ಎಲ್ಲ ಮುಗಿದು ಹೋಗಿ ತುಂಬ ದಿನಗಳಾಯಿತು.
ಕರ್ಛೀಫ್ ಗರಿಗರಿಯಾಗಿದೆ.
ದೀಪವಾರಿದ್ದ ಕಣ್ಗಳಲ್ಲಿ -
ಇನ್ನಾವುದೋ ಬೆಳಕಿನ ಪ್ರತಿಫಲನ.
ನೆನಪುಗಳ ಸಂಗ್ರಹ, ಕಾಲದ ಇಂಡೆಕ್ಸ್ ಹೊತ್ತು -
ಅಂತರಂಗದ ಕಪಾಟಲ್ಲಿ ಸೇರುತ್ತಿದೆ.
ಹಳೆಯ ದಿನಗಳ ರಸ್ತೆಗಳಲ್ಲಿ ಓಡಾಡುವಂತೆ -
ಕನಸು ಬೀಳುವುದಿಲ್ಲ ಈಗ.
ಮಧ್ಯರಾತ್ರೆ ಬೀದಿಯಲ್ಲಿ ಬೈಕಿನ ಸದ್ದಾದರೆ -
ನನ್ನ ಕಣ್ಗಳು ಮಳೆ ಸುರಿಸುವುದಿಲ್ಲ,
ನೋಡಬೇಕೆನ್ನಿಸಿದರೂ ಕಿಟಕಿಯಲ್ಲಿ ಬಗ್ಗುವುದಿಲ್ಲ.
ಬದುಕಿನ ನದಿಗೆ ಈಗ ಹೊಸಪಾತ್ರದಲ್ಲಿ ಸರಾಗ ಹರಿವು.
ಹೆಜ್ಜೆಗಳಿಗಿನ್ನೂ ಓಡುವ ಬಲ ಬಂದಿಲ್ಲ.
ಹಾಗಂತ ಕುಗ್ಗಿ ನಿಂತಿಲ್ಲ.
ಎಲ್ಲದೂ ಮರೆತಿಲ್ಲ, ನಾನು ನೆನಪಿಸಿಕೊಳ್ಳುವುದಿಲ್ಲ ಅಷ್ಟೆ.
ಅವನ ಜೊತೆಪಯಣದ ರೈಲಿನಿಂದ
ನಾನಿಳಿದ ನಿಲ್ದಾಣದ ಹೆಸರು - ವಿಚ್ಛೇದನ.
ಆ ಹಾದಿಗೆ ಲಂಬವಾಗಿ ದೂರಸಾಗಲಿರುವ ರೈಲು ಹತ್ತಿದ್ದೇನೆ.
ಗಾರ್ಡು ಸೀಟಿಯೂದಿದ ಮೇಲೆ ಕೇಳಿಸಿತು.
ಅಲ್ಲೆಲ್ಲೋ ರೇಡಿಯೋದಿಂದ ತೂರಿ ಬಂದ ಕಿಶೋರ್ ಕುಮಾರನ ಹಾಡು,
ಕಭೀ ಅಲ್ವಿದಾ ನಾ ಕೆಹನಾ...
*******
ಲೆಕ್ಕ ತುಂಬ ಸಲೀಸು,
ಆದ್ರೂ ಗಣಿತವೆಂದ್ರೆ ನನಗೆ ಅಷ್ಟಕ್ಕಷ್ಟೇ.
ಭಾವಲಹರಿಯ ಭಾಷೆಗಳು,
ಅಚ್ಚರಿ ಹುಟ್ಟಿಸುವ ವಿಜ್ಞಾನ,
ಇನ್ನೂ ಓದಬೇಕು, ಹೋಗಿ ನೋಡಬೇಕಿನ್ನಿಸುವ ಚರಿತ್ರೆ,
ಲೆಕ್ಕ ಮಾತ್ರ -ಮುಖವಿಲ್ಲ, ಮನವಿಲ್ಲದ ಅಂಕಿ,ಸಂಖ್ಯೆ,ಚಿಹ್ನೆ-ಸೊನ್ನೆ..
