Wednesday, August 1, 2007

ಒಂದು ಮುರಿದು ಬಿದ್ದ ದೋಣಿ, ದಕ್ಕಲಾಗದ ನೋಟ ಮತ್ತು ಹೊರಳು ದಾರಿ..

ಯಾಕೆ ಎಲ್ಲ ಸಲವೂ ನಾನು ನಿನ್ನ ನೆನಪಿಸಿಕೊಂಡರೆ, ಇಷ್ಟು ವರ್ಷದ ನಂತರವೂ, ಅದೇ ಅಸಹನೆ? ನನಗೆ ಬರುವ ಸಿಟ್ಟು ಯಾರ ಮೇಲೆ, ಬದುಕಿನ ಯಾನಕ್ಕೆ ಲಗಾಟಿ ಹೊಡೆದು ಬಿದ್ದು ಹೋಗುವಂತ ಹಾಯಿ ಕಟ್ಟಿದ ನಿನ್ನ ಮೇಲಾ? ಅಥವಾ ಅಂತದೊಂದು ಹಾಯಿಯನ್ನು ನೀನು ಕಟ್ಟುವಾಗ ಸುಮ್ಮನೆ ನಸುನಗುತ್ತ ಒಪ್ಪಿಕೊಂಡು, ಹರಿವಿಗೆ ಬಿದ್ದ ನನ್ನ ಮೇಲಾ?
ಈ ವ್ಯತ್ಯಾಸದ ನಡುವಣ ಗೆರೆ ತುಂಬ ಸೂಕ್ಷ್ಮ. ಇದು ನಿನಗೆ ನನಗಿಂತ ಚೆನ್ನಾಗಿ ಗೊತ್ತು. ಮತ್ತು ಈ ಅರಿವನ್ನೇ ಉಪಯೋಗಿಸಿ, ಇದು ಗೊತ್ತಾಗದ ನನ್ನಂತ ಬೆಪ್ಪಳನ್ನು ಕೆಲದಿನಗಳ ಕಾಲ ಕಣ್ಣೀರ ಪ್ರವಾಹಕ್ಕೊಡ್ಡಿದೆ, ತಪ್ಪಿತಸ್ಥಳು ನಾನು ಮಾತ್ರ ಎಂಬ ಭಾವನೆಗಳ ಬಂಡೆಗಳಿಗೆ ನನ್ನ ಭಾವದ ದೋಣಿ ಮತ್ತೆ ಮತ್ತೆ ಡಿಕ್ಕಿ ಹೊಡೆದು, ಹಣ್ಣಾಗಿ ಹೋದೆ. ಗೊತ್ತಿದ್ದ ನೀನು, ಹಿಮ್ಮುಖ ಹರಿಗೋಲು ಹಾಕಿ ಬೇರೆ ಸೆಳವಲ್ಲಿ ಹರಿದು ಹೋಗುವಾಗಲೂ, ಹಣ್ಣಾಗಿ ಕುಳಿತ ನಾನು ಕುರುಡೂ ಆಗಿದ್ದೆ.

