Friday, February 15, 2008

ಇಷ್ಟೆ..ಅಷ್ಟೆ..

ಸುತ್ತ ನಾಕು ಚುಕ್ಕಿ,
ನೆಟ್ಟಗೆಳೆದರೆ ನಕ್ಷತ್ರ,
ಸೊಟ್ಟಗೆಳೆದರೆ ಬಳ್ಳಿರಂಗೋಲೆ,
ನನ್ನದೇ ಚುಕ್ಕಿ, ನನ್ನದೇ ಗೆರೆ. ಇಷ್ಟೆ.


ಮಂಡಲವ ಮೀರಿ
ಪಥ ಹುಡುಕುವ ಮನ
ಮತ್ತೆ ಮತ್ತೆ
ನಾನೇ ಇಟ್ಟ ಚುಕ್ಕಿ
ಎಳೆದ ಗೆರೆಯೊಳಗೆ
ಸುತ್ತಿ ಸುತ್ತಿ
ಕಣ್ಣ ಕೊನೆಯಲ್ಲಿ ಹನಿಯಾಗಿ
ತುಂಬುತ್ತದೆ. ಅಷ್ಟೆ.


ಗೊತ್ತಿಲ್ಲ
ಇಷ್ಟಕ್ಕೂ ನನಗ್ಯಾಕೆ
ರಂಗೋಲಿಯ ಉಸಾಬರಿ
ಅದು ಹೇಗೋ ಏನೋ
ಇದೇ ಬದುಕಿನ ಪರಿ,
ಅರಿವಿರದೆ
ಇಟ್ಟ ಚಿಕ್ಕೆ
ಎಳೆದ ಗೆರೆ
ನನ್ನದೇ ಮಂಡಲದಲ್ಲಿ
ನಾನೇ ಸೆರೆ. ಪಥಭ್ರಷ್ಟೆ.

36 comments:

  1. ಸಿಂಧು...
    ಚೆನ್ನಾಗಿದೆ.

    "ಅರಿವಿರದೆ
    ಇಟ್ಟ ಚಿಕ್ಕೆ
    ಎಳೆದ ಗೆರೆ
    ನನ್ನದೇ ಮಂಡಲದಲ್ಲಿ
    ನಾನೇ ಸೆರೆ."

    ಈ ಸಾಲುಗಳು ತುಂಬ ಇಷ್ಟವಾದವು.

    ReplyDelete
  2. shantala tilisida saalugalu nijakku bahala chennaagide. naanu katege shift aagona antidde. neenu kavitege shift aagtiro haagide? :)

    ReplyDelete
  3. ಶಾಂತಲಾ ಹೇಳಿದ ಸಾಲುಗಳು ನನಗೂ ಇಷ್ಟವಾದವು. ಚೆನ್ನಾಗಿದೆ.

    ReplyDelete
  4. ಜೇಡದ ನೆನಪು ಬಂತು.

    ಅರಿವಿಟ್ಟು ಇಟ್ಟ ಚುಕ್ಕಿಗಳೆ ಚೆಲ್ಲಾಪಿಲ್ಲಿಯಾಗುತ್ತಿದೆ.....

    ReplyDelete
  5. ಸುಂದರ ಅಭಿವ್ಯಕ್ತಿ.

    ಚಂದಿನ

    ReplyDelete
  6. ಇಷ್ಟಕ್ಕೂ ನಮಗ್ಯಾಕೆ ರಂಗೋಲಿ ಉಸಾಬರಿ? ಇದು ಬದುಕಿನ ಪರಿಯಷ್ಟೆ?
    ಚೆನ್ನಾಗಿದೆ ಕವನ..

    ReplyDelete
  7. ಮ೦ಡಲದ ಒಳಗೆ ಇರುವುದು,ಬಿಡುವುದು ನಿನಗೆ ಬಿಟ್ಟಿದ್ದು, ಚಿಕ್ಕೆ ಹಾಕಿ ಗೆರೆ ಎಳೆದು ಒಮ್ಮೆ ಅದರ ಹೊರಗೆ ನಿ೦ತು ನೋಡು!!!!!

