Monday, July 23, 2007

ರಾಜಧಾನಿಯಿಂದ ರಾಜಧಾನಿಗೆ...

ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಮತ್ತಿಲ್ಲಿಗೆ

ತಿರುಗಿ ನೋಡಿ ದಾಖಲು ಮಾಡಿಕೊಳ್ಳಲೂ
ಪುರುಸೊತ್ತಿರದಷ್ಟು ಕೆಲಸದ ನಡುವೆ, ಕಂಡ
ನೂರೆಂಟು ನೋಟಗಳು,
ಅವುಗಳಾಚೆಗೆ ಹೊಳೆವ ಹಲವಾರು ಚಿತ್ರಗಳು
ಎಲ್ಲ ಮೆಮೊರಿ ಕಾರ್ಡಿನಲ್ಲಿವೆ,
ಈ ವಾರ ಕಾದಿರುವ ಕೆಲಸದೊತ್ತಡದ ನಡುವೆ
ಒಂದೊಂದಾಗಿ ಪಡಿಮೂಡಲು ಕಾಯುತ್ತಾ..

ಹೋಗಿದ್ದೆಲ್ಲಿಗೆ ಬಂದಿದ್ದೆಲ್ಲಿಗೆ?
ಅದೇ ದಿಲ್ಲಿಗೆ.. ಮತ್ತೆ ಬೆಂಗಳೂರಿಗೆ..
ಪುಣ್ಯವೆಂದರೆ ಹೊರಟ ಜಾಗಕ್ಕೆ
ಮತ್ತೆ ಬಂದು ಸೇರಿರುವುದು.
ಅದೇ ಜಾಗ, ಅದೇ ಮನೆ,
ಹೊರಟಾಗ
ಮೊಗ್ಗು ಮೂಡಿದ್ದ ಗಿಡದ ತುಂಬ
ಈಗ
ಬಿರಿದು ನಿಂತ ಹೂಚೆಲುವು..

ನಾಲ್ಕಾರು ತಿಳಿವಿನ ಹೊಳವು
ಸುತ್ತ ಹರಡಿ..
ಮಳೆನಿಂತ ಬೆಳಗು.

12 comments:

ಮಹೇಶ said...

ಹೊರಟ ಜಾಗಕ್ಕೆ
ಮತ್ತೆ ಬಂದು ಸೇರಿರುವುದು.
ಅದೇ ಜಾಗ, ಅದೇ ಮನೆ,
ಹೊರಟಾಗ
ಎಷ್ಟೋಂದು ಅರ್ಥಪೂರ್ಣವಾಗಿದ

ಮೊಗ್ಗು ಮೂಡಿದ್ದ ಗಿಡದ ತುಂಬ
ಈಗ
ಬಿರಿದು ನಿಂತ ಹೂಚೆಲುವು..
ನಿಮ್ಮಿಂದ ಇಂತಹ ಬರಹಗಳು ಇನ್ನಷ್ಟು ಮತ್ತಷ್ಟು ಮುಡಿಬರಲಿ
ಒಮ್ಮೆ ಭೇಟಿ ಕೊಡಿ
http://maheshsl.blogspot.com/

ಸುಶ್ರುತ ದೊಡ್ಡೇರಿ said...

:-)

Welcome back. :)

ರಾಧಾಕೃಷ್ಣ ಆನೆಗುಂಡಿ. said...

ಮತ್ತೆ ಮಳೆ ಬರುತ್ತದೆ ಕವನಗಳ ಸಾಲುಗಳಂತೆ....
ಎರಡನ್ನೂ ಅನುಭವಿಸುವು ಎಷ್ಟು ಹಿತಕರ ಅಲ್ವ.

Ranju said...

ಸಕತ್ತಲಾ ಅಕ್ಕ.

ಇಲ್ಲಿಂದ ಹೋಗುವಾಗ ಆಗಿದ್ದ ಮೊಗ್ಗು ನಿನ್ನ ಸ್ವಾಗತಿಸಲು ಗಿಡದ ತುಂಬಾ ಹೂ ಆಗಿ ನಿತ್ತಿತ್ತು ಬಾಡದೆ, ಉದುರಿ ಹೋಗದೆ.