ನೀನು ಕೆಟ್ಟವನಲ್ಲ, ಗೊತ್ತು ನನಗೆ. ಆದರೆ ನೀನು ಚಾಣಾಕ್ಷ ಎಂಬ ತಿಳಿವಳಿಕೆ ಬಂದಾಗಿನಿಂದ, ಎಲ್ಲ ಸಂಬಂಧಗಳನ್ನೂ, ಭಾವನೆಗಳನ್ನೂ ವ್ಯವಹಾರಬದ್ಧತೆಯಲ್ಲಿ ನೇಯ್ದು ಲಾಭಾಂಶವನ್ನು ಹುಶಾರಿಯಿಂದ ಬದಿಗಿಟ್ಟು ನಿನ್ನ ಬ್ಯಾಲೆನ್ಸ್ ಹೆಚ್ಚು ಮಾಡಿಕೊಳ್ಳುತ್ತೀಯ, ಮತ್ತು ಅದಕ್ಕೆ ಎಲ್ಲ ಒಳದಾರಿಗಳೂ ಗೊತ್ತು ನಿನಗೆ ಅಂತ ಗೊತ್ತಾದಾಗಿನಿಂದ ನಾನು ದಿಕ್ಕೆಟ್ಟು ಹೋದೆ. ನಮ್ಮ ಯಾನದಲ್ಲಿ ಎದುರು ಅಲೆಗಳೇ ಉಳಿದು, ಒಬ್ಬೊಬ್ಬರೂ ಒಂದು ದಿಕ್ಕಿಗೆ ಕೈಗೋಲು ನಡೆಸಿ, ದಾರಿ ಕಷ್ಟವಾಯಿತು. ಗಳಿಸಿಕೊಳ್ಳುವ ಪಿತೂರಿಯ ಈಟಿಗೆ ಸಿಕ್ಕಿ ಹಾಯಿ ಲಗಾಟಿ ಹೊಡೆದು ಹರಿದೇ ಹೋಯಿತು. ಅಪನಂಬಿಕೆಗಳ ಕಲ್ಲು ಹರಿವಲ್ಲಿ ದೋಣಿ ಅಲೆದಾಡಿ, ತೀರವೆಂದು ಕರೆಯಬಹುದಾದಲ್ಲಿಗೆ ಬಂದು ನಿಂತಾಗ, ನಮ್ಮಿಬ್ಬರ ದಾರಿ ಒಡೆದು ಹೋಗಿ, ಇವತ್ತು ನಾವು ಅಪರಿಚಿತರಿಗಿಂತ ಹೆಚ್ಚು ದೂರ.

ಈ ಬೀದಿಯಲ್ಲಿ ನಡೆದರೆ ನಿನಗೆ ಸಿಗಬಹುದು ಎಂಬ ಕಾರಣಕ್ಕೆ, ನಾನು ಅಲ್ಲಿಗೆ ಹೋಗುವುದೇ ಇಲ್ಲ. ನೀನು ಸಡನ್ ಆಗಿ ಎದ್ರು ಬಂದರೆ ನನ್ನ ಮುಖದಲ್ಲರಳುವುದು ನಗುವೇ. ಆದರೆ, ನೀನು ಸಡನ್ ಆಗಿ ಎದುರು ಬಂದು ನಿಲ್ಲುವ ಒಂದರೆ ಕ್ಷಣ ಮುಂಚೆ ನೀನು ಸಿಗಬಹುದು ಅಂತ ಅನ್ನಿಸಿದರೆ, ತಕ್ಷಣ ತಿರುಗಿ ಬೇರೆ ದಾರಿಯಲ್ಲಿ ತಾನೇ ತಾನಾಗಿ ನಡೆದು ಹೋಗಿಬಿಡುತ್ತೇನೆ.. ನಿನ್ನ ಬಗ್ಗೆ ಸಿಟ್ಟಿಲ್ಲ, ಆದರೆ ನಿನ್ನನ್ನು ಸಹಿಸುವ ಮನಸ್ಥಿತಿಯಲ್ಲಿ ನಾನಿಲ್ಲ. ಬದಲಾವಣೆಯೇ ನನ್ನ ಬದುಕು.