    ReplyDelete
  8. ಸೊಗಸಾಗಿದೆ ಕವಿತೆ. ಅರ್ಥಪೂರ್ಣವೂ...
    ನನಗೆ ಇಡಿಯ ಕವಿತೆಯ ಪ್ರತಿ ಸಾಲೂ ಇಷ್ಟವಾಯ್ತು

    ನಲ್ಮೆ,
    ಚೇತನಾ

    ReplyDelete
  9. ಚನ್ನಾಗಿದೆ ಕವನ. ನಾವು ಇಟ್ಟ ಚುಕ್ಕಿ, ಎಳೆದ ಗೆರೆಗಳಲ್ಲಿ ನಾವೇ ಸೆರೆ. ಸಕತ್ ಸಾಲುಗಳು.

    ReplyDelete
  10. ಚುಕ್ಕೆ ಚುಕ್ಕೆಯಿಂದ ಹಾಯುವ ರೇಖೆಗಳಲಿ ಮನಸಿನ ಭಾವಗಳ ಮಿಡಿತ ಚಂದಕ್ಕಿದೆ ....... ಅದಕ್ಕೆ ಇರಬೇಕು ಎಲ್ಲ ನೋಟಗಳಿಂದಾಚೆ ಇನ್ನೊಂದು ನೋಟವಿದೆ... :))

    ಬೆಳಗು!

    ReplyDelete
  11. ಕೊನೆಯ ಸಾಲುಗಳನ್ನು ಬರೆದಿಟ್ಟುಕೊಂಡಿದ್ದೀನಿ. ತುಂಬಾ ಇಷ್ಟವಾದುವು.

    ReplyDelete
  12. ಒಮ್ಮೊಮ್ಮೆ ಸೆರೆ ಅನಿಸುವ ಗೆರೆಗಳ ಹೊರಗೆ ಬಂದರೆ ಅವೇ ಸುಂದರ ಅನಿಸುವುದೂ ಇದೆಯಲ್ಲ... ಸಾಲುಗಳು ಹೇಳುವ ಭಾವಕಥನ ಇಷ್ಟವಾಯ್ತು.

    ReplyDelete
  13. ಸಿಕ್ಕಾಪಟ್ಟೆ ಚೆನ್ನಾಗಿದೆ ಕವನ! ಒಂದೊಂದು ಸಾಲೂ ಮುತ್ತುಪೋಣಿಸಿದ್ದೀರಾ! ರಂಗೋಲಿಯ ರೂಪಕ ಗಾಢವಾಗಿಯೂ ಸರಳವಾಗಿ ಬಂದಿದೆ, ತುಂಬಾ ಇಷ್ಟ ಆಯ್ತು

    ReplyDelete
  14. ಸಂಕೀರ್ಣ ಭಾವನೆಗಳ ಸರಳ ಅಭಿವ್ಯಕ್ತಿ ಈ ಕವನ.

    ReplyDelete
  15. ಅರ್ಥವತ್ತಾದ ಕವನ, ಸರಳ ಸುಂದರ

    ReplyDelete
  16. ತುಂಬಾ ಚೆನ್ನಾಗಿದೆ. ಅರಿತವರು ಅರಿವಿರದೆ ಚಿಕ್ಕೆಯಿಟ್ಟು ಗೆರೆಯೆಳೆದಂತೆ ಸುಲಭವಾಗಿ ಮೂಡಿ ಬಂದಿದೆ.

