Tuesday, April 14, 2015

ಪಯಣ ಮುಗಿಯುವ ತನಕ ಹೂಬಿಸಿಲ ಮಣಿ ಕನಕ..

ಬಿರುಬೇಸಿಗೆಯಲ್ಲೊಂದು ಪಯಣ.
ದಾರಿಯ ನಡುವಿನೂರಿನಲಿ ಸುರಿಮಳೆ.
ಆಹ್..ಒದ್ದೆ ಮಣ್ಣು ತಂಪು ಗಾಳಿ,
ಮಣ್ಗಂಧದ ಉಸಿರು.
ಗೊತ್ತು, ಈ ಹಾದಿ ಮುಗಿದು
ತಿರುವು ಸಿಕ್ಕಲ್ಲಿಂದ
ಮತ್ತದೇ ಬೇಸಿಗೆಯ ಮಡಿಲು.

ಇರಲಿ ಬಿಡು-
ಈಗ ತಗೊಂಡ ಮಣ್ಗಂಧದ ಉಸಿರು,
ಮುತ್ತಿ ಆವರಿಸಿದ ತಣ್ಪು ಗಾಳಿ ,
ನೊಂದ ಕಣ್ಣಿಗೆ ಮೆತ್ತಿದ-
ಒದ್ದೆ ನೋಟ,
ಈಗೆರಡು ದಿನಗಳ ಹಿಂದೆ
ಬಿರಿದುಕೊಂಡಿದ್ದಿರಬಹುದಾದ ನೆಲದಲ್ಲಿ
ಮತ್ತೆ ಮೂಡುತ್ತಿರುವ ಹಸಿರ ಮೊಳಕೆ,
ಇಷ್ಟು ಸಾಕು-
ಈ ಬೇಸಿಗೆ ಕಳೆಯಲಿಕ್ಕೆ.

ನೋಯುತ್ತಾ ನಡೆಯುವಾಗ
ನೀನು ನೆನಪಾಗುತ್ತಲೇ ಇರುತ್ತೀ ಪರ್ಸಿ ಬಿಷ್ ಶೆಲ್ಲೀ
ಚಳಿಯಲ್ಲಿ ಮೂಳೆ ನಡುಗುವಾಗ, ವಸಂತದ ಕೂಜನ ನೆನಪಿಸುವ ನೀನು
ಬಿಸಿಯ ಉಬ್ಬೆಯಲ್ಲಿ ಬೇಯುವ ಜೀವಕೆ ಮಳೆಯ ತಂಪು ನೆನಪಿಸುವ ನೀನು
ನೆನಪಾಗುತ್ತಲೇ ಇರುತ್ತೀ.
ಮರೆತರೆ ಹೇಗೆ ಉಳಿಯಬಹುದು ನಾನು?

ದಾರಿ ಮುಗಿಯುವುದಿಲ್ಲ.
ಇದು ಬರಿಯ ತಿರುವು.
ನೋಡಿದರೆ ಅಲ್ಲ, ನೋಡಿದರೆ ಮಾತ್ರ
ಪಯಣದೊಳು ಚೆಲುವು.

// ಪಯಣ ಮುಗಿಯುವ ತನಕ ಹೂಬಿಸಿಲ ಮಣಿ ಕನಕ..
( ಕೆ.ಎಸ್.ನ ಅವರ ನೀ ಬರುವ ದಾರಿಯಲಿ ಕವಿತೆ ಸಾಲು ಇದು)//

2 comments:

sunaath said...

ಶೆಲ್ಲಿಗೆ ಹಾಗು ಕೆ.ಎಸ್.ಎನ್ ಅವರ ಸ್ಮರಣೆಯ ನುಡಿ ನಮನ ಸುಂದರವಾಗಿದೆ. ಬೇಸಿಗೆಯ ಬಿರು ಬಿಸಲಲ್ಲಿ ತಂಗಾಳಿ ಬೀಸಿದಂತಿದೆ!

Badarinath Palavalli said...

Best of best:

ಆಹ್..ಒದ್ದೆ ಮಣ್ಣು ತಂಪು ಗಾಳಿ,
ಮಣ್ಗಂಧದ ಉಸಿರು

ಬಿರಿದುಕೊಂಡಿದ್ದಿರಬಹುದಾದ ನೆಲದಲ್ಲಿ
ಮತ್ತೆ ಮೂಡುತ್ತಿರುವ ಹಸಿರ ಮೊಳಕೆ

ನೀನು ನೆನಪಾಗುತ್ತಲೇ ಇರುತ್ತೀ ಪರ್ಸಿ ಬಿಷ್ ಶೆಲ್ಲೀ