹ್ಮ್ಮ್.. ಬೇಸರ... ಆದ್ರೆ ನಿಜ.
@ ಸುನಾಥ: ಗಂಧದ ಮಾತು ನೆನಪಿಸುವುದು ಇನ್ನೇನನ್ನೋ!
@ ಸಂತೋಷ್ ರಾವ್ : ಥ್ಯಾಂಕ್ ಯು