Thursday, August 2, 2007

ಕವಿಸಮಯ


ಕಣ್ಣಲ್ಲಿ
ಬೊಗಸೆಯಲ್ಲಿ
ಬೆರಳ ತುದಿಯ ಹಿಡಿತದಲ್ಲಿ,
ಅದುರು ತುಟಿಯ ಕೊಂಕಿನಲ್ಲಿ
ಮುಡಿಯ ತಬ್ಬಿದ ಸೆರಗಿನಲ್ಲಿ
ಹೊದ್ದ ಬಳುಕಿನಲ್ಲಿ
ಸೂಸಿ ಬಂದ ಭಾವದಲ್ಲಿ
ಹಿಡಿದು ನಿಂತ ಪಾತ್ರೆಯಲ್ಲಿ..
ಈಗಷ್ಟೇ ಕರೆದ
ಕವಿತೆಯ ನೊರೆಹಾಲು...




ಹಾಲ್ನೊರೆಯ ಸೂಸಿದ್ದು
ಅವಳಾ?!
ಬಿಟ್ಟರೆ ಹರಿವ ಅವಳ
ಹಿಡಿದಿಟ್ಟ
ಪ್ರಬಾಕರನ ಕ್ಯಾಮೆರ ಕಣ್ಣಾ?!


ನೋಡುಗಳು ನಾನು
ಬೆರಗಲಿ ನೋಡುವುದೆ ಸೊಬಗು
ಕವಿಕಣ್ಣು
ಕಂಡು ಚಿತ್ರಿಸಿಹ ಕವಿತೆಯ
ಬೆಡಗಿಗೆ
ಮಾತಿಲ್ಲದ ತಲೆಬಾಗು.


ಫೋಟೋ ಕೃಪೆ - ಪ್ರಭು - floatingcreeper@gmail.com

9 comments:

Anonymous said...

awesome - kavithe & photo

VENU VINOD said...

ಪಾತ್ರೆಯಲ್ಲಿ..
ಈಗಷ್ಟೇ ಕರೆದ
ಕವಿತೆಯ ನೊರೆಹಾಲು...
ವ್ಹಾ ವ್ಹಾ. ಎಂತಹ ಸುಮಧುರ ಸಾಲು...

Shree said...

ಚೆನ್ನಾಗಿದೆ. ಆದರೆ ನೋಡುತ್ತಾ ನೋಡುತ್ತಾ ನನಗನಿಸಿದ್ದು.. ಇದನ್ನು ಜಾನಪದ ಶೈಲಿಯಲ್ಲಿ ಅಥವ ಹಳ್ಳಿಭಾಷೆಯಲ್ಲಿ ಬರೆದರೆ ಆ ಸೊಗಡೇ ಬೇರೆ... ಚಿತ್ರಕ್ಕೆ ಆ ಫೀಲ್ ಇದೆ.

ರಾಘವೇಂದ್ರ ಪ್ರಸಾದ್ ಪಿ said...

excelent photo and its description by you ..reaaly great ....

ಸಿಂಧು sindhu said...

ಪೂರ್ಣಿಮಾ,

ಕವಿತೆಯ ನೊರೆಹಾಲು ಸೂಸುತ್ತಿರುವುದು ಫೋಟೋನೇ..

ವೇಣು
:)

ಶ್ರೀ,
ಹೂಂ, ಒಳ್ಳೆಯ ಸಲಹೆ. ನನಗೆ ಆ ಚಿತ್ರ ನೋಡಿದ ಕೂಡಲೇ ಅನಿಸಿದ್ದು ಮತ್ತು ಶ್ರೀ ಆ ಪಾತ್ರೆಯಿಂದ ಸೂಸಿ ಬಂದಿದ್ದು ಕವಿತೆಯ ನೊರೆಹಾಲೇ..!

ಸಿಂಧು sindhu said...

ರಾಘವೇಂದ್ರ ಪ್ರಸಾದ್,

ಧನ್ಯವಾದ.
ಫೋಟೊ ತೆಗೆದಿದ್ದು ಪ್ರಭು ಅಂತ ನನ್ನ ಸ್ನೇಹಿತರು. floatingcreeper@gmail.com

ಬರಹದ ಸತ್ವವೇ ಆ ಫೋಟೊ.

Discover Kaveri said...

