ಎಲ್ಲ ಬರೆದಿದ್ದಾರೆ ಕಳೆದ ನಿನ್ನೆಗಳು ಬರುವ ನಾಳೆಗಳು ಇಂದು ಹನ್ನೆರಡು ಗಂಟೆಗೆ ಸರಿಯಾಗಿ ಬಂದು ತುಂಬಿಕೊಳ್ಳುವ ಮೆಸೇಜುಗಳು ಎಲ್ಲದರಲ್ಲೂ -ಹೊಸವರ್ಷವಂತೆ ಹೊಸ ಬೆಳಗಂತೆ!
ನಿದ್ದೆಗೊಮ್ಮೆ ನಿತ್ಯಮರಣ ಎದ್ದಸಲ ನವೀನ ಜನನ ಎಂದ ಹಿರಿಮನಸು, ಇದು ಬರಿ ಬೆಳಗಲ್ಲೋ ಅಣ್ಣಾ ಅಂತ ಪ್ರತಿ ಬೆಳಗಿಗೂ ಮಣಿಯಿತು.
ಹೊಸತು ಬರಲಿದೆ ಎಂದು ವರ್ಷದ ಯಾವುದೋ ನಿರ್ದಿಷ್ಟ ತೇದಿಯಂದು ಎಲ್ಲ ಸಂಭ್ರಮದಿ ಕಾದಿದ್ದಾರೆ, ಪಟಾಕಿ, ಹಾಡು, ಕುಣಿತ, ನಿಶೆ ಎಲ್ಲದರ ಸಂಗಮದಿ..
ಹಳೆಬೇರು ಹೊಸಚಿಗುರು ಕೂಡಿರಲು ಮರಸೊಬಗೆಂದು ಹಿರಿಮನಸು ದಿನಾ ಬೆಳಿಗ್ಗೆಯೂ ಗುನುಗಿತು ಅಂತಃಪುರಗೀತೆಯಾಗಿ!
ಈ ಎಲ್ಲ ಹಿರಿಚೇತನಗಳ ಬೆಳಕಲ್ಲಿ ಅದ್ದಿ ತೆಗೆದು ಕಣ್ಣರಳಿದೆ ನನ್ನದು. ಅಚ್ಚರಿ ಸಂತಸ!
ದಿನದಿನದ ಚೆಲುವಿನ ಸವಿ
ಹನಿಹನಿಯಾಗಿ ಬನಿ ಇಳಿಯುತ್ತಿದ್ದರೆ
ನಾನಿಲ್ಲಿ ಕಾದಿದ್ದೇನೆ ನಾಲಿಗೆ ಚಾಚಿ,
ಕಂಬನಿಯ ಉಪ್ಪು ಹನಿಯ ಒರೆಸಿಕೊಳ್ಳುತ್ತಾ..
ದಿನದಿನವೂ
ಹೂವಿನಲಿ, ಚಿಗುರಿನಲಿ, ಇಬ್ಬನಿಯಲಿ, ಚೆಂಬಿಸಿಲಲಿ..
ಹಣ್ಣೆಲೆಯಲಿ, ದೋರುಗಾಯಲಿ, ಕಳಿತ ಫಲದಲಿ, ಗಿಳಿಕಚ್ಚಿತಿಂದ ಅರೆಹಣ್ಣಲಿ, ಮುಳ್ಳಲಿ,ಬಿಸಿಲಲಿ,ಕೊರೆವಚಳಿಯಲಿ,
ನೋವಲಿ,ಮನಸು ಮುದುಡಿ ಮುಪ್ಪಾದ ಚಣಗಳಲಿ..
ಒಳಿತೆಂಬುದುದೇ ಕೆಡುಕೆಲ್ಲದಕೆ ವಿನಾಶವ ತರುವ ಉಶೋದಯದ ಚೆಲ್ ಬೆಳಕಿನ ಓಕುಳಿಗೆ...
ಸುತ್ತೆಲ್ಲ ಹೂಬಿರಿದು, ಬೆಳಕು ಹೊಳೆದು, ತಂಪಿನ ಘಮ.
ರಾತ್ರೆಯ ನೋವಿಗೂ ಇಲ್ಲಿದೆ ಬೆಚ್ಚನೆ ಮಡಿಲು,
ಅಳುವ ಮರೆತು ಹೋಗಲು, ಕಣ್ಣೊರೆಸಿ ನಗಲು,
ಬಂದಿದೆ ಹೊಸಹಗಲು..
ಈ ಇಬ್ಬನಿಯ ಹೊಸ ಬೆಳಗುಗಳಿಗೆ ಘಮವೂಡಲು ಕನ್ನಡದ ಕಂಪಾಗಿ,ಇಂಪಾಗಿ ಕೆಂಡಸಂಪಿಗೆಯೊಂದರ ನವಪಲ್ಲವ.
ನಮ್ಮದೇ ದನಿ ಅದರ ರೆಂಬೆರೆಂಬೆಯಲ್ಲೂ ಕುಳಿತ ಕೋಕಿಲದ ಉಲಿಯಲ್ಲಿ.
ನೀವೂ ಆಸ್ವಾದಿಸಿ ಅದರ ಘಮ, ಅದರ ಇಂಪು.
ಆಹ್ಲಾದದ ಕೆಂಡಸಂಪಿಗೆ ನಮಗಾಗಿ...
Monday, December 31, 2007
Friday, December 28, 2007
ನನ್ಹೀ ಕಲೀ
ಮೇರೆ ಘರ್ ಆಯೀ ಏಕ್ ನನ್ಹೀ ಪರೀ..
ತುಂಬಿ ಹರಿಯುತ್ತಿರುವ ಕಂದು ಯಮುನೆ.. ಅಮ್ಮನಂತೆ ಕರುಣೆಯಿಂದ ನನ್ನ ದುಃಖಕ್ಕೆ ಕಣ್ಣು ತುಂಬಿ ತುಳುಕಿಸುತ್ತಿರುವ ಮೋಡಕಪ್ಪಿನ ಬಾನು, ಹಿನ್ನೆಲೆಗೆ ಆ ಬಿಳಿಯ ಭವ್ಯ ಸ್ಮಾರಕ.. ನಮ್ಮೆಲ್ಲ ಕವಿಕಲ್ಪನೆಗಳ ಉಯ್ಯಾಲೆಯಲ್ಲಿ ಜೀಕಿ ಜೀಕಿ ತೂಗಿದ ತಾಜ್ ಮಹಲ್ಲು.
ಅತ್ತಿತ್ತ ನೋಡಿದೆ. ಯಾರೋ ಇಬ್ಬರು ಹೆಂಗಸರು ಮಿನಾರುಗಳ ಕುಸುರಿ ಚಂದ ನೋಡುತ್ತ ನಿಂತಿದ್ದರು. ಸಣ್ಣ ತುಂತುರಿತ್ತು. ಎಲ್ಲ ಪ್ರವಾಸಿಗಳೂ ಮಹಲಿನ ನೆರಳಲ್ಲಿ, ಒಳಗೆ ನಿಂತು ಸವಿಯುತ್ತಿದ್ದರು. ಇದು ಹಿಂಭಾಗವಾದ್ದರಿಂದ ಅಷ್ಟು ದಟ್ಟಣೆಯಿರಲಿಲ್ಲ.
ಹೋಗಿ ಬರ್ತೀಯಾ..ಹುಶಾರಾಗಿರು ಅಂತ ಕಣ್ತುಂಬಿದ ಅಮ್ಮನ ನೆನಪಾಯಿತು. ಮಾತಾಡದೆ ಕಣ್ಣ ತುಂಬ ನನ್ನನ್ನೇ ತುಂಬಿಕೊಂಡು ನೋಡುತ್ತ ನಿಂತ ಅಪ್ಪ ಮತ್ತವನ ಬೆಚ್ಚನೆ ಕೈಹಿಡಿತ ನೆನಪಾಯಿತು. ಕಂಡ ಕನಸೆಲ್ಲದರ ನೂರು ರೂಪ ಕ್ಯಾಲಿಡೋಸ್ಕೋಪಿನ ಚಿತ್ತಾರಗಳಂತೆ ಬಂದು ಹೋಯಿತು. ಎಲ್ಲ ಮುಗಿದ ಮೇಲಿನ್ನೇನು ಎಂಬ ಭಾವ ಒತ್ತರಿಸಿಬಂತು.ಕಣ್ಣು ಮುಚ್ಚಿದವಳು ಕಂಪೌಂಡ್ ಹತ್ತಿ ಹಾರಿಯೇಬಿಟ್ಟೆ..ಆಹ್ ಹೊದೆದ ದುಪ್ಪಟ್ಟಾ ಗಾಳಿಗೆ ತೇಲಿ ಹೋಯಿತು. ತಣ್ಣನೆ ಕೊರೆವ ಗಾಳಿ ಮೈಸೋಕಿದ್ದಷ್ಟೇ ಅಷ್ಟರಲ್ಲೇ ಬಿದ್ದಿದ್ದೆ ನೀರಿಗೆ. ಯಮುನೆಯೆಂಬ ಸಾವಿನ ಸುಳಿಗೆ.. ನೀರು ಕಣ್ಣು ಮೂಗಲ್ಲೆಲ್ಲ ತುಂಬಿ ಉಸಿರು ಕಟ್ಟಿ ಎದೆಯನ್ನು ಯಾರೋ ಒತ್ತರಿಸಿ ಹಿಡಿದಿದ್ದಾರೆನ್ನಿಸುವಷ್ಟು ತಳಮಳ. ಕಣ್ಣೆಲ್ಲ ಉರಿ. ಮುಚ್ಚಿಕೊಂಡರೆ ಕತ್ತಲು ಭಯ. ಆಹ್ ಒಂದು ಉಸಿರು ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಒಂದ್ಸಲ ಯಮುನೆಯ ಅಪ್ಪುಗೆಯಲ್ಲಿ ನನ್ನೇ ನಾನು..ಎಲ್ಲ ಕತ್ತಲಾಗಿ...
ಮಳೆ ನಿಂತ ನಿರಭ್ರ ನೀಲಿ ಹತ್ತಿರದಲ್ಲಿ ಬಿಳಿಯ ಎತ್ತರದ ಮಿನಾರು ತಣ್ಣನೆ ನೆಲ ಹಣೆಯ ಮೇಲೆ ಬೆಚ್ಚನೆ ಕೈ.. ಅಮ್ಮನಂತ ಚಂದ ಹೆಂಗಸೊಬ್ಬರ ಮುಖ ಮಸುಕು ಮಸುಕಾಗಿ ಕಣ್ಣು ತುಂಬಿತು. ಆಗಯೀ ಆಗಯೀ.. ಸುತ್ತಲ ಗೊಣಗಾಟ.. ಹರಿವ ಯಮುನೆಯಲ್ಲಿ ಮುಳುಗಿದವಳನ್ನ ಈಜುಗಾರ ಪ್ರವಾಸಿಯೊಬ್ಬ ನೋಡಿ ಹಿಡಿದು ಮೇಲೆ ತಂದಿದ್ದ.. ಮಿನಾರುಗಳ ಚಂದ ನೋಡುತ್ತಿದ್ದ ಇಬ್ಬರು ಹೆಂಗಸರೂ ಓಡಿ ಬಂದು ನನ್ನ ಉಸಿರಾಟವನ್ನು ರೀಸಸಿಕೇಟ್ ಮಾಡಿ ಬದುಕಿನ ಬೇಲಿಯೊಳಗೆ ಎಳೆದುಕೊಂಡಿದ್ದರು..ಅಲ್ಲಿ ಜನ, ಮಾತು, ಮೊನಚು, ಸೆಕ್ಯುರಿಟಿ ಎಲ್ಲವನ್ನೂ ನಿಭಾಯಿಸಿದ ಅವರಿಬ್ಬರೂ ನನ್ನ ಆಗ್ರಾದ ಗಲ್ಲಿಯೊಂದರ ಹಳೇ ಮನೆಯ ಹೊರಕೊಠಡಿಯ ಮಂಚದ ಮೇಲೆ ಮಲಗಿಸಿ, ಇಲ್ಲೇ ಬರುತ್ತೇವೆ ಸ್ವಲ್ಪ ಆರಾಂ ಮಾಡು ಅಂದು ಹೋದರು. ಅಯ್ಯೋ ಬದುಕಿಸಿಬಿತ್ರಲ್ಲ ಇವರು ಅಂತ ನಂಗೆ ಹತಾಶೆಯಾಗಿದ್ದರೂ, ಎಲ್ಲರಂತೆ ಚುಚ್ಚದೆ, ಮೊನಚು ನೋಟ ಬೀರದೆ ಸುಮ್ಮನೆ ಜೊತೆ ಕೊಟ್ಟ ಆ ಇಬ್ಬರೂ ಯಾಕೋ ಇಷ್ಟವಾಗತೊಡಗಿದರು. ಮೂಗೆಲ್ಲ ಉರಿಯುತ್ತಿತ್ತು. ಸುಸ್ತು. ನಿದ್ದೆ ಬಂದಿತ್ತು.
ಎಚ್ಚರಾದಾಗ ಅವರು ಅಲ್ಲೆ ಕೂತು ಅವತ್ತು ತೆಗೆದ ಫೋಟೊಗಳನ್ನು ನೋಡುತ್ತ ಕೂತಿದ್ದರು. ನಾನು ಮಾತಾಡದೆ ಎದ್ದು ಅವರ ಪಕ್ಕ ಹೋಗಿ ಕೂತೆ. ಹಸಿರ್ಹಸಿರು ಅಗಲಗಲ ಎಲೆಗಳ ಮೇಲೆ ಬಿರಿದ ಅಚ್ಚಮಲ್ಲಿಗೆಯಂತ ಮೆಲ್ನಗು ನಕ್ಕು ನನಗೂ ತೋರಿದರು ಫೋಟೋಗಳನ್ನ. ಮರುದಿನ ಅವರು ಹೊರಟಾಗ ನಾನೂ ಹೊರಟೆ. ಬಸ್ಸು ಕಂಡು ಕೇಳರಿಯದ ಉತ್ತರ ಪ್ರದೇಶದ ಚಿಕ್ಕ ಊರೊಂದಕ್ಕೆ ತಂದುಬಿಟ್ಟಿತು. ಅವರನ್ನೇ ಹಿಂಬಾಲಿಸಿದ ಕಾಲ್ಗಳು ನಿಂತ ಪುಟ್ಟ ಬೀದಿಯ ಹಳೇ ಮನೆಯ ಬಾಗಿಲಲ್ಲಿ ಹೆಸರಿತ್ತು "ಉದಯಮಹಲ್"
ಒಳಗೆ ಕಾಲಿಟ್ಟೊಡನೆ ಕಂಡ ವಿಶಾರ ಹಜಾರದಲ್ಲಿ ಅಲ್ಲಲ್ಲಿ ಗುಂಪಾಗಿ ಆಡುತ್ತಿದ್ದ ಮಕ್ಕಳು ಓಡೋಡಿಬಂದರು. ದೀದಿಮಾ, ಬಾಯಿಮಾ ಅಂತ ಕೂಗುತ್ತಾ..ಅವರಿಬ್ಬರು ಆ ಮಕ್ಕಳೊಂದಿಗೆ ಮಗುವಾದರು. ಅಂದು ಸಂಜೆ ಅವರ ಕೊಠಡಿಗೆ ನನ್ನ ಕರೆದ ದೀದಿಮಾ - ಹೇಳು ಬೇಟೀ ಯಾಕೆ ಹಾಗೆ ಮಾಡಲಿಕ್ಕೆ ಹೋದೆ - ಅಂತ ಕೇಳಿದರು. ಯಾರು ಕೇಳಿದರೂ ಹೇಳಬಾರದೆಂದುಕೊಂಡಿದ್ದೆಲ್ಲ ಮರೆತುಹೋಯಿತು.
ನನ್ನ ಹಳವಂಡಗಳನ್ನ ಬಿಚ್ಚಿಟ್ಟೆ. ಹೇಗೆ ಎಷ್ಟು ಪ್ರೀತಿಯ ಅಪ್ಪ ಅಮ್ಮನ ಪ್ರೀತಿಗೆ ಬೆನ್ನು ತೋರಿ ನಯವಂಚಕನ ಬಲೆಗೆ ಬಿದ್ದೆ. ಪ್ರೀತಿ ತೋರಿದ ಜೀವಗಳ ಸಲಹೆಯನ್ನ ಹೇಗೆ ಕಾಲಲ್ಲೊದ್ದೆ? ಅವನ ಬೆನ್ನ ಹಿಂದೆ ಹೇಗೆ ನನ್ನ ಮನಸ್ಸು ಆಳಸುಳಿಯೊಳಗಿಳಿದಂತೆ ಹೊರಟುಬಿಟ್ಟಿತು. ಎಲ್ಲ ಓದು, ಕೆಲಸ, ಜವಾಬ್ದಾರಿಯ ಮರೆತು ಅವನ ಸೋಗಿಗೆ ಹೇಗೆ ಮರುಳಾದೆ. ಅವನ ಬಯಕೆಯ ಗಾಳಕ್ಕೆ ನನ್ನ ಪ್ರೀತಿಮೀನು ಹೇಗೆ ಸಿಕ್ಕಿ ನುಲಿದಾಡಿತು ಮತ್ತು ನನ್ನ ಈ ಎಲ್ಲ ತಿಕ್ಕಲುತನವನ್ನೂ ನುಣ್ಣಗೆ ನೆಕ್ಕಿ ನೀರು ಕುಡಿವಂತೆ ಅವನು ಹೇಗೆ ಉಲ್ಟಾ ಹೊಡೆದ, ಮುಖ ಮೇಲೆತ್ತಿ ಬದುಕುವ ಆಸೆ ಪಟ ಹೇಗೆ ಪಲ್ಟಿಯಾಗಿ ಬಿದ್ದು ಚಿಕ್ಕಚೂರಾಯಿತು ಎಲ್ಲ ಹೇಳಿದೆ..ಇಷ್ಟೆಲ್ಲ ಆಗಿ ಅಪ್ಪ ಅಮ್ಮನ ಹೊಟ್ಟೆಗೆ ಬೆಂಕಿ ಸುರಿದು ನಾನು ಬದುಕಬೇಕಾ, ತಿರುಗಿ ಹೋಗಬೇಕಾ, ನಾನು ಮಾಡಿದ್ದೇ ಸರಿ ಅಲ್ವಾ.. ಈಗೇನು ಮಾಡಲಿ ನಾನು ಹೇಳಿ ಅಂತ ಮಾತು ಮುಗಿಸಿದೆ.
ಒಂದೈದು ನಿಮಿಷ ಮಾತಾಡಲಿಲ್ಲ. ಎದ್ದು ಕಿಟಕಿಯ ಬಳಿ ಹೋಗಿ ನಿಂತು ನನ್ನ ಕರೆದರು. ಪಕ್ಕಕ್ಕೆ ಹೋದವಳಿಗೆ ಅಲ್ಲಿ ಅಂಗಳದಲ್ಲಿ ಕಣ್ಣಾಮುಚ್ಚೆ ಆಡುತ್ತಿದ್ದ ಪುಟಾಣಿಗಳಲ್ಲಿ ಬಾಯ್ ಕಟ್ ಮಾಡಿಕೊಂಡು ಗುಂಡುಗುಂಡಗೆ ಇದ್ದವಳನ್ನ ತೋರಿ ಹೇಳಿದರು - ಅವಳು ಆಶಾ, ಅಮ್ಮ ಅಪ್ಪ ಮೀರತ್ತಿನ ಹಳ್ಳಿಯೊಂದರಲ್ಲಿ ಜೀತದಾಳುಗಳು. ಎಂಟು ವರ್ಷದ ಇವಳನ್ನ ಚಂಡೀಗರದ ಶ್ರೀಮಂತನಿಗೆ ಮದುವೆಗೆ ತಯಾರಿ ಮಾಡಿದ್ದರು. ಅಲ್ಲಿನ ಗ್ರಾಮಸೇವಾ ಸಂಘದ ಸಹಾಯಕಿಯಿಂದ ಆಗಬಹುದಾಗಿದ್ದ ಅನ್ಯಾಯ ತಪ್ಪಿ ಇವಳು ಸುರಕ್ಷಿತ ಬೆಳವಣಿಗೆಯಲ್ಲಿ ಬೆಳೆಯುವ ಮಗು. ಅವರಪ್ಪ ಅಮ್ಮ ಅತ್ತು ಕರೆದು ಮಾಡಿದರು. ನಮಗೆ ಓದಿಸೋಕ್ಕಾಗಲ್ಲ, ತುತ್ತಿಗೇ ಕಷ್ಟಪಡುವ ಜನ ನಾವು ಓದಿಸಿ ಮುಂದೆ ತರುವ ಚೈತನ್ಯ ಇಲ್ಲವೆಂದು. ನಮ್ಮ ಸಂಸ್ಥೆ ಜೊತೆಯಾಯಿತು. ಇವತ್ತು ೪ನೇ ತರಗತಿ ಓದುವ ಈ ಪುಟಾಣಿ ಕ್ಲಾಸಿಗೇ ಫಸ್ಟ್. ಚಂದ ಹಾಡುವ ಇವಳು ಇಂಡಿಯನ್ ಐಡಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಇನ್ನೊಂದೆರಡು ತಿಂಗಳಲ್ಲಿ ಭಾಗವಹಿಸುತ್ತಾಳೆ. ಅವಳ ಕಣ್ಣಿನ ಹೊಳಪು ನೋಡು ಅದನ್ನ ನೋಡ್ತಾ ಇದ್ದರೆ ಅವಳ ನೋವಿನ ಕತೆ ನೆನಪಾಗುತ್ತಾ?
ಅಲ್ಲಿ ಮೂಲೆಯಲ್ಲಿ ದೊಡ್ಡವಳ ಹಾಗೆ ಕೂತುಕೊಂಡು ಎಲ್ಲರೂ ಗಲಾಟೆ ಮಾಡದ ಹಾಗೆ ಆಟವಾಡಿಸುತ್ತಿರುವ ಆ ಹುಡುಗಿ ನೋಡು. ವಸಂತಿ - ಕಾನ್ಪುರದ ಹಳ್ಳಿಯವಳು. ತುಂಬ ಬಡತನದ ಮನೆಯ ಅಪ್ಪ ಅಮ್ಮ ಊರಿನ ಜಮೀನ್ದಾರೀ ಅಟ್ಟಹಾಸಕ್ಕೆ ಬಲಿಯಾದರು. ಗಂಡನನ್ನು ಕೊಂದ ಜಮೀನ್ದಾರನ ವಿರುದ್ಧ ಕೇಸು ಹಾಕಿದ ಹೆಂಡತಿಯನ್ನ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಂದರು. ಆಟವಾಡಲು ಹೋಗಿದ್ದ ಮಗು ವಸಂತಿ ಮನೆಗೆ ಬಂದು ಕಂಗಾಲಾಗಿದ್ದರೆ ಅಲ್ಲಿನ ಸ್ವಸಹಾಯ ಮಹಿಳಾ ಮಂಡಲ ರಕ್ಷಿಸಿ ನಮಗೆ ತಂದುಕೊಟ್ಟರು. ಅವಳು ಈಗ ಏಳನೇ ತರಗತಿ. ಚೆನ್ನಾಗಿ ಓದುತ್ತಾಳೆ. ಭಾಷೆಗಳನ್ನು ಚೆನ್ನಾಗಿ ಮಾತಾಡುವ ಇವಳಿಗೆ ಭಾಷಾ ಶಾಸ್ತ್ರ ಕಲಿಯುವಾಸೆ. ಇವರಿಬ್ಬರೇ ಏನಲ್ಲ ಇಲ್ಲಿರುವ ಎಲ್ಲ ಪುಟ್ಟ ಮಕ್ಕಳ ಹಿಂದೂ ಒಂದೊಂದು ಗಾಢ ನೋವಿನ ಹಿನ್ನೆಲೆ. ಹಾಗೇ ಬಿಟ್ಟರೆ ಹೊಸಕಿಹೋಗಬಹುದಾಗಿದ್ದ ಈ ಹೂಗಳಿಗೆ ಚೂರೇ ಚೂರೂ ಜೊತೆಕೊಟ್ಟಿದ್ದಕ್ಕೆ ಅವರ ಕಲಿಕೆಗೆ ದಾರಿಯಾಗಿದ್ದಕ್ಕೆ ಹೇಗೆ ಹೊರಗಿನ ಎಲ್ಲ ನೋವು ಒತ್ತಡಗಳನ್ನು ಅದುಮಿ ಮೇಲೆ ಚಿಮ್ಮಿದ್ದಾರೆ ನೋಡಿದೆಯಾ? ಅವರ ನೋವು ಕಲಿಸಿದ ಪಾಠ ತುಂಬ ದೊಡ್ಡದು.
ಇಗೋ ಇಲ್ನೋಡು ಈ ಫೋಟೋ ಹೇಗನ್ನಿಸ್ತದೆ ನಿಂಗೆ? - ಒಂದು ಫ್ರೇಮ್ ಹಾಕಿದ ಕಪ್ಪುಬಿಳುಪು ಫೋಟೋ ಕೊಟ್ಟರು. ಐದು ನಗೆಮುಖಗಳು. ಅಪ್ಪ ಅಮ್ಮ ಮತ್ತು ಮೂವರು ಮಕ್ಕಳು. ಅರೇ ಇದೇನು ಅಮ್ಮ ದೀದಿಮಾನೆ.. ನೀವೇ ಅಲ್ಲವಾ...ಅವರನ್ನೇ ನೋಡಿದೆ.
