Tuesday, June 26, 2007

ಭಿನ್ನ ರುಚಿ

ನಿನ್ನೆ ಈ ರುಚಿಯನ್ನ ಹಂಚಿಕೊಂಡ ಮೇಲೆ ಸುಶ್ರುತನ ಹತ್ತಿರ ಚೆನ್ನಾಗಿ ಬಯ್ಯಿಸಿಕೊಂಡೆ. ಶ್ರೀನಿಧಿ ಮುಖ ಚಪ್ಪೆ ಮಾಡಿದ. ಬರೆಯುವಾಗ ನನಗೆ ತಾನಾಗಿ ಮೂಡಿ ಮುಂದರಿಯುತ್ತಿದ್ದ ಸಾಲುಗಳಲ್ಲಿ ನನ್ನಿಷ್ಟದ ಜಯಂತರ ಶೈಲಿಯ ನೆರಳು ಬಿದ್ದಂತನಿಸಿತು.

ಆದರೆ ಅವತ್ತು ರಾತ್ರಿ ಲೇಟಾಗಿ ನಾನು ಮೊಸರು ತರಲು ನಮ್ಮ ಏರಿಯಾದ ಬಸ್ ಸ್ಟಾಪಿಗೆ ಹೋದಾಗ ಕಣ್ಣಿಗೆ ಬಿದ್ದ ಸೊಪ್ಪಿನವಳು, ತರಕಾರಿ ಸಾಬರು, ಮತ್ತು ದೇವತೆಯಂತ ಹೂವಾಡಗಿತ್ತಿ ಅಜ್ಜಿ ನನ್ನ ಮನಃಪಟಲದಲ್ಲಿ ಅಚ್ಚೊತ್ತಿದ ಬಗೆ ತಾನೇ ತಾನಾಗಿ ಸ್ಫುರಿಸಿ ಬರುತ್ತಿದ್ದರೆ, ಇದು ಜಯಂತರ ಸಾಲು, ಇಲ್ಲಿ ನನ್ನ ಕವಿಗುರುವಿನ ಹೆಜ್ಜೆ, ಇದು ನನಗಿಷ್ಟವಾದ ಕತೆಯೊಂದರ ನೆರಳು.. ಉಂಹೂಂ ನನಗೆ ಹಾಗನ್ನಿಸಲಿಲ್ಲ, ತಡೆಯದೆ ಬರುತ್ತಿರುವ ಭಾವವನ್ನ ಜಗ್ಗಿ ಬೇರೆ ಚಿತ್ತಾರದಲ್ಲಿ ತುಂಬಿಸಲಾಗಲಿಲ್ಲ.
ಇಷ್ಟಕ್ಕೂ ಬರಹವೊಂದರ ಸತ್ವ, ನೋಟ ಅದರ ಶೈಲಿಯಲ್ಲಷ್ಟೇ ಪ್ರತಿಬಿಂಬಿಸಬೇಕೆ? ಎಷ್ಟೋ ಸಲ ಸುಶ್ರುತ ನಾನು ಚಾಟಿಕೊಂಡಿದ್ದೇವೆ.

