Thursday, June 26, 2008

ಅಶ್ರುತ ಅನುರಣನ.

ಹಸಿರು, ಮಳೆ, ಗುಡ್ಡ, ಹಿನ್ನೀರು
ಹಣ್ಣು,ಜೇನು,ಗಾಳಿ,ಮಳೆ, ಬೆಳದಿಂಗಳ ಬಾಲ್ಯ,
ಮಾವನೊಡನೆ ಮುನಿಸು, ಅತ್ತೆಯೊಡನೆ ಸೊಗಸು,
ಅಜ್ಜನ ಕತೆ, ಅಮ್ಮಮ್ಮನ ಕೊಂಡಾಟ,
ರಜೆಯ ಮಜದ ಮೂರ್ತ ರೂಪ
ನನ್ನದೇ ಊರೆನಿಸಿದ್ದು
ಇವತ್ತು
ನನ್ನದಲ್ಲ, ...!!?? :( :(

ಅದೇ ಹಸಿರು, ಕೊಂಚ ಧೂಳುಬಡಿದಿದೆ
ಅದೇ ಮಳೆ, ಏನೋ ಸ್ವಲ್ಪ ಹಿಂಚು ಮಿಂಚು
ಅದೇ ಗುಡ್ಡ, ಅಲ್ಲಲ್ಲಿ ಬೋಳಾಗಿದೆ
ಅದೇ ಹಿನ್ನೀರು, ಸ್ವಲ್ಪ ಸವುಳಾಗಿದೆ
ಹಣ್ಣು ಜೇನು ಗಾಳಿ ಮಳೆ ಬೆಳದಿಂಗಳು
ಹಾಗೇ ಇರಬಹುದೇನೋ
ಹೋಗಿ ರುಚಿ ನೋಡುವವರು ಯಾರು,ಯಾವಾಗ?


ಸಂಬಂಧಗಳು ರೇಷಿಮೆಯಂತೆ-
ಅಜ್ಜನ ಕತೆಯದೇ ರೂಪಕ;
ಬಾಲ್ಯದ ಜೋಕಾಲಿ ಜೀಕಿ ಮುಗಿಸಿ,
ಬದುಕಿನ ಏರು ಹತ್ತುತ್ತಾ
ಉಸಿರುಬಿಡುತ್ತಿರುವವಳಿಗೀಗ ಹೌದೇಹೌದೆನಿಸುತ್ತಿದೆ:
ಸಂಬಂಧಗಳು ರೇಷಿಮೆಯಂತೆ-
ಸುಲಭವಾಗಿ ಸಿಕ್ಕಾಗುತ್ತವೆ,
ಕಡಿದ ಮೇಲೆ ಜೋಡಿಸಲಾಗದು.
ಮೊನ್ನೆ ಮೊನ್ನೆ
ನಕ್ಕಂತೆ ಅನಿಸಿದ ನಗು,
ಆಡಿದ ಮಾತು, ನೋಡಿದ ನೋಟ
ಎಲ್ಲ ಯಾವಾಗ ಹೇಗೆ ಬದಲಾಯಿತು,
ಗೊತ್ತಾಗುತ್ತಿಲ್ಲ!
ಕೂತು ಕತೆಹೇಳಿ ತರ್ಕಿಸಲು ಅಜ್ಜನಿಲ್ಲ,
ಅಮ್ಮಮ್ಮ ಅವನ ಹಿಂದೆಯೇ ಹೊರಟ ಹಾಗಿದೆ,

ಉಳಿದೆಲ್ಲರೂ ಬದಲಾಗುವ ಕಾಲದ
ಮುಳ್ಳು ಹಿಡಿದು ನೇತಾಡುತ್ತಾ
ಮನದ ತುಂಬ
ಪ್ರೀತಿಯ ಬಂಧವೊಂದರ ಸೂತಕ.


ಮನುಷ್ಯರು ಬದಲಾಗಬಹುದು
ನಿನ್ನೆಯಿದ್ದವರು ಇಂದಿಲ್ಲ,
ಇಂದಿನ ನಾವು ನಾಳೆಗೆ ಸಲ್ಲ,
ಮರ,ಗುಡ್ಡ,ಮಳೆ, ಕಾಡು ಹಾಗಲ್ಲವಲ್ಲ..
ಸೂತಕದ ಒಳಮನೆಯಲ್ಲಿ
ನೆನಪಿನ ದೀಪದ ಮಂದ ಬೆಳಕು!
ಅಲ್ಲಿ ಬೇಕೆಂದಾಗ
ಹೊರಗಿನ ಹಂಗಿಲ್ಲದ
ಅಜ್ಜ,ಅಮ್ಮಮ್ಮ,ಕಾಡು,ಕತೆ,ತಿರುಗಾಟ,
ಅಕ್ಕರೆಯ ಬಂಧದ ಅಶ್ರುತ ಅನುರಣನ.

