Monday, July 7, 2008

ಹುಲಿರಾಯನ ಆಕಾಶವಾಣಿ..

ಕೆಲದಿನಗಳ ಹಿಂದೆ 'ಸದ್ದಡಗಿದ ಶಿಕಾರಿಕೋವಿ' ಎಂಬ ಪುಸ್ತಕವನ್ನು ಓದಿದೆ. ಡಾ ಪ್ರಭಾಕರ ಶಿಶಿಲ ಅವರು ಬಡ್ಡಡ್ಕ(ಸುಳ್ಯ) ಅಪ್ಪಯ್ಯಗೌಡರ ಶಿಕಾರಿಯ ನೆನಪನ್ನು ಮನಃಸ್ಪರ್ಶಿಯಾಗಿ ನಿರೂಪಿಸಿ ಬರೆದಿರುವ ಪುಸ್ತಕ. ಕನ್ನಡದ್ದೇ ಆದ ಶಿಕಾರಿಯ ಕತೆ, ಮತ್ತು ಆ ಕಾಲದ ಕಾಡು, ಪ್ರಾಣಿಗಳು, ಮತ್ತು ಇತರೇ ವನಸಂಪತ್ತು, ಜೀವನಶೈಲಿಯ ಬಗೆಗಿನ ಕುತೂಹಲದಿಂದ ಈ ಪುಸ್ತಕ ಓದತೊಡಗಿದೆ. ಒಂದೊಂದು ಸನ್ನಿವೇಶವನ್ನೂ ಕಣ್ಣಿಗೆ ಕಟ್ಟುವ ಹಾಗೆ, ಬದುಕು,ಬೇಟೆ,ಹಳ್ಳಿ ಜೀವನ ಮತ್ತು ಕಾಡನ್ನ ಸೂಕ್ಷ್ಮ ವಿವರಗಳನ್ನೂ ಬಿಡದೆ ಬರೆದಿದ್ದಾರೆ. ರೋಮಾಂಚಕವಾದ ಶಿಕಾರಿ ಕತೆಯನ್ನು ಓದುತ್ತ ಓದುತ್ತ ಮನಸ್ಸಿಗೆ ತುಂಬ ಬೇಜಾರಾಗಿಬಿಟ್ಟಿತು. ನಮ್ಮ ಸಾಕಷ್ಟು ಅನುಭವಿ ಮತ್ತು ದೊಡ್ಡ ಬೇಟೆಗಾರರೆಲ್ಲ, ನರಭಕ್ಷಕ ಅಥವಾ ಕಂಟಕಪ್ರಾಯವಾದ ಹುಲಿಗಳನ್ನೇ ಬೇಟೆಯಾಡಿರುವುದು ನಿಜವಾದರೂ, ನಾವು ಮನುಷ್ಯರು ವನ್ಯಜೀವಿಗಳ ನಿವಾಸವಾದ ಕಾಡನ್ನು ನಮ್ಮ ಪ್ರಗತಿಪರ ಉದ್ದೇಶ/ದುರುದ್ದೇಶಗಳಿಗೆ ಖಾಲಿ ಮಾಡುತ್ತ, ಅವು ತಮ್ಮ ಜಾಗದಿಂದ ಹೊರಬಂದು ಆಹಾರ ಹುಡುಕತೊಡಗಿದರೆ ಬೇಟೆಯಾಡಿ ಕೊಲ್ಲುವುದು ಎಷ್ಟು ನ್ಯಾಯ.. ? ಇದರ ಜೊತೆಜೊತೆಗೇ "ನೆಲ ಕಚ್ಚಿದ ಗುಬ್ಬಚ್ಚಿ" ಎಂಬ ಪಕ್ಷಿ ಶಾಸ್ತ್ರಜ್ಞ ಸಲೀಂಅಲಿಯವರ ಅನುವಾದಿತ ಜೀವನ ಚರಿತ್ರೆ ಓದಿದೆ. ಅನುವಾದಕರು ಎನ್.ಪಿ.