Wednesday, February 28, 2007

ನಗೆ ಹೂವಿನ ಬಳ್ಳಿ..

ಎರಡು ದಿನದಿಂದ ಆಕಾಶಕ್ಕೆ ತೂತು ಬಿದ್ದಂತೆ ಜಡಿಯುತ್ತಿದ್ದ ಮಳೆ ಸುಸ್ತಾಗಿ ಗಿರಿಧಾಮಗಳಿಗೆ ವಿಶ್ರಾಂತಿಗೆ ಹೋಗಿತ್ತು. ಸಧ್ಯ ಅಂಧುಕೊಳ್ಳುತ್ತ ಬೆಳಗ್ಗೆ ಸ್ವಲ್ಪ ಪುಕ್ಕಲುತನದಲ್ಲೆ ಮೋಡದ ಮರೆಯಿಂದ ಹೊರಗೆ ಇಣುಕಿದ್ದ ಸೂರ್ಯ, ಮಳೆಯ ಬೆನ್ನು ನೋಡಿದವನೆ ಓಹೊ.. ಚಿಗಿತುಕೊಂಡು ಚುರುಚುರು ಸುಡಲು ಶುರು ಮಾಡಿದ್ದ.

ನಾನೇನೋ ಜೋರಿನಿಂದಲೆ ಹೆಜ್ಜೆ ಇಟ್ಟು ಬಸ್ಟಾಪಿಗೆ ಬಂದು ನೋಡುತ್ತೇನೆ; ಅರೆ ಇವಳು ಇನ್ನೂ ಅಲ್ಲೆ ತಿರುವಿನಲ್ಲೆ ಇದ್ದಾಳೆ. ನಿಧಾನವಾಗಿ ಇಟ್ಟು ಬರುತ್ತಿದ್ದ ಹೆಜ್ಜೆ, ಹತ್ತಿರವಾಗುತ್ತಲೆ ಮುಖ ನೋಡಿದೆ. ನಿರಿಬಿದ್ದ ಕೆನ್ನೆಯ ಬಂಗಾರಕಾಂತಿಗೆ ಕಣ್ಣುಗಳು ತಮ್ಮ ಬೆಳ್ಳಿ ಬೆಳಕಿಂದ ಎಂದಿನಂತೆ ಸ್ಫರ್ಧೆ ಹೂಡಿದ್ದುವಾದರೂ ಹಣೆಯ ಮೇಲೆ ಮುತ್ತಿನ ಮಣಿಗಳು ಮೂಡಿದ್ದವು. ಹರೆಯವಿಡೀ ನನ್ನ ಇಷ್ಟಾನಿಷ್ಟಗಳಿಗೆ ಓಗೊಟ್ಟು ನನ್ನ ಸಮಕ್ಕೂ ಮನೆಯಲ್ಲಿ ದುಡಿದು, ಮಕ್ಕಳ ದೇಖರೇಖೆ ನೋಡಿಕೊಂಡ ಗೃಹ ಲಕ್ಷ್ಮಿ. ಮೊಮ್ಮಕ್ಕಳು ಹೈಸ್ಕೂಲಿನಲ್ಲಿದ್ದರೂ ಇವತ್ತಿಗೂ ಅಜ್ಜಿಯ ಕೈತುತ್ತೇ ಆಹಾರ. ಈಗ ಸ್ಕೂಲಿಗೆ ರಜೆ ಬಂತೆಂದು ಅವರು ಮಾವನ ಮನೆಗೆ ಹೋಗಿ ಅಜ್ಜಿಗೂ ಬಿಡುವಿನ ಕಾಲ. ಇಂದಿರಾನಗರದಲ್ಲಿದ್ದ ಬಾಲ್ಯಸಖಿ, ತಂಗಿಯ ಮನೆಗೆ ಒಂದು ವಿರಾಮದ ಭೇಟಿಗಾಗಿ ನಿನ್ನೆ ಕೇಳಿದಾಗ ನನಗಂತೂ ಖುಷಿಯೇ ಆಗಿತ್ತು. ನಾನೇನು ತಿರುಗಾಲ ತಿಪ್ಪ, ಇವಳಿಗಾದರೋ ದಿನಾ ಮನೆಯಲ್ಲಿ ಬೆಳಿಗ್ಗೆ ಮೊಮ್ಮಕ್ಕಳ ಸವರಣೆ, ಪಕ್ಕದ ಬೀದಿಯ ದೇವಸ್ಥಾನದ ಹೂಬತ್ತಿ, ಮಧ್ಯಾಹ್ನದ ಟೀವಿ ಧಾರಾವಾಹಿ, ಕೋಳಿನಿದ್ದೆ, ಸಾಯಂಕಾಲದ ಬಾಯ್ರುಚಿಗಳ ತಯಾರಿಕೆ, ಸಂಜೆ ಯಥಾಪ್ರಕಾರ ಟೀವಿ, ಹೀಗೇ ಸಮಯ ಕಳೆದುಬಿಡುತ್ತಾಳೆ. ನಾನು ಗುಂಡುಗೋವಿ ಮನೇಲೆ ಕುಳಿತು ಮಾಡೋದಾದ್ರೂ ಏನು? ಮನೇಲಿದ್ರೆ ಇವಳೆಲ್ಲಿ ಸುಮ್ಮನೆ ಬಿಡುತ್ತಾಳೆ? ನಾನು ಮನೆಯಲ್ಲಿದ್ದಾಗಲೇ ಇವಳಿಗೆ ಕೊತ್ತಂಬರಿ ಕಟ್ಟು ಬೇಕನ್ನಿಸುತ್ತದೆ. ನಿಂಬೆ ಹಣ್ಣು ಖಾಲಿಯಾಗಿಬಿಟ್ಟಿರುತ್ತದೆ. ಏನೂ ಇಲ್ಲದಿದ್ದರೆ ಲೈಟು ಬಿಲ್ಲು ಕಾಯುತ್ತಿರುತ್ತದೆ. ಹೀಗಾಗೇ ನಾನು ಬೆಳಿಗ್ಗೆಯ ತಿಂದಿ ಕರಗುವುದಕ್ಕೆ ಮುಂಚೆ ಇವಳ ಕೈಯಿಂಧ ಸ್ಟ್ರಾಂಗ್ ಕಾಫಿ ಒಂದು ಲೋಟ ಇಳಿಸಿ ಗಡೀಪಾರಾಗಿಬಿಟ್ಟರೆ ಅಡಿಗೆಮನೆಯಿಂದ ಇಂಗಿನ ಒಗ್ಗರಣೆ ತಂಬುಳಿಯಲ್ಲಿ ಸೊಂಯ್ಯೆನ್ನುವಾಗಲೆ ವಾಪಸ್ಸಾಗುವುದು.

ಊಟವಾದ ಮೇಲೆ ಒಂದೊಂದು ದಿನ ಅವಳ ಕರಕರೆಗೆ ಅವಳ ಮೆಚ್ಚಿನ ಸೀರಿಯಲ್ಲು ನೋಡಿ ವಾದವಿವಾದಲ್ಲಿ ತೊಡಗುತ್ತೇನಾದ್ರೂ ದಿನಾ ಊಟ ಮುಗಿದ ಕೂಡಲೆ ನಿದ್ರಾದೇವತೆಯ ಅರ್ಚನೆಯಲ್ಲೆ ಸಮಯಹೋಗಿಬಿಡುತ್ತದೆ. ಸಂಜೆ ಕಾಫಿಯ ಘಮಘಮ ಬರುತ್ತಲೂ ಅದು ಹ್ಯಾಗೋ ಪಂಚೇಂದ್ರಿಯಗಳು ಸರ್ರನೆ ಎಚ್ಚರಾಗಿ ಇಹಲೋಕಕ್ಕಿಳಿಯುತ್ತೇನೆ. ಕಾಫಿ ಬೀಳುತ್ತಲೇ ಗಾಡಿ ಓವರಾಯಿಲ್ಲಾಗಿ ಚುರುಕಾಗುತ್ತದೆ(ಮೊನ್ನೆ ಮೊಮ್ಮಗ ನಾನು ಹೀಗೆ ಹೇಳಿದಾಗ ನಗುತ್ತಿದ್ದ - ಅಜ್ಜಯ್ಯ ಅದು ಓವರಾಯಿಲ್ಲಲ್ಲ ಓವರ್ ಹಾಲ್ ಅನ್ ಬೇಕು.. ಅಂತ). ಸ್ನೇಹಿತರೊಡನೆ ವಾಯುವಿಹಾರ,ಹರಟೆಗಳನ್ನು ಮುಗಿಸಿ, ಮನೆಗೆ ವಾಪಸ್ಸಾದರೆ ಅಲ್ಲಿ ಧಾರಾವಾಹಿ ಲೋಕ. ಅದು ಕೊನೆಗೊಳ್ಳುತ್ತಲೆ ನನ್ನವಳೂ,ಸೊಸೆಯೂ ಬಡಿಸುವ ನಳಪಾಕ, ಇದು ಮುಗಿದೊಡನೆ ಮೊಮ್ಮಕ್ಕಳೊಡನೆ ಕಥಾಲೋಕ, ಅದು ಮುಗಿಯುವಷ್ಟರಲ್ಲಿ ತನ್ನೊಳಗೆ ಜಾರಿಸಿಕೊಳ್ಳುವ ನಿದ್ರಾಲೋಕ. ಹೀಗೇ ಲೋಕಾಂತರಗಳ ಪಯಣದಲ್ಲಿ ನಾನೊಬ್ಬ ನಿತ್ಯ ಪಯಣಿಗ.

