Wednesday, May 20, 2009

ಈ "ಪರಿ" ಯ ಸೊಬಗು...

"ಯೇ ಕೌನ್ ಆಗಯೀ ದಿಲ್ ರುಬಾ ಮೆಹಕಿ ಮೆಹಕೀ.. ಫಿಜಾ ಮೆಹಕಿ ಮೆಹಕೀ ಹವಾ ಮೆಹಕಿ ಮೆಹಕೀ...."
ಈ ಸಾಲನ್ನು ನಾನು ಕೇಳಿದ ದಿನದಿಂದಲೂ ನನ್ನ ಒಳಗಣ್ಣ ಮುಂದಿದ್ದವಳು ಈಗ ಮಡಿಲಿಗೆ ಬಂದಿದ್ದಾಳೆ. ಒಂದೇ ವ್ಯತ್ಯಾಸವೆಂದರೆ ಅವಳು ಪುಟ್ಟ ಪುಟ್ಟ ಹೆಜ್ಜೆಯಿಡುತ್ತ ಬಂದವಳು, ಇವಳಿನ್ನೂ ಅಂಬೆಗಾಲಿಡಲು ಕಲಿಯಬೇಕಿದೆ.
ನನ್ನೆಲ್ಲ ಸಮಯ,ಸಮಯವಿಲ್ಲದಿರುವಿಕೆ, ನಿದ್ದೆ ಎಚ್ಚರ,ಕನಸು ಊಟ, ಶೌಚ, ದಿನಚರಿ, ರಾತ್ರಿಯಪರಿ ಎಲ್ಲವನ್ನೂ ಒಂದು ಘಮದಂತೆ ಆವರಿಸಿಕೊಂಡವಳ ಒಂದು ಪೋಸ್ ಇಲ್ಲಿದೆ.
ನಿದ್ದೆ ತೂಕಡಿಸಿಬರುವಾಗ ನಾನು ಎದ್ದು ಕೂತೇ ಇರುವಂತೆ ಮಾಡುವ, ಊಟದ ಬಟ್ಟಲು ನಾನು ಕೈಲಿ ಹಿಡಿಯುವಾಗಲೇ ತನ್ನ ಚಡ್ಡಿ ಒದ್ದೆ ಮಾಡಿಕೊಳ್ಳುವ, ಕಾಡುವ ಈ 'ಪರಿ' ಅಮ್ಮನಿಗೆ ತ್ರಾಸಾಗಿ ಮುಖ ದುಮ್ಮಿಸಿಕೊಂಡಿದ್ದಾಳೆ ಅಂತ ಗೊತ್ತಾಗುತ್ತಲೇ ಒಂದು ದೇವಲೋಕದ ದಿವ್ಯನಗು ನಕ್ಕುಬಿಡುತ್ತಾಳೆ. ನಾನು ಅತ್ತಾರೆ ಅಳಲವ್ವ ಈ ಕೂಸು ನನಗಿರಲಿ ಮಿಕ್ಕಾರೆ ಮಿಗಲಿ ಮನೆಗೆಲಸ..ದ ಉಲಿಯಾಗುತ್ತೇನೆ. ಅವಳ ಆಟಕ್ಕೆ ಅವಳಂತ ಇನ್ನೂ ಹಲವು ಮಕ್ಕಳೇ ಅವರ ನಗು ಆಟಗಳೇ ಸಾಟಿ.
ಸಾಕುಸಾಕೆನ್ನಿಸುತ್ತಲೇ ಮತ್ತೆ ಬೇಕೆನ್ನಿಸುವಂತೆ ಮಾಡುವ ಅವಳ ರೀತಿಗೆ ನಾನು ಫಿದಾ ಆಗಿಬಿಟ್ಟಿದೇನೆ. ಬರೆಯಲು ಹಂಚಿಕೊಳ್ಳಲು ವಿಷಯಗಳೇನೊ ಸಾಕಷ್ಟಿವೆ. ಆದರೆ ಅಮ್ಮನ ರೋಲು ಸ್ವಲ್ಪ ಜಾಸ್ತೀನೇ ಆಗ್ ಬಿಟ್ಟು ಬರೆಯಲು ಸಮಯ ಸಾಕಾಗುತ್ತಿಲ್ಲ. ಓದು ಬೆಳಿಗ್ಗೆ ಆಫೀಸ್ ಕ್ಯಾಬಿನಲ್ಲಿ ಮೊದಲ ೨೦ ನಿಮಿಷಕ್ಕೆ ಸೀಮಿತವಾಗಿದೆ.
ಬೇಸಿಗೆ ರಜೆ ಬಂದ ಪುಟ್ಟಿಯರು ಆ ಆರೂವರೆಯ ಚುಮುಚುಮು ಚಳಿಯಲ್ಲಿ ಸರದಿಯ ಮೇಲೆ ಸೈಕಲ್ ಹೊಡೆಯಲು ರೆಡಿಯಾಗಿರುವುದನ್ನ ನೋಡುತ್ತ ಆಫೀಸಿಗೆ ಹೊರಡುತ್ತೇನೆ. ಸಂಜೆ ಇನ್ನೂ ಬಿಸಿಲಿಳಿಯುವ ಮೊದಲೆ ಮನೆಗೆ ಬರುವಾಗಲೂ ಆ ಬೆಳಗಿನ ಚೈತನ್ಯದಲ್ಲೇ ಸೈಕಲ್ ಹೊಡೆಯುತ್ತಿರುತ್ತಾ ನಗುತ್ತಿರುವ ಅವರ ಚೈತನ್ಯಕ್ಕೆ ಆ ಬಾಲ್ಯದ ಜೀವನೋತ್ಸಾಹಕ್ಕೆ ಕಣ್ಣಾಗುತ್ತಾ ನನ್ನ ಮನಸ್ಸು ಗರಿಗೆದರಿದೆ. ಈ ಗಡಿಬಿಡಿಯ ಪುರುಸೊತ್ತಿಲ್ಲದ ದಿನರಾತ್ರಿಗಳಲ್ಲಿ ನನ್ನದಾದ ಒಂದೆರಡು ಗಳಿಗೆಗಳನ್ನು ಕಾದಿಟ್ಟುಕೊಳ್ಳಲು ದೇಹವನ್ನೂ ಅಣಿಮಾಡುತ್ತಿದ್ದೇನೆ. :) ನನ್ನ ಬೆರಳುಗಳನ್ನು ಕುಟ್ಟಲು ಪುಟಗೊಳಿಸಿದ ಆ ಎಳೆಯ ಮೊಗ್ಗುಗಳಿಗೆ ಅವರ ಚೈತನ್ಯಕ್ಕೆ ತಲೆಬಾಗಿದ್ದೇನೆ.
ನನ್ನ ಖುಶಿಯಲ್ಲಿ ಪಾಲ್ಗೊಂಡು ಸ್ಪಂದಿಸಿದ ನೀವು ಎಲ್ಲರಿಗೂ ಅಕ್ಕರೆಯ ನಮಸ್ಕಾರ.

