ನಾವಿಬ್ಬರೂ ಶಾಲೆ ಮುಗಿಸಿ ಬಂದು ಪಾಟಿ ಚೀಲ ಬಿಸಾಕಿ, ಕೈ ಕಾಲು ತೊಳ್ಕೊಂಡು, ಅಮ್ಮ ಕೊಟ್ಟ 'ಬಾಯಿಬಡಿಗೆ' ಗುಳುಂ ಮಾಡಿ, ಹಾಲುಟೀ ಕುಡಿದು ಓಟ ಹೊರಗೆ.. ಅಲ್ಲಿ ರಸ್ತೆಬದಿಯ ಅಂಗಳದಲ್ಲಿ, ರೇಣುಕ,ಶಿವು,ತಾರ,ಶಾಯಿನಾ,ಲಕ್ಷ್ಮಣ,ದುರ್ಗಪ್ಪ ಎಲ್ಲ ಸೇರಿ ಕತ್ತಲು ಕವಿಯುವವರೆಗೆ ಬಾಯಿಗೆ ಬಂದ ಆಟ ಆಡಿ ಮಣ್ಣಧೂಳಿನ ತೆರೆಹೊದ್ದು ಗೋಧೂಳಿಯಲ್ಲಿ ಮನೆಗೆ ಬರುವ ಪುಟ್ಟ ಕರುಗಳಂತೆ ಬಂದ ಮೇಲೆ.. ಮತ್ತೆ ಕೈಕಾಲು ತೊಳೆದು.. ಈ ಸಲ ಹಿಮ್ಮಡಿ ನೆನೆಯುವ ಹಾಗೆ ಎಚ್ಚರಿಕೆಯಿಂದ ಕಾಲು ತೊಳೆಯಬೇಕು ಇಲ್ಲದಿದ್ದರೆ ಬಚ್ಚಲ ಒಲೆಯ ಬುಡದಲ್ಲೆಲ್ಲೋ ಬೆಚ್ಚಗೆ ಕುಳಿತ ಶನಿಮಹಾತ್ಮ ನಳನ ಹಿಮ್ಮಡಿ ಕಚ್ಚಿಹಿಡಿದಹಾಗೆ ಹಿಡಕೊಂಡು ಬಿಡುತ್ತಾನೆ.. ಆಮೇಲೆ ಅಷ್ಟೆ..!
ಇಬ್ಬರೂ ಗೋಣಿಚೀಲಕ್ಕೆ ಕಾಲು ಒರೆಸುತ್ತಾ ಒಳಗೆ ಬಂದರೆ ಅಮ್ಮ ಆಗಷ್ಟೇ ದೀಪಕ್ಕೆ ಎಣ್ಣೆತುಂಬುತ್ತಾ ಹತ್ತಿಸುತ್ತಿದ್ದಾಳೆ. ಒಂದು ಊದುಬತ್ತಿ ಬೇರೆ. ಈಗ ಅಮ್ಮನದ್ದು ಮಾತಿಲ್ಲ ಸಂಜ್ಞೆ. ನಾವಿಬ್ಬರೂ ಸಿಕ್ಕಾಪಟ್ಟೆ ಒಳ್ಳೆಯವರ ಹಾಗೆ ಕೈ ಮುಗಿದು ಅಮ್ಮನ ಮುಖದ ಮೇಲೆ ಬೆಳಕಿನಾಟ ಹಚ್ಚಿರುವ ದೀಪದ ಪುಟ್ಟ ಉರಿಯನ್ನೇ ನೋಡುತ್ತಾ ನೋಡುತ್ತಾ ನಿಜವಾಗಲೂ ತುಂಬ ಒಳ್ಳೆಯವರಾಗಿಬಿಡುತ್ತಿದ್ದೆವು. ಅಮ್ಮನ ಅಹವಾಲು ಮುಗಿದು ನಮ್ಮ ಕಡೆ ತಿರುಗಿದ ಕೂಡಲೆ, ನಮ್ಮ ಬಾಯಿ ತಾನೆತಾನಾಗಿ ಬೆನಕ ಬೆನಕಾ ಏಕದಂತಾ ಪಚ್ಚೆಕಲ್ಲು ಪಾಣಿಪೀಠ.. .ಎಂದು ಒಪ್ಪುವಾ ವಿಘ್ನೇಶ್ವರನಿಗೆ ನಮಸ್ಕರಿಸಿ, ಪಾರ್ವತಿ, ಶಾರದೆ, ಅನ್ನಪೂರ್ಣೆ, ಗುರುರಾಯರನ್ನೆಲ್ಲ ಓಲೈಸಿ ಮುಗಿಸುವಾಗ ನಾವು ಶಿರಬಾಗಿ ನಮಿಸಿ ಎದ್ದವರು ಮತ್ತೆ ವಾಪಸ್ ಕಿರಾತರಾಗಿ ಬಿಡುತ್ತಿದ್ದೆವು. ಗೂಡಿನಲ್ಲಿದ್ದ ಇಡಗುಂಜಿ ಗಣಪತಿಯಂತೂ ನಮ್ಮನ್ನು ನೋಡಿದಾಗಲೆಲ್ಲ ಕಿರುನಗು..