ಜೊತೆಪಯಣದ, ಸಹಗಮನದ ಸುಹೃದ ನೀನೆತ್ತ?
ಒಂದು ಕೊರೆಮಾತು, ಬಂಡಿ ಬಂಡಿ ಹಿಂಸೆ,
ಚುಚ್ಚು ಮೊನೆಯ ಮೌನ
ಕಾನೂನು ಬರೆದಿಟ್ಟ ವಿದಾಯದ ಸುತ್ತ
ಆಗಸ್ಟ್,ಅಕ್ಟೋಬರ್,ಮಾರ್ಚ್,ಏಪ್ರಿಲ್,ಜುಲೈ....
೧,೨೪,೧೧,೨೭,೧೦... ಮೊದಲಾದ ತಾರೀಖುಗಳ
ಯಾತನಾಮಯ ನೆನಪಿನ ಮೊತ್ತ
ಮೊತ್ತದಲ್ಲಿ ಕೂಡಿದ್ದೇನು ಕಳೆದಿದ್ದೇನು?
ಅದಕ್ಕೇ ಗಣಿತವೆಂದ್ರೆ ನನಗೆ ಅಷ್ಟಕ್ಕಷ್ಟೇ.
"ಕರ್ಛೀಫ್ ಗರಿಗರಿಯಾಗಿದೆ" - ಒಂದು ಸಾಲೇ ತುಂಬಾ ಕಥೆ ಹೇಳುತ್ತಿದೆ.
ReplyDelete"ನೆನಪುಗಳ ಸಂಗ್ರಹ, ಕಾಲದ ಇಂಡೆಕ್ಸ್ ಹೊತ್ತು - ಅಂತರಂಗದ ಕಪಾಟಲ್ಲಿ ಸೇರುತ್ತಿದೆ." ತಂತ್ರಜ್ಞಾನದ ಪಾರಿಭಾಷಿಕ ಶಬ್ದಗಳಿಂದಲೇ ಎಂತಹ ಭಾವದಲೆ ಎಬ್ಬಿಸಿದ್ದೀರಿ...ವ್ಹಾಹ್.
"ಜೊತೆಪಯಣದ, ಸಹಗಮನದ ಸುಹೃದ ನೀನೆತ್ತ?"
ಗಣಿತವನ್ನು ಬಿಟ್ಟು ಇಂತಹ ತಂತ್ರಜ್ಞಾನದ ಕಡೆಗಾದರೂ ಬಂದು ಕಿಶೋರರ ಹಾಡು ನಿಜವಾಗಲೆಂದು... :)
ಒಳ್ಳೆಯ ಕವನಗಳು. ಒಗಟಿನಂತಹ ಸಾಲುಗಳಲ್ಲಿ ಸಾವಿರ ಭಾವಗಳು. ಮಿಲನ ತರುವ ಹರುಷಕ್ಕೂ ವಿಚ್ಛೇದನದ ನೋವಿಗೂ ನಂಟು ಕೆಲವೇ ಕೆಲವು ಪದಗಳಲ್ಲಿ ತುಂಬಿದ್ದೀರಿ. ವಂದನೆಗಳು.
ReplyDeletechannagi barididira
ReplyDeleteನೆನಪುಗಳ ಸಂಗ್ರಹ, ಕಾಲದ ಇಂಡೆಕ್ಸ್ ಹೊತ್ತು - ಅಂತರಂಗದ ಕಪಾಟಲ್ಲಿ ಸೇರುತ್ತಿದೆ.
super kalpane
ಅಬ್ಬಬ್ಬ!!!
ReplyDeleteಸಿಂಧು ಅವರೇ,
ReplyDeleteತುಂಬಾ ಮನೋಜ್ಞವಾಗಿ ಮೂಡಿಬಂದಿದೆ.