ನಿನ್ನ ಬಗ್ಗೆ ಏನೇ ಬರೆದರೂ ನಾನ್ಹೀಗೆ ಬಿರುನುಡಿಯನ್ನೇ ಯಾಕೆ ಬರೆಯಬೇಕು ಅಂತ ಕೇಳುತ್ತೀ ನೀನು.. ಆದರೆ ಎಷ್ಟೇ ಇಷ್ಟವಿದ್ದರೂ ಒಂದರೆ ಕ್ಷಣದ ನಲ್ನುಡಿಯಾಡಿ, ನಿನ್ನ ಮನದಲ್ಲಿ ಹೊಸ ಆಸೆ ಬೀಜಕ್ಕೆ ನೀರೆರೆಯುವ ಕ್ಷಮೆ, ದಾರ್ಷ್ಟ್ಯ, ಮತ್ತು ಸಹನೆ ನನ್ನಲ್ಲಿಲ್ಲ.
ನಿನಗರಿವಾಗದೆ ಇಲ್ಲೆ ನಿಂತು ಮೌನವಾಗಿ, ನಿನಗೊಂದು ಸಂತಸಮಯ ದಿನ, ಹಾಯಾದ ಬದುಕನ್ನು ಆಶಿಸುವುದಷ್ಟೇ ನನ್ನ ಸಾಮರ್ಥ್ಯ ಮತ್ತು ಮಿತಿ.

ನಿನಗೆ ಚಂದದೊಂದು ಹೊಸಾ ಬದುಕಿರಲಿ
ಕನಸುಗಳ ನನಸಾಗಿಸುವ ಶಕ್ತಿಯಿರಲಿ,
ನನ್ನ ನೆನಪು ಮರೆತುಹೋಗಲಿ,
ರಾತ್ರಿ ಮಲ್ಗಿದ ಕೂಡಲೆ ಒಳ್ಳೆ ನಿದ್ದೆ ಬರಲಿ
ಮತ್ತು ಒಳ್ಳೆಯದಾಗಲಿ.

7 comments:

Ranju said...

ಕೊನೆಯ ನಾಲ್ಕು ಸಾಲುಗಳನ್ನ ಸರಿಯಾಗಿ ಓದೊದಕ್ಕೆ ಆಗಿಲ್ಲಾ ಕಣ್ಣೆಲ್ಲಾ ಮಂಜು ಮಂಜು.

ಇದು ಮೋಸನಾ? ಬದುಕುವ ಕಲೆಯಾ? ಆತನದು.

ಇದರ ಬಗ್ಗೆ ತುಂಬಾ ಬರಿಯ ಬೇಕು ಅನ್ನಿಸ್ತಾ ಇದೆ ಆದರು ಬರೆಯಲಾರೆ.

Unknown said...

ಕೊನೆಯಲ್ಲಿ ಇರುವ ನಿಮ್ಮ ಹಾರೈಕೆ ನೀವು ಈ ಯಾನದಲ್ಲಿ ಬೇಡದೇ ಗಳಿಸಿದ ಕಠೋರತೆಗೆ ಹಿಡಿದ ಕನ್ನಡಿಯಂತಿದೆ.

Anonymous said...

ಸಿಂಧು .....

ಉಮಾಶಂಕರ್ ಯು. said...
This comment has been removed by the author.
Shree said...

ನೋವನ್ನು ಪೂಜಿಸಿದಷ್ಟು ಅದು ನೋಯುವುದು ಹೆಚ್ಚು. ನೋವಿಗೆ ಒಂದು SMILE ಕೊಟ್ಟು, ನಿನ್ ಪಾಡಿಗೆ ನೀನಿರು ಅಂತಂದ್ರೆ, ಅದು ಹಾಗೇ ಇದ್ಬಿಡ್ತದೆ... ಹೇಳಿದ ಹಾಗೆ ಕೇಳ್ತದೆ... :)

Anonymous said...

ಸಿಂಧು,

ಈ ಲೇಖನವನ್ನು ನಾನು ಎಷ್ಟು ಸಾರಿ ಓದಿದೆನೋ ನನಗೇ ನೆನಪಿಲ್ಲ. ಪ್ರೇಮ ವೈಫಲ್ಯವಾದ ಪ್ರತಿಯೊಬ್ಬರ ಮನಸ್ಸಿನ ಸ್ಪಷ್ಟ ಚಿತ್ರಣ.