-ಪ್ರೀತಿಯಿಂದ
ಸಿಂಧು

12 comments:

  1. ವಾಹ್! ಸೂಪರ್...

    ಮಗಳು ಮುದ್ದಾಗಿದ್ದಾಳೆ.....ಬರವಣಿಗೆಯೂ ಇಷ್ಟವಾಯಿತು...ಫೋಟೋ ಮತ್ತು ಲೇಖನವನ್ನು ಓದಿ ಮನಸ್ಸಿಗೆ ಹಾಯ್ ಎನಿಸಿತು...

    ಧನ್ಯವಾದಗಳು

    ReplyDelete
  2. ಸೃಷ್ಟಿ! ಮುದ್ದಾದ ’ಪರಿ’. ನಿಮ್ಮನ್ನು ಬರವಣಿಗೆಯಿಂದ ಈಕೆ ದೂರವಿಟ್ಟಿದ್ದಾಳೆ ಎನ್ನಬಹುದಲ್ಲವೇ.. ಆದರೂ ಆಕೆಯೊಂದಿಗೆ ಕಳೆಯುವ ಸಮಯದಿಂದ ಸಿಗುವ ಆನಂದ ಬರಹದ ಆನಂದಕ್ಕಿಂತಲೂ ಹೆಚ್ಚೂ ಇರಬಹುದು. ತುಂಬಾ ಸಮಯದ ಬಳಿಕ ಬ್ಲಾಗ್ ಒಂದು ಹೆಜ್ಜೆ ಮುಂದೆ ಹೋಯಿತು.

