Wednesday, June 6, 2007

ಬಿನ್ನಹ

ಬೆಳದಿಂಗಳ ಹಂಬಲದ ನಾನು,
ಕತ್ತಲು ಕವಿದ ಮನದಂಗಳದ ಮೂಲೆಯಲ್ಲಿ ಹಣತೆ ಹಚ್ಚಿಟ್ಟರೆ
ಬಿರುಗಾಳಿ ಎಬ್ಬಿಸಿ ನಂದಿಸುತ್ತೀ ಯಾಕೆ ಬದುಕೇ?


ಎದೆಯ ಬಟ್ಟಲಲ್ಲಿ ಕಂಬನಿಗಳ ತುಂಬಿ
ಬಾನ ಚಂದಿರನ ಹಿಡಿದಿಟ್ಟು ಕಣ್ಣು ತಂಪಾಗಿಸುತ್ತಿದ್ದೇನೆ,
ಬಟ್ಟಲನ್ನ ಕಾಲಲ್ಲಿ ಒದ್ದುಕೊಂಡು ಹೋಗುತ್ತೀ ಯಾಕೆ ಬದುಕೇ?

ನಾನಿಲ್ಲಿ ಬಂಜರು ಕಣಿವೆಯಲ್ಲಿ ನಿಂತು
ಬೆಟ್ಟದ ತುದಿಯ ಹಸಿರ ಹಂಬಲದಿಂದ ದಿಟ್ಟಿ ಮೇಲಕ್ಕೆತ್ತಿದೇನೆ,
ಕಾಲಡಿಯ ನೆಲವೇ ಕುಸಿವಂತ ವೀರಗಾಸೆಯಾಡುತೀ ಯಾಕೆ ಬದುಕೇ?

ಇಂಪಾದ ರಾಗಗಳನ್ಯಾರೋ ದೂರದಲ್ಲಿ ಉಲಿಯುತ್ತಿದಾರೆ...
ಕೇಳಲು ಮೈಯಿಡೀ ಕಿವಿಯಾಗಿಸಿಕೊಂಡಿದೇನೆ,
ರಾಗಗಳ ಕತ್ತು ಹಿಸುಕುತ್ತೀ ಯಾಕೆ ಬದುಕೇ?

ಸಿಡಿವ ನರಗಳ ಸಮಾಧಾನಿಸಲೆಂದು ಪುಸ್ತಕಗಳ ಕೈಗೆತ್ತಿಕೊಂಡರೆ,
ಎಲ್ಲ ಪುಟಗಳಲ್ಲೂ ರಕ್ತದ ಶಾಯಿ ತುಂಬಿರುತ್ತೀ ಯಾಕೆ ಬದುಕೇ?

ನಾನು ಕಾಣುತ್ತಿರುವುದೆಲ್ಲ ಕನಸಷ್ಟೇ ,ನನಸಾಗುವುದಿಲ್ಲ
ಅಂತ ಗೊತ್ತಿದೆ, ನನ್ಗೂ.
ಅದನ್ನೇ ಮತ್ತೆ ಮತ್ತೆ ನೆನಪಿಸಿ
ಭಾವದೊರತೆಯ ಬತ್ತಿಸಬೇಡ ಬದುಕೇ,

ಬದುಕೇ, ನಿನ್ನ ದಮ್ಮಯ್ಯ
ಕನಿಷ್ಠ ಕನಸ ಕಾಣಲು ಬಿಡು;
ಇಲ್ಲಾ ಈ ಹೃದಯದ ಮಿಡಿತವ ತಪ್ಪಿಸಿಡು..


