Thursday, April 12, 2007

ನೀರಿನಲ್ಲಿ ಅಲೆಯ ಉಂಗುರಾ..

ಭೂಮಿತಾಯಾಣೆಗೂ ನನ್ನ ಈ ಬರಹಕ್ಕೂ ಸೂಪರ್ ಡ್ಯೂಪರ್ ಹಿಟ್ "ಮುಂಗಾರು ಮಳೆ"ಗೂ ಯಾವ ಸಂಬಂಧವೂ ಇಲ್ಲ. ನಿನ್ನೆ ರಾತ್ರೆ ಬೆಂಗಳೂರಿನಲ್ಲಿ ಬಿದ್ದ ಈ ವರ್ಷದ ಮೊದಲ ಮಳೆಹನಿಗಳು ನನ್ನನ್ನು ಆರ್ದ್ರಗೊಳಿಸಿ ಹಳೆಯ ನೆನಪುಗಳೊಡನೆ ಹಳೆಯ ಬರಹಗಳನ್ನೂ ಟೇಬಲ್ ಮುಂದೆ ಹರಡಿದ್ದರಿಂದ ಸಿಕ್ಕ ಒಂದು ಬರಹ. ಹೌದು ಇದು ಅವನಿಗೆ ಬರೆದಿದ್ದು.. ಪತ್ರವಲ್ಲ.. ಹನಿದು ಹರಿದ ಭಾವನೆಗಳಷ್ಟೆ..

ನೀರಿನಲ್ಲಿ ಅಲೆಯ ಉಂಗುರಾ..ಮನದ ಕೊಳದಿ ನೆನಪಿನುಂಗುರ..


ಒಲವೇ, ನನ್ನ ಬದುಕಿನ ಚೈತನ್ಯವೇ,

ನೋಡಿಲ್ಲಿ ಮಳೆ ಹ್ಯಾಗೆ ಬರುತ್ತ ಇದೆ ಅಂತ..

"ನೀನು ಮುಗಿಲು ನಾನು ನೆಲ, ನಿನ್ನ ಒಲವೆ ನನ್ನ ಬಲ" ಅಂತ ಶಿವರುದ್ರಪ್ಪನವರು ಬರೆದ ಕವಿತೆಯನ್ನು, ರತ್ನಮಾಲ ಪ್ರಕಾಶ್ ಹಾಡಾಗಿ ಉಣಿಸಿದಂತಿದೆ.

ನೆಲ ಮುಗಿಲಿನ ಬಾಂಧವ್ಯವನ್ನು ಪ್ರೀತಿಗೆ ಹೋಲಿಸಿದ ಎಷ್ಟು ಸುಂದರ ಭಾಷೆ. ಮಳೆ ಬರುತ್ತಲೂ ನನಗೆ ಮೊದಲು ನೆನಪಾಗುವುದೇ ನೀನು. (ಇದು ಸುಳ್ಳೇನೋ - ಯಾಕಂದ್ರೆ ನೀನು ಮರೆತು ಹೋಗಿದ್ರೆ ತಾನೆ ನೆನಪಾಗಲಿಕ್ಕೆ..!) ನಿನ್ನ ನೆನಪುಗಳ ಮಾರುತ ಹೊತ್ತು ತರುವ ಎಲ್ಲ ವರ್ಷಧಾರೆಯೂ ನನಗೆ ಹಲವು ಧಾರೆಗಳನ್ನು ನೆನಪಿಸುತ್ತದೆ.

ಮಳೆಯ ಹನಿ ಬೀಳುವ ಕೆರೆಯಿಂದ ಹೇಗೆ ನೂರಾರು ಅಲೆಗಳ ತರಂಗ ಹೊಮ್ಮುತ್ತಲ್ಲಾ ಹಾಗೆ - ನಿನ್ನೊಡನೆ ಕಳೆದ ಕ್ಷಣಗಳ ನೆನಪಿನ ಅಲೆಗಳು ಮನದ ಕೊಳದಲ್ಲಿ, ಮಳೆಯ ದರ್ಶನ ಮಾತ್ರಕ್ಕೇ ಏಳುತ್ತವೆ.