ಸದಾ ಕಿರುನಗೆಯಿಂದ ಮಿನುಗುವ ಆ ಕಣ್ಣುಗಳು ಇದ್ದಕ್ಕಿದ್ದಂತೆ ಬ್ಲಾಂಕಾಗಿ ಹೋದವು. ನನ್ನ ಕೇಳು ಅಂತ ಉಬ್ಬಿ ನಿಂತಿರುತ್ತಿದ್ದ ಹಣೆಯ ಮೇಲೆ ಪುಟ್ಟ ಪುಟ್ಟ ನಿರಿಗೆಗಳು. ಮುದ್ದಾದ ಮುಖ ಬಾಡಿದ ಹಾಗೆ. ಅದು ನನ್ನದಾಗಿದ್ದ ಕುಟುಂಬ. ೮೪ ಡಿಸೆಂಬರ್ ಮೂರರ ಚುಮುಚುಮು ಚಳಿಯ ಬೆಳಗಿನಲ್ಲಿ ಧೂಳೀಪಟವಾಗಿ ಹೋಯಿತು. ಯೂನಿಯನ್ ಕಾರ್ಬೈಡ್ ಎಂಬ ಅನ್ನ ಹಾಕಿದ ಕಂಪನಿಯೇ ನನ್ನೆಲ್ಲವನ್ನೂ ಕಸಿದುಕೊಂಡ ರಾಕ್ಷಸನಾಯಿತು. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗಂಡ ಮನೆಗೆ ಬರಲಿಲ್ಲ. ಮಕ್ಕಳು ಕಣ್ಣುರಿ ಎದೆನೋವೆಂದು ಮಲಗಿದವರು ಒಬ್ಬೊಬ್ಬರಾಗಿ ಭೀಕರ ನೋವು ರೋಗಕ್ಕೆ ತುತ್ತಾಗಿ ಒಂದು ವರ್ಷದಲ್ಲೇ ಸತ್ತು ಹೋದರು. ಎಲ್ಲ ಮೀಥೈಲ್ ಐಸೋಸೈನೇಟ್ ಎಂಬ ವಿಷಾನಿಲ ಮತ್ತು ಬೇಜವಾಬ್ದಾರಿ ಕಂಪನಿಯೊಂದರ ಕಾರಣದಿಂದ. ನಂಗೆ ಜೀವನವೇ ರೋಸಿಹೋಗಿ ಬಿದ್ದು ಸಾಯೋಣವೆಂದು ಮನೆಯಿಂದ ಓಡಿಬಂದೆ. ಮನೆಯೆನ್ನುತ್ತಾರಾ ಅದನ್ನ? ಇಡೀ ಊರಿಗೆ ಊರೇ ಸ್ಮಶಾನವಾಗಿ ಹೋಗಿತ್ತು.
ಒಂದೇ ಸಲಕ್ಕೆ ಸಾವಿರಗಟ್ಟಲೆ ಜನಸತ್ತು ಹೋದರು. ದಿನಾ ದಿನಾ ಒಂದೊಂದು ಪರಿಚಯದ ಮನೆಯಲ್ಲಿ ಸಾವಿನ ಆಲಾಪ. ಬದುಕುಳಿದವರ ಕತೆ ಕೇಳುವುದು ಬೇಡ ಹೆಸರು ಗೊತ್ತಿಲ್ಲದ ನೂರು ರೋಗಗಳು, ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖ.. ಹುಚ್ಚು ಹುಚ್ಚೇ ಹಿಡಿಯುವಂತಾಗಿತ್ತು ನನಗೆ. ಅವರ ದನಿಯ ಕಂಪನ ನನಗೆ ಗೊತ್ತಾಗುವಷ್ಟಿತ್ತು. ಎರಡು ವರ್ಷಗಳ ನಂತರವೂ ಪರಿಹಾರ ಬರಲಿಲ್ಲ. ಬದುಕು ನಿರಾಶ್ರಿತರ ಕ್ಯಾಂಪಿನಲ್ಲಿ ದಿನದೂಡುತ್ತಿತ್ತು. ಅಲ್ಲಿ ಇನ್ಯಾರೋ ತಲೆಹಿಡುಕರು. ಬೆಂದಮನೆಯಲ್ಲೇ ಗಳಹಿರಿಯುವವರು. ರೋಸಿದ ಬದುಕು ಸಾಕಾಗಿ ಹೋಯಿತು.
ಹೀಗೇ ತಳ್ಳಿದ ದಿನಗಳ ಕೊನೆಗೆ ಒಬ್ಬ ದಯಾಳು ಮಹಿಳೆ ಸಿಕ್ಕಿದರು. ನನಗೆ ನರ್ಸಿಂಗ್ ಗೊತ್ತಿತ್ತು. ಬಾ ಅಂತ ಕರೆದುಕೊಂಡು ಹೋದವರು ದೂರದ ಜಬ್ಬಲ್ ಪುರದಲ್ಲಿ ನಿರ್ಮಿಸಿದ್ದ ಕ್ಯಾಂಪಿಗೆ ಸೇರಿಸಿದರು. ಅಲ್ಲಿ ಈ ವಿಷಾನಿಲ ದುರಂತಕ್ಕೆ ಸಿಕ್ಕಿ ಮನೆ, ಜನ, ಆರೋಗ್ಯ ಕಳೆದುಕೊಂಡು ನರಳುತ್ತಿದ್ದ ಜನರ ಶುಶ್ರೂಷೆ ಮಾಡಬೇಕಾಗಿತ್ತು. ಇನ್ನೊಬ್ಬರ ನೋವೊರೆಸುತ್ತ ನನ್ನ ನೋವು ಸಹನೀಯವಾಯಿತು. ನಮಗೆಲ್ಲ ನಮ್ಮ ನಮ್ಮ ದುಃಖಗಳೇ ದೊಡ್ಡದಾಗಿ ಭೂತದಂತೆ ಕಾಡುತ್ತವೆ. ಆದರೆ ಒಂದು ಗಳಿಗೆ ಸುಮ್ಮನೆ ನಿಂತು ಸುತ್ತ ನೋಡು - ನಿರ್ಗತಿಕರು, ಓದಿಲ್ಲದವರು, ಆರೋಗ್ಯವಿಲ್ಲದವರು, ಕಣ್ಣು, ಕೈ ಕಾಲಿಲ್ಲದವರು, ಬುದ್ಧಿಮಾಂದ್ಯರು, ತಮ್ಮದಲ್ಲದ ತಪ್ಪಿಗೆ ಬದುಕಿನ ವ್ರಣವನ್ನು ಹೊತ್ತು ತಿರುಗುವವರು..
ನಮ್ಮಂತ ಸೋತು ನಿಂತವರ ಜೊತೆಯೂ ಆಶ್ರಯವೆನ್ನಿಸುವಷ್ಟು ಸಹಾಯ ಬೇಕಾದವರು ಎಲ್ಲಿ ನೋಡಿದರೂ ಕಾಣಸಿಗುತ್ತಾರೆ.
ನನ್ನ ಆರೋಗ್ಯ, ಓದು, ಸಿಕ್ಕ ಚಂದದ ಬಾಲ್ಯ, ಕೆಲವೇ ವರ್ಷಗಳಾದರೂ ಉಂಡ ಕುಟುಂಬ ಜೀವನದ ನೆಮ್ಮದಿ ಇವೆಲ್ಲ ನನ್ನಲ್ಲಿ ಎಂತಹ ಕಷ್ಟವನ್ನೂ ಎದುರಿಸಿ ನಿಲ್ಲುವ ಬದುಕನ್ನ ಪ್ರೀತಿಸುವ ಸಹನೆ ಬೆಳೆಸಬೇಕು ಅಲ್ಲವಾ? ಕಷ್ಟದಲ್ಲಿ ತೆವಳುತ್ತಿರುವವರಿಗೆ ಹುಲ್ಲುಕಡ್ಡಿಯೇ ಆದರೂ ಬಯಸಿದ ಆಸರೆ ಕೊಡಲಾಗದಾ? ಐದಾರು ವರ್ಷಗಳು ಆ ಕ್ಯಾಂಪಲ್ಲಿ ಕಳೆದ ಅನುಭವ ನನ್ನ ಬದುಕನ್ನ ತಿದ್ದಿತು. ರೋಸಿಹೋಗಿದ್ದ ಬದುಕು ನೂರೆಂಟು ಜೀವಗಳಿಗೆ ತಂಪು ನೆರಳನ್ನು ಕೊಟ್ಟ ಪವಾಡ ನೋಡಿದವಳಿಗೆ ಇನ್ನೂ ಏನೇನು ಮಾಡಬಹುದೆನ್ನುವ ಉಮೇದು ಹುಟ್ಟಿತು.
ಅಷ್ಟರಲ್ಲಿ ಪರಿಚಯವಾಯಿತು ನನ್ಹಿ ಕಲಿ ಅನ್ನುವ ಈ ಸಂಸ್ಥೆ. ದಯಾಳುವಾದ ಅದೃಷ್ಟವಂತರು ಕೊಡಮಾಡಿದ ದೇಣಿಗೆಯಲ್ಲಿ ಒಂದೊಂದೇ ಪುಟ್ಟ ಹೂವಿಗೆ ನೀರೆರೆದು, ಮಣ್ಣೂಡಿ, ಕೋಲು ಕೊಟ್ಟು ನಿಲ್ಲಿಸುವ ಕೆಲಸ. ಒಂದೊಂದು ಮಗುವಿನ ವರ್ಷದ ಖರ್ಚು ಸಾವಿರ ಚಿಲ್ಲರೆ ಬರುತ್ತದೆ. ಶಾಲೆಗೆ ಕಳಿಸಲಾರದ ಬಡ ತಂದೆತಾಯಿಗಳನ್ನು ಗುರುತಿಸಿ, ಅವರಿಗೆ ತಿಳಿಹೇಳಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವ ಕೆಲಸ. ಅವರ ಶಾಲೆಯ ವೆಚ್ಚವನ್ನ ವರ್ಷಪೂರ್ತಿ ಬರಬಹುದಾದ ಇತರೇ ವೆಚ್ಚವನ್ನ ನನ್ಹಿ ಕಲಿ ನೋಡಿಕೊಳ್ಳುತ್ತದೆ. ಒಬ್ಬ ದಯಾಳು ಒಂದು ಮಗುವನ್ನು ಸ್ಪಾನ್ಸರ್ ಮಾಡಬಹುದು. ವರ್ಷಕ್ಕೆ ಅಥವಾ ಹಲವರ್ಷಗಳಿಗೆ. ನನ್ಹಿ ಕಲಿ ಆ ಮಗು ಸರಿಯಾಗಿ ಶಾಲೆಗೆ ಹೋಗಿ ಓದಿ ಬರೆದು, ಓದು ಮುಂದುವರಿಸುವಂತೆ, ವಿದ್ಯಾವಂತೆಯಾಗುವಂತೆ ನೋಡಿಕೊಳ್ಳುತ್ತದೆ. ಹೀಗೇ ದೇಶದ ತುಂಬಾ ಮತ್ತು ದೇಶದ ಹೊರಗೂ ಇರುವ ಪುಣ್ಯವಂತರು ಜೀವನಪ್ರೀತಿಯವರು ಕೊಟ್ಟ ಸಹಕಾರ ಮತ್ತು ಸಹೃದಯತೆಯಿಂದ ಇವತ್ತು ನಮ್ಮ ಹಳ್ಳಿಗಳ ನೂರಾರು ಹೆಣ್ಣು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ತೀರಾ ಬಡತನ ಕಷ್ಟ ಮತ್ತು ಅನ್ಯಾಯಕ್ಕೆ ಸಿಲುಕಿದವರಿಗೆ ಅನಾಥರಿಗೆ ಆಶ್ರಯವಾಗಿ ಈ ಉದಯಮಹಲ್ಲಿದೆ. ಉಳಿದೆಲ್ಲ ಮಕ್ಕಳೂ ಅವರವರ ಮನೆಯಲ್ಲಿದ್ದೇ ಶಾಲೆಗೆ ಹೋಗುತ್ತಾರೆ. ನಮ್ಮ ಸ್ವಯಂಸೇವಕರು, ಅಲ್ಲಲ್ಲಿ ಇದ್ದು ಅವರ ದೇಖರೇಖೆ ನೋಡುತ್ತಾರೆ.
ಈಗ ಹೇಳು ನೀನು ಸಾಯಬೇಕಿತ್ತಾ? ಅವನ್ಯಾವನೋ ತಲೆಕೆಟ್ಟವನು ನಿನ್ನ ಭಾವನೆಗಳ ಜೊತೆ ಆಟಾಡಿದ ಅಂತ, ಬದುಕೇ ಬೇಡಾ ಅಂತ ತಳ್ಳಿ ನಡೆಯುವ ಧಾರ್ಷ್ಟ್ಯವೇನು? ನಿನ್ನ ಸಮೃದ್ಢ ಬಾಲ್ಯ, ಕಲಿತ ಓದು, ತುಂಬು ಆರೋಗ್ಯವನ್ನ, ಒಂದು ಪುಟ್ಟ ಹೂವನ್ನೂ ಅರಳಿಸದೆ ನಗಿಸದೆ ಯಮುನೆಯ ಪಾಲು ಮಾಡಹೊರಟಿದ್ದೆಯಲ್ಲಾ - ಎತ್ತಿ ಬೆಳೆಸಿದ ನಿನ್ನಪ್ಪ ಅಮ್ಮನಿಗೆ ತೋರಿದ ಅತಿ ಹೇಯ ಅವಮರ್ಯಾದೆಯಲ್ಲವಾ ಇದು? ನಿನಗೆ ಕೊಟ್ಟ ಬದುಕನ್ನ ತಿರಸ್ಕರಿಸಿ ನಡೆಯುವುದ್ಯಾವ ಮಹಾ ಘನಂದಾರಿ ಕೆಲಸ. ಯಾರ್ ಬೇಕಾದ್ರೂ ಮಾಡಬಹುದು. ಆ ನೋವನ್ನ ಮೆಟ್ಟಿ ನಿಂತು ಇನ್ನೊಬ್ಬರ ನೋವಿಗೆ ಹೆಗಲು ಕೊಡುವ ಕೆಲಸವಿದೆಯಲ್ಲಾ ಅದು ದೇವರ ಕೆಲಸ. ಪ್ರೀತಿಯಿಂದ ಆದರಿಸಿದ ಬದುಕಿನ ಕೆಲವೇ ಘಳಿಗೆಗಳಿಗೆ ನಾವು ಸಲ್ಲಿಸಬಹುದಾದ ಒಂದು ಪುಟ್ಟ ಕೃತಜ್ಞತೆ. ನಿನ್ನ ಒಂದು ನಗು, ಒಂದು ಬೆಚ್ಚನೆ ಸ್ಪರ್ಶ ಯಾವ ನೊಂದ ಜೀವದ ಮನವನ್ನ ಅರಳಿಸುತ್ತದೆಯೋ ಯಾರು ಬಲ್ಲರು?
ನನ್ನ ಕಣ್ಣಲ್ಲಿ ನೀರಿಳಿಯುತ್ತಿತ್ತು. ಹತ್ತಿರ ಹೋಗಿ ಅವರನ್ನು ಬಳಸಿಕೊಂಡು ಹೇಳಿದೆ. ದೀದಿಮಾ ನೀವು ನನ್ನ ದಾರಿಗೆ ಬೆಳಕಾದಿರಿ. ಊರಿಗೆ ಹೋದವಳು ನನ್ಹಿ ಕಲಿಯರನ್ನು ಸ್ಪಾನ್ಸರ್ ಮಾಡುತ್ತೇನೆ. ಅಷ್ಟೆ ಯಾಕೆ ನಮ್ಮೂರಿನ ಹಳ್ಳಿಗಳಲ್ಲಿ ನಿಮ್ಮ ನನ್ಹಿ ಕಲಿಯ ಶಾಖೆ ತೆರೆಯೋಣ. ನನ್ನ ನೋವಿನ ಹೊರತಾಗಿಯೂ ಇರುವ ಬದುಕಿನ ನೂರು ಸವಿಚಿತ್ರಗಳನ್ನ, ಪುಟ್ಟ ಪುಟ್ಟ ಹೂಗಳ ಅರಳುವಿಕೆಯನ್ನ ಅನುಭವಿಸುತ್ತ ಬಂದ ಬದುಕನ್ನು ಪ್ರೀತಿಯಿಂದ ಬದುಕುತ್ತೇನೆ. ಮಾತಾಡಲು ಇನ್ನೇನಿದೆ.. ಅಲ್ಲಿ ಹೂಗಳಿವೆ. ನಾನು ನೀರುಣಿಸಬೇಕಿದೆ.
ದೀದಿಮಾನ ನೀರು ತುಂಬಿದ ಕಣ್ಣಲ್ಲಿ ಹೊಸಹೊಳಪು.
ಊರಿಗೆ ಬಂದವಳು ತೋಟವನ್ನೇ ಮಾಡಿದೆ. ನಾನೊಬ್ಬಳೇ ಅಲ್ಲ ಎಲ್ಲ ಸ್ನೇಹಿತರಿಗೂ ಹೇಳಿದೆ.
ಹತ್ತು ವರ್ಷಗಳ ಕೃಷಿಯಲ್ಲಿ ಜೊತೆಯಾಗಿ ಬಂದು ಸಂಗಾತಿಯೂ ಆದವನು ಸುಧಾಂಶು ಎಂಬ ಸುಹೃದ. ಮುದ್ದು ಮಗ ಸುಹಾಸ ಇದ್ದಾನೆ. ಇವತ್ತು ಅವನಿಗೆ ಜೊತೆಯಾಗಿ ಬೆಳೆಯಲು, ಬೆಹ್ರಾಮ್ ಪುರದ ಕಲಿ - ಸುಹಾನೀ ಬರುತ್ತಿದ್ದಾಳೆ.
ಮೇರೇ ಘರ್ ಆಯೀ ಏಕ್ ನನ್ಹಿ ಪರೀ - ಅಂತ ಅವಳು ಬಂದ ಕೂಡಲೇ ಹಾಡಲು ಹೇಳಿಕೊಡುತ್ತಿದೇನೆ ಸುಹಾಸನಿಗೆ..
ಈ ಲಿಂಕಿನಲ್ಲಿ ನನ್ಹಿ ಕಲಿಯ ಹೆಚ್ಚಿನ ವಿವರವಿದೆ. http://www.ashanet.org/projects/project-view.php?p=729 ನೋಡಿ ನೀವೂ ಹೂವರಳಿಸಬಹುದು.

Friday, December 14, 2007
ಮೊದಲ ದಿನ ಮೌನ..
ಮೊದಲ ದಿನ ಮೌನ..ಅಳುವೇ ತುಟಿಗೆ ಬಂದಂತೆ...
ಥೂ ಹಾಳಾದ್ದು ಈ ಮನ್ಸು. ಎಷ್ಟು ಬೇಡ ಬೇಡವೆಂದರೂ ಕಣ್ಣು ಅವನ ರೂಮಿನ ಕಡೆಗೇ ಹೋಗತ್ತೆ. ಮತ್ತೆ ತುಂಬಿಕೊಳ್ಳತ್ತೆ. ಯಾರಿಗೂ ಕಾಣಬಾರದೆಂಬರಿವು ಆಗ ಎಚ್ಚರವಾಗತ್ತೆ, ಸೀರೆ ತಾನೇತಾನಾಗಿ ಕೈಗೆ ಸುತ್ತಿಕೊಳ್ಳುತ್ತೆ ..ಮತ್ತೆ ಮತ್ತೆ ಕಣ್ಣ ನೋವನ್ನ ಸಂತೈಸುವ ಸೀರೆಯ ಚುಂಗು!
ನನ್ನನ್ನ ಕಳಿಸಿಕೊಟ್ಟಾಗ ಅಪ್ಪನಿಗೂ ಹೀಗನ್ನಿಸಿತ್ತಾ? ಅಮ್ಮ ಇರಲೇ ಇಲ್ಲವಲ್ಲ! ಗೊತ್ತಿಲ್ಲ. ಆದರೆ ಅವನಿಲ್ಲದೇ.. - ನಿದ್ದೆ ಬರದ ಸೂನಾ ಸೂನಾ ರಾತ್ರಿಯಂತೆ - ಮನಸು ತಳಮಳಗೊಳ್ಳುತ್ತಿದೆ.
ಜೊತೆಜೊತೆಗೇ ಹೆಜ್ಜೆ ಹಾಕುವ ಗಂಡ, ಬೆಳೆಯುತ್ತಿರುವ ಮಗಳು, ಬೆಳೆದ ಮಗ-ಸೊಸೆ ಪುಟ್ಟ ಮೊಮ್ಮಗು ಎಲ್ಲ ಇದ್ದಾರೆ. ಅವನಿಲ್ಲ.. ಸಂಜೆ ಆಫೀಸ್ ಮುಗಿದ ಕೂಡಲೆ ಸ್ಕೂಟರಿನಲ್ಲಿ ಬಂದು ಅವನು ಗೇಟು ತೆಗೆಯಲು ಹಾರ್ನ್ ಮಾಡುವುದಿಲ್ಲ.. ಬಂದವನೇ ಜ್ಯಾಕೆಟ್ ಸೋಫಾ ಮೇಲೆಸೆದು, ಬೈ ಟೂ ಕಾಆಆಫಿ ತನ್ನಿ ನೋಡಾಣ ಅಂತ ಪೇಪರೆತ್ತಿಕೊಂಡು ಕೂರುವುದಿಲ್ಲ.. ಈಗ ಅವನು ಅವಳ ಜೊತೆಗೆ.ಜೋಡಿಹಕ್ಕಿಗಳ ಹಾರಾಟ.. ಅವರಿಬ್ಬರ ನೆನಪು ಕೊಡುವ ಹಿತದಷ್ಟೇ ಸಂಕಟದಂತಹದೊಂದು ಯಾಕೆ ಅನಿಸುತ್ತಿದೆಯೋ ಗೊತ್ತೇ ಆಗುತ್ತಿಲ್ಲ..
ಮೊದಲ ಸಲ ಅವನು ಬಂದು ಒಬ್ಳು ಸಿಕ್ಕಾಪಟ್ಟೆ ಇಷ್ಟ ಆಗ್ ಬಿಟ್ಟಿದಾಳೆ ಕಣಮ್ಮಾ ಅಂದಾಗ ಅವನು ಕೆಲಸಕ್ಕೆ ಸೇರಿ ಮೂರ್ ವರ್ಷವಾಗಿತ್ತು. ಅದ್ಯಾರಪ್ಪಾ ನನ್ ಮಗಂಗೆ ಇಷ್ಟ ಆಗಿರವ್ಳೂ ಅಂತ ನೋಡಿದ್ರೆ ಅಯ್ಯೋ ರಾಮ ಅವಳು ಮಿಲಿಟ್ರಿ ಕಟ್ ಕೂದಲಿನ ಎತ್ತರದ ಹುಡುಗಿ. ಅವನಿಗಿಂತ ಮೂರು ವರ್ಷ ದೊಡ್ಡವಳು. ಅಯ್ಯೋ ರಾಮಾ ಇದೆಂತದಪ್ಪಾ ಅಂದ್ಕೊಳ್ಳೋ ಹೊತ್ತಿಗೆ ಮತ್ತೊಂದು ಬಾಂಬು ಅವರಪ್ಪ ಅಮ್ಮ ಒಟ್ಟಿಗಿಲ್ಲವಂತೆ. ಅವರದ್ದು ಲವ್ ಮ್ಯಾರೇಜಂತೆ. ಅಪ್ಪ ನಾನ್-ವೆಜ್ ತಿನ್ನುತ್ತಾರಂತೆ ಮನಸು ಭಾರವಾಗಿ ಫೋಟೋ ವಾಪಸ್ ಅವನ ಕೈಗೆ ಕೊಟ್ಟು ಮಾತಿಲ್ಲದೆ ಅಡಿಗೆ ಮನೆಗೆ ಹೋದೆ.
ಆಮೇಲೆ ನಡೆದಿದ್ದು ನಮಗೆ ಇಷ್ಟವಾಗಬಹುದಾದ್ದಲ್ಲ. ಇಷ್ಟು ಶಿಸ್ತಲ್ಲಿ ಬೆಳೆದ ಮಗ, ಎಷ್ಟು ಕಾಳಜಿಯ ಹುಡುಗನ್ನ ಹೇಗೆ ಈ ಚಾಲಾಕಿ ಹುಡುಗಿ ಬುಟ್ಟಿಗೆ ಹಾಕ್ಕೊಂಡ್ ಬಿಟ್ಟಳಲ್ಲಾ ಅಂತ ಸಿಟ್ಟು. ಹಾಗೇ.. ಇವನಿಗೆ ಇಷ್ಟವಾಗಿದೆ ಅಂದ್ರೆ ಏನು ವಿಶೇಷವಿರಬಹುದು. ಬರಿಯ ಚಂದಕ್ಕೆ ಮರುಳಾಗುವವನಲ್ಲ ಇವನು.. ಹಾಗಿದ್ದರೆ ಇನ್ನೇನು..
ಅಮ್ಮಾ ಒಂದ್ಸಲ ಮೀಟ್ ಮಾಡು ನೀನವಳನ್ನ ಮಾತಾಡಿಸು ಆಮೇಲೆ ಹೇಳು.. ಅಂತ ಅವನು ಬೆನ್ನಹಿಂದೆ ಬಂದು ನಿಂತು ಪಿಸುಗುಟ್ಟಿದರೆ ನಾನು ಕಲ್ಲಾದೆ.
ನನಗೆ ನನ್ನವರಿಗೆ ಕೋಪ, ಚೂರು ಚೂರೂ ಇಷ್ಟವಿಲ್ಲ. ಮಕ್ಕಳು ಕೊನೆಗೆ ಸೊಸೆಯೂ ಅವನ ಪಾರ್ಟಿಯೇ.. ನಾವು ಗಂಡ ಹೆಂಡತಿಯ ಇಷ್ಟ ಬೇರೆ.. ಉಳಿದವರದ್ದೆಲ್ಲ ಬೇರೆ..ಯಾರೂ ಜಗ್ಗುತ್ತಿಲ್ಲ..ಎಲ್ಲರ ಪ್ರೀತಿಯೂ ದೊಡ್ಡದೇ!ಅಳು ಸಿಟ್ಟು, ಮಾತು ಬಿಡುವುದು, ಊರಿಗೆ ಹೋಗುವುದು ಯಾವೂದೂ ಅವನ ಮೇಲೆ ಪರಿಣಾಮ ಬೀರಲಿಲ್ಲ. ನನ್ನ ಸತ್ಯಾಗ್ರಹ ವಿರೋಧಿಸಿ ಅವನ ಆಂದೋಲನವೇ ನಡೆಯಿತು. ಹಾಗೂ ಹೀಗೂ ಎರಡು ವರ್ಷ ಜಗ್ಗಿದ ಸಂಗ್ರಾಮದ ಕೊನೆ - ಸ್ವಾತಂತ್ರ.. ನನ್ನ ಬೆಚ್ಚನೆ ಗೂಡಿನ ಮರಿ ವಿಶಾಲ ಆಕಾಶದ ನೀಲಿಯಲ್ಲಿ ಹಾರತೊಡಗಿತು, ಜತೆಹಕ್ಕಿಯೊಡನೆ.