ನನ್ನ ಕರಕರೆ ಹಾಗಿರಲಿ, ಅದೋ ಇವಳು ಬಂದು ಬಸ್ಟಾಪಿನಲ್ಲಿ ಎರಡು ಕ್ಷಣ ಕೂತು ಬೆವರೊರೆಸಿಕೊಳ್ಳುವಷ್ಟ್ರಲ್ಲಿ ಬಂದೇ ಬಿಡ್ತು 201. ಕೈ ಮಾಡಿ ಹತ್ತುವಷ್ಟರಲ್ಲಿ ಸಾಕಾಯ್ತಪ್ಪ. ಡ್ರೈವರನಂತೂ ತಾನೇ ಪೆಟ್ರೋಲು ಕುಡಿದುಬಿಟ್ಟಿದ್ದಾನೋ ಎಂಬಥ ಯಮಸ್ಪೀಡಿನಲ್ಲಿದ್ದ. ಯಾವಾಗಲೂ ಬಸ್ಸಲ್ಲಿ ಓಡಿಯಾಡುವ ನಾನೇ ಉಸಿರು ಬಿಡುತ್ತಿದ್ದರೆ ಇನ್ನು ನನ್ನವಳ ಪಾಡೇನು. ಪುಣ್ಯಕ್ಕೆ ಇಬ್ಬರಿಗೂ ಜೊತೆಗೇ ಸೀಟು ಸಿಕ್ಕಿತು. ನಾವು ಹತ್ತಿದ್ದು ಪುಷ್ಪಕ್ ಬಸ್ಸು ಬೇರೆ. ಹಿಂದೆ ಒರಗಲು ಆರಾಮಾಗಿತ್ತು. ಟಿಕೆಟ್ ಕೊಳ್ಳಲು ಪರ್ಸಿಗೆ ಕೈಹಾಕಿದಾಗ ಸಿಕ್ಕಿಬಿಟ್ಟಿತು. ಗುಂಡಗೆ, ತಣ್ಣಗೆ ಇದ್ದ ಮ್ಯಾಂಗೋಬೈಟ್. ಟಿಕೆಟ್ ಕೊಂಡವನೆ ಅತ್ತಿತ್ತ ನೋಡಿದೆ. ಎಲ್ಲ ಆಫೀಸಿಗೆ ಹೊರಡುವ ಗಡಿಬಿಡಿಯಲ್ಲಿದ್ದವರು. ನಾವು ಕೂತಿದ್ದು ಮೂರು ಜನ ಕೂರುವ ಸೀಟು. ಕಿಟಕಿಯ ಪಕ್ಕದಲ್ಲಿ ಯಾರೋ ಯುವತಿ. ಆಫೀಸಿಗೆ ಹೊರಟವಳಿರಬೇಕು, ಕೈಯಲ್ಲೊಂದು ಕಥೆಪುಸ್ತಕ ಬೇರೆ ಇತ್ತು. ನನ್ನವಳು ನನ್ನ ಆ ಯುವತಿಯ ಮಧ್ಯದಲ್ಲಿ ಸುಧಾರಿಸಿಕೊಳ್ಳುತ್ತಾ ಕುಳಿತಿದ್ದಳು. ನನಗೆ ಮಮತೆ ಉಕ್ಕಿ ಬಂತು.

ಇವಳೇ ಅಲ್ಲವೆ ನನಗೆ ಜಾಂಡೀಸಾದಾಗ ದಿನವಿಡೀ ಮಗ್ಗುಲಲ್ಲಿ ಕೂತು ನನ್ನ ಇಷ್ಟದ ಪುಸ್ತಕಗಳನ್ನು ಓದಿ ಹೇಳಿದ್ದು, ಬೇಳೆ ಸಾರಿನ ಚಪ್ಪೆ ಊಟ ರುಚಿಸದೆ ನಾನು ಹಟ ಮಾಡುವಾಗ ನಯದಿಂದ, ನಲವಿಂದ ನನ್ನ ಮನವೊಲಿಸಿ ತಟ್ಟೆ ಖಾಲಿ ಮಾಡಿಸುತ್ತಿದ್ದಿದ್ದು. ಇವಳಲ್ಲವೆ ನಾನು ಕಾಲುನೋವೆಂದಾಗಲೆಲ್ಲ ಛೇಡಿಸುವ ಮಾತುಗಳನ್ನಾಡುತ್ತಲೇ ಎಣ್ಣೆ ಸವರಿ ಒತ್ತುವುದು, ಮಧ್ಯಾಹ್ನ ಬಳಲಿದಂತೆ ಕಂಡರೆ ನಿಂಬೆ ಹುಳಿ ಹಿಂಡಿ ಪಾನಕ ಕೊಡುವುದು. ಸಣ್ಣ ಸಣ್ಣ ವಿಷಯಕ್ಕೆಲ್ಲಾ ಗಾಬರಿ ಪಟ್ಟುಕೊಳ್ಳುವ ಹೆಂಡತಿಯ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಲೇ, ಕಣ್ಣೂ ಕೈಕಾಲು ಆಡದ ಧಾವಂತದಲ್ಲಿ ನನ್ನ ಕೈಹಿಡಿದು ನಡೆಸಿಕೊಂಡು ಹೋಗುವವಳು. ಧಾರಾವಾಹಿಯ ಕ್ಷುಲ್ಲಕ ಸಂಗತಿಗಳಿಗೂ ನನ್ನೊಂದಿಗೆ ವಾದ ಮಾಡಿ ಪ್ರತಿಪಕ್ಷದಲ್ಲೆ ಇಧ್ಧುಕೊಂಡೂ ಈ ಬದುಕಿನ ಒಗಟನ್ನ ನನ್ನೊಡನೆ ಜೊತೆಜೊತೆಯಾಗೇ ಬಿಡಿಸಿದವಳು...

ಇಂತಹ ಅಪರೂಪದ ದೇವಿ ಈಗ ಬಸ್ಸಿನ ಕುಲುಕಿಗೆ, ಬಿಸಿಲ ಧಗೆಗೆ ಪಕ್ಕಾಗಿ ಮುದುಡಿ ಕುಳಿತಿದ್ದರೆ ಸುಮ್ಮನಿರಲು ನನಗೆ ಮನಸ್ಸಾದ್ರೂ ಹ್ಯಾಗೆ ಬರುತ್ತೆ ನೀವೇ ಹೇಳಿ. ಮ್ಯಾಂಗೋಬೈಟನ್ನ ತೆಗೆದು ಅವಳ ಮುದುರುಮುದುರಾಗಿದ್ದ ಅಂಗೈ ಬಿಡಿಸಿ ಇಟ್ಟೆ. ಬಸ್ಸಿನ ಕುಲುಕಾಟದಲ್ಲಿ ಅವಳಿಗೆ ಬಿಡಿಸಲು ಆಗಲಿಲ್ಲ. ಕೊಡಿಲ್ಲಿ ಎಂದವನೆ ಬಿಡಿಸಿ ಬಾಯಲ್ಲಿಟ್ಟುಬಿಟ್ಟೆ.

ಓಹ್! ನನಗೆ ನನ್ನನ್ನೇ ಮರೆತುಹೋದಂತಾಯಿತು. ಅವತ್ತು ಮದುವೆ ಮುಗಿದು ನಮ್ಮನೆಯ ಗೃಹ ಪ್ರವೇಶ ಮಾಡುವಾಗ, ನನ್ನ ತಂಗಿ ಇವಳ ಕೈಹಿಡಿದು ನಿಲ್ಲಿಸಿ ನನ್ನ ಹೆಸರು ಹೇಳಲು ತಡೆದಾಗ ಬಂತಲ್ಲಾ ಅದೇ ನಾಚಿಕೆಯ ತೆರೆ, ಈಗ ಇಲ್ಲಿ!

