Friday, September 26, 2008

ಚೈ..ವೈ..

ವೈದೇಹಿಯ ಕೈಯಲ್ಲಿ ಕ್ರೋಶಾ ಕಡ್ಡಿ ತನ್ನಷ್ಟಕ್ಕೆ ತಾನು ಓಡಾಡುತ್ತಿತ್ತು. ನೇರಳೆಬಣ್ಣದ ಉಲ್ಲನ್ನಿನ ಜೊತೆಗೆ ನಿಂಬೆಹಳದಿಯ ಎಳೆಗಳು ಚಂದ ಚಿತ್ತಾರ ಮೂಡಿಸುತ್ತ ನಡೆದಿದ್ದವು. ಅಕ್ಕಿ ಆರಿಸುತ್ತ ಕೂತವಳು ಕವಿತೆಯ ಭಾವವಾಗಿ ಹೊಮ್ಮಿದಂತೆ ಇವಳೂ ಬಂಗಾರವಿಲ್ಲದ ಬೆರಳಲ್ಲಿ ಯಾರದೋ ಮನೆಯ ಮುದ್ದು ಬಂಗಾರವಾಗುವ ಚಿನ್ನಾರಿಗೆ ಸ್ವೆಟರಂಗಿ ನೇಯುತ್ತಿದ್ದಳು. ಮೊದಲ ಸಾಲು ಜಪ್ಪಿಸಿ ಹಾಕಿದವಳ ಕನ್ನಡಕದ ಕಣ್ಣು ಈಗ ಕಿಟಕಿಯಾಚೆಗಿನ ಕಾಂಪೌಂಡಿನ ಗೋಡೆಯ ಮೇಲೆ ಬಿಂಕವಾಗಿ ತಿರುಗುವ ಅಳಿಲಿನ ಮೇಲಿತ್ತು. ಬೆರಳ ತುದಿ ತನಗೇ ಕಣ್ಣಿದೆಯೋ ಎಂಬಂತೆ, ಸಾಲಿನ ಕೊನೆ ಮುಟ್ಟುತ್ತಲೂ ಕೊನೆಗಂಟು ಹಾಕಿ ತಿರುಗಿ ಮತ್ತೊಂದು ಸಾಲು ಮೇಲೇರಿಸುತ್ತಿತ್ತು. ರೂಮ್ ಮೇಟ್ ಶಾಂತಮ್ಮನನ್ನು ನೋಡಲಿಕ್ಕೆ ಆಗಾಗ ಬರುವ ಅವರ ಗೆಳತಿಯ ಮಗಳು ರಕ್ಷಾ ಹೇಳುತ್ತಿದ್ದಳು, ಆಂಟೀ ನನ್ನ ಮಗಳು ಈಗ ಐದನೇ ಕ್ಲಾಸು ಎಷ್ಟು ಹೇಳಿದರೂ ಸರಿಯಾಗಿ ಓದಿಕೊಳ್ಳುವುದೇ ಇಲ್ಲ. ಎಲ್ಲದರಲ್ಲೂ ಬರಿಯ ಹುಡುಗಾಟ, ಟೆಸ್ಟ್ ಗಳು ಎಂದರೆ ಮಕ್ಕಳು ಎಷ್ಟು ಗರ್ಕಾಗಿ ಓದಿಕೊಂಡು ಶಿಸ್ತಿನಿಂದ ರೆಡಿಯಾಗುತ್ತಾರೆ ಇವಳೋ ಅವತ್ತೂ ಆಟ ಆಡದೆ ಬಿಡುವುದಿಲ್ಲ. ಬಯ್ಯದೆ ಸಿಟ್ಟು ಮಾಡದೆ ಹೇಗೆ ಹೇಳುವುದೋ ಗೊತ್ತಾಗೋಲ್ಲ ನೀವಾದ್ರೂ ಹೇಳಿ - ಶಾಂತಮ್ಮ ಅವರು ಓದುತ್ತಿದ್ದ ಗೀತೆಗೊಂದು ಭಾಷ್ಯವನ್ನು ಬದಿಗಿಟ್ಟು ಅವರ ಎಂದಿನ ವೇದಾಂತಗಳಿಂದ ಒಂದೊಂದೇ ಸಾಲು ಒಗೆಯತೊಡಗಿದರು.