ಮನೆಯ ಎಲ್ಲರೂ ಮತ್ತು ಹಿತವರು ಕೂತು ಮಾತುಕತೆ ನಡೆಸಿದ ಸಂಜೆ ಸ್ವಾತಂತ್ರ್ಯದ ಕರಾರು ಜಾರಿಗೆ ಬಂತು. ಅವರಿಬ್ಬರೂ ಮದುವೆಯಾಗುವುದು, ಹತ್ತಿರದಲ್ಲೋ ದೂರದಲ್ಲೋ ಬೇರೆ ಮನೆ ಮಾಡಿಕೊಂಡಿರುವುದು, ನಮಗೆ ಬೇಸರವಿಲ್ಲವೆಂದರೆ ನಾವು ಕರೆದಾಗ ಇಲ್ಲಿ ಬಂದು ಹೋಗುವುದು, ಅವರ ಮನೆಗೆ ಉಳಿದ ಮಕ್ಕಳು ಯಾವಾಗ ಬೇಕಾದರೂ ಹೋಗಿ ಬರುವುದು ಅಂತ.. ಆಗ ಎಲ್ಲ ಸರಿಯೆನಿಸಿತ್ತು. ನಮಗೆ ಬೇಕಾದ ಶರತ್ತುಗಳೇ ಅಲ್ಲವೇ. ಎಲ್ಲಕ್ಕೂ ಒಪ್ಪಿಕೊಂಡಿದ್ದಾರೆ. ಇನ್ನೇನು. ಅವರಿಗೆ ಒಬ್ಬರಿನ್ನೊಬ್ಬರು ಇಷ್ಟವಾಗಿದ್ದಾರೆ. ನಮಗೆ ಇಷ್ಟವಾಗಿಲ್ಲ ಅಂತ ಹೇಗೆ ತಡೆಯುವುದು. ಇನ್ನೊಂದು ನೆಲೆಯಾಗಲಿ. ತಂಪೆನಿಸಲಿ ಅಂದ್ಕೊಂಡೆ.
ಆಮೇಲೆ ನೋಡಿದ್ರೆ ತಂಪು ಬೆನ್ನ ಹುರಿಯನ್ನೇ ಹಿಂಡುವ ಚಳಿಯಾಗಿಬಿಟ್ಟಿತು. ಚಿಕ್ಕ ಮಗುವಾಗಿದ್ದಾಗಿನಿಂದಲೂ ಒಂದಿನವೂ ಅಮ್ಮನನ್ನು ಬಿಟ್ಟಿರಲಿಲ್ಲ. ಅವನ ಅಣ್ಣ ತಂಗಿ ಇಬ್ಬರೂ ಆರಾಮಾಗಿ ರಜೆಯಲ್ಲಿ ಊರು ಸುತ್ತಿ ಬಂದರೆ, ಇದು ಅಮ್ಮ ಬೇಕೆನ್ನುವ ಕಂದ.. ಎಷ್ಟು ದೊಡ್ಡ ಹೋಟೆಲ್ಲಿನ ಊಟವಾದ್ರೂ - ಥೂ ಅದೇನ್ ಊಟಾನೋ ಅಮ್ಮ, ನೀನ್ ಮಾಡಿದ್ ತಿಳಿಸಾರು ಅನ್ನ, ಗೊಜ್ಜು ಹಾಕಿ ಕೊಡಮ್ಮ ಅಂತ ಉಣ್ಣುವುದೇ ಚಂದ.
ಅಂತದ್ರಲ್ಲಿ ಅವಳಿಗೆ ನಮ್ ಥರಾ ಅಡಿಗೆ ಬರುತ್ತಾ,ಹೋಗ್ಲಿ ಅಡಿಗೆ ಮಾಡ್ತಾಳಾ, ಅಥವಾ ಆಫೀಸ್ ಮುಗಿದ ಕೂಡಲೇ ಪಾರ್ಲರಿಗೆ ಹೋಗಿ ಕೂದಲು ಟ್ರಿಮ್ ಮಾಡಿಸಿಕೊಳ್ಳುವುದೇ ಕೆಲಸವಾ.. ಅಂತ ಅಂದುಕೊಂಡರೆ ಮದುವೆಯ ದಿನ ಬಂದ ವಧುವೇ ಬೇರೆ! ಫೋಟೋ ಹುಡುಗಿಯೇ ಅಲ್ಲ.. ಓಹ್ ಇಲ್ಲ ಅವಳೇ ಇವಳು - ಆದರೆ ಇದೇನು ಉದ್ದ ಜಡೆ, ಅರಳು ಕಣ್ಣು ಪುಟ್ಟ ಬಾಯಿಯ ತುಂಟ ನಗೆ,ಸರಳ ಅಲಂಕಾರದಲ್ಲಿ ಹಿತವಾಗಿ - ನಮ್ಮನೆ ಮಗಳಂತೆಯೇ ಕಾಣಿಸುವ ಹುಡುಗಿ.
ಇಲ್ಲ ಅದು ಬ್ಯೂಟಿ ಪಾರ್ಲರಿನ ಅಲಂಕಾರವಲ್ಲ.. ಹಸೆಮಣೆ ಇಳಿದ ಮೇಲೂ ಇಲ್ಲೆ ಮನೆಯ ಅಡಿಗೆ ಮನೆಯಲ್ಲಿ ಕಾಯಿತುರಿಯುತ್ತ ಕೂತ ನಿಡುಜಡೆಯ ಸೈಲೆಂಟ್ ಸುಂದರಿ! ಆ ಉದ್ದುದ್ದ ಬೆರಳುಗಳು ತೆಂಗಿನ ಕಾಯಿಯನ್ನು ಒಡೆದು ಕಾಯಿಹಾಲು ಲೋಟಕ್ಕೆ ತುಂಬಿಸಿ ತುರಿಮಣೆಯಲ್ಲಿ ತುರಿಯುವ ಚಂದ ಕಂಡೆ. ಇವನಿಗಿಷ್ಟವಾಗಿದ್ದರಲ್ಲಿ ಅತಿಶಯೋಕ್ತಿಯೇನಿಲ್ಲ ಅನ್ನಿಸಿತು. ಆಮೇಲೆ ಯಾವಾಗಲೋ ಮಗಳು ತಂದು ತೋರಿದಳು ಅವಳು ಬರೆದ ಚಿತ್ರಗಳನ್ನು.. ಓಹ್ ಇದೇನು ನಮ್ ಮೈಸೂರು ಅರಮನೆಯಲ್ಲಿ ನೋಡಿದಂತಹ ಚಿತ್ರಗಳು. ಜಲವರ್ಣ ಕಲಾವಿದೆ ಅವಳು. ಕಥಕ್ ತುಂಬ ಚೆನ್ನಾಗಿ ಮಾಡುತ್ತಾಳಂತೆ. ಹಾಡು ಬರುವುದಿಲ್ಲ, ಕೇಳಲಿಕ್ಕಿಷ್ಟ.. ಹೀಗೇ ಒಂದೊಂದು ದಿನ ಒಂದೊಂದೇ ಸುದ್ದಿ...ನಾಲ್ಕಾರು ಸಂದರ್ಭಗಳಲ್ಲಿ ಒಡನಾಡಿದಾಗ ಇದೇನೂ ನಂಗೂ ಇಷ್ಟವಾಗ್ತಾ ಇದಾಳೆ ಇವಳು..ಅವನಿಗೆ ಇಷ್ಟವಾಗದ ಇದ್ದಿರಲಿಕ್ಕೆ ಸಾಧ್ಯವೇ ಇಲ್ಲ - ಆದರೆ ಬಾಯಿ ಬಿಟ್ಟು ಹೇಳುವುದು ಹೇಗೆ.
ನಾನು ಜಾಕೆಟ್ಟು ಬಿದ್ದಿರದ ಕುರ್ಚಿಯನ್ನು ಸುಮ್ಮ ಸುಮ್ಮನೇ ಓರಣವಾಗಿಡುತ್ತೇನೆ, ಬೆಳಿಗ್ಗೆ ಎದ್ದ ಕೂಡಲೇ ಕಣ್ಣು ಅವನ ರೂಮಿನ ಸೊಳ್ಳೆಪರದೆಯೊಳಗೆ ಹೋಗುತ್ತದೆ. ಅದು ಖಾಲಿ ಹಾಸಿಗೆ. ಬದುಕಲೇನು ಬೇಕು ಮೇಲೊಂದು ಆಕಾಶ, ಕೆಳಗೊಂದು ಭೂಮಿ.. ಆದ್ರೇನು ಮಾಡುವುದು ಭೂಮಿ ತಿರುಗುತ್ತದೆ. ಇದ್ದ ಜಾಗ ಬದಲಾಗುತ್ತದೆ!
ಮೊದಮೊದಲು ಅವನು ನನ್ನನ್ನು ಮಿಸ್ ಮಾಡಿಕೊಳ್ಳುತ್ತಿರುವುದಷ್ಟೇ ನನ್ನ ಕಣ್ಣಿಗೆ ಕಾಣುತ್ತಿತ್ತು. ಈಗ ಅವಳ ಮಾಧುರ್ಯವೂ ಗೊತ್ತಾಗುತ್ತಿದೆ. ಅವನು ಅದೇ ಮಗ. ಆದರೆ ಅವಳು ಸೊಸೆಯಲ್ಲವಾ ಅಂತ ಹಿಂದೆಳೆಯುವ ಮನಸು.
ನಾನೂ ನನ್ನವರೂ ನಿದ್ದೆಯಿರದ ರಾತ್ರಿ ಕಳೆದೆವು. ಮಧ್ಯಾಹ್ನದಲ್ಲಿ ಉಯ್ಯಾಲೆಯಲ್ಲಿ ಮತ್ತೆ ಚರ್ಚೆ.
ಬೇಡ ಹೋಗಿ ಅಂದವರು ಹೇಗೆ ಬನ್ನಿ ಅಂತ ಕರೆಯುವುದು? ನನ್ನವರ ಮಾತು. ನನಗೆ ಅದಕ್ಕೂ ಸಿಟ್ಟು. ಹೀಗೆ ಮಾಡಿದ್ರೆ ಹೇಗೆ ಅವರು ಮಕ್ಕಳು ತಾನೇ! ಅದಕ್ಕವರ ಸಮಜಾಯಿಷಿ ಮಗ ನಮ್ಮವನು ಸರೀ, ಆದ್ರೆ ಸೊಸೆ? ನಂಗೂ ಏನು ಹೇಳಲೂ ಗೊತ್ತಾಗಲಿಲ್ಲ.
ಒಂದಿನ ರಾತ್ರಿ ಮಲಗಿದಾಗ ನೆನಪಾಯಿತು. ಪುಟ್ಟ ಊರಿನಲ್ಲಿ ನನ್ನ ಮೊದಲ ದಾಂಪತ್ಯಜೀವನ. ಮನೆತುಂಬ ಜನಗಳಿದ್ದೂ ನಾನು ಒಬ್ಬಳೇ. ಅತ್ತೆ ಅತ್ತಿಗೆಯರು ಯಾವ ಕಿರಿಕಿರಿ ಮಾಡದಿದ್ದರೂ ಏನೋ ಬಿಗುಮಾನ. ಆದಷ್ಟು ಬೇಗ ನಮ್ಮದೇ ಒಂದು ನೆಲೆ ಕಾಣುವಾಸೆ. ಎಲ್ಲ ನೆರವೇರಿದಾಗ ಈಗ ನನ್ನ ಮರಿಹಕ್ಕಿ ಬೆಳೆದು ನಿಂತಿದೆ. ತನ್ನ ಜೊತೆ ಹುಡುಕಿಕೊಂಡಿದೆ. ಅಮ್ಮನಿಗೆ ಯಾವತ್ತೂ ಮಗ/ಮಗಳು ಮಗುವೇ. ಆದರೆ ಅಮ್ಮ ಅವರು ಬೆಳೆದಿದ್ದನ್ನೂ ನೋಡುತ್ತಾಳೆ. ಮೊದ ಮೊದಲು ಭಿನ್ನವೆನಿಸಿ, ಕಷ್ಟವಾದರೂ ಹೊಂದಿಕೊಂಡುಬಿಡುತ್ತಾಳೆ. ಎಷ್ಟಂದರೂ ಮಕ್ಕಳಲ್ಲವೇ! ಮಗ್ಗುಲು ಹೊರಳಿದೆ. ನನ್ನವರಿಗೂ ನಿದ್ದೆ ಬಂದಿರಲಿಲ್ಲ. ನಾಳೆ ಹೋಗಿ ಮಾತಾಡ್ ಬಿಡೋಣ ಇಲ್ಲೆ ಬಂದಿರಿ ಅಂತ ಅಂದ್ರು.
ಆದ್ರೆ ಮರುದಿನ ಏನೋ ಬಿಂಕ. ಎಲ್ಲೂ ಹೋಗದೆ ಇನ್ನೆರಡು ವಾರ ಕಳೆದೆವು. ಹೀಗೇ ಇನ್ನೆರಡು ತಿಂಗಳು ಕಳೆದರೆ ಮದುವೆಯಾಗಿ ಒಂದ್ವರ್ಷ ಆಗುತ್ತದೆ..
ಅಷ್ಟರಲ್ಲಿ ಆಫೀಸಿನಿಂದ ಬರುವ ಮಗಳು ಸ್ವಲ್ಪ ಲೇಟಾಗಿ ಆದರೆ ಕುಣಿಯುತ್ತ ಬಂದಳು.. ಅಮ್ಮಾ ಕಂಗ್ರಾಟ್ಸ್ ನೀನು ಮತ್ತೆ ಅಜ್ಜಿಯಾಗ್ತಿದೀಯ. ಈಗ ಇನ್ನಷ್ಟು ಬಿಳಿಕೂದಲು ಮತ್ತು ಗೋದ್ರೆಜ್ ನವರ ಆರೋಗ್ಯ ಪೂರ್ಣ ಹೇರ್ ಡ್ರೈ..
ಎಲ್ಲರೂ ಮರುಮಾತಿಲ್ಲದೆ ಹೋಗಿ ಮನೆಗೆ ಕರೆತಂದೆವು. ಮಗ ನಮ್ಮವನೇ. ಸೊಸೆಯೂ ಅಷ್ಟೆ - ಮನೆಯಲ್ಲೆ ನಿಲ್ಲುವ ಮಗಳು!
ಸಂಜೆಯಲಿ ರಾತ್ರಿ ಇಳಿದಂತೆ..
ಹುಣ್ಣಿಮೆಯ ಹಾಲೂ ಹರಿದಂತೆ...!
ಎಷ್ಟೆಂದರೆ ಮಗಳು ಮದುವೆಯಾದಾಗಲೂ ನಂಗೆ ಅವನನ್ನ ಕಳೆದುಕೊಂಡ ಆ ಮೊದಲ ಮೌನದ ದಿನದ ನೋವು ಹಾಯದಂತೆ ಜತೆಗೆ ನಿಂತ ತಂಪಿನ ಕವಿತೆಯಂತ ಸೊಸೆಮುದ್ದು!

Thursday, December 13, 2007
ಚಾಂದ್ ಸೀ ಮೆಹಬೂಬಾ
ಚಾಂದ್ ಸೀ ಮೆಹಬೂಬಾ ಹೋ ತುಮ್ ಬಿಲ್ಕುಲ್ ಜೈಸಾ ಮೈನೇ ಸೋಚಾ ಥಾ...
ತುಂಬು ಚಂದಿರನಂತ ಹುಡುಗಿಯಿರಬಹುದೆ ಅವಳು ಅಂದುಕೊಂಡಿದ್ದೆ ಅವತ್ಯಾವತ್ತೋ ಅಮ್ಮ ತಂದಿಟ್ಟುಕೊಂಡ ಭಾವಗೀತೆಯ ಕ್ಯಾಸೆಟ್ಟಿನಲ್ಲಿ ಬಾರೆ ನನ್ನ ದೀಪಿಕಾ ಕೇಳಿದಾಗ.. ನನಗೆ ಆಡುವ ವಯಸ್ಸು..ಮತ್ಯಾವತ್ತೋ ಹೈಸ್ಕೂಲಿನ ಕ್ಲಾಸ್ ಮೇಟಿಗೆ ನೋಟ್ ಬುಕ್ಕು ಕೊಟ್ಟಿದ್ದು ನೋಡಿದ ಗೆಳೆಯರು ಚುಡಾಯಿಸಿದಾಗ ನಕ್ಕು ಸುಮ್ಮನಾಗಿದ್ದೆ ಗೊತ್ತಿತ್ತು ಇವಳಲ್ಲ ಅವಳು ಅಂತ. ಕಾಲೇಜಿಗೆ ಹೋಗುವಾಗ ಎಲ್ಲರೂ ಕಣ್ಣೆತ್ತಿ ನೋಡಬೇಕೆಂದು ಚಂದವಾಗಿ ಟ್ರಿಮ್ಮಾಗಿ ಹೋಗಿದ್ದು ಹೌದು, ಆದ್ರೆ ಅವಳು ಸಿಗಲೇಬೇಕೆಂದೇನೂ ಅಲ್ಲ.. ರಜೆಯಲ್ಲಿ ಊರಲ್ಲಿ ಅಕ್ಕತಂಗಿಯರು ಚುಡಾಯಿಸುವಾಗ, ಅಣ್ಣ ಅವನ ಇಂಜಿನಿಯರಿಂಗ್ ಗೆಳತಿಯರ ವಿಷಯ ಹೇಳುವಾಗ ಮನದಲ್ಲಿ ಪ್ರೀತಿಗೂಡಿನ ಮೊದಲ ಕಡ್ಡಿ.. ಅಮ್ಮ ಆಗಾಗ ತಂದಿಡುವ ಹೊಸ ಹೊಸ ಭಾವಗೀತಗಳಿಂದ ಅಲ್ಲಲ್ಲಿ ಕಡ್ಡಿ ಕದ್ದು ಗೂಡು ಒಂದು ಶೇಪಿಗೆ ಬರುತ್ತಿತ್ತು.. ಕನಸೆಲ್ಲ ಕಣ್ಣಲ್ಲಿ ನೆಲೆಯಾಗಿ ಬಂದ ಗಳಿಗೆಯಂತೋ ಏನೋ ಅಲ್ಲೆ ಮನೆ ಮಾಡಿ ಸುಬ್ಬಾ ಭಟ್ಟರ ಮಗಳಿಗೆ ಕಾಯತೊಡಗಿದೆ!
ಅವತ್ತು ಕಾರಿಡಾರಲ್ಲಿ ಜೋರು ಜೋರಾಗಿ ಬೀಸು ಹೆಜ್ಜೆ ಬೀಸುಗೈ ಮಾಡುತ್ತ ನಡೆದವನ ನೋಟ್ ಬುಕ್ಕಿಗೆ ನಿನ್ನ ದಾವಣಿ ಸಿಕ್ಕಿದ್ದು ಹ್ಯಾಗೆ. ಸಿಕ್ಕ ದಾವಣಿಯನ್ನು ಬಿಡಿಸಿಕೊಳ್ಳುತ್ತ ಸಿಡುಕುಗಣ್ಣಲ್ಲಿ ನೋಡಿದ ನಿನ್ನ ನೋಟ ನನ್ನ ಸಿಕ್ಕಿಸಿಹಾಗಿದ್ದು ಹೇಗೆ? ಯಾರು ಹೇಳಬಲ್ಲರು ಇದನ್ನ..
ಅಂತೂ ಇಂತೂ ಜೋಪಾನ ಮಾಡಿ ಕಟ್ಟಿದ ಗೂಡಲ್ಲಿ ನಿನ್ನೆಡೆಗಿನ ಪ್ರೀತಿಮೊಟ್ಟೆ.. ಕಾವು ಕೊಡುತ್ತೀಯಾ ನೀನು? ಹೇಗೆ ಕೇಳಲಿ ಅಂತ ಗೊತ್ತಾಗದೆ ಒಂದ್ವಾರ ಒದ್ದಾಡಿದೆ..ಬೆಳಿಗ್ಗೆ ಕ್ರಿಕೆಟ್ ಪ್ರಾಕ್ಟೀಸಿಗೆ ಹೋದ್ರೆ ಎಲ್ಲಾ ಬಾಲುಗಳೂ ವೈಡೇ..ಬ್ಯಾಟಿಂಗಲ್ಲಿ ಪ್ರತಿಸಲವೂ ಮೊದಲ ಬಾಲಿಗೇ ಔಟು.. ಕೋಚ್ ಗೆ ಸಿಟ್ಟು ಏನಪ್ಪಾ ಕ್ಯಾಪ್ಟನ್ ಆಗಿ ಹೀಗ್ ಮಾಡಿದ್ರೆ ಹೇಗೆ? ಏನಂತ ಹೇಳಲಿ ನಾನು.. ನನ್ನ ಗುರಿಯೆ ತಪ್ಪೋಗಿದೆ ಅಂತಲೆ ಗುರಿಯೊಂದು ಹೊಸತಾಗಿ ಮೂಡಿದೆ ಅಂತಲೆ? ಡಿಫೆನ್ಸೇ ಇಲ್ಲದೆ ಬರಿಗೈಯಲ್ಲಿ ನಿಂತಿದೀನಿ ಅವಳಿಗಾಗಿ, ಭ್ಯಾಟಿಂಗ್ ಹೆಂಗ್ ಮಾಡಲಿ ಅಂತಲೇ?
ಏನೋ ಒಟ್ಟು ಆ ವಾರ ಕಳೆದೆ.
ಮುಂದಿನ ವಾರ ಅವಳೇ ಬರಬೇಕಾ. ಲೈಬ್ರರಿಯಲ್ಲಿ ನಾನು ತಗೊಂಡ ಪುಸ್ತಕವೇ ಅವಳಿಗೆ ಬೇಕಿತ್ತಂತೆ. ಲೈಬ್ರರಿಯನ್ ಕೊಟ್ಟ ಡೀಟೈಲ್ಸ್ ತಗೊಂಡು ನನ್ನತ್ರ ಬಂದಿದ್ದಳು..
ಓಹ್ ನೀನಾ ಅನ್ನುವ ಅನ್ನುವ ಅಚ್ಚರಿತುಂಬಿದ ಕಣ್ಣುಗಳ ಆಳಕ್ಕೆ ಇಳಿದವನಿಗೆ ಮತ್ತೆ ಮೇಲೆ ಬರಲಾಗಲಿಲ್ಲ. ನಾನೇನೂ ಹೇಳದೆ ಅವಳಿಗೆ ಗೊತ್ತಾಗಿಹೋಗಿತ್ತು. ಅವಳ ಕೆನ್ನೆಕೆಂಪು ನಂಗೆ ಅದನ್ನೇ ಸಾರಿ ಸಾರಿ ಹೇಳಿತು.. ತಗೋಳಿ ಅಂತ ನೋಟ್ ಬುಕ್ ಕೊಡಕ್ಕೆ ಹೋದೆ - ಅವಳು ಎಳೆಚಿಗುರಿನಂತ ಬೆರಳುಗಳಲ್ಲಿ ಆ ಮುದ್ದಾದ ಬಾಯಿ ಮುಚ್ಚಿಕೊಂಡು ನಗುನಗುತ್ತ ತಲೆಯಾಡಿಸಿ ಹೊರಟು ಹೋದ ಮೇಲೆ ಗೊತ್ತಾಯಿತು. ಅವಳಿಗೆ ಬೇಕಿರುವುದು ನನ್ನ ನೋಟ್ ಬುಕ್ಕಲ್ಲ ಲೈಬ್ರರಿಯಲ್ಲಿ ತಗೊಂಡು ಎರಡು ವಾರ ಡ್ಯೂ ಆಗಿರೋ ಪುಸ್ತಕ ಅಂತ.. ಏನ್ ಮಚ್ಚಾ ಅಂತ ಗೆಳೆಯರು ಕಂಬಕಂಬಗಳ ಸಂದಿಯಿಂದ ಹೊರಬರುತ್ತಿದ್ದರೆ ಏನು ಉತ್ತರ ಕೊಡಲೂ ಹೊಳೆಯುತ್ತಿಲ್ಲ. ಕುಳಿತಲ್ಲಿ ಅವಳು, ನಿಂತಲ್ಲಿ ಅವಳು, ನೋಡಿದಾ ಕಡೆಯೆಲ್ಲ ಅವಳೇ ಅವಳು.. ವೈದೇಹಿ ಏನಾದಳೋ ಎಂದು ಪರಿತಪಿಸುವ ರಾಮನಿಗಾದರೂ ಗೊತ್ತಿತ್ತು ಅವಳು ಎಲ್ಲಿ ಹೋಗಿದ್ದರೂ ನನ್ನವಳೇ, ನನಗಾಗೇ ಕಾಯುವಳೆಂದು.. ನಾನು ಅವಳು ಮಿಂಚುಕಣ್ಣನ್ನ ಮಿಂಚಿಸಿ ಅಲ್ಲಲ್ಲಿ ಓಡಾಡುವಾಗ ಆ ಕಣ್ಣ ಮಿಂಚು ನಂಗೇನಾ ಇನ್ಯಾರಿಗಾದ್ರೂ ತಾಗುತ್ತಿದೆಯಾ ಅಂತ ನೋಡಬೇಕಿತ್ತು.
ಇಷ್ಟೆಲ್ಲ ಆಗಿ ಇನ್ನೇನೇನೋ ಆಗಿ ಮಿಂಚುಕಣ್ಣಿನ ತಂಪು ತಿಂಗಳಿನ ಅವಳು ಹೂಗೊಪ್ಪಲಿನ ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ಸೀತೆಯಂತ ಗೊತ್ತಾಯಿತು. ಅತ್ರಿಯವರ ಹಾಡು ಕಿವಿಯಲ್ಲಿ ಗುನುಗುತ್ತಿದ್ದರೆ, ನಾನು ಅವಳಷ್ಟೇ ಬೆಳ್ಳಗಿದ್ದೇನಾ, ಎಲ್ಲಾದರೂ ಅವಳ ಕೂದಲಿಗೆ ಹೋಲಿಸಿಕೊಂಡುಬಿಟ್ಟರೆ ಅಂತ ದಿಗಿಲಾಗುತ್ತಿತ್ತು.. ಸಧ್ಯ ನಮ್ದು ಜೋಯಿಸರ ಮನೆಯಲ್ವಲ್ಲಾ ಅಂತ ಸಮಾಧಾನ..