"ಶ್ಶಿ, ಸುಮ್ಮನಿರಿ ಯಾರಾದರೂ ನೋಡಿ ಏನೆಂದುಕೊಂಡಾರು" ಅಂತ ಬಯ್ಯುತ್ತಾ ಪಕ್ಕದಲ್ಲಿ ಕುಳಿತಿದ್ದ ಹುಡುಗಿಯ ಕಡೆ ಕಡೆಗಣ್ಣಿನ ನೋಟ ಬೀರಿದಳು. ಆ ಹುಡುಗಿ ನಮ್ಮನ್ನ ಗಮನಿಸಿಬಿಟ್ಟಿದ್ದಳು. ಏನೂ ನೋಡದವರ ಹಾಗೆಯೇ ಅವಳು ಕುಳಿತಿದ್ದರೂ ಅವಳ ತುಟಿಯಂಚಿನಲ್ಲಿ ಹುಟ್ಟಿದ ನಗುವಿನ ಚಿಗುರು ಕೆನ್ನೆಯ ಕುಳಿಗಳವರೆಗೂ ಬೆಳೆದೇ ಬಿಟ್ಟಿತ್ತು.

ಆದ್ರೆ ನನಗೇನೂ ನಾಚಿಕೆಯಾಗಿರಲಿಲ್ಲ. ಯಾಕಾಗ್ಬೇಕೂಂತೀನಿ. ಅದನ್ನೆ ಕೇಳಿದೆ ನನ್ನವಳನ್ನ. "ಏನಂದ್ಕೋತಾರೆ ಯಾರಾದ್ರೂ? ಅಜ್ಜನಿಗೆ ಅಜ್ಜಿಯೆಂದರೆ ತುಂಬ ಪ್ರೀತಿ ಅಂತ ಅಂದುಕೊಳ್ತಾರೆ. ಅದರಲ್ಲೇನಪ್ಪಾ ತಪ್ಪು? ಅದು ಸತ್ಯ ತಾನೇ. ಸ್ವಲ್ಪ ರೊಮ್ಯಾಂಟಿಕ್ ಆಗಿರೋವ್ರೇನಾದ್ರೂ ನೋಡಿದ್ರೆ ಆ ದೇವರ ಹತ್ರ "ನಾನೂ ಅಜ್ಜಿಯಾದಾಗ, ನನ್ನ ಮೊಮ್ಮಕ್ಕಳ ಅಜ್ಜ ನನಗೂ ಹೀಗೇ ಬಾಯಲ್ಲಿ ಚಾಕಲೇಟಿಡುವಂತೆ ಮಾಡಪ್ಪಾ, ತಿರುಗಿ ಅವನ ಬಾಯಿಗೆ ಹಾಕಲು ನಾನೂ ಒಂದು ಚಾಕಲೇಟು ಇಟ್ಕೊಂಡಿರ್ತೀನಿ" ಅಂತ ಪ್ರಾರ್ಥಿಸಿರುತ್ತಾರೆ. ಏನಂತೀಯಾ ಅಂದೆ. ನನ್ನವಳ ಕಣ್ಣ ಕಾಂತಿ ಹೌದು ಹೌದು ಅಂತ ಕೂಗಾಡುತ್ತಿದರೂ ಕೇಳಿಸಿಕೊಳ್ಳದ ಹಾಗೆ ಆ ಪುಟ್ಟ ಬಾಯಿ "ಶ್ಶಿ ಹೋಗಿ, ನಿಮ್ ದೊಂದು ಮಳ್ಳು ವೇಷ" ಅಂತ ಸುಳ್ಳಾಡಿಯೇಬಿಟ್ಟಿತು. ಆ ಸುಳ್ಳಿಗೆ ತಕ್ಕ ಶಿಕ್ಷೆ ಕೊಡಲು ಅದು ತಕ್ಕ ಸಮಯ ಮತ್ತು ಜಾಗ ಎರಡೂ ಆಗಿರಲಿಲ್ಲವಾಗಿ ಅವಳ ತುಂಟ ಬಾಯಿ ಬಚಾವಾಯ್ತೆನ್ನಿ. ಈಗ ನಾನೂ ಸ್ವಲ್ಪ ಕಡೆಗಣ್ಣಿನಿಂದಲೇ ಕಿಟಕಿಯ ಹುಡುಗಿಯ ಮುಖ ನೋಡಿದೆ. ಹೋ ಈಗಂತೂ ನಮ್ಮ ಮಾತು ಅವಳಿಗೆ ಚಾಚೂ ತಪ್ಪದೆ ಕೇಳಿಸಿದ್ದರ ಫಲವಾಗಿ, ಆಗ ಕೆನ್ನೆಯ ಕುಳಿಯವರೆಗಷ್ಟೆ ಬಂದಿದ್ದ ನಗುವಿನ ಚಿಗುರು ಈಗ ಮುಖಮಂಡಲವಿಡೀ ಹಬ್ಬಿ ಹೂಬಿಟ್ಟಿತ್ತು. ಆದರೂ ಸಭ್ಯತೆಯ ಎಲೆಯ ಮರೆಯಡಿ ಆ ನಗೆಹೂಗಳನ್ನ ಅಡಗಿಸಿಡಲು ಆಕೆ ಪ್ರಯತ್ನವನ್ನಂತೂ ಮಾಡುತ್ತಿದ್ದಳು.

ಒಂದೆರಡು ಸಾರಿ ಚಾಕಲೇಟನ್ನು ಚೀಪುವಷ್ಟರಲ್ಲಿ ನನ್ನವಳ ತಲೆಯ ಬಲ್ಬು ಹೊತ್ತಿಕೊಂಡಿತು. "ಅರೇ ನಿಮಗೆಲ್ಲಿ, ನೀವು ತಿನ್ನಲೆ ಇಲ್ಲ್ವೇ" ಎಂದುಲಿಯುವಾಗ ಅವಳ ಕಂಠದಲ್ಲಿ ಕ್ಷಣಗಳ ಮುಂಚೆ ಕಾಣಿಸಿದ್ದ ನಾಚಿಕೆಯ ಸೋಂಕೂ ಇರಲಿಲ್ಲ. ಆದರೆ ನನಗೆ ಮಾತ್ರ ಸ್ವಲ್ಪ ನಾಚಿಕೆಯಾಯ್ತು. ಮಾತು ಕೇಳಿಸದವನಂತೆ ಆ ಕಡೆ ತಿರುಗುವ ಮುನ್ನ ಕಿಟಕಿಯ ಹುಡುಗಿಯ ಕಡೆಗೊಮ್ಮೆ ನೋಡಿದರೆ ಈಗ ಅವಳ ನಗುವಿನ ಚಿಗುರು ಕಂಗಳಿಂದಲೂ ಇಣುಕುತ್ತಿತ್ತು. ಇದಾವುದನ್ನೂ ಗಮನಿಸದ ನನ್ನಾಕೆಯ ಮಾತು ನನ್ನ ಸಂಕಷ್ಟಕ್ಕೆ ಮತ್ತೂ ತುಪ್ಪ ಹೊಯ್ದಿತು.

"ನನ್ನ ಬಾಯಿಗೆ ಚಾಕಲೇಟು ಇಡುವಾಗ ಮಾತ್ರ ನಿಮಗೆ ನಾಚಿಕೆ ಗೀಚಿಕೆ ಏನೂ ಇರಲಿಲ್ಲ, ಈಗೆಲ್ಲಿಂದ ಬಂತೋ. ಅದೂ ಪಾಪ ವಯಸ್ಸಾಗಿದೆ, ಬಿಸಿಲೂ, ಶೆಖೆಗೆ ಒಂದು ಚಾಕಲೇಟು ತೆಗೆದು ನೀವೇ ಬಾಯಲ್ಲಿಟ್ಟುಕೊಳ್ಳಿ ಅಂತ ನಾನು ಹೇಳಿದ್ದಕ್ಕೆ ಇಷ್ಟು ನಾಚಿಕೆಯೇ! ರಾಮ ರಾಮ,ಈ ಗಂಡಸರ ಹಣೆಬರಹವೆ ಇಷ್ಟು" ಅಂತ ನನ್ನ ಜಾತಿಗಿಷ್ಟು ಮಂತ್ರ ಹೇಳಿದಳು. ಅವಳ ಕಳಕಳಿಯೇ ಹೀಗೆ. ಯಾವಾಗಲೂ ಸಿಡುಕಿನ ಸೀರೆ ಹೊದ್ದುಕೊಂಡೇ ಇರುತ್ತದೆ. ಒಂದೊಂದು ಸಲ ಕಿವಿಹಿಂಡುವ ರೇಶ್ಮೆ ಸೀರೆಯೂ ಇರುತ್ತದೆ. ಆದರೆ ಅದು ಎಲ್ಲರ ಎದುರಿಗಲ್ಲ. ಗರ್ಭಗುಡಿಯ ಮಿಣುಕುದೀಪದ ಬೆಳಕಿನಲ್ಲಿ ಮಾತ್ರ. ನನ್ನ ದೇವತೆಯ ಆಗ್ರಹ ಅನುಗ್ರಹಗಳ ಬಗ್ಗೆ ಬರೆಯಲು ಹೊರಟರೆ ಕಾದಂಬರಿಯೇ ಆದೀತು ಬಿಡಿ.