ವೈದೇಹಿಯ ಕಿವಿ ಮತ್ತೆ ಕಣ್ಣನ್ನು ಹಿಂಬಾಲಿಸಿ ಗೋಡೆಯ ಮೇಲೆ ಚಿನ್ನಾಟವಾಡುತ್ತಿದ್ದ ಅಳಿಲಿನ ಮೇಲೆ ಹೋಯಿತು. ಅಳಿಲಿನ ಬೆನ್ನ ಮೇಲಿನ ಮೂರುಗೆರೆಯಿಂದ ರಾಮ ನೆನಪಾಗಿ, ಅವನ ವನವಾಸವೂ ವೈದೇಹಿಯ ಚಿರವಿರಹವೂ ನೆನಪಾದವು.ಸಣ್ಣವಳಿದ್ದಾಗ ಎಷ್ಟು ಖುಶಿಯಿತ್ತು, ತನ್ನ ಹೆಸರಿನ ಬಗ್ಗೆ. ಸಾಕ್ಷಾತ್ ಸೀತಮ್ಮನವರ ಹೆಸರು. ಅದಾದ ಮೇಲೆ, ಚಂದಮಾಮದ ಬಾಲ ಹಿಡಿದು ತರಂಗದ ಕಂಬವೇರಿ ಜಾಣ-ಜಾಣೆಯರ ಪತ್ರಿಕೆಯನ್ನ ಮೆತ್ತಿಯ ಮೂಲೆಯಲ್ಲಿ ಕೂತು ಓದುವಾಗ ತನ್ನದೇ ಹೆಸರಿನ ಲೇಖಕಿಯ ದಿಟ್ಟ ಬರಹಗಳನ್ನೋದಿ ಒಂತರ ಖುಶಿ ಹೆಚ್ಚಾಗಿತ್ತು. ಸೀತಮ್ಮನವರ ಹೆಸರಿಗಿಂತಲೂ ಈ ಲೇಖಕಿ ಮನಸ್ಸು ತುಂಬತೊಡಗಿದ್ದರು. ಸದಾ ಕತೆಪುಸ್ತಕವನ್ನೋ , ಸಾಪ್ತಾಹಿಕವನ್ನೋ ಹಿಡಿದು ಮೂಲೆಗೆ ಕೂರುವ ಮಗಳೆಂದರೆ ಅಮ್ಮನಿಗೆ ಇಲ್ಲದ ನಸನಸೆ. ಸಿಡುಕುತ್ತಿದ್ದಳು. ಅವಳ ಸಿಡುಕಿಗೆ ತನ್ನ ಜವಾಬು ರೆಡೀ ಇರುತ್ತಿತ್ತು. ತಾನು ಹೇಗೂ ಆಗಷ್ಟೇ ನೀರು ಸೇದಿ ಹರಿವೆ ಮಡಿ, ಸೇವಂತಿಗೆ ಮಡಿ ಮತ್ತು ಮನೆಯ ಮುಂದಿನ ಪುಟ್ಟ ಬಣ್ಣದ ಗಾರ್ಡನ್ನಿಗೆಲ್ಲ ನೀರುಣಿಸಿ, ಕೈಕಾಲು ತೊಳೆದೇ ಮೂಲೆಯಲ್ಲಿ ಪುಸ್ತಕ ಹಿಡಿಯುತ್ತಿದ್ದುದು. ಏನೇ ಮಾಡಿದರೂ ನಾಳೆ ಟೆಸ್ಟು, ಪರೀಕ್ಷೆ ಇವತ್ತೂ ಕತೆಪುಸ್ತಕವೇ ಬೇಕಾ ಎಂಬ ಅವಳ ಸಿಟ್ಟಿಗೆ ತನ್ನ ಕಿವಿ ಒಳಗಿನಿಂದಲೇ ಮುಚ್ಚಿಕೊಂಡುಬಿಡುತ್ತಿತ್ತು.

ಅವತ್ತೊಂದಿನ ಆರನೇ ಕ್ಲಾಸಿನ ಅರ್ಧವಾರ್ಷಿಕ ಪರೀಕ್ಷೆಯ ಕೊನೆಯ ಪೇಪರ್ ಗಣಿತ. ಮುಗಿಸಿ ಮನೆಗೆ ಬಂದವಳಿಗೆ ಜಗುಲಿಯ ತೂಗುಮಂಚದಲ್ಲಿ ತೂಗುತ್ತಿದ್ದ ರಜಕ್ಕೆ ಮನೆಗೆ ಬಂದ ಅನ್ನತ್ತೆಯೂ ಅವಳೊಟ್ಟಿಗೆ ಕತೆ ಹೊಸೆಯುತ್ತ ಕೂತ ಅಮ್ಮನೂ ಕಣ್ಣಿಗೆ ಬಿದ್ದರು. ಓಡಿ ಹೋಗಿ ಅತ್ತೆಯ ಕೊರಳಿಗೆ ಹಾರವಾದಳು. ಪರೀಕ್ಷೆ ಹೇಗಿತ್ತೇ ಪುಟ್ಟೀ... ಅದೇ ಮೊದಲ ಮಾತು - ಅದಕ್ಕೆ ತಾನು ಕೊಟ್ಟ ಉತ್ತರವನ್ನ ಅನ್ನತ್ತೆ ತನ್ನ ಕೊನೆಯದಿನದವರೆಗೂ ನೆನಪಿಟ್ಟುಕೊಂಡು ನಗುತ್ತಲೇ ಇದ್ದಳು. - ಹೌದು ಇನ್ನೇನು ಹೇಳಬಹುದಿತ್ತು ತಾನು - ಎಲ್ಲ ಪ್ರಶ್ನೆಯ ಉತ್ತರಗಳೂ ಗೊತ್ತಿದ್ದವು. ಆದರೆ ಮೊದಲಿಗೆ ಪೇಪರ ಬರೆಯಲು ಶುರು ಮಾಡಿದಾಗ, ಅಲ್ಲೆ ಕಿಟಕಿಬದಿಯಲ್ಲಿ ಕೂತವಳು ತಾನು - ಹೊರಗಿನ ಕ್ರೋಟನ್ ಗಿಡದ ಕೊಂಬೆಯಲ್ಲಿ ಒಂದು ಪುಟ್ಟ ಹಕ್ಕಿ ಕೂತುಬಿಟ್ಟಿದೆ. ಅದರ ಕೊಕ್ಕೇನು ಮಾಟ, ಗರಿಯೇನು ಚಂದ ಇಲ್ಲಿಯವರೆಗೂ ನೋಡೆ ಇಲ್ಲ ತಾನದನ್ನ. ನೋಡನೋಡುತ್ತಿದ್ದ ಹಾಗೆ ಅದರ ಅಮ್ಮ ಹಕ್ಕಿಯೂ ಬಂದು ಕೂತು ಬಾಯಲ್ಲಿ ಇಟ್ಟುಕೊಂಡಿದ್ದ ಏನನ್ನೋ ಮರಿಯ ಕೊಕ್ಕಿನ ಹತ್ತಿರ ಒಯ್ದು ತಿನ್ನಿಸಿತು. ಈ ಪುಟ್ಟ ಹಕ್ಕಿ ಹೊಟ್ಟೆಬಾಕನಂತೆ ಗುಳುಂ ಮಾಡುವುದನ್ನ ನೋಡುತ್ತ ಕೂತಿದ್ದೆ. ಅಷ್ಟ್ರಲ್ಲಿ ಮಧ್ಯಂತರ ದ ಬೆಲ್ಲು ಹೊಡೆದೇ ಬಿಟ್ಟಿತು. ಓಹೋ ಇನ್ನು ಮುಕ್ಕಾಲುಗಂಟೆ ಅಷ್ಟೇ ಇರುವುದು ಅಂತ ಗಡಿಬಿಡಿಯಲ್ಲಿ ಬರೆದು ಮುಗಿಸುವಾಗ ಎಲ್ಲ ಸರಿ ಉತ್ತರವೇ ಇದ್ದರೂ, ಪ್ರಶ್ನೆಗಳ ನಂಬರ್ ಹಿಂಚು ಮುಂಚಾಗಿ ಹಾಕಿಬಿಟ್ಟಿದ್ದೆ. - ಅಮ್ಮನ ಉರಿಗಣ್ಣು ಬೆನ್ನು ಸುಡಹತ್ತಿತು. ಕೂಡಲೇ ಅಮ್ಮನಿಗೆ ಸಮಾಧಾನ ಮಾಡುವ ದನಿಯಲ್ಲಿ ಹೇಳಿದ್ದೆ - ಆದರೂ ಬಿಡಮ್ಮ ನಮ್ಮ ಗಣಿತ ಮೇಷ್ಟ್ರು ತುಂಬ ಒಳ್ಳೆಯವರು. ಒಳ್ಳೆಯ ಹುಡುಗಿ ವೈದೇಹಿ ಅಂತ ಗೊತ್ತವರಿಗೆ, ಅಲ್ದೇ ಹಾಡು ಚೆಂದಾಗಿ ಹೇಳುತ್ತೀನಲ್ಲ. ಅವರೇ ಸ್ವಲ್ಪ ನೋಡಿಕೊಂಡು, ಪ್ರಶ್ನೆ ನಂಬರ್ ಸರಿಮಾಡಿಕೊಂಡು ಮಾರ್ಕ್ಸ್ ಕೊಡುತ್ತಾರೆ. ಫೇಲಂತೂ ಆಗುವುದಿಲ್ಲ. - ಅನ್ನತ್ತೆಯ ನಗು ಮನೆಯಿಡೀ ತುಂಬಿತು. ಅಯ್ಯೋ ಹುಡುಗಿಯೇ ನಿನ್ನ ಮಾಸ್ಟರಿಗೇ ತಿರುಗಿ ಪರೀಕ್ಷೆಯನ್ನು ಹಚ್ಚಿಬಿಟ್ಟೆಯಲ್ಲಾ ಅಂತ ನಕ್ಕಿದ್ದೇ ನಕ್ಕಿದ್ದೂ..
