Thursday, June 28, 2007

(ಅಕ್ಷರ) ದುಃಖ ನಿವೇದನೆ

ಮನದೊಳಗೆ ಮೊನೆಯಾಡಿಸುವ ಹಳೆ ನೆನಪಿನ ಮುಳ್ಳಿಗೆ, ಕೇಳುತ್ತಿರುವ ಗಝಲ್ ಭಾವಗಳು ಮನದುಂಬಿ ಹೀಗೊಂದು ಅಕ್ಷರ(೨) ದುಃಖ ನಿವೇದನೆ.

ಹಚ್ಚಿದ ದೀಪ ಆರಲೇಬೇಕು,
ಮುಡಿದ ಹೂವು ಬಾಡಲೇಬೇಕು,
ಮತ್ತೆ ಮತ್ತೆ ನೆನಪಾಗಿಯೂ
ನಿನ್ನ ಮರೆಯಲೇಬೇಕು..


ಒಂಟಿ ನಾನು,
ನೀನು ಬರುವ ಮುಂಚೆ;
ಒಂಟಿ ನಾನು,
ನೀನು ಹೋದ ಮೇಲೆ ಕೂಡಾ;
ನೀನು ಬಂದರೇನು, ಬರದಿದ್ದರೇನು..


ಬಂದರೆ ಅರೆಘಳಿಗೆ ನಲಿವಲ್ಲಿ ಅದ್ದಿ ತೆಗೆದೀತು ಜೀವ,
ಹೊರಟ ಮೇಲೆ ಕೆಲ ದಿನಗಳು ಸವೆಯುತ್ತವೆ
ಹಸಿ ಗಾಯದಂತೆ,
ಬೇಸರವಿಲ್ಲ, ಉರಿ ಗೊತ್ತಾಗುವುದಿಲ್ಲ
ನಿನ್ನ ಕನಸು ತುಂಬುತ್ತದೆ ಗಾಯಕ್ಕೆ ರಂಗು.
....ಆಮೇಲೆ
ಇದ್ದೇ ಇದೆಯಲ್ಲ,
ದೀಪವಾರಿ, ಹೂಗಳುದುರಿ,
ಮರೆಯಲಿಕ್ಕೆಂದೇ ನೀನು ನೆನಪಾಗುವುದು..


ಇಲ್ಲ ಇದನ್ನು ಬರೆಯುವಾಗ ನಾನು ಅಳುತ್ತಿಲ್ಲ,
ನೀನು ನೆಮ್ಮದಿಯಿಂದ ಮಲಗು.
ಇಷ್ಟಕ್ಕೆಲ್ಲ ಅಳುತ್ತಾರೆಯೇ,
ನಿನ್ನ ಕಳೆದುಕೊಂಡಾಗಲೂ ಕಣ್ಣು ತುಸು ನೆನೆದಿತ್ತಷ್ಟೆ.

4 comments:

  1. "ಬಂದರೆ ಅರೆಘಳಿಗೆ ನಲಿವಲ್ಲಿ ಅದ್ದಿ ತೆಗೆದೀತು ಜೀವ,
    ಹೊರಟ ಮೇಲೆ ಕೆಲ ದಿನಗಳು ಸವೆಯುತ್ತವೆ
    ಹಸಿ ಗಾಯದಂತೆ,
    ಬೇಸರವಿಲ್ಲ, ಉರಿ ಗೊತ್ತಾಗುವುದಿಲ್ಲ
    ನಿನ್ನ ಕನಸು ತುಂಬುತ್ತದೆ ಗಾಯಕ್ಕೆ ರಂಗು..."

    :) :) :) :) :) :) :)

    ReplyDelete
  2. ಶ್ರೀ,

    :) :)
    ನಿನ್ನ ಕನಸು ತುಂಬುತ್ತದೆ ಗಾಯಕ್ಕೆ ರಂಗು.
    ಇದು ನನ್ನನ್ನ ತುಂಬ ಕಾಡಿದ ಭಾವ..

    ಇಷ್ಟು ಪ್ರೀತಿಸಬಹುದೆ ಯಾರಾದರೂ? ಅಥವಾ ಇಷ್ಟೂ ಪ್ರೀತಿಸದೆ ಇರಬಹುದೆ ಯಾರಾದರೂ?

    ReplyDelete
  3. 'ಭಾವ'ಕವಿತೆ ಸುಂದರವಾಗಿದೆ......ಮಿತಿಮೀರಿದ ಉತ್ಕಟತೆ, ಒಳ್ಳೆಯದೇ ಬಿಡಿ.

    ಕನಸುಗಾರನಿಗಿಂತ ಕನಸಿನಲ್ಲಿನ ಕನಸುಗಾರ ಹೆಚ್ಚು ಕೆಂಪೇ?

    ReplyDelete
  4. hmmm...very much a ghazal! ತುಂಬ ದಿನಗಳ ನಂತರ ಗಝಲ್ ಕೇಳ್ತಾ ನಿಮ್ಮಗಳೆಲ್ಲರ ಬ್ಲಾಗ್ ಗಳಿಗೆ ಒಂದು ಇಣುಕು ಹಾಕಿ ಹೋಗೋದಕ್ಕೆ ಬಂದೆ... ಹರಿಹರನ್ ಹಿನ್ನೆಲೆಯಲ್ಲಿ ಹಾಡ್ತಿದ್ದಾರೆ... ರೋಯಾ ಕರೇಂಗೆ ಆಪ್ ಭೀ..,:)
    ಚೆನ್ನಾಗಿದೆ, ರಾಗ ಹಾಕಿ ಹಾಡಬಹುದೇನೋ...

    ReplyDelete