ಬೇಸಿಗೆ ರಜೆಯ ಆಟೋಟ್ಟಹಾಸದ ಸಂಜೆಗಳಲ್ಲಿ, ಊರಲ್ಲಿ, ಸಂಜೆಯ ಆಟ ಮುಗಿದು ಮನೆಗೆ ಬಂದು ಕಾಲ್ತೊಳೆದು ದೇವರ ಮನೆಯ ಮುಂದೆ ಅಕ್ಕನ ಜೊತೆ ತಾಳ ಹಿಡಿಯಲು ನಾವಿಬ್ಬರೂ ಕುಸ್ತಿ ಮಾಡಿ ಕೂರುವಷ್ಟರಲ್ಲಿ ಅವಳು ಒಪ್ಪಾಗಿ ಬಂದು ಕೂತು -ಶ್ರೀರಾಮ ಚಂದಿರನೆ ಶ್ರೀಲೋಲ ಸುಂದರನೆ ಅಂತ ಶುರುಮಾಡುತ್ತಿದ್ದಂತೆ ನಾವು ನಮ್ಮ ಕಿತಾಪತಿ ಮರೆತು ಆ ಹಾಡಿನ ಎಳೆಯನ್ನೇ ಹಿಡಿದು ರಾಮ ಪಟ್ಟಾಭಿಷೇಕದಲ್ಲಿ ನಲಿಯುತ್ತಾ, ನಮ್ಮ ಮನೆಗಳಲ್ಲಿ ಪರಿಚಿತವಿರುವ ಎಲ್ಲ ದೇವರನ್ನೂ ಓಲೈಸಲು ವಿಧವಿಧದ ಭಜನೆಗಳನ್ನು ಗುನುಗುತ್ತಾ ಇದ್ದರೆ ಅಲ್ಲಿ ಪೀಠದ ಮೇಲೆ ದೀಪದ ಸಣ್ಣ ಬೆಳಕಿನಲ್ಲಿ ಹೊಳೆಯುವ ಎಲ್ಲ ದೇವಾನುದೇವತೆಗಳೂ, ಮನೆಯಲ್ಲಿ ಅಲ್ಲಲ್ಲಿ ಅವರವರ ಕೆಲಸದಲ್ಲಿರುವ ದೊಡ್ಡಮ್ಮ, ದೊಡ್ಡಪ್ಪ, ಅತ್ತೆ, ಅಮ್ಮಮ್ಮ ಎಲ್ಲರೂ ಸುಪ್ರಸನ್ನರಾಗಿ ಎಂತಹ ಬಂಗಾರದ ಮಕ್ಕಳಾಗುತ್ತಿದ್ದೆವು.
ಎಲ್ಲ ಕಿರಾತಬುದ್ಢಿ, ತುಂಟತನ, ಹೊಟ್ಟೆಯುರಿ, ಎಲ್ಲ ಸಂಜೆಯ ಕತ್ತಲಲ್ಲಿ ಕರಗಿ, ಬೆಳಕಿನ ಪುಟ್ಟ ಹಾಡಿನೆಳೆ ಹಿಡಿದು ಕಿನ್ನರಲೋಕದ ದಾರಿಯಲ್ಲಿ ದೇವರ ದೇವ ವಾಸುದೇವನ ಕೊಳಲ ನೆನಪಿನಲ್ಲಿ ನಮ್ಮ ಪಯಣ.
ಮೊನ್ನೆ ಅಲ್ಲಿ ರಾಮಮಂದಿರದಲ್ಲಿ (ಇದು ಭಜರಂಗೀ ರಾಮನಲ್ಲ..! ಬಾಪೂಜೀಯ ರಾಮ) ಎಲ್ಲ ದೊಡ್ಡಮಕ್ಕಳು ಅವರವರ ಮಕ್ಕಳು ಮೊಮ್ಮಕ್ಕಳೊಂದಿಗೆ ಕೂತು ಕಮಲನಯನ ಮಾಧವಾ ಕಮಲಾನಯನ ಮಾಧವಾ.. ಅಂತ ಹಾಡುತ್ತಿದ್ದರು. ಸುತ್ತಲ ಶಬ್ಧಮಯ ಬದುಕಿನ ಅಗಾಧ ಕತ್ತಲೆಯು ನಾದಮಯ ಬದುಕಿನ ಪುಟ್ಟ ಬೆಳಕೊಳಗೆ ಕರಗುತ್ತಿತ್ತು. ದೊಡ್ಡವರ ಸಣ್ಣತನಗಳೆಲ್ಲಾ ಆ ಪುಟ್ಟಬೆಳಕಿನ ಆಪ್ತತೆ, ಸುನಾದದ ಇಂಪಿನ ಮುಂದೆ ನಾಚಿ ಹಿಂದೆಸರಿದು ಮಗುಮನಸ್ಸಿನ ವಿಶಾಲತೆಗೆ ಜಾಗಬಿಟ್ಟಿದ್ದವು. ಒಬ್ಬರು ಧರೆಯೊಳಗೆ ನಾರದ ಹಂಚಿದ ಹರಿನಾಮವನ್ನು ಉಲಿದರೆ, ಇನ್ನೊಬ್ಬರು ಹರಿನಾಮದ ಸುಧೆಯ ಹಂಚುತ್ತಿದ್ದರು, ಪುರಂದರವಿಠಲನ ಅವತಾರ ವರ್ಣಿಸುವ ಸವಿ ಉಲಿಯ ಕೊಳಲಿತ್ತು, ಎಲ್ಲರ ಮೃದು ಉಲಿಯ ದನಿಗೆ ಸಾಥಿಯಾಗಿ ತಾಳವಿತ್ತು. ಅವರು 'ತಂಬೂರಿ ಮೀಟಿದವ ಭವಾಬ್ಧಿ ದಾಟಿದವ..' ಅಂತ ಹಾಡುತ್ತಾ ಪುಟ್ಟ ಪುಟ್ಟ ನೋವಿನ ಹೊಳೆಗಳನ್ನ ಮೆದುದನಿಯ ಹಾಡು ಹೆಜ್ಜೆಗಳಲ್ಲಿ ದಾಟುತ್ತ ಹೋಗುತ್ತಿದ್ದರು.