ಆದರೆ ನನಗೂ ಈ ಕಥಾನಾಯಕಿ ಒಂದೆ ಒಂದು ವ್ಯತ್ಯಾಸವಿದೆ.
ಅದು ಇಲ್ಲಿ ಅವನು ಬರುವ ಬೀದಿಯಲ್ಲಿ ಆಕೆ ಹೋಗುವುದೇ ಇಲ್ಲಾ. ಆದರೆ ನಾನು ಅವನು ಬರುವ ದಾರಿ ಯಲ್ಲಿ ಕಾದು ನಿಲ್ಲ ಬೇಕೆನಿಸುತ್ತದೆ. ಮೆಜೆಸ್ಟಿಕ್ ಕಡೆಯಿಂದ ಬರುವ ದಾರಿ ದೂರವಾದರು ಅವನು ಆ ದಾರಿಯಲ್ಲಿ ಓಡಾಡುತ್ತಾನಲ್ಲಾ ಅನ್ನುವ ಕಾರಣಕ್ಕೆ ಆ ದಾರಿಯಲ್ಲಿ ಬರುತ್ತೆನೆ. ಮುಂದೆ ಸಿಗುವ ಎಲ್ಲಾ ಸಿಗ್ನಲ್ ಟ್ರಾಫಿಕ್ ಗಳಲ್ಲು ಅವನನ್ನು ಹುಡುಕುತ್ತೇನೆ. ದಿನವೆಲ್ಲಾ ಲಕ್ಷಾಂತರ ಮಂದಿ ಸಿಗುತ್ತಾರೆ ಅವರಲ್ಲಿ ಇವನು ಸಿಗಬಾರದಾ ಎಂದು ಚಡಪಡಿಸುತ್ತೇನೆ. ಯಾಕೆ ಇತರ ಪ್ರೀತಿ ಯಾಕೆ ಹೀಗೆ ಮಾಡಿಸುತ್ತಿದೆ ತಿಳಿಯುತ್ತಿಲ್ಲಾ.

ನಂಗೂ ಗೊತ್ತು ಇವತ್ತಿನ ಈ ತೀವ್ರತೆ ನಾಳೆ ಇರಲಾರದು ಕಾಲ ಎಲ್ಲವನ್ನು ಮರೆಸುತ್ತದೆ. ಆದರೆ ಅವನನ್ನು ಅವನ ಸುಳ್ಳು ಪ್ರೇಮವನ್ನು. ಹ್ಮ್ ಗೊತ್ತಿಲ್ಲಾ.

ಅವನಿಗೆ ಬದುಕು ಸುಂದರವಾಗಿರಲಿ,
ನನಗೆ ಮೋಸ ಮಾಡಿದ ಪಾಪ ಪ್ರಜ್ನೆ ಎಂದು ಕಾಡದಿರಲಿ.
ಅವನ ಪ್ರೇಮ ಅವನಿಗೆ ದಕ್ಕಲಿ. ಅವನ ಎಲ್ಲಾ ಕನಸು (specially ಅಂಡೊಮಾನ್ ಗೆ ಹೋಗುವ ಕನಸು) ನನಸಾಗಲಿ
ನಾನು ಅವನು ಕಳೆದ ಆ ದಿನಗಳು ಅವನಿಗೆ ನೆನಪಾಗದಿರಲಿ.
ನನ್ನವನು ನೂರು ವರ್ಷ ಚನ್ನಾಗಿರಲಿ.