ಕನ್ನಡದ ಯುವಸತ್ವದ ಬರಹರೂಪದಂತಹ ಭಾವುಕ ಬರಹಗಾರ ಅವನು. ಅವನ ಬರಹ ಓದುವಾಗ ನನಗೆ ಅಚ್ಚರಿ, ಹಿತ ಮತ್ತು ಮೆಚ್ಚುಗೆ. ಇಲ್ಲೆ ಪುಟ್ಟಗೆ ನಾಚಿಕೊಂಡು ನಿಂತ ಹುಡುಗ, ಅಲ್ಲೆ ಹಿರಿದಾಗಿ, ನಿರ್ಬಿಢವಾಗಿ ಅಕ್ಷರಗಳಲ್ಲಿ ಹರಡಿಕೊಳ್ಳುವ ಪರಿ ನನಗೆ ಸೋಜಿಗದ ಖುಷಿ. ಅವನು ಬರೆದಾಗೆಲ್ಲ ಕಣ್ಣಿಟ್ಟು ನೋಡಿ ಶೈಲಿಯ ಬಗ್ಗೆ (ಅವಳು ಅವನ ಪ್ರೀತಿಯ ಹುಡುಗಿ!) ಮಾತಾಡುವ ನಾನು, ನನ್ನ ಶೈಲಿಯನ್ನೇಕೆ ಗಮನಿಸುತ್ತಿಲ್ಲ ಅಂತ ಯೋಚನೆ ಮಾಡಿದೆ. ಅವನಾದರೆ ಯುವ ಬರಹಗಾರ ಬರೆಯಲಿಕ್ಕಿದೆ ನನಗನ್ನಿಸಿದ್ದನ್ನು ಹೇಳಬಹುದು. ಚಂದಕೆ ಬರದ್ದೆ, ಇದಕ್ಕೆ ಇಲ್ಲಿ ಚಮಕಿ ಹಚ್ಚು, ಕೆನ್ನೆ ಸರಪಳಿ ಭಾರ - ಆಚೆ ತಿರುಗಿಸು, ನತ್ತಿಗಿನ್ನೊಂದು ಮುತ್ತಿನ ಮಣಿ ಹಾಕು ಅಂತ ಅವನ ಮದುವಣಗಿತ್ತಿ ಬರಹವನ್ನು ಸಿಂಗರಿಸಬೇಕಿದೆ.

ನಾನೇನು, ಮುಗಿದ ಯುವಾವಸ್ಥೆ, ಹಿಡಿತಕ್ಕೆ ಸಿಗದೆ ಕಳೆದುಕೊಂಡ ಪ್ರೌಢತೆ, ಎಲ್ಲಿಯೂ ಸಲ್ಲದ ಹೊಳೆಬದಿಯ ಹಕ್ಕಿಕೂಗು, ಅದು ಇವತ್ತು ತನ್ನಂತೆ ಕೂಗೀತು, ನಾಳೆ ಕೋಗಿಲೆಯಂತೆ ಚಣಕಾಲ ಅಣಕಿಸೀತು, ನಾಡಿದ್ದು ಕೂಗಲರಿಯದೆ ಸುಮ್ಮನುಳಿದೀತು, ಕೇಳುವವರು ಯಾರು ಅನ್ನಿಸಿತ್ತು.

ಆದರೆ ಇಲ್ಲ ಇದು ಅದಷ್ಟೆ ಅಲ್ಲ. ಅವನಿಗನ್ನಿಸಿದ್ದನ್ನ ಹೊಳೆಬದಿಯ ಹಕ್ಕಿಯ ಕೂಗೆ ಇರಲಿ, ಅವನು ಹೇಳಿದಾಗ ಕೇಳದೆ ಹೋದರೆ ಅದು ಹೇಗೆ ಹಕ್ಕಿಯಾದೀತು, ಹೇಗೆ ಅಕ್ಕನಾದೇನು? ಬರಹದಲ್ಲಿ ಬದುಕು ಎಲ್ಲಿ ಉಳಿಯುತ್ತದೆ? ಅದಕ್ಕೇ, ಯಾಕೆ ಹಾಗೆ ಬರದೆ ಅಂತ ಅವನಿಗೆ ಹೇಳಬೇಕಲ್ಲವೆ.

ನನ್ನ ಪ್ರೀತಿಯ ಲೇಖಕರ ಸ್ಟೈಲನ್ನ ಚಾಚೂ ತಪ್ಪದೆ ಅನುಸರಿಸುವ ಸೊಗಕ್ಕೆ ಹಾಗೆ ಮಾಡಿದೆ ಅಂತ ಹೇಳಿ ತಮಾಷಿಯಲ್ಲಿ ಮುಗಿಸಬಹುದಾದ ಮಾತು.ಉಂಹುಂ ಅದಲ್ಲ.