ಆಮೇಲೆ ನಡೆದಿದ್ದು ನಾನು ಬದುಕಿಡೀ ನೆನಪಿನಲ್ಲಿ ಸವಿಯಬಹುದಾದ ಮಾಧುರ್ಯದ ದಿನಗಳು. ಬೈಕಿರಲಿಲ್ಲ, ಒಂದೊಂದ್ಸಲ ಎರಡು ಕಾಫಿಗೆ ದುಡ್ಡಿರ್ತಿರಲಿಲ್ಲ, ಸಿನಿಮಾಕ್ಕೆ ಊರಲ್ಲಿ ಹೋಗುವಂತಿರಲಿಲ್ಲ, ಬೇರೆ ಊರಿಗೆ ಜೊತೆಯಾಗಿ ಹೋಗಿಬರುವ ಪಯಣದ ಬಸ್ ಸ್ಟಾಂಡಿಗೆ ಇಬ್ಬರೂ ಜೊತೆಯಾಗಿ ಹೋಗಿ ಬಸ್ ಹತ್ತುವಂತಿಲ್ಲ, ಸಂಜೆ ನೆನಪಾದರೆ ಮೆಸೇಜು ಕುಟ್ಟಲು ಮೊಬೈಲ್ ಇರಲಿಲ್ಲ, ಮನೆಯ ಫೋನಿಗೆ ಕರೆಮಾಡಲು ಧೈರ್ಯವಿರಲಿಲ್ಲ, ಎಲ್ಲೂ ನನ್ನ ಪ್ರೀತಿಯ ಮೊಟ್ಟೆಗೆ ಕಾವು ಸಿಕ್ಕಿ ಮರಿಯಾಗುತ್ತಿರುವ ಸುಳಿವನ್ನೂ ಬಿಟ್ಟುಕೊಡುವಂತಿರಲಿಲ್ಲ.. ಆದರೆ ಆ ಕಾವು - ಆಹ್ ಎಷ್ಟು ಹಿತ.. ಕಾರಿಡಾರಿನಲ್ಲಿ ನಡೆಯುತ್ತ ಅಲ್ಲಿ ನನ್ನೆಡೆ ಹೊರಳುವ ಮಿಂಚುನೋಟದಲ್ಲಿ - ಹಗಲಿನಲಿ ಕಾಣುವುದು ನಿಮ್ಮಾ ಕನಸೂ, ಇರುಳಿನಲಿ ಕಾಡುವುದು ನಿಮ್ಮ ನೆನಪೂ - ರತ್ನಮಾಲಾರ ದನಿ ಉಲಿಯುತ್ತಿತ್ತು.. ನಿನದೇ ನೆನಪೂ ದಿನವೂ ಮನದಲ್ಲೀ ಅಂತ ಗುಂಯ್ ಗುಡುವ ಪಿ.ಬಿ.ಶ್ರೀನಿವಾಸರ ದನಿಯ ಹಾಡು ನನ್ನ ಮನಸು.. ಮಳೆಗಾಲದಲ್ಲಿ ಬೆಚ್ಚಗೆ ಒಲೆಮುಂದೆ ಕೂತಂತೆ, ಉರಿಬೇಸಿಗೆಯಲ್ಲಿ ನೇರಳೆಮರದ ಅಡಿಯಲ್ಲಿ ಕೂತು ಹೆಕ್ಕಿ ತಿಂದ ಹಣ್ಣರುಚಿಯಂತೆ, ತಂಪಿನಂತೆ, ಮಾಗಿಚಳಿಯ ಬೆಳಗಲ್ಲಿ ಮೈಸುತ್ತಿಕೊಂಡ ಕಂಬಳಿಯಂತೆ - ಹೀಗೇ ಅಂತ ಹೇಗೆ ಹೇಳಲಿ..
ಈಗೇನ್ ಗೊತ್ತಾ, ಬೇಕೆಂದಾಗ ಸುತ್ತಲು ಬೈಕಿದೆ, ಸಂಜೆ ಯಾವ ರೆಸ್ಟುರಾದಲ್ಲಿ ಬೇಕಾದರೂ ಕೂತು ತಿನ್ನಬಹುದಾದ ಬ್ಯಾಲನ್ಸಿದೆ,ಕೆಲಸವಿದೆ, ಯಾರು ನೋಡಿ ಕೇಳಿದರೂ ಉತ್ತರಿಸುವ ಧೈರ್ಯವಿದೆ," ಯಾಕೋ ನಿಂಗೆ ಯಾರೂ ಇಷ್ಟ ಆಗ್ತಿಲ್ಲ,ಹೋಗ್ಲಿ ನೀನೇ ಹುಡುಕ್ಕೋ" ಅಂತ ಹೇಳುವ ಅಮ್ಮ ಇದಾಳೆ.. ಆದ್ರೇನ್ ಮಾಡಲಿ
ನನ್ನ ಸೀತಾದೇವಿ ಬೇರೆ ರಾಮನನ್ನೇ ಹುಡುಕಿಕೊಂಡುಬಿಟ್ಟಿದ್ದಾಳೆ! ಕಾರಣ ಅವಳು ಹೇಳಲಿಲ್ಲ , ಹೇಳುವುದಿಲ್ಲ. ನನಗೆ ಬೇಡವೂ ಬೇಡ.
ಪಿಲಿಯನ್ ತುಂಬುವುದಿಲ್ಲ, ರೆಸ್ಟುರಾ ತಿಂಡಿ ಯಾವತ್ತಿಗೂ ಇನ್ನೊಂದ್ಸ್ವಲ್ಪ ಹೊತ್ತಿರಲಿ, ಈಗ್ಲೇ ಖಾಲಿಯಾಗುವುದು ಬೇಡ ಅನ್ನಿಸುವುದಿಲ್ಲ, ಸಿನಿಮಾಗೆ ಕ್ಯೂ ನಿಂತು ಅಡ್ವಾನ್ಸ್ ಟಿಕೆಟ್ ಖರೀದಿಸುವ ಉತ್ಸಾಹವಿಲ್ಲ, ಯಾರು ನೋಡಿದರೇನು ಬಿಟ್ಟರೇನು ಅನ್ನುವ ಅಸಡ್ಡಾಳತನ.. ಅಮ್ಮನ ಸಲಹೆಗೆ ಹುಂ ಅನ್ನುವ ಬಿಗುಮಾನದ ಹೊರತಾಗಿ ಇನ್ನೇನಿದೆ.. ನನ್ನ ಹಕ್ಕಿ ಮೊಟ್ಟೆ ಮರಿಯಾದ ಕೂಡಲೇ ಪುರ್ರಂತ ಹಾರಿಹೋಗಿದೆ. ಮರಿಗೆ ನನ್ನ ನೆನಪಿನ ತುತ್ತಿನೂಟ.. ಗೂಡಿನ ಕಡ್ಡಿ ಒಂದೊಂದೇ ಬೀಳುತ್ತಿದೆ. ಚಳಿಗಾಲಕ್ಕೆ ಬೆಚ್ಚಗಿರಿಸಲು ಹತ್ತಿಪುರುಳೆ ತರಬೇಕೆನಿಸುತ್ತಿಲ್ಲ.. ಈಗ ಭಾವಗೀತೆಗಳ ಮೆರವಣಿಗೆ ಮುಗಿದು ಗಝಲುಗಳ ಸಂಜೆಪಯಣ.. ಚಮಕ್ತೇ ಚಾಂದ್ ಕೋ ಟೂಟಾ ಹುವಾ ತಾರಾ ಬನಾಡಾಲಾ..
ಇಲ್ಲ ನನಗೆ ಸಿಟ್ಟಿಲ್ಲ ದುಃಖವಿಲ್ಲ, ಏನೂ ಇಲ್ಲದ ಭಾವವನ್ನು ಭರಿಸುವ ತಾಕತ್ತಿಲ್ಲ. ಹೊಸದೊಂದು ಗೂಡಿನ ನೆನಪು ಮೈಯನ್ನು ಮುಳ್ಳಾಗಿಸುತ್ತದೆ. ದೇವಾನಂದನ ತರ - ತೇರೇ ಘರ್ ಕೇ ಸಾಮ್ನೇ - ಅಂತ ಅವಳ ಮನೆ ಮುಂದೇನೇ ಮನೆ ಮಾಡ್ಕೊಂಡ್ ಬಿಡಲಾ ಅಂತ ಯೋಚಿಸಿ ನನ್ನಷ್ಟಕ್ಕೆ ನಾನೆ ನಗುತ್ತೇನೆ.. ಉಂಹುಂ ನನ್ನ ದಾರಿಯಲ್ಲ ಅದು..
ಅವಳ ಗೂಡು ಬೆಚ್ಚಗಿರಲಿ.
ನಾನು ಮುಸಾಫಿರ್ ಹುಂ ಯಾರೋ.. ಅಂತ ಗುನುಗುವ ಕಿಶೋರನ ಉಲಿಯಾಗಿದ್ದೇನೆ. ಗೂಡಿನ ಯೋಚನೆ ಇಲ್ಲದೆ ಹಾಯಾಗಿದ್ದೇನೆ..
ಚಾಂದ್ ಸೀ ಮೆಹಬೂಬಾ ಹೈ ವೋ - ಬಿಲ್ಕುಲ್ ಜೈಸಾ ಮೈನೇ ಸೋಚಾ ಥಾ.. ಆದ್ರೆ.. ಚಂದಿರನಷ್ಟೇ ದೂರ.. ಚಂದಿರನಷ್ಟೇ ಹತ್ತಿರ..
(ತಪ್ಪು ತಿದ್ದಿದ ತ್ರಿವೇಣಿಯಕ್ಕನಿಗೆ ಆಭಾರಿ)

Tuesday, December 11, 2007
ವೈಶಾಲಿಯಲ್ಲಿ...
ಬುದ್ಧನ ಊರಂತೆ! ಮೊದಲ ಬಾರಿಗೆ ಗಣರಾಜ್ಯವೆಂಬ ಸಮುದಾಯದ ಬದುಕು ಅರಳಿದ್ದಲ್ಲಂತೆ! ಹೆಣ್ಣುಗಂಡೆಂಬ ಬೇಧವಿಲ್ಲದೆ ದಿನವಿಡೀ ಒಟ್ಟಾಗಿ ದುಡಿದು, ಮೆಲ್ಲ ಕವಿಯುವ ಸಂಜೆಇರುಳಲ್ಲಿ ಸಾಮುದಾಯಿಕ ನರ್ತನವಿತ್ತಂತೆ. ಸುತ್ತ ನೋಡಿದಲ್ಲಿ ಹಸಿರು, ಸಮೃದ್ಧಿ, ಗಂಟೆಗೊರಳ ಕಾಮಧೇನುಗಳ ನಲ್ದಾಣ, ಶತ್ರುರಾಜ್ಯಗಳಿಗೆ ಅಬೇಧ್ಯ ಕೋಟೆಯಾಗಿ, ಹಲಕೆಲವು ವಿದ್ಯಾಕೇಂದ್ರಗಳಿಗೆ ಹೆಸರಾಗಿ.. ಮೆರೆದ ಜಾಗವಂತೆ.. ಓದಿದ ಹಲವು ಪುಸ್ತಕಗಳಲ್ಲಿ ನಾ ಕಂಡ ಚಿತ್ರಣವದು. ಕಾಯುತ್ತಿದ್ದೆ ಒಮ್ಮೆ ಅಲ್ಲಿ ಹೋಗಬೇಕೆಂದು. ಆ ಎಲ್ಲ ಕನಸಿನಂತಹ ದಿನಗಳ ನೆರಳು ಬಿದ್ದಿರುವ ಜಾಗದ ಗಾಳಿಯನ್ನೊಮ್ಮೆ ಉಸಿರೊಳಗೆ ಸೇರಿಸಬೇಕೆಂದು..
ಇಲ್ಲ ಅಯ್ಯೋ ಇದಲ್ಲ ಇದಲ್ಲ ಅದು...
ನಿನ್ನೆ ಕೆಲಸ ಮುಗಿಸಿ ಹಗುರಾದವಳು ಕೆಲಕ್ಷಣಗಳ ಮಟ್ಟಿಗೆಂದು ಟೀವಿ ಹಾಕಿ ಹೈರಾಣಾಗಿ ಹೋದೆ. ಆ ನನ್ನ ವೈಶಾಲಿಯಲ್ಲಿ ಇಬ್ಬರು ಪುಟ್ಟ ಮಕ್ಕಳನ್ನು ಟ್ರಾಕ್ಟರಿಲ್ಲ, ಎತ್ತಿಲ್ಲ ಅಂತ ಹೇಳಿ ನೇಗಿಲಿಗೆ ಕಟ್ಟಿ ಗದ್ದೆ ಉಳಲು ಹಚ್ಚಿದ್ದರು. ಹಿಂದೆ ಅವರನ್ನು ಮ್ಯಾನೇಜ್ ಮಾಡುತ್ತ ನಿಂತಿದ್ದ ಅಜ್ಜನಂತ ರೈತ.. ಅವನ ಮನೆಯಲ್ಲೂ ಮಕ್ಕಳಿರಬಹುದು! ಅವನಿಗದು ಬೇಕಿಲ್ಲ. ಮಾಲೀಕ ಕೊಟ್ಟ ಜೀತದ ಮಕ್ಕಳನ್ನು ಮನುಷ್ಯರಂತೆ ನೋಡಬೇಕೆಂದಿಲ್ಲ.. ಮಾಲಿಕ ಖುಶಿಯಾಗಬೇಕು. ನೆಲ ಉತ್ತಬೇಕು. ಫಸಲು ಬೆಳೆಯಬೇಕು..ಮನೆಯಲ್ಲಿ ತುತ್ತಿನ ಚೀಲ ತುಂಬಬೇಕು. ಆ ಪುಟ್ಟ ಜೀವಗಳು..ಅಪ್ಪ ಅಮ್ಮರೆಂದೋ ಮಾಡಿದ ಸಾಲಕ್ಕೆ ಅಕ್ಷರಶಃ ನೊಗ ಹೊರುತ್ತಿದ್ದಾರೆ. ಅವರಪ್ಪ ಅಮ್ಮ ಆರಿಸಿ ಕಳಿಸಿದ ನೇತಾ ಯೂನಿಯನ್ ಮಿನಿಸ್ಟರ್ (ರೂರಲ್ ಡೆವಲಪ್ ಮೆಂಟ್ ಬೇರೆ) ಆಗಿ ಮನೆಯಲ್ಲಿ ಕ್ರಿಸ್ಮಸ್ ರಜೆಗೆ ಯಾವ ರೆಸಾರ್ಟಿಗೆ ಮಕ್ಕಳನ್ನು ಕರೆದುಕೊಂಡು ಹೋಗಲೆಂದು ಯೋಚನೆ ಮಾಡುತ್ತಿರುತ್ತಾನೆ. ಅವನ ತಮ್ಮನೇ ಆದ ಜಮೀನ್ದಾರ ನಡೆಸುವ ಈ ಅಮಾನುಷ ಕೃತ್ಯ ಅವನಿಗೆ ಗೊತ್ತೇ ಇಲ್ಲ. ಮೀಡಿಯಾ ಪ್ರಶ್ನೆ ಮಾಡಿದರೆ - ಇಲ್ಲಪ್ಪ ನನ್ ತಮ್ಮ ಊರಲ್ಲಿ ಏನು ಕೆಲಸ ಮಾಡುತ್ತಿರುತ್ತಾನೋ ಇಲ್ಲಿ ದಿಲ್ಲಿಯಲ್ಲಿ ಕೂತ ನನಗೇನು ಗೊತ್ತು.. ನನಗೇನು ಸಂಬಂಧ? ಇದೆಲ್ಲ ಪ್ರತಿಪಕ್ಷದವರ ಕುತಂತ್ರ ಅಂತ ಸಬೂಬು ಹೇಳುತ್ತಾನೆ..
ಮಕ್ಕಳು ಎಳೆಯಲಾರದ ನೇಗಿಲನ್ನು, ಎಳೆದುಕೊಂಡು ಮುನ್ನಡೆಯುತ್ತಿದ್ದಾರೆ, ಹಿಂದೆ ಹಸಿವಿನ ಚೀಲ ತುಂಬಬೇಕಾಗಿರುವ ಇನ್ಯಾವನೋ ರೈತ ಕೈಯಲ್ಲಿ ಬಾರುಕೋಲು ಹಿಡಿದು ತುತ್ತಿನ ಚೀಲ ತುಂಬಹೊರಟಿದ್ದಾನೆ, ಇವರನ್ನೆಲ್ಲ ಬಳಸಿಕೊಂಡ ಜಮೀನುದಾರ ಇಲ್ಲಿ ಟ್ರಾಕ್ಟರ್ ಬರೋಲ್ಲ, ಎತ್ತು ಇಲ್ಲ, ಇರುವ ಆಳುಮಕ್ಕಳನ್ನ ಬಳಸದೆ ಇನ್ನೇನ್ ಮಾಡಲಿ, ಅವರಿಗೆ ಸಂಬಳ ಕೊಡ್ತೇನಲ್ಲ ಅಂತ ನಿರ್ಲಜ್ಜನಾಗಿ ಹೇಳುತ್ತಾ ಮೀಸೆ ಸವರುತ್ತಿದ್ದಾನೆ..
ಹುಲಿಯಂತ ಹುಲಿಯೂ ಹಸಿವಾದಾಗ ಆಕ್ರಮಣ ಮಾಡುತ್ತದೆಯಲ್ಲವೆ! ಇವನು ಯಾವ ಜಾತಿ?!(species)
ಎಲ್ಲೂ ನಡೆಯಬಾರದ ಕ್ರೌರ್ಯದ ಪರಮಾವಧಿ - ವೈಶಾಲಿಯಲ್ಲಿ, ಬುದ್ಧನ ಊರಲ್ಲಿ, ಗಣತಂತ್ರದ ಮೊದಲ ಉಲಿ ಹಬ್ಬಿದಲ್ಲಿ.. ನಾವೆತ್ತ ಹೋಗುತ್ತಿದ್ದೇವೆ?!
ನನಗೇನು ಮಾಡಬೇಕೋ ಗೊತ್ತಾಗುತ್ತಿಲ್ಲ :(

Monday, December 10, 2007
ಹೂವಿನಂತ ಕವಿತೆ
ಹೂವಿನಂತ ಕವಿತೆ
ಹಕ್ಕಿಯಾಗಿ ಹಾರಿಬಂದು
ಚೀಂವ್ ಗುಟ್ಟಿದ ಸಂಜೆ
ನೀಲಿ ಆಗಸದಲ್ಲಿ
ಕೆಂಪಿ ಸೂರ್ಯ ಮುಳುಗಿ
ಚಳಿಯ ಹೊದಿಕೆಯಿಂದಿಣುಕಿ
ನಗುವ ತಾರಾವಳಿ;
ಹಬೆಯಾಡುವ ಕಾಫಿ ಗ್ಲಾಸಿನಲ್ಲಿ
ಮತ್ತೆ
ಹೂವಿನಂತ ಕವಿತೆ
ಬೆಚ್ಚನೆ ನೆನಪಾಗಿ ಪಿಸುಗುಟ್ಟಿ
ರಸ್ತೆ ತುಂಬೆಲ್ಲ ಬೆಳಕಾಗಿ
ಪಾದಪಥದ ನಸುಗತ್ತಲಲ್ಲಿ
ಗೆಳೆಯರ ನಗುವಿನ ಗೀತಾವಳಿ;
ಹಕ್ಕಿ ಹಾರಿ ಹೋಗಿ
ನೆನಪು ಮಸುಕಾಗಿ
ಹೂವಿನಂತ ಕವಿತೆ
ಪದಗಳಷ್ಟೇ ಆಗಿ..
ಅಷ್ಟೇ ಮತ್ತೇನಿಲ್ಲ..
ಕಾಯುತ್ತಿದ್ದೇನೆ ಹೂವಿನಂತ ಕವಿತೆ
ಹಕ್ಕಿ ಹಾಗೆ ಹಾರಿ ಬರಬಹುದಾದ ಸಂಜೆಗೆ!
ಹಕ್ಕಿಯಾಗಿ ಹಾರಿಬಂದು
ಚೀಂವ್ ಗುಟ್ಟಿದ ಸಂಜೆ
ನೀಲಿ ಆಗಸದಲ್ಲಿ
ಕೆಂಪಿ ಸೂರ್ಯ ಮುಳುಗಿ
ಚಳಿಯ ಹೊದಿಕೆಯಿಂದಿಣುಕಿ
ನಗುವ ತಾರಾವಳಿ;
ಹಬೆಯಾಡುವ ಕಾಫಿ ಗ್ಲಾಸಿನಲ್ಲಿ
ಮತ್ತೆ
ಹೂವಿನಂತ ಕವಿತೆ
ಬೆಚ್ಚನೆ ನೆನಪಾಗಿ ಪಿಸುಗುಟ್ಟಿ
ರಸ್ತೆ ತುಂಬೆಲ್ಲ ಬೆಳಕಾಗಿ
ಪಾದಪಥದ ನಸುಗತ್ತಲಲ್ಲಿ
ಗೆಳೆಯರ ನಗುವಿನ ಗೀತಾವಳಿ;
ಹಕ್ಕಿ ಹಾರಿ ಹೋಗಿ
ನೆನಪು ಮಸುಕಾಗಿ
ಹೂವಿನಂತ ಕವಿತೆ
ಪದಗಳಷ್ಟೇ ಆಗಿ..
ಅಷ್ಟೇ ಮತ್ತೇನಿಲ್ಲ..
ಕಾಯುತ್ತಿದ್ದೇನೆ ಹೂವಿನಂತ ಕವಿತೆ
ಹಕ್ಕಿ ಹಾಗೆ ಹಾರಿ ಬರಬಹುದಾದ ಸಂಜೆಗೆ!
Wednesday, December 5, 2007
ಏಕಪಾತ್ರಾಭಿನಯ..
ಮನೆ ತುಂಬ ಜನ. ಇಷ್ಟು ದಿನ ಮಲಗೇ ಇರುತ್ತಿದ್ದ ಅಮ್ಮ ಇವತ್ತು ಚಂದ ಡ್ರೆಸ್ ಮಾಡಿಕೊಂಡು, ಹೊಸಾ ಪಾಪುನೆತ್ತಿಕೊಂಡು ಕೂತಿದಾಳೆ. ಬಂದವರೆಲ್ಲರನ್ನು ಮಾತಾಡಿಸುತ್ತ. ಎಲ್ಲರೂ ಪಾಪುವಿನ ಕೆನ್ನೆ ಅಮುಕುವವರೆ. ಚೆನಾಗಿದ್ನಲೆ ಮಗರಾಯ.. ಚಾನ್ಸ್ ಹೊಡೆದ್ ಬಿಟ್ಯಲಾ. ಅಡ್ದಿಲ್ಲೆ ಮನೆಗೊಬ್ಬ ಪುಟ್ಟ ಯಜಮಾನ.. ಹಂಗೆ ಹಿಂಗೆ. ಇವಳು ದೊಡ್ಡ ದೊಡ್ಡ ಕಂಬಗಳ ನಡುಮನೆಯ ಕತ್ತಲ ಕಂಬವೊಂದರ ಹಿಂದೆ ರೇಷ್ಮೆ ಫ್ರಾಕೊಂದು ಹಾಕಿಕೊಂಡು.. ಕೆನ್ನೆಗೆ ಕೈ ಕೊಟ್ಟು..ಯೋಚನೆಯಲ್ಲಿ ಮುಳುಗಿ..ಅಮ್ಮಮ್ಮ ನೋಡಿದವಳೆ ಹತ್ತಿರ ಬಂದು ಏನಾತೆಂದು ಕೇಳುವುದಕ್ಕಿಲ್ಲ. ಕಣ್ಣಕೊಳದ ಹನಿ ತುಳುಕಿಬಿಟ್ಟಿತು. ಈಗ ತಮ್ಮ ಬಂದನಲ್ಲ ನಾನಿನ್ಯಾರಿಗೂ ಬ್ಯಾಡ ಅಲ್ದಾ? ಯಾರೂ ನನ್ ಕೆನ್ನೆ ಹಿಂಡದೇ ಇಲ್ಲೆ.. ಅಮ್ಮಮ್ಮನಿಗೆ ತಡೆಯಲಾಗದ ನಗು. ಚಿಕ್ಕಿ ಹೇಳ ಹಾಳು ಮೂಳು ಕತೆ ಕೇಳಿ ಕೇಳಿ ಹಿಂಗಾಗಿರದು ನೀನು. ಯಾರಿಗೂ ಬ್ಯಾಡ ನೀನು ಅಂತ ಹೇಳಿದ್ ಯಾರು? ಎಲ್ರಿಗೂ ನೀನಿನ್ನು ಜಾಸ್ತಿ ಬೇಕು. ಅಮ್ಮನ್ನ ನೋಡಿಕೊಳ್ಳಕ್ಕೆ, ತಮ್ಮನ್ನ ಎತ್ತಿಕೊಳ್ಳಕ್ಕೆ, ಆಟ ಆಡಕ್ಕೆ, ಅವನ ಜೊತೆಜೊತೆಗೆ ಸ್ಕೂಲಿಗೆ ಹೋಗಕ್ಕೆ, ಎಲ್ಲಿಗೆ ಹೋದರೂ ಜೊತೆಯಾಗಿ ಬರೋ ಆ ತಮ್ಮನ ಜೊತೆ ಜೊತೆಗೇ ನಗ್ತಾ ಬರಲಿಕ್ಕೆ ಎಲ್ಲಕ್ಕೂ ನೀನೇ ಬೇಕು. ಮಳ್ ಮಳ್ ಯೋಚನೆ ಮಾಡಡ ಬಾ...ಒಂದು ಹಾಡು ಹೇಳ್ತಿ ಬಾ...
