Friday, June 10, 2016

ಯೋಗಾ-ಏಗ

ಅದೇ ತುದಿ-
ಹೆಜ್ಜೆ ಮುಂದಿಟ್ಟರೆ ನಿರ್ವಾತ,
ವಾಪಸಾದರೆ ಹೆಣಗಾಟ.
ತುದಿಯಲ್ಲೆ
ನಡೆಯುತ್ತದೆ ದೊಂಬರಾಟ.

ದೊಂಬರ ಹುಡುಗಿ
ಪ್ರತೀ ಪ್ರದರ್ಶದನದಲ್ಲೂ
ಹಗ್ಗದ ಮೇಲೆ ಕಸರತ್ತು ಮಾಡಿ
ಮಾವನ ಹೆಗಲ ಮೇಲೆ ಕಾಲಿಟ್ಟು
ನೆಲಕ್ಕಿಳಿದು
ತಂಡ ದುಡ್ಡು ಹೆಕ್ಕುವಾಗ
ನಿರುಮ್ಮಳವಾಗಿ ನೆಲದ ಮೇಲೆ
ಕೂತಿರುತ್ತಾಳೆ,
ಮತ್ತೆ ಏರುವುದುಂಟು
ಬೀಳಲೇಬಾರದೆಂಬ ನಿಯಮವಿಲ್ಲದೆ
ಬಿದ್ದೇ ಹೋಗಬಹುದಾದ ತಂತಿ ದಾರಿ
ಆಟ ಮಿಸ್ಸಾಗದ ಹಾಗೆ ಆಡಬೇಕು.


ಈ ತುದಿಯಲ್ಲಿ-
ಆಟವಿಲ್ಲ.,
ಅತ್ತಿತ್ತ ನೋಡಲಿಲ್ಲ,
ತಪ್ಪಿಟ್ಟ ಹೆಜ್ಜೆಯಾಚೆ
ಬದುಕಿನ ಅತ್ಯಾಪ್ತ ಜೊತೆಗಾರ
ಕಾಯ್ದಿರುವನು ತೋಳ್ದೆರೆದು

ಅದಷ್ಟು ಸುಲಭವಲ್ಲ,
ಜಾರಿಕೊಳ್ಳುವುದು;
ನುಣ್ಪು ರೇಷಿಮೆ ಎಳೆಗಳಿಗೆ
ಸಿಕ್ಕ ಬಲಿಷ್ಟ ಕಾಲು,
ಒಂಥರಾ ದುಂಬಿಗೆ ಸಿಕ್ಕ ಶಕುಂತಲೆಯ ಮುಂಗುರುಳಿನ ಹಾಗೆ.
ಮೋಹಕ. ನಿಯಾಮಕ
ಸಿಕ್ಕ ಮೇಲೆ ಮುಗಿಯಿತು...
ಕನಸಿನುಂಗುರ ಕಳೆದ ಮೇಲೆ
ಬದುಕು ಎಲ್ಲವನ್ನೂ ಮರೆಸಿಬಿಡುತ್ತದೆ!  :-(

ಅದೇ ತುದಿ
ದಿನಾ ಬೆಳಿಗ್ಗೆದ್ದು ಜಿಮ್ನಾಸ್ಟಿಕ್ಸ್ ಮಾಡಿದರೆ
ಆರೋಗ್ಯಕ್ಕೆ ತುಂಬ ಒಳ್ಳೆಯದು
ತೀರಾ ಆಗದಿದ್ದರೆ
ಯೋಗವೇ ಸಾಕು.
ಯೋಗ ಬೇಕು ಅಥವಾ ಏಗಬೇಕು.

2 comments:

Sushrutha Dodderi said...

ಹೆಜ್ಜೆ ಮುಂದಿಟ್ಟರೆ ನಿರ್ವಾತ, ವಾಪಸಾದರೆ ಹೆಣಗಾಟ. -hmmm..

sunaath said...

ನೀವು ಹೇಳುವುದು ಸರಿ. ಯೋಗ ಬೇಕು, ಇಲ್ಲಾ ಏಗಬೇಕು. ಕೊನೆಗೊಮ್ಮೆ ಬಾಗಬೇಕು!