    ReplyDelete
  3. ಕ್ಯೂಟ್ ಕ್ಯೂಟ್ :)
    ಪರಿ ನಿಮ್ಮ ಬರವಣಿಗೆಗೆ ಇನ್ನಷ್ಟು ಸ್ಪೂರ್ತಿಯಾಗಲಿ..

    ReplyDelete
  4. ಅಲೆಲೆಲೆಲೆ...ಚಿಂದಕ್ಕಾ... :-)
    ಅಂತೂ ಬಂದ್ಯಲಾ...
    ನಮ್ಮ ಸೃಷ್ಟಿಗಿಂತ ಚೆಂದದ ಬರಹ ಯಾವುದು ಬೇಕು ಹೇಳು. ಆಗಾಗ ಹೀಗೆ ಅಮ್ಮನ ನಾಲ್ಕು ಸಾಲಿನ ಜೊತೆ ಪಾಪುನ ಮುಖದರ್ಶನಾನೂ ಆಗ್ತಾ ಇರ್ಲಿ, ಅಷ್ಟು ಸಾಕು ನಂಗಂತೂ ಸಧ್ಯಕ್ಕೆ.
    ಪಾಪುಗೊಂದು ಮುತ್ತು.

    ReplyDelete
  5. ಮುದ್ದಾದ ಮಗು, ಮುದ್ದಾದ ಬರಹ! ಅಭಿನಂದನೆಗಳು.

    ReplyDelete
  6. Lovely....

    'ಪರಿ'ಯ ಹಾಡು, ನಿಮಗಾಗಿ... ಹಾಗೇ ಸುಮ್ನೆ...

    मेरे घर आई एक नन्ही परी, एक नन्ही परी
    चांदनी के हसीन रथ पे सवार
    मेरे घर आई ...

    उसकी बातों में शहद जैसी मिठास
    उसकी सासों में इतर की महकास
    होंठ जैसे के भीगे-भीगे गुलाब
    गाल जैसे के बहके-बहके अनार
    मेरे घर आई ...

    उसके आने से मेरे आंगन में
    खिल उठे फूल गुनगुनायी बहार
    देख कर उसको जी नहीं भरता
    चाहे देखूँ उसे हज़ारों बार (२)
    मेरे घर आई ...

    मैने पूछा उसे के कौन है तू
    हंसके बोली के मैं हूँ तेरा प्यार
    मैं तेरे दिल में थी हमेशा से
    घर में आई हूँ आज पहली बार
    मेरे घर आई ...

    ReplyDelete
  7. ಸಿಂದು,ಬರಹ ಚೊಕ್ಕವಾಗಿ ಮುದ್ದಾದ ಮಗಳಂತೆ ಇದೆ..ಆಪ್ತವಾಗಿ ಬರೆಯುತ್ತೀರಿ ..ಸಂತೋಷವಾಯ್ತು ಓದಿ.ಸ್ವಲ್ಪ ದಿನ ನೀವು ಇಲ್ಲದೆ ಸ್ವಲ್ಪ ಬೇಸರವಾಗಿತ್ತು..ಈಗ ಮರಳಿ ಬ್ಲಾಗ್ ಲೋಕಕ್ಕೆ ಬಂದಿದ್ದು ಸಂತೋಷ..ಅಭಿನಂದನೆಗಳು

    ReplyDelete
  8. ನಿಮ್ಮ ಈ ’ಪರ’ಯಿಂದಾಗಿ ನೀವು ’ಸೃಷ್ಟಿ’ಸಿರುವ ಈ ಲೇಖನವನ್ನೋದಿ ಖುಶಿ ಆಯಿತು.. ನನ್ನ ಮಗಳ ಬೇಬಿ ದಿನಗಳು ನೆನಪಾದವು!!