ಅವಳ ಸಂಜೆಗಳನ್ನ ಅವನು ತುಂಬಿದ. ಅವನ ಸಂಜೆಗಳಲ್ಲಿ ಅವಳು. ಇಬ್ಬರ ಸಂಜೆಗಳ ತುಂಬ ಮಾತು, ನಗೆ, ಇದ್ದ ಬದ್ದ ಆಟ, ಕುಸ್ತಿ, ಜಗಳ, ಸಿಟ್ಟು, ಅಳು, ಪೆಟ್ಟು, ಅವುಚಿಕೊಂಡು ನಿಂತ ಗಳಿಗೆಗಳು, ಮಾತು ಮುರಿದ ದಿನಗಳು, ಮುರಿದ ಮೂರು ದಿನಕ್ಕೆ ಸೇರಿಕೊಂಡ ಸರಪಳಿಗಳು, ಕತೆ, ಸಿನಿಮಾ, ಹಾಡು, ಯಕ್ಷಗಾನ, ನಾಟಕ, ಏಕಪಾತ್ರಾಭಿನಯ, ಪತ್ತೇದಾರಿ ಕತೆಗಳು, ಕೋರ್ಟು ಶಾಲೆಗಳ ಆಟ, ರಜೆಯಲ್ಲಿ ಊರಿಗೆ ಓಟ, ಎಲ್ಲಿ ಹೋದರೂ ಅವಳ ಬೆನ್ನಿಗೆ ಅವನು, ಅವನ ಕೈ ಹಿಡಿದು ಅವಳು.. ಅವಳು ಸುಮ್ಮನೆ ಮೂಲೆಯಲ್ಲಿ ಕೂತು ಪುಸ್ತಕದ ಮೇಲೆ ಪುಸ್ತಕ, ಅವನು ಅಂಗಳದಲ್ಲಿ ಆಟದ ಮೇಲೆ ಆಟ, ಅವಳು ಮೆತ್ತಗೆ ಯಾರಿಗೂ ಬೇಸರವಾಗದಂತೆ ಅರಳಿ..ಅವನು ಜೋರಾಗಿ ಎಲ್ಲರ ಕಣ್ಣು ಅವನ ಮೇಲಿರುವಂತೆ ಬೆಳಗಿ... ಆ ದಿನಗಳ ತುಂಬ ಹುಳಿ-ಸಿಹಿಯ,ಕಾರ ಒಗರುಗಳ ಅನನ್ಯ ರಸಭಾವ.. ರಸ ಕೆಡಲು ಹೊರಟರೆ ಅಮ್ಮನ ಗುದ್ದು, ಸಲಹೆ, ಕತೆಗಳ ಪ್ರಿಸರ್ವೆಂಟ್..
ಒಂದಿನ ಏನೋ ಹುಳುಕು ಮಾಡಿ ಅವನನ್ನ ಸಿಕ್ಕಿಸಿ ಹಾಕಿದ್ದಳು ಅವಳು. ಅಮ್ಮನಿಂದ ಎರಡು ಒದೆ ಬಿದ್ದಿತ್ತವನಿಗೆ. ಮುಖ ಚಪ್ಪೆ ಮಾಡಿ ನಿಂತ ಪುಂಡನ ನೋಡಿ, ಇವಳ ಮುಖ ಪೇಲವ. ನೋಡಿದ ಅಮ್ಮನಿಗೆ ಗೊತ್ತಾಯಿತು ಹುಳುಕು.. ಒಂದು ರುಚಿ ರುಚಿಯಾದ ಟೀ ಮಾಡಿ ಕೊಟ್ಟು ಕೈಗೆರಡೆರಡು ಬೆಣ್ಣೆ ಬಿಸ್ಕೆಟ್ ಇಟ್ಟು ಇವತ್ತೊಂದು ಕತೆ ಹೇಳ್ತೀನಿ ಅಂತ ಕೂತಳು..
ಚಪ್ಪೆ ಮುಖದವರಿಬ್ಬರೂ ಅಮ್ಮನ ಬದಿ ಬದಿಗೆ..ಕಿವಿಯಾಗಿ..
ಒಂದೂರಲ್ಲಿ ಒಂದು ದೊಓಓಓಡ್ಡ ಮಾವಿನ ಮರ. ಆ ಊರಿಗೆ ಬರುವ ಎಲ್ಲರೂ ಮಾವಿನ ಮರವನ್ನ ದಾಟಿಕೊಂಡೇ ಬರಬೇಕು. ಎಲ್ಲರೂ ನೋಡಿ ಆಹಾ ಅಂತೇಳಿ ಹೋಗ್ತಿದ್ದರು. ಆ ಸಲ ಬೇಸಿಗೆ ಶುರುವಾಗುತ್ತಿದ್ದ ಹಾಗೆ ಮಾವಿನ ಮರದ ತುಂಬ ತೂಗಿ ಬಿದ್ದ ಬಂಗಾರ ಬಣ್ಣದ ಹಣ್ಣುಗಳು. ಪರಿಮಳವಂತೂ ಅರ್ಧ ಮೈಲಿ ದೂರಕ್ಕೇ ಬರುತ್ತಿತ್ತು. ಅಲ್ಲಿ ಬರುವವರೆಲ್ಲ ಆಸೆಯಿಂದ ಹಣ್ಣು ಕಿತ್ತು ಇನ್ನೇನು ಸಿಪ್ಪೆ ಕಚ್ಚುತ್ತಾ ಬಾಯಲ್ಲಿಡಬೇಕು.. ಅಷ್ಟರಲ್ಲಿ ಕಾಣಿಸಿಕೊಳ್ಳುತ್ತದೆ ಹಣ್ಣಿನೊಳಗೆ ಹುಳ.. ಥೂ ಅಂತ ಎಸೆದು ಇನ್ನೊಂದು ಹಣ್ಣು ಕಿತ್ತು ನೋಡಿದರೆ ಅದರಲ್ಲೂ ಹುಳ.. ಓ ಈ ರೆಂಬೆಯೇ ಸರಿಯಿಲ್ಲ ಅಂತ ಆ ಬದಿಗೆ ಹೋಗಿ ಅಲ್ಲಿ ಕಿತ್ತು ನೋಡಿದರೆ ಅದರಲ್ಲೂ.. ಹೀಗೇ ಬಂದವರೆಲ್ಲ ಕಿತ್ತು ನೋಡಿದ ಎಲ್ಲ ಹಣ್ಣಲ್ಲೂ ಹುಳ..ಎಲ್ಲರೂ ಛೀ ಥೂ ಅಂತ ಬಯ್ಯುತ್ತಾ ಅಯ್ಯೋ ಹುಳುಕು ಮಾವಿನ ಮರಾ ಇದು.. ಎಂತಕ್ಕು ಪ್ರಯೋಜ್ನವಿಲ್ಲ ಅನ್ನುತ್ತಾ ಹೋಗುತ್ತಿದ್ದರೆ ಮರದ ಕಣ್ಣಲ್ಲಿ ನೀರು..
ಆಂ ಮರದ ಕಣ್ಣಾಗೆ ನೀರಾ? ಅವನಿಗೆ ಆಶ್ಚರ್ಯ.
ಮರದ ಕಣ್ಣೆಲ್ಲಿರ್ತಮಾ ಅವಳ ಪ್ರಶ್ನೆ.
ಹೌದಲ್ಲಾ ಅಮ್ಮ ಯೋಚಿಸಿದಳು.. ಅದೂ ಅದೂ ಮರದ ಕಾಂಡದಿಂದ ರೆಂಬೆಗಳು ಹೊರಡ್ತಲಾ ಅಲ್ಲಿರ್ತು. ಅದು ಎಲ್ಲರಿಗೂ ಕಾಣಾ ಕಣ್ಣಲ್ಲ. ಕತೆ ಹೇಳುವವರಿಗೆ ಮಾತ್ರ ಕಾಣಿಸ್ತು ಅವಳ ಸಮಜಾಯಿಷಿ. ಸರಿ ಮುಂದೆ ಕೇಳಿ.
ಆ ಬೇಸಿಗೆಯಿಡೀ ಯಾರೂ ಆ ಮರದ ಹಣ್ಣು ಮುಟ್ಟಲಿಲ್ಲ. ಮುಟ್ಟುವುದಿರಲಿ ಅದರ ಹತ್ತಿರವೂ ಬರದೆ ಥೂ ಹುಳುಕ್ ಮಾವಿನ ಮರ ಅಂತ ಬೈದುಕೊಂಡು ಅದನ್ನ ಬಳಸದೆ ದೂರದ ದಾರೀಲಿ ಹೋಗ್ ಬಿಡುತ್ತಿದ್ದರು. ಒಂದಿನ ಒಬ್ಬವ ಋಷಿ ಬಂದ.
ಬಂದವನೇ ಈ ಹುಳುಕು ಮಾವಿನ ಮರ ನೋಡಿ ಕೇಳಿದ - ಯಾಕೆ ಮರವೇ ಬರೀ ಹುಳುಕು ಹಣ್ಣುಗಳು ಏನಾಯಿತು ನಿಂಗೆ ಏನು ಪಾಪ ಮಾಡಿದ್ದೆ. -
ಮರ ಅಳುಮುಖ ಮಾಡಿಕೊಂಡು ಹೇಳಿತು. ಹೋದ ಜನ್ಮದಲ್ಲಿ ನಾನು ಬರೀ ಹುಳುಕುತನ ಮಾಡ್ತಾ ಇದ್ದೆ. ಚಾಡಿ ಹೇಳಿಕೊಂಡು, ಯಾರನ್ನೂ ಸಹಿಸದೆ, ಎಲ್ಲರ ಹತ್ತಿರವೂ ಜಗಳ ಮಾಡಿಕೊಂಡು, ಯಾವುದನ್ನೂ ಯಾರ ಹತ್ತಿರವೂ ಹಂಚಿ ತಿನ್ನದೇ, ನಾನೇ ದೊಡ್ ಮನುಷ್ಯ ಅಂದ್ಕಂಡು ಶ್ರೀಮಂತಿಕೇಲಿ ಬದುಕಿದ್ದೆ. ಯಾರಿಗೂ ಸಹಾಯ ಮಾಡದೆ, ಎಷ್ಟು ಸಾಧ್ಯವೋ ಅಷ್ಟು ಕಷ್ಟ ಕೊಟ್ಟು, ಸುಳ್ಳು ಹೇಳಿ ಖುಷಿ ಪಡ್ತಾ ಇದ್ದೆ. ಅಣ್ಣ, ತಮ್ಮ, ಅಕ್ಕ ತಂಗಿ ಎಲ್ರಿಗೂ ಮೋಸ ಮಾಡ್ಕೋತ, ನೋವು ಕೊಡ್ತಿದ್ದೆ... ಅದಕ್ಕೆ ಈ ಜನ್ಮದಲ್ಲಿ ಹುಳುಕು ಮಾವಿನ ಮರ ಆಗಿ ಹುಟ್ಟಿ ಬಿಟ್ಟಿದೀನಿ. ನಾನು ಮಾಡಿದ ಹುಳುಕೆಲ್ಲ ನನ್ನೇ ತಿಂತಿದೆ ಈಗ. ಯಾರೂ ಮುಟ್ಟೋಲ್ಲ ನನ್ನ. ನೋಡಿದವರೆಲ್ಲ ಛೀ ಥೂ ಅಂತ ಹೋಗ್ತಿರ್ತಾರೆ..
ಆಂ ಹಂಗಾ.. ಅಯ್ಯೋ ನಾನ್ ನಿನ್ನತ್ರ ಮಾತಾಡಲ್ಲಪ್ಪ.. ಆಮೇಲೆ ನಂಗೂ ಹುಳುಕುಬುದ್ಧಿ ಬಂದ್ ಬಿಡತ್ತೆ ಅಂತ ಋಷಿ ಕೂಡ ಬಿಟ್ಟು ಹೋಗಿಬಿಡುತ್ತಾನೆ.
ಅವರಿಬ್ಬರೂ ಪಿಳಿಪಿಳಿ ಅಮ್ಮನ್ನೇ ನೋಡ್ತಿದಾರೆ.
ಅಮ್ಮ ಕತೆ ಮುಗೀತು. ನೋಡಿದ್ರಾ ಹುಳುಕು ಬುದ್ಢಿ ಮಾಡವ್ರಿಗೆ ಏನು ಗತಿ ಬರ್ತು ಅಂತ.. ಅಂತ ಕೇಳಿದಳು. ಇಬ್ಬರೂ ಹೌದೌದು. ನಾವು ಇನ್ಯಾವತ್ತೂ ಹಂಗೆ ಮಾಡಲ್ಲಮ್ಮಾ..ಅಂತ ಒಪ್ಪಿಕೊಂಡರು.
ಸಂಜೆಯೊಂದು ಮೆತ್ತಗೆ ಮನೆಯ ಹಿಂದಿನ ಹಿತ್ತಲ ಹಿಂದೆ ಸೂರ್ಯಮಾಮಾನ ಹಿಂದೆ ಹಿಂದೆ ಓಡುತ್ತಿದೆ. ಅಂಗಳದಲ್ಲಿ ಅವರಿಬ್ಬರ ಬ್ಯಾಡ್ ಮಿಂಟನ್ ಆಟದ ಕೊನೆಯ ಚರಣ. ಮಬ್ಬುಗತ್ತಲಲ್ಲಿ ಅವಳು ಬೀಸಿ ಹೊಡೆದ ಹೊಡೆತಕ್ಕೆ ಕಾಕ್ ಹಂಚಿನ ಮೇಲೆ ಹೋಗಿ ಬಿದ್ದುಬಿಟ್ಟಿತು. ಈಗ ಅದನ್ನು ಕೆಳಗಿಳಿಸುವ ಆಟ. ಅವನು ಒಂದು ಉದ್ದದ ಕೋಲು ಹಿಡಕೊಂಡು ಎರಡು ಮೂರು ಇಟ್ಟಿಗೆ ಸೇರಿಸಿ ಹತ್ತಿ ನಿಂತು ಕಾಕ್ ನ ಎಳೆದು ಬೀಳಿಸಲು ನೋಡ್ತಿದಾನೆ. ಇವಳು ಕಣ್ಣು ಮೇಲೆ ಮಾಡಿ ಸೂರಂಚಿಗೆ ನಿಂತು, ಬಂತೂ ಬಂತೂ, ಇನ್ನೋಚೂರು ಎಳಿ, ಅಲ್ಲೇ ಸ್ವಲ್ಪ ಬಲಕ್ಕೆ..ಹಾಂ ಹಾಂ ಅಂತಾ ಇದ್ದ ಹಾಗೆ ಆ ಕಾಕ್ ಬಿದ್ದೇ ಬಿಟ್ಟಿತು ಕಿರೀ ಹಿಡಿದು ನೋಡುತ್ತಿದ್ದ ಕಣ್ಣಿನ ಮೇಲೆ ಕಾಕಿನ ಹಿಂಭಾಗ ಬಿದ್ದ ಕೂಡಲೇ ಅಮ್ಮಾ, ಕಣ್ಣೂ ಕಣ್ಣೂ.. ಅಂತ ಕೂಗಿಕೊಳ್ಳುತ್ತ ಕಣ್ಣು ಮುಚ್ಚಿಕೊಂಡು ಓಡಿಹೋಗಿ ಮನೆಮೆಟ್ಟಿಲ ಮೇಲೆ ಕುಕ್ಕರಿಸಿದಳು. ಅವನು ಇಟ್ಟಿಗೆ ಇಳಿದು ಗಡಬಡಿಸಿ ಓಡಿಬಂದ. ಹಿತ್ತಿಲ ಬಾವಿಯಿಂದ ನೀರು ಸೇದುತ್ತಿದ್ದ ಅಮ್ಮ ಓಡಿಬಂದು ಒದ್ದೆ ಕೈಯಲ್ಲೇ ಅವನ ಬೆನ್ನಿಗೊಂದು ಗುದ್ದು ಕೊಟ್ಟು ಏನ್ ಮಾಡಿದ್ಯೋ ಅಕ್ಕಂಗೆ ಅಂತ ಸಿಟ್ಟು ಮಾಡಿ, ಎಂತಾತು ಅಂತ ಕೇಳಿದಳು. ಅವನು ಬೆನ್ನ ಮೇಲಿನ ಗುದ್ದು ಗುದ್ದೇ ಅಲ್ಲ ಅನ್ನೋ ಹಾಗೆ ಅಮ್ಮನ ಹತ್ತಿರ ಅವಳ ಕೈ ಹಿಡಿದುಕೊಂಡು ಕಾಕ್ ಕಣ್ಣಿಗೆ ಬಿದ್ ಬಿಡ್ತಮ್ಮಾ ನಾನೇನೂ ಮಾಡಲ್ಲೆ ಅನ್ನುತ್ತಿದ್ದರೆ, ಕಣ್ಣು ಮುಚ್ಚಿ ಅಳುತ್ತಿದ್ದ ಅಕ್ಕನೂ ಇಲ್ಲ ಅವನೇ ಮಾಡಿದ್ದು ಅಂತ ಹೇಳಬೇಕೆಂದುಕೊಂಡವಳು ಹುಳುಕು ಮಾವಿನ ಮರದ ನೆನಪಾಗಿ, ಹೌದೆಂದು ತಲೆಯಾಡಿಸಿದಳು. ಕತ್ತಲಾದ ಮೇಲೆ ಆಟ ಆಡಡಿ ಅಂದ್ರೆ ಕೇಳಾ ಮಕ್ಳಾ ನೀವು, ಈಗ ಕಣ್ಣಿಗೇನಾದ್ರೂ ಆದ್ರೆ ಅಮ್ಮನಿಗೆ ಆತಂಕ.. ಸ್ವಲ್ಪ ಕೊತ್ತಂಬರಿ ಬೀಜ ನೆನೆಸಿ ಅವಳ ಮುಚ್ಚಿದ ಕಣ್ಣಿಗೆ ಕರ್ಚೀಫಿನಿಂದ ನೀರು ಬಿಟ್ಟು ತಮ್ಮನಿಗೆ ಅದನ್ನು ಹೇಗೆ ಮಾಡುವುದು ಅಂತ ತೋರಿಸಿ ಅಮ್ಮ ಮತ್ತೆ ನೀರು ತುಂಬಲು ಹೋದಳು.
ಅವನ ಹತ್ತಿರ ಒಂದು ಚಂದದ ಪಾಟಿ. ಕಪ್ಪು ಪಾಟಿಯ ಸುತ್ತಲೂ ಕೇಸರಿ ಬಣ್ಣದ ಪ್ಲಾಸ್ಟಿಕ್ ಚೌಕಟ್ಟು. ವಿಶೇಷ ಏನಪಾ ಅಂದ್ರೆ, ಕಲ್ಲು ಕಡ್ಡೀಲಿ ಬರದ್ರೂ ಅಕ್ಷರ ಗುಂಡಕೆ ನೀಟಾಗಿ ಆಗ್ತು ಅದರಲ್ಲಿ. ಇನ್ನು ಬೆಣ್ಣೆ ಕಡ್ಡಿ ವಿಷ್ಯ ಕೇಳದೇ ಬೇಡ. ಅವಳಿಗೆ ಅದರ ಮೇಲೇ ಕಣ್ಣು. ಆದ್ರೇನು ಮಾಡದು ಅದು ಅವ್ನ ಪಾಟಿ. ಅಲ್ದೇ ಅವನಿಗೆ ಇನ್ನೂ ನೋಟ್ ಬುಕ್ಕಲ್ಲಿ ಬರಿಯೋ ಕ್ಲಾಸೂ ಅಲ್ಲ. ಹಂಗಾಗಿ ಅವ್ನು ಅದನ್ನ ಸುಮ್ನೆ ಕೇಳಿದ್ರೆ ಕೊಡದಿಲ್ಲೆ. ಅಂಬಾರ್ ಕಟ್ಟು, ಬೋಟಿ, ಕಾರಕಿತ್ಲೆ ಏನೋ ಇಂತ ಆಸೆ ತೋರ್ಸೇ ಪಾಟಿ ಇಸ್ಕಳಕ್ಕಾಗದು. ಒಂದಿನ ಅವ್ಳು ಅಮ್ಮನ ಹತ್ರ ಹಟ ಮಾಡ್ದ. ಅಮ್ಮಾ ನಂಗೂ ಅದೇ ಪಾಟಿನೇ ಬೇಕು. ಅವನ ಅಕ್ಷರ ಹೆಂಗೂ ಏನಷ್ಟು ಚೆನಾಗಿಲ್ಲೆ. ಅವನಿಗೆ ಬೇರೆ ಪಾಟಿ ಕೊಡ್ಸು ನೀನು. ಅಮ್ಮಂಗೆ ಸಿಟ್ ಬಂತು.
ಎಂತದೆ ನಿಂದು ರಗಳೆ. ಅವನ ಹಳೇ ಪಾಟಿ ಮೇಲೆ ನಿಂದ್ಯಾಕೆ ಕಣ್ಣು. ನಿಂಗೆ ಅಷ್ಟೊಳ್ಳೆ ಲೇಖಕ್ ಬುಕ್ಕಿದ್ದು. ಅವನ ಎಲ್ಲ ಪುಸ್ತಕ, ಚೀಲ, ಪೆನ್ನು, ಕಡ್ಡಿ, ಟೋಪಿ, ಸಾಕ್ಸು ಎಲ್ಲ ನೀನು ಹಾಕಿ ಬಿಟ್ಟಿದ್ದು.. ಅದೊಂದು ಪಾಟಿ ಅವನಿಗೇ ಅಂತ ಕೊಡಿಸಿದ್ರೆ ಅದ್ರ ಮೇಲೆ ಕಣ್ಣಾ ನಿಂದು? ಇದನ್ನೇ ಹುಳುಕು ಬುದ್ದಿ ಅನ್ನದು. ಹುಳುಕು ಬುದ್ದಿ ಮಾಡಿದ್ರೆ ಏನಾಗ್ತು ಗೊತ್ತಿದ್ದಲಾ..
ಅವಳು ತೆಪ್ಪಗಾದಳು. ಹೌದೆನ್ನಿಸಿತು. ಸುಮ್ಮನೆ ಮೂಲೆಯಲ್ಲಿ ಕೂತು ಕೇಳುತ್ತಿದ್ದ ಅವನ ಪಕ್ಕ ಹೋಗಿ ಕೂತು, ಕೈಗೆ ಕೈ ಹೊಸೆದಳು. ತಪ್ಪಾಯಿತೆಂಬಂತೆ, ಸಿಟ್ಟಿಲ್ಲವೆಂಬಂತೆ, ಮತ್ತೆ ಜೊತೆಯಾಗುವಂತೆ. ಅವನು ಎಂದಿನ ನಗೆಮುಖದ ಗುಂಡ..
ಆಟಕ್ಕೆದ್ದ.
ಸಾಬರಂಗಡಿಯ ಪುಟಾಣಿ ಸೈಕಲ್ಲಿಗೆ ಗಂಟೆಗೆ ಐವತ್ತು ಪೈಸೆ ಕೊಟ್ಟು ರಸ್ತೆಯಲ್ಲಿ ತಳ್ಳಿಕೊಂಡು ಹೋಗಿ, ಕಾಂಪ್ಲೆಕ್ಸಿನ ಪಾಗಾರ ಕಳೆದ ಕೂಡಲೆ ಸಿಗುವ ದೊಡ್ಡ ಮೈದಾನದಲ್ಲಿ ಅವರಿಬ್ಬರ ಸೈಕಲ್ ಕಲಿಯಾಟ.. ದೊಡ್ಡಕೆ ಹರಡಿರುವ ಹುಲ್ಲು ಮೈದಾನದಲ್ಲಿ ಎಳೆಬಿಸಿಲಿನ ಸಂಜೆಯಲ್ಲಿ ಪುಟಾಣಿ ಸೈಕಲ್ ಮೇಲೆ ಬ್ಯಾಲೆನ್ಸ್ ಮಾಡುತ್ತ ಅವಳು, ಹಿಂದೆ ಕ್ಯಾರಿಯರ್ ಹಿಡಿದು ಓಡುತ್ತ ಬರುತ್ತಿರುವ ಅವನು.. ಮೈದಾನದಂಚಿಗೆ ಮನೆಗೆ ಹೊರಟಿರುವ ಸೂರ್ಯ, ಬೇಗ ಬೇಗ ಹೋಗಲು ಮನಸ್ಸಾಗದೇ ಅವರಾಟವನ್ನು ನೋಡುತ್ತ ಆ ಎಳೆಮೈಗಳನ್ನು ಬೆಚ್ಚಗಾಗಿಸುತ್ತ ಚೂರು ಚೂರೇ ಮುಳುಗುತ್ತಿದ್ದ.. ಓ ರಾಧಾಕೃಷ್ಣ ಬಸ್ ಬಂತು. ಇನ್ನೇನು ಐದು ನಿಮಿಷಕ್ಕೆ ಟೈಮ್ ಆಗೋಗ್ತು. ಬಾ ಸೈಕಲ್ ವಾಪಸ್ ಕೊಡನ ಅವಳು. ಅಡ್ಡಿಲ್ಲೆ ಬಿಡೇ ನಾನೊಂದು ಲಾಸ್ಟ್ ರೌಂಡ್ ಹೋಗ್ತಿ. ಆಮೇಲೆ ಕೊಡಾನ. ಅವಳಿಗಿಷ್ಟವಿಲ್ಲ. ಆದ್ರೂ ಹೂಂ ಅಂದಳು. ಕೊನೆಯ ಒಂದು ರೌಂಡ್ ಅಂದವನು ಮೂರ್ನಾಕು ರೌಂಡ್ ಮುಗಿಸಿ ಬಂದು ಸೈಕಲ್ ವಾಪಸ್ ಕೊಟ್ಟಾಗ ಗಂಟೆಯ ಮೇಲೆ ಹತ್ತು ನಿಮಿಷವಾಗಿ ಅಂಗಡಿಯವನು ಬಯ್ದ. ಅವಳಿಗೆ ಅವಮಾಆಆಆಆನ. ಅವನು ಏ ಬಿಡೇ ಅದೆಲ್ಲ ಯಾಕೆ ತಲೆಬಿಸಿ.. ದಾರಿಯಲ್ಲಿ ಕಲ್ಪನೆಯ ಬಾಲನ್ನು ಸ್ಪಿನ್ ಬೌಲ್ ಮಾಡುತ್ತ ಕುಣಿಯುತ್ತ ಹೋಗುವ.. ಅವಳು ಮುಖ ದುಮ್ಮಿಸಿಕೊಂಡು ಸುಮ್ಮನೆ ಅವನ ಹಿಂದೆ.
ಹೈಸ್ಕೂಲಿನಲ್ಲಿ ಮಧ್ಯಾಹ್ನದ ಬೆಲ್ ಹೊಡೆದು ಮೊದಲ ಪೀರಿಯಡ್ಡಿಗೆ ಕಾಯುತ್ತ ಕೂತಿದ್ದಾಳವಳು ಹತ್ತನೇ ಕ್ಲಾಸಿನ ಮೊದಲ ಬೆಂಚಲ್ಲಿ. ಇದ್ದಕ್ಕಿದ್ದಂತೆ ಓಡಿಬಂದು ಅವಳ ಕ್ಲಾಸಿಗೆ ನುಗ್ಗಿದವನು ಅವಳ ಮುಂದಿದ್ದ ಜ್ಯಾಮಿಟ್ರಿ ಬಾಕ್ಸ್ ಎತ್ತಿಕೊಂಡು ಓಟ. ಗೊತ್ತವನಿಗೆ ಬೆಲ್ ಹೊಡೆದ ಮೇಲೆ ಅಕ್ಕ ಹೊರಗೆ ತನ್ನನ್ನು ಅಟ್ಟಿಸಿಕೊಂಡು ಬರುವುದಿಲ್ಲ. ಅವಳಿಗೆ ಸಿಟ್ಟು, ಕ್ಲಾಸಿನ ಉಳಿದೆಲ್ಲ ಕಣ್ಣೂ ತನ್ನನ್ನೇ ನೋಡುತ್ತಿರುವ ಎಚ್ಚರದ ಅವಮಾನ..