ಒಂದು ನೆನಪಿನ ಅಲೆ ಕರಗುವಲ್ಲಿ ಇನ್ನೊಂದು ಅಲೆಯೆದ್ದು ಅದು ಕರಗೆ ಮತ್ತೊಂದು... ಯಾವ ನೆನಪಿನ ಅಲೆಯನ್ನ ಜಾಸ್ತಿ ದೂರ ಹರಡಲೋ ಗೊತ್ತಾಗುವುದಿಲ್ಲ. ತಂಪು ನೀಲಿಯ ಕೆಳಗೆ ಹಸಿರು ಹುಲ್ಲಿನ ನಡುವೆ ಮಾತಾಡುತ್ತ ಜೊತೆಜೊತೆಗೆ ನಡೆದು ಹೋಗಿದ್ದು, ಬೆಳಕು ಹರಿಯದ ಮುಂಜಾವದಲ್ಲಿ ಗುಡ್ ಬೈ ಹೇಳಿದ್ದು, ಹೂಕನಸಿನ ಕವಿಯ ನೆರಳಲ್ಲಿ ಹಾದು ಹೋಗಿದ್ದು, ಕೆಮೆರಾ ಕಣ್ಣು ಸೆರೆ ಹಿಡಿದ ಅಮ್ಮನ ವಿವಿಧ ಸೊಗಸುಗಳನ್ನು ಸವಿದಿದ್ದು, ಮತ್ತೆ ಅಮ್ಮನ ಮಡಿಲಿಗೆ-ಗುಡ್ಡದ ತಪ್ಪಲಿಗೆ ನಡೆದು ಹೋಗಿದ್ದು, ತುಂಬಿ ತುಳುಕಿದ ನೀಲಿ ಕೆರೆಯ ಕಟ್ಟೆಯಲ್ಲಿ ಜೊತೆಯಾಗಿ ನಿಂತಿದ್ದು, ಸುಸ್ತಾಗಿ ಕುಸಿದ ಕ್ಷಣಗಳಲ್ಲಿ ಮುಚ್ಚಿದ ಕಣ್ಣು ತೆರೆದಾಗ ನಿನ್ನ ಹೊಳಪು ಕಣ್ಗಳ ಕಂಡಿದ್ದು, ನಿದ್ದೆ ಹೋಗುವವರೆಗೂ ಮಾತಾಡಿದ್ದು, ತಂಪು ಬೆಟ್ಟದ ತುದಿಯಲ್ಲಿ ನನ್ನ ಚೈತನ್ಯವೇ, ನಿನ್ನ ಮಡಿಲಲ್ಲಿ ನಾನು ನಿದ್ದೆ ಹೋದದ್ದು, ಅಲ್ಲಲ್ಲ ಎಚ್ಚರಿದ್ದಿದ್ದು, ಬೆಳಗಿನ ಜಾವದ ಚಳಿಯಲ್ಲಿ ಮೋಡಗಳ ಸ್ವೆಟರ್ ಹೊದ್ದ ಸೂರ್ಯನ್ನ ನಿನ್ನ ಕಣ್ಣಲ್ಲೇ ನಾನು ನೋಡಿದ್ದು....


ಓಹ್, ಈ ನೆನಪುಗಳ ಅಲೆಯಿಂದ ಮುಂದರಿಯಲೇ ಮನಸಾಗುತ್ತಿಲ್ಲ. ಮತ್ತೆ ನಿಂಗೊತ್ತಾ ಈ ಅಲೆಯನ್ನ ದೊಡ್ಡ ಹನಿಯಿಟ್ಟು ಎಬ್ಬಿಸಿದ್ದೇನೆ - ನೀನು ನೀಲಿಕೆರೆಯಲ್ಲಿ ಕಪ್ಪೆಕಲ್ಲು ಹಾರಿಸಿ ಎಬ್ಬಿಸಿದೆಯಲ್ಲಾ ಹಾಗೆ-ತುಂಬ ದೂರದವರೆಗೆ ತುಂಬ ಹೊತ್ತಿನವರೆಗೆ ಇರುತ್ತೆ. ಹಲೋ ನಿಂಗೇ ಹೇಳಿದ್ದು, ಎಲ್ಲಿ ಕಳೆದು ಹೋಗಿದ್ದೀಯ? ಓ ನೀನು ಆ ಅಲೆಯಲ್ಲಿ ಮುಳುಗೇಳುತ್ತಿದ್ದೀಯಾ! ಸರಿ ಬಿಡು, ಡಿಸ್ಟರ್ಬ್ ಮಾಡುವುದಿಲ್ಲ.


ಮಳೆಯ ಹನಿ ಬಿದ್ದ ಕೂಡಲೇ ನಾನೇಕಿಷ್ಟು ಭಾವುಕಳಾಗಿ ಬಿಡುತ್ತೇನೋ. ಒಂದು ನಿಜ, ಮಳೆಯಿಂದ ಎಷ್ಟೇ ಕರಕರೆ ಆದ್ರೂ, ಮಳೆ ಅಂದ್ರೆ ನಂಗೆ ತುಂಬ ಇಷ್ಟ. ಇಷ್ಟು ಇಷ್ಟದ ಮಳೆ ಬರುತ್ತಿರುವಾಗ ಜೊತೆಗೆ ನೀನಿದ್ದರೆ ಮತ್ತೂ ಇಷ್ಟ. ನಾವಿಬ್ಬರೂ ಮಳೆಯಲ್ಲಿ ಕಾಡುಬಯಲಲ್ಲಿ ದೂರ ನಡೆದು ಹೋಗಿ, ಬೆಚ್ಚಗೆ ಬೆಂಕಿ ಕಾಯಿಸುತ್ತಾ, ಸೋನೆರಾಗಕ್ಕೆ ಕಿವಿಯೊಡ್ಡಿ ಕುಳಿತಿದ್ದರೆ ಎಷ್ಟು ಇಷ್ಟವಾಗುತ್ತೆ ಗೊತ್ತಾ? ಎಷ್ಟೂಂದರೆ ಆ ಮಳೆ ಮುಗಿದು ಬೆಳಗಾಗಿ ಸೂರ್ಯ ಕೆಂಪಾಗುವಾಗ, ಹೆಸರಿಲ್ಲದ ಕಾಡುಹಕ್ಕಿ ಮರದ ಎಲೆಯ ಶವರಲ್ಲಿ ಮಿಂದು ಉದಯರಾಗ ಹಾಡುವಾಗ ಉಸಿರು ಅಲ್ಲೇ ನಿಂತು ಬಿಡಲಿ ಅನ್ನುವಷ್ಟು.


ಬರೀ ಕಣ್ಣೀರಿನ ಮಳೆ ಹೊಯ್ದು, ಕೆಟ್ಟ ಕ್ಷಣಗಳ ಕೊಚ್ಚೆಯಲ್ಲೇ ಹೆಜ್ಜೆ ಇಡಲಾರದೆ ಇಟ್ಟು ಬಂದ ದಿನಗಳು ಕಳೆದು ಹೋಗಿದೆ ಅಲ್ಲವೇನೋ? ಒಲವೇ, ನಿಜವಾಗ್ಲೂ ಆ ಮಳೆಯ ಚಳಿಗೆ ಬೆಚ್ಚನೆ ಸ್ವೆಟರಾಗಿದ್ದು ನಿನ್ನ ಕಣ್ಣ ದೀಪದ ಹೊಳಪು. ಜಾರಿ ಬೀಳುವ ಹೆಜ್ಜೆಗಳಿಗೆ ಆಸರೆಯಾಗಿದ್ದು ನಿನ್ನ ಭರವಸೆಯ ಕಿರಿಬೆರಳು. ನಿನ್ನೆಲ್ಲ ಕಸಿವಿಸಿಯನ್ನ, ಸಂಕಟವನ್ನ ನನಗೊಂಚೂರೂ ಕಾಣಿಸದ ಹಾಗೆ ನನ್ನನ್ನ ಸಂತೈಸಿದೆಯಲ್ಲ ಆ ನಿನ್ನ ನಿಲುವು ನನ್ನ ಬದುಕಿನ ಚೈತನ್ಯವಾಗಿ ತುಂಬಿಕೊಂಡಿದೆ. ನಿನ್ನ ತೊಡಕುಗಳನ್ನ ನಾನು ಬಗೆಹರಿಸಲಾಗುವುದಿಲ್ಲ ಬಿಡು ಆದರೆ ನಿನ್ನ ನೋವಿನ ಕ್ಷಣಗಳಿಗೆ ನಾನು ಕಿವಿಯಾಗಬಾರದಾ? ನಿನ್ನ ಕಣ್ಣೀರನ್ನ ನಾನು ಒರೆಸಬಾರದಾ? ನಿನ್ನ ನೋಯುವ ತಲೆಯನ್ನ ನಾನೊಂದಿಷ್ಟು ಹೊತ್ತು ಲಾಲಿಸಬಾರದಾ? ಕನಿಷ್ಠ ಜೊತೆಗಿರಬಾರದೇನೋ?


ನನ್ನ ರೇಶಿಮೆಯಲ್ಲಿ ಸುತ್ತಿಟ್ಟು ನೀನಲ್ಲಿ ಮುಳ್ಳು ಹಾಸಿಗೆಯಲ್ಲಿ ಮಲಗಿದರೆ ನಂಗೆ ನಿದ್ದೆ ಬಂದೀತೇನೋ? ನನ್ನ ಹೊಟ್ಟೆ ತುಂಬ ಊಟವಿಟ್ಟು ನೀನಲ್ಲಿ ಅರೆ ಹೊಟ್ಟೆ ಉಂಡರೆ, ಉಂಡಿದ್ದು ನನ್ನ ಮೈಗೆ ಹಿಡಿಯುತ್ತೇನೋ? ನನ್ನ ಕ್ಷಣಗಳ ತುಂಬ ಸಂತಸದ ಪ್ಯಾಕೇಜುಗಳನ್ನೇ ತುಂಬಿ, ನೀನಲ್ಲಿ ಕಣ್ಣ ನೀರು ತುಳುಕಿಸಲಾರದೆ, ಹಿಡಿದಿಡಲಾರದೆ ನರಳುತ್ತಿದ್ದರೆ ನನ್ನ ನಗುವಲ್ಲಿ ಜೀವವಿರುತ್ತೇನೋ?


ನೀನು ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಬೇಡ. ನಂಗೇನು ಅನ್ಸಿದೆ ಅಂತ ನಿಂಗೊತ್ತಾಯ್ತಲ್ಲಾ ಅಷ್ಟೆ ಸಾಕು ನಂಗೆ.


ನೋಡು ಇಬ್ಬರೂ ಮುಳ್ಳುದಾರಿಯಲ್ಲೇ ನಡೆಯೋಣ. ಚುಚ್ಚಿಕೊಳ್ಳುವ ಮುಳ್ಳುಗಳನ್ನು ಒಬ್ಬರಿಗೊಬ್ಬರು ತೆಗೆದು ಹಾಕಬಹುದು. ಈ ಸಾಂತ್ವನದ ಮುಂದೆ ರೇಷಿಮೆಯ ಸಿರಿ ಯಾಕೆ. ಉಣಲಿಕ್ಕೆ ಅರೆಹೊಟ್ಟೆಯಾದರೂ ಸರಿ ಜೊತೆಗೇ ತಿನ್ನೋಣ; ನೆಂಚಿಕೊಳ್ಳಲಿಕ್ಕೆ ಸವಿಮಾತಿರುತ್ತಲ್ಲಾ. ಹೊಟ್ಟೆ ತುಂಬದೆ ಸಂಕಟವಾಗಿದ್ದಾಗ ಮಾತಾಡಿಕೊಳ್ಳಲು, ಕನಸು ಕಾಣಲು, ಹಾಗೇ ಹಸಿವು ಮರೆತುಹೋಗಲು ಒಬ್ಬರಿಗಿನ್ನೊಬ್ಬರ ಜೊತೆಯಿರುತ್ತಲ್ಲಾ ಇನ್ಯಾವ ಭಕ್ಷ್ಯ ಭೋಜ್ಯಗಳು ಬೇಕು?