ನಾನು, ಓದಿದ ಎಲ್ಲ ಶಾಸ್ತ್ರಗಳ ತರ್ಕ ಲೆಕ್ಕ ಹಾಕುತ್ತಾ ಮಗುವಾಗಲಾಗದೆ ಇಲ್ಲೆ ನಿಂತಿದೀನಿ. ಪುಟ್ಟ ಹೊಳೆದಾಟಲು ಹಾಡಿನ ಹರಿಗೋಲಿಲ್ಲ. ನಂಬಿಕೆಯ ದೋಣಿಗೆ ತಳವೇ ಇಲ್ಲ. ಭವಾಭ್ಧಿ ದಾಟುವುದು ಹೇಗೆ?! ಅಬ್ಧಿ ಇದೆಯೋ ಇಲ್ಲವೋ, ದಿನದಿನದ ಬದುಕಿನ ಪುಟ್ಟ ಪುಟ್ಟ ಹೊಡೆತಗಳನ್ನು ತಾಳಿಕೊಂಡು ಮುಂದೆಹೋಗಲು ಆ ಎರಡು ಪುಟ್ಟ ತಾಳಗಳು, ಎಂದೋ ಯಾರೋ ಭಾವೋದ್ದೀಪನೆಯಲ್ಲಿ ಬರೆದಿಟ್ಟ ಸರಳಸಾಲುಗಳು ಎಷ್ಟು ಗಟ್ಟಿ ಸೇತುವೆಯಾಗುತ್ತವೆಯಲ್ಲವೆ?
ಮನಸ್ಸಿನ ಕಿರಾತತನದ ಕತ್ತಲನ್ನು ಓಡಿಸಲು, ಅಮ್ಮನ ಹಾಗೆ ಬೆಚ್ಚಗೆ ಅರಳಿರುವ ಪುಟ್ಟ ದೀಪದ ಬೆಳಕಿಗೆ ಮಾತ್ರ ಸಾಧ್ಯವಲ್ಲವೇ?
ನನಗೆ ಗೊತ್ತಿಲ್ಲ. ಕತ್ತಲು ಬೆಳಕಿನ ಮಧ್ಯದಲ್ಲಿ ನಾನು ಬೆಳಕಿಗಾಗಿ ಕಾದಿದ್ದೇನೆ. ಕೈ ಹಿಡಿದು ನಡೆಸುವ ಬೆಳಕೋ, ನಾನೇ ಹುಡುಕಿಕೊಂಡು ಹೋಗಿ ಹಚ್ಚಬೇಕಿರುವ ಸ್ವಿಚ್ಚೋ ಕಾಲವೇ ಹೇಳಬೇಕು.
ನಮ್ಮ ಸಂಜೆಗಳ ತುಂಬ ಮಾಲ್ ಗಳ ಕಣ್ಣುಕುಕ್ಕುವ ಜಗಮಗ ಬೆಳಕು, ಹಾರ್ನ್, ಮತ್ತು ರಿವರ್ಸ್ ತೆಗೆಯುವ ವಾಹನಗಳ ಹಾಡು, ಸೀರಿಯಲ್ಗಳ ಟೈಟಲ್ ಹಾಡು, ರಿಯಾಲಿಟಿ ಶೋಗಳ ಶ್ರೀಕಿಂಗ್ ರಾಕ್ ಮತ್ತು ಪಾಪ್.. ಕೊನೆಯ ಪಕ್ಷ ಸುಮ್ಮನೆ ಕೂತು ಹಕ್ಕಿಪಕ್ಕಿಗಳ ಚಿಲಿಪಿಲಿ ಕೇಳಲೂ ಇಲ್ಲ. ಪಕ್ಕದ ಮನೆಯವರ ಮ್ಯೂಸಿಕ್, ರಸ್ತೆಯ ಮೇಲಿನ ಗಲಾಟೆ...
ಪಚ್ಚೆಕಲ್ಲು ಪಾಣಿ ಪೀಠದ ಸುತ್ತಲ ಹಿತವಾದ ಬೆಳಕಿನ ತೀರವು ಅಲ್ಲಿದೆ. ದಾರಿಸಾಗಲು ಭಜನೆಯ ಹರಿಗೋಲೆಲ್ಲಿದೆ?
Sunday, August 19, 2007
Tuesday, August 7, 2007
ಸೌಜನ್ಯದ ಮಿತಿ..
ಮಾತು ಬರುವುದು ಎಂದು ಮಾತನಾಡುವುದು ಬೇಡ..
ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ ಅದಕೆ ಕಂಡ ನೋಟ
ಸಮುದ್ರದಂಥ ಪ್ರಾಣಿ..
ಇದು ಪ್ರಿಯ ಶ್ರೀ ಕೆ.ಎಸ್.ನರಸಿಂಹಸ್ವಾಮಿಯವರ ಕವಿತೆಯ ಸಾಲುಗಳು ಮತ್ತು ದಿನದಿನವೂ ಹೊಸದಾಗಿ ಹೊಳೆವ ತಿಳಿವಳಿಕೆಯ ಬೆಳಕು. ನನ್ನ ಮನದ ಕತ್ತಲಲ್ಲಿ ಆಗೀಗ ಮಿಂಚುತ್ತದೆ. ಮಿಂಚಿ ಮರೆಯಾಗದಂತೆ ಕಾಯಬೇಕಿದೆ.
Monday, August 6, 2007
ತಾಜ್ ಮಹಲಿನ ಮುಂದೆ..
ಇಲ್ಲಿಯವರೆಗೆ ಕೇಳಿದ, ಓದಿದ, ಮಾಧ್ಯಮಗಳಲ್ಲಿ ಪ್ರಚಾರ ಪಡೆದ ತಾಜ್ ಮಹಲನ್ನು ನೋಡಲು ಹೋಗುವ ಮೊದಲು, ಇದು ಅದ್ಭುತಗಳಲ್ಲಿ ಒಂದು ಎಂಬ ಭಾವನೆಯಷ್ಟೆ ಇತ್ತು. ತಿಳುವಳಿಕೆಯೆ ಹಾಗೆ - ಹರಿವ ನೀರು.