ಅರೆ ಆ ಕಿಟಕಿಯ ಹುಡುಗಿಯ ಸ್ಟಾಪು ಬಂತೂಂತ ಕಾಣುತ್ತೆ. ಎದ್ದು ಹೊರಡಲು ಸವರಿಸುತ್ತಿದ್ದಾಳೆ. ಎಷ್ಟೇ ಮರೆಮಾಚಿದರೂ ಆ ತುಟಿಯಂಚಿನ ಕಿರುನಗೆಯ ಹೂವೊಂದು ಹೊರಗೆ ಇಣುಕುತ್ತಲೇ ಇದೆ. ಅವಳು ಅಜ್ಜಿಯಾದಾಗ ಹೇಗಿರುತ್ತಾಳೋ ಅನ್ನಿಸಿತು.

ಅಷ್ಟರಲ್ಲೆ ಆ ಹುಡುಗಿ ಎರಡು ಮ್ಯಾಂಗೋ ಬೈಟುಗಳನ್ನ ಹೊರತೆಗೆದು ನನ್ನವಳ ಅಂಗೈ ಬಿಡಿಸಿ ಇಟ್ಟು, ನಾನು ಹೇಗೂ ಇಳಿಯುತ್ತಿದ್ದೀನಿ, ಮುಂದಿನ ಸ್ಟಾಪು ಬರುವುದರಲ್ಲಿ ಇಬ್ಬರೂ ಬಿಡಿಸಿ ಬಾಯಿಗಿಟ್ಟುಬಿಡಿ, ಅಂದು ನನ್ನವಳ ಸುಕ್ಕು ಕೆನ್ನೆಯನ್ನು ಒಮ್ಮೆ ಮೆತ್ತಗೆ ಹಿಂಡಿ ನನ್ನೆಡೆ ತುಂಟ ನಗು ಬೀರಿ ಹೊರಟಳು. ಹೋಗುತ್ತಾ ನನಗೆ ಹೀಗೆ ಹೇಳಿ ಹೋದಳು.

"ನಾನೂ, ನನ್ನವನೂ ಅಜ್ಜ, ಅಜ್ಜಿಯರಾಗಿ ಚಾಕಲೇಟು ಬಾಯಿಗಿಡುವಾಗ, ಜೊತೆಯಲ್ಲಿ ಹೀಗೇ ನನ್ನಂತ ತುಂಟಿಯೊಬ್ಬಳು ಇದ್ದರೆ ಇನ್ನೂ ಚೆನ್ನಾಗಿರುತ್ತಲ್ವಾ ತಾತ?"

ಅವಳು ಇಳಿದು ಹೋದ ಮೇಲೆ ನನ್ನವಳೆಡೆ ನೋಡಿದೆ. ಅರೆ.. ಆ ಹುಡುಗಿಯ ನಗುವಿನ ಚಿಗುರು ನನ್ನವಳ ಮುಖದಲ್ಲೂ ಹಬ್ಬಿ ಹೂಬಿಟ್ಟಿದೆ!

.................

ಬಹಳ ದಿನಗಳ ಹಿಂದೆ ಬರೆದಿದ್ದು.. ಆದ್ರೆ ಹೂಬಳ್ಳಿ ಇನ್ನೂ ಫ್ರೆಶ್ ಆಗೇ ಇದೆ ಅಂತ ನನಗನ್ನಿಸುತ್ತೆ.. ಜೊತೆಯಾಗಿ ನಗುತ್ತ ಅಳುತ್ತ ದಾರಿ ಸಾಗಿದ ಈ ಜೋಡಿ ಪಯಣಿಗರ ಹೂಬನ ಹೀಗೇ ಸದಾ ತಂಪಾಗಿ, ಇಂಪಾಗಿ, ಕಂಪಾಗಿ... ಗೊಂಚಲು ಗೊಂಚಲು ಹೂ ತೂಗಿ...

Friday, February 23, 2007

ನೊಂದ ಹೃದಯವೇ ಹಾಡ ಕಟ್ಟುವುದು!

ಅಲ್ಲಿ ಚಂದ ಗೋಡೆಯ, ಗಟ್ಟಿ ಮಾಡಿನ ಬೆಚ್ಚನೆ ಮನೆಯಲ್ಲಿ
ಒಡೆದ ಕನ್ನಡಿ ಅಶುಭಸೂಚಕ.
ಇಲ್ಲಿ ಮೋಟು ಗೋಡೆಯ, ಸೋಗೆ ಮಾಡಿನ, ಅರೆಮನೆಯಲ್ಲಿ,
ಗೋಡೆ ತೂತು ಮುಚ್ಚಲೇನೊ ಎಂಬಂತೆ, ಹಚ್ಚಿರುವ
ಒಡೆದ ಕನ್ನಡಿಯ ಚೂರಲ್ಲಿ, ಇಣಿಕಿ ನೋಡುತ್ತಿದ್ದಾಳೆ ಪೋರಿ,
ಮುಗ್ಧ ಮೊಗದ ಮೇಲೆ ಬೆಳಕಿನ ಮಾಯಾಲೋಕ..!


ನನಗಾದ ಅನ್ಯಾಯ, ಅವನಿಗೆ ಅತ್ಯವಶ್ಯಕ ಅನುಕೂಲ... :-)
[ ;-) ತಮ್ಮ ಹೇಳುತ್ತಾನೆ, ನೀನೆ ಅವಕಾಶ ಕೊಡದೆ ನಿನಗ್ಯಾರೂ ಅನ್ಯಾಯ ಮಾಡುವುದಿಲ್ಲ.. ]

ನನಗೆ ಮೆಚ್ಚಿದ ಮೊಗ್ಗಿನ ದಂಡೆಯ
ತಾಯಿ ಬಳ್ಳಿ ಅಳುತ್ತಿರಬಹುದು,
ಮಕ್ಕಳಿಲ್ಲ,
ಇವರು ಮುಡಿದು ಮುದುಡಿಸಲು,
ನನ್ನ ಹೊಕ್ಕಳ ಹೂವ ಕೊಯ್ದರಲ್ಲಾ..! :(


ಆಟವಾಡಿ ನಲಿಯಬೇಕಿದೆ ತುಂಟ ಕಂದನಿಗೆ,
ಕೈ ತುಂಬ ಕೊಳೆ, ಜೇಬಲ್ಲೆರಡು ಕಲ್ಲು.
ಅಮ್ಮ ಬಿಡುವುದಿಲ್ಲ, ಆರೋಗ್ಯಕ್ಕೆ ಒಳ್ಳೆಯದಲ್ಲ,
ಇರಲಿ ಕೈ ಕಾಲು ಶುಭ್ರ,
ಕಂದ ಕೇಳುವುದಿಲ್ಲ - ಮನೆಯೆಲ್ಲ ಗುಲ್ಲು..
ಅಮ್ಮ ಕಿವಿಗೊಡಳು, ಬಾಗಿಲ ಚಿಲುಕ ಗಟ್ಟಿ ಹಾಕಿಹಳು,
ಅವಳಿಗೆ ಗೊತ್ತು ಕಂದನಿಗೇನು ಒಳ್ಳೆಯದೆಂದು.

ಕಂದನ ಕನಸು ಅಮ್ಮನದ್ದಾಗುವುದು ಹೇಗೆ?
ಕಂದನ ಖುಷಿಯ ಚಿಲುಮೆ ಕಲ್ಲು ಮಣ್ಣಾಟ,
ಅಮ್ಮನಿಗೋ ಬೇರೆಯದೆ ನೋಟ!


ಕನ್ನಡಿ ಚೂರು,ನನಗಾದ ಅನ್ಯಾಯ, ಮೊಗ್ಗಿನ ದಂಡೆ, ಮಕ್ಕಳಾಟ..
ಎಲ್ಲೆ ನೋಡಿ - ಎಲ್ಲ ವಿರುಧ್ಧ ಭಾವನೆಗಳ ಹೊಯ್ದಾಟ


ಆದರೂ..
ಒಡೆದ ಕನ್ನಡಿ ಚೂರಲ್ಲೆ ಬೆಳಕ ಪ್ರತಿಫಲನ
ಕೊಳೆ ಕೈಗಳ ಬೊಗಸೆಯಲ್ಲೆ ನಲಿವಿನ ಅನುರಣನ
ತನ್ನ ಜೀವಜಲ ಹಿಂಡಿ ಕೊಟ್ಟ ಬಳ್ಳಿಯ ಮೊಗ್ಗೆಯಲ್ಲೆ ಘಮಘಮಿಸುವ ಚೇತನ


ಪಟ್ಟ ಸಾವಿರ ನೋವೆ,
ಒಂದು ನಲಿವಿನ ಕ್ಷಣಕ್ಕೆ ಜೀವನವಿಡೀ ಕಾಯುವ ಭರವಸೆ ತುಂಬುವುದು...