ಶಂಕರನಾರಾಯಣ ರಾವ್. ಸಲೀಂ ಅಲಿಯವರ ಬದುಕು ಪಕ್ಷಿ ಸಂಕುಲದಷ್ಟೇ ಆಸಕ್ತಿಯುತವಾಗಿ ಓದಿಸಿಕೊಂಡುಹೋಯಿತು. ವಿವರಗಳು ಬದಿಗಿಟ್ಟು ಆ ಪುಸ್ತಕದಲ್ಲಿ ಓದಿದ ರಾಜರ, ರಾಜಮನೆತನಗಳ, ಜಮೀನುದಾರರ, ಬ್ರಿಟಿಶ್ ಅಧಿಕಾರಿಗಳನ್ನು ಮನತಣಿಸುವವರ ಬೇಟೆಯ ಕತೆಗಳು, ಪಕ್ಷಿಗಳ ಮಾರಣಹೋಮ ಇತ್ಯಾದಿ ಎಲ್ಲ ಓದಿ ಮನಸ್ಸು ಮುದುಡಿಹೋಯಿತು ಕೂಡಾ.
ಮನರಂಜನೆಗೆ ಇನ್ನೊಂದು ಜೀವಿಯನ್ನ ಕೊಲ್ಲುವ, ಹವ್ಯಾಸವಾಗಿ ಬೆಳೆಸಿಕೊಂಡಿರುವ ಒಂದೇ ಜೀವಪ್ರಬೇಧವೆಂದರೆ ಮನುಷ್ಯರು ಅಂತ ಕಾಣುತ್ತದೆ.
ಮತ್ತೆ ಮರುವಾರ ಪುಸ್ತಕದಂಗಡಿಗೆ ಹೋದೆ. ಪ್ರಾಣಿಗಳ ಬಗ್ಗೆ ಮತ್ತು ನಮ್ಮ ಉಲ್ಲಾಸಕಾರಂತರಂತಹ ವನ್ಯಜೀವಿಶಾಸ್ತ್ರಜ್ಞರ ಕೆಲಸ ಕಾರ್ಯಗಳ ಬಗೆಗೆ ಏನಾದರು ಪುಸ್ತಕ ಸಿಕ್ಕುತ್ತಾ ನೋಡಬೇಕು ಅಂತ. ನಾನು ಚಿಕ್ಕವಳಿದ್ದಾಗ ಕೆಲ ಪತ್ರಿಕೆಗಳಲ್ಲಿ ಹುಲಿಗಳಿಗೆ ಕಾಲರ್ ತೊಡಿಸಿದವರು ಎಂಬ ತಲೆಬರಹದಡಿಗಳಲ್ಲಿ ಇವರ ಬಗ್ಗೆ ಓದಿದ ನೆನಪು. ಎಲ್ಲ ಬಿಟ್ಟು ಇವರು ಹುಲಿಗೇಕೆ ಕಾಲರ್ ತೊಡಿಸಿದರೋ ಎಂಬ ಉಡಾಫೆಯಲ್ಲಿ ಅದನ್ನ ಓದಿರಲಿಲ್ಲ ನಾನು.
ಈಗ ಶಿಕಾರಿಗಳ ಬಗ್ಗೆ ಓದಿದ ನಂತರ ಈ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಿತು. ಹುಲಿರಾಯನ ಬದುಕು, ಹುಲಿರಾಯನ ಆಕಾಶವಾಣಿ, ಎಂಬ ಎರಡು ಹುಲಿಗಳ ಬಗೆಗಿನ ಪುಸ್ತಕವೇ ಸಿಕ್ಕಿತು. ಎರಡರ ಮೂಲ ಸೆಲೆಯೂ ಉಲ್ಲಾಸ ಕಾರಂತರೇ. ಅವರ ಇಂಗ್ಲಿಷ್ ಪುಸ್ತಕದ ಅನುವಾದ ಮಾಡಿದವರು ಟಿ.ಎಸ್. ಗೋಪಾಲ್. ಮತ್ತೊಂದು ಪುಸ್ತಕದ ನಿರೂಪಣೆಯ ಹೊಣೆ ಹೊತ್ತವರೂ ಇವರೆ. ನನ್ನ ಕುತೂಹಲಕ್ಕೆ ಈ ಪುಸ್ತಕಗಳು ಬಹು ಒಳ್ಳೆಯ ಆಸರೆಯಾಗಿ ಒದಗಿಬಂದವು.