ಬದುಕಿನ ಕ್ಷಣಗಳ ತುಂಬೆಲ್ಲಾ ಸಂತಸದ ಪ್ಯಾಕೇಜುಗಳನ್ನೇ ತುಂಬಿಡಲಾಗುವುದಿಲ್ಲ. ಅಳುವ ಘಳಿಗೆಗಳಲ್ಲಿ ಜೊತೆಗಿರೋಣ ಒಬ್ಬರಿನ್ನೊಬ್ಬರ ಕಣ್ಣೀರೊರೆಸಲಿಕ್ಕೆ. ನಗುವಿನ ಹೂವರಳದಿರಲಿ ಚಿಂತಿಲ್ಲ, ನಗೆ ಹೂವಿನ ಬಳ್ಳಿಯ ಬೀಜ ನೆಟ್ಟು, ಕಣ್ಣೀರನ್ನೆ ಎರೆದು ಕಾಯೋಣ ಕಣೋ. ಕಣ್ಣು ಕಂಬನಿಗಳಿಂದ ಮಂಜಾಗಿದ್ದರೂ ಎಂದೋ ಒಂದು ದಿನ ನಗೆ ಮೊಗ್ಗು ಬಿಟ್ಟಿದ್ದು ಕಂಡೀತು, ಕಣ್ಣೊರಸಿ ನೋಡುವಾಗ ಮೊಗ್ಗು ಅರಳಿ ನಿಂತು ನಕ್ಕೀತು, ಏನಂತೀಯಾ?


ಅನ್ನೋದೇನೇ, ಬಾ ಬೇಗ, ಜೊತೆಯಾಗಿ ಹೋಗೋಣ ಅಂತ ಕರೆದೆಯಲ್ಲಾ, ಇರು ಬಂದೆ. ಅಮ್ಮನ ಕಪಾಟಲ್ಲಿ, ಅವಳಮ್ಮನಿಂದ ಬಳುವಳಿಯಾಗಿ ಬಂದು, ನಂಗಾಗೇ ಉಳಿಸಿಟ್ಟಿರುವ ಒಂದಷ್ಟು ನಗೆ ಹೂವಿನ ಬೀಜ ಇದೆ ತೆಗೆದುಕೊಂಡು ಬರುತ್ತೀನಿ. ಕೂಡಲೆ ಹೊರಡೋಣ. ನಮ್ಮ ಮಗಳಿಗೂ ಒಂದಷ್ಟು ಉಳಿಸಿಡಬೇಕು, ಅಷ್ಟನ್ನೂ ನಾವೇ ಬಿತ್ತುವ ಹಾಗಿಲ್ಲ ನೋಡು ಮತ್ತೆ. ಬಾ ಹೋಗೋಣ...

11 comments:

ರಾಜೇಶ್ ನಾಯ್ಕ said...

ಸಿಂಧು,

ಇಷ್ಟು ಭಾವನೆಗಳು ಕೇವಲ ಒಂದೇ ಮಳೆಗೆ ಹೊರಬಂದರೆ, ಇನ್ನು ಮಳೆಗಾಲದಲ್ಲಿ ಮಳೆ ಮೇಲೆ ಮಳೆ ಬೀಳುತ್ತಿರುವಾಗ ಏನಾಗಬಹುದು? ಕಷ್ಟವಿದೆ. ಆದರೆ ಭಾವನೆಗಳು ಹಿತವಾಗಿವೆ.

Shiv said...

ಸಿಂಧು ಅವರೇ,

ಭಾವನೆಗಳ ಮಳೆಯಲ್ಲಿ ಮೈಯೊಡ್ಡಿ ನೆನೆದಾಗಲೇ ಇಂತಹ ಸುಂದರ ಅಲೆಗಳು ಮನದ ಅಂಗಳಕ್ಕೆ ಮುತ್ತಿಡುತ್ತವೆ.
ಮಳೆಯ ಬಗ್ಗೆ ಯಾಕೇ ನಮಗೆ ಇಷ್ಟೊಂದು ವ್ಯಾಮೋಹ !!??
ಅದು ಅದರ ಜೊತೆ ನಮಗೆ ಇಷ್ಟವಾದವರ ನೆನಪುಗಳ ಮಳೆಯನ್ನು ಯಾಕೇ ಹೊತ್ತು ತರುತ್ತೆ !?