ನುಗ್ಗಿ ಬಂದ ಭಾವವೊಂದಕ್ಕೆ ಹೀಗೀಗೇ ಅಂತ ಕೈ ಹಿಡಿದು ನಡೆಸದೆ, ನೀನು ಹರಿದಂತೆ ಬರೆಯುವೆ ಎಂದು ತಲೆಬಾಗಿದೆನಷ್ಟೆ. ಯಾವಾಗಲೂ ಬರಹದ ದೇವರೊಂದಿಗೆ ಗುಟ್ಟು ಅನುಸಂಧಾನ ಮಾಡಿ, ಹಟಮಾಡಿ ನನಗೆ ಬೇಕೆಂದಂತೆ ನೇಯುವ ಆಟ ಬಿಟ್ಟು ಸುಮ್ಮನೆ ಶರಣಾದೆ. ಏನ ಮಾಡಲಿ, ಅದು ನನ್ನ ಅಪ್ರಜ್ಞಾವಸ್ಥೆಯಲ್ಲಿ ಶರಣುಹೋದ ಶೈಲಿಯನ್ನು ಹಿಂಬಾಲಿಸಿದೆ.. :)

ವಿನಂತಿ ಏನೆಂದರೆ ಓದುವ ನೀವು ಗಮನಿಸಲೇಬೇಕು ಅಂತ ನನಗನ್ನಿಸಿರುವುದು - ಸುಸ್ತಾಗಿ ಮನೆಗೆ ಹೋಗುವ ಮುನ್ನ, ಸೊಸೆಗೆ ಸಿಟ್ಟು ಬರುವುದೆಂಬ ಅರಿವಿನಲ್ಲೂ ಮರೆಯದೆ ಪುಟ್ಟ ಪೂರಿಯನ್ನು ಮೊಮ್ಮಗುವಿಗೆ ತಗೊಂಡು ಮನೆಗೆ ಹೊರಟ ಅಜ್ಜಿಯನ್ನು, ಅವಳ ಮಿನುಗುವಿಕೆಯಲ್ಲಿ ಹೊಳೆಯುವ ನಿಮ್ಮ/ನನ್ನ ಹಲವು ನೆನಪುಗಳನ್ನು. ಅದು ಬರೆದ ನನಗೆ ಖುಷಿ. ಓದುವ ನಿಮಗೆ ಹಿತವೆನ್ನಿಸಿದರೆ ಇನ್ನೂ ಖುಷಿ.

ನಾನು ತುಂಬ ಇಷ್ಟ ಪಡುವ ಮತ್ತು ಗೌರವಿಸುವ ಪಂಡಿತರ :) ಸಲಹೆಯ ಮೇರೆಗೆ ಈ ಪ್ರಯತ್ನ.

ಅಂಗಡಿಗಳೆಲ್ಲ ಬಾಗಿಲು ಹಾಕುವ,
ಸುಸ್ತಾದ ರಾತ್ರಿಯ ಚರಣದಲ್ಲಿ,
ಉಳಿದ ಸೊಪ್ಪನ್ನ ಸೊಗಯಿಸುತ್ತ ಮನೆಗೆ ಹೊರಟ ಹೆಂಗಸು,
ಇಂದಿನ ತರಕಾರಿ ಬಿಕರಿಯಾದ ಸಾಬರ ಹುಮ್ಮಸ್ಸು,