11 comments:

ಶಾಂತಲಾ ಭಂಡಿ (ಸನ್ನಿಧಿ) said...

ಸಿಂಧು...
ಆಹಾ!
ನುಡಿಮುತ್ತಿನಂಥ ಸಾಲುಗಳು.
ಯಾವುದು ಹೇಗೇ ಹೋದ್ರೂ/ ಇದ್ರೂ ನಿನ್ನೆಗೆ, ಇವತ್ತಿಗೆ, ನಾಳೆಗೂ ಪ್ರಕೃತಿ ಮಾತ್ರ ಯಾವುದೋ ರೂಪದಲ್ಲಿ ಸಾಂತ್ವನ ಹಸ್ತ, ಒಂದಿಷ್ಟು ಭರವಸೆ ಮಡಿಲು.
ಚಿಂದಕ್ಕನ ಚಂದ ಚಾಲುಗಳು...ಚೊಲೊ ಇದ್ದು :)

ಯಜ್ಞೇಶ್ (yajnesh) said...

ಸಿಂಧು,

ತುಂಬಾ ಚೆನ್ನಾಗಿದ್ದು

Anonymous said...

"ಸಂಬಂಧಗಳು ರೇಷಿಮೆಯಂತೆ - ಸುಲಭವಾಗಿ ಸಿಕ್ಕಾಗುತ್ತವೆ, ಕಡಿದ ಮೇಲೆ ಜೋಡಿಸಲಾಗದು"
ಅರ್ಥಪೂರ್ಣವಾದ ಸಾಲುಗಳು...

ಕಡಿಯುವ ಮೊದಲು ಸ್ವಲ್ಪ ವಿವೇಕದಿಂದ ಯೋಚಿಸಿ. ಎಲ್ಲ ನೋಟಗಳ ಆಚೆ ಇರಬಹುದಾದ ಚಿತ್ರವನ್ನು ತಿಳಿಯುವ ಪ್ರಯತ್ನ, ತಾಳ್ಮೆ ಮತ್ತು ಸೌಜನ್ಯ ಇರಲಿ.

Shree said...

yaako ellarU onde mooDnalliro hangide! maLegaalada prabhaavavaa? :P

Anonymous said...

namaskara banavasi balaga dinda. Baro July 6 ne taariku, Enguru blog tandadinda ondu chikka karyakrama bengalurinalli.
tammannu haagu invite maadalu e msg.

http://enguru.blogspot.com/2008/06/blog-post_22.html

bengaluralli idre,, tappade banni

ವಿನಾಯಕ ಭಟ್ಟ said...

ನೀವೂ ಅಜ್ಜಿಗೆ ಅಮ್ಮಮ್ಮ ಅಂತೀರಾ? ನಾನೂ ಹಾಗೇ ಕರೆಯೋದು.

ಅಮರ said...
This comment has been removed by the author.
ಅಮರ said...

ನನ್ನಮ್ಮ ಅವಳಮ್ಮನನ್ನ ಹಿಡಿ ಮಣ್ಣಲ್ಲಿ ಮಲಗಿಸಿ, ಕಣ್ತುಂಬ ಉಕ್ಕುವ ನೆನೆಪುಗಳಿಗೆ ಸೇರಗನೊತ್ತಿ ಆಡಿದ ಮಾತುಗಳು ನೆನಪಾದವು.
-ಅಮರ

ಸಿಂಧು sindhu said...

ಸ್ಪಂದಿಸಿದ ಎಲ್ಲರಿಗೂ ಪ್ರೀತಿಯ ವಂದನೆಗಳು.

ಶಾಂತಲಾ,
ಪ್ರಕೃತಿ ಕಲಿಸುವ ಪಾಠ, ಜೀವನಪ್ರೀತಿ ಇಷ್ಟೇ ಅಂತ ಹೇಳಲು ಬರೊಲ್ಲ ಅಲ್ವಾ. ಥ್ಯಾಂಕ್ಸ್ ನಿನ್ನ ಅನಿಸಿಕೆಗಳಿಗೆ.