>>ಅಳುವ ಘಳಿಗೆಗಳಲ್ಲಿ ಜೊತೆಗಿರೋಣ ಒಬ್ಬರಿನ್ನೊಬ್ಬರ ಕಣ್ಣೀರೊರೆಸಲಿಕ್ಕೆ. ನಗುವಿನ ಹೂವರಳದಿರಲಿ ಚಿಂತಿಲ್ಲ, ನಗೆ ಹೂವಿನ ಬಳ್ಳಿಯ ಬೀಜ ನೆಟ್ಟು, ಕಣ್ಣೀರನ್ನೆ ಎರೆದು ಕಾಯೋಣ ಕಣೋ.

ಹೃದಯಸ್ಪರ್ಶಿ..

ನಿಮ್ಮ ನಗೆ ಹೂವಿನ ಬಳ್ಳಿಯಲ್ಲಿ ತುಂಬಾ ತುಂಬಾ ನಗೆ ಹೂವು ಅರಳಲಿ..

ಇಂತಹ ಸುಂದರ ಅಲೆಗಳಿಗೆ ವಂದನೆಗಳು

ಸುಪ್ತದೀಪ್ತಿ suptadeepti said...

ಮನಮೋಹಕ ಹಾಡಿನ ಎಳೆಯೊಂದಿಗೆ ಹೊಂದಿಸಿದ ಮನದ ಅಲೆಗಳು....

ಮಳೆ ಹುಟ್ಟಿಸುವ ಭಾವಗಳಿಗೆ ಲೆಕ್ಕವಿಲ್ಲ, ಮನದ ಭಾವ-ನೆಲೆಯನ್ನು ಹೊಂದಿಕೊಂಡು ಸ್ತರಗಳೂ ಬದಲಾಗುತ್ತವೆ, ಅಲ್ಲವ? ಎಳೆದೆಳೆದು ತೂಗುವ ಅಲೆಗಳ ಮೇಲೆ ಭಾವದೋಣಿ ಹಾಯಿಸಿದ್ದಕ್ಕೆ ಧನ್ಯವಾದಗಳು

Anonymous said...

ಹಾಯ್ ಸಿಂಧು ಅಕ್ಕಾ,
ಈ ಲೇಖನ ನಂಗೆ ತುಂಬಾ ಇಷ್ಟ ಆತು.ನಿನ್ನೆ ಬಂದ ಮಳೆ
ನನ್ನ ಮನಸ್ಸಿನ್ನಲ್ಲು ತುಂಬಾ ಕನಸನ್ನಾ ತುಂಬಿಸಿತು ಅಕ್ಕಾ.
ನಾನು ನನ್ನವನು ಮಳೆಯಲ್ಲಿ ತೋಯ್ದಂತೆ,ಕೈ ಹಿಡಿದು ನೆಡೆದಂತೆ,ಇನ್ನು ಏನೇನೋ...... ಆಹಾ ನಿಜಕ್ಕು ಮಳೆ ಬಂದಾಗ ನಮ್ಮ ಸಂಗಾತಿ ಜೊತೆಗಿದ್ದರೆ ಅದರ ಆನಂದವೇ ಬೇರೆ ಅಲ್ದಾ? ಅದರಲ್ಲು ಊರಿನಲ್ಲಿ ಇರೋ ಗುಡ್ಡದ ಮೇಲೆ ಅವನ ಜೊತೆ ಕೂತು ಮಳೆಯಲ್ಲಿ ತೋಯ್ದರೆ ಅದು ಸ್ವರ್ಗ ಸುಖ.
but mera number kab ayega patha nahi....
ಇಂತಾ ಭಾವನೆ ಬರಕೆ ನಿನ್ನ ಲೇಖನನೇ ಕಾರಣ. thanks.

ಸಿಂಧು sindhu said...

ರಾಜೇಶ್,
ಅವನೂ ಹಾಗೇ ಭಯ ಹೋಗಿಬಿಟ್ಟಿದ್ದ.. ಈಗ ಸುಧಾರಿಸಿದ್ದೇನೆ..

ಶಿವ್,
ಹೌದು - ಮಳೆಯೆಂದರೆ ಯಾಕಿಷ್ಟು ಇಷ್ಟವಾಗುತ್ತೋ - ಅದು ಅರಿವಿನಾಚೆಗಿನ ಸತ್ಯ. ದೇವರಂತೆ.
ನನ್ನವನಿಗೆ ನಾನೆಂದರೆ ತುಂಬ ಪ್ರೀತಿ, ಹೂಬಳ್ಳಿಯನು ಕಾಪಿಡುತ್ತಾನೆ ಗೊಂಚಲು ಗೊಂಚಲು ಹೂಗಳು ತೂಗುವಂತೆ.


ಸುಪ್ತದೀಪ್ತಿ,
ನನ್ನ ಭಾವತೀರ ಯಾನದಲ್ಲಿ ಜೊತೆಯಾಗಿ ಮೆಚ್ಚಿದ್ದಕ್ಕೆ ಖುಷಿ.

ರಂಜು,
ಭಾವುಕ ಹೃದಯಕ್ಕೊಬ್ಬ ಭಾವುಕ ಗೆಳೆಯ ಕಾದಿರುತ್ತಾನೆ.ಬದುಕ ತಿರುವಿನಲ್ಲಿ ಮಳೆ ಮೋಡದ ಮಿಂಚಲ್ಲಿ ಕಾಣಿಸುತ್ತಾನೆ..
;-) ಬೇಗ ಕಾಣಿಸುತ್ತಾನೆ.