ಎರಡನೇ ಪಿರಿಯಡ್ ಮುಗಿದು ಮೂರರ ಬೆಲ್ಲಾಗುವಾಗ ಮತ್ತೆ ಓಡುತ್ತ ಬಂದವನು ಬಾಕ್ಸು ಅವಳ ಮುಂದಿಟ್ಟು, ಬಿಎನ್.ಪಿ ಪಿರಿಯಡ್ ಇತ್ತೇ ಮಾರಾಯ್ತಿ. ಗೊತ್ತಿದ್ದಲ ಜಾಮಿಟ್ರಿ ಬಾಕ್ಸಿಲ್ದೇ ಇದ್ರೆ ಏನ್ ಗತಿ ಅಂತ ಅದಕ್ಕೇ... ತುಂಟ ಮುಖದಲ್ಲಿ ಸಮಾಧಾನದ ನಗು ಬೀರುತ್ತ ಮತ್ತೆ ತಿರುಗಿ ಅವನ ಕ್ಲಾಸಿನತ್ತ ಓಡಿ ಹೋದ. ಸಿಟ್ಟೆಲ್ಲ ಇಳಿದು ಹೋಗಿ, ಪಾಪವೆನ್ನಿಸುವಂತೆ. ಸಂಜೆ ಸ್ಕೂಲು ಬಿಟ್ಟ ಕೂಡಲೇ ಕೆರೆ ಏರಿ ಮುಗಿದು ರೈಲ್ವೆ ಹಳಿ ದಾಟಿದ ಕೂಡಲೆ ಡಬ್ಬಲ್ ರೈಡು. ಅವಳು ಉದ್ದ ಅಕ್ಕ ಅವನು ಪುಟ್ಟ ತಮ್ಮ.
ಇಲ್ಲಿ ನಿಂತರೆ ಟಿಪ್ಪೂ ಸುಲ್ತಾನ್, ಇಲ್ಲಿ ನಿಂತರೆ ಮದಕರಿ ನಾಯಕ.. ಅವನು ಪುಟ್ಟ ಮುಖದ ಮೇಲಿನ ದೊಡ್ಡ ಮೀಸೆಯಡಿಯಿಂದ ಡೈಲಾಗ್ ಮೇಲೆ ಡೈಲಾಗ್ ಹೊಡೆದು ಗರ್ಜಿಸುತ್ತಿದ್ದ..ಮನೆಯ ಕಪಾಟು ತುಂಬ ಪುಟ್ಟ ಪುಟ್ಟ ಬಹುಮಾನದ ಕಪ್ಪುಗಳು. ಅವಳು ಕಪಾಟಿನ ಹೊರಗೆ ನೋಡುತ್ತ ನೋಡುತ್ತ..
ವರ್ಷಗಳುರುಳಿದಂತೆಲ್ಲ ಬದುಕಿನ ಏಕಪಾತ್ರಾಭಿನಯದಲ್ಲಿ ಇಬ್ಬರಿಗೂ ಅವರವರದ್ದೇ ಪಾಲು. ಅವನು ಒಬ್ಬಳೆ ನಿಂತ ಅಕ್ಕನಿಗೆ ಅಣ್ಣನಾಗಿ,ಗೆಳೆಯನಾಗಿ,ಅಪ್ಪನಾಗಿ,ಟೀಚರ್ರಾಗಿ.. ಅವಳು ಬೆಳೆಯುವ ತಮ್ಮನಿಗೆ ಅಮ್ಮನಾಗಿ, ಗೆಳತಿಯಾಗಿ, ತಂಗಿಯಾಗಿ, ಸ್ಟೂಡೆಂಟಾಗಿ.. ಅವನ ಮಾರ್ಕೆಟಿಂಗ್ ಟೆಕ್ನಿಕ್ಸುಗಳಿಗೆ ಬಕ್ರಾ ಆಗಿ..ಅವನು ಅವಳ ಕತೆಗಳಿಗೆ ಬೋಲ್ಡಾಗಿ.. ಅವಳ ಕಣ್ಣೀರ ಕ್ಷಣಗಳಿಗೆ ಅವನು ಮೌನ ಸ್ಪಂದನವಾಗಿ, ಅವನ ದುಗುಡದ ಕ್ಷಣಗಳಲ್ಲಿ ಅವಳು ಪದಗಳನ್ನು ಹೆಣೆಯದ ಖಾಲಿ ಗೆರೆಯಾಗಿ, ಜೀಟಾಕಿನಲ್ಲಿನ ಪ್ರೈಂ ಕಾಂಟ್ಯಾಕ್ಟುಗಳಾಗಿ.. ನೆಮ್ಮದಿಯ ದಿನಗಳ ನಲಿವಿನ ಪಂಚ್ ಲೈನಾಗಿ..ದಿನದಿನದ ಪಯಣದಲ್ಲಿ ಜತೆಯಾಗಿ, ವೀಕೆಂಡಿನ ಟ್ರೆಕ್ಕುಗಳಲ್ಲಿ ಒಬ್ಬರಿನ್ನೊಬ್ಬರಿಗೆ ಗೈಡಾಗಿ, ಕ್ಯಾಮೆರಾ ಕಣ್ಣಾಗಿ. ಒಂದೇ ಜೀನ್ಸು ಕೇಪ್ರಿ ಇಬ್ಬರಿಗೂ ಬರುವಷ್ಟು ಬೆಳೆದ ಜೀವಗಳಾಗಿ, ಅವಳ ಬರಹಗಳಿಗೆ ಅವನು ಮೈಕ್ರೋಸ್ಕೋಪಾಗಿ, ಅವನ ಅಭಿನಯಕ್ಕೆ ಅವಳು ಬೆರಗಿನ ನೋಡುಗಳಾಗಿ.. ಅವಳ ಸಹಾಯಕ್ಕೆ ಅವನು ಪ್ರೀಮಿಯಂ ಆಗಿ, ಅವನ ನೆರವಿಗೆ ಅವಳು ಸೆಕ್ಯೂರಿಟಿಯಾಗಿ...ನಿಂತು ನೋಡಿದಲ್ಲೆಲ್ಲ ಹಲವು ಹನ್ನೆರಡು ಪಾತ್ರಗಳು.
ಅವನು ಉದ್ದಕೆ ದೊಡ್ಡಕೆ ಅಣ್ಣನಂತಿರುವ ತಮ್ಮ. ಅವಳು ಕುಳ್ಳಕೆ (ಸ್ವಲ್ಪೇ ಸ್ವಲ್ಪ ಡುಮ್ಮಕೆ) ತಂಗಿಯಂತಿರುವ ಅಕ್ಕ..
ಅಮ್ಮ ಬಾಗಿಲವಾಡಕ್ಕೆ ಒರಗಿ ನಿಂತು, ಬೈಕು ಹತ್ತಿ ಕುಳಿತ ಅವರ ನೋಡಿ ನಸುನಗೆ ಬೀರುತ್ತಾಳೆ; ಈ ಪಯಣಕ್ಕೆ ಹುಳುಕಿನ ಸೋಂಕಿಲ್ಲ..
ಎಲ್ಲೋ ಇದ್ದಿರಬಹುದಾದ ಕಸರನ್ನೂ ಹಿಂಡಿ ತೆಗೆದ ಅಮ್ಮನ ನೆರಳ ಹಾದಿ..
ಹೆಣ್ಣೀನ ಜನುಮಕ್ಕೆ ಅಣ್ಣ ತಮ್ಮರು ಬೇಕುಅವಳು ಹಾಡಿನ ಇಂಪಲ್ಲಿ ನೆಂದು ಹೊಸದಾಗಿ ಅರಳಿದಳು. ಅಮ್ಮನ ಹತ್ತಿರ ಹೋಗಿ ಆ ಗುಂಡು ಗುಂಡು ಪಾಪುವಿನ ಕೆನ್ನೆ ಹಿಂಡಿದಳು.
ಬೆನ್ನು ಕಟ್ಟುವರೂ ಸಭೆಯೋಳಗೇ
ಬೆನ್ನು ಕಟ್ಟುವರೂ
ಸಭೆಯೊಳಗೆ
ಸಾವೀರ ಹೊನ್ನ ತುಂಬುವರು ಉಡಿಯೊಳಗೇ..

Tuesday, December 4, 2007
ಮಂಜು..
ಕಣ್ಣು ಮಂಜಾಗಿದೆ..
ನಿಟ್ಟಿಸಿ ನೋಡಿದಾಗ
ದಟ್ಟವಾಗಿ ಕಂಡಿದ್ದ ಹಸಿರುಗುಡ್ಡದ
ಹೊರಮೈ ನೋಟವೂ ಗೊತ್ತಾಗದ ಹಾಗೆ
ಅವತ್ತು ಮಳೆನಿಂತ ಸಂಜೆ
ನೋಟಕ್ಕೇ ರಂಗೇರಿದ್ದ ಕೆನ್ನೆ ಕೆಂಪು ಕರಗಿ
ನಿನ್ನ ಗುರುತೂ ಹಿಡಿಯದ ಹಾಗೆ
ಬರೆದು ಬರೆದು ರಾಶಿ ಹಾಕಿದ
ಕಾಪಿ ಪುಸ್ತಕದ ಪುಟ್ಟ ಕೊಂಕು ತಿದ್ದಿದ ಕಣ್ಣು
ಪೇಪರಿನ ಹೆಡ್ ಲೈನ್ಸ್ ಓದಲು ತಡಬಡಿಸುವ ಹಾಗೆ
ಮಳೆಹನಿವ ಮಧ್ಯಾಹ್ನ
ಕಿಟಕಿಯಾಚೆಗೆ ಕಂಡ ಹಸಿರ ಮಧ್ಯದ ಹಳದಿ
ಕಂದಿದ ಹಾಗೆ..
ಗೋಡೆ ಕುಸಿದ ಹಾಗೆ
ನೆರಳು ಕವಿದ ಹಾಗೆ
ಪುಟ್ಟದೊಂದು ಹೊಸ್ತಿಲೂ ದೊಡ್ಡ ಸಂಕದ ಹಾಗೆ
ಜಗುಲಿ ಅಂಗಳ ಮನೆಯಾಚೆಗಿನ ಮೈದಾನವೆಲ್ಲ ಒಂದಾದ ಹಾಗೆ
ಸುತ್ತ ಇರುವುದೆಲ್ಲ ಇಲ್ಲದ ಹಾಗೆ
ಎಲ್ಲೂ ಇಲ್ಲದ ಯಾರೋ ಸುಳಿದಾಡಿದ ಹಾಗೆ
ಹೀಗೆ..
ಮಂಜಾಗಿದೆ
ಕಣ್ಣು,ಮನಸ್ಸು,ಬುದ್ಧಿ
ಹೊರಗೆ ಕಂಡಿದ್ದೊಂದು,
ಕಾಣಬಯಸುವುದೊಂದು
ಒಳಗೆ ಪ್ರತಿಫಲಿಸುವುದೇ ಇನ್ನೊಂದು..
ಒಂದು ಸಂತಸವೆಂದರೆ
ಮಂಜುಗಣ್ಣಿಗೆ ಕಂಡೂ ಕಾಣದೆಯೂ
ನೀನಿದ್ದೀಯ ಜತೆಗೆ
ಹೆಜ್ಜೆ ಎಡವದ ಹಾಗೆ
ಕಾಣದ್ದೆಲ್ಲವೂ ಕಾಣಿಸುವ ಹಾಗೆ!

Monday, December 3, 2007
ಮಿಂಚು..
ಮಾಮಾ ಇವತ್ತು ದೂರದ ಪಾರ್ಕಿಗೆ ವಾಲ್ಕಿಂಗ್ ಹೋಗೋಣ, ನಾನ್ ರೆಡೀ ಇದೀನಿ; ನೀನು? ನಾನಂತೂ ಯುನಿಫಾರ್ಮ್ ಬದಲಾಯ್ಸಿ, ಕಾಲ್ತೊಳೆದು, ತಿಂಡಿ ತಿಂದು ಹಾಲು ಕುಡಿದಾಯ್ತು. ಬಾ ಹೋಗೋಣ.. ಅಲ್ಲೆ ಕುರ್ಚಿಯಲ್ಲಿ ಕೂತು ಅರಳಿನಂತೆ ಪಟಪಟನೆ ಸಿಡಿಯುವ ಮುದ್ದು ಮಾತಾಡುವ ಅವಳನ್ನೆ ನೋಡಿದೆ. ಅವಳಿಗಿಷ್ಟವಾದ ನೇರಳೆ ಬಣ್ಣದ ಫ್ರಾಕು, ಅದಕ್ಕಿರುವ ಬಿಳಿಜೇಬಿನ ಮೇಲೆ ಬಣ್ಣ ಬಣ್ಣದ ಚಿಟ್ಟೆಯ ಚಿತ್ರ..
ಚುಕ್ಕೀ ಎಷ್ಟು ಮಾತು ನಿಂದು, ಮಾಮ ಇನ್ನೂ ಟೀ ಕುಡಿದಿಲ್ಲ. ಕುಡಿದಾದ ಮೇಲೆ ಹೋಗಿ..ಹೋಗುವಾಗ ಮಾಮನ ಕೈ ಹಿಡಿದೇ ಹೋಗಬೇಕು ಅದು ಬಸ್ಸು ಹೋಗುವ ಹೈವೇ. ಬಾಗಿಲಿಗೆ ಬಂದ ತಂಗಿ ಸವಿತ ಬಿಸಿ ಬಿಸಿ ಚಹಾ ಲೋಟ ಕೈಗಿಟ್ಟಳು.
ನಾನು ಸವಿತಳತ್ತ ನೋಡಿ ನಕ್ಕೆ. ಈಗಿನ ಕಾಲದ ಮಕ್ಕಳಲ್ವೇನೇ ಸವೀ.. ನಮಗಿಂತ ಹುಶಾರಾಗಿರ್ತಾರೆ. ಅವಳು ನಸುನಗುತ್ತ ಯಾರ ಸೊಸೆ ಅವಳೂ ಹೇಳು ಅನ್ನುತ್ತ ಚುಕ್ಕಿಯ ಕೆನ್ನೆಯನ್ನು ಮೃದುವಾಗಿ ಹಿಂಡಿ ಒಳಹೋದಳು.
ಈ ಮಾತುಕತೆಯನ್ನೆಲ್ಲ ಬಿಟ್ಟ ಕಣ್ಣು ಬಿಟ್ಟಂತೆ ಕೇಳುತ್ತಿದ್ದ ಚುಕ್ಕಿಯ ಮುಖದಲ್ಲಿ ಹೂನಗೆ. ನನಗೆ ಅವಳ ಅತ್ತೆಯಾಗಬೇಕಿದ್ದವಳು ನೆನಪಾದಳು.. ಆದರೆ ಅವಳ ಮೂಗು ಈ ತುಂಟಿಯಂತೆ ಉದ್ದಕಿರಲಿಲ್ವಲ್ಲಾ? ಈ ನಗುವೂ ಅಷ್ಟೆ ಹೌದೋ ಅಲ್ಲವೋ ಎಂಬಂತೆ ಬಿರಿದ ಕೇದಗೆ; ಪೂರ್ತಿ ಅರಳಿದ ಹೂವಂತಲ್ಲ..
ಚುಕ್ಕಿ ತೊಡೆಯ ಮೇಲೆ ಬಗ್ಗಿ ನಿಂತು, ಮುಖವನ್ನು ನನ್ನ ಹೊಟ್ಟೆಗೆ ಅವುಚಿಕೊಂಡು ಎಳೆಯುತ್ತಿದ್ದಳು ಬಾ ಮಾಮಾ ಹೋಗೋಣ, ಅಲ್ಲಿ ಸೂರ್ಯ ಮುಳುಗೋದ್ರೊಳಗೆ ಹೋಗಿ ನಾನು ಟಾಟಾ ಮಾಡ್ಬೇಕು. ಅವನು ಮನೆಗೆ ಹೋಗಕ್ಕೆ ಕಾಯ್ತಾ ಇರ್ತಾನೆ.. ನಗು ಬಂತು ಈ ಪುಟಾಣಿಯ ಆಸೆ ನೋಡಿ. ಎದ್ದು ಹೊರಟೆ. ಒಂದು ಕೈಯಲ್ಲಿ ಬೈನಾಕ್ಯುಲರ್ ಇತ್ತು, ಈಚೆ ಕೈಯ ಬೆರಳು ಹಿಡಿದು ಕುಣಿಯುತ್ತ ಬರುತ್ತಿರುವ ಜೀವನೋತ್ಸಾಹದ ಹಕ್ಕಿ..
ಪಾರ್ಕು ಹತ್ತಿರವಾದ ತಿರುವಿನಲ್ಲೊಂದು ದೊಡ್ಡ ಆಕಾಶಮಲ್ಲಿಗೆಯ ಮರವಿತ್ತು. ಮರದ ತುಂಬ ಗೊಂಚಲು ಗೊಂಚಲಾಗಿ ಬೆಂಡೋಲೆಗಳಿಗಿಂತ ಸೊಗಸಾಗಿ ಬಾಗಿದ್ದ ಹೂಗಳು.. ಆಹ್ ಮತ್ತೆ ನೆನಪಾಯಿತು ಅವಳ ನಗು.. ಬನದ ಕೇದಗೆಯಂತವಳು ನನ್ನ ಎದೆಯಲ್ಲಿ ಮೊದಲ ಪ್ರೇಮಕ್ಕೆ ಗೂಡಾದವಳು... ಅವಳ ನಗು..
ಮಾಮಾ ಅಲ್ ನೋಡು ಶಶಿ ಬಂದಿದಾನೆ ಇವತ್ತು ಪಾರ್ಕಿಗೆ, ಮಾಮಾ ನಾನವನ ಜೊತೆ ಜಾರುಬಂಡಿ ಆಡಿಬರುತ್ತೇನೆ.. ಹಕ್ಕಿ ನನ್ನ ಬೆರಳುಗಳನ್ನ ಬಿಡಿಸಿ ಜೊತೆಹಕ್ಕಿಯೆಡೆ ಹಾರಿತು..
ನಾನು ಅಲ್ಲೆ ಬದಿಯಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತೆ. ಮನಸ್ಸು ಪೂರ್ತಿ ಅವಳ ನೆನಪಿನ ಮೋಡ. ಕಣ್ಣು ಪಾರ್ಕಿನ ಹಸಿರನ್ನ ನೋಡುತ್ತಿತ್ತು ನೋಟ ಒಳಗೆ ತುಂಬ ಒಳಗೆ ಮಾಗಿದ್ದ ಕನಸಿನ ಪದರ ಬಿಚ್ಚಿ ಒಳಗಿನ ತಿಳಿನೀಲಿ ಬಣ್ಣ ನೋಡಿ ದಂಗಾಗಿತ್ತು.
ಅವಳು ಬೇಲಿಸಾಲಿನ ಎಲೆ ಮರೆಯಲ್ಲಿದ್ದ ಕಾಡುಹೂವೊಂದರ ಮೊಗ್ಗಿನಂತಿದ್ದಳು. ಇಷ್ಟು ದಿನದ ಬದುಕಿನಲ್ಲಿ, ಬಣ್ಣ ತುಂಬಿದ ಕಾಲೇಜಿನ ಕ್ಯಾಂಪಸ್ಸಿನಲ್ಲಿ, ರಾಮಮಂದಿರದ ಹೊರಗಿನ ಬಣ್ಣದ ಹೂಗಳ ಗುಂಪಿನಲ್ಲಿ, ಸಿನಿಮಾದಲ್ಲಿ, ಕತೆಯಲ್ಲಿ , ಸ್ನೇಹಿತರ ಮಾತುಕತೆಗಳಲ್ಲಿ ಎಲ್ಲೂ ಕಾಣಿಸಿರದ ಇನ್ನೂ ಪೂರ್ತಿ ಪಡಿ ಮೂಡಿರದ ಹೊಸದೇ ಚಿತ್ರದ ಹಸೀರೇಖೆಯಂತಹ ಅವಳು.. ಅವಳ ಬಣ್ಣ ಇನ್ನೂ ಪೂರ್ತಿ ತುಂಬಿರಲಿಲ್ಲ.. ರೇಖೆಗಳೇ ಗಟ್ಟಿಯಾಗಿ ಮೂಡಿರದವಳು ಅಂದೆನಲ್ಲಾ.. ರಾಜಧಾನಿಯ ವೈಭವದ ಮುಂದೆ ಕಣ್ಣು ಕೋರೈಸಿ ಸ್ವಲ್ಪ ಬೆಪ್ಪಾಗಿ ನಿಂತ ಅವಳ ಮೊಗದ ತುಂಬ ಆತಂಕ, ನೋಡಿ ನಕ್ಕರೆ ತಿರುಗಿ ನಕ್ಕೇ ನಗುತ್ತಾಳೆ ಅನ್ನಿಸುವ ಸ್ವಚ್ಛಕಣ್ಣು, ಯಾವ ಬಗೆಯ ಟ್ರೀಟ್ ಮೆಂಟಿನ ಮುಖ ನೋಡದೆ ಸೊಂಪಾಗಿ ಬೆಳೆದ ಉದ್ದ ಕೂದಲು, ಇದೆಲ್ಲಾ ಯಾಕೆ, ಹಳ್ಳಿಯೊಂದರಲ್ಲಿ ಆಗಷ್ಟೇ ಮೈ ತೊಳೆಸಿಕೊಂಡು ನಿಂತ ಪುಟ್ಟಕರುವಿನನಂತೆ ಮುದ್ದು ಬರುವ ಹಾಗವಳು ಅಲ್ಲಿ ನಿಂತಿದ್ದರೆ ನಾನು ಸಾಷ್ಟಾಂಗ ಮಲಗಿಬಿಟ್ಟೆ. ಎದ್ದವನ ಕಿವಿಗೆ ಬಿದ್ದಿದ್ದು ಗೆಜ್ಜೆಸದ್ದಿನ ಇಂಪಿನ ನಗೆ. ಸುತ್ತ ಗೆಳತಿಯರು ಯಾವುದೋ ಜೋಕಿಗೆ ಹೊಟ್ಟೆ ಹಿಡಿದು ನಗುತ್ತಿರುವ ಅವಳು.. ನಗುನಗುತ್ತಾ ನನ್ನ ನೋಡಿದಳು ನಾನು ಅಲ್ಲಿ ಕೀಲಿಸಿದ ಕಣ್ಣು ಕೀಳಲಿಲ್ಲ.
ಇರುಸುಮುರಿಸಾದ ಅವಳು ಮತ್ತೆ ಎತ್ತಲೋ ತಿರುಗಿ ಎರಡು ನಿಮಿಷ ಬಿಟ್ಟು ನೋಡಿದರೆ ನಾನು ಕಣ್ಣದಾಸರಂತೆ ಅಲ್ಲೇ.. ಕಣ್ಣೂ ಅಲ್ಲೇ ನೋಟವೂ ಅಲ್ಲೆ ನನ್ನ ಬದುಕನ್ನೆ ಬೊಗಸೆಯಾಗಿ ಹಿಡಿದು ಕಣ್ಣಲ್ಲಿಟ್ಟು ನಿಂತುಬಿಟ್ಟಿದ್ದೆ.. ಈಗ ಆ ಹೂಮೊಗದಲ್ಲಿ ಒಂದೆರಡು ಸಿಟ್ಟಿನ ನೆರಿಗೆ. ಮತ್ತೆ ಕೆಲನಿಮಿಷಗಳು ಬಿಟ್ಟು ನೋಡಿದರೂ ನಾನಲ್ಲೇ ನನ್ನ ನೋಟವಂತೂ ಅಲ್ಲೇ.. ಈಗ ಸಿಟ್ಟು ಅಸಹನೆಯಾಯಿತು.. ಬನ್ರೇ ಹೋಗೋಣ ಅಂತ ಗೆಳತಿಯರನ್ನು ಕರೆದುಕೊಂಡು ಹೊರಟಳು. ಹೋಗುವಾಗ ತಿರುಗಿದ ಜೋರಿಗೆ, ಆ ಉದ್ದ ಜಡೆ ಒಂದು ಸೆಮಿಸರ್ಕಲ್ ಹೊಡೆದು ಅವಳ ಸ್ಕರ್ಟನ್ನ ಮತ್ತೆ ಆತುಕೊಂಡಿತು.
ಬರೋದಿಲ್ಲವೆಂದರೂ ಕೇಳದೆ ಅಮ್ಮ, ರಾಧೂ ಅತ್ತೆಯ ಮನೆಯ ಸತ್ಯನಾರಾಯಣ ಕತೆಗೆ ಕರಕೊಂಡು ಹೋದರು. ಏನೋ ಹ್ಯಾಗ್ ಓದ್ತಾ ಇದೀಯೋ, ಯಾವಾಗ ಕೆಲ್ಸ ಹಿಡಿಯೋದು, ಅದೇನೋ ನಾಟಕದವ್ರ ಜೊತೆಗೆಲ್ಲಾ ಹೋಗ್ತೀಯಂತೆ ಒಳ್ಳೆದಲ್ಲ ಕಣೋ ಅನ್ನುವ ಕೊರೆತಗಳನ್ನ ಕೇಳಬೇಕಲ್ಲಪ್ಪಾ ಅಂತ ತಲೆಬಿಸಿ ಮಾಡಿಕೊಂಡು ಅಮ್ಮನ ಹತ್ತಿರ ಸಿಟ್ಟು ಮಾಡುತ್ತಾ ಹೋದೆ. ಅಲ್ಲಿ ಇಬ್ಬರೂ ಚಪ್ಪಲಿ ಬಿಚ್ಚಿ ಒಳಹೋಗುವುದಕ್ಕಿಲ್ಲ ಅವಳು ಕಾಣಿಸಿದಳು.. ಕೈಯಲ್ಲಿ ಸೇವಂತಿಗೆ ತುಂಬಿದ ಬುಟ್ಟಿ, ಆಗ ತಾನೆ ಸ್ನಾನ ಮಾಡಿ ಒಣಗಲು ಬಿಟ್ಟ ಕೂದಲು, ಉದ್ದಲಂಗ ಬ್ಲೌಸ್, ಯಾವ ಪುರಾಣಪಾತ್ರದ ಜಲವರ್ಣ ಇವಳು ಅಂತ ಯೋಚನೆಯಾಯಿತು.. ನಿಮಗೇ ಹೇಳ್ತಿರೋದು ಸ್ವಲ್ಪ ಜಾಗಬಿಡೀ.. ಆಂ ಹಾಂ ಅಂತಂದು ಸರಿದು ನಿಂತೆ.. ಅವಳು ದಾಟಿ ಹೋಗುವಾಗ ಮೊಗ್ಗರಳಿ ಹೂವಾದ ಅನುಭವ ಸುತ್ತೆಲ್ಲ ಅವಳು ಮುಡಿದ ಮಲ್ಲಿಗೆಯ ನರುಗಂಪು.