ಸಿ೦ಧು,

ನಿಮ್ಮ ಕವಿತೆ ಯಲ್ಲಿ "ತಲೆಬಾಗು" ಅ೦ತಾ ವಿಶೇಷವಾಗಿ ಕೇಳುವುದು ನ್ಯಾಯವೇ ??
ಈ ಗೀಳು ಡಿ.ವಿ.ಜಿ ಯವರನ್ನು ಬಿಡಲಿಲ್ಲಾ , ತಮ್ಮ ಒ೦ದು ಕವಿತೆಯಲ್ಲಿ ,

ಜೀವ ಜಡರೂಪ ಪ್ರಪಂಚವನದಾವುದೋ ಆವರಿಸಿಕೊಂಡುಂ ಒಳನೆರೆದುಮಿಹುದಂತೆ
ಭಾವಕೊಳಪಡದಂತೆ ಅಳತೆಗಳವಡದಂತೆ ಆ ವಿಶೇಷಕೆ ಮಣಿಯೋ - ಮಂಕುತಿಮ್ಮ

ಸೌಂದರ್ಯವನ್ನು ಗುರುತಿಸದ ವಿವೇಕ, ನಗಲು ತಿಳಿಯದ ಸಿದ್ಧಾಂತ ಜ್ಞಾನ, ಮಕ್ಕಳ ಎದುರಿಗೆ ತಲೆ ಬಾಗಲು ತಿಳಿಯದ ನಡತೆ ಇವುಗಳಿಂದ ನನ್ನನ್ನು ಕಾಪಾಡು- ಖಲೀಲ್‌ ಗಿಬ್ರಾನ್‌

ಇವರೇನೋ ಓ.ಕೆ. ಆದರೆ ನಿಮ್ಮ "ತಲೆ ಬಾಗು" ಕಮಾ೦ಡ್ ಯಾರಿಗೆ ?

ಕವಿತೆ ಚೆನ್ನಾಗಿದ್ರೇ ತನ್ನಷ್ಟಕ್ಕೇ ತಾನೇ ತಲೆ ಅಲ್ಲಾಡೋದಿಲ್ವೇನು ??
ಸಧ್ಯ ತಲೆ ಮೇಲಿನ ಕೂದಲು ಕಿತ್ತು ಕೊಳ್ಳಿ ಅನ್ನಲಿಲ್ಲಾ.

"ಕವಿಕಣ್ಣು ಕಂಡು ಚಿತ್ರಿಸಿಹ ಕವಿತೆಯ ಬೆಡಗಿಗೆ ಮಾತಿಲ್ಲದ .."
ಎನ್ರೀ ನಿಮ್ಮನ್ನೇ ನೀವು ಕವಿತ್ರಿ ಅ೦ತಾ ಕರ್ಕೊ೦ಡು , ನಿಮ್ಮ ಕಣ್ಣಿಗೆ "ಕವಿಕಣ್ಣು " ಬಿರುದುನೂ ಕೊಟ್ಟ್ ಕೊ೦ಡು -
"ತಲೆ ಬಾಗು ಮಾತಿಲ್ಲದೇ " ಅ೦ತಾ ಆದೇಶ ಬೇರೆ ಕೊಡ್ತಾಯಿದ್ದೀರಾ . ಇದು ನ್ಯಾಯವೇ ??
ಈ ಆದೇಶವನ್ನು ಕವಿತೆ ಅನ್ನುವುದು ಹೇಗೆ ?
ಮೊದಲನೇ ಪ್ಯಾರ ಪರಿವಾಗಿಲ್ಲಾ...ಮಿಕ್ಕ ಪ್ಯಾರ ಅರ್ಥ ಮಾಡ್ಕೋಳೋಕ್ಕೆ ಸ೦ಪದಕ್ಕೇ ಬರಬೇಕು.
ಅದೇನು ಬೊ೦ಬಾಟ್ , ಸಕತ್ ಅನ್ನುವವರು ಈ ಪ್ರಶ್ನೆ ಉತ್ತರಿಸಲಿ.

ಈ ಕವಿತೆ ತೀರಾ ವ್ಯಕ್ತಿತ್ತ್ವದ ಮೇಲೆ ನಿ೦ತಿಲ್ವೇನು ??
ತಮ್ಮನ್ನು ತಾವೇ ಹೊಗಳಿ ಕೊಳ್ಳುವುದು ("ಕವಿತೆಯ ಬೆಡಗಿಗೆ" ) ಕವಿತೆ ಅನ್ನುವುದಾದರೆ - ನಮ್ಮ ರಾಜಕಾರಣಿಗಳೆಲ್ಲಾ ಕವಿಗಳೇ.
ಕವಿತೆ ಅ೦ದರೆ ಏನು ??
ಬೇ೦ದ್ರೆ ಯವರು ಹಲವಾರು ವ್ಯಕ್ತಿಗಳ ಮೇಲೆ ಕಾವ್ಯ ಬರೆದಿದ್ದಾರೆ, ಆದರೆ ಅಲ್ಲಿ ಕಾಣುವುದು ವ್ಯಕ್ತಿ ಯನ್ನು ಮೀರಿ ಬಣ್ಣಿಸುವ ಕವಿತೆ.