ಶಾಂತಮ್ಮನವರ ರಕ್ಷಾಗೆ ಈ ಕತೆ ಹೇಳಲೇ? ಬೇಡ ಒಣವೇದಾಂತ ಕೊಡುವ ಸಮಾಧಾನವನ್ನ ತನ್ನ ಮಳ್ಳು ನೆನಪು ಕೊಡುತ್ತದೆಯೇ. ಹೇಗಿದ್ದರೂ ಈಗ ಎಲ್ಲರಿಗೂ ಬದುಕನ್ನ ಕಲೆಯಾಗಿಸುವ ಮ್ಯಾನೇಜ್ ಮೆಂಟ್ ಟ್ಯಾಕ್ಟಿಕ್ಸ್ ಬೇಕು. ಕಲೆ ಯಾರಿಗೆ ಬೇಕು. ಟೀವಿಯಲ್ಲಿ ಪ್ರೈಝು ತರುವ ಹಾಗಿದ್ದರೆ ಪರವಾಗಿಲ್ಲ..ಇಂತಿಪ್ಪ ಪ್ರಪಂಚವು ಹೀಗಿರುವಾಗ ತಾನು ಸುಮ್ಮನೆ ಕೂತು ತನ್ನಷ್ಟಕ್ಕೆ ಮನಸಿನ ಹಕ್ಕಿಗೆ ನೆನಪಿನ ರೆಕ್ಕೆ ಹಚ್ಚುವುದೇ ಒಳ್ಳೆಯದು. ಮಾತೇ ಜ್ಯೋತಿರ್ಲಿಂಗ ಅಂದರು.. ಏನು ಹಾಗಂದರೆ.. ದೇವರ ಹಾಗೆ ಮಾತನಾಡದೆ ಕೂರುವುದು ಅಂತಲೇ ಇರಬೇಕು ಅಂತ ನಗುತ್ತಿದ್ದ ಬಾಳಗೆಳೆಯನ ನೆನಪಾಯಿತು. ಅವನೀಗ ಜ್ಯೋತಿರ್ಲಿಂಗವೇ ಆಗಿ, ಹೂವಿನಕೊಪ್ಪದ ಗುಡ್ಡದ ಮಣ್ಣಲ್ಲಿ ಬೂದಿಯಾಗಿಹೋಗಿದ್ದಾನೆ. ಅಲ್ಲಿ ಅವನ ನೆನಪಿಗೆ ನೆಟ್ಟ ಅವನಿಷ್ಟದ ಪಾರಿಜಾತ ಗಿಡ ಮೈತುಂಬ ಹೂಬಿಡುತ್ತದಂತೆ. ಮೊನ್ನೆ ಅಲ್ಲಿನ ಶಾನುಭೋಗರ ಮಗ ಮಾತಾಡಿಸಿಕೊಂಡು ಹೋಗಲು ಬಂದವನು ಹೇಳಿದ್ದ.

ಕನ್ನಡಿಕಣ್ಣಿನ ಮೇಲೆ ಕಿಟಕಿಯ ತಳಿಯಿಂದ ತೂರಿ ಬರುವ ಕಿರಣಗಳ ಪ್ರತಿಫಲನ. ಅಷ್ಟರಲ್ಲೇ ಇಂಟರ್ ಕಾಮ್ ರಿಂಗಾಯಿತು. ಭಾಷ್ಯ ಓದುವವರಿಗೆ ಮಧ್ಯಾಹ್ನದ ತಿಳಿನಿದ್ದೆ. ಎದ್ದು ಫೋನ್ ತಗೊಂಡರೆ ತನಗೇ ಫೋನು. ರಿಸೆಪ್ಶನಿಸ್ಟ್ ಕನೆಕ್ಟ್ ಮಾಡಿಕೊಡುವ ಹೊತ್ತಿಗೆ ಆಚೆ ಕಡೆಯಿಂದ ಬಂದ ವಯಸ್ಸಾದ ದನಿಯ ಗುರುತು ಹಿಡಿಯಲಾಗಲಿಲ್ಲ. ಗುರುತೇ ಸಿಗಲ್ಯನೇ ವೈ.. ಅನ್ನುವ ಮಾತು ಕೇಳುತ್ತಲೂ ವೈ ಎನ್ನುವ ಹೆಸರು ಕಿವಿಗೆ ಬೀಳುತ್ತಲೂ ನೆನಪಾಗಿದ್ದು ಅವನೇ.. ಚೈ - ಚೈತ್ರ. ಅಯ್ಯ ಮಾರಾಯಾ ಎಲ್ಲಿಂದ ಬಂದೆ ನೀನು ಎನ್ನುವ ಇವಳ ಅಚ್ಚರಿಯ ಮಾತಿಗೆ ಅವನ ಎಂದಿನ ಹಕ್ಕಿನಗು.. ಅಡ್ರೆಸ್ ಮಗಳು ಕೊಡ್ತು, ಇವತ್ತೇ ಸಂಜೆಗೆ ನಿಮ್ಮ ಸಂಧ್ಯಾರಾಗಕ್ಕೆ ಬರ್ತಿ, ಮುಖತಃ ಮಾತಾಡಣ ರೆಡೀ ಇರು ಆರಕ್ಕೆ, ಎಂದವನೇ ಫೋನಿಟ್ಟುಬಿಟ್ಟ. ಮನಸ್ಸಿಗೆ ಗಲಿಬಿಲಿಯ ಸಂಭ್ರಮ. ಎಲ್ಲಿಂದ ಬಂದನೋ ಮಾರಾಯ ಎಂಬ ಕುತೂಹಲ.