    ReplyDelete
  9. ಪ್ರಮೋದ್,ಶಿವು,ವೇಣು,ಸುನಾಥ್,ಶರತ್ ಮತ್ತು ಎಲ್ಲರಿಗೂ
    ಥ್ಯಾಂಕ್ಯೂ. ನಿಮ್ಮ ಪ್ರೀತಿಗೆ ನನ್ನ ವಂದನೆಗಳು.

    ರಾಜೇಶ್,
    ಒಂಥರಾ ದೂರವಿಟ್ಟಿದಾಳೆ. ಇನ್ನೊಂತರಾ ಹೊಸಹೊಸ ಲಹರಿಗಳನ್ನ ನನ್ನೊಳಗೆ ಸೃಷ್ಟಿಸುತ್ತಿರುತ್ತಾಳೆ. ofcourse ಅಕ್ಷರರೂಪಕ್ಕಿಳಿಯುತ್ತಿಲ್ಲ. ಅವಳೊಡನೆ ಕಳೆಯುವ ಸಮಯದ ಆನಂದಕ್ಕೆ ನನಗೆ ಇನ್ನುಯಾವ ಹೋಲಿಕೆಯೂ ಸಿಕ್ಕಿಲ್ಲ..
    ಹೌದು ಯಾವಾಗಲೂ ಓಟದ ಬದುಕಿನಲ್ಲಿದ್ದ ನನಗೆ ಮೆತ್ತಗೆ ಒಂದು ಹೊರಳು,ಒಂದು ಪುಟ್ಟ ನೀಕು,ಪುಟಾಣಿ ಹೆಜ್ಜೆಗಳ ಅರ್ಥ ಮತ್ತು ಸೊಬಗು ಈಗ ತಿಳಿಯುತ್ತಿದೆ. ನನ್ನ ಬ್ಲಾಗ್ ಆ ಪೇಸ್pace ಗೆ ಹೊಂದಿಕೊಳ್ಳುತ್ತಾ ಇದೆ.. :)

    ಶಾಂತಲೆ,
    ನಿನ್ನ ನೋಡಿ ಖುಶಿಯಾಯಿತು. ಚಿಕ್ಕಿಯ ಸಿಹಿಮುತ್ತುಗಳನ್ನ ಬಡ್ಡಿಸಮೇತ ಕೊಟ್ಟಿದೇನೆ ನನ್ ಮಗಳಿಗೆ.

    ಶ್ರೀ,
    ನಂಗೂ ಈ ಹಾಡು ತುಂಬ ಇಷ್ಟ.
    ಎಲ್ಲಕ್ಕಿಂತ ಮೊದಲು ಅದ್ಯಾಕೋ ಜಿಂದಗೀ ಮೇರೆ ಘರ್ ಆನಾ ಇಷ್ಟ. ನೀವು ಸಿಕ್ಕಿದಾಗ ಈ ಹಾಡು ಹೇಳಲೇಬೇಕು.

    ಪುಟ್ಟಿಯ ಅಮ್ಮನ ಖುಶಿಯಲ್ಲಿ ನೆನಪಲ್ಲಿ ನಾನೂ ಭಾಗಿ.

    ಪ್ರೀತಿಯಿಂದ
    ಸಿಂಧು

    ReplyDelete
  10. ನಿಮ್ಮ ಬ್ಲಾಗ್ ನಲ್ಲಿ ಹೊಸ ಎಂಟ್ರಿ ನೋಡಿ ಖುಷಿ ಆಯಿತು :). ಬರವಣಿಗೆ ಸಾಕಷ್ಟು ಸಮಯವಿಲ್ಲವೆಂದರೆ, ನಿಮ್ಮ ಕ್ಯಾಮರಕ್ಕೆ ಸ್ವಲ್ಪ ಕೆಲಸ ಕೊಟ್ಟು, 'ಪರಿ'ಯ ಫೋಟೊಗಳನ್ನ ಅವಾಗವಾಗ ಅಪ್ಲೋಡ್ ಮಾಡಿ. ಆವಳು ನಿಮ್ಮ ಬರವಣಿಗೆಯಷ್ಟೇ ಹಿತವಾಗಿದ್ದಾಳೆ :)

    ReplyDelete
  11. nimmella barahagaloo nimma srushtiyante chenda....

    ReplyDelete