ಎಲ್ಲ ಜನಗಳ ದಿನದ ಕೊನೆ-
ಒಳಹಿತದ ಯಾವುದೊ ಮೊನೆ,
ನಡೆವ ನನ್ನ ಹಿತವಾಗಿ ಚುಚ್ಚಿ ಹಿಡಿದು,
ಅತ್ತ ತಿರುಗಿದರೆ
ಹೂವಾಡಗಿತ್ತಿ ಅಜ್ಜಿ
-ಯ ಕೈಯಲ್ಲಿ ವ್ಯಾಪಾರ ಮುಗಿಸಿ ಹಿಡಿದ
ಮಸಾಲಪುರಿಯ ಬಟ್ಟಲು.
ಹಬೆಯಲ್ಲಿ ಆವಿಯಾಗುತ್ತಿರುವ ದಣಿವು,
ಮಸಾಲೆಯೊಡನೆ ತೂಗುತ್ತಿರುವ ಮೊಗ್ಗಿನ ಘಮ
ಪೋಣಿಸುವ ಬೆರಳೋ, ಪುರಿಯ ಮುರಿ ಮುರಿದು
ಬಾಯಿಗೆಸೆದು,
ಕೊರಳ ಶಂಖದಿಂದ ದಿನದ ಸುಸ್ತು
ತೇಗಿನ ಪುಟ್ಟ ದನಿಯಾಗಿ
ಇಲ್ಲಿ ನಡೆದು ಹೊರಟ ನನ್ನ ಸೋಕಿ,
ಆಹ.. ರುಚಿ ರುಚಿ ರುಚಿ
ಅವನೊಡನೆ ತಿಂದ ಸ್ಪೆಷಲ್ ಚಾಟ್
ಮಳೆಯ ನೆರಳಲ್ಲಿ ತಿಂದ ಚುರುಮುರಿ,
ಬಿಸಿಲ ಹೊದ್ದು ತಿಂದ ಮಸಾಲೆ ದೋಸೆ
ಉಂ ಹೂಂ, ಇದು ಎಲ್ಲಕ್ಕಿಂತ ಸವಿ..

ಸವಿದದ್ದು ಅಜ್ಜಿಯ ನಾಲಗೆ
ರುಚಿ ಕಂಡದ್ದು ನನ್ನ ಕಣ್ಣು!


ಬ್ಯಾಗು ತುಂಬಿ ಮನೆಗೆ ಹೊರಡುವ ಭರದಲ್ಲು
ಬಾಗಿಲಲಿ ಕಾಯುವ ಪುಟ್ಟ ಮೊಮ್ಮಗನ
ನೆನಪಾಗಿ ಎರಡು ಪುಟ್ಟ ಪೂರಿಗಳು
ಅವಳ ಪರ್ಸೊಳಗೆ ಸೇರಿ
ಓ ಪರವಾಇಲ್ಲ ಸೊಸೆ ಬೈದರೇನಂತೆ..



ಅಜ್ಜಿಯ ಬೆಚ್ಚನೆ ಹಿಡಿತದಲ್ಲಿರುವ ಪರ್ಸಲ್ಲಿ
ಯಾವ ರೋಗಾಣು ನುಗ್ಗೀತು?!
ನಿಜ, ಅಜ್ಜ ನನ್ನ ಬಾಲ್ಯದಲ್ಲಿ
ತಂದಿತ್ತ ಕೊಳಕು ಬೇಕರಿಯ
ಕಾರರೊಟ್ಟಿಯಿಂದ
ನನಗೆಂದೂ ಬರದ ಕಾಯಿಲೆಯಂತೆ!



ಅಜ್ಜಿ ಮಿನುಗುತ್ತಿದ್ದಾಳೆ,
ಚಂದ್ರನಿರದ ರಾತ್ರಿಯಲ್ಲಿ,
ಗಬ್ಬು ಊರಿನ ನಾರುವ ನಾಳಗಳ ಮಧ್ಯೆ!
ನನ್ನ ನೆನಪಲ್ಲಿ
ಹಲವು ರುಚಿಗಳ ಪರಿಮಳ..
ಲೋಕೋ ಭಿನ್ನ ರುಚಿಃ!

5 comments:

Shree said...