    ReplyDelete
  17. ಕವಿತೆ ಪ್ರತಿ ಸಾಲೂ ತುಂಬಾ ಚೆನ್ನಾಗಿವೆ. ಬದುಕನ್ನು ಹೀಗೆ ಸರಳ ಮಾತು ಮತ್ತು ಘಟನೆಗಳ ಮೂಲಕವೇ ಕಟ್ಟಿಕೊಡುವ ಪ್ರಯತ್ನದಲ್ಲಿ ನೀವೂ ಸಕ್ಸಸ್!! ಒಟ್ಟಾರೆ, ಸಖತ್ ಖುಷಿಯಾಯ್ತು!! ಥ್ಯಾಂಕ್ಯೂ ಒಂದೊಳ್ಳೆ ಪದ್ಯಕ್ಕಾಗಿ..!!

    ReplyDelete
  18. Hi, Sindhu,"ನೆಟ್ಟಗೆಳೆದರೆ ನಕ್ಷತ್ರ,
    ಸೊಟ್ಟಗೆಳೆದರೆ ಬಳ್ಳಿರಂಗೋಲೆ,
    ನನ್ನದೇ ಚುಕ್ಕಿ, ನನ್ನದೇ ಗೆರೆ" yaako tumbha istawayitu.

    ReplyDelete
  19. ಸಿಂಧು,
    ತುಂಬಾ ಇಷ್ಟವಾದವು ಸಾಲುಗಳು..
    ಎಷ್ಟು ನಿಜ ಅಲ್ವಾ..ನಕ್ಷತ್ರ,ಬಳ್ಳಿ,ಮಂಡಲ ಎಲ್ಲಾ ಆ ಚುಕ್ಕಿಗಳಲ್ಲಿ ಇರುತ್ತೆ..ನಾವು ಹೇಗೆ ಜೋಡಿಸ್ತಿವೋ ಹಾಗೆ..

    ReplyDelete
  20. ಅರ್ಥಪೂರ್ಣ ಕವನ. ಸಾಲುಗಳೆಲ್ಲಾ ತುಂಬಾ ಸರಳವಾಗಿವೆ.
    ಆದರೂ practical ಆಗಿ ಯೋಚ್ನೆ ಮಾಡಿದಾಗ, "ಇಷ್ಟಕ್ಕೂ ನನಗ್ಯಾಕೆ
    ರಂಗೋಲಿಯ ಉಸಾಬರಿ" ಅಂದಿದ್ದು ಸರಿನಾ..?

    ನನಗೆ ಎರಡನೇ ಪ್ಯಾರಾ ನ ಮತ್ತೆ ಮತ್ತೆ ಓದಿ ಹೀಗನ್ನಿಸ್ತು..

    ReplyDelete
  21. ನನ್ನ ಮನದ ಕುದಿಸಾಲುಗಳಿಗೆ ಪ್ರೀತಿಯಿಂದ ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು.

    ಶಾಂತಲಾ,
    ಹುಂ. ಅಲ್ದಾ?

    ಶ್ರೀನಿಧಿ
    ಅರ್ಥವಾಗಲಿಲ್ಲ

    ವಿಕ್ರಮ,
    ರೂಪಾಂತರ, ಸ್ಥಳಾಂತರ ಎರಡೂ.. :)
    ಇಲ್ಲ ಬಿಡು, ನನ್ನ ಕವಿತೆ ಕುದಿವ ಕ್ಷಣಗಳಲ್ಲಿ ಚೂರೂ ಹಿಂಜರಿಯದೆ ಜಾರಿ ಬಿದ್ದ ಎರಡೇ ಎರಡು ಕಂಬನಿಯಂತೆ..
    ಕಥೆಯ ಕತೆಯೇ ಬೇರೆ.. ಹೇಳಹೊರಟರೆ ಉದ್ದ ಕತೆಯಾಗಿಬಿಡುತ್ತೆ.. ;)

    ಸು-ಮನಸ್ವಿನೀ
    ಹುಂ.. ಚೆನಾಗಿದೆ ಅನ್ನಕ್ಕಾಗಲ್ಲ, ಸ್ವಲ ಚೂಪಾಗಿ ಕೊರೆಯುವಂತಿದೆ.