ಭಾವುಕ ಮನಸ್ಸುಗಳೇ,, ನಿಮಗೆ ಓದಿ ಖುಷಿಯೆನಿಸಿದ್ದು ನನಗೂ ಖುಷಿ.

ಭಾವಜೀವಿ... said...

ಸಿಂಧು ಅವರೆ...!
ಇಂತಹ ಒಂದು ಕಮೆಂಟು ಬಹುಷಃ ನಾನು ಬರೆಯುತ್ತಿರುವುದು ಇದೇ ಮೊದಲು...!!
ಭಾವನೆಗಳಿಗೂ ನನಗೂ ಅವಿನಭಾವ ಸಂಬಂಧ..!!
ಅಂತಹದ್ದರಲ್ಲಿ ನೀವು ಬರೆದಂತಹದ್ದನ್ನು ಓದಿದಾಗ, ನನ್ನೊಳಗೆ ಮೋಡ ಕಲೆತು ಸಣ್ಣ ಸೋನೆ ಮಳೆ ಸುರಿಸಿ, ಆಂತರ್ಯ ಗದ್ಗದಿತವಾಗಿ ಬಿಡುತ್ತದೆ ಕಣ್ರಿ!!
ನಾನು ಹುಟ್ಟಿ ಬೆಳೆದಿದ್ದು ಜೀರುಂಡೆಯ ಸದ್ದೇ ಸಂಗೀತವೆನಿಸುವ ಮಳೆಕಾಡಿನ ಗರ್ಭದಲ್ಲಿರುವ ಒಂದು ಚಿಕ್ಕ ಹಳ್ಳಿಯಲ್ಲಿ, ಅಂದ ಮೇಲೆ ಆ ಮಳೆ, ಜೊತೆಗೆ ಈ ಮಳೆ ಏನನ್ನೆಲ್ಲ ಚಿಗುರಿಸಬಹುದು ನಿಮ್ಮ ಯೋಚನೆಗೆ ಬಿಟ್ಟಿದ್ದು.. !! ಅದರಲ್ಲೂ ಬೇಸಿಗೆ ನಟ್ಟ ನಡುವೆ ಬೀಳುವ ಅಕಾಲಿಕ ಮಳೆ ಬದುಕೇ ಬೇಸರವೆನಿಸಿದಾಗ ಧುತ್ತೆಂದು ಎದುರಾಗುವ ಜೀವದ ಗೆಳಯನಂತೆ ಎಲ್ಲವನ್ನು ತಿದ್ದಿ ತೀಡಿ ಹೊಸ ಹೊಳಪನ್ನು ನೀಡುತ್ತದೆ.. ಇಡೀ ಫ್ರೇಮ್ ಈಗಷ್ಟೆ ಹುಟ್ಟಿತೇನೋ ಅನಿಸುತ್ತದೆ! ಜೊತೆಗೆ ಬೇಡದ ಬೇಕಾದ ಎಲ್ಲಾ ನೆನಪನ್ನೂ ತಂದು ನಮ್ಮೆದುರಿಗೆ ಒಗೆಯುತ್ತದೆ! ನನ್ನ ಪಾಲಿಗಂತೂ ಆ ಮಳೆಗಿರುವಂತಹದೇ ಶಕ್ತಿ ನಿಮ್ಮ ಬರಹದ ಸೋನೆಗೂ ಇದೆ ರೀ! ನೀವು ಬರೆಯುವಷ್ಟು ದಿನಾ ನಾನಂತೂ ಆಗುಂಬೆಯ ಕಾಡಿನೊಳಗಿನ ಜೀರುಂಡೆಯ ಸದ್ದಾಲಿಸುತ್ತಾ ಬಿದ್ದಿರುವ ಹಸಿರು ಪಾಚಿಗಟ್ಟಿದ ಕಲ್ಲಿನಂತೆ ಒದ್ದೆ ಮುದ್ದೆಯಾಗುತ್ತಲೇ ಇರುತ್ತೇನೆ, ಒಂಚೂರು ಗೊಣಗದೇ, ಪ್ರತೀ ಮಳೆಗೂ ಕಾಯುತ್ತಾ..!
ನನಗೆ ಮೋಸವಾಗದಂತೆ ನೋಡಿಕೊಳ್ಳೋದು ನಿಮಗೆ ಬಿಟ್ಟಿದ್ದು!!
ಸಾಕು ಬಿಡಿ, ಬರೆಯುತ್ತಾ ಹೋದರೆ ಅದೇ ಇನ್ನೊಂದು ಮರಿ ಬ್ಲಾಗ್ ಅದೀತು..!!
ಅಂದ ಹಾಗೆ ನಿಮ್ಮ ನಗೆ ಬೀಜದ ಸಂತತಿ ಸಾವಿರವಾಗಲಿ, ಅವುಗಳಿಂದ ಲಕ್ಷ ನಗೆಹೂವುಗಳು ಅರಳಲಿ, ಹಾಗೆಯೇ ಅವುಗಳಿಂದ ಕೋಟಿಗೂ ಮೇಲ್ಪಟ್ಟು "ಸಿಂಧು"ಗಳಾಗಲಿ!!

ಜಯಂತ ಬಾಬು said...