ರೈಲು ನಿಲ್ದಾಣ, ಹಳಿಗಳು, ಗಾರ್ಡ್ ಸೀಟಿ, ಕಿಶೋರ್ ಹಾಡು..ಎಲ್ಲವನ್ನೂ ಹಿಡಿದಿಟ್ಟಿರುವ ರೀತಿ ಸೊಗಸು..
ಕೆಲವೊಮ್ಮೆ ಜೀವನದ ಗಣಿತ ಇಷ್ಟು ಕಷ್ಟವಾಗುವುದು ಉಂಟು ಅಲ್ವಾ..
ಇಷ್ಟಪಟ್ಟು, ಸ್ಪಂದಿಸಿದ ಎಲ್ಲರಿಗೂ..
ReplyDeleteನನ್ನದೇ ಯಾವುದೋ ಒಂದು ಹಳಹಳಿಕೆ, ಸುಮ್ಮನಿದ್ದೂ ಸುಮ್ಮನಿರಲಾಗದೆ ಪದಗಳ ಸಾಂಗತ್ಯ ಬಯಸಿ ಹೊರಬಂದ ಅಭಿವ್ಯಕ್ತಿ ನಿಮಗೆ ಮೆಚ್ಚುಗೆಯಾಗಿದ್ದಕ್ಕೆ ಧನ್ಯವಾದ.
ಕಿಶೋರರ ಹಾಡು ನಿಜವಾಗಬೇಕಾ? ನನಗೆ ಹಾಗನ್ನಿಸುತ್ತಿಲ್ಲ
:(
ಜೀವನವೇ ಗಣಿತವಲ್ಲ.. ನನಗೆ ಹಾಗಾಗುವುದು ಚೂರೂ ಇಷ್ಟವಿಲ್ಲ.. ಆದ್ರೆ ಜೀವನದಲ್ಲಿ ಗಣಿತದ ಪಾಲು (ಮತ್ತೆ ಗಣಿತ!) ಹೆಚ್ಚಾದಾಗ ತುಂಬ ರಗಳೆ ಅಂತ ನನ್ನ ವೈಯುಕ್ತಿಕ ಅಭಿಪ್ರಾಯ.
This comment has been removed by the author.
ReplyDeletemarevemba ointmentu kalavemba bandageu avanu madida gaaya alisutte....
ReplyDeletemundando gayada nenapadaga summane nakubidi
tumba cennada kavite
'Deepavrida dariyalli inyavudo belakina pratiphalanavideyalla' ashtu saaku
MALNAD HUDGI
ಪ್ರಿಯ ಮಲ್ನಾಡ ಹುಡುಗಿ..
ReplyDeleteಸ್ಪಂದನಕ್ಕೆ ಧನ್ಯವಾದಗಳು.
ಮುಂದೆಂದೋ ಗಾಯದ ನೆನಪಾದಾಗ ನಕ್ಕುಬಿಡುವುದು..! ಇದು ನನಗೆ ನಿಲುಕದ ವಿಷಯ. ಅಳುತ್ತ ಕೂರುವುದಿಲ್ಲ. ಆದರೆ ವಿಷಣ್ಣತೆಯಿಂದ ಹೊರಬರಲು ಸ್ವಲ್ಪ ಸಮಯ ಬೇಕಾಗುತ್ತದೆ.
ದೀಪವಾರಿದ ಕಣ್ಗಳಲ್ಲಿ ಬೆಳಕನ್ನ ಪ್ರತಿಫಲಿಸಿದ ಜೀವವೊಂದರ ಆಸರೆ, ಮತ್ತು ಆ ಪ್ರತಿಫಲನವನ್ನು ಕಾಯ್ದು ಪೋಷಿಸಿದ ಹಲವು ಜೀವಗಳ ಹಾರೈಕೆ ಬೆನ್ನಿಗಿದೆ. ಬದಲಾದ ದಾರಿಯಲ್ಲಿನ ನಡಿಗೆ ಗಟ್ಟಿಯಾಗತೊಡಗಿದೆ.