ಸಂಜೆ ಐದಕ್ಕೇ ಕಾಫಿಗೆ ಕುಡಿದು ನೀಟಾಗಿ ಮುಖ ತೊಳೆದು ಫ್ರೆಶ್ಶಾಗಿ ರೆಡಿಯಾದವಳಿಗೆ ಆಯಾ ಬಂದು ೫-೬ ಹೂವು ಸುರುಗಿದ ಪುಟ್ಟ ದುಂಡುಮಲ್ಲಿಗೆ ಗೊಂಚಲು ತಂದುಕೊಟ್ಟಳು. ಅವಳ ಇಬ್ಬರು ಮಕ್ಕಳಿಗೂ ತಾನೇ ಹೆಣೆದುಕೊಟ್ಟ ಸ್ವೆಟರಂಗಿಗೆ ಕೃತಜ್ಞತೆಯಾಗಿ, ಆಗ ಈಗ ತನ್ನಿಷ್ಟದ ಹೂಮೊಗ್ಗೆ ತಂದುಕೊಡುತ್ತಿರುತ್ತಾಳೆ. ನಾಲ್ಕು ಹನಿ ನೀರು ಸಿಂಪಡಿಸಿ ಕೂದಲೆಳೆ ಎತ್ತಿ ಸಿಗಿಸಿಕೊಂಡರೆ ಹಾಯ್ದ ಗಾಳಿಯಲ್ಲಿ ಹೂವಿನ ಘಮ ತುಂಬಿಕೊಂಡು ಮನಸ್ಸೂ ಕೊಂಚಕೊಂಚವೇ ಅರಳತೊಡಗಿದ್ದ ಮೊಗ್ಗುಗಳ ಹದದಲ್ಲಿ ಮುದಗೊಂಡಿತು.
ಆರಕ್ಕೆ ಮೊದಲೇ ಸಂದರ್ಶಕರ ಕೊಠಡಿಗೆ ಹೊರಟವಳು, ರಿಸೆಪ್ಷನ್ನಿನಲ್ಲಿದ್ದ ಡ್ಯಾಫೋಡಿಲ್ಲಳಿಗೆ ವಿಷಯ ತಿಳಿಸಿ, ಚೈತ್ರ ಎಂಬವರು ಬಂದರೆ ಸೀದಾ ಒಳಗೆ ಕಳಿಸಲು ಹೇಳಿ ಮುಂದುವರಿದೆ. ಯಾರು ಹಜ್ಜೀ ನಿಮ್ ಬೋಯ್ ಫ್ರೆಂಡಾ ಅಂತ ಕಣ್ಣು ಮಿಟುಕಿಸಿದಳು, ಕಪ್ಪುಕೆನ್ನೆಯಲ್ಲಿ ಒಂದು ಆಳ ಗುಳಿಯ ನಗುವೂ ಅರಳುತ್ತಿತ್ತು. ಅವಳ ಜೀವನೋತ್ಸಾಹ ಸಾಂಕ್ರಾಮಿಕ. ಮುಗುಳ್ನಗೆಯ ಪ್ರತ್ಯುತ್ತರವಷ್ಟೇ ತನ್ನಿಂದ.

ಸಂದರ್ಶಕರ ಕೊಠಡಿಯಲ್ಲಿ ಯಾವಾಗಲೂ ಕಾಯುವ ಸೊಲಬಣ್ಣ ಶೆಟ್ಟರು ಕೊನೇ ಕಿಟಕಿಯ ಮುಂದೆ ಅವರ ಕುರ್ಚಿ ಹಾಕಿಸಿಕೊಂಡು ಎಂದೂ ಬಾರದ ಅತಿಥಿಗಳಿಗೆ ಕಾಯುತ್ತಾ ಕೂತಿದ್ದರು. ಈಗ ಅವರನ್ನು ಯಾರು ಹೋಗಿ ಮಾತನಾಡಿಸಿದರೂ ಅವರ ಕತೆ ಮುಗಿದ ಹಾಗೆಯೇ. ಚನ್ನಗಿರಿಯ ಅವರ ದೊಡ್ಡ ಮನೆ ಕಟ್ಟಿದ ಕಾಲದಿಂದ ಹಿಡಿದು, ಈಗ ಮಕ್ಕಳೆಲ್ಲ ರೆಕ್ಕೆ ಬಂದು ಹಾರಿ ಹೋಗಿ, ತನ್ನನ್ನ ಇಲ್ಲಿಯ ಗೂಡಲ್ಲಿ ಬಂಧಿಸಿಟ್ಟಿರುವ ಬಗ್ಗೆ ಸಾಭಿನಯ ಕತೆ ಹೇಳುತ್ತಾರೆ. ಎಂತಲೇ ಯಾರೂ ಅವರ ತಂಟೆಗೆ ಹೋಗದೆ ದೂರದೂರದ ಕುರ್ಚಿಯಲ್ಲಿ ತಮಗೆ ಬರಬೇಕಿರುವ ಸಂದರ್ಶಕರಿಗಾಗಿ ಕಾಯುತ್ತಾರೆ. ಆರಕ್ಕೆ ಇನ್ನೂ ಹತ್ತು ನಿಮಿಷ ಇತ್ತು. ಕಿಟಕಿಯಾಚೆಗೆ ಇನ್ನಿಸ್ ಫ್ರೀ ಶಾಲೆಯ ದೊಡ್ಡ ಮೈದಾನ, ಹಿಂದಕ್ಕೆ ದೊಡ್ಡ ದೊಡ್ಡ ಅಪಾರ್ಟ್ ಮೆಂಟುಗಳು, ಅವುಗಳ ಮಧ್ಯದ ಜಾಗದಲ್ಲಿ ಕೆಂಪಕೆಂಪಗೆ ಆಕಾಶದ ತುಂಬ ಬಣ್ಣ ಚೆಲ್ಲುತ್ತ ಕೆಲಸ ಮುಗಿಸಿ ನಿಸೂರಾಗಿ ಮನೆಗೆ ಹೊರಟ ದಿನಮಣಿ.. ಬೆಳಗ್ಗೆಯೆಲ್ಲ ಸಿಮೆಂಟು ಬ್ಲಾಕುಗಳಾಗಿ ತೋರುವ ಇವೆಲ್ಲ ಈಗ ಸಂಜೆಯ ಹೊಂಬೆಳಕಿನ ಮ್ಯಾಜಿಕ್ಕಿನಲ್ಲಿ ಜೀವ ಬಂದಂತೆ ಹೊಳೆಯುತ್ತ ಕೂತಿದ್ದವು. ಅಲ್ಲಲ್ಲಿ ಹಸುರಾಗಿ ತೂಗುವ ಗಿಡಮರಗಳು ಆ ಜೀವಕ್ಕೆ ಹೊಸದೇ ಆಯಾಮವನ್ನೂ ನೀಡಿದ್ದವು. ಮುಂದಿನ ಖಾಲಿ ಮೈದಾನದಲ್ಲಿ ದೊಡ್ಡ ಚಿಕ್ಕ ಮಕ್ಕಳು ಆಟವಾಡುತ್ತಿದ್ದರು. ಅವರವರ ಅಪ್ಪ ಅಮ್ಮ ಮನೆಯಲ್ಲಿ ಬರಲಿರುವ ಮಕ್ಕಳಿಗಾಗಿ ಕಾಯುತ್ತ ಕೂತಿರಬಹುದು.. ನಗುಬಂತು. ಈ ಮಕ್ಕಳು ದೊಡ್ಡವರಾದ ಮೇಲೂ ಆ ಅಪ್ಪ ಅಮ್ಮನಿಗೆ ಕಾಯುತ್ತ ಕೂರುವುದೇ ಕೆಲಸ. ಈಗಲಾದರೋ ಮನೆಗೆ ಬರುತ್ತಾರೆ ಮಕ್ಕಳು, ದೊಡ್ಡವರಾದ ಮೇಲೆ ಇವರ ಅಪ್ಪ ಅಮ್ಮನಿರುವ ಇಳಿಸಂಜೆಯ ಮನೆಗೆ ಬರುತ್ತಾರೆಯೇ ಇವರೆಲ್ಲ.. ಎಲ್ಲ ಅಪ್ಪ ಅಮ್ಮನೂ ಬೇರೆ ಬೇರೆ ಊರಿನ ಸೊಲಬಣ್ಣ ಶೆಟ್ಟರ ಹಾಗೆ, ಶಾಂತಮ್ಮನ ಹಾಗೆ, ಬೋಯ್ ಫ್ರ್ರೆಂಡಿಗೆ ಕಾಯುತ್ತ ಕೂತ ವೈದೇಹಿಯ ಹಾಗೆ... ಇಡೀದಿನವೂ ಸಂದರ್ಶಕರು ಬರುವ ಸಂಜೆಗೆ ಕಾಯುತ್ತಾ... ಸಮಯ ಮುಗಿವಾಗ ಕಣ್ಣಲ್ಲಿ ಕಣ್ಣಿಟ್ಟು ಬಾಯ್ ಹೇಳಲಾಗದೆ ಕೊಠಡಿಯ ಗೋಡೆಯ ಗಡಿಯಾರವನ್ನೋ, ಪೈಂಟಿಂಗನ್ನೋ ನೋಡುತ್ತ, ಯಾರೂ ನೋಡದ ಕ್ಷಣಗಳಲ್ಲಿ ಸರಕ್ಕನೆ ಕಣ್ಣೊರೆಸಿಕೊಳ್ಳುತ್ತಾ..