ಹೀಗೇ ಅಮ್ಮನ ಬೆನ್ನು ಹಿಡಿದು, ಅವಳ ಗೆಳೆತನಕ್ಕೆ ಹೊಂಚುಹಾಕಿ ಹಿಡಿದುಬಿಟ್ಟೆ.. ರಾಧೂ ಅತ್ತೆಯ ತಂಗಿಯ ಮಗಳು. ಹಿರೀಸಾವೆಯವಳು. ಪಿ.ಯು. ಮುಗಿಸಿ ಮುಂದೆ ಓದಲು ಇಲ್ಲಿ ಬೆಂಗಳೂರಿಗೆ ಬಂದಿದ್ದಾಳೆ.. ಇಂಗ್ಲಿಷ್ ಸಾಹಿತ್ಯ ಓದುವ ಅವಳಿಗೆ ಈ ಏರಿಯಾದಲ್ಲಿರುವ ಲೈಬ್ರರಿಯ ಪರಿಚಯ ಮಾಡಿಸಲಾಗುತ್ತಾ ಅಂತ ಕೇಳಿದಾಗ ನನಗೆ ಮುಂಜಾನೆದ್ದು ಕುಣಿವ ಕುಂಬಾರಣ್ಣನಷ್ಟು ಖುಷಿಯಾಯಿತು. ಕರೆದುಕೊಂಡು ಹೋದೆ. ಪ್ರತಿದಿನ ಅವಳ ಕಾಲೇಜು ಮುಗಿದು ಬಸ್ಸಿಳಿವಾಗ ಕಾದಿದ್ದು, ಜೊತೆಗೇ ಲೈಬ್ರರಿಗೆ ಹೋದೆ. ಹೆಚ್ಚು ಮಾತಿಲ್ಲದ ಅವಳು ನಗುತ್ತಾ ಜೊತೆಗೆ ಬರುವಾಗ ಮಳೆಯಲ್ಲಿ ನೆಂದು ಸುಳಿಗಾಳಿಗೆ ಅಲುಗಾಡುವ ಎಲೆಗಳಂತೆ ನಾನು..
ಹೀಗೇ ಮೆಲ್ಲಸರಿದ ದಿನಗಳ ಕೊನೆಗೊಂದು ಹೊಸವರ್ಷ, ಶುಭಕೋರಲು ಹೋದ ನನ್ನ ಕೈಯಲ್ಲಿ ಒಂದು ಪ್ರೇಮನಿವೇದನೆಯ ಗ್ರೀಟಿಂಗ್ ಕಾರ್ಡು, ಎರಡು ಕೆಂಗುಲಾಬಿ, ಒಂದು ಫ್ರೂಟ್ಸ್ ಎನ್ ನಟ್ಸ್ ಚಾಕೊಲೇಟಿತ್ತು. ಸಂಜೆ ಬಸ್ಸಿಳಿದವಳ ಜೊತೆಗೂಡಿದವನು, ಅಲ್ಲಿ ಲೈಬ್ರರಿಯ ತಿರುವಲ್ಲಿ ತಿರುಗುವ ಮುಂಚೆ - ಇವತ್ತು ಇನ್ನೊಂದ್ ಸ್ವಲ್ಪ ದೂರ ನಡೆದು ಹೋಗೋಣ ಅಲ್ಲೊಂದು ಚಂದ ಪಾರ್ಕಿದೆ ಅಂದೆ. ನಕ್ಕು ಜೊತೆಯಾದಳು.. ಅಲ್ಲಿ ಹೂವರಳಿ ಚೆಲುವು ಹೊದ್ದು ನಿಂತ ಪಾರ್ಕಿನ ಕಲ್ಲು ಬೆಂಚಲ್ಲಿ ಕೂರುವಾಗ ಧೈರ್ಯ ಮಾಡಿ ಗುಲಾಬಿ ಕೊಟ್ಟು ಹೊಸವರ್ಷದ ಶುಭಾಶಯ ಹೇಳಿದೆ. ಅವಳ ಮುಖದಲ್ಲಿ ಆಳ ಗುಳಿಯ ಸುಳಿನಗು. ಇನ್ನೇನು ಅದರಲ್ಲಿ ಬಿದ್ದು ಬಿಡಬೇಕು, ಸಾವರಿಸಿಕೊಂಡು ಕೂತೆ. ಅವಳು ತನ್ನ ಕಪ್ಪು ಬ್ಯಾಗಿನಿಂದ ಪುಟ್ಟದೊಂದು ಬಿಳಿಯ ಕಾಗದ ಹೊರತೆಗೆಯುತ್ತಿದ್ದಾಳೆ ಮಡಿಚಿಟ್ಟ ಅದರಲ್ಲೇನಿದೆ ಪ್ರೇಮನಿವೇದನೆಯೇ.. ಅರೆ ಹಳ್ಳಿಯ ಮುಗುದೆ ನಾನು ಬೆಂಗಳೂರಿನ ಫಾಸ್ಟ್ ಬೀಟ್ ಯಂಗ್ ಟರ್ಕ್ ಗಿಂತ ಚುರುಕಾಗಿದ್ದಾಳಲ್ಲಪ್ಪಾ.. ಅಂತ ಬೆರಗಾದೆ. ಕಾಗದ ಕೊಟ್ಟವಳು ಮೆಲ್ಲುಲಿದಳು ನನ್ನ ಮೊದಲ ಕವನ.. ನಿನಗೆ.. ಮತ್ತೆ ಗುಲಾಬಿಗಳ ಜೊತೆಗೆ ಆಟವಾಡುವ ಬೆರಳುಗಳು ಮಾತಿಲ್ಲ..
ಹೂವು ಗಿಡದಲ್ಲೇ ಚಂದ
ಕೀಳಲು ಸಲ್ಲ
ಪುಟ್ಟ ಕಿನ್ನರಿಯಾದರೆ ಒಂದು ಹೂಮುತ್ತೊತ್ತು
ಚಂದದ ಹುಡುಗಿಗೊಂದು ಮುಗುಳ್ನಗೆ ಸಾಕು
ಅಮ್ಮನ ತುರುಬಿಗೆ ತುಳಸಿಯೇ ಬೇಕು
ಅಕ್ಕನ ಜಡೆಗೆ ಕ್ಲಿಪ್ಪಿನ ತಳುಕು
ತಂಗಿಯ ಬಾಬ್'ಗೆ ಹೂವೇಕೆ ಬೇಕು,
ದೇವರಿಗೆ ಮಂತ್ರಪುಷ್ಪವಿರಿಸು
ಹೂವು ಗಿಡದಲ್ಲೇ ಚಂದ
ಕೀಳಲು ಸಲ್ಲ
ಇನ್ನೂ ಹೂವಾಡಗಿತ್ತಿಯಾದರೆ ಪರವಾಗಿಲ್ಲ
ಅದೇ ಅವಳ ಬದುಕು.
ಸುತ್ತ ಹೂಬಿರಿದ ಹೊಸವರುಷದ ಹೊಸಿಲಲ್ಲಿ
ನಿನಗೆ ನನ್ನ ಹೂನಗೆಯ ಆಶಯ.
ನೀನು ನನ್ನ ಮನಮೆಚ್ಚಿದ ಗೆಳೆಯ.
ಓದಿ ಮುಗಿಸಿದವ ಮಾತು ಮರೆತೆ. ಪ್ರೇಮನಿವೇದನೆಯ ಗ್ರೀಟಿಂಗ್ ಕಾರ್ಡ್ ಕೊಡಬೇಕೆನ್ನಿಸಲಿಲ್ಲ. ಇವಳೆನ್ನ ಒಲವ ದೇವತೆ ಹೌದು, ಒಲಿಸುವ ರಾಗ ಪೂಜೆ ಬೇರೆಯದೇ ಆಗಬೇಕು ಅಂದುಕೊಂಡೆ.
ಜೇಬಿನಿಂದ ಚಾಕಲೇಟ್ ತೆಗೆದು ಕೊಟ್ಟೆ. ನನಗೆ ಕೊಟ್ಟು ಅವಳೂ ತಿಂದಳು. ಕತ್ತಲಾಯಿತು ಮನೆಗೆ ಹೋಗಬೇಕೆಂದಳು. ಮನಸ್ಸಿಲ್ಲದ ಮನಸ್ಸಿನಿಂದ ಎದ್ದೆ. ಹೇಗೆ ಹೇಳುವುದು, ಹೇಳದೆ ಹೇಗಿರುವುದು ಗೊತ್ತಾಗದೆ ನಾಲ್ಕು ದಿನ ಒದ್ದಾಡಿದೆ. ಸಂಕ್ರಾಂತಿಯ ಎಳ್ಳು ಬೆಲ್ಲ ಬೀರಬಂದವಳ ಜೊತೆ ಲೈಬ್ರರಿಗೆ ಹೋಗೋಣವಾ ಅಂದರೆ ನಕ್ಕಳು - ಇವತ್ತು ರಜಾ.. ಸಿಟ್ಟು ಬಂದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡೆ. ಹೊರಗೆ ಬಂದರೆ ಅವಳು ಮನೆಗೆ ಹೋಗಿದ್ದಳು.
ಮರುದಿನ ಸಂಜೆ ಬಸ್ಸಿಳಿದವಳ ಜೊತೆಯಾದೆ, ಮಾತಿಲ್ಲ, ಇಬ್ಬರೂ ಲೈಬ್ರರಿಗೆ ಹೋಗದೆ ಪಾರ್ಕಿನ ಕಲ್ಲು ಬೆಂಚಲ್ಲಿ ಕೂತೆವು. ನಂಗೆ ನೀನಂದ್ರೆ ಇಷ್ಟ ಯಾವ ಮುನ್ಸೂಚನೆಯೂ ಇಲ್ಲದೆ ಬಾಯಿ ಮಾತಾಡಿಬಿಟ್ಟಿತು. ತಲೆ ಮೇಲೆತ್ತದೆ ಅವಳು ಹೇಳಿದಳು ನಂಗೆ ಗೊತ್ತದು.
ಸರಿ ನಿಂಗೆ..? ನನ್ನ ಮಾತಲ್ಲಿ ಆತಂಕ ಅಸಹನೆ ಎರಡೂ..
ತಗ್ಗಿಸಿದ ತಲೆಯಡಿಯಿಂದ ಮೆಲ್ಲ ಮಾತು - ನನಗೂ ನೀನಂದ್ರೆ ಇಷ್ಟವೇ.. ಆದರೆ ..
ಏನದು ಆದರೆ - ಈಗ ಅಸಹನೆ ಸ್ಪಷ್ಟವಾಗಿ ಒಡಮೂಡಿತ್ತು.
ಆದರೆ ಎಷ್ಟು ಇಷ್ಟ? ಬಾಳಿಡೀ ನಿನ್ನ ಜೊತೆಗೆ ಸಲ್ಲುತ್ತೇನಾ ನಾನು? ದಾರಿ ಸ್ಪಷ್ಟವಾಗಿಲ್ಲ. ಇನ್ನೂ ಓದಬೇಕಿದೆ. ಅಪ್ಪನಿಲ್ಲ ನನಗೆ. ಊರಲ್ಲಿ ಅಮ್ಮ ತಂಗಿ ತಮ್ಮ ಇದ್ದಾರೆ. ಅವರ ಜವಾಬ್ದಾರಿಯಿದೆ. ನೀನು ಸುಖವಾಗಿ ಪೇಟೆಯಲ್ಲಿ ಬೆಳೆದ ಹುಡುಗ, ಆರಾಮದ ಬದುಕು. ಹೀಗೇ ಮಾಡಬೇಕು ಎಂಬ ಜವಾಬ್ದಾರಿಯಿಲ್ಲ. ನಾನು ಕೆಲಸಕ್ಕೆ ಹೋಗಬೇಕು, ಮನೆ ನೋಡಬೇಕು ನಂತರ ಮದುವೆಯ ಮಾತು. ನನಗಿನ್ನೂ ಹದಿನೆಂಟು ವರ್ಷ, ನೀನು ಈಗ ಪದವಿಯ ಮೂರನೇವರ್ಷವನ್ನ ಎರಡನೇ ಸಲ ಕಟ್ಟಿದ್ದೀ...
-ಮಾತಾಡದೇ ಹೋದರೂ ನನ್ನ ಮುಖದಲ್ಲಿ ಸಿಟ್ಟು ಧುಮುಗುಡುತ್ತಿರುವುದು ನನಗೇ ಗೊತ್ತಾಗುತ್ತಿದೆ..
ಒಂದು ಕ್ಷಣ ಮೌನದ ನಂತರ ಮತ್ತೆ ಹೇಳಿದಳು - ಎಲ್ಲ ಸೌಕರ್ಯದ ಜೊತೆಗೆ ಬಂದರೆ ಮಾತ್ರ ನೀನು ಬೇಕಿದೆ ಅಂತಲ್ಲ ನಾನು ಹೇಳುವುದು. ನೀನೆಂದರೆ ಗೆಳೆಯನಾಗಿ ಇಷ್ಟವಾಗುತ್ತೀಯ. ಹಗುರ ಕ್ಷಣಗಳ ಉಲ್ಲಸದಲ್ಲಿ ನೀನು ಹಿತವಾದ ಜೊತೆ. ಆದರೆ ಕಷ್ಟದ ಕ್ಷಣಗಳ ಸಂಕಟವನ್ನ ಹಂಚಿಕೊಳ್ಳಲು ನೀನೆಷ್ಟು ಗಟ್ಟಿ ಇದ್ದೀಯ ನನಗೆ ಗೊತ್ತಿಲ್ಲ. ಒಂದು ಮಾತು ಹೀಗಲ್ಲ ಹಾಗೆ ಅಂದರೆ ಸಿಟ್ಟು ಮಾಡುತ್ತೀಯ. ನೀನು ಒಳ್ಳೆಯವನು, ನಗಿಸುತ್ತೀಯ, ನನಗೆ ಯಾವುದಾದರೂ ವಿಷಯ ಗೊತ್ತಿಲ್ಲದಾಗ ಗಲಿಬಿಲಿಯಾಗಿ ಬಿಸಿಯೇರಿದಾಗ ಮರದ ನೆಳಲಂತೆ ಜೊತೆಯಾಗುತ್ತೀಯ. ಆದರೆ
-ಆದ್ರೆ ಇನ್ನೇನೂ.. ಈಗ ಸಿಟ್ಟು ಹೋಗಿ ತಲ್ಲಣ ತುಂಬಿದೆ ನನ್ನ ಮಾತಲ್ಲಿ.. ಈ ಮಾಯಗಾತಿಗೆ ಏನು ಬೇಕು ಅಂತಲೇ ಗೊತ್ತಾಗುತ್ತಿಲ್ಲವಲ್ಲಪ್ಪಾ..
ಎಲ್ಲ ಸರಿ, ನೀನು ತುಂಬ ಚಿಕ್ಕವನು. ಇದೇ ತೀವ್ರತೆ, ಆಸಕ್ತಿ ಇನ್ನಾಲ್ಕು ವರ್ಷ ಆದ್ಮೇಲೆ ಇರುತ್ತಾ? ಈಗ ನಾನು ಜವಾಬ್ದಾರಿ ಬೆನ್ನೇರಿರದ ಬಿಡಿಸಿದ ರೆಕ್ಕೆಯ ಹಕ್ಕಿ. ಆಗ್ಲೇ ಹೇಳಿದಂಗೆ ಓದಿ ಮುಗಿದ ಮೇಲೆ ನಾನು ನೆಲದ ಮೇಲೆಯೇ ತೆವಳಬೇಕು. ನಿನ್ನ ವೇಗಕ್ಕೆ ಜೊತೆಯಾಗಲಾರೆ. ನಿಂಗೆ ಆಗ ಇನ್ನೇನೋ ಬೇಕು ಅನ್ನಿಸಿದ್ರೆ?
- ಅಯ್ಯೋ ಮಾರಾಯ್ತಿ ಅದೇನ್ ಯೋಚ್ನೆ ಮಾಡ್ತೀಯೇ ನೀನು.. ಇಷ್ಟೆಲ್ಲಾ ಸೀರಿಯಸ್ಸಾಗಿ ಮಹಿಳಾವಾದಿಯಂತೆ ಯೋಚ್ನೆ ಮಾಡಿದ್ರೆ ಅಷ್ಟೇ. ಲೈಫಲ್ಲಿ ಏನೂ ಮಾಡಕ್ಕಾಗಲ್ಲ.
ಅವಳಿಗೆ ಸಣ್ಣ ನಗು. - ಸರಿ ನಾನು ಮಹಿಳಾವಾದಿ ತರ ಯೋಚ್ನೆ ಮಾಡಲ್ಲ.. ಆದ್ರೆ ಇಬ್ರೂ ಒಂದು ಪರೀಕ್ಷೆ ಮಾಡೋಣ ಏನಂತೀಯಾ..
ಬೇಡ ಅನ್ನೋ ಪೆದ್ದಾ ಅಂತ ತಲೆಯೊಳಗಿನ ಗ್ರೇಸೆಲ್ಸ್ ಹೇಳ್ತಾ ಇದ್ರೆ, ಬಾಯಿ ತಾನೇ ತಾನಾಗಿ ಸರಿ ಕಣೇ ಅಂದ್ಬಿಡ್ಬೇಕಾ.
ಇನ್ನೆರಡು ವರ್ಷ ನನ್ ಡಿಗ್ರೀ ಮುಗಿಯೋವರೆಗೂ ನಾವಿಬ್ರೂ ಈ ವಿಷಯಾ ಮಾತಾಡ್ಬಾರ್ದು. ಇಲ್ಲಿಯವರೆಗಿನ ಹಾಗೆ ಹಕ್ಕಿಕ್ಷಣಗಳನ್ನ ಹೆಕ್ಕಿ ಫ್ರೆಂಡ್ಸ್ ಆಗಿ ಇರ್ಬೇಕು. ನನ್ ರಿಸಲ್ಟ್ ಬಂದ ದಿನ ಇಲ್ಲೇ ಮತ್ತೆ ಈ ವಿಷ್ಯಾನ ರೀಓಪನ್ ಮಾಡಾಣ. ಆಗ ಇಬ್ರಿಗೂ ಏನನ್ಸುತಿರತ್ತೆ ಅಂತ ನೋಡಿ ಮುಂದಿನ ವಿಷಯ ನಿಕ್ಕಿ ಮಾಡಾಣ. ಅಲ್ಲೀವರೆಗೂ ನೀನ್ ಈ ತರಾ ಮಾಡು ಹೀಗ್ ಬದುಕು, ಇದ್ ನಂಗೆ ಬೇಕು ಅಂತ ನಾನ್ ಹೇಳಲ್ಲ. ನೀನೂ ಹೇಳ್ಬಾರ್ದು.. ಏನಂತೀಯ.
ಹೂಂ ಅನ್ನೋಕ್ಕೆ ಮನ್ಸು ಬರ್ತಿಲ್ಲ.. ಆದ್ರೆ ತಲೆಯಲ್ಲಾಡಿಸಿದೆ.
ನಮ್ಮಿಬ್ರಲ್ಲಿ ಯಾವದೇ ತರ ಬದಲಾವಣೆ ಬಂದ್ರೂ ಇಬ್ರೂ ಬಂದಿದ್ದನ್ನ ಬಂದ ಹಾಗೇ ಒಪ್ಪಿಕೊಳ್ಳಬೇಕು, ಬೇಸರ ಮಾಡಿಕೊಳ್ಳೋಹಾಗಿಲ್ಲ ಆಯ್ತಾ?
ಆಯ್ತಮ್ಮಾ... ಇದ್ಯಾವುದೋ ಬಾಲಚಂದರ್ ಸಿನಿಮಾ ಡೈಲಾಗ್ ತರಾ ಇದೆ. ಆದ್ರೆ ಏನ್ಮಾಡೋದೂ ಒಪ್ಪಿಕೊಂಡಿದ್ದಾಯ್ತಲ್ಲ.. ನಡೀ ಕತ್ಲಾಗುತ್ತೆ ಇನ್ನು ಮನೆಗೆ ಹೋಗೋಣ ಅಂದೆ.
ಅವಳ ನಗುವೇ ಮಾತಾಡಿತು. ಎದ್ದು ಹೊರಟಳು.
ಮಾಮಾ ಶಶಿ ಬಿದ್ಬಿಟ್ಟಿದಾನೆ ಚುಕ್ಕಿ ಅಳುತ್ತಳುತ್ತ ಓಡೋಡಿ ಬಂದಳು.. ಓಡಿಕೊಂಡು ಹೋದೆವು. ಅಲ್ಲಿ ಪುಟಾಣಿ ಶಶಿ, ನಮ್ ಚುಕ್ಕಿಗಿಂತ ಒಂದ್ವರ್ಷ ದೊಡ್ಡವನಿರಬಹುದು ಜೋಕಾಲಿಯಲ್ಲಿ ನಿಂತುಕೊಂಡು ತೂಗುತ್ತಾ ಕಾಲ್ ಜಾರಿ ಬಿದ್ದುಬಿಟ್ಟಿದಾನೆ. ಹತ್ತಿರ ಹೋಗಿ ನೋಡಿದೆ. ಬಿದ್ದ ಶಾಕ್'ಗೆ ಭಯವಾಗಿ ಅಲುಗಾಡುತ್ತಲೂ ಇಲ್ಲ. ಕೆಳಗೆಲ್ಲ ಮರಳಿತ್ತು. ಬಹುಶಃ ಪೆಟ್ಟಾಗಿರಲಿಕ್ಕಿಲ್ಲ ಅನ್ನಿಸಿತು. ನಿಧಾನವಾಗಿ ಎಬ್ಬಿಸಿದೆ. ತೊಟ್ಟು ಮುರಿದ ಡೇರೆ ಹೂವೊಂದು ಬಾಡಿಕೊಂಡು ಕೂತ ಹಾಗೆ ಕೂತ್ಗೊಂಡ ಆ ಪುಟ್ಟ ಪೋರ. ನೋವಿನಿಂದ ಹಿಂಡಿದ ಮುಖ, ಕಣ್ಣಂಚಲ್ಲಿ ಒಂದೇ ಒಂದು ಪುಟ್ಟ ಹನಿ. ನಮ್ಮ ಪೋರಿಯನ್ನ ನೋಡಿದರೆ ಸದ್ದಿಲ್ಲದೆ ಅಳುತ್ತಿದ್ದಾಳೆ. ಏನೂ ಆಗಿಲ್ಲ ಚುಕ್ಕಿ, ಬಾ ಎತ್ಕೊಂಡು ಹೋಗಿ ಮನೆಗೆ ಬಿಡೋಣ. ಎಲ್ಲಿ ಶಶೀ ನಿಮ್ಮನೆ?
ಇಲ್ಲೇ ಪಾರ್ಕಿನ ಎದುರುಗಡೇನೇ ಮಾಮಾ ನಂಗೊತ್ತು, ಚುಕ್ಕಿ ದಾರಿ ತೋರುತ್ತಿದ್ದಾಳೆ. ಶಶಿಯನ್ನ ಮೆತ್ತಗೆ ಎರಡೂ ಕೈಯಲ್ಲೂ ಎತ್ತಿಕೊಂಡು ನೋವಾಗುತ್ತೇನೋ ಪುಟಾಣೀ ಅಂತ ಕೇಳಿದ್ರೆ, ಚೂರೇ ಚೂರು ಅಂಕಲ್ ಅಂತ ಹೇಳುತ್ತ ನಗಲು ಪ್ರಯತ್ನ ಪಟ್ಟರೆ ಆ ಕೆನ್ನೆಯಲ್ಲಿ ಒಂದು ಆಳ ಗುಳಿ.
ಹೋಗಿ ಅವನ ಮನೆಗೆ ಬಿಟ್ಟರೆ ಅಜ್ಜಿಯೊಬ್ಬರಿದ್ದರು. ಅಪ್ಪ-ಅಮ್ಮ ಸಾಫ್ಟಿಗಳಂತೆ ಬರುವುದು ರಾತ್ರಿ.
ಶಶಿಯನ್ನು ಬಿಟ್ಟು, ನಾನೂ ಚುಕ್ಕಿ ಮನೆಗೆ ಹೊರಟೆವು. ಸಂಜೆ ಮುಗಿದು ಕತ್ತಲಾಗಿತ್ತು. ಆಕಾಶದಲ್ಲೆಲ್ಲ ನೂರಾರು ಚುಕ್ಕಿಗಳು.
ಚಿಕ್ಕೆಯ ಮಿನುಗು ಅವಳ ಕಣ್ಮಿಂಚನ್ನೇ ನೆನಪಿಸುವುದು. ಒಂತರಾ ಹಿತವಾಗತ್ತೆ ಇನಿಶಿಯಲೀ.. ಆಮೇಲೆ ನೋವಿನ ಕೋಶದ ಪೊರೆ ಬಿಚ್ಚಿಕೊಳ್ಳುತ್ತದೆ. ಮೊದಲ ವರ್ಷದ ಪರೀಕ್ಷೆ ಮುಗಿದು ಅವಳು ಊರಿಗೆ ಹೋಗಿ ತಿಂಗಳು ಕಳೆದು ವಾಪಸ್ ಬರುವಷ್ಟರಲ್ಲಿ ನಾನು ಹಣ್ಣಾಗಿ ಹೋಗಿದ್ದೆ. ಕಾಲೇಜಿನ ಮೊದಲ ದಿನ ಮುಗಿಸಿ ಬಸ್ಸಿಳಿದು ಬಂದವಳು ಫ್ರೆಷ್ಷಾದ ಕಿನ್ನರಿಯಂತೆ ನಗುತ್ತ ಹೆಜ್ಜೆಯಿಟ್ಟರೆ ಮನಸ್ಸು ಅರಳತೊಡಗಿತು. ನಿನ್ ರಿಸಲ್ಟ್ ಬಂತಾ... ಅರಳಿದ್ದು ಅಲ್ಲೇ ತೊಟ್ಟುಕಳಚಿ ಬಿದ್ದಿತು.