ಹುಲಿರಾಯನ ಬದುಕು ಓದಿಮುಗಿಸಿದ್ದೇನೆ. ತಳಮಳ ಸ್ವಲ್ಪ ಕಡಿಮೆಯಾಗಿದೆ. ಎಲ್ಲ ಮುಗಿದುಹೋಯಿತು ಎಂಬ ಶೂನ್ಯಭಾವ ಇಲ್ಲ ಈಗ. ಏನನ್ನೋ ಮಾಡಬಹುದು, ಮಾಡಬೇಕು ಎಂಬ ಅನಿಸಿಕೆ ದಟ್ಟವಾಗಿ ನಿಂತಿದೆ.
ತನ್ನ ಸಂಪೂರ್ಣ ಆವಾಸವಾದ ಕಾಡಿನ ಶೇಕಡಾ ಐದು ಭಾಗವಷ್ಟೇ ಈಗಿನ ಹುಲಿಗಳಿಗೆ ಉಳಿದಿದೆಯಂತೆ. ಉಳಿದಿರುವ ಅದರಲ್ಲೂ ಹೊರಗಣ ಕಾಡು ಮನುಷ್ಯರ ಸಂಚಾರ ಮತ್ತು ವ್ಯವಹಾರಗಳಿಗೆ ಪಕ್ಕಾಗಿದೆಯಂತೆ. ನಮ್ಮ ವನ್ಯಜೀವಿಗಳು ಎಲ್ಲಿ ಬದುಕಬೇಕು? ಸಂತ್ರಸ್ತ ಜನರನ್ನೇ ಕೇಳುವವರು ಗತಿಯಿಲ್ಲ. ಕಾಡು ಪ್ರಾಣಿಗಳು ಯಾರಿಗೆ ಬೇಕು?
ಸತ್ಯವೇನೆಂದರೆ, ನಾವು ಮನುಷ್ಯರು ಇಂದು ನಮಗೆ ಬೇಕಾದ ಗುರಿಗಳ ಹಿಂದೆ ನಾಗಾಲೋಟದಿಂದ ಓಡುವ ಎಲ್ಲ ಸೌಲಭ್ಯ, ಸವಲತ್ತೂಗಳೂ ನಾವು ಬದುಕಿದ್ದರೆ ಮಾತ್ರ ಕೆಲಸ ಮಾಡುತ್ತವೆ. ಭೂಮಿಯ ಮೇಲಿನ ಸೃಷ್ಟಿ ವೈವಿಧ್ಯತೆಯೇ ಭೂಮಿಯ ಫಲವತ್ತತೆ, ಋತುಮಾನ, ಜೀವ ನಿಯಂತ್ರಣ ಮತ್ತು ಜೀವೋತ್ಪಾದನೆಯ ಎಲ್ಲದರ ಬೆನ್ನೆಲುಬು. ನಾವು ಅದನ್ನೇ ನುಂಗಿ ನೀರು ಕುಡಿಯುತ್ತಾ ಕೂತ ಮರದ ಕೊಂಬೆ ಕಡಿಯುವ ಕೆಲಸದಲ್ಲಿ ಸಿಕ್ಕಾಪಟ್ಟೆ ಚುರುಕಾಗಿದ್ದೇವೆ.
ಬರಿಯ ಹುಲಿಯಿಂದ ಪ್ರಪಂಚ ನಡೆಯುತ್ತಿಲ್ಲ. ಮನುಷ್ಯನಿಂದಂತಲೂ ಖಂಡಿತ ಅಲ್ಲ. ಎಲ್ಲ ಜೀವವೈವಿಧ್ಯಗಳ ಒಂದರೊಡನಿನ್ನೊಂದರ ಹೊಂದಾಣಿಕೆಯೇ ನಮ್ಮ ಜೀವರಹಸ್ಯ. ಹುಲಿಗಳು ಈ ರಹಸ್ಯ ಬಿಡಿಸುವ ಮತ್ತು ವೈವಿಧ್ಯತೆ ಕಾಪಾಡುವ ಮುಖ್ಯ ಕೊಂಡಿಗಳು. ಒಂದು ಹುಲಿಯ ಉಳಿವು, ಅದರ ಸುತ್ತಲಿನ ಆಹಾರ/ಬೇಟೆಪ್ರಾಣಿಗಳ ಉಳಿವಿನ ಮೇಲೆ ನಿಂತಿರುತ್ತದೆ. ಆ ಬೇಟೆ ಪ್ರಾಣಿಗಳು ಕಾಡಿನ/ಸಸ್ಯ ಸಮೃದ್ಧತೆಯ ಮೇಲೆ ಅವಲಂಬಿಸಿರುತ್ತವೆ. ಕಾಡು ಮಳೆ/ಬಿಸಿಲುಗಳ ಮೇಲೆ. ಈ ಎಲ್ಲವೂ ನಮ್ಮ ಮೇಲೆ ಮಾಡುವ ಪರಿಣಾಮವನ್ನು ಪ್ರತ್ಯೇಕವಾಗಿ ತೋರಿಸಿಕೊಡಬೇಕಾದ್ದಿಲ್ಲ ಅಲ್ಲವೇ? ಇದು ಈ ಪುಸ್ತಕದಿಂದ ನಾನು ಕಲಿತ ಪಾಠ.