ಅಯ್ಯೋ ತನಗೇನಾಗಿದೆ ಇವತ್ತು. ಚೈತ್ರ ಬರುವ ಸಂಜೆಯಲ್ಲೂ ಕಣ್ಣಲ್ಲಿ ನೀರು ತುಂಬಬೇಕೆ? ಅವನ ನಗೆಚಾಟಿಕೆಗೆ ಕಣ್ಣು ನೀರುತುಂಬಿದರೆ ಸಮ.. ಹಾಗೆ ಮಾತಾಡುತ್ತಾನವನು.. ಎಂತೆಲ್ಲ ಯೋಚಿಸುವಾಗ.. ಪಕ್ಕದಲ್ಲಿ ಬಂದು ನಿಂತಿದ್ಯಾರು...
ಅರ್ಧ ನೆತ್ತಿಯವರೆಗೂ ಬೆಳೆದ ಹಣೆ, ಬಿಳಿಬಿಳಿ ಕೂದಲು, ಮೀಸೆಯೂ ಬಿಳಿ, ಹುಬ್ಬಿನ ಮೇಲೆಲ್ಲ ನಿರಿಗೆನಿರಿಗೆ, ಆದರೆ ಅದೇ ಎತ್ತರದ ನೇರ ಮೈಕಟ್ಟು, ಪೊರೆ ಬಂದಿದ್ದರೂ ತುಂಟತನವನ್ನ ಮರೆಯದ ಕಣ್ಗಳು, ಸ್ವಲ್ಪ ನಡುಕವಿದ್ದರೂ ಅದೇ ಅಗಲವಾದ ಬಿರುಸಾದ ಹಸ್ತ, ತುಟಿಯಂಚು ಎಂದಿನ ಸ್ಮೈಲೀ ನಗೆಯ ಜೊತೆಗೇ... ಚೈತ್ರನೆಂದರೆ ಚೈತ್ರನೇ.. ಮುದಿಯಾಗಿದ್ದರೂ ಸರಿ.... ಮಾಗಿ ಎಲೆಯುದುರಿಯೂ, ಕೆಂಪುಚಿಗುರನ್ನ ಒಳಗೇ ಇಟ್ಟು ವಸಂತಕ್ಕೊಯ್ಯುವ ಚೈತ್ರ.. ತನ್ನ ಮುಖದಲ್ಲಿ ಹರಡಿದ್ದು ನಗೆಯೋ ಅಳುವೋ...

ಹೆಂಗೆ ಬಂದೆ, ಒಬ್ಬನೇ, ಮಕ್ಕಳೆಲ್ಲಿ, ಯಾರು ಅಡ್ರೆಸ್ ಕೊಟ್ಟ ಇದನ್ನೇ ಎಲ್ಲ ಮಾತಾಡದಾ ಅಥವಾ ಅದೇನು ಇಲ್ಲದೆ ಸುಮ್ಮನೆ ಹಂಗೆ ಸಣ್ಣಕಿದ್ದಾಗ ಮಾಡಿದಂಗೆ ಗುರಿಯಿಲ್ಲದ ಕನಸು ಮಾತುಗಳನ್ನ ಆಡುತ್ತ, ಕಲ್ಪನೆಯ ಚಾಪೆಯಲ್ಲಿ ಕೂತು ಯಾರಿಗೂ ಹೇಳದೆ ಹಾರಿ ಹೋಗುವುದಾ ನೀನೇ ತೀರ್ಮಾನಿಸು... ಅಂದವನ ದನಿಯಲ್ಲಿ ಎಂದಿನ ಉಚಾವಳಿಯೊಡನೆ, ಎಲ್ಲ ಮುಗಿದು ಹೋದ ಬೇಸರದ ಎಳೆಯೂ ಕಂಡಿತೆ? ಅಥವಾ ಇದ್ದಕ್ಕಿದ್ದಂಗೆ ಒದಗಿಬಂದ ಈ ಮ್ಯಾಜಿಕ್ ಕ್ಷಣಗಳನ್ನ ದಿನದಿನದ ಕಾಯುವಿಕೆಯ, ಸಂಗರಾಹಿತ್ಯದ ತೆಕ್ಕೆಯಿಂದ ಅನಾಮತ್ತಾಗಿ ಬಿಡಿಸಿ, ಸುಮ್ಮನೆ ಸಿಗುವ ಕೆಲವು ಗಳಿಗೆಗಳನ್ನ ಓಡೋಡುವ ದಿನದ ಜೋಳಿಗೆಯೊಳಗೆ ಯಾರೂ ನೋಡುವುದಕ್ಕೆ ಮುಂಚೆಯೇ ಜಪ್ಪಿಸಿಟ್ಟುಕೊಳ್ಳಬೇಕೆಂಬ ಸ್ವಾರ್ಥವೇ... ಗೊತ್ತಾಗಲಿಲ್ಲ ತನಗೆ. ಆದರೂ ಅವನು ಹೇಳಿದ್ದೇ ಇಷ್ಟವಾಯಿತು. ಯಾವಾಗಿನಂತೆ..
ಗುಲಾಮ್ ಅಲಿಯೇ ಹಾಡಿದ್ದರಲ್ಲ.. ಹಮ್ ಸೇ ನ ಪೂಚೋ ಹಿಝ್ರ್ ಕೇ ಫಿಸ್ಸೇ.. ಅಪ್ ನೀ ಕಹೋ ಅಬ್ ತುಮ್ ಕೈಸೇ ಹೋ.. ಎಂಬ ಇಂಪು ಉಲಿಯಂತೆ..