ನಿಮ್ಮ ಬ್ಲಾಗಿನಲ್ಲಿ ಅಗತ್ಯಕ್ಕಿಂತ ಹೆಚ್ಚಿಗೆ ಕಾಂಮೆಂಟಿಸಿದ್ದಕ್ಕೆ ಕ್ಷಮೆ ಇರಲೆ. ನನ್ನ ಭಾವನೆಗಳನ್ನ ಬಚ್ಚಿಡಲಾರದೆ ತಾಳಲಾರದೆ ಬರೆದಿರುವೆ.
ಅವನ ಮೋಸದಿಂದ ಪ್ರೀತಿಯ ಇರುವನ್ನ ಅದರ ಹರಿವನ್ನ ನಂಬಲಾಗುತ್ತಿಲ್ಲಾ.
ಇರಲಿ ಎಲ್ಲಾ ಸುಖಾಂತ್ಯವಾಗುವುದೆಂದು ಕಾಯುತ್ತಿದ್ದೇನೆ.

ಸಿಂಧು sindhu said...

ರಂಜು,

ಯಾರದ್ದು ಮೋಸ, ಯಾವುದು ಬದುಕುವ ಕಲೆ ಅಂತ ನಿಂತ ನಿಲುವಿನಲ್ಲಿ ಅಥವಾ ಒಂದೇ ಬಿಂದುವಿನಲ್ಲಿ ನಿರ್ಧರಿಸಲಾಗುವುದಿಲ್ಲ. ಇದು ನನ್ನ ಅಭಿಪ್ರಾಯ. ಅವನು ಮಾಡಿದ್ದು ಮೋಸವಲ್ಲ. ಚಾಣಾಕ್ಷತೆ ಮತ್ತು ಮೂರ್ಖತನ. ಒಬ್ಬರಿಗೆ ಬದುಕು ನವಿರು ಭಾವನೆಗಳ ಸಂಬಂಧ ಮನುಷ್ಯತ್ವದ ಒಟ್ಟಂದವಾದರೆ, ಇನ್ನೊಬ್ಬರಿಗೆ ಬದುಕು ಸೌಕರ್ಯ, ಅನುಕೂಲ, ಸ್ಥಿತಿವಂತಿಕೆಯ ಮೊತ್ತವಾಗಿ ತೋರುತ್ತದೆ. ಇಬ್ಬರೂ ತಮ್ಮ ತಮ್ಮ ಸ್ವಭಾವಕ್ಕೆ ಬದ್ದರಾಗಿ ನಡೆದರೆ, ದಾರಿ ಕವಲೊಡೆಯುತ್ತದೆ ಅಷ್ಟೇ. ಆ ಕೊನೆಯ ಸಾಲು ಬರೆದಾಗ ನನಗೂ ಮನಸಿನ ತುಂಬ ಹೇಳಲಾಗದ ನೋವಷ್ಟೇ ಇದ್ದಿದ್ದು.

ಪರೇಶ್,
ಕಠೋರತೆ!.. ಹೂವು ಮೃದುವಾಗಿ ಅರಳುವುದು ಸಹಜ, ವಾಸ್ತವ ಬೇಲಿ ಹಾಕಲು/ಮುಳ್ಳು ಸುತ್ತಲು ಕಲಿಸುತ್ತದೆ.

ಪೂರ್ಣಿಮಾ
...

ಶ್ರೀ,
ನಿಮ್ಮ ಮಾತು ಅಕ್ಷರಶಃ ನಿಜ. ಕೆಲವು ನೋವಿಗೆ ಪೂಜೆಯಿಲ್ಲದಿದ್ದರೂ ತಿಥಿಯಿರುತ್ತದೆ. ಇದು ಅಂತಹ ಒಂದು ಸಂದರ್ಭದಲ್ಲಿ ಬರೆದ ಬರಹ.. :(

ನೋವಿಗೇ ಸ್ಮೈಲ್ ಕೊಡುವ ಶಕ್ತಿ ಬರಲಿ ನನಗೆ ಅಂತ ಆಸೆ.