    ರಾಧಾಕೃಷ್ಣ,
    ಪೂರ್ತಿ ಜೇಡದಂತಲ್ಲ, ಜೇಡ ಇನ್ಯಾರನ್ನೋ ಸಿಗಿಸುವುದಕ್ಕೆ ಬಲೆ ಹೆಣೆಯುತ್ತದೆ. ನನ್ನ ಭಾವ - ನಮ್ಮ ಒಳಿತಿಗೆಂದು ನಾವೇ ಕಟ್ಟಿಕೊಳ್ಳುವ ಪರಿಧಿಯ ಬಗ್ಗೆ.

    ಚಂದಿನ,
    :) ನಿಮ್ಮ ಹೆಸರು ಚಂದಿದೆ.

    ಶ್ರೀ
    ಏನ ಹೇಳಲಿ?

    ತನ್ ಹಾಯಿ,
    :)ಅಲ್ಲವಾ? ನಿಮಗೂ ಹಾಗೇ ಅನ್ನಿಸಿತೆ?

    ಶಶೀ,
    ನೀನು ಬರೆದಿದ್ದು ನಿಜ. ಆದರೆ ಮಂಡಲದ ಹೊರಗೆ ನಿಂತು ನೋಡಲಾಗುವುದು ಕಷ್ಟ ಸಾಧ್ಯ. ಇಷ್ಟಕ್ಕೂ ತನ್ನ ಮಂಡಲವ ತಾನೇ ಬಿಡಿಸಿಕೊಂಡವಳಿಗೆ ಹೊರಗೆ ಹೋಗುವ ತುಡಿತವಿದ್ದೂ ಹೋಗುತ್ತಾಳಾ?

    ಚೇತನಾ,
    ಇಡೀ ಕವಿತೆಯ ಪ್ರತಿಸಾಲೂ ಒಂದೊಂದು ಕುದಿ..

    ರಂಜೂ,
    ಏನ್ ಸಕ್ಕತ್ತೋ ಏನೋ..

    ಬೆಳಗು
    ಹುಂ ಇದು ಭಾವಲಹರಿಯೇ.

    ಸುಧನ್ವಾ,
    ಚಂಪಕಾವತಿಯ ರಾಜಕುವರನ ಮೆಚ್ಚುಗೆಗೆ ಮನಸ್ಸು ಉಬ್ಬಿ ನಿಂತಿದೆ. ನಿಮ್ಮ ಸಿಟಿ ಪಾಡ್ದನಗಳ ಅಭಿಮಾನಿ ನಾನು.

    ಅರುಣ,
    ನಿಮ್ಮ ರೀತಿಗೆ ನಿಮ್ಮ ಪ್ರೀತಿಗೆ ಕಣ್ಣ ಹನಿಗಳೆ ಕಾಣಿಕೆ.

    ಸುಪ್ತದೀಪ್ತಿ,
    ಸೆರೆಯು ಸುಂದರವೆನಿಸುವುದೇ ಇಲ್ಲ. ಮತ್ತೇನೆಂದರೆ ಹಾಳುಮನಸು ಎಲ್ಲ ಬಯಲೂ ಸೆರೆಯೇ ಅನಿಸುವ ಭಾವಕ್ಕೆ ಬಹಳ ಸುಲಭವಾಗಿ ಜಗ್ಗಿಬಿಡುತ್ತದೆ.

    ಶ್ರೀ,
    ಎಷ್ಟ್ ದಿನಾ ಆಗಿತ್ರೀ ನಿಮ್ಮನ್ನೋಡಿ..
    ಸಧ್ಯ ಸಿಕ್ಕಿದ್ರಲ್ಲ.

    ಸುನಾಥ,
    ಏನ ಹೇಳಲಿ. ಮೆಚ್ಚುಗೆಗೆ ಮನದುಂಬಿದೆ.

    ವೇಣು,
    ಥ್ಯಾಂಕ್ಸ್. ನಿಮ್ಮ ಗುಲಾಬಿ ಮೊಗ್ಗಿನ ಹುಡುಗನಂಥ ಕತೆ ತುಂಬ ಹಿಡಿಸಿತು.