Ranju said...

ಮೆಮೋರಿ ಕಾರ್ಡಿಂದ ಬೇಗ ಪ್ರಿಂಟ್ ಔಟ್ ಈಚೆಗೆ ಬರಲಿ. i am waiting.

shashismiles said...

ಸಿಂಧು,
ತುಂಬ ಚೆಂದವಾಗಿ ಬರೆಯುತ್ತೀ. ಪುನಃ ಪುನಃ ಓದಿ ಖುಶಿಪಟ್ಟಿದೇನೆ. ಅಂದಹಾಗೆ ನಾನು ಈಗ ಬೆಂಗಳೂರಿನಲ್ಲಿದೇನೆ. ಯಾವಾಗಲಾದ್ರೂ ಬಿಡುವು ಮಾಡಿಕೊಂಡು ಮನೆಗೆ ಬಾ. ಮಾತನಾಡುವ.

ಟೀನಾ.

Parisarapremi said...

ಏನೇನೋ ಕಂಡ ಮೇಲೂ... ನಮ್ಮೂರೇ ನಮಗೆ ಮೇಲು.... :-)

ಶ್ರೀನಿಧಿ.ಡಿ.ಎಸ್ said...

:)

ಸಿಂಧು Sindhu said...

ಮಹೇಶ್,

ಧನ್ಯವಾದಗಳು. ನಿಮ್ಮ ಬ್ಲಾಗಿಗೆ ಇಣುಕಿದ್ದೇನೆ.. ಪೂರ್ತಿ ಓದಲಾಗಲಿಲ್ಲ. ಮತ್ತೆ ಓದಿ ಪ್ರತಿಕ್ರಿಯಿಸುತ್ತೇನೆ.

ಸು
ಥ್ಯಾಂಕ್ಸ್ :)

ರಾಧಾಕೃಷ್ಣ
ನಿಜ

ರಂಜು,
ಹೌದು ರಂಜು, ನೋಡಿದ್ ಕೂಡ್ಲೆ ನಂಗೂ ಸಕ್ಕತ್ ಖುಷಿ ಆತು.
ಮೆಮೊರಿ ಕಾರ್ಡ ಕನೆಕ್ಟ್ ಮಾಡ್ತಾ ಇದ್ದಿ..ಮುಂದಿನ ವಾರ ನೋಡಣ..

ಟೀನಾ..
ಖಂಡಿತ ಬರುತ್ತೇನೆ.

ಪರಿಸರಪ್ರೇಮಿ
:) ಸತ್ಯಸ್ಯ ಸತ್ಯ!

ಶ್ರೀನಿಧಿ,
ಭೂಕಂಪ ಸ್ವಲ್ಪ ತಡೆದು ಆಗಲಿದೆ... :)

Anonymous said...

`ತಿರುಗಿ ನೋಡಿ ದಾಖಲು ಮಾಡಿಕೊಳ್ಳಲೂ ಪುರುಸೊತ್ತಿಲ್ಲದ ನಮಗೆ ಚಂದವೆನಿಸಿದ್ದೆಲ್ಲ ಮೆಮೊರಿ ಕಾರ್‍ಡಿನಲ್ಲಿರುತ್ತವೆ! ಅವನ್ನು ಪಡಿಮೂಡಿಸುವ ಪುರುಸೊತ್ತಾದರೂ ಎಲ್ಲಿ...' ಇದು ಬೇಶಕ್ ನನ್ನದೇ ಕೇಸ್, ಸಿಂಧು! ನೀವು ಪದ್ಯವಾಗಿ ಹೇಳಿಬಿಟ್ಟಿದ್ದೀರಿ. ಹೊಟ್ಟೆಕಿಚ್ಚಾಗುತ್ತೆ.

ನಾಲ್ಕಾರು ತಿಳಿವಿನ ಹೊಳವು, ಮಳೆ ನಿಂತ ಬೆಳಗು... ಇಷ್ಟವಾಯಿತು.

-ವಸ್ತಾರೆ

ಸಿಂಧು Sindhu said...

ಪ್ರಿಯ ವಸ್ತಾರೆ,

ನಿಮಗೆ ಇಷ್ಟವಾಗಿದ್ದು ನಂಗೆ ತುಂಬ ಖುಶೀ.
ನಾನು ನಿಮ್ಮ ಕೆಂಡಸಂಪಿಗೆಯ ಬರಹಗಳ ಅಭಿಮಾನಿ. ನನ್ನ ಓದಿನ ವ್ಯಾಪ್ತಿ ಕಿರಿದು. ಮತ್ತೆಲ್ಲಿ ಬರೆಯುತ್ತೀರಿ ನೀವು ತಿಳಿಸಿ. ಹುಡುಕಿ ಓದಬಯಸುತ್ತೇನೆ.

ಈ ಮೆಮೊರಿ ಕಾರ್ಡ್ ಒಂತರಾ ಎರಡಲುಗಿನ ಕತ್ತಿ. ಉಪಕಾರದಷ್ಟೇ ಅಪಕಾರವೂ ನಡೆಯತ್ತೆ. ಒಂದು ಕ್ಷಣ ನಿಂತು ನೋಡಿ ಬೆರಗನ್ನ ಒಳಗೆ ಎಳೆದುಕೊಳ್ಳುವ ಕ್ಷಣವನ್ನೇ ಕಸಿದುಕೊಂಡು ಬಿಟ್ಟಿದೆ. ಕ್ಲಿಕ್ ಮಾಡು, ಸೇವ್ ಮಾಡು, ಆಮೇಲ್ಯಾವಾಗ್ಲೋ ಟೈಮ್ ಇದ್ದಾಗ ಬೇಕಾದ್ರೆ, ನೆನಪಾದ್ರೆ ನೋಡು ಗೀಳಿಗೆ ತಳ್ ಬಿಡತ್ತೆ. ಅಲ್ವಾ.

ಪ್ರೀತಿಯಿಂದ
ಸಿಂಧು

Anonymous said...

ನಿಮ್ಮ ಅಭಿಮಾನಕ್ಕೆ ಋಣಿ. ನೀವು ಹೇಳಿರುವಷ್ಟೇ ಧನ್ಯವಾದ. ನಾನು ಇಂಟರ್ನೆಟ್‍ನಲ್ಲಿ ನಿಮ್ಮಷ್ಟು ಬರೆದಿಲ್ಲ. ಹಾಗಂತ ಹೆಚ್ಚು ಬರೆದವನೂ ಅಲ್ಲ. ಪತ್ರಿಕೆಗಳಲ್ಲಿ ಅಲ್ಲಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವುದಿದೆ ಅಷ್ಟೆ. ಕೆಂಡಸಂಪಿಗೆಗೆ ಬರೆಯುವವರೆಗೆ ಕನ್ನಡಕ್ಕೆ ಅಂತರ್ಜಾಲದಲ್ಲೂ ಒಂದು ವೇದಿಕೆ ಇದೆ ಅಂತ ಗೊತ್ತೇ ಇರಲಿಲ್ಲ! ಆ ಮೂಲಕ ನಿಮ್ಮೆಲ್ಲರ ಪರಿಚಯ ಅಷ್ಟೆ. ನಾನೂ ಹೆಚ್ಚು ಓದಿಕೊಂಡವನಲ್ಲ... ಬಿಡಿ. ನಿಮ್ಮ ಸ್ಪೇಸಿನಲ್ಲಿ ನಾನು ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದೇನೆ. ನಿಮ್ಮ ಪದ್ಯ ಇಷ್ಟವಾಯಿತು ಅನ್ನೋದಷ್ಟೆ ಸದ್ಯಕ್ಕೆ ಮುಖ್ಯ. ವಿಶ್ವಾಸವಿರಲಿ.

-ನಾಗರಾಜ ವಸ್ತಾರೆ.