[ವರ್ಷಗಳ ಹಿಂದಿನ ಈ ಬಿನ್ನಹಕ್ಕೆ ಬದುಕು ಕರುಣಾಪೂರ್ಣಳಾಗಿ ಭೂಮಿತೂಕದ ಪ್ರೀತಿಯಿಂದ ನನ್ನನ್ನು ಅಪ್ಪಿಕೊಂಡಿದೆ॥ ಕನಸುಗಳ ಹಸಿರುಹಾದಿಯಲ್ಲಿ ಜೀವನ್ಮುಖೀ ಮಲ್ಲಿಗೆಗಳು ಅರಳಿವೆ। ಆ ತೂಕ ನಿಭಾಯಿಸುವ ಜವಾಬ್ದಾರಿ, ಆ ಪ್ರೀತಿಯನ್ನ ಸವಿದು ಹಂಚುವ ಕೃತಜ್ಞತೆಯನ್ನು ನಾನೀಗ ನಿಭಾಯಿಸಬೇಕಿದೆ...]

4 comments:

  1. ಚೆನ್ನಾಗಿದೆ ನಿಮ್ಮ ಶೈಲಿ. ಪ್ರಶ್ನೆಗಳನ್ನು ಕೇಳುತ್ತ ಹೋಗಿ ಕವನ ಕಂಡ ಅಂತ್ಯ ಇಷ್ಟವಾಯಿತು. ಹೀಗೆ ಮುಂದುವರಿಯಲಿ ಬರವಣಿಗೆ......

    ReplyDelete
  2. ಕವನವು ಭಾವಪೂರ್ಣವಾಗಿದೆ.'ನಾನು ಕಾಣುತ್ತಿರುವುದೆಲ್ಲ ಕನಸಷ್ಟೇ ,ನನಸಾಗುವುದಿಲ್ಲ
    ಅಂತ ಗೊತ್ತಿದೆ, ನನ್ಗೂ' - ಈ ಸಾಲು ಇಷ್ಟವಾಯ್ತು.ಈ ಬದುಕಿನ ಏರು ಪೇರುಗಳೇ ವಿಚಿತ್ರವಾದವು, ಇಂದಿನಂತೆ ನಾಳೆಯಿಲ್ಲ, ಬದುಕು ನಿಮ್ಮನ್ನು ಹಸನ್ಮುಖಿಯಾಗಿಸಿಇದ್ರೆ ಒಳ್ಳೆಯದು.

    ReplyDelete
  3. ಮಹೇಶ್,

    ಮೆಚ್ಚುಗೆಗೆ ಧನ್ಯವಾದಗಳು.

    ಶ್ರೀಕಾಂತ್,

    ಹೌದು ಏರು ಪೇರುಗಳೇ ವಿಚಿತ್ರ ಮತ್ತು ವಿಶಿಷ್ಟ. ಹಸನ್ಮುಖತೆ ಒಳ್ಳೆಯದು. ಜೀವನ್ಮುಖತೆ ತುಂಬ ಅವಶ್ಯಕ. ಅಳುವಿನಲ್ಲಿ ಮಂಜಾದ ದಾರಿಯಲ್ಲಿ ತೋರುಬೆರಳಿನಂತೆ ಜೀವನ್ಮುಖತೆ.
    ನಿಮ್ಮ ಸ್ಪಂದನಕ್ಕೆ ಧನ್ಯವಾದಗಳು.

    ಪ್ರೀತಿಯಿರಲಿ,
    ಸಿಂಧು

    ReplyDelete
  4. ಸಿಂಧು,
    ನಿಮ್ಮ ಬರಹ ಒಂದೇ ಕ್ಷಣದಲ್ಲಿ ನನ್ನನ್ನು ಭಾವನಾ ಲೋಕಕ್ಕೆ ಕರೆದೊಯ್ಯಿತು. ನಿಮ್ಮ ಉಪಮೆ ಮತ್ತು ಅಂತರಾಳದ ಕವನಗಳು ನನಗೆ ತುಂಬಾ ಇಷ್ಟವಾಗಿವೆ. ಭಾವನೆಗಳಿಗೆ ವಿಚಾರಧಾರೆ ನೀಡುವ ಇಂತ ಕವಿತೆಗಳು ನಿಮ್ಮಿಂದ ಜಲಧಾರೆಯಾಗಿ ಹರಿದು ಬರಲೆಂದು ಹಾರೈಸುವ,
    ಇಂದ್ರೇಶ್

    ReplyDelete