    ಚಕೋರ,
    ಹುಂ. ಈ ಸುಲಭ ಸಾಧ್ಯತೆಯೇ ಸಮಸ್ಯೆ ಮತ್ತು ಪರಿಹಾರದ ಒಳಗುಟ್ಟು.

    ಶಶಿ,
    ನಿಮಗೆ ಹಿಡಿಸಿದ್ದು ನಂಗೂ ಖುಶಿ. ಆದ್ರೆ ಸಕ್ಸಸ್ ನನ್ನ ಮಡಿಲ ಹೂವಲ್ಲ.

    ರಾಜು,
    ಎಷ್ಟು ಅಜೀಬ್ ಜಿಂದಗೀ ಅಲ್ದಾ? ನೆಟ್ಟಗೆಳೆದರೆ ನಕ್ಷತ್ರದಂತೆ, ಸೊಟ್ಟ ಹೋದರೆ ಬಳ್ಳಿರಂಗೋಲಿ.. ಎರಡೂ ಚೆಲುವೇ! ಆದ್ರೇನು ಮಾಡ್ತೆ - ಚಂದ ನೋಡಕ್ಕಾಗದೆ ಮಂಡಲದ ಸೆರೆ ಅಂತ ಮನಸು ಕೊರಗಿ ಕೂರುವುದಲ್ಲ..!

    ಶಿವ್,
    ನಿಜ ನೀವಂದಿದ್ದು.

    ಪ್ರಮೋದ್,
    ಚಿತ್ರಕಾರನಿಗೇ ರಂಗೋಲಿಗಳ ಬಗ್ಗೆ ಬದುಕಿನ ಚಿತ್ತಾರದ ಬಗ್ಗೆ ಸ್ಪಷ್ಟೀಕರಣ ಕೊಡುವಷ್ಟು ಗೊತ್ತಿಲ್ಲ..
    ನನ್ನ ಭಾವ - ಬರೆದು ಬಂದಿದ್ದು ಬಂದ ಹಾಗೆ ಆಗಲಿ, ಅಥವಾ ಏನು ಮಾಡಿದರೂ ಅದರ ಚಿತ್ತಾರ ಅದೇ ಅರಳುತ್ತದೆ. ಜೊತೆಗೆ ಸಾಗುವುದು ಮಾತ್ರ ನಮ್ಮ ಮಿತಿ. ಹೀಗಿದ್ದೂ ಮನಸ್ಸು ಎಲ್ಲೆ ಮೀರುತ್ತದೆ. ಮಿತಿಯ ಮರೆಯುತ್ತದೆ - ಎಂಬುದು.
    ಥ್ಯಾಂಕ್ಸ ಅನಿಸಿಕೆಗಳಿಗೆ.

    ಪ್ರೀತಿಯಿರಲಿ,
    ಸಿಂಧು

    ReplyDelete
  22. ಭಾವಗೀತೆಯೊಂದನ್ನು ಕೇಳುತ್ತಾ ನಿಮ್ಮ ಕವನ ಓದಲು ಶುರು ಮಾಡಿದೆ. ಐದಾರು ಸಾಲು ಓದುಲು ಈ ಕವನ ಏನೋ ಒಂದು ರೀತಿ ಚೆನ್ನಾಗಿದೆ ಅನ್ನಿಸಿತು. ಹಾಡು ನಿಲ್ಲಿಸಿ ನಿಮ್ಮ ಕವನ ಓದಿಕೊಂಡೆ. ಸಂತೋಷವಾಯಿತು :-)

    ReplyDelete
  23. Koneya pyara 'Brecht' na ' Driver chakra badalisuttiddane...." salugalannu nenpisidavu. sutta ittukonda chukki, eleda salugalu nammanne bandhiyagisuva dashtyada kuritu bahalashtu uttaravillada prashnegalu huttikondavu....

