Friday, November 23, 2012

ಮುಗಿಲ ಹೊಳವು!

ಕಲಕಿ ಹೋಗಿರುವ
ಮನದಿ ಸುಮ್ಮನೆ
ಕತ್ತು ಮೇಲಕ್ಕೆತ್ತಿ ನೋಡಿದೆ
ಚಳಿಗಾಲದ ನೀಲಿ ಆಕಾಶ-ದ
ತುಂಬೆಲ್ಲ ಓಡುವ ಬಿಳಿ ಬಿಳಿ ಮೋಡ
ಬದುಕಿನ ಋತುವೂ ಹೀಗೆ ಅಲ್ಲವೆ?
ಮೋಡ ಕವಿದಂತೆ
ಕೆಲವು ಮಳೆತುಂಬಿ,
ಇನ್ಕೆಲವು ಹೊಗೆತುಂಬಿ
ಕೆಲವಷ್ಟು ಓಡುತ್ತಾ ನೆರಳೂಡಿ
ಮುಂದಿನೂರಲ್ಲಿ ಮಳೆಸುರಿಸುವುವು
ಕೆಲವಂತೂ ದಿನವಿಡೀ
ರಗಳೆ ಹಚ್ಚಿ ಕವಿದು ಕೂತು
ಸುರಿಯದೇ, ಸುಮ್ಮನೂ ಇರದೆ
ಧಗೆ ಹಚ್ಚಿ ಹೋಗುವವು
ಇನ್ನಷ್ಟು ಕಾಳಿದಾಸನ
ಉಜ್ಜಯಿನಿಯಿಂದಲೇ ಬಂದ ಹಾಗೆ
ಕಾವ್ಯವರ್ಷಿಣೀ
ನವಿಲಿಗೇ ನಲಿವು ಕೊಡುವ ಹಾಗೆ
ಗರಿಬಿಚ್ಚುವ ಹಾಗೆ ಹುರಿದುಂಬಿಸಿದವೆಷ್ಟೋ
ಕಾದು ಕೂತು ಕೆಂಪಾದ ರೈತನ
ಮಡಿಲಿಗೆ ತಂಪು ಸುರಿದವೆಷ್ಟೋ
ಅರ್ಧ ರಾತ್ರಿಗೆದ್ದು
ಗದ್ದೆ ಬದು ಸರಿ ಮಾಡಲು ಹೊರಡಿಸಿದವೆಷ್ಟೋ..

ಇಲ್ಲಿ ಸುಮ್ಮನೆ ಕಲಕಿ ಹೋದ
ಮನಸ್ಸಿಗೆ ಅನಿಸುತ್ತದೆ
ಘಟನೆಗಳು ಘಟಿಸುವುದು
ಬದುಕಿನ ಅನಂತ ಅವಕಾಶದಲ್ಲಿ
ಮೋಡಗಳ ಹಾಗೆ.
ಈ ಕ್ಷಣ ಖಾಲಿ
ಮತ್ತೆ ತುಂಬಿದ ಮೋಡಗಳ ಹಾಗೆ
ಏನೆಲ್ಲ ನಡೆಸಿಯೂ ಮುಂದೋಡುವ ಹಾಗೆ.
ತಡೆಯಲಾರದ ಹಾಗೆ
ಬಯಸಿದ್ದೆ ನಡೆಯಲಾರದ ಹಾಗೆ
ಅನಿರೀಕ್ಷಿತ ಮೋಡದಲ್ಲೊಂದು
ನಿರೀಕ್ಷಿತ ಸತ್ಯದ ಹನಿ ಬಚ್ಚಿಟ್ಟುಕೊಂಡ ಹಾಗೆ.
ಕವಿಗೆ ಕಂಡ ನೀಲಿ ಮುಗಿಲು
ಕಪ್ಪಾಗಿ ಕವಿದ ಹಾಗೆ.

3 comments:

  1. ಮನವ ಆಳ ಅರ್ಥವಾಗದ ಸಾಗರ.

    ಒಳ್ಳೆಯ ಕವನ.

    ReplyDelete
  2. ಬದುಕು ಎಲ್ಲ ಋತುಗಳನ್ನು ತುಂಬಿಕೊಂಡ ಹಾದಿ ಎನ್ನುವುದನ್ನು 'ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ' ಕವನ ಸಮರ್ಥವಾಗಿ ಚಿತ್ರಿಸುತ್ತದೆ.
    ಈ ಸಾಲುಗಳು ಪದೇಪದೇ ಓದಿಸಿಕೊಳ್ಳುತ್ತವೆ....
    'ಘಟನೆಗಳು ಘಟಿಸುವುದು
    ಬದುಕಿನ ಅನಂತ ಅವಕಾಶದಲ್ಲಿ
    ಮೋಡಗಳ ಹಾಗೆ.
    ಈ ಕ್ಷಣ ಖಾಲಿ
    ಮತ್ತೆ ತುಂಬಿದ ಮೋಡಗಳ ಹಾಗೆ'

    ReplyDelete
  3. ಬದುಕು ಎಲ್ಲ ಋತುಗಳನ್ನು ತುಂಬಿಕೊಂಡ ಹಾದಿ ಎನ್ನುವುದನ್ನು 'ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ' ಕವನ ಸಮರ್ಥವಾಗಿ ಚಿತ್ರಿಸುತ್ತದೆ.
    ಈ ಸಾಲುಗಳು ಪದೇಪದೇ ಓದಿಸಿಕೊಳ್ಳುತ್ತವೆ....
    'ಘಟನೆಗಳು ಘಟಿಸುವುದು
    ಬದುಕಿನ ಅನಂತ ಅವಕಾಶದಲ್ಲಿ
    ಮೋಡಗಳ ಹಾಗೆ.
    ಈ ಕ್ಷಣ ಖಾಲಿ
    ಮತ್ತೆ ತುಂಬಿದ ಮೋಡಗಳ ಹಾಗೆ'

    ReplyDelete