ಅನಾಮಿಕ ಗೆಳತಿ,
ನಿಮ್ಮದು ಅಗತ್ಯಕ್ಕಿಂತ ಹೆಚ್ಚಿನ ಕಾಮೆಂಟ್ ಅಲ್ಲ. ಒಂದು ಬರಹವನ್ನು ಓದಿದಾಗ ಅದು ನಮ್ಮಲ್ಲಿ ಹಲವಾರು ಭಾವತರಂಗಗಳನ್ನೇಳಿಸುತ್ತದೆ. ನೆನಪುಗಳು, ಕನಸು, ಅಚ್ಚರಿ, ಖುಷಿ, ವಿಷಾದ, ತಿಳಿನಗು ಯಾವುದೂ ಹುಟ್ಟಬಹುದು.

ನನ್ನ ಬರಹದಿಂದ ನಿಮ್ಮ ಯಾತನೆಯನ್ನು ನಾನು ನೆನಪಿಸಿದ್ದರೆ ಕ್ಷಮಿಸಿ. ಅವನು ನನಗೆ ಮಾಡಿದ್ದು ಮೋಸವಲ್ಲ. ಮತ್ತು ನಿಮಗಾದ ಅನ್ಯಾಯ ಮೋಸವೇ ಆಗಿಲ್ಲದಿರಬಹುದು. ಭಾವೋದ್ವೇಗದ ಗಳಿಗೆಗಳಲ್ಲಿ ತುಂಬ ನೋವಾಗುತ್ತದೆ. ನನಗೂ ಆಗಿತ್ತು. ಇವತ್ತಿನ ಸಂಬಂಧ ಮತ್ತು ಭಾವನೆಗಳು ಏನೇ ಇದ್ದರೂ ಇಬ್ಬರು ಕಳೆದ ಕೆಲವು ಸವಿನೆನಪಿನ ಕ್ಷಣಗಳು ಸುಳ್ಳಾ, ಆಗಿನ ಆಪ್ತತೆ,ತೀವ್ರತೆ,ನವಿರುತನ,ಪ್ರೀತಿ (ಎಷ್ಟೇ ತೋರಿಕೆಯದೇ ಆಗಿದೆ ಅಂದ್ರೂ)ಅದನ್ನು ಅನುಭವಿಸಿದ್ದು ಸುಳ್ಳಾ?

ಕ್ಷಣಮಾತ್ರವೇ ಆದರೂ ಪಟ್ಟ ಅಪರೂಪದ ಖುಷಿಗೆ, ಅದಕ್ಕೆ ಇಟ್ಟಿರುವ ಪ್ರೀತಿ ಎನ್ನುವ ಹೆಸರಿಗೆ ನಾನು ಇವತ್ತು ಮೋಸ ಅಂತ ಕರೆಯಲಾರೆ.

ಮತ್ತು ನೀವು ಬರೆದ ಒಂದು ಭಾವ ಮಾತ್ರ ಪ್ರೀತಿಸುವ ಎಲ್ಲ ಜೀವಗಳಿಗೂ ನಿಜ. ಎಲ್ಲ ನೋವಲ್ಲೂ, ಬೇಸರದಲ್ಲೂ ನಾವು ಪ್ರೀತಿಸಿದ ಜೀವಕ್ಕೆ ಈಗ ಆಗಿದ್ದೇ ಸಾಕು ಇನ್ನೂ ಹೆಚ್ಚಿನ ನೋವಾಗದಿರಲಿ ಅಂತ ಬಯಸುತ್ತೇವೆ.

ಎಲ್ಲ ಸುಖಾಂತ್ಯವಾಗುವ ಬಗ್ಗೆ ಏನು ಹೇಳಲಿ.. ಆದರೆ ಒಳಿತು. ಆಗದಿದ್ದರೆ ತಡೆದುಕೊಳ್ಳುವ ಶಕ್ತಿ ಮತ್ತು ಸಹನೆ, ಒಳಿತನ್ನು ಬಯಸುವ ಮನಸು ಇರಬೇಕು ಅಂತ ಹೇಳಬಲ್ಲೆ. ಈ ವಿಷಯದಲ್ಲಿ ನಾನು ಅಲ್ಪಜ್ಞೆ.