ಇಲ್ಲಿಯವರೆಗೆ ಕೇಳಿದ, ಓದಿದ, ಮಾಧ್ಯಮಗಳಲ್ಲಿ ಪ್ರಚಾರ ಪಡೆದ ತಾಜ್ ಮಹಲನ್ನು ನೋಡಲು ಹೋಗುವ ಮೊದಲು, ಇದು ಅದ್ಭುತಗಳಲ್ಲಿ ಒಂದು ಎಂಬ ಭಾವನೆಯಷ್ಟೆ ಇತ್ತು. ತಿಳುವಳಿಕೆಯೆ ಹಾಗೆ - ಹರಿವ ನೀರು.
ಅಲ್ಲಿ ಮೊದಲ ಬಾಗಿಲು (ಮುಖ್ಯದ್ವಾರ) ದಾಟುತ್ತಿದ್ದಂತೆ ಕಣ್ಣಿಗೆ ಮೊದಲು ಬಿದ್ದಿದ್ದು ಅಗಾಧ ಜನಸ್ತೋಮ. ಉರಿವ ಬಿಸಿಲಲ್ಲಿ ಕಣ್ಣು ಕಿರಿದಾಗಿಸಿ ದಿಟ್ಟಿಸಿದರೆ ನಮ್ಮ ಪುಟ್ಟ ಪುಟ್ಟ ದೇಹಗಳ ಮುಂದೆ ಭವ್ಯವಾಗಿ ಅಕಾಶವೆ ಹಿನ್ನೆಲೆಯಾಗಿ ನಿಂತ ಅಪೂರ್ವ ಸ್ಮಾರಕ.. ಅದು ಅವರ್ಣನೀಯ, ಅಭೂತಪೂರ್ವ ಮತ್ತು ಅಪ್ರತಿಮ.. ಇಷ್ಟು ಮಾತ್ರ ಹೇಳಲು ಗೊತ್ತಾಗುತ್ತಿರುವುದೂ ನನ್ನ ಪುಣ್ಯ. ಮಂತ್ರಮುಗ್ಧತೆ ಮತ್ತು ಮೂಕವಿಸ್ಮಯ ಶಬ್ಧಾರ್ಥಗಳನ್ನು ಅವತ್ತು ಅನುಭವಿಸಿದೆ. ಇದರ ಬಗ್ಗೆ ಏನು ಬರೆದರೂ ಕಡಿಮೆ, ಏನು ಮಾತಾಡಿದರೂ ಕಡಿಮೆ. ಒಮ್ಮೆಯಾದರೂ ಅದರ ಮುಂದೆ ನಿಂತು ನೋಡಲೇಬೇಕಾದ ಅತ್ಯಪೂರ್ವ ಸ್ಮಾರಕ.
ಎಷ್ಟು ಚಂದ ಅನ್ನಿಸುವುದರ ಜೊತೆಗೆ, ಕಾಲ ಕೆಳಗಿನ ನೆಲ, ಸಮುದ್ರದಂಚಿನ ಮರಳತಡಿಯಂತೆ ಕುಸಿಯುವ ಅನುಭವವಾಯಿತು. ಇಷ್ಟು ಸೊಗಸಾದದ್ದನ್ನ ಯಾರೋ ಒಬ್ಬರು ಹೊಂದಿದರೆ, ಸುತ್ತೆಲ್ಲರಿಗೂ ಅದನ್ನ ಕಿತ್ತುಕೊಳ್ಳಲೇಬೇಕೆಂಬ ಹಂಬಲವಾಗಿದ್ದರಲ್ಲಿ, ಅಪ್ಪ/ಅಣ್ಣ, ಮಗನೆಂದು ನೋಡದೆ ದ್ವೇಷ ಸಾಧಿಸುವುದರಲ್ಲಿ, ಇಂತಹ ಇನ್ನೊಂದು ಇರಬಾರದು ಎಂಬ ದುರಾಶೆಯಲ್ಲಿ, ಇಂತಹದನ್ನೆ ಇನ್ನೊಂದು ಮಾಡಿದರೆ ಎಂಬ ಭಯದಲ್ಲಿ - ಶಕ್ತಿವಂತರು ಶಕ್ತಿಹೀನರ ಕೈ ಕತ್ತರಿಸಿದ್ದರಲ್ಲಿ, ಗಡಿಗಳ ಮೀರಿ ನಡೆದ ಹೊಡೆದಾಟದಲ್ಲಿ, ಯುದ್ಧದಲ್ಲಿ, ಬ್ರಿಟಿಶರ ಮ್ಯೂಸಿಯಮ್ಮುಗಳಲ್ಲಿ ಹೆಸರಿಲ್ಲದೆ ಅಡಗಿ ಕುಳಿತ ಅಮೂಲ್ಯ ಸಂಗ್ರಹವಾಗುವುದರಲ್ಲಿ, ಏನೇನೂ ಅಶ್ಚರ್ಯವಿಲ್ಲ ಎಂಬ ವಿಷಾದದ ನೆರಳು ನನ್ನನ್ನ ಅಲುಗಾಡಿಸಿಬಿಟ್ಟಿತು.
