ಆಶಾಢದ ಕೊನೆಗೆ
ತೆರೆದಂತೆ ಕಂಡ
ತುಸು ಹೊಸ ದಾರಿ
ಸುತ್ತಿ ಬಳಸಿ ನಡೆದು
ಕೊನೆಗೆ
ಹಳೆಯ ಹೆದ್ದಾರಿಗಿಳಿದು
ಪಯಣ ಅಸಹನೀಯವಾಗಿ
ನಿಲ್ದಾಣದ ನೆರಳಿಗಿಳಿಯದೆ
ಕವಲೊಡೆದು
ಹೊರಟಾಗ
ಕಣ್ಣ ಕೊನೆಗೆ
ಶ್ರಾವಣದ ಹನಿ.
ಏನ ಹೇಳಲಿ
ಮತ್ತೆ ಮತ್ತೆ -
ಬರ’ದ ಬದುಕಿಗೆ
ನೆರೆಹಾವಳಿಯ ನೆರವು
ನೆನಪು ಸಂತ್ರಸ್ತ,
ಆ ಕಳೆದ ಕಾಲ ವ್ಯಸ್ತ, ವ್ಯರ್ಥ!
ಋತುವಿಲಾಸಕ್ಕೆ
ಸಂದ
ವಿಕ್ಷಿಪ್ತ ವಿಲಾಪವಿದು
ಪ್ರತೀ ತಿಥಿಯಲ್ಲೂ
ಅ-ಕ್ಷರವಾಗುತ್ತಾ
ಅದು ಹೇಗೋ
ಒಳಗಿನ ಕುದಿ ಕಳೆದು
ಆರುತಿರುವ ಬೆಂಕಿಯಂತಹ ನೆನಪು!
ಹೊಸವರ್ಷವೆಂಬ ಒಗಟು
-
ಅಕ್ಷರಗಳು ಕರಗಿ
ಧ್ವನಿಯಾಗಿ ಬೆಳಕಾಗಿ
ಹೊಳೆಹೊಳೆಯುತ್ತಾ ಹೊರಟಿವೆ
ಎಲ್ಲಿಗೋ!
ಇನ್ನಿಲ್ಲದ ಪಯಣದಂತೆ ಭಾಸವಾಗಿದೆ
ಕಂತುತ್ತಿರುವ ಭಾಸ್ಕರನ ತಣ್ಣನೆಯ
ಕೆಂಬಣ್ಣದ ಬೆಳಕಿನಲ್ಲಿ
ಸಾಗುತ್ತ...
8 comments:
ಬಹಳ ಸುಂದರವಾದ ಮತ್ತು ಅರ್ಥಗರ್ಭಿತ ಕವನ. ಬಾರದ ಬದುಕಿಗೆ ನೆನಪೊಂದೆ ಪಳೆಯುಳಿಕೆ.
ಸೂಪರ್
ಸಿಂಧು,
ಈ ಕವನವೇ ಕುದಿ ಕಳೆದು ಆರುತ್ತಿರುವ ಬೆಂಕಿಯಂತಿದೆ. ನೀವು ಬಳಸಿದ ಪ್ರತಿಮೆಗಳು ಅನನ್ಯವಾಗಿವೆ. ಶ್ರಾವಣದ ಹನಿ ಹೊಸ ಹೂವುಗಳನ್ನು ಬೆಳೆಸಿದೆ ಎನ್ನುವ ಭರವಸೆ ನನಗಿದೆ.
ಋತುಚಕ್ರ ಹೀಗೆ, ಬಿಸಿಲು, ಮಳೆ, ಒಮ್ಮೆ ಬರ, ಇನ್ನೂಮ್ಮೆ ನೆರೆ. ಚೆನ್ನಾಗಿದೆ ಕವನ
ಆಹಾ .. ಸುಂದರ ಕವನ ..
ನಿಮ್ಮ ಹಳೆಯ ಬರಹಗಳನ್ನು ಒದಿದೆ .. ಚೆನ್ನಾಗಿವೆ ..
ನಿಮ್ಮ ಟಪ್ಪೂವಿನ ಕಥೆ ಮತ್ತು ಫೋಟೊ ಸೊಪರ್ ..
ಪ್ರತಿಮೆಗಳನ್ನು ಬಳಸಿ ರಚಿಸಿದ ಕವನದಲ್ಲಿ ಕುದಿ ಕಳೆದು ಬೆ೦ಕಿಯ ಆರಿಸಿದಿರಿ. ಅಕ್ಷರ ಎನ್ನುವುದು ಪರಮಾತ್ಮನ ಹೆಸರು!
ಶುಭಾಶಯಗಳು
ಅನ೦ತ್
ಋತುಚಕ್ರದಂತೆಯೇ ಜೀವನ...........
ಒಮ್ಮೊಮ್ಮೆ ತಣ್ಣಗೆ ಒಮ್ಮೊಮ್ಮೆ ಬೆಚ್ಚಗೆ.........
ಮಳೆಬಂದಂತೆ ಖುಷಿ ತಂದಂತೆ
ಬೇಸಿಗೆ ಅಧಿಕವಾಗಿ ಭೂಮಿಯೇ ಬೆಂದಂತೆ...
ಚನ್ನಾಗಿದೆ.
nice one, hengo kanthappisikondittu istu idna!:)
Post a Comment