ಪ್ರೀತಿಯು ದಿನವೊಂದರ ಆಚರಣೆಗೆ ಕಾದು ಕೂತ ಅಭಿವ್ಯಕ್ತಿ ಅನ್ನೋದು ಕ್ಲೀಷೆ ಅನ್ಸುತ್ತೆ ನಂಗೆ. [ಪ್ರೇಮಿಗಳ ದಿನವನ್ನಾಚರಿಸುವ ಎಲ್ಲ ಪ್ರೀತಿತುಂಬಿದ ಮನಸ್ಸುಗಳಿಗೆ ನನ್ನ ಗೌರವವಿದೆ.. ಅವರ ಯಾವ ಭಾವನೆಯನ್ನೂ ನಾನು ಕೀಳುಗಾಣಿಸುತ್ತಿಲ್ಲ]
ನನಗೆ "ಪ್ರೀತಿ ನದಿಯಂತೆ" ! (ಜೆ.ಕೆ.ಯವರ ಅನುಭಾವಿ ಬರಹದಿಂದ ಪ್ರೇರಣೆಗೊಂಡ ಭಾವ)
ಸದಾ ಹರಿವು - ಅದೇ ಹಳೆ ದಂಡೆಗಳ ಮಧ್ಯೆ ಹೊಸಾ ಹರಿವು, ತಂಪಿನಲಿ ತಂಪಾಗಿ, ಬಿಸಿಲಲ್ಲಿ ಬೆಚ್ಚಗಾಗಿ,ಭರತದಲಿ ಉಕ್ಕಿ ಮೊರೆದು, ಬೇಸಿಗೆಯಲಿ ತೆಳ್ಳಗೆ ಹರಿದು - ಸದಾ ಹರಿವು, ಅದೇ ಹಳೆ ದಂಡೆಗಳ ಮಧ್ಯೆ ಹೊಚ್ಚ ಹೊಸಾ ಹರಿವು...
ಎಲ್ಲರ ನಡುವಣ ಪ್ರೀತಿ ಕ್ಷಣದಿಂದ ಕ್ಷಣಕ್ಕೆ ದುಪ್ಪಟ್ಟಾಗಲಿ.. ಇಲ್ಲ ಖಂಡಿತಕ್ಕೂ ಇದು ದುರಾಸೆಯಲ್ಲ.
ನಮ್ಮ ನಡುವೆ ಎದ್ದು ನಿಂತಿರುವ ಕೋಟೆಗಳ ಕೆಡವಲು, ಮುರಿದು ಬಿದ್ದ ಸೇತುವೆಗಳ ಕೂಡಿಸಲು, ಎಲ್ಲ ಗದ್ದಲಗಳ ನಡುವೆ ಅರೆ ಘಳಿಗೆ ಹಕ್ಕಿ ಹಾಡ ಕೇಳುತ್ತಾ, ತಂಪು ಮೌನವ ಹೀರುತ್ತಾ ಬದುಕ ನೀಡಿದ ಧರಣಿಗೊಂದು ಪ್ರಶಾಂತ ನಮನ ಸಲ್ಲಿಸಲು, ಪಕ್ಕದಲಿ ಸಾಗುತಿಹ ಗಡ್ಡಧಾರಿ ಮುಸಲ್ಮಾನ ಔರಂಗಜೇಬನ ವಂಶಸ್ಥನೇ ಎಂಬ ಅನುಮಾನ ಕಾಡಿದಾಗ್ಯೂ ಅವನಿಗೊಂದು ನಗು ಚೆಲ್ಲಿ ವಿಶ್ ಮಾಡಲು, ಮುರಿದು ಬಿದ್ದ ಸಂಸ್ಕೃತಿ ದೇಗುಲಗಳ ಅಳಲಿನಲ್ಲೂ, ಗೆದ್ದು ಬಂದ ನಮ್ಮ ಸಹಿಷ್ಣುತೆಯ ನೆನಪಾಗಿ ತಲೆಬಾಗಲು, ಹಿರಿಮೆಯ ತಲೆಯೆತ್ತಿಯೂ ವಿನಯ ಪ್ರಭಾವಳಿಯಾಗಿರಲು - ಕ್ಷಣಕ್ಷಣಕ್ಕೂ ದುಪ್ಪಟ್ಟಾಗುವ ಪ್ರೀತಿ ಬೇಕೇ ಬೇಕು..
ಎಲ್ಲ ಪ್ರೀತಿಸುವ ಹೃದಯಗಳ ಜೀವದ ಬಳ್ಳಿ ಜೊತೆಗಾರರ ಪ್ರೀತಿ ಚಿಲುಮೆಯ ತಂಪುಣ್ಣಲಿ, ನಮ್ಮೆಲ್ಲರ ಪ್ರೀತಿ ಜೋಳಿಗೆಯು ಹಗುರಾಗಲಿ, ಬರಿದಾಗಲಿ ಮತ್ತೆ ಮತ್ತೆ ತುಂಬಲು ಮತ್ತೆ ಮತ್ತೆ ನೀಡಲು...
ಪ್ರೀತಿಯಿರಲಿ...
8 comments:
ಪ್ರೀತಿ, ಪ್ರಾಮಾಣಿಕತೆ- ಹೃದಯಗಳ ಬೆಸೆಯುವ ಬಂಧದ ಮೂಲದ್ರವ್ಯಗಳಲ್ಲವೇ....
ವಿಶ್ವಾಸವಿರಲಿ,
-ಗಣೇಶ ಎಲ್. ಡಿ.
ನಮಸ್ಕಾರ !
ಹೌದಲ್ವಾ..