ಯಜ್ಞೇಶ್,
:)

ಅನಾಮಿಕ ಓದುಗರಿಗೆ,
ನಿಮ್ಮ ಸಲಹೆ ನಿಜ. ಎಷ್ಟೋ ಬಾರಿ ನಾವು ಸಮಾಧಾನದಲ್ಲಿ ಕೂತಾಗ ವಿಚಾರಕ್ಕೆ ನಿಲುಕುವುದು, ಸಂದರ್ಭಕ್ಕೆ ಬೇಕಾದಾಗ ಅರಿವಾಗುವುದಿಲ್ಲ. ತಾಳ್ಮೆ ಮತ್ತು ಸೌಜನ್ಯ ಬಹಳ ಕಷ್ಟಸಾಧ್ಯ ಸ್ವಭಾವಗಳು. ನನಗಂತೂ ಅದನ್ನು ಮೈಗೂಡಿಸಿಕೊಳ್ಳುವುದಕ್ಕೆ ಬಹಳ ಸಮಯ ಬೇಕಿದೆ ಇನ್ನೂ. ಕಲಿಕೆಯ ಹಾದಿಯಲ್ಲಿ ನನ್ನದು ಮೊದ ಮೊದಲ ಹೆಜ್ಜೆ.

ಶ್ರೀ,
ಮಳೆಗಾಲ ಏನೇನು ಮಾಡುತ್ತೋ ಹೇಳುವುದು ಹೇಗೆ.
ಆದರೆ ನನ್ನ ಮೂಡಿಗೆ ಅಜ್ಜಿಯೇ ಕಾರಣ.

ಬನವಾಸಿಬಳಗಕ್ಕೆ
ನಿಮ್ಮ ಪ್ರಯತ್ನಕ್ಕೆ ಒಳ್ಳೆಯದಾಗಲಿ.

ವಿನಾಯಕ ಭಟ್ಟರಿಗೆ,
ಹೌದು. ನನ್ನ ಇಬ್ಬರು ಅಜ್ಜಿಯರನ್ನೂ ಅಮ್ಮಮ್ಮನೆಂದೇ ಕರೆಯುವುದು.

ಅಮರ,
ತಲೆಮಾರಿನ ಕೊಂಡಿ ಕಳಚುವಾಗಿನ ತಳಮಳಗಳೇ ಬೇರೆ..
ಎಲ್ಲ ಅಮ್ಮನೂ ತನ್ನ ಅಮ್ಮನ ಕೊನೆಗಾಲಕ್ಕೆ ಹೀಗೆಯೇ ಮರುಗುತ್ತಾಳೇನೋ. ಎಲ್ಲಕ್ಕು ಬೆನ್ನಾಗಿ ನಿಂತ ಅಮ್ಮನೇ ಪುಟ್ಟ ಮಗುವಿನಂತಾಗುವ ಸಂದರ್ಭ ತಲ್ಲಣಕ್ಕೆ ದೂಡುತ್ತದೆ.

ಪ್ರೀತಿಯಿಂದ
ಸಿಂಧು

Shashi Dodderi said...

hi, sindhu, this is one of your finest writing. I felt this was honest and straight. Excellent usage of words and brought a contrast to the poem. Each stanza was strengthened by the previous one and climax was built in a appropriate way. No big fancy words. Good work.

ಸಿಂಧು sindhu said...

ಪ್ರೀತಿಯ ಶಶೀ,

ನಿನ್ನ ಪ್ರೀತಿಯ ಮಾತುಗಳಿಗೆ ಏನು ಹೇಳಲೂ ತೋಚುತ್ತಿಲ್ಲ.
ತಳಮಳದ ಕ್ಷಣಗಳು ಅಕ್ಷರದಲ್ಲಿ ಹೊಮ್ಮಿದ್ದು ಅವು.
ಎಂದು ಸಿಗುವುದು ನಾವು? ಎಷ್ಟೆಲ್ಲ ಮಾತಾಡಬೇಕಿದೆ..
ಪಮ್ಮಿಗೆ ನನ್ನ ಪ್ರೀತಿ ತಿಳಿಸು.

ಪ್ರೀತಿಯಿಂದ
ಸಿಂಧು