Thursday, December 20, 2012

ಚಂದಿರನ ಪಥ

ಚಂದಿರನ ಪಥ ಬದಲಾಗಿದೆ,
ಹುಣ್ಣಿಮೆಗೆ ಹರಡಿಕೊಂಡು
ಕೂರುತ್ತಿದ್ದ ಅಂಗಳದಲ್ಲೀಗ
ಹೈ ವೋಲ್ಟೇಜು ಬಲ್ಬು ಉರಿಯುತ್ತದೆ,
ಬೆಳದಿಂಗಳು ಖಾಲಿ.
ಒಳ್ಳೊಳ್ಳೆ ಬೆಳಕಿನ ಕವಿತೆಗಳಿವೆ
ರಾತ್ರಿಗೆ ಓದಲು ಮಜ ಬರುತ್ತದೆ
ಇಲ್ಲ ಪುಸ್ತಕಗಳಿಲ್ಲ
ಲ್ಯಾಪ್ ಟಾಪಿನ  ರೀಡರುಗಳಲ್ಲಿ
ಫೇವರಿಟ್ಟುಗಳಾಗಿ ಉಳಿಸಿದ
ಕೊಂಡಿಗಳಲ್ಲಿ
ಜಗದಗಲದ ಜ್ಞಾನ
ಹರಿಯುತ್ತಿರುತ್ತದೆ-
ನಮ್ಮ ಬಾಯಿಗೆ ತಕ್ಕ ಹೀರುಗೊಳವೆ.

ಚಂದಿರನ ಪಥ ಬದಲಾಗಿದೆ,
ಹುಣ್ಣಿಮೆಯ ವಿಳಾಸ ಕಳೆದುಹೋಗಿದೆ.
ಈ ಝಗಮಗ ಜಗತ್ತಲ್ಲಿ
ಕುರುಡು ಕುರುಡಾಗಿ ಹೊತ್ತಿಕೊಳ್ಳುವ
ಹುಣ್ಣಿಮೆಗಿಂತ
ಉರಿವ ಕಣ್ಣಿಗೆ
ಸಮಾಧಾನ ಹೇಳುವ ಕತ್ತಲೆಯೆ ಸೊಗಸಾಗಿದೆ.

ದಿನಚರಿಯಲ್ಲೀಗ ಸಮಯವಿಲ್ಲ
ಸಿಗ್ನಲ್ಲುಗಳ ನಿಭಾಯಿಸಲು ಹೆದರಿ
ಚಂದಿರನ ಪಥ ಬದಲಾಗಿದೆ,
ಕಾಯುತ್ತ ಕುಳಿತವರು
ಹಾದಿಯ ಮರೆಗೆ,
ಸೋತ ಹೆಜ್ಜೆಗಳ ನೆರವಲ್ಲಿ ನಲುಗುತ್ತಾ
ಬೆಳದಿಂಗಳ ದಾರಿ ಸಿಗದಾಗಿದೆ.

4 comments:

sunaath said...

ಸಿಂಧು,
ಕಳೆದು ಹೋದ ಬೆಳದಿಂಗಳು ನಮ್ಮಲ್ಲಿ ವ್ಯಥೆಯನ್ನು ತುಂಬುತ್ತದೆ. ಇನ್ನೆಲ್ಲಿ ಬೇಂದ್ರೆಯವರ ‘ಬೆಳದಿಂಗಳs ನೋಡ’?
ಹೋಗಲಿ, ನಿಮ್ಮ ಕವನಗಳ ಬೆಳದಿಂಗಳಾದರೂ ಸಿಗುತ್ತಿದೆಯಲ್ಲ, ಅದೇ ಸಾಕು!

ಸಿಂಧು Sindhu said...

ಸುನಾಥ ಕಾಕಾ..
ಬೇಂದ್ರೆಯವರ "ಬೆಳದಿಂಗಳs ನೋಡ’" ಎಂತ ಮಾತು. ಆ ಹಾಡಿನ ನೆರಳು ಸಿಕ್ಕರೂ ಬೆಳದಿಂಗಳೆ!
ಇಲ್ಲಿ ನನ್ನ ಕವಿತೆಗಳಲ್ಲಿ ನನಗೆ ಸಿಕ್ಕ ಬೆಳದಿಂಗಳಿನ ಚೂರು ಪಾರು ಪ್ರತಿಫಲನವಿದ್ದೀತು. ಅದೂ ನೋಡುವ ಕಣ್ಣು ಕಂಡರೆ ಮಾತ್ರ.
ನೀವು ಯಾವತ್ತಿಗೂ ನನ್ನ ಬರಹಗಳನ್ನ ಅಚ್ಚೆಯಿಂದಲೇ ಓದುತ್ತೀರಿ. ಪ್ರತೀ ಪೋಸ್ಟು ಹಾಕಿದಾಗಲೂ ಇದಕ್ಕೆ ಕಾಕಾ ಏನೆನ್ನುತ್ತಾರೆ ಎಂಬ ಅನಿಸಿಕೆ "ಪಬ್ಲಿಷ್" ಗುಂಡಿ ಒತ್ತುವ ಮುಂಚೆ ಮೂಡುತ್ತದೆ.

ಪ್ರೀತಿಯಿಂದ,
ಸಿಂಧು

Badarinath Palavalli said...

ಬಹುಶಃ ಈ ಕಾಯುವಿಕೆಯೇ ನಮ್ಮನ್ನು ಕಾಪು ಕಾಯುತ್ತದೇನೋ? ಅಲ್ಲವೇ...

VENU VINOD said...

ವ್ಹಾ..ಹೊಸ ಅನುಭೂತಿ ಸೃಷ್ಟಿಸುವ ಕವನ...
ನಿಜ ಎಲ್ಲವೂ ಬದಲಾಗಿದೆ, ಆಗುತ್ತಿದೆ, ಚಂದಿರನ ಪಥ ಕೂಡಾ!