ನಾವು ಹೊಗಿದ್ದು ಅಲ್ಲಿನ ಬಿರುಬೇಸಿಗೆಯ ಸಮಯ, ಬರಿಕಾಲಲ್ಲೆ ಸ್ಮಾರಕ ಸುತ್ತಬೇಕು ಬೇರೆ, ಕಾಲೆಲ್ಲ ಹೆಚ್ಚೂಕಡಿಮೆ ಟೋಸ್ಟ್ ಮಾಡಿಟ್ಟ ಬ್ರೆಡ್ ನಂತಾಗಿತ್ತು. ಬಿಸಿಲು ಬೀಳುವಲ್ಲಿ ಸುಡುವ ಅಮೃತಶಿಲೆಯ ನೆಲ, ಸ್ಮಾರಕದ ನೆರಳು ಬಿದ್ದಲ್ಲೆಲ್ಲ ತಣ್ಣಗೆ ನದಿದಂಡೆಯಂತಿತ್ತು.
ಸ್ಮಾರಕ ಸುತ್ತುವಾಗ ಹಿಂಬದಿಯಲ್ಲಿ ಸೊರಗಿ ಹರಿವ ಯಮುನೆಯಿದ್ದಳು. ಸೊರಗಿದ ಹರಿವು ನಮ್ಮ ಸೊರಗಿರುವ ಸಾಮಾಜಿಕ ಬಧ್ಧತೆಯ ನಿರೂಪವಾಗಿ ಕಂಡರೆ, ಸೊರಗಿ ಹರಿವಾಗಲೂ ತಂಪು ಗಾಳಿಯನ್ನ ಮೆಲ್ಲಗೆ ಮುಟ್ಟಿಸಿ ಹೊಗುವ ಅವಳ ರೀತಿ, ಪ್ರಕೃತಿಯ ಹಿರಿತನಕ್ಕೆ ತಾಯ್ತನಕ್ಕೆ ಅನುರೂಪವಾಗಿ ಅಲೆಗಳಲ್ಲಿ ಹೊರಳುತ್ತಾ ಸಾಗಿದಂತಿತ್ತು.
ತಾಜಮಹಲ್ ನಮ್ಮೆಲ್ಲ ಕವಿಜನರ ಹಲವು ಭಾವಾಭಿವ್ಯಕ್ತಿಗಳಲ್ಲಿ ಪ್ರತಿಸಲವೂ ಹೊಸದಾಗಿ ಅರಳಿ ನಿಂತ ಭಾವಶಿಲ್ಪವೂ ಹೌದು.
