Monday, June 12, 2017

ಎದುರ ಬದುರ ಅಥವಾ ಅಕ್ಕ-ಪಕ್ಕ... ಥೇಟ್ ಬದುಕಿನ ಹಾಗೆ.

ವಿಶಾಲ ಅಂಗಳ
ತುಸು ದೊಡ್ಡದೇ ಜಗಲಿ
ಉದೂದ್ದ ಕಿಟಕಿ
ಕೂರಬಹುದಾದ ಕಿಟಕಿ ತಳಿ
ಜಗಲಿಯಂಚಿನ ಕಲ್ಲು ಬೆಂಚು
ಹಂಚಿನಿಂದಿಳಿದ ಚಂದದ ದೀಪ
ಕೂತು ಕಣ್ಣು ನೆಟ್ಟರೆ ಅಂಗಳದಾಚೆಗೆ ಹೊಳೆ
ಹೊಳೆನೋಡಲು ಮರಸಲು
ಬೇಲಿ ಬೇಡದ ಎತ್ತರೆತ್ತರ ಮರಸಾಲು
ಎಂದೋ ತುಂಬಿಸಿಟ್ಟ ಕಮಲಕೊಳ
ಒಂದಿಂಚು ಧೂಳಿನ ನೆಲ
ಯಾರೂ ಕೂರದೆ ಬೆಪ್ಪಾದ ಆರಾಮುಕುರ್ಚಿ
ಮುಖ ದುಮ್ಮಿಸಿ ನಿಂತ ಕಾಫಿಮೇಜು
ತೆಗೆಯದೆ ಹೋದ ಕಿಟಕಿ ಬಾಗಿಲು
ಬೀಗದ ಸಖ್ಯದಲ್ಲಿ ಇಡೀ ಮನೆಯ ಅಳಲು
ಮನೆಯ ಸುತ್ತ ಹೂವರಾಶಿ
ಹಕ್ಕಿ,ಅಳಿಲು ಜೀವರಾಶಿ
ಗಿಳಿಯು ಪಂಜರದೊಳಿಲ್ಲ
ಅಕ್ಕರಾಸ್ಥೆಯಲಿ ಕಟ್ಟಿದ ಮನೆಯೊಳು ಮನೆಯೊಡೆಯನಿಲ್ಲ.
ನೋಡನೋಡುತ್ತ ಭಾರವಾಗುವ ಮನ
ಬದುಕು ಯೋಜನೆಗೆ ತಕ್ಕ ಹಾಗೆ ಇರುವುದಿಲ್ಲ.
ಒಂದು ಹೊಸಾ ಪ್ಲಾಟು - ಚೌಕ, ರಸ್ತೆ ಪಕ್ಕ, ಜಲವಸತಿ
ಇನ್ನೊಂದು ಸುಸಜ್ಜಿತ ಹಳೇ ಪ್ಲಾಟು - ಒಬ್ಬಳೇ... ಮನೆಯೊಡತಿ.

1 comment:

  1. ಕೆಮರಾದಿಂದ ಒಂದು ಫೋಟೋವನ್ನು ಕ್ಲಿಕ್ಕಿಸಿದ ಹಾಗೆ, ನಿಮ್ಮ ಕವನಗಳು ಒಂದು ಭಾವವನ್ನು ಕ್ಲಿಕ್ಕಿಸಿ ಸೆರೆ ಹಿಡಿಯುತ್ತವೆ. ಮತ್ತು ಕೆಮರಾದ focus ತರಹ, ನಿಮ್ಮ ಕವನ ಕೂಡಾ well-focused ಆಗಿರುತ್ತದೆ.

    ReplyDelete