ಈ ಎಲ್ಲ ಚಿತ್ರಗಳಾಚೆ ಇರುವ ಇನ್ಯಾವುದೊ ಚಿತ್ರ ನೋಡಲು
ಬೇಕಿದೆ ಕವಿಯೆ,
ನಿಮ್ಮ ಕಣ್ಗಳ ಕಾಣ್ಕೆ;

ನೀವೆ ಹೇಳಿದ್ದಿರಲ್ಲ:

ನೊಂದ ಹೃದಯವೇ ಹಾಡ ಕಟ್ಟುವುದು...!


Thursday, February 22, 2007

ವಿಪರೀತ..!?

ನನಗೆ ಬೇಕಿದೆ

ನಿನ್ನ ಜೊತೆ,
ಮೆಲ್ನಗೆ,ಮುನಿಸು,ನಗೆಮಾತು.

ನಿನಗೆ ಬೇಡೆನ್ನಿಸಿದೆ

ನನ್ನೆಲ್ಲ ಬೇಕುಗಳ ಸಾಂಗತ್ಯ;

ಮಾತು ಸಾಕೋಸಾಕು..!?

ಅಲ್ಲಿ ಇರುಳಿನಲ್ಲು ಬೆಳಗು

ಕತ್ತಲಿಲ್ಲಿ ಒಳಗು ಹೊರಗು!

Tuesday, February 13, 2007

ಪ್ರೀತಿ ನದಿಯಂತೆ...

ಪ್ರೀತಿಯು ದಿನವೊಂದರ ಆಚರಣೆಗೆ ಕಾದು ಕೂತ ಅಭಿವ್ಯಕ್ತಿ ಅನ್ನೋದು ಕ್ಲೀಷೆ ಅನ್ಸುತ್ತೆ ನಂಗೆ. [ಪ್ರೇಮಿಗಳ ದಿನವನ್ನಾಚರಿಸುವ ಎಲ್ಲ ಪ್ರೀತಿತುಂಬಿದ ಮನಸ್ಸುಗಳಿಗೆ ನನ್ನ ಗೌರವವಿದೆ.. ಅವರ ಯಾವ ಭಾವನೆಯನ್ನೂ ನಾನು ಕೀಳುಗಾಣಿಸುತ್ತಿಲ್ಲ]


ನನಗೆ "ಪ್ರೀತಿ ನದಿಯಂತೆ" ! (ಜೆ.ಕೆ.ಯವರ ಅನುಭಾವಿ ಬರಹದಿಂದ ಪ್ರೇರಣೆಗೊಂಡ ಭಾವ)

ಸದಾ ಹರಿವು - ಅದೇ ಹಳೆ ದಂಡೆಗಳ ಮಧ್ಯೆ ಹೊಸಾ ಹರಿವು, ತಂಪಿನಲಿ ತಂಪಾಗಿ, ಬಿಸಿಲಲ್ಲಿ ಬೆಚ್ಚಗಾಗಿ,ಭರತದಲಿ ಉಕ್ಕಿ ಮೊರೆದು, ಬೇಸಿಗೆಯಲಿ ತೆಳ್ಳಗೆ ಹರಿದು - ಸದಾ ಹರಿವು, ಅದೇ ಹಳೆ ದಂಡೆಗಳ ಮಧ್ಯೆ ಹೊಚ್ಚ ಹೊಸಾ ಹರಿವು...


ಎಲ್ಲರ ನಡುವಣ ಪ್ರೀತಿ ಕ್ಷಣದಿಂದ ಕ್ಷಣಕ್ಕೆ ದುಪ್ಪಟ್ಟಾಗಲಿ.. ಇಲ್ಲ ಖಂಡಿತಕ್ಕೂ ಇದು ದುರಾಸೆಯಲ್ಲ.
ನಮ್ಮ ನಡುವೆ ಎದ್ದು ನಿಂತಿರುವ ಕೋಟೆಗಳ ಕೆಡವಲು, ಮುರಿದು ಬಿದ್ದ ಸೇತುವೆಗಳ ಕೂಡಿಸಲು, ಎಲ್ಲ ಗದ್ದಲಗಳ ನಡುವೆ ಅರೆ ಘಳಿಗೆ ಹಕ್ಕಿ ಹಾಡ ಕೇಳುತ್ತಾ, ತಂಪು ಮೌನವ ಹೀರುತ್ತಾ ಬದುಕ ನೀಡಿದ ಧರಣಿಗೊಂದು ಪ್ರಶಾಂತ ನಮನ ಸಲ್ಲಿಸಲು, ಪಕ್ಕದಲಿ ಸಾಗುತಿಹ ಗಡ್ಡಧಾರಿ ಮುಸಲ್ಮಾನ ಔರಂಗಜೇಬನ ವಂಶಸ್ಥನೇ ಎಂಬ ಅನುಮಾನ ಕಾಡಿದಾಗ್ಯೂ ಅವನಿಗೊಂದು ನಗು ಚೆಲ್ಲಿ ವಿಶ್ ಮಾಡಲು, ಮುರಿದು ಬಿದ್ದ ಸಂಸ್ಕೃತಿ ದೇಗುಲಗಳ ಅಳಲಿನಲ್ಲೂ, ಗೆದ್ದು ಬಂದ ನಮ್ಮ ಸಹಿಷ್ಣುತೆಯ ನೆನಪಾಗಿ ತಲೆಬಾಗಲು, ಹಿರಿಮೆಯ ತಲೆಯೆತ್ತಿಯೂ ವಿನಯ ಪ್ರಭಾವಳಿಯಾಗಿರಲು - ಕ್ಷಣಕ್ಷಣಕ್ಕೂ ದುಪ್ಪಟ್ಟಾಗುವ ಪ್ರೀತಿ ಬೇಕೇ ಬೇಕು..


ಎಲ್ಲ ಪ್ರೀತಿಸುವ ಹೃದಯಗಳ ಜೀವದ ಬಳ್ಳಿ ಜೊತೆಗಾರರ ಪ್ರೀತಿ ಚಿಲುಮೆಯ ತಂಪುಣ್ಣಲಿ, ನಮ್ಮೆಲ್ಲರ ಪ್ರೀತಿ ಜೋಳಿಗೆಯು ಹಗುರಾಗಲಿ, ಬರಿದಾಗಲಿ ಮತ್ತೆ ಮತ್ತೆ ತುಂಬಲು ಮತ್ತೆ ಮತ್ತೆ ನೀಡಲು...


ಪ್ರೀತಿಯಿರಲಿ...


Monday, February 5, 2007

ಸಂತೆಯಲ್ಲೊಂದು Amrutha ಮೌನ

ಮೊನ್ನೆ ಶನಿವಾರ ಸಾಹಿತ್ಯ ಪರಿಷತ್ ಪುಸ್ತಕ ಸಂತೆಗೆ ಹೋಗಿದ್ದೆ. ಹುಚ್ಚು ಅಂತೀರೇನೋ.. ನಂಗೆ ಹಳೆಯ ಪುಸ್ತಕಗಳೆಂದರೆ ಹೊಚ್ಚ ಹೊಸ ಪುಸ್ತಕಗಳಿಗಿಂತ ಒಂದು ವೀಸೆ ಹೆಚ್ಚಿನ ಪ್ರೀತಿ. ಬಣ್ಣಗಟ್ಟಿದ, ಕಿವಿ ಬಂದಿರುವ, ಅಲ್ಲಲ್ಲಿ ಹುಳು ತಿಂದಿರುವ, ಬಹಳ ಸಾರಿ ಮುಖಪುಟ,ಹಿಂಪುಟಗಳೆರಡೂ ಕಿತ್ತೇ ಹೋಗಿರುವ, ಅದೇನೋ ಅವ್ಯಕ್ತ ಪರಿಮಳ ಹೊಂದಿರುವ ಈ ಪುಸ್ತಕಗಳು, ನವಿರು ನವಿರಾದ, ಚಂದದ ಚಿತ್ತಾರಗಳ ಮುಖಪುಟ,ಹಿಂಪುಟ ಹೊಂದಿರುವ, ಮುಟ್ಟಿದರೆ ಧೂಳಾಗುತ್ತೇನೋ ಅನ್ನಿಸುವಂತಹ ಗರಿಗರಿಯಾದ ಹೊಸ ಪುಸ್ತಕಗಳಿಗಿಂತ ಆಪ್ತವಾಗುತ್ತವೆ... ಹೀಗಾಗಿ ನಾನು ಹಳೆ ಪುಸ್ತಕದಂಗಡಿ, ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಅಂಗಡಿಗಳಿಗೆ ಸಮಯ ಸಿಕ್ಕಾಗೆಲ್ಲ ಹೋಗುತ್ತಿರುತ್ತೇನೆ.ನನ್ನ ಸಂಗಾತಿ ನನ್ನ ಈ ಅರೆಹುಚ್ಚಿಗೆ ನಕ್ಕರೂ, ಜೊತೆಯಾಗಿ ಬರುತ್ತಾನೆ. ಹಳೆಯದೇನನ್ನೋ ಅರಸುವ ನನ್ನ ಹುಡುಕಾಟದಲ್ಲಿ, ಹೊಸಬೆಳಕಾಗಿ ದಾರಿ ಸಾಗುತ್ತಾನೆ.