ಅಲ್ಲಿ ಮೊದಲ ಬಾಗಿಲು (ಮುಖ್ಯದ್ವಾರ) ದಾಟುತ್ತಿದ್ದಂತೆ ಕಣ್ಣಿಗೆ ಮೊದಲು ಬಿದ್ದಿದ್ದು
ಅಗಾಧ ಜನಸ್ತೋಮ. ಉರಿವ ಬಿಸಿಲಲ್ಲಿ ಕಣ್ಣು ಕಿರಿದಾಗಿಸಿ ದಿಟ್ಟಿಸಿದರೆ ನಮ್ಮ ಪುಟ್ಟ ಪುಟ್ಟ ದೇಹಗಳ ಮುಂದೆ ಭವ್ಯವಾಗಿ ಅಕಾಶವೆ ಹಿನ್ನೆಲೆಯಾಗಿ ನಿಂತ ಅಪೂರ್ವ ಸ್ಮಾರಕ.. ಅದು ಅವರ್ಣನೀಯ, ಅಭೂತಪೂರ್ವ ಮತ್ತು ಅಪ್ರತಿಮ.. ಇಷ್ಟು ಮಾತ್ರ ಹೇಳಲು ಗೊತ್ತಾಗುತ್ತಿರುವುದೂ ನನ್ನ ಪುಣ್ಯ. ಮಂತ್ರಮುಗ್ಧತೆ ಮತ್ತು ಮೂಕವಿಸ್ಮಯ ಶಬ್ಧಾರ್ಥಗಳನ್ನು ಅವತ್ತು ಅನುಭವಿಸಿದೆ. ಇದರ ಬಗ್ಗೆ ಏನು ಬರೆದರೂ ಕಡಿಮೆ, ಏನು ಮಾತಾಡಿದರೂ ಕಡಿಮೆ. ಒಮ್ಮೆಯಾದರೂ ಅದರ ಮುಂದೆ ನಿಂತು ನೋಡಲೇಬೇಕಾದ ಅತ್ಯಪೂರ್ವ ಸ್ಮಾರಕ.
ಎಷ್ಟು ಚಂದ ಅನ್ನಿಸುವುದರ ಜೊತೆಗೆ, ಕಾಲ ಕೆಳಗಿನ ನೆಲ, ಸಮುದ್ರದಂಚಿನ ಮರಳತಡಿಯಂತೆ ಕುಸಿಯುವ ಅನುಭವವಾಯಿತು. ಇಷ್ಟು ಸೊಗಸಾದದ್ದನ್ನ ಯಾರೋ ಒಬ್ಬರು ಹೊಂದಿದರೆ, ಸುತ್ತೆಲ್ಲರಿಗೂ ಅದನ್ನ ಕಿತ್ತುಕೊಳ್ಳಲೇಬೇಕೆಂಬ ಹಂಬಲವಾಗಿದ್ದರಲ್ಲಿ, ಅಪ್ಪ/ಅಣ್ಣ, ಮಗನೆಂದು ನೋಡದೆ ದ್ವೇಷ ಸಾಧಿಸುವುದರಲ್ಲಿ, ಇಂತಹ ಇನ್ನೊಂದು ಇರಬಾರದು ಎಂಬ ದುರಾಶೆಯಲ್ಲಿ, ಇಂತಹದನ್ನೆ ಇನ್ನೊಂದು ಮಾಡಿದರೆ ಎಂಬ ಭಯದಲ್ಲಿ - ಶಕ್ತಿವಂತರು ಶಕ್ತಿಹೀನರ ಕೈ ಕತ್ತರಿಸಿದ್ದರಲ್ಲಿ, ಗಡಿಗಳ ಮೀರಿ ನಡೆದ ಹೊಡೆದಾಟದಲ್ಲಿ, ಯುದ್ಧದಲ್ಲಿ, ಬ್ರಿಟಿಶರ ಮ್ಯೂಸಿಯಮ್ಮುಗಳಲ್ಲಿ ಹೆಸರಿಲ್ಲದೆ ಅಡಗಿ ಕುಳಿತ ಅಮೂಲ್ಯ ಸಂಗ್ರಹವಾಗುವುದರಲ್ಲಿ, ಏನೇನೂ ಅಶ್ಚರ್ಯವಿಲ್ಲ ಎಂಬ ವಿಷಾದದ ನೆರಳು ನನ್ನನ್ನ ಅಲುಗಾಡಿಸಿಬಿಟ್ಟಿತು.
ನಾವು ಹೊಗಿದ್ದು ಅಲ್ಲಿನ ಬಿರುಬೇಸಿಗೆಯ ಸಮಯ, ಬರಿಕಾಲಲ್ಲೆ ಸ್ಮಾರಕ ಸುತ್ತಬೇಕು ಬೇರೆ, ಕಾಲೆಲ್ಲ ಹೆಚ್ಚೂಕಡಿಮೆ ಟೋಸ್ಟ್ ಮಾಡಿಟ್ಟ ಬ್ರೆಡ್ ನಂತಾಗಿತ್ತು. ಬಿಸಿಲು ಬೀಳುವಲ್ಲಿ ಸುಡುವ ಅಮೃತಶಿಲೆಯ ನೆಲ, ಸ್ಮಾರಕದ ನೆರಳು ಬಿದ್ದಲ್ಲೆಲ್ಲ ತಣ್ಣಗೆ ನದಿದಂಡೆಯಂತಿತ್ತು.