ಏನು ಹೇಳೋಕು ತೋಚ್ತ ಇಲ್ಲ ...ಕಳೆದು ಹೋದೆ ... ತುಂಬಾ ಚೆನ್ನಾಗಿದೆ ... ಹೀಗೆ ಬರಿತಾ ಇರಿ ..ಸಾಧ್ಯವಾದಲ್ಲಿ ನನ್ನ ಬ್ಲಾಗ್ ಒಮ್ಮೆ ನೋಡಿ..

ಸಿಂಧು sindhu said...

ಭಾವ ಜೀವಿ..
ಎಷ್ಟು ಚಂದದ ಪ್ರತಿಕ್ರಿಯೆ - ಇಡೀ ಫ್ರೇಮ್ ಈಗಷ್ಟೆ ಹುಟ್ಟಿತೇನೋ ಅನಿಸುತ್ತಿದೆ ನನಗೆ. ನನ್ನ ಬರಹ ಸ್ವಯಂ ಪ್ರಭೆಯೇನಲ್ಲ. ಪ್ರತಿ ಕ್ಷಣದ ಅಚ್ಚರಿಯು ತಾನು - ಅಕ್ಷರವಾಗಲು - ಯಾರು ಅದರ ಮೇಲೆ ಕಣ್ಣು ಹಾಕುತ್ತಾರೋ ಅವರ ಕೈ ಸೇರಿ ಬರೆಸುತ್ತದೆ.
ಆಗುಂಬೆಯ ಕಾಡಿನ ಪಾಚಿಗಟ್ಟಿದ ಕಲ್ಲು - ನಗರದ ಹೊಗೆಗೆ ಧೂಳುಗಟ್ಟಿದ ಪ್ರತಿಮೆಗಳಿಗಿಂತ ಸಾವಿರ ಪಾಲು ಚಂದ - ನನಗಿಷ್ಟ. ನೀವೆಲ್ಲೆ ಇದ್ದರೂ ನಿಮ್ಮ ಭಾವದ ಚಿಲುಮೆ, ನಿಮ್ಮನ್ನ ಕಾಡಿನ ತಂಪಿಗೆ ಕರೆದೊಯ್ಯಲಿ.
ತುಂಬ ಖುಷಿ ನನಗೆ, ನಿಮ್ಮ ಮೆಚ್ಚುಗೆ ಓದಿ.

ನಿಮ್ಮ ಆಗುಂಬೆಯ ಮಳೆಯಲ್ಲಿ ತೋಯ್ದ ಮರಿಬ್ಲಾಗ್ ಯಾವಾಗ ಸಿಗುತ್ತದೆ;-) ?

ಜಯಂತ್,
ಎಲ್ಲ ನೋಟಗಳಾಚೆ ನೋಡಲು ಹೊಸ ಕಬ್ಬಿಗ.. ಸ್ವಾಗತ. ನಿಮ್ಮ ಬ್ಲಾಗಿನಲ್ಲಿ ಟಿಪ್ಪಣಿಸಿದ್ದೇನೆ.

Anonymous said...

ನಿಮ್ಮ ಲೇಖನವು ಎಂತಹವರನ್ನೂ ಆರ್ದ್ರಗೊಳಿಸಿ ಭಾವನೆಗಳ ಮಳೆ ಸುರಿಸುವುದು ಖಂಡಿತ.

"...ನಿನ್ನೊಡನೆ ಕಳೆದ ಕ್ಷಣಗಳ ನೆನಪಿನ ಅಲೆಗಳು ಮನದ ಕೊಳದಲ್ಲಿ, ಮಳೆಯ ದರ್ಶನ ಮಾತ್ರಕ್ಕೇ ಏಳುತ್ತವೆ." ವ್ಹಾಹ್ ಅದ್ಭುತ ಕಲ್ಪನೆ.

" - ನೀನು ನೀಲಿಕೆರೆಯಲ್ಲಿ ಕಪ್ಪೆಕಲ್ಲು ಹಾರಿಸಿ ಎಬ್ಬಿಸಿದೆಯಲ್ಲಾ ಹಾಗೆ-" "ಕಪ್ಪೆಕಲ್ಲು" ಅಂತ ಹೇಳುತ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು.

"ಜಾರಿ ಬೀಳುವ ಹೆಜ್ಜೆಗಳಿಗೆ ಆಸರೆಯಾಗಿದ್ದು ನಿನ್ನ ಭರವಸೆಯ ಕಿರಿಬೆರಳು" ತುಂಬಾ ಚೆನ್ನಾಗಿದೆ.

"ಮಳೆಯ ಹನಿ ಬಿದ್ದ ಕೂಡಲೇ ನಾನೇಕಿಷ್ಟು .....ಶವರಲ್ಲಿ ಮಿಂದು ...." ಅದ್ಭುತವಾಗಿ ಪ್ರಾರಂಭವಾಗಿರುವ ಸಾಲುಗಳು "ಶವರಲ್ಲಿ" ಮಿಂದು ಎಂದು ಅಂತ್ಯವಾಗುವುದು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಯ ರೆಕ್ಕೆ ಕತ್ತರಿಸಿ ಬಚ್ಚಲಿಗೆ ಬೀಳಿಸಿದಂತಾಯಿತು ಎಂದೆನಿಸಿತು. ಪ್ರಕೃತಿಯ ಅಪರೂಪದ ವರ್ಣನೆಯ ಮಧ್ಯ ದಿನನಿತ್ಯದ ಕೃತಕದ ಉಪಮೆ ಯಾಕೆ ಕೊಟ್ಟಿರಿ? ಈ ಮಾತು ಸಂತಸದ "ಪ್ಯಾಕೇಜು"ಗಳಿಗೂ ಅನ್ವಯಿಸುತ್ತದೆ.