ಈ ಬಗೆಗಿನ ಹೆಚ್ಚಿನ ಮಾಹಿತಿ, ನಾವು ಮಾಡಬಹುದಾದ ಸಣ್ಣ ಸಣ್ಣ ಆದರೆ ಅತ್ಯವಶ್ಯಕ ಜೀವನಶೈಲಿಯ ಬದಲಾವಣೆಗಳು, ಸಾಧ್ಯವಾದಾಗ ವನಜೀವನ ಸಂರಕ್ಷಣ ಕಾರ್ಯದಲ್ಲಿ ತೊಡಗಿರುವವರಿಗೆ ನೀಡಬಹುದಾದ ಸಹಾಯ ಎಲ್ಲವನ್ನೂ ಈ ಪುಸ್ತಕ ಪ್ರೀತಿಯಿಂದ ಹೇಳಿಕೊಡುತ್ತದೆ.ಸಮಯಾವಕಾಶವಾದಾಗ ದಯವಿಟ್ಟು ಈ ಪುಸ್ತಕ ಕೊಂಡು ಓದಿ. ಇಲ್ಲಿ ಆಳ ಅಧ್ಯಯನ ಮತ್ತು ಪರಿಶೀಲನೆಯ ಸಾರಸರ್ವಸ್ವವಿದೆ.

ನಮ್ಮ ವನ್ಯಜೀವನ ಸಂರಕ್ಷಣೆಯ ಬಗೆಗಿನ ಹೆಚ್ಚು ಮತ್ತು ನಿಖರ ಮಾಹಿತಿಗಳು ಈ ವೆಬ್ ಸೈಟಿನಲ್ಲಿ ಸಿಗುತ್ತವೆ. http://www.wildlifefirst.info/about.htm

6 comments:

VENU VINOD said...

ಸಿಂಧು,
ಕೆದಂಬಾಡಿ ಜತ್ತಪ್ಪ ರೈಗಳು ಬರೆದ ಬೇಟೆಯ ನೆನಪು ಸಿಕ್ಕರೆ ಓದಿ. ಹುಲಿ ಶಿಕಾರಿಯ ಅಪರೂಪದ ಪ್ರಸಂಗಗಳನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ

Sandeepa said...