ಪುಸ್ತಕ ಸಂತೆಯಲ್ಲಿ ಹೊಸ,ಹಳೆಯ ಪುಸ್ತಕಗಳೆರಡೂ ಸಿಗುತ್ತವೆ. ಪ್ರತಿ ಶನಿವಾರ ಮೂರರಿಂದ ಆರರವರೆಗೆ ಸಂತೆ ನಡೆಯುತ್ತದೆ.
ಸಂತೆಯೆಂದರೆ ಇದು ಸಂತೆಯಲ್ಲ; ಅಜ್ಜನೊಬ್ಬನು ದಾರಿ ತಿರುವಿನ ಮೋರಿ ಕಟ್ಟೆಯ ಮೇಲೆ ಆಗಲೋ ಈಗಲೋ ಬರಬಹುದಾದ ತನ್ನ ಒಂದೆರಡು ಸ್ನೇಹಿತರಿಗೆ ಕಾಯುವಂತೆ, ಕನ್ನಡದ ಈ ಪುಸ್ತಕಗಳು ಕೊಳ್ಳುವವರಿಗೆ ಕಾಯುತ್ತ ಧ್ಯಾನಸ್ಥವಾಗಿರುತ್ತವೆ.ಸಂತೆಯ ಧೂಳಿಲ್ಲ, ಧಾವಂತ ಮೊದಲೆ ಇಲ್ಲ.ಸಂತೆಯಿದೆ ಪರಿಷತ್ತಿನ ಆವರಣದಾಚೆಗಿನ ರಸ್ತೆಯಲ್ಲಿ, ಟ್ರಾಫಿಕ್ ಮಧ್ಯದಲ್ಲಿ ಪಾರ್ಕಿಂಗ್ ಮಾಡಿ ನಿಂತ ಲಾರಿಗಳ ಸಮೂಹದಲ್ಲಿ, ಎಲ್ಲೆಲ್ಲೂ.. ಬಹಳ ಸಾರಿ ಪರಿಷತ್ತಿನಲ್ಲಿ ಹಾಕಿರುವ 'ಪುಸ್ತಕ ಸಂತೆ' ಬ್ಯಾನರ್ ತುಂಟ ಲೇಖಕನ ವಿಡಂಬನೆಯೋ ಅನ್ನಿಸುವುದುಂಟು.

ಮೊನ್ನೆ ಹೀಗಾಯಿತು. ನಮಗೆ ಇಷ್ಟವಾದ ಒಂದ್ನಾಲ್ಕು ಪುಸ್ತಕಗಳನ್ನು ಆರಿಸಿ ಇನ್ನೇನು ಬಿಲ್ ಮಾಡಿಸಬೇಕೆನ್ನುವಾಗ,ಜನರೆ ಇಲ್ಲ ಸಾರ್, ದಯವಿಟ್ಟು ಬನ್ನಿ ಅಂತ 'ಸಂತೆ'ಯ ಸಭಾಂಗಣಕ್ಕೆ ನಮ್ಮನ್ನು ಹೆಚ್ಚು ಕಡಿಮೆ ದಬ್ಬಿದರು. ಅಯ್ಯೋ ಸಿಕ್ ಹಾಕ್ಕೊಂಡೆವಲ್ಲ ಅಂತ ಯೋಚಿಸುತ್ತಾ ಹೋಗಿ ಇದ್ದಿದ್ದರಲ್ಲೆ ಹಿಂದಿನ ಸಾಲಲ್ಲಿ ಕೂತೆವು. ಮೊದಲ ಎರಡು ಸಾಲಲ್ಲಿ ಮೂರೂ ಮತ್ತೊಂದು ಜನರಿದ್ದರು.. :)

ಸಂಘಟಕರು,ಭಯಂಕರ ಕನ್ನಡದಲ್ಲಿ ಆರ್ಭಟಿಸುತ್ತ ಕಾರ್ಯಕ್ರಮ ವಿವರಣೆ ನೀಡಿದರು. ಅವರ ಪರಿಚಯ ಭಾಷಣ ಕೇಳಿ ನನ್ನ ತಲೆ ತಿರುಗಿ ಹೋಯಿತು.ಮೊದಲು ಕನ್ನಡವನ್ನ ಹಿಗ್ಗಾ ಮುಗ್ಗ ಎಳೆದಾಡಿ, ಬರೆದುಕೊಂಡಿದ್ದ ಪರಿಚಯನುಡಿಗಳಿಗೆ ಎಲ್ಲೆಲ್ಲೋ ಪಾಸ್ ಕೊಟ್ಟು, ಮುಖ್ಯ ಅತಿಥಿಗಳನ್ನು ಪರಿಚಯಿಸುವಾಗ ನನಗೆ ಅಳು ಬರುವಷ್ಟಾಗಿತ್ತು. ಅತಿಥಿಗಳಿಗೇನಾಗಿತ್ತೋ ನಂಗೊತ್ತಿಲ್ಲ. ಇದೆಲ್ಲ ಬಿಡಿ. ನಮ್ಮ ಖಣ್ಣಡ ಉಳಿದು ಬಂದಿರುವುದೇ ಹೀಗೆ.

ಅವರು ಮುಖ್ಯ ಅತಿಥಿಗಳು ವಿಶಿಷ್ಟವಾಗಿದ್ದರು.ಎಲ್ಲಿಯೋ ಹೊಳೆದಂಡೆಯಲ್ಲಿ, ಮರದ ಕೆಳಗೆ ಕೂತು ಹಕ್ಕಿ ಪಿಕ್ಕಿಗಳ ಮೆಲ್ಲುಲಿ ಕೇಳುತ್ತ, ಹೊಳೆಯೋಟ ನೋಡುತ್ತ ಕುಳಿತಿರುವಂತಿದ್ದರು. ಸಾದಾ ಪಂಚೆ, ಹಳೆ ಶರಟು, ಮೇಲೊಂದು ನೀಲಿ ವಸ್ತ್ರ, ಹಾಗೆ ಬೆಳೆಯಲು ಬಿಟ್ಟ ಗಡ್ಡ, ಮುಗ್ಧವಾಗಿ ಹೊಳೆಯುವ ಕಣ್ಗಳು. ಅದರಲ್ಲೇನ್ ವಿಶೇಷ ನಮ್ ಕನ್ನಡದಲ್ಲಿ ಸಂತರೆಷ್ಟೋ ಜನ ಅಂದ್ಕೋಬೇಡಿ. ಇವರು ಮೌನಿ ಕೂಡಾ! ಸಂಘಟಕರು ಮೊದಲು ನಾಡಗೀತೆ,ನಂತರ ಅಧ್ಯಕ್ಷರ ಮಾತು, ಆಮೇಲೆ ಮುಖ್ಯ ಅತಿಥಿಗಳ ಮಾತು ಅಂತ ಊದುತ್ತಲೇ ಇದ್ದರು. ನಾನೂ ಗೆಳೆಯ ಇಬ್ರೂ ಮುಖ ಮುಖ ನೋಡಿಕೊಂಡ್ವಿ. ಮೌನಿಯೆನ್ನುತ್ತಾರೆ, ಮಾತು ಹೇಗೆ?!

ಅಷ್ಟರಲ್ಲಿ ಇಬ್ಬರು ಪುಟಾಣಿಗಳಿಂದ ನಾಡಗೀತೆ ಎಂದು ಅನೌನ್ಸ್ ಮಾಡಿದರು. ಸಭಿಕರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರದೆ ಇದ್ದಾಗ, ದಯವಿಟ್ಟು ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿ ಅಂದರು. ನಂಗೆ ಸಿಕ್ಕಾಪಟ್ಟೆ ಬೇಜಾರಾಯ್ತು, ಛೇ ಅವರು ಹೇಳುವವರೆಗೆ ಎದ್ದು ನಿಲ್ಲಲು ತೋಚಲಿಲ್ವಲ್ಲ ಅಂತ ನನ್ಮೇಲೆ ನಂಗೆ ಸಿಟ್ಟು ಬಂತು.ಮಕ್ಕಳು ಚಂದವಾಗಿ ಹೇಳಿದರು. ನಾನು ಆಲ್ ಮೋಸ್ಟ್ RVV ಶಾಲೆಯ ಪ್ರಾರ್ಥನೆ ಸಾಲಿನಲ್ಲಿ ಸೇರಿಹೋಗಿದ್ದೆ. ಅಷ್ಟರಲ್ಲಿ ಗೀತೆ ಮುಗಿದು ಮತ್ತೆ ಸಂಘಟಕರು ಆರ್ಭಟಿಸಲು ಶುರು ಮಾಡಿದರು.