"ನುಗ್ಗಿ ಬಂದ ಭಾವವೊಂದಕ್ಕೆ ಹೀಗೀಗೇ ಅಂತ ಕೈ ಹಿಡಿದು ನಡೆಸದೆ, ನೀನು ಹರಿದಂತೆ ಬರೆಯುವೆ ಎಂದು ತಲೆಬಾಗಿದೆನಷ್ಟೆ. ಯಾವಾಗಲೂ ಬರಹದ ದೇವರೊಂದಿಗೆ ಗುಟ್ಟು ಅನುಸಂಧಾನ ಮಾಡಿ, ಹಟಮಾಡಿ ನನಗೆ ಬೇಕೆಂದಂತೆ ನೇಯುವ ಆಟ ಬಿಟ್ಟು ಸುಮ್ಮನೆ ಶರಣಾದೆ. ಏನ ಮಾಡಲಿ, ಅದು ನನ್ನ ಅಪ್ರಜ್ಞಾವಸ್ಥೆಯಲ್ಲಿ ಶರಣುಹೋದ ಶೈಲಿಯನ್ನು ಹಿಂಬಾಲಿಸಿದೆ.. :)"...

ಅಮೂರ್ತವಕ್ಕೆ ಮೂರ್ತರೂಪ ಕೊಟ್ಟ ರೀತಿ ತುಂಬಾ ಚೆನ್ನಾಗಿದೆ. ಇದಕ್ಕೇ ನಿಮ್ಮ ಬರಹ ನಂಗಿಷ್ಟ... :)

ಉಮಾಶಂಕರ್ ಯು. said...
This comment has been removed by the author.
Anonymous said...

"ನಾನೇನು, ಮುಗಿದ ಯುವಾವಸ್ಥೆ, ಹಿಡಿತಕ್ಕೆ ಸಿಗದೆ ಕಳೆದುಕೊಂಡ ಪ್ರೌಢತೆ, ಎಲ್ಲಿಯೂ ಸಲ್ಲದ ಹೊಳೆಬದಿಯ ಹಕ್ಕಿಕೂಗು, ಅದು ಇವತ್ತು ತನ್ನಂತೆ ಕೂಗೀತು, ನಾಳೆ ಕೋಗಿಲೆಯಂತೆ ಚಣಕಾಲ ಅಣಕಿಸೀತು, ನಾಡಿದ್ದು ಕೂಗಲರಿಯದೆ ಸುಮ್ಮನುಳಿದೀತು, ಕೇಳುವವರು ಯಾರು ಅನ್ನಿಸಿತ್ತು".
ಈ ಲೈನು ಹ್ಮ್ ಏನೋ ಒಂಥರಾ ಚನ್ನಾಗಿ ಇದ್ದು. ಓದಲೇ ಆದರೆ ಅದನ್ನ ಸಿಂಧು ಅಕ್ಕನ ಒಟ್ಟಿಗೆ ಹೋಲಿಸಿ ನೋಡಿದರೆ ಯಾಕೋ ಬ್ಯಾಡ ಅನ್ನಿಸ್ತು. ಅಲ್ಲಾ ನಿಂಗೆ ಆಗಬಾರದ ವಯಸ್ಸು ಆಗಿ ಹೋಯ್ದೇನೋ ಅನ್ನೋತರ ಮಾತು ಆಡ್ತ್ಯಲಾ.(ಅಜ್ಜಿ ಅಷ್ಟು).
ಸುಶ್ ಯುವಬರಹಗಾರ ನಿಜ ಅವನ ಲೇಖನದಿಂದ ಬರುವುದು ಕಲ್ಪನೆಯ ಮಹಾಸಾಗರ್ ಆದರೆ ನಿನ್ನ ಲೇಖನದಿಂದ ಬರುವುದು ಅನುಭವದ ಸಪ್ತಸಾಗರ.
ನೀನು ಇನ್ನು ರಾಶಿ ಬರೆಯಕು. ನಾನು ಓದಕು.
ಈ ಕವನ ತುಂಬಾ ಚನ್ನಾಗಿ ಇದ್ದು. ಯಾವಾಗಲು ಕಥೆಗೆ, articles ಗೆ ಒಂದೇ ಅರ್ಥ ಇರ್ತು ಆದರೆ ಕವನಗಳಿಗೆ ಹಲವಾರು. ಓದುಗಾರ ಆಗ ಯಾವ ಮನಸ್ಥಿತಿಯಲ್ಲಿ ಇದ್ದ ಅನ್ನುವದರ ಮೇಲೆ ಅವಲಂಭಿಸಿದ್ದು. ಅದಕ್ಕೆ "ಬಿನ್ನರುಚಿ" ಚನ್ನಾಗಿದ್ದು ಅನ್ನಿಸ್ತಾ ಇದ್ದು. "ರುಚಿ" ರುಚಿಸುವಲ್ಲಿ ಎಡವಿದ್ದು.