ಸ್ಮಾರಕ ಸುತ್ತುವಾಗ ಹಿಂಬದಿಯಲ್ಲಿ ಸೊರಗಿ ಹರಿವ ಯಮುನೆಯಿದ್ದಳು. ಸೊರಗಿದ ಹರಿವು ನಮ್ಮ ಸೊರಗಿರುವ ಸಾಮಾಜಿಕ ಬಧ್ಧತೆಯ ನಿರೂಪವಾಗಿ ಕಂಡರೆ, ಸೊರಗಿ ಹರಿವಾಗಲೂ ತಂಪು ಗಾಳಿಯನ್ನ ಮೆಲ್ಲಗೆ ಮುಟ್ಟಿಸಿ ಹೊಗುವ ಅವಳ ರೀತಿ, ಪ್ರಕೃತಿಯ ಹಿರಿತನಕ್ಕೆ ತಾಯ್ತನಕ್ಕೆ ಅನುರೂಪವಾಗಿ ಅಲೆಗಳಲ್ಲಿ ಹೊರಳುತ್ತಾ ಸಾಗಿದಂತಿತ್ತು.
ತಾಜಮಹಲ್ ನಮ್ಮೆಲ್ಲ ಕವಿಜನರ ಹಲವು ಭಾವಾಭಿವ್ಯಕ್ತಿಗಳಲ್ಲಿ ಪ್ರತಿಸಲವೂ ಹೊಸದಾಗಿ ಅರಳಿ ನಿಂತ ಭಾವಶಿಲ್ಪವೂ ಹೌದು.
ಈ ಅಭೂತಪೂರ್ವ ಶಿಲ್ಪರಚನೆಯ ಮುಂದೆ ಈಗಷ್ಟೆ ಕಣ್ಣುಬಿಡುತ್ತಿರುವ ನನಗೆ ಅನಿಸಿದ್ದು, ಇದು ಅನುಪಮ, ಅವರ್ಣನೀಯ. ಮಾತಿಲ್ಲದೆ ನಿಂತು ತಲೆಬಾಗುವುದಷ್ಟೆ ನಾನು ಸಲ್ಲಿಸಬಹುದಾದ ಗೌರವ - ಅತ್ಯಪೂರ್ವ ರಚನೆಗೆ, ಅದನ್ನು ಕಂಡರಿಸಿದ ಸಾವಿರಗಟ್ಟಳೆ ಶಿಲ್ಪಿಗಳಿಗೆ, ಉದ್ದೇಶ ಏನೆ ಇದ್ದರೂ ಮತ್ತು ಕೃತ್ಯಗಳು ಹೀನಾಯವಾಗಿದ್ದರೂ ಇಂತಹುದೊಂದು ಸೃಜನಶೀಲ ಮತ್ತು ಅಪೂರ್ವ ಕಲಾಕೃತಿಯ ರಚನೆಗೆ ಮನಸ್ಸು ಮಾಡಿದ ಮುಘಲ್ ಅಧಿಪತಿಯ ಆ ಒಂದು ನಿರ್ಧಾರದ ಗಳಿಗೆಗೆ.
ಅಲ್ಲಿ ಮೊದಲ ಬಾಗಿಲು (ಮುಖ್ಯದ್ವಾರ) ದಾಟುತ್ತಿದ್ದಂತೆ ಕಣ್ಣಿಗೆ ಮೊದಲು ಬಿದ್ದಿದ್ದು
ಅಗಾಧ ಜನಸ್ತೋಮ. ಉರಿವ ಬಿಸಿಲಲ್ಲಿ ಕಣ್ಣು ಕಿರಿದಾಗಿಸಿ ದಿಟ್ಟಿಸಿದರೆ ನಮ್ಮ ಪುಟ್ಟ ಪುಟ್ಟ ದೇಹಗಳ ಮುಂದೆ ಭವ್ಯವಾಗಿ ಅಕಾಶವೆ ಹಿನ್ನೆಲೆಯಾಗಿ ನಿಂತ ಅಪೂರ್ವ ಸ್ಮಾರಕ.. ಅದು ಅವರ್ಣನೀಯ, ಅಭೂತಪೂರ್ವ ಮತ್ತು ಅಪ್ರತಿಮ.. ಇಷ್ಟು ಮಾತ್ರ ಹೇಳಲು ಗೊತ್ತಾಗುತ್ತಿರುವುದೂ ನನ್ನ ಪುಣ್ಯ. ಮಂತ್ರಮುಗ್ಧತೆ ಮತ್ತು ಮೂಕವಿಸ್ಮಯ ಶಬ್ಧಾರ್ಥಗಳನ್ನು ಅವತ್ತು ಅನುಭವಿಸಿದೆ. ಇದರ ಬಗ್ಗೆ ಏನು ಬರೆದರೂ ಕಡಿಮೆ, ಏನು ಮಾತಾಡಿದರೂ ಕಡಿಮೆ. ಒಮ್ಮೆಯಾದರೂ ಅದರ ಮುಂದೆ ನಿಂತು ನೋಡಲೇಬೇಕಾದ ಅತ್ಯಪೂರ್ವ ಸ್ಮಾರಕ.ಎಷ್ಟು ಚಂದ ಅನ್ನಿಸುವುದರ ಜೊತೆಗೆ, ಕಾಲ ಕೆಳಗಿನ ನೆಲ, ಸಮುದ್ರದಂಚಿನ ಮರಳತಡಿಯಂತೆ ಕುಸಿಯುವ ಅನುಭವವಾಯಿತು. ಇಷ್ಟು ಸೊಗಸಾದದ್ದನ್ನ ಯಾರೋ ಒಬ್ಬರು ಹೊಂದಿದರೆ, ಸುತ್ತೆಲ್ಲರಿಗೂ ಅದನ್ನ ಕಿತ್ತುಕೊಳ್ಳಲೇಬೇಕೆಂಬ ಹಂಬಲವಾಗಿದ್ದರಲ್ಲಿ, ಅಪ್ಪ/ಅಣ್ಣ, ಮಗನೆಂದು ನೋಡದೆ ದ್ವೇಷ ಸಾಧಿಸುವುದರಲ್ಲಿ, ಇಂತಹ ಇನ್ನೊಂದು ಇರಬಾರದು ಎಂಬ ದುರಾಶೆಯಲ್ಲಿ, ಇಂತಹದನ್ನೆ ಇನ್ನೊಂದು ಮಾಡಿದರೆ ಎಂಬ ಭಯದಲ್ಲಿ - ಶಕ್ತಿವಂತರು ಶಕ್ತಿಹೀನರ ಕೈ ಕತ್ತರಿಸಿದ್ದರಲ್ಲಿ, ಗಡಿಗಳ ಮೀರಿ ನಡೆದ ಹೊಡೆದಾಟದಲ್ಲಿ, ಯುದ್ಧದಲ್ಲಿ, ಬ್ರಿಟಿಶರ ಮ್ಯೂಸಿಯಮ್ಮುಗಳಲ್ಲಿ ಹೆಸರಿಲ್ಲದೆ ಅಡಗಿ ಕುಳಿತ ಅಮೂಲ್ಯ ಸಂಗ್ರಹವಾಗುವುದರಲ್ಲಿ, ಏನೇನೂ ಅಶ್ಚರ್ಯವಿಲ್ಲ ಎಂಬ ವಿಷಾದದ ನೆರಳು ನನ್ನನ್ನ ಅಲುಗಾಡಿಸಿಬಿಟ್ಟಿತು.