    ReplyDelete
  24. kavana chennagide...chukke koodisi bareyuva rangoliguu badukiguu holike chennagide....rangoli bidisuva kaigalu nammavadruu ..... oresuva vidi bereyadee allave...

    ReplyDelete
  25. Nieevu bareva reethi tumba tumba muddaagide..padagala jodane adbhutavaagide…

    Nanna putaani blog

    www.navilagari.wordpress.com

    idakke nimma blaag rolnalli swalpa jaaga kodi:)

    Nimma somu

    ReplyDelete
  26. ಪ್ರಿಯ ಸಿಂಧು ಅಕ್ಕ,

    ಹೇಗಿದ್ದೀ?

    ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

    ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

    ಡೇಟು: ೧೬ ಮಾರ್ಚ್ ೨೦೦೮
    ಟೈಮು: ಇಳಿಸಂಜೆ ನಾಲ್ಕು
    ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು


    ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

    ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

    ಅಲ್ಲಿ ಸಿಗೋಣ,
    ಇಂತಿ,

    ಸುಶ್ರುತ ದೊಡ್ಡೇರಿ

    ReplyDelete
  27. ಪ್ರಿಯ ಸಿಂಧು,
    'ಪಥಭ್ರಷ್ಟೆ' ಈ ಪದ ನನ್ನ ತುಂಬಾ ಕೊರೆಯುತ್ತಿದೆ.. ಕವನ ಇನ್ನೂ ಕಾಡುತ್ತಲೇ ಇದೆ..!ನನಗೆ ರಂಗೋಲಿ ಇಟ್ಟು ಗೊತ್ತಿಲ್ಲ.. ಗೊತ್ತಿಲ್ಲದೇ ಎಷ್ಟೋಸಲ ಚುಕ್ಕಿಗಳ ಸಮೇತ ಅಳಿಸಿದ್ದು ಮಾತ್ರ ನೆನಪಿದೆ!

    ReplyDelete
  28. ಶ್ರೀಕಾಂತ್,

    ನನ್ನ ಭಾವಲಹರಿಯನ್ನ ಎತ್ತಿ ಮೆತ್ತಗೆ ನೇವರಿಸಿದ್ದಕ್ಕೆ ಧನ್ಯವಾದಗಳು.

    ಸವಿಗನಸು ಸಿಹಿನೆನಪಿಗೆ ಜಾಗಮಾಡಿ ಕೊಟ್ಟವರಿಗೆ,
    ನೀವು ನನ್ನ ಕವನದ ಅಂತರಾಳಕ್ಕೆ ಕಣ್ಣು ಹಾಯಿಸಿದ್ದೀರಿ. ಹೌದು ನಮ್ಮದೇ ಮಿತಿಗಳಿಗೆ ನಮ್ಮ ಬಯಕೆಗಳ ಬಲದಿಂದಲೇ ಒಂದು ಧಾರ್ಷ್ಟ್ಯ ಹುಟ್ಟಿಕೊಂಡುಬಿಡುತ್ತದೆ. ನಿಮ್ಮ ನೋಟ ಸೂಕ್ಶ್ಮವೆನಿಸಿತು. ಇನ್ನು ಬ್ರೆಕ್ಟ್ ನ ಸಾಲುಗಳು.. ಓಹ್ ಧನ್ಯತೆ.

    ದಿನೇಶ್,
    ಇಲ್ಲಿ ನನ್ನ ಉದ್ದೇಶ ಮತ್ತು ಆಶಯ ವಿಧಿಯ ಬಗೆಗಲ್ಲ. ನನಗೆ ಅದರ ಬಗ್ಗೆ ಹೆಚ್ಚು ಗೊತ್ತಿಲ್ಲ. ನಮ್ಮದೇ ಇಷ್ಟಗಳು ಅನುಕೂಲಗಳು, ನಮಗೆ ಒಳ್ಳೆಯದು ಅಂದುಕೊಂಡವುಗಳು ಹೇಗೆ ನಮ್ಮನ್ನ ಕಟ್ಟಿಹಾಕುತ್ತವೆ ಅನ್ನುವುದರ ಬಗ್ಗೆ. ಇಲ್ಲಿನ ಕರ್ತೃ ಕ್ರಿಯೆ ಮತ್ತು ಕರ್ಮ ಎಲ್ಲದೂ ನಾವೇ. ಫಲಿತಾಂಶ ಮಾತ್ರ ತಳಮಳ.