Jagali bhaagavata said...

ನಾನೇನು, ಮುಗಿದ ಯುವಾವಸ್ಥೆ, ಹಿಡಿತಕ್ಕೆ ಸಿಗದೆ ಕಳೆದುಕೊಂಡ ಪ್ರೌಢತೆ, ಎಲ್ಲಿಯೂ ಸಲ್ಲದ ಹೊಳೆಬದಿಯ ಹಕ್ಕಿಕೂಗು...

ನಿಮ್ಮ ತಾಣಕ್ಕೆ ನಿತ್ಯ ಭೇಟಿ ಕೊಡುತ್ತೇನೆ, ಆದರೆ ಏನೂ ಗೀಚುತ್ತಿರಲಿಲ್ಲ. ಮೇಲಿನ ಸಾಲುಗಳನ್ನು ಓದುವಾಗ ನೀವು ತುಂಬ ನೊಂದಿರುವ ಹಾಗೆ ಕಾಣುತ್ತದೆ. ಹಾಗಾಗಿ ನನ್ನ ತೊದಲು ಮಾತುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಕನ್ನಡದ ಹಲವು ಲೇಖಕಿಯರು ಬರೆಯಲು ಆರಂಭಿಸಿದ್ದೆ ೩೦ರ ವಯಸ್ಸಿನ ನಂತರ. ವೈದೇಹಿ, ಸುನಂದಾ ಪ್ರಕಾಶ ಕಡಮೆಯವರ ಉದಾಹರಣೆಯನ್ನ ಬೇಕಿದ್ದರೆ ತಗೊಳ್ಳಿ. ನಿಮ್ಮದು ಅಂಥದ್ದೇನೂ ವಯಸ್ಸು ಆಗಿಲ್ಲ. ಮತ್ತೆ ಯಾಕೆ ಈ ಹತಾಶೆಯ ಸಾಲುಗಳು?

ಮತ್ತೆ, ನನಗೆ ವೈಯಕ್ತಿಕವಾಗಿ, ಶ್ರೀರಾಮ್, ಜೋಗಿ, ರಶೀದ್-ರಂತಹ ಅತಿರಥ ಮಹಾರಥರನ್ನ ಬಿಟ್ಟರೆ ಹೆಚ್ಚು ಇಷ್ಟವಾಗುವುದು ನಿಮ್ಮ ಬರಹಗಳೆ. ಹಾಗಾಗಿಯೇ ತಿಂಗಳಿಗೊಮ್ಮೆ ಹಾಜರಿ ಹಾಕುವುದು ಇಲ್ಲಿ. ನಿಮ್ಮ ಭಾವತೀವ್ರತೆ, ಸ್ಪಂದನಶೀಲತೆ, ಒಳನೋಟ ತೀರ ಅನನ್ಯವಾದುದು. ಜಯಂತ ಹುಟ್ಟುಹಾಕಿದ ಭಾವತೀವ್ರತೆಯ ಪರಂಪರೆಯ ನೆರಳು ಇರಬಹುದಾದರೂ, ಅದಕ್ಕೆ ವಿಷಾದವೇಕೆ? ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಬರೆಯುತ್ತಿರುವವರೆಲ್ಲರ ಬರಹಗಳಲ್ಲು ಅದರ ಪ್ರಭಾವ ನಿಚ್ಚಳವಾಗಿದೆ. ನೀವೊಬ್ಬರೆ ಅದಕ್ಕೆ ಹೊರತಲ್ಲ. ವಿಷಾದ ಬೇಡ.