ನಾವು ಹೊಗಿದ್ದು ಅಲ್ಲಿನ ಬಿರುಬೇಸಿಗೆಯ ಸಮಯ, ಬರಿಕಾಲಲ್ಲೆ ಸ್ಮಾರಕ ಸುತ್ತಬೇಕು ಬೇರೆ, ಕಾಲೆಲ್ಲ ಹೆಚ್ಚೂಕಡಿಮೆ ಟೋಸ್ಟ್ ಮಾಡಿಟ್ಟ ಬ್ರೆಡ್ ನಂತಾಗಿತ್ತು. ಬಿಸಿಲು ಬೀಳುವಲ್ಲಿ ಸುಡುವ ಅಮೃತಶಿಲೆಯ ನೆಲ, ಸ್ಮಾರಕದ ನೆರಳು ಬಿದ್ದಲ್ಲೆಲ್ಲ ತಣ್ಣಗೆ ನದಿದಂಡೆಯಂತಿತ್ತು.
ಸ್ಮಾರಕ ಸುತ್ತುವಾಗ ಹಿಂಬದಿಯಲ್ಲಿ ಸೊರಗಿ ಹರಿವ ಯಮುನೆಯಿದ್ದಳು. ಸೊರಗಿದ ಹರಿವು ನಮ್ಮ ಸೊರಗಿರುವ ಸಾಮಾಜಿಕ ಬಧ್ಧತೆಯ ನಿರೂಪವಾಗಿ ಕಂಡರೆ, ಸೊರಗಿ ಹರಿವಾಗಲೂ ತಂಪು ಗಾಳಿಯನ್ನ ಮೆಲ್ಲಗೆ ಮುಟ್ಟಿಸಿ ಹೊಗುವ ಅವಳ ರೀತಿ, ಪ್ರಕೃತಿಯ ಹಿರಿತನಕ್ಕೆ ತಾಯ್ತನಕ್ಕೆ ಅನುರೂಪವಾಗಿ ಅಲೆಗಳಲ್ಲಿ ಹೊರಳುತ್ತಾ ಸಾಗಿದಂತಿತ್ತು.
ತಾಜಮಹಲ್ ನಮ್ಮೆಲ್ಲ ಕವಿಜನರ ಹಲವು ಭಾವಾಭಿವ್ಯಕ್ತಿಗಳಲ್ಲಿ ಪ್ರತಿಸಲವೂ ಹೊಸದಾಗಿ ಅರಳಿ ನಿಂತ ಭಾವಶಿಲ್ಪವೂ ಹೌದು.
ಈ ಅಭೂತಪೂರ್ವ ಶಿಲ್ಪರಚನೆಯ ಮುಂದೆ ಈಗಷ್ಟೆ ಕಣ್ಣುಬಿಡುತ್ತಿರುವ ನನಗೆ ಅನಿಸಿದ್ದು, ಇದು ಅನುಪಮ, ಅವರ್ಣನೀಯ. ಮಾತಿಲ್ಲದೆ ನಿಂತು ತಲೆಬಾಗುವುದಷ್ಟೆ ನಾನು ಸಲ್ಲಿಸಬಹುದಾದ ಗೌರವ - ಅತ್ಯಪೂರ್ವ ರಚನೆಗೆ, ಅದನ್ನು ಕಂಡರಿಸಿದ ಸಾವಿರಗಟ್ಟಳೆ ಶಿಲ್ಪಿಗಳಿಗೆ, ಉದ್ದೇಶ ಏನೆ ಇದ್ದರೂ ಮತ್ತು ಕೃತ್ಯಗಳು ಹೀನಾಯವಾಗಿದ್ದರೂ ಇಂತಹುದೊಂದು ಸೃಜನಶೀಲ ಮತ್ತು ಅಪೂರ್ವ ಕಲಾಕೃತಿಯ ರಚನೆಗೆ ಮನಸ್ಸು ಮಾಡಿದ ಮುಘಲ್ ಅಧಿಪತಿಯ ಆ ಒಂದು ನಿರ್ಧಾರದ ಗಳಿಗೆಗೆ.
Thursday, August 2, 2007
ಕವಿಸಮಯ

ಕಣ್ಣಲ್ಲಿ
ಬೊಗಸೆಯಲ್ಲಿ
ಬೆರಳ ತುದಿಯ ಹಿಡಿತದಲ್ಲಿ,
ಅದುರು ತುಟಿಯ ಕೊಂಕಿನಲ್ಲಿ
ಮುಡಿಯ ತಬ್ಬಿದ ಸೆರಗಿನಲ್ಲಿ
ಹೊದ್ದ ಬಳುಕಿನಲ್ಲಿ
ಸೂಸಿ ಬಂದ ಭಾವದಲ್ಲಿ
ಹಿಡಿದು ನಿಂತ ಪಾತ್ರೆಯಲ್ಲಿ..