    ಸೋಮು,
    ನಂಗಿಷ್ಟವಾದ ಬ್ಲಾಗುಗಳ ಲಿಸ್ಟಿನಲ್ಲಿ ನವಿಲಗರಿಯನ್ನು ಸೇರಿಸಿದ್ದೇನೆ.

    ಸುಶ್ರುತ,
    ಬರಬೇಕೆಂದಿದೆ. ಬಹುಶಃ ಬರುತ್ತೇನೆ. ನೋಡೋಣ. ಹೊಸದೊಂದು ಚೆಲುವಾದ ಸಂಜೆಯನ್ನ.


    ತೇಜಸ್ವಿನಿ,
    ನನ್ನನ್ನೂ ತುಂಬ ಕಾಡಿಸಿದ ಪದ ಮತ್ತು ಭಾವ ಅದು. ನಮ್ಮ ಒಳದನಿಯ ಮ್ಯಾಪೇ ಬೇರೆ. ಹೊರಗಡೆ ಹಿಡಿವ ಹಾದಿ ಬೇರೆ. ದಾರಿ ತಪ್ಪಿದಂತೆಯೇ ಅಲ್ಲವೇ?

    ನಿಮ್ಮ ಸಮಾರಂಭ ಹೇಗೆ ನಡೆಯಿತು.

    ಪ್ರೀತಿಯಿಂದ
    ಸಿಂಧು

    ReplyDelete
  29. ಸಿಂಧು ಅವರೆ, ಬಹಳ ಚೆನ್ನಾಗಿ ಅರ್ಥಪೂರ್ಣವಾಗಿದೆ. ಬದುಕಿನ ರಹಸ್ಯವನ್ನ ಪುಟ್ಟ ಕವನದಲ್ಲಿ ಬಹಳ ಭಾವ ಪೂರ್ಣವಾಗಿ ಹಿಡಿದಿಟ್ಟಿದ್ದೀರಿ ..

    ಹೀಗೇ ಬರೆಯುತ್ತಿರಿ :-)

    ReplyDelete
  30. ನಿಮ್ಮ ಕವಿತೆ ಬಹಳ ಅದ್ಬುತವಾಗಿದೆ ಚಿಕ್ಕದಾಗಿದ್ದರು ಚೊಕ್ಕವಾಗಿದೆ.

    ReplyDelete
  31. ಕಾರ್ತೀಕ್ ಮತ್ತು ಪುಷ್ಪಲತಾ

    ಖುಶಿ, ಓದಿ ಇಷ್ಟಪಟ್ಟಿದ್ದಕ್ಕೆ. ಆಗಾಗ ಬಂದು ಓದುತ್ತಿರಿ. :)

    ಪ್ರೀತಿಯಿಂದ
    ಸಿಂಧು

    ReplyDelete
  32. ಕವನ ತುಂಬಾ ಚೆನ್ನಾಗಿದೆ.
    ಆದರೂ.. ನನಗೆ ಕೊನೆಯ ಪ್ಯಾರಾದಲ್ಲಿ ಪ್ರಕಟಿತ ಭಾವನೆ ಅರ್ಥವಾಗುತ್ತಿಲ್ಲ.
    ನೀವು ಪ್ರಯೋಗಿಸಿರುವ "ಉಸಾಬರಿ" ಹಾಗು "ಪಥಭ್ರಷ್ಟೆ" ಪದಗಳು ಆ ಪ್ಯಾರಾದ ಭಾವನೆಯನ್ನು ಗೊಂದಲಕ್ಕೆ ಸಿಳುಕಿಸಿದೆ...