ಈ ಸಲ ಎಲ್ಲ ಪಾಸಾಗಿದೆ, ಇಕನಾಮಿಕ್ಸ್ ಮಾತ್ರ ಇನ್ನೊಂದ್ಸಲ ಕಟ್ಬೇಕು.. ಹೇಳಿ ತಲೆತಗ್ಗಿಸಿದೆ.
ಏನೇನು ಓದಿದ್ಯೋ ರಜದಲ್ಲಿ? ಯಾವ್ ಹೊಸ ಬುಕ್ಕು.. ನಂಗಂತೂ ಲೈಬ್ರರಿ ಇಲ್ದೆ ಊರಲ್ಲಿ ಬೇಜಾರಾಗೋಗಿತ್ತು. ಆದ್ರೂ ಆಚೆ ಬೀದಿ ರಾಮಣ್ಣೋರ ಮನೇಲಿ ಒಂದಿಷ್ಟು ಒಳ್ಳೆ ಕನ್ನಡ ಪುಸ್ತಕಗಳು ಸಿಕ್ಕಿದ್ವು ಓದಿದೆ. ನೀನು?
ನಾನು...? ಏನ್ ಮಾಡಿದೆ ಅಂತಲೇ ನೆನಪಾಗ್ತಿಲ್ವಲ್ಲಾ? ಬೆಳಗ್ಗೆ ಲೇಟಾಗೆದ್ದು ಅದೂ ಇದೂ ಮ್ಯಾಗಝೀನ್, ಅಮ್ಮನಿಗೆ ಏನೋ ಸಹಾಯ, ಸಂಜೆ ಕ್ರಿಕೆಟ್, ರಾತ್ರಿ ಅವಳ ನೆನಪಿನಲ್ಲಿ ಕೈಯಲ್ಲಿ ಪುಸ್ತಕ ಹಿಡಿದು ಓದದೇ ಕನಸು ಕಾಣುತ್ತಾ ಬಿದ್ದುಕೊಂಡಿದ್ದೆ ಅಂದ್ರೆ ಏನಂದ್ಕೋತಾಳೋ.. ಬೇಡ ಏನಾದ್ರೂ ಚೆನಾಗಿರದು ಹೇಳ್ತೀನಿ.
ನಾನೂ ಬೆಳಗ್ಗೆ ಸ್ವಿಮ್ಮಿಂಗ್, ಆಮೇಲೆ ಒಂದಿಷ್ಟು ಒಳ್ಳೊಳ್ಳೆ ಕನ್ನಡ ಪುಸ್ತಕ, ಒಂದ್ ನಾಲ್ಕಾರು ಇಂಗ್ಲಿಷ್ ಬುಕ್ಸ್ ಓದಿದೆ.. ಯಾವ್ಯಾವ್ದು ಓದಿದೆ ನೀನು?
ಖಾಂಡೇಕರ್ ಅವರ ಅಶ್ರು, ಶಾಂತಿನಾಥ ದೇಸಾಯಿಯವರ ಮುಕ್ತಿ, ಗಳಗನಾಥರ ಮಾಧವ ಕರುಣಾವಿಲಾಸ, ಮಾಸ್ತಿಯವರ ಚಿಕವೀರ ರಾಜೇಂದ್ರ, ಆಮೇಲೆ ನಾಗ್ತಿಹಳ್ಳಿಯವ್ರ ಚುಕ್ಕಿ ಚಂದ್ರಮರ ನಾಡಿನಲ್ಲಿ.. ಇದಿಷ್ಟೇ ಅಲ್ಲ ಕಣೋ ವುದರಿಂಗ್ ಹೈಟ್ಸ್ ಮತ್ತೆ ಟೆಸ್ ಇನ್ನೊಂದ್ಸಲ ಓದಿದೆ.. ಆಮೇಲೆ ಈ ಸಲ ಒಬ್ರು ಮನೇಲಿ ನಂಗೆ ಒಂದ್ನಾಲ್ಕು ಅಗಾಥ ಕ್ರಿಸ್ಟಿ ಬುಕ್ಸ್ ಸಿಗ್ತು. ಸಕ್ಕತ್ತಾಗಿದೆ. ಹಿಡಿದಿದ್ದು ಬಿಡದೆ ಕೂತು ಓದಿದೆ. ಏನ್ ಬರೀತಾಳೆ ಅವ್ಳು ಗೊತ್ತಾ. ಅದೆಲ್ಲಾ ಹೋಗ್ಲಿ ನೀನು ಅಶ್ರು ಓದಿದೀಯಾ?
ನಂಗೆ ಕಣ್ಣು ತುಂಬಿಕೊಳ್ಳುವಂತಾಗಿತ್ತು.. ಹ್ಯಾಗೋ ಸಾವರಿಸಿಕೊಂಡು ಇಲ್ಲ ಕಣೇ..ಯಾರು ಬರ್ದಿದ್ದು ಅದು? ಕೇಳಿದೆ.
ನಂಗೊತ್ತಿತ್ತು ನೀನು ಓದಿರಲ್ಲ ಅಂತ. ಅದಿಕ್ಕೇ ಮಾವ ಮೈಸೂರಿಗೆ ಹೋಗಿದ್ದಾಗ ಕೇಳಿ ತರಿಸಿಕೊಂಡೆ ಅವರ ಹತ್ರ. ನಿಂಗೇಂತನೇ. ಓದ್ಲೇಬೇಕು ನೀನು. ಕೈಗೆ ಚಂದಕ್ಕೆ ಬೈಂಡ್ ಮಾಡಿದ ಪುಸ್ತಕ ಕೊಟ್ಟಳು.. ಓಹೋ.. ಇನ್ನೆರಡು ದಿನದಲ್ಲಿ ವಿಮರ್ಶೆ ಹೇಳ್ದೇ ಇದ್ರೆ ಕೇಳು..ಅಂತ ನಗುತ್ತ ತಗೊಂಡೆ.
ಸಂಜೆ ಮೆಲ್ಲಗೆ ಹೆಜ್ಜೆಯಿಟ್ಟು ರಾತ್ರಿಯ ಬೀದಿಗೆ ತಿರುಗಿದ್ದಳು. ನಾವು ಮನೆ ಕಡೆ ಹೊರಟೆವು. ರಾಧೂ ಅತ್ತೆಯ ಮನೆಯ ಕಂಪೌಂಡಲ್ಲೊಂದು ಪಾರಿಜಾತದ ಮರವಿತ್ತು. ಮರದ ತುಂಬ ಬಾಗಿನಿಂತ ಹೂಗಳು. ಗೇಟು ತೆಗೆಯುವ ಮುನ್ನ ನನ್ನ ನೋಡಿ ನಕ್ಕವಳ ಕಣ್ಣ ಮಿಂಚಿಗೆ ಸುಸ್ತಾಗಿ ಕಾಲೆಳೆದುಕೊಂಡು ಮನೆಗೆ ಬಂದೆ. ಅಮ್ಮ ಮೆಂತ್ಯ ಗೊಜ್ಜು ಮಾಡಿದ್ದರು. ಗಡದ್ದಾಗಿ ಹೊಡೆದು ಮಂಚವೇರಿ ಕೈಯಲ್ಲಿ ಪುಸ್ತಕ ಹಿಡಿದರೆ ಕಣ್ಣು ಎಳೆದುಕೊಂಡು ಹೋಗುತ್ತಿತ್ತು. ನಾಳೆ ಇಡೀ ಕೂತು ಓದಿ ಮುಗಿಸಿದರಾಯಿತು ಅಂತ ಪಕ್ಕಕ್ಕಿಟ್ಟೆ.
ಹಾಗೇ ಮುಂದರಿದ ದಿನಗಳ ಕೊನೆಗೆ ಸಪ್ಲಿಮೆಂಟರಿ ಪರೀಕ್ಷೆ ಬಂದಿದ್ದೆ ಗೊತ್ತಾಗಲಿಲ್ಲ. ಹ್ಯಾಗೋ ಗಡಿಬಿಡಿಯಲ್ಲಿ ಹೋಗಿ ಬರೆದು ಬಂದವನು ರಿಸಲ್ಟಿಗೆ ಕಾಯದೇ ಹಾಯಾಗಿ ಓಡಾಡಿಕೊಂಡಿದ್ದೆ.
ಇವಳು ಚಂದದ ಹುಡುಗಿ,ಕುಡುಮಿ ಕುಡುಮಿ ಎಲ್ಲ ಬರವಣಿಗೆ, ಪ್ರಬಂಧ, ಕತೆ ಕವಿತೆಗಳಲ್ಲಿ ಬಹುಮಾನ ಗಿಟ್ಟಿಸುತ್ತಾ, ಅದ್ಯಾವುದೋ ಫೆಲೋಶಿಪ್ ಸ್ಕಾಲರ್ ಶಿಪ್ ಎಲ್ಲ ಪಡೆಯುತ್ತಾ ನಮ್ಮ ಸಂಜೆಗಳಲ್ಲಿ ಮೌನಸಲ್ಲಾಪ ತುಂಬಿತು. ಅವಳು ಯಾವ ಪುಸ್ತಕದ ಹೆಸರು ಹೇಳಿದರೂ ನನಗೆ ರೇಗುತ್ತಿತ್ತು. ಒಂದೆರಡು ಸಲ ಬಯ್ಯಿಸಿಕೊಂಡವಳು ಪುಸ್ತಕದ ಬಗ್ಗೆ ಮಾತಾಡುವುದನ್ನೆ ಬಿಟ್ಟಳು. ಬೇರೆ ಮಾತು ಅವಳಿಗೆ ಗೊತ್ತಿರಲಿಲ್ಲ. ನನಗೆ ಮಾತಾಡಲು ಹೊಸದೇನಿರಲಿಲ್ಲ. ಮೊದಲ ಪುಟವನ್ನೂ ತಿರುಗಿಸದ ಅಶ್ರು ನನ್ನ ಮಂಚದ ಪಕ್ಕದ ಸ್ಟೂಲಿನ ಮೇಲೆ ಮಕಾಡೆ ಬಿದ್ದುಕೊಂಡಿತ್ತು.
ಇವತ್ತು ಸಂಜೆ ಎಷ್ಟು ಕಾದರೂ ಅವಳು ಬರಲಿಲ್ಲ. ಐದೂವರೆಗೆ ಸಿಟ್ಟಿನಿಂದ ಶುರುವಾದ ಅಭಿಮಾನ, ಎಂಟು ಗಂಟೆಯ ಹೊತ್ತಿಗೆ ಆತಂಕದ ದೈನೇಸಿತನಕ್ಕೆ ತಿರುಗಿತ್ತು. ರಾಧೂ ಅತ್ತೆಯ ಮನೆಗೇ ಹೋದೆ. ನುಚ್ಚಿನುಂಡೆ, ಕಾಫಿ ಕೊಟ್ಟ ಅತ್ತೆ, ಅವಳ ಬಗ್ಗೆ ಹೇಳಿದರು. ಇವತ್ತು ಸೆಂಟ್ರಲ್ ಕಾಲೇಜಿಗೆ ಹೋಗ್ಲಿಲ್ಲ ಯಾಕೆ ನೀನೂ? ಅತ್ತೆ ಕೇಳಿದರೆ ನಾನು ಬೆಪ್ಪನಂತೆ ಯಾಕೆ ಅಂದ್ ಬಿಟ್ಟೆ. ಓ ನಿಂಗೊತ್ತಿಲ್ವಾ, ಇವತ್ತು ಅವಳ ಕತೆಗೆ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಬಂದ ಮೊದಲ ಬಹುಮಾನ ಕೊಡ್ತಾರಲ್ಲಾ, ನೀನೂ ಹೋಗಿರ್ತೀ ಮಾರ್ಗದರ್ಶಕ ಅಂದ್ಕೊಂಡಿದ್ದೆ ಅತ್ತೆ ಪುಟ್ಟಗೆ ನಗಾಡಿದರು. ನುಣ್ಣಗಿದ್ದರೂ ನುಚ್ಚಿನುಂಡೆಯಲ್ಲಿ ದೊಡ್ಡ ನುಚ್ಚು ಸಿಕ್ಕಿ, ನೆತ್ತಿ ಹತ್ತಿತು. ಅತ್ತೆ ಕೊಟ್ಟ ನೀರು ಕುಡಿದು ಸಾವರಿಸಿಕೊಂಡು ಅಲ್ಲಿಂದ ಹೊರಟು ಬಂದೆ.
ಮನೆಯಲ್ಲಿ ಅಪ್ಪ ಅದ್ಯಾವುದೋ ಎನ್.ಐ.ಐ.ಟಿಯಂತೆ ಅದರ ಫ್ರಾಂಚೈಸಿ ತಗೊಳೋಣ ಅಂತ ಮಾತು ಶುರುಮಾಡಿದರು. ನಾನು ಸುಮ್ಮನಿದ್ದೆ. ಹೀಗೇ ಇದ್ದರೆ ಕೆಲಸವಿಲ್ಲದೆ, ಆದಾಯವಿಲ್ಲದೆ ಯಾರೂ ಮದುವೆಯಾಗೋಲ್ಲ.. ಅಮ್ಮನ ಕಳಕಳಿ.
ಪರ್ವಾಗಿಲ್ಲ. ನಾನೇನೂ ಮದ್ವೆಯಾಗೋದಕ್ಕಾಗಿ ಕೆಲ್ಸ ಹಿಡೀಬೇಕಾಗಿಲ್ಲ.. ನನ್ನ ಉತ್ತರವನ್ನ ತುಂಡರಿಸುತ್ತಾ ಅಪ್ಪ ಹೇಳಿದ್ರು. ಇರಬಹುದೋ ಆದರೆ ಅದು ಈಗ ವಯಸ್ಸಿರುವಾಗ ಹೇಳುವ ಮಾತು.. ಕತೆ ಕವಿತೆ ಬರೆಯೋವ್ರೂ ಕೂಡ ಪ್ರಾಕ್ಟಿಕಲ್ ಆಗಿ ಇರ್ತಾರಪಾ.. ಅಪ್ಪನ ಮೀಸೆಯಂಚಲ್ಲಿ ನಗುವಿರಬಹುದೇ ನನ್ನ ಮೈಯೆಲ್ಲ ಉರಿಯಿತು. ಸಿಟ್ಟಿನಿಂದ ಹೊರಗೆ ಬಂದೆ. ಅವಳು ಬಾಗಿಲಲ್ಲಿ ನಿಂತಿದ್ದಳು ಕೈಯಲ್ಲೊಂದು ಟ್ರೋಫಿ ಮುಖದಲ್ಲಿ ಅದನ್ನ ಮೀರಿ ಹೊಳೆಯುತ್ತಿರುವ ನಗು, ಆತ್ಮವಿಶ್ವಾಸ.. ನೋಡೋ ಅಂತ ಹೇಳಬಂದವಳ ಕೈ ಕಿತ್ತೊಗೆದು ನಿನ್ ಬಹುಮಾನ ನೀನೇ ಇಟ್ಕೋ ನಂಗ್ಯಾಕೆ.. ಚಪ್ಪಲಿ ಸಿಕ್ಕಿಸಿ ಸರಸರನೆ ಹೊರಟು ಹೋದೆ. ಬಾಗಿಲಿಗೆ ಬಂದಿದ್ದ ಅಮ್ಮ ಅವಳನ್ನ ಕರೆದುಕೊಂಡು ಒಳಗೆ ಹೋಗಿದ್ದು ಕಣ್ಣಂಚಿನಲ್ಲಿ ಕಾಣುತ್ತಿತ್ತು.
ಆಮೇಲೆ ತುಂಬ ದಿನ ಹಾಗೇ ಇದ್ದೆ. ಒಂದಿನ ಅಪ್ಪ ಕರ್ದು ನೋಡೋ ಎಲ್ಲ ಫಾರ್ಮಾಲಿಟೀಸ್ ಮುಗ್ಸಿದೀನಿ. ಆಫೀಸಲ್ಲಿ ಕೂತು ನೋಡಕ್ಕೆ ಅಂತ ಒಬ್ರು ಬೇಕು. ಬೇರೇವ್ರನ್ನ ಹುಡುಕೋವರ್ಗೂ ಸ್ವಲ್ಪ ಕೂರ್ತೀಯ ನೀನೆ? ಹುಂ ನೋಡೋಣ ಅಂತ ಅವತ್ತು ಆಫೀಸಿನ ಮೆಟ್ಟಲು ಹತ್ತಿದವನು ಆಮೇಲೆ ತಿರುಗಿ ನೋಡಲಿಲ್ಲ. ಅವಳ ರಿಸಲ್ಟಿನ ದಿನ ಗೊತ್ತಿಲ್ಲದೆಯೇ ಸರಿದು ಹೋಗಿ..ಈಗ ಮಾಸ್ಟರ್ ಡಿಗ್ರೀ ಮುಗಿದಿದೆ.. ನನ್ನ ಸಪ್ಲಿ ಪೇಪರ್ ಇನ್ನೂ ಹಾಗೇ ಉಳಕೊಂಡಿದೆ. ನನ್ನ ಕೈಕೆಳಗೆ ಕೆಲಸ ಮಾಡುವ ಕ್ವಾಲಿಫೈಡ್ ಎಂಬಿಎಗಳು.. ಅವಳು ಹುಡುಗಿಯರ ಕಾಲೇಜಿನಲ್ಲಿ ಪೊಯೆಟ್ರಿ ಲೆಕ್ಚರರ್!
ನಾಲ್ಕು ವರ್ಷಗಳ ನಂತರ ಅವಳಮ್ಮ, ರಾಧೂ ಅತ್ತೆ ನಮ್ಮನೆಗೆ ಜಾತಕ ತಗೊಂಡು ಬಂದರು. ನಾನು ನೇರವಾಗಿ ಇಷ್ಟವಿಲ್ಲ ಅಂದುಬಿಟ್ಟೆ.
ಅಷ್ಟೆಲ್ಲ ವರ್ಷಗಳ ನಂತರ ಮಾರನೆಯ ದಿನ ಸಂಜೆ ಮನಸ್ಸು ತಡೆಯಲಿಲ್ಲ. ಲೈಬ್ರರಿಯ ಕಡೆ ಹೊರಟೆ. ಹಾಗೇ ಮುಂದರಿದು ಪಾರ್ಕಿಗೆ ಹೋದರೆ ಅವಳು ಅಲ್ಲೇ ಕೂತು ಕಾಯುತ್ತಿದ್ದಳು. ಗುಡ್ಡದ ಮೇಲಿನ ಪಾರ್ಕದು. ಅವಳ ಬೆನ್ನ ಹಿಂದೆ ನಂಗೊತ್ತಿತ್ತು ನೀನು ಬಂದೇ ಬರ್ತೀಯಾಂತ ಸೂರ್ಯ ಕೆಂಪುಕೆಂಪಾಗಿ ನೋಡುತ್ತಿದ್ದ. ಹತ್ತಿರ ಹೋದ ಕೂಡಲೆ ಎದ್ದವಳು ಕೈಗೆ ಫ್ರೂಟ್ಸ್ ಎನ್ ನಟ್ಸ್ ಚಾಕಲೇಟಿತ್ತು ನಸುನಕ್ಕಳು. ಆ ಮಿಂಚು ಸೋಕಿ ನಾನು ನಿಲ್ಲಲಾರದೆ ಕೂತೆ. ಥ್ಯಾಂಕ್ಸ್ ಕಣೋ ನೀನೆಲ್ಲಿ ಹೂಂ ಅಂದ್ ಬಿಡ್ತೀಯೋ ಅಂತ ಭಯವಾಗ್ ಬಿಟ್ಟಿತ್ತು. ರಾಧೂ ಅತ್ತೆ ಮೊದ್ಲು ಈ ಪ್ರಸ್ತಾಪ ಇಟ್ಟಾಗ ನಂಗೆ ಬೇಡ ಅಂತ ಹೇಳೋದು ಹ್ಯಾಗೆ ಗೊತ್ತಾಗಿಲ್ಲ. ಮೇಲಾಗಿ ಅಮ್ಮಂಗೆ ನಾನು ಮದ್ವೆ ಆಗ್ಲೇ ಬೇಕು ಅಂತ. ಈಗ ಎಲ್ಲ ನಿರಾಳ.
ನಾನು ಮಾತಿಲ್ಲದೆ ಅವಳನ್ನು ನೋಡಿದೆ. ಮಾತಾಡಲು ಬಾಯಿ ಬರುತ್ತಿಲ್ಲ. ಅಷ್ಟು ವರ್ಷಗಳ ಹಿಂದಿನ ಅದೇ ಮನಸು ಬೈದುಕೊಂಡಿತು. ನಿನ್ನೆ ಮುಚ್ಕೊಂಡು ಹೂಂ ಅಂದಿದ್ರೆ ಏನಾಗ್ತಾ ಇತ್ತು ನಿಂಗೆ. ಈಗ ಅನುಭವ್ಸು...
ನಂಗೆ ಕೇಂಬ್ರಿಡ್ಜ್ ದು ಒಂದು ಸ್ಕಾಲರ್ ಶಿಪ್ ಸಿಕ್ಕಿದೆ. ಎರಡು ವರ್ಷ ಫೆಲೋಶಿಪ್. ಹೋಗ್ಬೇಕೂಂತ. ಮನೇಲಿ ಮದ್ವೆ ಅಂತ ಗಲಾಟೆ ಮಾದ್ತಾ ಇದ್ದರು. ಈಗ ನೆಮ್ಮದಿ. ವಾಪಸ್ ಬಂದ್ ಮೇಲೆ ಹಣೇಲಿ ಏನ್ ಬರೆದಿದೆ ನೋಡೋಣ ಅಲ್ವಾ...
ನಾನು ಹೌದೌದು ಅಂತ ಪೆದ್ದು ಪೆದ್ದಾಗಿ ನಕ್ಕೆ.
ಕತ್ತಲಾಯಿತು ಅಂತ ಎದ್ದವಳು ಬೆಟ್ಟದ ಪಾರ್ಕಿನ ಕೊನೆಯ ಮೆಟ್ಟಿಲಿಳಿವಾಗ ಹೇಳಿದಳು.
- ಆದ್ರೆ ನಿಂಗೇನು ಫಾರಿನ್ ರಿಟರ್ನ್ಡ್ ಹೆಂಡ್ತಿ ಅಂತ ಬೇಜಾರಿಲ್ವಲ್ಲಾ?
ನಾನು ಮೈ ಚೂಟಿಕೊಂಡೆ.. ಅವಳು ಮಿಂಚು ಮಿಂಚು ನಗುವಿನ ಗೊಂಚಲಾಗಿ ಮುಂದೆ ಓಡುತ್ತ ಹೋದಳು.. ನಾನು ಅಲ್ಲಿ ದೀಪದ ಕಂಬದ ಕೆಳಗಿನ ಕತ್ತಲಲ್ಲಿ ಒಳಗೆಲ್ಲ ಮಿಂಚು ತೋಯ್ದು ನಿಂತೆ.
ಎರಡು ವರ್ಷ ಕಳೆಯಲು ಇನ್ನೂ ಮೂರು ತಿಂಗಳಿತ್ತು.
ಅಪ್ಪ ಬೋರ್ಡ್ ಮೀಟಿಂಗಿನಲ್ಲಿದ್ದವನನ್ನ ಅರ್ಜೆಂಟಾಗಿ ಬಂದು ಕರೆದರು.
ಅವರು ಹೇಳಿದ ಏನೇನೋ ಮಾತುಗಳಲ್ಲಿ ನನಗೆ ಕೇಳಿಸಿದ್ದು ಇಷ್ಟು..
ಎತ್ನಿಸಿಟಿ ಸ್ಟಡಿ ಅಂತ ಆಫ್ಘಾನಿಸ್ತಾನದಲ್ಲಿದ್ದ ಅವಳನ್ನ ಮತ್ತು ಇನ್ನೆರಡು ವಿದ್ಯಾರ್ಥಿಗಳನ್ನ, ಅಲ್ಲಿನ ಉಗ್ರಗಾಮಿ ಗುಂಪು
ಸೆರೆಹಿಡಿದು..
ಮುಂದೆ ಕೇಳಲಾಗದೆ ಎಚ್ಚರ ತಪ್ಪಿದವನು ಎದ್ದಾಗ ಮನೆಯಲ್ಲಿ ಸೂತಕ.
ಅಪ್ಪ ಡೆಲ್ಲಿಗೆ ಹೋಗಲು ರೆಡಿಯಾಗುತ್ತಿದ್ದರು.
ಮಿಂಚನ್ನ ಅದಕ್ಕಿಂತ ತೀವ್ರದ ಇನ್ಯಾವುದೋ ಒಂದು ಕಬಳಿಸಿ ಕಪ್ಪು ಪೆಟ್ಟಿಗೆಯಲ್ಲಿ ಕೂಡಿ ಮೊಳೆ ಹೊಡೆದು ಕಳಿಸಿದ್ದರು.
ಅವರು ಪೆಟ್ಟಿಗೆ ತೆರೆದಾಗ ನಾನು ಬೆಟ್ಟದ ಮೇಲಿನ ಪಾರ್ಕಲ್ಲಿ ಕೂತಿದ್ದೆ.
ಅವಳು ಮುಳುಗುವ ಸೂರ್ಯನ ಕೆಂಪು ಬಣ್ಣದಲ್ಲಿ, ಅವನ ಹಿಂದೆ ಹರಡಿಕೊಂಡಿದ್ದ ನೀಲಿಯಲ್ಲಿ, ದೀಪದ ಕಂಬದ ಕೆಳಗಿನ ಕತ್ತಲೆಯಲ್ಲಿ.. ಮೇಲೆ ಮಿನುಗುವ ಚುಕ್ಕಿಯಲ್ಲಿ...
ಚುಕ್ಕಿ ಕೈ ಹಿಡಿದು ಮಾಮಾ ಮನೆಬಂತು ಗೇಟ್ ತೆಗಿ ಅಂತ ಕೈ ಹಿಡಿದೆಳೆಯುತ್ತಿದ್ದಳು.

Subscribe to:
Posts (Atom)