Friday, December 20, 2013

ಚಿಂತೆ

ಚಿಂತೆ : -
ಇದ್ದುದಕ್ಕೆ
ಇಲ್ಲದಿರುವುದಕ್ಕೆ
ಬಂದುದಕ್ಕೆ
ಬಾರದಿರುವುದಕ್ಕೆ
ಹಗುರಾಗಿರುವುದಕ್ಕೆ
ಭಾರವಾಗಿ ಉಳಿದಿದ್ದಕ್ಕೆ
ಕಳೆದು ಹೋಗಿದ್ದಕ್ಕೆ
ಬಂದು ಕೂಡಿದ್ದಕ್ಕೆ
ಎತ್ತಿಟ್ಟಿದ್ದಕ್ಕೆ
ಎತ್ತಿಡದೆ ಇದ್ದಿದ್ದಕ್ಕೆ
ಎಲ್ಲದಕ್ಕೂ ಮತ್ತು ಯಾವುದು ಅಲ್ಲವೋ ಅದಕ್ಕೂ
ಬಹುಶಃ
ನಮ್ಮ ಮಿದುಳ ಬಳ್ಳಿಯ ಮೂಲವೇ
ಹೀಗಿರಬಹುದು
ಹೀಗೆಂದೆ ಹಿರಿಯರು
ಕೆಲಸವಿಲ್ಲದ ಬಡಗಿಯ
ಹಲ್ಲಿಲ್ಲದ ಕಡಲೆಯ
ಚಿಂತಾ ಚಿತೆಯ
ಗಾದೆ ಕಟ್ಟಿರಬಹುದು
ಕೆಲವು ಕಟ್ಟದೆ ಬಿಟ್ಟಿರಲೂ ಬಹುದು.
ಬೇಕು ಬೇಕಿದು ಬೇಕು
ಇದು ಬೇಡ ಬೇಡ ಬೇಡವೇ ಬೇಡ.
ಬೇಕಾಗಿದ್ದು ಬೇಡ
ಬೇಡಾಗಿದ್ದು ಬೇಕು..
ನಾವು ನಮ್ಮ ಬಲೆಯಲ್ಲೇ
ಸಿಕ್ಕುಬಿದ್ದ ಅಸಹಜ ಜೇಡ.
ಕತ್ತಿ ಚೂಪಾಗಿಸಿ
ಕಾಡು ಹೊಕ್ಕು
ಮಿಕ ಕಂಡೂ ಸುಮ್ಮನಿರುವ ಬೇಡ.
ಪಕ್ಕದ ಮನೆಯ
ಒಲೆಯಲ್ಲಿ ಬೇಯುತ್ತಿರುವ
ವ್ಯಂಜನದ ಕಂಪಿಗೆ
ಹಳಹಳಿಸುವ ಖೇದ.
ಚಿಂತೆಯ ಬಲೆಗೆ
ಗಪ್ಪಿ, ಗೋಲ್ಡು, ಬಂಗುಡೆ, ಬೂತಾಯಿ, ಶಾರ್ಕು, ತಿಮಿಂಗಿಲ ಎಲ್ಲವೂ
ಒಂದೇ...

ಬೇಲಿಯೊಳಗೆ ಚಡಪಡಿಸುವ ವಿಸ್ತಾರ.

3 comments:

sunaath said...

‘ಅನುಗಾಲವೂ ಚಿಂತೆ ಮನಕೆ’!
ಚಿಂತೆಯೇ ಮನಕೆ ಹಾಕಿದ ಬೇಲಿ!

VENU VINOD said...

ವಾಹ್!
ಸರಳ, ಅಷ್ಟೇಅರ್ಥವತ್ತಾದ ಸಾಲುಗಳು....

ಸಿಂಧು sindhu said...

ಧನ್ಯವಾದ ವೇಣು ಮತ್ತು ಕಾಕಾ.

ಚಿಂತಿಸೋದೆ ಒಂದು ರೀತಿಯ ಸುಖ ಆಗಿಬಿಟ್ಟಿರುವ ಕಾಲವಿದು.
ರಣವೈದ್ಯದ ಹಾಗೆ.

ಪ್ರೀತಿಯಿಂದ,
ಸಿಂಧು