"ಹಾಲ್ನೊರೆಯ ಸೂಸಿದ್ದು ಅವಳಾ?!
ಬಿಟ್ಟರೆ ಹರಿವ ಅವಳ ಹಿಡಿದಿಟ್ಟ
ಪ್ರಬಾಕರನ ಕ್ಯಾಮೆರ ಕಣ್ಣಾ?!"

"ನೋಡುಗಳು ನಾನು
ಬೆರಗಲಿ ನೋಡುವುದೆ ಸೊಬಗು
ಕವಿಕಣ್ಣು ಕಂಡು ಚಿತ್ರಿಸಿಹ ಕವಿತೆಯ
ಬೆಡಗಿಗೆ, ಮಾತಿಲ್ಲದ ತಲೆಬಾಗು."

"ನೋಡುಗಳು ನಾನು ಬೆರಗಲಿ ನೋಡುವುದೆ ಸೊಬಗು".
ಈ ವಾಕ್ಯದಲ್ಲಿ ವ್ಯಾಕರಣ ಸರಿಯಾಗಿದೆಯೇ ಅನ್ನುವ ಅನುಮಾನ.

ಫೋಟೋ ಚೆನ್ನಾಗೈತೀ. ಅಲ್ಲಾ ಅಷ್ಟು ಚೆನ್ನಾಗಿ ಬರಿತ್ತಿದ್ದವರು, ಹೀಗೆ ಬರೆದರಲ್ಲಾ ಅದಕ್ಕೆ ಬೇಜಾರು.
ಕೋಪಿಸ್ಕೋಬೇಡಿ ತಲೆ ಬಾಗದಿದ್ದಕೆ.

ಸಿಂಧು sindhu said...

ಮುರಳಿ,

ನನ್ನ ಸರಳ ಕನ್ನಡ ಕೊಂಚ ಕಾಂಪ್ಲೆಕ್ಸಾಗಿ ವ್ಯಕ್ತವಾಗಿರೋದ್ರಿಂದ ಹೀಗಾಗಿದೆ ಅಂತ ನನ್ನ ಅನಿಸಿಕೆ. ಕೋಪ ಖಂಡಿತಾ ಇಲ್ಲ.

ಮೊದಲಿಗೆ ಕೊನೆಯ ವಾಕ್ಯದ ಬಗ್ಗೆ ಬರೆಯುತ್ತೇನೆ.
'ಕವಿಕಣ್ಣು ಕಂಡು ಚಿತ್ರಿಸಿಹ ಕವಿತೆಯ ಬೆಡಗಿಗೆ ಮಾತಿಲ್ಲದ ತಲೆಬಾಗು.."
ಇಲ್ಲಿ ಕವಿಕಣ್ಣು ಶ್ರೀಯುತ ಪ್ರಭು ಅವರ ಕ್ಯಾಮೆರಾ, ನೋಡುವ ನನ್ನದಲ್ಲ. ಚಿತ್ರಿಸಿಹ ಕವಿತೆ ಎಂದರೆ ದೃಶ್ಯಕಾವ್ಯ, ನಾನು ಬರೆದ ಸಾಲುಗಳಲ್ಲ.
ಇಂತಹ ಕವಿಕಣ್ಣು ಚಿತ್ರಿಸಿಹ ದೃಶ್ಯಕಾವ್ಯಕ್ಕೆ -- ನನ್ನ ಮಾತಿಲ್ಲದ 'ತಲೆಬಾಗು' ವಿನ ಗೌರವ. ಅಷ್ಟೇ ವಿನಹ ಇದು ಓದುವವರಿಗೆ ನನ್ನ ಆದೇಶ ಸಲಹೆ ಯಾವುದೂ ಅಲ್ಲ. ಎಂದಿಗೂ ಇಲ್ಲ.