ಇನ್ನು ಮುಂದೆ ಇಂತಹ ಸಾಲುಗಳನ್ನು ಬರೆಯಲಾರಿರಿ ಎಂದು ನಿರೀಕ್ಷಿಸಬಹುದೇ?

ಸಿಂಧು sindhu said...

ಶ್ರೀ,
ನನ್ನ ಭಾವನೆಗಳನ್ನು ಸರಿಯಾದ ಪದದಲ್ಲೇ ಹಿಡಿದಿಟ್ಟಿದ್ದಕ್ಕೆ ಧನ್ಯವಾದಗಳು. ನಂಗೆ ಖುಷಿ, ನನ್ನದೇ ಲಹರಿಯಲ್ಲಿ ತೂಗುವ ನಿಮ್ಮ ಉಯ್ಯಾಲೆಯಲ್ಲಿ ನಾನೂ ಇದ್ದೇನೆ.. :)

ಉಮಾಶಂಕರ್,
ನಿಮಗಿಷ್ಟವಾಗಿದ್ದು ನನಗೆ ಖುಷಿ.

ರಂಜು,
ನೀನು ನನ್ನನ್ನ ಪರ್ಸನಲ್ ಆಗಿ ಹೀಗಿದ್ದಾಳೆ ಅಂತ ಭಾವಿಸಿಕೊಂಡಿದ್ದಕ್ಕೆ ಹಾಗೆ ಅನಿಸ್ತು. ನಾನು ಅಜ್ಜಿ ಥರಾ ಬರದ್ನಾ.. ಹಾಗೇನಾದ್ರು ಆದ್ರೆ ನಂಗೆ ಸಿಕ್ಕಾಪಟ್ಟೆ ಖುಷಿ. ಅಜ್ಜಿ ಥರಾ ಆಗದು/ಬರಿಯದು ಸುಲಭವಲ್ಲ.. :)

ಸುಶ್ ನ ಬರಹವನ್ನು ನನ್ನ ಬರಹದ ಬಗ್ಗೆ ಹೋಲಿಸಬೇಡ. ಮಾವು ಮತ್ತು ದಾಳಿಂಬೆ ಎರಡಕ್ಕೂ ಅದರದ್ದೇ ವಿಶಿಷ್ಟ ರುಚಿ ಇರುತ್ತೆ. ಅವನ ದಾರಿ, ರೀತಿ, ಪ್ರೀತಿ ಎಲ್ಲ ವಿಶಿಷ್ಟವಾಗಿದೆ. ಅಥವಾ ಹಾಗೇನಿದ್ದರೂ ನನಗಾಗಲಿ ಅವನಿಗಾಗಲಿ ಮೈಲ್ ಮಾಡು. ನಾನು ಬರೆದಿದ್ದು, ಅವನ ಪ್ರಶ್ನೆಗೆ ನಾನೇಕೆ ಮತ್ತು ಹೇಗೆ ಉತ್ತರಿಸಬೇಕು ಅಂತ ಯೋಚಿಸಿದ್ದರ ಬಗ್ಗೆ. ಅವನ ಬರಹದ ಮೌಲ್ಯಮಾಪನ ಅಲ್ಲ.ಅದು ಮಾಡಲೂ ಸಲ್ಲ.