ನಂತರ ಅಧ್ಯಕ್ಷ ಜರಗನಹಳ್ಳಿ ಶಿವಶಂಕರ್ ಅವರು ಮಾತಾಡಿದರು. ಒಂದು ಒಳ್ಳೆಯ ಭಾಷಣ,ಸವಿಯಾದ ಕನ್ನಡ,ಸಮಕಾಲೀನ ವಿಷಯಗಳು ಕೇಳಲು ಹಿತವಾಗಿತ್ತು.ನಮ್ಮಲ್ಲೂ ವಿಚಾರದ ಅಲೆಯೆಬ್ಬಿಸಿದವು. ಅವರು ಮೌನಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಅವರ ಹೆಸರು Amrutha, ಒಬ್ಬ ಹಿರಿಯ ನಾಗರಿಕರು, ವಿದ್ಯಾವಂತರು (ಎಂ.ಎ), ಸುಶಿಕ್ಷಿತರು. ಗಾಂಧಿಯವರ ಸತ್ಯಾಗ್ರಹದಲ್ಲಿ ಹೆಚ್ಚಿನ ನಂಬಿಕೆ ಇಟ್ಟವರು.ಪ್ರಸ್ತುತ ಅವರದ್ದು ಬಾಟಲ್ಡ್ ವಾಟರ್ ವಿರುದ್ಧದ ಹೋರಾಟ. ನಮ್ಮ ನೀರನ್ನೆ ಬಾಟಲಿಯಲ್ಲಿ ತುಂಬಿ ನಮಗೇ ಮಾರುವ ಗ್ಲೋಬಲ್ ಕಂಪನಿಗಳು, ತಮಗೆ ಹೇಗೂ ಬಾಟಲಿಯಲ್ಲಿ ತುಂಬಿಟ್ಟ ಶುದ್ಧ ನೀರು ಸಿಗುತ್ತದೆಂದು, ಅಗಾಧ ಪ್ರಮಾಣದ ಕೊಳಚೆ, ಮಲಿನ ನೀರನ್ನ, ಮೂಕವಾಗಿ ಸ್ವೀಕರಿಸುವ ಭೂಮಿಗೆ, ಲೇಔಟುಗಳಾಗಿ ಬದಲಾಗುತ್ತಿರುವ ಕೆರೆಗಳಿಗೆ ಬಿಟ್ಟು ವಾತಾವರಣ ವಿಷಗೊಳಿಸುವ ಸ್ವಹಿತಕೇಂದ್ರಿತ ವ್ಯಕ್ತಿ,ವ್ಯವಸ್ಥೆ,ಸಂಸ್ಥೆ ಗಳ ವಿರುದ್ಧ ಈ Amrutha ಎಂಬ ಸಂತನ ಮೌನ ಹೋರಾಟ.

ನಮ್ಮ ಎಲ್ಲ ಸಮಾಜದ್ವೇಷಿ,ಪರಿಸರ ದ್ವೇಷಿ ಸಮಸ್ಯೆಗೆಳನ್ನ ಹುಟ್ಟಿ ಹಾಕಿದವರಲ್ಲಿ, ಸಮಸ್ಯೆಗಳು ಬೆಳೆಯುವಾಗ ಅನುಕೂಲ ಮಾಡಿಕೊಟ್ಟು ಮುಖ ತಿರುವಿ ನಿಂತು ತಮ್ಮ ಹೊಟ್ಟೆ ತುಂಬಿಸಿಕೊಂಡವರಲ್ಲಿ, ಈ ಎಲ್ಲ ಸಮಸ್ಯೆಗಳ ಪರಿಹಾರದ ಹೆಸರು ಹೇಳಿ ಗೆದ್ದು ಬಂದ ಸರ್ಕಾರಗಳಲ್ಲಿ, ಮಾತು ವ್ಯರ್ಥ, ಕೊಟ್ಟ ಮಾತು ಮರೆಯುವವರಲ್ಲಿ ಮಾತನಾಡಿದರೆ ಧ್ವನಿ ಜೀವ ಬಿಟ್ಟೀತು,ನಮ್ಮ ಮಾತು ಮನಕ್ಕೆ ಸೇತುವೆಯಾಗದೆ ಶೂನ್ಯದ ಬುಟ್ಟಿ ತುಂಬುವ ಕಸವಾಗುವುದಾದರೆ ಆ ಮಾತೆ ಬೇಡ ಎಂದು ಮೌನಕ್ಕೆ ಮೊರೆ ಹೊಕ್ಕವರು ಇವರು.

ನಾನು ಇಂತವರು ಇನ್ನು ಇದ್ದಾರಲ್ಲ ಎಂದು ಅಚ್ಚರಿಯಲ್ಲಿ ಮುಳುಗಿಹೋದೆ. ಸಂತನೊಬ್ಬನ ಸಮೀಪ ದರ್ಶನದಿಂದ ಮೈ ನವಿರೆದ್ದಿತು. ಅವರು ತಮ್ಮ ವಿಚಾರಗಳನ್ನ ಶುದ್ಧ ಕನ್ನಡದಲ್ಲಿ ಒಪ್ಪಾಗಿ ಬರೆದು ಕೊಟ್ಟಿದ್ದರು, ಶಿವಶಂಕರ್ ಓದಿ ಹೇಳಿದರು. ಗೊತ್ತಾಗದೆ ಹೇಗೆ ಒಳಸುಳಿಯಲ್ಲಿ ಸಿಕ್ಕಿಬಿದ್ದಿದ್ದೇವೆ ಅಂತ ಚಡಪಡಿಕೆಯಾಯಿತು. ನಮಗೆ ಯಾವ ಕೆರೆ ಬತ್ತಿದರೂ, ಯಾವ ಜಲಾಶಯ ಕಲುಷಿತವಾದರೂ ಚಿಂತಿಲ್ಲ. ಆಫೀಸ್ ನಲ್ಲಿ ಕುಡಿಯಲು ಶುದ್ದವಾದ ಬಾಟಲಿ ನೀರು ಸಿಗುತ್ತದೆ, ಮನೆಯಲ್ಲಿ ಝೀರೋ ಬಿ, ಅಕ್ವಾಗಾರ್ಡ್ ಇದೆ. ಪ್ರಯಾಣ ಮಾಡುವಾಗ 14 ರೂ ಕೊಟ್ಟರೆ ಒಂದು ಲೀಟರ್ ಬಾಟಲಿ ಸಿಗುತ್ತದೆ, ಇಳಿಯುವ ಸಮಯಕ್ಕೆ ಅದನ್ನು ಬಿಸಾಕಿ ಅಲ್ಲಿನ ನೆಲಕ್ಕಿಷ್ಟು ವಿಷ ಉಣ್ಣಿಸುತ್ತೇವೆ.

ಆದರೆ ಇಲ್ಲೆ ಆ ಕಡೆ ಬೀದಿಯಲ್ಲಿ, ಹತ್ತಿರದ ಸ್ಲಮ್ಮಿನಲ್ಲಿ, ಕನ್ನಡ ಶಾಲೆಯಲ್ಲಿ, ಮಾರ್ಕೆಟ್ಟಿನ ದಿನ ನಿತ್ಯದ ಸಂತೆಯಲ್ಲಿ,ಸಾಮಾನ್ಯ ಜನಜೀವನದಲ್ಲಿ ಎಲ್ಲಿದೆ ಶುದ್ಧ ನೀರು? ಎಲ್ಲ ಶ್ರೀಮಂತ, ಅಫರ್ಡಬಲ್ ಜನ ಬಳಸಿ ಬಿಟ್ಟ ಮಲಿನ ನೀರು,ಮಲಿನ ಗಾಳಿ,ಮಲಿನ ಪರಿಸರ ಅವರ ಪಾಲಿಗೆ? ಶುದ್ದ ನೀರು ಬೇಕಾ? ಬರೇ 14 ರೂಪಾಯಿ ಒಂದು ಲೀಟರ್ ಗೆ.ಸರ್ವೆ ಹೇಳುತ್ತದೆ, ನಮ್ಮ ದೇಶದ ನಗರವಾಸಿಗಳ ದಿನನಿತ್ಯದ ಖರ್ಚಿನ ಆವರೇಜ್ 9ರಿಂದ 11 ರೂಪಾಯಂತೆ. ಹೌದು ಶ್ರೀ ಸಾಮಾನ್ಯನ ಬದುಕಿದು, ಮೇಲ್ವರ್ಗದ ಎಲೈಟ್ ಕುಟುಂಬಗಳದ್ದಲ್ಲ. ನಮಗೆ ಸಾಫ್ಟ್ ವೇರ್ ನವರಿಗೆ, ಅಪ್ರೈಸಲ್ ನಲ್ಲಿ 0.5 % ಕಡಿಮೆ ಬಂದರೆ ಕಂಪನಿ ಬಿಟ್ಟು ಬೇರೆ ಕಡೆ ಹೋಗುವ ಯೋಚನೆ. ಇವರಿಗೋ ಕುಡಿಯಲೊಂದು ತೊಟ್ಟು ಶುದ್ಧ ನೀರಿಲ್ಲ.