ನೋಡುಗಳು ನಾನು, ಬೆರಗಲಿ ನೋಡುವುದೆ ಸೊಬಗು..
ಇದರರ್ಥ - ನೋಡುವ ನಾನು ಮಾತಾಡುವುದು ಬೇಡಾ, ಬೆರಗಿನಲ್ಲಿ ನೋಡಿದರಷ್ಟೇ ಚೆನ್ನ ಎಂಬುದು. ವ್ಯಾಕರಣ ನನಗೆ ಭೂಮಿತಾಯಾಣೆ. ಗೊತ್ತಿಲ್ಲ. ಮನೆಯಲ್ಲಿ ಮಾತಾಡುವ ಕನ್ನಡ, ಪ್ರೀತಿಯಿಂದ ಓದಿದ ಪುಸ್ತಕಗಳ ಕನ್ನಡ ಅಷ್ಟೇ ಬರುವುದು. ತಪ್ಪಾಗಿದ್ದರೆ ತಿದ್ದಿ, ಕ್ಷಮಿಸಿ.

ಹಾಲ್ನೊರೆಯ ಸೂಸಿದ್ದು ಅವಳಾ
ಬಿಟ್ಟರೆ ಹರಿವ ಅವಳ ಹಿಡಿದಿಟ್ಟ ಪ್ರಬಾಕರನ ಕ್ಯಾಮೆರಾ ಕಣ್ಣಾ?

ಇದರ ಅರ್ಥ - ಫೋಟೊ ಎಷ್ಟು ಸುಂದರವಾಗಿ ಬಂದಿದೆ. ಕಾರಣ ಸಬ್ಜೆಕ್ಟಾ ಅಥವಾ ಫೋಟೊ ತೆಗೆದವರ ಫ್ರೇಮಿಂಗ್, ಲೈಟಿಂಗ್, ಕ್ಯಾಪ್ಚರಿಂಗಾ ಅಂತ..
ಇಲ್ಲಿ ಎರಡು ಅರ್ಥ ಯಾರಿಗಾದ್ರೂ ಅನ್ನಿಸಬಹುದಾದರೆ ಅದು ಬಹುಶಃ ಬರೆದ ನನಗೆ ಅವಳು ಮತ್ತು ಅವನು ಇಬ್ಬರೂ ತುಂಬ ಹತ್ತಿರದ ಪರಿಚಯ. ಅವರ ವ್ಯಕ್ತಿತ್ವ ಮತ್ತು ಪ್ರತಿಭೆ, ಎರಡೇ ಸಾಲಿನಲ್ಲಿ ಅಡಗಿ ಹೋಗಿದೆ.

ಫೋಟೋ ಚೆನ್ನಾಗಿರುವ ಎಲ್ಲ ಕ್ರೆಡಿಟ್ ಆ poeticvision ಸೃಷ್ಟಿಸಿದ ಪ್ರಭು ಅವರಿಗೆ ಹೋಗುತ್ತದೆ. (ಅವಳು ಎಷ್ಟೇ ಅದ್ಭುತವಾಗಿ ಆ ಫ್ರೇಮಿನಲ್ಲಿ ಅರಳಿದ್ದರೂ)
ನಿಮಗೆ ಅರ್ಥವಾಗಿದೆ ಅನ್ನಿಸಿದ ಮೊದಲಿನ ಪ್ಯಾರಾ ಏನಾದರೂ ಚೆನ್ನಾಗಿದೆ ಅನ್ನಿಸಿದರೆ ಅದರ ಪೂರ್ಣ ಕ್ರೆಡಿಟ್ ಫೋಟೋಕ್ಕೇ.
ನಿಮ್ಮ ಗೋಜಲು ತಿಳಿಯಾಗಿದ್ದರೆ ಸಂತೋಷ. ಇಲ್ಲವಾದರೆ ತಿಳಿಸಿ..ಮಾತಾಡೋಣ.

ಒಂದು ನೇರರೇಖೆಯನ್ನ ರೇಖೆಯನ್ನಾಗಿಯೂ ನೋಡಬಹುದು. ಅಸಂಖ್ಯಾತ ಬಿಂದುಗಳ ಸಮೂಹವಾಗಿಯೂ ನೋಡಬಹುದು. ಅದು ನೋಡುಗರ ವೈಶಿಷ್ಟ್ಯ.

ಧನ್ಯವಾದಗಳು

Pramod P T said...

ಸಿಂಧು,
ಹೇಗಿದ್ದೀರ?
ನಿಮಗೆನೂ ಅಭ್ಯಂತರ ಇಲ್ಲಾಂದ್ರೆ ಆ ಹುಡುಗಿಯ ಚಿತ್ರವನ್ನ ಬಳಸಿಕೊಳ್ಳಲಾ?
ಕವನ ಇನ್ನೂ ಸೊಗಸು!