    -ಅನೂಪ

    ReplyDelete
  33. ಅನೂಪ್,

    ಧನ್ಯವಾದಗಳು ನಿಮ್ಮ ಅನಿಸಿಕೆಗೆ.

    ನನ್ನ ಕವಿತೆ ಮೂಡುವಾಗ ಇದ್ದ ಭಾವ ಒಂದು ಬಗೆಯ ಹುಸಿಕೊರಗು ಅಥವಾ ತಳಮಳ. ಎಲ್ಲ ಚೆನ್ನಾಗಿರುವುದೂ ಇದ್ದಕ್ಕಿದ್ದಂಗೆ ಸಂಕೋಲೆಯಾಗತೊಡಗುತ್ತದೆ. ನಾವೇ ಕಟ್ಟಿದ ಮನೆಯ ಗೋಡೆಗಳೇ ಅಡ್ಡ ಹಾಯುವ ಹಾಗೆ. ಮನಸ್ಸು ಬಯಲು ಬಯಸುತ್ತದೆ. ಬಯಲು ಸಿಕ್ಕಿದರೆ ಖುಶಿಯೋ ಇಲ್ಲ. ಅಯ್ಯೋ ಗೋಡೆಗಳ ನಡುವಿನ ಭದ್ರತೆ ಬೇಕೆನ್ನಿಸುತ್ತ್ತದೆ.

    ಇದು ಎಲ್ಲ ವ್ಯಕ್ತಿಗಳಿಗೂ ಆಗುತ್ತವೆ. ಕೆಲವರಿಗೆ ತೀವ್ರವಾಗಿ ಅನಿಸುತ್ತದೆ. ಇನ್ನು ಕೆಲವರು ಅನಿಸಿದ್ದನ್ನು ಅಕ್ಷರಕ್ಕಿಳಿಸುತ್ತಾರೆ. ನಾನು ಭಾವವನ್ನು ಅಕ್ಷರಗಳಲ್ಲಿ ಬಸಿದಿಡುವ ಜಾತಿ.. :)

    ಉಸಾಬರಿ ಅಂತ ಯಾಕೆ ಬರೆದೆ ಅಂದರೆ - ಅದು ರಂಗೋಲಿ, ಮತ್ತು ಹೀಗೇ ಚಿತ್ತಾರ ಬರಬೇಕೆಂದು ನನ್ನ ಉದ್ದಿಶ್ಯವಿರಲಿಲ್ಲ. ಮತ್ತೆ ಯಾಕೆ ಚಂದ ಚಿತ್ತಾರದ ರಂಗವಲ್ಲಿಯ ಹಿಂದೆ ಮನಸ್ಸು ಹೋಗಬೇಕು?

    ಪಥಭ್ರಷ್ಟೆ - ಏನನ್ನೋ ಹುಡುಕುತ್ತ ಹೊರಡುವ ಮನಸ್ಸು ತನ್ನ ದಾರಿಯನ್ನ ತಾನೇ ಕಳೆದುಕೊಂಡು ದಾರಿ ತಪ್ಪಿದ ಭಾವ.

    ಇದಿಷ್ಟರ ಹೊರತಾಗಿಯೂ ಇದು ಕವಿತೆ. ನಿಮ್ಮ ಓದು, ಓದಿನ ಮೂಡು, ಮನಸ್ಥಿತಿ ಇವೆಲ್ಲದರ ಮೇಲೆ ನಿಮಗೆ ಬೇರೆಯದೇ ಕಾಣ್ಕೆ ಕಾಣಿಸಿರಬಹುದು. ಅದು ಕವಿತೆಯ ಸಂಭಾವ್ಯತೆ. ಹಂಚಿಕೊಳ್ಳಿ. ಕಲಿಯಬಯಸುತ್ತೇನೆ.

    ಪ್ರೀತಿಯಿಂದ
    ಸಿಂಧು

    ReplyDelete