ಸ್ವಲ್ಪ ಹೊತ್ತು ನನ್ನ ತಲೆ ಧಿಂ ಎಂದಿತು. ಹೌದಲ್ಲ, ಹೀಗೆ ಯೋಚಿಸಿಯೇ ಇರಲಿಲ್ಲ. ಸಾವಕಾಶವಾಗಿ ಸುತ್ತಲ ನಲಿವನ್ನ ಹೆಕ್ಕಿ ಬದುಕುತ್ತ ನಾನು ಅಲ್ಲೆ ಬಿಕ್ಕುತ್ತ ನಿಂತ ಅಳಲನ್ನ ಹೇಗೆ ಮರೆತೆ? ಇಷ್ಟು ದೂರ ಸಾಗಿದ ಜಾರು ದಾರಿಯಲ್ಲಿ ನಾನು ಹೇಗೆ ಮೇಲೇರಬಲ್ಲೆ? ನನ್ನ ಕಿಂಚಿತ್ ಸೇವೆ ಏನು? ಏನು ಮಾಡಿ ಪ್ರಾಯಶ್ಚಿತ್ತ ಮಾಡಬಲ್ಲೆ? ಅಳುಕಾಯಿತು.

Amrutha ಅವರ ವಿನಂತಿ ಹೀಗಿತ್ತು. ದಯವಿಟ್ಟು ನೀವು ಬಾಟಲ್ ನೀರು ಉಪಯೋಗಿಸಬೇಡಿ, ಅದರ ಉಪಯೋಗಕ್ಕೆ ಮನ್ನಣೆ ಕೊಡಬೇಡಿ, ಇದ್ದ ನೀರನ್ನು ದುಂದು ಮಾಡಬೇಡಿ, ಅಗತ್ಯವಿದ್ದಷ್ಟೆ ಬಳಸಿ. ನೆಲ,ಜಲ,ಗಾಳಿ ಎಲ್ಲರದು, ಅದಕ್ಕೆ ಸುಂಕವೇಕೆ? ಅವರು ತಮ್ಮ ಮೌನ ಮುರಿದು ಮಾರ್ಚಿಯಲ್ಲಿ ತಮ್ಮ ಹೋರಾಟವನ್ನ ಇನ್ನೂ ಬಲವಾಗಿ ಮುಂದುವರಿಸಲಿದ್ದಾರೆ. ಅದಕ್ಕೆ ನಮ್ಮೆಲ್ಲರ ಸಹಕಾರ,ಬೆಂಬಲ ಬೇಕು. ಶಿವಶಂಕರ್ ಓದಿ ಮುಗಿಸಿದರು. ಮೌನಿಯ ನಮ್ರ ನೋಟ ಆ ವಿನಂತಿಯನ್ನು ಅನುಮೋದಿಸಿತು.

ಸುತ್ತೆಲ್ಲ ನಡೆದ ಸಂತೆ, ಚಣಕಾಲ ಸ್ಥಬ್ದವಾಯಿತು. ಅವರ ಮೌನ ನನ್ನ ಮನಸ್ಸಿನೊಂದಿಗೆ ನೇರ ಸಂವಾದಕ್ಕಿಳಿದಿತ್ತು. ಮಾತು ಕೊಡಲು ಭಯಪಟ್ಟೆ.
ಮಾತು ಅರ್ಥ ಎಲ್ಲ ಶೂನ್ಯವಾಗಿ, ಮೌನ ಹಬ್ಬಿತು
. ಇಲ್ಲ ನಾನು ಅವರೆಲ್ಲ ಸಲಹೆಯನ್ನ ಈಡೇರಿಸುವ ಎಂದಿನ ರೆಸಲ್ಯೂಷನ್ ತಗೊಳ್ಳಲಿಲ್ಲ. ನನ್ನ ಪ್ರತಿ ನೀರಿನ ಬಳಕೆಯಲ್ಲು ಈ ಮೌನ ಸಂವಾದವನ್ನ ನೆನಪಿಸಿಕೊಳ್ಳುವ, ನೀರಿನ ಬಳಕೆಯನ್ನ ಆದಷ್ಟು ಸಂಕ್ಷಿಪ್ತಗೊಳಿಸುವ, ಸಾಧ್ಯವಾದಷ್ಟೂ ಬಾಟಲಿ ನೀರನ್ನು ಬಳಸದಿರುವ ನಿರ್ಧಾರಕ್ಕೆ ಬಂದೆ. ಎಷ್ಟರ ಮಟ್ಟಿಗೆ ಇದನ್ನ ಸಾಧಿಸುತ್ತೇನೋ ಗೊತ್ತಿಲ್ಲವಾಗಲೀ ಹೋರಾಟದ ಸಾಗರಕ್ಕೆ ನನ್ನದೊಂದು ಕೊಡ ನೀರಾಗಲಿ ಅಂದುಕೊಂಡಿದ್ದೇನೆ.

ಅವರ ತಿಳುವಳಿಕೆಗೆ, ಬ್ರಹ್ಮ ಸ್ವರೂಪಿ ಮೌನಕ್ಕೆ, ಮೌನ ಹೋರಾಟಕ್ಕೆ, ಮಾತಿಲ್ಲದೆಯೇ ಬೆಳಕು ತೋರಿದ ಚೇತನಕ್ಕೆ ನನ್ನ ಮೌನ ನಮನಗಳು. ಈ ಮೌನ ಸಂತನನ್ನ ನಮಗೆ ಪರಿಚಯಿಸಿದ ಸಂತೆಯ ಆರ್ಭಟಕರಿಗೆ ನನ್ನ ಧನ್ಯವಾದಗಳು. ಮೊದಲು ಕೇವಲವಾಗಿ ತೋರಿದ ಗದ್ದಲದ ಸಂತೆಯ ಮೌನ ದರ್ಶನಕ್ಕೆ, Amrutha ಸ್ವರೂಪಕ್ಕೆ ಬೆರಗಾದೆ.

ಈ ನನ್ನ ಬರಹ, ಓದಿದ ನಿಮ್ಮಲ್ಲೊಂದು ಹೊಸ ಚಿಂತನೆ ಹುಟ್ಟಿಸಿದರೆ,ನೀರಿನೆಡೆಗೆ ಕಾಳಜಿ ಹುಟ್ಟಿಸಿದರೆ, ನಮಗೆ ಬದುಕಿತ್ತ ಧರಣಿಯೆಡೆಗೆ ನಮ್ಮ ಜವಾಬ್ದಾರಿಗಳನ್ನು ನೆನಪಿಸಿದರೆ, ನಾನು kruthajne.

ಪ್ರೀತಿಯಿರಲಿ.

ನೀರು amoolya.
ಲಕ್ಷ್ಮೀ ನಾರಾಯಣ ಭಟ್ಟರ ಒಂದು ಕವಿತೆ ಇಲ್ಲಿ ಅತ್ಯಂತ ಪ್ರಸ್ತುತ:
ಮೇಲೆ ನೀಲಿ ಆಗಸ, ಕೆಳಗೆ ತಾಯಿ ಭೂಮಿ;
ದೇವರಿತ್ತ ಗಾಳಿ ನೀರು, ಹಂಗೆಲ್ಲಿದೆ ಸ್ವಾಮಿ.....


(ಅಲ್ಲಲ್ಲಿ ಕನ್ನಡ ಕನ್ೞರ್ಷನ್ ಸರಿಯಾಗಿ ಆಗದ ಕಾರಣ ಕೆಲವು ಇಂಗ್ಲಿಷ್ ಪದಗಳನ್ನ ಹಾಗೇ ಬಳಸಿದ್ದೇನೆ. ಮುಖ್ಯವಾಗಿ Amrutha ಅವರ ಹೆಸರು..
:( )