ಈಗಷ್ಟೇ ಕರೆದ
ಕವಿತೆಯ ನೊರೆಹಾಲು...
ಬೊಗಸೆಯಲ್ಲಿ
ಬೆರಳ ತುದಿಯ ಹಿಡಿತದಲ್ಲಿ,
ಅದುರು ತುಟಿಯ ಕೊಂಕಿನಲ್ಲಿ
ಮುಡಿಯ ತಬ್ಬಿದ ಸೆರಗಿನಲ್ಲಿ
ಹೊದ್ದ ಬಳುಕಿನಲ್ಲಿ
ಸೂಸಿ ಬಂದ ಭಾವದಲ್ಲಿ
ಹಿಡಿದು ನಿಂತ ಪಾತ್ರೆಯಲ್ಲಿ..
ಈಗಷ್ಟೇ ಕರೆದ
ಕವಿತೆಯ ನೊರೆಹಾಲು...
ಹಾಲ್ನೊರೆಯ ಸೂಸಿದ್ದು
ಅವಳಾ?!
ಬಿಟ್ಟರೆ ಹರಿವ ಅವಳ
ಹಿಡಿದಿಟ್ಟ
ಪ್ರಬಾಕರನ ಕ್ಯಾಮೆರ ಕಣ್ಣಾ?!
ಅವಳಾ?!
ಬಿಟ್ಟರೆ ಹರಿವ ಅವಳ
ಹಿಡಿದಿಟ್ಟ
ಪ್ರಬಾಕರನ ಕ್ಯಾಮೆರ ಕಣ್ಣಾ?!
ನೋಡುಗಳು ನಾನು
ಬೆರಗಲಿ ನೋಡುವುದೆ ಸೊಬಗು
ಕವಿಕಣ್ಣು
ಕಂಡು ಚಿತ್ರಿಸಿಹ ಕವಿತೆಯ
ಬೆಡಗಿಗೆ
ಮಾತಿಲ್ಲದ ತಲೆಬಾಗು.
ಬೆರಗಲಿ ನೋಡುವುದೆ ಸೊಬಗು
ಕವಿಕಣ್ಣು
ಕಂಡು ಚಿತ್ರಿಸಿಹ ಕವಿತೆಯ
ಬೆಡಗಿಗೆ
ಮಾತಿಲ್ಲದ ತಲೆಬಾಗು.
ಫೋಟೋ ಕೃಪೆ - ಪ್ರಭು - floatingcreeper@gmail.com
Wednesday, August 1, 2007
ಒಂದು ಮುರಿದು ಬಿದ್ದ ದೋಣಿ, ದಕ್ಕಲಾಗದ ನೋಟ ಮತ್ತು ಹೊರಳು ದಾರಿ..
ಯಾಕೆ ಎಲ್ಲ ಸಲವೂ ನಾನು ನಿನ್ನ ನೆನಪಿಸಿಕೊಂಡರೆ, ಇಷ್ಟು ವರ್ಷದ ನಂತರವೂ, ಅದೇ ಅಸಹನೆ? ನನಗೆ ಬರುವ ಸಿಟ್ಟು ಯಾರ ಮೇಲೆ, ಬದುಕಿನ ಯಾನಕ್ಕೆ ಲಗಾಟಿ ಹೊಡೆದು ಬಿದ್ದು ಹೋಗುವಂತ ಹಾಯಿ ಕಟ್ಟಿದ ನಿನ್ನ ಮೇಲಾ? ಅಥವಾ ಅಂತದೊಂದು ಹಾಯಿಯನ್ನು ನೀನು ಕಟ್ಟುವಾಗ ಸುಮ್ಮನೆ ನಸುನಗುತ್ತ ಒಪ್ಪಿಕೊಂಡು, ಹರಿವಿಗೆ ಬಿದ್ದ ನನ್ನ ಮೇಲಾ?
ಈ ವ್ಯತ್ಯಾಸದ ನಡುವಣ ಗೆರೆ ತುಂಬ ಸೂಕ್ಷ್ಮ. ಇದು ನಿನಗೆ ನನಗಿಂತ ಚೆನ್ನಾಗಿ ಗೊತ್ತು. ಮತ್ತು ಈ ಅರಿವನ್ನೇ ಉಪಯೋಗಿಸಿ, ಇದು ಗೊತ್ತಾಗದ ನನ್ನಂತ ಬೆಪ್ಪಳನ್ನು ಕೆಲದಿನಗಳ ಕಾಲ ಕಣ್ಣೀರ ಪ್ರವಾಹಕ್ಕೊಡ್ಡಿದೆ, ತಪ್ಪಿತಸ್ಥಳು ನಾನು ಮಾತ್ರ ಎಂಬ ಭಾವನೆಗಳ ಬಂಡೆಗಳಿಗೆ ನನ್ನ ಭಾವದ ದೋಣಿ ಮತ್ತೆ ಮತ್ತೆ ಡಿಕ್ಕಿ ಹೊಡೆದು, ಹಣ್ಣಾಗಿ ಹೋದೆ. ಗೊತ್ತಿದ್ದ ನೀನು, ಹಿಮ್ಮುಖ ಹರಿಗೋಲು ಹಾಕಿ ಬೇರೆ ಸೆಳವಲ್ಲಿ ಹರಿದು ಹೋಗುವಾಗಲೂ, ಹಣ್ಣಾಗಿ ಕುಳಿತ ನಾನು ಕುರುಡೂ ಆಗಿದ್ದೆ.