ಪ್ರೀತಿ ನದಿಯಂತೆ..ಅದು ತೆಳ್ಳಗೆ,ಹುಚ್ಚಾಗಿ,ಉಕ್ಕೇರಿ ಹರಿಯುತ್ತೆ..
ನಿಮ್ಮ ಹಾರೈಕೆಯಂತೆ ದುಪ್ಪಟ್ಟವಾಗಲಿ ಪ್ರೀತಿ..
ವಸ್ತುವಿನೊಂದಿಗೆ ಹೆಚ್ಚಿನ ನಿಕಟತೆ ಬಂದಷ್ಟೂ ಪ್ರೀತಿ ಹೆಚ್ಚಾಗುವುದು. ಒಬ್ಬೊಬ್ಬರಿಗೆ ಒಂದೊಂದರ ಮೇಲೆ ಪ್ರೀತಿ. ಹಲವರಿಗೆ ಸಿಹಿಯು ಪ್ರೀತಿಯಾದರೆ, ಇನ್ನೂ ಕೆಲವರಿಗೆ ಕಹಿಯೂ ಪ್ರೀತಿ. ಕಟು ಜೀವನದಲ್ಲೂ ಈಸುವುದೇ ಒಂದು ಮಜ. ಅಧ್ಯಾತ್ಮ ಚಿಂತನೆಯಲ್ಲಿ ನನಗೆ ಹೆಚ್ಚಿನ ಪ್ರೀತಿ.
ಬ್ಲಾಗ್ ಬರಹ ಬಹಳ ಮನೋಜ್ಞವಾಗಿ ಮೂಡಿ ಬರುತ್ತಿದೆ. ಈ ಹೊಳೆಯಲ್ಲಿ ನೀರು ಅನವರತ ಹರಿಯಲಿ ಎಂದು ಆಶಿಸುವೆ
ಗುರುದೇವ ದಯಾ ಕರೊ ದೀನ ಜನೆ
ಪ್ರೀತಿ ಇಲ್ಲದ ಮೇಲೆ ಮೋಡ ಮಳೆಯಾಗುವುದು ಹೇಗೆ ಎನ್ನುವ ಕವಿವಾಣಿ ನೆನಪಾಯಿತು.
ಮಾನವನೆದೆಯಲಿ ಆರದೆ ಉರಿಯಲಿ ದೇವರು ಹಚ್ಚಿದ ದೀಪ.. ಅ೦ತ ಒ೦ದು ಹಾಡು .. ಎ೦ದೋ ಎಲ್ಲೋ ಕೇಳಿದ್ದು ತು೦ಬಾ ಇಷ್ಟವಾಗಿತ್ತು... ಅದು ಮತ್ತೆ ನೆನಪಾಯ್ತು.
ಸಿಂಧು,
ನಿಮ್ಮ ಕನ್ನಡ ತುಂಬ ಸಶಕ್ತವಾಗಿದೆ. ನಿಮ್ಮ ಬರವಣಿಗೆಯ ಓಘ ಚೆನ್ನಾಗಿದೆ.
ನೀವು ಬರೀತಾ ಇರಿ. ನಾನಿಲ್ಲಿ ಬರ್ತಾ ಇರ್ತೇನೆ.
ಗಣೇಶ್,
ಪ್ರೀತಿ ವಿಶ್ವಾಸಗಳು ಬದುಕಿನ ಮೂಲದ್ರವ್ಯಗಳು ಅಂತ ನನ್ನ ಭಾವನೆ ಕೂಡಾ..
ಕನಿಷ್ಠ ನಮ್ಮ ಮೇಲೇ ನಮಗೆ ಪ್ರೀತಿಯಿಲ್ಲದಿದ್ದರೆ, ವಿಶ್ವಾಸವೆಲ್ಲಿಂದ.. ವಿಶ್ವಾಸವಿಲ್ಲದೆ ಮುನ್ನಡೆಯುವುದೆಲ್ಲಿಗೆ..?
ನಿಮ್ಮ ಆವರಣೋಪಾಖ್ಯಾನ ಓದಿದೆ.. ಅದಕ್ಕೆ ಟಿಪ್ಪಣಿ ಬರೆಯಲು ಸ್ವಲ್ಪ ಸಮಯ ಬೇಕು.. ಅದೇ ಸಿಗುತ್ತಿಲ್ಲ.. :) ನೋಡೋಣ.
ಪ್ರೀತಿಯಿರಲಿ...
ನನ್ನ ಭಾವೋತ್ಕರ್ಷಗಳನ್ನು ಸಹನೆಯಿಂದ ಓದಿ, ಅಕ್ಕರೆಯಿಂದ ಟಿಪ್ಪಣಿಸಿದ, ಶಿವ್, ಶ್ರೀನಿವಾಸ್, ರಾಧಾಕೃಷ್ಣ, ಶ್ರೀ, ಜಗಲಿ ಭಾಗವತರು, ಎಲ್ಲರಿಗೂ ನನ್ನ ಸವಿನಯ ಧನ್ಯವಾದಗಳು. ಸಮಯವಾದಾಗ ನನ್ನ ನೆನಪಿನ ನೇವರಿಕೆಗಳ ಯಾನದಲ್ಲಿ ನೀವೂ ಜೊತೆಯಾಗಿ, ನಿಮ್ಮ ಒಳನೋಟಗಳನ್ನ ಹಂಚಿಕೊಳ್ಳಿ
ಬ್ಲಾಗೆಂಬ ವಿಶ್ವರೂಪ ದೋಣಿಯಲಿ ಭಾವತೀರಯಾನ...
ಪ್ರೀತಿಯಿರಲಿ..
Post a Comment