ಭಾಗವತರೆ,

ನಿಮ್ಮ ಆಪ್ತ ಸ್ಪಂದನಕ್ಕೆ ನಾನು ಕೃತಜ್ಞ್ನೆ. ನಾನು ಆ ಸಾಲುಗಳನ್ನ ನೊಂದು ಬರೆಯಲಿಲ್ಲ. ಆ ಅನುಭೂತಿಯನ್ನ ನಿಮಗೆ ನನ್ನ ಸಾಲುಗಳು ಕೊಟ್ಟಿದ್ದಕ್ಕೆ ಕ್ಷಮಿಸಿ. ಅದು ನನ್ನ ಪ್ರಾಮಾಣಿಕ ಅನಿಸಿಕೆ, ಮತ್ತು ಆ ಬಗ್ಗೆ ನನಗೆ ಯಾವುದೇ ಬೇಸರ, ಹತಾಶೆ ಇಲ್ಲ. ವಯಸ್ಸು ಅಥವಾ ಪ್ರೌಢತೆ, ನಮಗರಿವಿಲ್ಲದೆ ನಮ್ಮನ್ನು ದಾಟಿ ಹೋಗುವ ಹಂತ. ಹೋದ ಮೇಲೆ ಮಾತ್ರ ಗೊತ್ತಾಗಬಹುದು ಗಮನಿಸುವ ಮನಸ್ಸಿದ್ದರೆ.

ನಾನೇನು ಮಹಾ, ಅಥವಾ ನಾನೇ ಒಂತರಾ ಅನ್ನುವ ಮಾತಲ್ಲ ಅದು. ನನ್ನದು ತನ್ನ ಪಾಡಿಗೆ ತಾನು ಸುರಿವ ಮಳೆಯ, ಯಾರೂ ನೋಡದ ತಿರುವಲಿ ಬಳುಕಿ ಹರಿವ ಹೊಳೆಯ ಹಾಗಿನ ಬರಹ ಅಂತ ನನ್ನ ಭಾವನೆ. ಹಾಗಂತ, ಯಾರಿಗೂ ಕಾಣಬಾರದೆನ್ನುವ ಸೀಕ್ರೆಸಿ ಅಲ್ಲ. ನೋಡಿದರೆ ನಿಮಗೆ ಖುಷಿ, ನೋಡಿ ನಂಗೆ ಹೀಗನ್ನಿಸಿತು ಅಂತ ಹೇಳಿದರೆ ನನಗೆ ಖುಷಿ. ಮತ್ತು ನನ್ನ ಬರಹ ಹೀಗೇ/ಹೀಗಲ್ಲ ಅಂತ ನನ್ನ ಕಟ್ಟಿಲ್ಲ ಅದನ್ನು ಹೇಳಲು ಹೊರಟೆ.

ಮತ್ತು ನಿಮ್ಮ ಕೊನೆಯ ಸಾಲು ತುಂಬ ನಿಜ. ಜಯಂತರ ಭಾವತೀವ್ರತೆ ಮತ್ತು ಕೆ.ಎಸ್.ನ ಅವರ ಭಾವಸೂಕ್ಷ್ಮಜ್ಞತೆ ನನ್ನ ಭಾವಲಹರಿಗಳನ್ನು ಯಾವಾಗಲೂ ಕೈ ಹಿಡಿದು ನಡೆಸಿವೆ. ಅದಕ್ಕೆ ವಿಷಾದವಿಲ್ಲ ಅಂತ ಗೆಳೆಯನಿಗೆ ಹೇಳಲು ಹೊರಟೇ ಇಷ್ಟೆಲ್ಲ ಆಯಿತು.. :)

ಏನಾದರೇನು.. ನಿಮ್ಮ ಬೆಚ್ಚನೆ ಬೆನ್ತಟ್ಟುವಿಕೆ, ಉಳಿದ ಭಾವುಕರ ಕಣ್ ಮೆಚ್ಚುಗೆ ನನಗೆ ಸಂತಸ ತಂದಿದೆ.

ಇಂತಹ ಸಾಲು - ದ್ವಿಮುಖ ಅರ್ಥ ನೀಡುವ ಸಾಲುಗಳನ್ನು - ಬರೆಯದಿರಲು ಎಚ್ಚರವಹಿಸುತ್ತೇನೆ.

ಪ್ರೀತಿಯಿರಲಿ,
ಸಿಂಧು