ನೀನು ಕೆಟ್ಟವನಲ್ಲ, ಗೊತ್ತು ನನಗೆ. ಆದರೆ ನೀನು ಚಾಣಾಕ್ಷ ಎಂಬ ತಿಳಿವಳಿಕೆ ಬಂದಾಗಿನಿಂದ, ಎಲ್ಲ ಸಂಬಂಧಗಳನ್ನೂ, ಭಾವನೆಗಳನ್ನೂ ವ್ಯವಹಾರಬದ್ಧತೆಯಲ್ಲಿ ನೇಯ್ದು ಲಾಭಾಂಶವನ್ನು ಹುಶಾರಿಯಿಂದ ಬದಿಗಿಟ್ಟು ನಿನ್ನ ಬ್ಯಾಲೆನ್ಸ್ ಹೆಚ್ಚು ಮಾಡಿಕೊಳ್ಳುತ್ತೀಯ, ಮತ್ತು ಅದಕ್ಕೆ ಎಲ್ಲ ಒಳದಾರಿಗಳೂ ಗೊತ್ತು ನಿನಗೆ ಅಂತ ಗೊತ್ತಾದಾಗಿನಿಂದ ನಾನು ದಿಕ್ಕೆಟ್ಟು ಹೋದೆ. ನಮ್ಮ ಯಾನದಲ್ಲಿ ಎದುರು ಅಲೆಗಳೇ ಉಳಿದು, ಒಬ್ಬೊಬ್ಬರೂ ಒಂದು ದಿಕ್ಕಿಗೆ ಕೈಗೋಲು ನಡೆಸಿ, ದಾರಿ ಕಷ್ಟವಾಯಿತು. ಗಳಿಸಿಕೊಳ್ಳುವ ಪಿತೂರಿಯ ಈಟಿಗೆ ಸಿಕ್ಕಿ ಹಾಯಿ ಲಗಾಟಿ ಹೊಡೆದು ಹರಿದೇ ಹೋಯಿತು. ಅಪನಂಬಿಕೆಗಳ ಕಲ್ಲು ಹರಿವಲ್ಲಿ ದೋಣಿ ಅಲೆದಾಡಿ, ತೀರವೆಂದು ಕರೆಯಬಹುದಾದಲ್ಲಿಗೆ ಬಂದು ನಿಂತಾಗ, ನಮ್ಮಿಬ್ಬರ ದಾರಿ ಒಡೆದು ಹೋಗಿ, ಇವತ್ತು ನಾವು ಅಪರಿಚಿತರಿಗಿಂತ ಹೆಚ್ಚು ದೂರ.
ಈ ಬೀದಿಯಲ್ಲಿ ನಡೆದರೆ ನಿನಗೆ ಸಿಗಬಹುದು ಎಂಬ ಕಾರಣಕ್ಕೆ, ನಾನು ಅಲ್ಲಿಗೆ ಹೋಗುವುದೇ ಇಲ್ಲ. ನೀನು ಸಡನ್ ಆಗಿ ಎದ್ರು ಬಂದರೆ ನನ್ನ ಮುಖದಲ್ಲರಳುವುದು ನಗುವೇ. ಆದರೆ, ನೀನು ಸಡನ್ ಆಗಿ ಎದುರು ಬಂದು ನಿಲ್ಲುವ ಒಂದರೆ ಕ್ಷಣ ಮುಂಚೆ ನೀನು ಸಿಗಬಹುದು ಅಂತ ಅನ್ನಿಸಿದರೆ, ತಕ್ಷಣ ತಿರುಗಿ ಬೇರೆ ದಾರಿಯಲ್ಲಿ ತಾನೇ ತಾನಾಗಿ ನಡೆದು ಹೋಗಿಬಿಡುತ್ತೇನೆ.. ನಿನ್ನ ಬಗ್ಗೆ ಸಿಟ್ಟಿಲ್ಲ, ಆದರೆ ನಿನ್ನನ್ನು ಸಹಿಸುವ ಮನಸ್ಥಿತಿಯಲ್ಲಿ ನಾನಿಲ್ಲ. ಬದಲಾವಣೆಯೇ ನನ್ನ ಬದುಕು.
ನಿನ್ನ ಬಗ್ಗೆ ಏನೇ ಬರೆದರೂ ನಾನ್ಹೀಗೆ ಬಿರುನುಡಿಯನ್ನೇ ಯಾಕೆ ಬರೆಯಬೇಕು ಅಂತ ಕೇಳುತ್ತೀ ನೀನು.. ಆದರೆ ಎಷ್ಟೇ ಇಷ್ಟವಿದ್ದರೂ ಒಂದರೆ ಕ್ಷಣದ ನಲ್ನುಡಿಯಾಡಿ, ನಿನ್ನ ಮನದಲ್ಲಿ ಹೊಸ ಆಸೆ ಬೀಜಕ್ಕೆ ನೀರೆರೆಯುವ ಕ್ಷಮೆ, ದಾರ್ಷ್ಟ್ಯ, ಮತ್ತು ಸಹನೆ ನನ್ನಲ್ಲಿಲ್ಲ.
ನಿನಗರಿವಾಗದೆ ಇಲ್ಲೆ ನಿಂತು ಮೌನವಾಗಿ, ನಿನಗೊಂದು ಸಂತಸಮಯ ದಿನ, ಹಾಯಾದ ಬದುಕನ್ನು ಆಶಿಸುವುದಷ್ಟೇ ನನ್ನ ಸಾಮರ್ಥ್ಯ ಮತ್ತು ಮಿತಿ.
ನಿನಗೆ ಚಂದದೊಂದು ಹೊಸಾ ಬದುಕಿರಲಿ
ಕನಸುಗಳ ನನಸಾಗಿಸುವ ಶಕ್ತಿಯಿರಲಿ,
ನನ್ನ ನೆನಪು ಮರೆತುಹೋಗಲಿ,
ರಾತ್ರಿ ಮಲ್ಗಿದ ಕೂಡಲೆ ಒಳ್ಳೆ ನಿದ್ದೆ ಬರಲಿ
ಮತ್ತು ಒಳ್ಳೆಯದಾಗಲಿ.

Subscribe to:
Posts (Atom)