ಈ ಅಭೂತಪೂರ್ವ ಶಿಲ್ಪರಚನೆಯ ಮುಂದೆ ಈಗಷ್ಟೆ ಕಣ್ಣುಬಿಡುತ್ತಿರುವ ನನಗೆ ಅನಿಸಿದ್ದು, ಇದು ಅನುಪಮ, ಅವರ್ಣನೀಯ. ಮಾತಿಲ್ಲದೆ ನಿಂತು ತಲೆಬಾಗುವುದಷ್ಟೆ ನಾನು ಸಲ್ಲಿಸಬಹುದಾದ ಗೌರವ - ಅತ್ಯಪೂರ್ವ ರಚನೆಗೆ, ಅದನ್ನು ಕಂಡರಿಸಿದ ಸಾವಿರಗಟ್ಟಳೆ ಶಿಲ್ಪಿಗಳಿಗೆ, ಉದ್ದೇಶ ಏನೆ ಇದ್ದರೂ ಮತ್ತು ಕೃತ್ಯಗಳು ಹೀನಾಯವಾಗಿದ್ದರೂ ಇಂತಹುದೊಂದು ಸೃಜನಶೀಲ ಮತ್ತು ಅಪೂರ್ವ ಕಲಾಕೃತಿಯ ರಚನೆಗೆ ಮನಸ್ಸು ಮಾಡಿದ ಮುಘಲ್ ಅಧಿಪತಿಯ ಆ ಒಂದು ನಿರ್ಧಾರದ ಗಳಿಗೆಗೆ.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
6 comments:
ಪ್ರಹ್ಲಾದ ಅಗಸನಕಟ್ಟೆ ಹಿಂದೊಮ್ಮೆ ವಿಜಯ ಕರ್ನಾಟಕದಲ್ಲಿ ಬರೆದಿದ್ದ 'ತಾಜ್ ಮಹಲ್' ಕತೆ ಯಾಕೆ ನೆನಪಾಯಿತೋ ಗೊತ್ತಿಲ್ಲ! :O
ಮಹಲನ್ನು ಬಣ್ಣಿಸುವ ವ್ಯರ್ಥ ಪ್ರಯತ್ನಕ್ಕೆ ಹೋಗದೇ ಹಾಗೇ ಬಿಟ್ಟದ್ದಕ್ಕಿಂತ ಒಳ್ಳೆಯ ಬಣ್ಣನೆ ಇನ್ನೇನಿದೆ ಅಲ್ವಾ?
ಸಿಂಧು ಅವರೇ,
ಹೇಗಿದೀರಾ?
ವಾಹ್ ತಾಜ್ ಅನ್ನಬಹುದೇನೋ ಅಷ್ಟೇ..
ನೀವು ಹೇಳಿದ ಹಾಗೆ ಅದೊಂದು ಮಂತ್ರಮುಗ್ಧತೆ..
ಅದರ ಮುಂದೆ ನಿಂತು ಪೋಟೋ ತೆಗೆಸಿಕೊಂಡಿರಬಹುದು ಅಲ್ವಾ..ತುಂಬಾ ಜನ ಪೋಟೋಗ್ರಾಫ್ರ್ಸ್ ಬಂದು ಪೀಡಿಸಿರಕೂಬಹುದು..ಅಲ್ವಾ?
ಸುಶ್ರುತ,
ಎಲ್ಲ ಕತೆ,ವರದಿ,ಸಿನಿಮಾ,ಕವಿತೆಗಳಲ್ಲಿ ಓದಿದ ತಾಜ್ ಮಹಲ್ ಗಳದ್ದೇ ಒಂದು ವಿಶಿಷ್ಟ ಅನುಭವವಾದರೆ, ನಾವೇ ಆ ಅಪರೂಪದ ಕಲಾಕೃತಿಯ ಮುಂದೆ ನಿಂತಾಗ ಆಗುವುದು ಅತಿವಿಶಿಷ್ಟ ಅನುಭವ.
ಶಿವ್,
ಇವತ್ತಷ್ಟೇ ನಿಮ್ ಬ್ಲಾಗ್ ನೋಡಿದೆ. ನಿಮ್ಮ ಬ್ಲಾಗೂರಿಗೆ ಮತ್ತೆ ನಿಮಗೆ ಸ್ವಾಗತ.. ಬ್ಲಾಗೀತೆ ಮತ್ತು ಬ್ಲಾಕತೆಗಳನ್ನು ಓದಲು ಕಾಯುತ್ತಿದ್ದೇನೆ.
ನಾನು ಆರಾಂ.
ಅಲ್ಲಿ ಹೋಗಿದ್ದು ನಾನು ಮತ್ತು ನನ್ನ ಗೆಳತಿ. ನಮ್ಮಿಬ್ಬರ ಬಳಿಯೂ ಕ್ಯಾಮೆರಾ ಇದ್ದಿದ್ದರಿಂದ ಯಾರೂ ನಮ್ಮನ್ನು ಕಾಡಲಿಲ್ಲ. ಹುಂ ಸಾಕಷ್ಟು ಫೋಟೊಗಳಿವೆ.
ಸಿಂಧು ಅವರೆ,
ಚೆನ್ನಾಗಿ ವರ್ಣಿಸಿದ್ದೀರಾ... ಹೋಗಿ ಬಂದಷ್ಟೆ ಖುಶಿ!!
Post a Comment