ಚಿಂತನೆಗೆ ಹಚ್ಚುವ ವಿಚಾರ..

ಲೇಖನವನ್ನು ಓದಿ ಮುಗಿಸುತ್ತಿದ್ದ ಹಾಗೆ, ಜೇಬಿನೊಳಗಿರುವ leather walletನ್ನು ಸುಮ್ಮನೆ ಒಮ್ಮೆ ಮುಟ್ಟಿ ನೋಡಿದೆ..

ಒಳ್ಳೆಯ ಲೇಖನ..

ಸಿಂಧು sindhu said...

ವೇಣು,
ಹೌದು ಆ ಬಗ್ಗೆ ಕೇಳಿದ್ದೇನೆ ಇನ್ನೂ ಓದಿಲ್ಲ.

ಅಲ್ಪಜ್ಞ,
ಥ್ಯಾಂಕ್ಸ್,


ಪ್ರೀತಿಯಿಂದ
ಸಿಂಧು

Anonymous said...

ಒಮ್ಮೆ ಆಕಾಶವಾಣಿಯಲ್ಲೂ "ಹುಲಿರಾಯನ ಆಕಾಶವಾಣಿ" ಕಂತುಗಳಲ್ಲಿ ಬಿತ್ತರವಾಗಿತ್ತು. ಜಿಮ್ ಕಾರ್ಬೆಟ್ಟನ ಬೇಟೆಯ ನಿರೂಪಣೆಯಂತೆ ಇದು ರೋಚಕವಾಗಿಯೂ, ಮಾಹಿತಿಯುತವಾಗಿಯೂ ಆಗಿತ್ತು. ನೀವು ಇದನ್ನ ಕೇಳಿದ್ರಾ..?

ಗಣೇಶ್.

Anonymous said...

Good writing!. Writing on different subjects and varieties makes life more interesting. I think you have this quality.

BTW, Are you from Sagar? (Karnataka)?

Regards
Dr.D.M.Sagar (Original)

ಸಿಂಧು sindhu said...

ಗಣೇಶ್,

ಸ್ಪಂದನೆಗೆ ಧನ್ಯವಾದಗಳು. ಇಲ್ಲ ನಾನು ಆಕಾಶವಾಣಿಯ ಕಾರ್ಯಕ್ರಮ ಕೇಳಿರಲಿಲ್ಲ. ಈಗ ವಾರದ ಮೊದಲು ಓದಿ ಮುಗಿಸಿದೆ. ತುಂಬ ಚೆನ್ನಾಗಿದೆ. ಬರಹ ನಿರೂಪಣೆಯೂ ಆಸಕ್ತಿಕರವಾಗಿದೆ.

ಡಾ||ಡಿ.ಎಂ.ಸಾಗರ್,

ಧನ್ಯವಾದಗಳು. ಹೌದು ಅದು ಬರೆಯಲೂ ಖುಶಿ ಕೊಡುವ ವಿಚಾರವೇ. ನನ್ನ ಮಿತಿಯೇ ಜಾಸ್ತಿ, ಸಾಮರ್ಥ್ಯ ಬಹಳ ಪುಟ್ಟದು. ಬರೆವಾಗ ನನ್ನ ಮನಸ್ಸಿಗೆ ಹಿತ ತಂದಿದ್ದನ್ನೇ ಇಲ್ಲಿ ಪೋಸ್ಟ್ ಮಾಡುತ್ತೇನೆ.

ಹೌದು ನನ್ನ ಹುಟ್ಟೂರು ಸಾಗರವೆ. ಈಗ ಬದುಕು ಹಬ್ಬಿರುವುದು ಸಧ್ಯಕ್ಕೆ ಬೆಂಗಳೂರಿನಲ್ಲಿ.

ಪ್ರೀತಿಯಿಂದ
ಸಿಂಧು