Shree said...

The way you put every abstract thing into beautiful, understandable physical shape in enjoyable manner is excellent Sindhu.. I don't have words to explain it. waiting for more from you...!!
ನಗೆಹೂವಿನ ಬೀಜ ಹೆಗಿರಬಹುದು? :) :) :) ಹೀಗಂತೂ ಇರಲ್ವೇನೋ?

ಸಿಂಧು sindhu said...

ಕಲ್ಯಾಣ್, ಶ್ರೀ,

ನಿಮ್ಮ ಮೆಚ್ಚುಗೆ ಓದಿ ನನಗೆ ಖುಷಿ. ಮತ್ತೆರಡು ಅಲೆಗಳು ಎದ್ದವು.

ಕಪ್ಪೆಕಲ್ಲು ಅಂತಲೇ ಕರೆಯುತ್ತಾರೇನೋ ಗೊತ್ತಿಲ್ಲ. ನಾವು ಚಿಕ್ಕಂದಿನಿಂದ ಅದನ್ನು ಹಾಗೇ ಕರೆಯುತ್ತಿದ್ದೆವು.

ನಾನು ಹಿಂದೊಮ್ಮೆ ಬರೆದಿದ್ದೆ. ನನ್ನ ಭಾವನೆಗಳನ್ನು ನಾನು ಪ್ರಯತ್ನಪೂರ್ವಕವಾಗಿ ಶಬ್ಧಗಳಲ್ಲಿ ಕಟ್ಟುವುದಿಲ್ಲ. ಮತ್ತು ಬಹಳ ಸಾರಿ ಹತ್ತಿರದ/ಹೆಚ್ಚು ಬಳಕೆಯ ಪದ ಬೇರೆ ಭಾಷೆಯದೇ ಆಗಿದ್ದರೂ ಅದನ್ನೇ ಉಪಯೋಗಿಸುತ್ತೇನೆ.

ಒಂದು ತಂಪು ಶವರಿನ ಸ್ನಾನ ಮೈ-ಮನಸ್ಸಿಗೆ ಹಾಯೆನಿಸುತ್ತದೆ. ಹಕ್ಕಿ ಕೊಳ-ನಿಂತ ನೀರಲ್ಲೂ ಸ್ನಾನ ಮಾಡುತ್ತದೆ. ಕೆಲವೊಮ್ಮೆ ಮಳೆ ಬಂದಾಗ ಒದ್ದೆಯಾಗಿಯೂ, ಬಿಸಿಲು ಬಂದ ಕೂಡಲೇ, ಈಗಷ್ಟೇ ಸ್ನಾನ ಮಾಡಿ ಹಾಯಾಗಿ ಕೂತಿದೆಯೇನೋ ಎಂಬಂತೆ ಮೈ ಕೊಡವುತ್ತದೆ.. ಆ ನೆನಪನ್ನು ಅಲ್ಲಿ ಹಾಗೆ ಬರೆದೆ.. ಪ್ಯಾಕೇಜ್ ಅನ್ನುವುದಕ್ಕೆ ನನ್ನ ಆಡುಭಾಷೆಯಲ್ಲಿ ಕೊಟ್ಟೆ/ಪೊಟ್ಟಣ ಎನ್ನುತ್ತೇವೆ.. ಅದಕ್ಕಿಂತ ನಂಗೆ ಯಾಕೋ ಪ್ಯಾಕೇಜ್ ಇಷ್ಟವಾಗುತ್ತಿದೆ. ಈ ಸಂಕರಕ್ಕೆ ಕ್ಷಮಿಸಿ.

ನಿಮ್ಮ ಸ್ಪಂದನೆ ನನ್ನನ್ನು ಯೋಚನೆಗೆ ತೊಡಗಿಸುತ್ತದೆ. ಧನ್ಯವಾದಗಳು.

ಶ್ರೀ ನೀವು ಬರ್ದಿರೋದೇ ನಗೆ ಹೂವಿನ ಬೀಜ.. :) ಅದೇ.. ಬಿತ್ತಿದಂತೇ ಬೆಳೆ. ಅಲ್ಲಲ್ಲಿ ಬಿತ್ತಿ, ಸುತ್ತಲ ಮನಗಳ ಆರ್ದ್ರತೆಗೆ ಮೊಳಕೆಯಾಗುತ್ತದೆ. ಸುತ್ತಲ ಭಾವುಕತೆಯ ಹಂಬುಗಳಿಗೆ ಹಬ್ಬಿ ಹೂಬಿಡುತ್ತದೆ..

ಪ್ರೀತಿಯಿರಲಿ.
ನಿಮ್ಮ ನಲ್ಮೆಯ ಹನಿಗಳಿಗೆ ನನ್ನ ಹೂಬಳ್ಳಿಯಲ್ಲಿ ಹೂವಿನ ಗೊಂಚಲು..