Monday, December 10, 2007

ಹೂವಿನಂತ ಕವಿತೆ

ಹೂವಿನಂತ ಕವಿತೆ
ಹಕ್ಕಿಯಾಗಿ ಹಾರಿಬಂದು
ಚೀಂವ್ ಗುಟ್ಟಿದ ಸಂಜೆ
ನೀಲಿ ಆಗಸದಲ್ಲಿ
ಕೆಂಪಿ ಸೂರ್ಯ ಮುಳುಗಿ
ಚಳಿಯ ಹೊದಿಕೆಯಿಂದಿಣುಕಿ
ನಗುವ ತಾರಾವಳಿ;


ಹಬೆಯಾಡುವ ಕಾಫಿ ಗ್ಲಾಸಿನಲ್ಲಿ
ಮತ್ತೆ
ಹೂವಿನಂತ ಕವಿತೆ
ಬೆಚ್ಚನೆ ನೆನಪಾಗಿ ಪಿಸುಗುಟ್ಟಿ
ರಸ್ತೆ ತುಂಬೆಲ್ಲ ಬೆಳಕಾಗಿ
ಪಾದಪಥದ ನಸುಗತ್ತಲಲ್ಲಿ
ಗೆಳೆಯರ ನಗುವಿನ ಗೀತಾವಳಿ;


ಹಕ್ಕಿ ಹಾರಿ ಹೋಗಿ
ನೆನಪು ಮಸುಕಾಗಿ
ಹೂವಿನಂತ ಕವಿತೆ
ಪದಗಳಷ್ಟೇ ಆಗಿ..
ಅಷ್ಟೇ ಮತ್ತೇನಿಲ್ಲ..
ಕಾಯುತ್ತಿದ್ದೇನೆ ಹೂವಿನಂತ ಕವಿತೆ
ಹಕ್ಕಿ ಹಾಗೆ ಹಾರಿ ಬರಬಹುದಾದ ಸಂಜೆಗೆ!

3 comments:

  1. ಅಕ್ಕಾ,
    ಕವಿತೆ ಚನ್ನಾಗಿ ಇದ್ದು.
    ಹಕ್ಕಿ ಬಂದೆ ಬಿಡ್ತು ಅಂತಾ ಹೇಳಕೆ ಬರದಿಲ್ಲೆ, ಬಂದ್ರು ಬರ್ಲಕ್ಕು ಬರದೇನು ಇರ್ಲಕ್ಕು.
    ಆ ಹಕ್ಕಿಗೆ ಆಕಾಶ ದೊಡ್ಡಕೆ ಕಂಡ್ರೆ! ಹಾರಾಡಾಲು ರೆಕ್ಕೆಗಳಂತು ಇದ್ದು ಅನ್ನೋ ಕೊಬ್ಬು ಇದ್ರೆ!?
    ಬಂದರೆ ಒಳ್ಳೆದು ಬರದೆ ಇದ್ರೆ ಏನು ಲಾಸ್ ಇಲ್ಲೆ. ಹಕ್ಕಿ ಅದೃಷ್ಟ ಅಲ್ದಾ!

    ReplyDelete
  2. ವ್ಹಾ..ಸಂಜೆ ಮತ್ತು ಕವಿತೆ ಎರಡನ್ನೂ ಸೇರಿಸಿಕೊಂಡು ಪೋಣಿಸಿದ ಸಾಲುಗಳು ಖುಷಿಕೊಟ್ಟವು

    ReplyDelete
  3. ರಂಜೂ,

    ಥ್ಯಾಂಕ್ಸ್.

    ಮಜಾ ಇದು. ನನ್ನೆಣಿಕೆ ಏನೋ ಇರುತ್ತೆ ಸಾಲು ಮೂ(moo)ಡುವಾಗ..ಓದುವವರ ಮನಸ್ಥಿತಿಗೆ ತಕ್ಕಂತೆ ಆ ಸಾಲುಗಳು ತೋರುವುದು - ಒಂದು ರೀತಿಯ ಕ್ಯಾಲಿಡೋಸ್ಕೋಪಿಕ್ ನೋಟ. ಟ್ಯೂಬಲ್ಲಿರುವುದು ಬರಿಯ ನಾಲ್ಕಾರು ಬಣ್ಣದ ಗಾಜಿನ ಚೂರು..ಕಾಣಿಸುವುದು ಬಣ್ಣಬಣ್ಣದ ಚಿತ್ತಾರ ಲೋಕ.

    ನಾನು ಕಾಯುತ್ತಿರುವುದು ಹೂವಿನಂತ ಕವಿತೆಯ ಮಾಧುರ್ಯವೊಂದು ಹಕ್ಕಿಯಂತೆ ಹಗುರಾಗಿ, ಯಾರೂ ತಳ್ಳದೆ ತಾನೇ ತಾನಾಗಿ ಹಾರಿ ಬಂದು ಅಚ್ಚರಿ ಹುಟ್ಟಿಸುವ ಸಂಜೆಗೆ!

    ಸಂಜೆ ನಂಗ್ಯಾವತ್ತೂ ಸಂಭ್ರಮದ ಸಮಯ.
    ಎಲ್ಲ ಕೆಲಸಗಳು ಮುಗಿದು ಬಿಡುವಿನ ಹವ್ಯಾಸದ ಯೋಚನೆ,
    ನನ್ನವನೊಂದಿಗೆ ಎಸ್.ಎಲ್.ವಿ ಕಾಫಿ ಸೇವನೆ,
    ಜನ ಜಾಸ್ತಿ ಇರದ ರಸ್ತೆಯೊಂದರಲ್ಲಿ ವಾಕಿಂಗ್..,
    ಖಾಲಿ ಮೈದಾನದ ಕಟ್ಟೆಯಲ್ಲಿ ಕೂತು ಹರಟೆ.. ಯಾವುದೇ ಗುರಿಯಿಲ್ಲ ಅರ್ಜೆಂಟಿಲ್ಲ.. ಟೈಮಾದ್ರೆ ಪರವಾಗಿಲ್ಲ ಇನ್ನೂ ರಾತ್ರಿಯಿಡೀ ಇದೆ.. :)

    ವೇಣು,
    ಸಂಜೆಸಾಲುಗಳಲ್ಲವಾ ಖುಷಿ ಕೊಡಲೇಬೇಕು. ಬರೆದವರಿಗಂತೂ ಖುಷಿ.. ಓದಿದವರ ಖುಷಿ ಕೇಳಿ ಇನ್ನೂ ಖುಷಿ.

    ReplyDelete