ಹೊರಗೆ ಗಾರ್ಡನ್ನಿನಲ್ಲಿ ಕುಳಿತುಕೊಳ್ಳೋಣ, ಅಲ್ಲಿ ಸ್ವಲ್ಪ ಸೊಳ್ಳೆಯಿರಬಹುದು ಹೇಗೂ ನಾವೂ ಮಾಯಾಚಾಪೆಯ ಮೇಲಿರುತ್ತೇವಲ್ಲ.. ಅಲುಗಾಡುತ್ತ ಕುಳಿತುಕೊಂಡರೆ ಕಚ್ಚಲಿಕ್ಕಿಲ್ಲ.. ಎಂದು ನಕ್ಕಳು. ಅವನು ಇಡೀ ಕೊಠಡಿ ಮಾರ್ದನಿಸುವಂತೆ ಗಹಗಹಿಸಿ ನಕ್ಕ. ಪುಟ್ಟ ಹುಡುಗನಿದ್ದಾಗ ಇರಿಸುಮುರಿಸು ಮಾಡುತ್ತಿದ್ದ, ದೊಡ್ಡವನಾದ ಮೇಲೆ ಕೇಳಲು ಇಷ್ಟವಾಗಿದ್ದ ಆ ನಗು - ಈಗ ಇಳೀಸಂಜೆಯಲ್ಲಿ ನಡುಗುವ ದನಿಯಲ್ಲಿ ಕೇಳಿ ಯಕ್ಷಗಾನದ ಕೋಡಂಗಿಯ ಮಾತಿನಂತೆ ತಮಾಷೆಯೆನಿಸಿತು. ಕೊಠಡಿಯಲ್ಲಿದ್ದ ಎಲ್ಲರೂ ಒಂದು ಕ್ಷಣ ತಮ್ಮನ್ನೇ ನೋಡಿ ಮತ್ತೆ ತಮ್ಮ ತಮ್ಮ ಬಾತಾಖಾನಿಯಲ್ಲಿ ತೊಡಗಿದರು.

ಬಾ ಹೀಗೆ ಅಂತ ಅವನ ಕೈಹಿಡಿದು ಗಾರ್ಡನ್ನಿನ ಬಾಗಿಲು ದಾಟಿದವಳು ಅಲ್ಲಿ ರಾತ್ರಿರಾಣಿ ಹಚ್ಚಿದ್ದ ಗೋಡೆಗೆ ಹತ್ತಿರವಿದ್ದ ಬೆಂಚನ್ನಾರಿಸಿದೆ. ಅಲ್ಲೆ ಕೂತು ತುಂಬ ಹೊತ್ತಿನ ತನಕ ಗುಣುಗುಣಿಸಿದೆವು. ಓದಿದ ಹೊಸ ಪುಸ್ತಕ, ಬಹು ಚರ್ಚಿತ ಬ್ಲಾಗು, ಇನ್ನೂ ಇನ್ನೂ ಓದಬೇಕೆನಿಸುವ ಮಾಸ್ತಿ, ಪಂಚು ಹಾಗೇ ಉಳಿದಿರುವ ಅಡಿಗ, ನವುರಾದ ನರಸಿಂಹಸ್ವಾಮಿ,ಅನಿರೀಕ್ಷಿತ ತಿರುವುಗಳ ಜೋಗಿ, ಯಾವಾಗ ಓದಿದರೂ ಬೆಚ್ಚಗೆ ಆವರಿಸುವ ಜಯಂತ, ಯಾವತ್ತಿಗೂ ನೊವೆಲ್ ಆಗಿ ಫ್ರೆಶ್ ಆಗಿ ಯಾವಕಡೆಯಿಂದ ನೋಡಿದರೂ ತುಂಬ ಡಿಫರೆಂಟ್ ಆಗಿಯೇ ಉಳಿಯುವ ಸಿಕ್ಕಾಪಟ್ಟೆ ಇಷ್ಟವಾಗುವ ಶಾಂತಿನಾಥ ದೇಸಾಯರು.. ಎಲ್ಲ ಬಂದು ಹೋದರು. ಗುಲಾಮ್ ಅಲಿಯೂ, ಆಬಿದಾ ಪರ್ವೀನರೂ ಒಂದೊಂದು ಚೀಝ್ ಒಗೆದರೆ, ಎವರ್ ಗ್ರೀನ್ ಕಿಶೋರನೂ, ರಫಿಯೂ, ಲತೆಯೂ ಈಗಷ್ಟೇ ಅರಳಿದ ಹೂವಿನ ಸೊಗದಂತೆ ಇಂಪಾಗಿ ನೆನಪಾದರು.. ನಮ್ಮ ಶಾಲೆಯೂ, ಶಾಲೆಯ ದಾರಿಯೂ, ಸೈಕಲ್ ಸವಾರಿಯೂ, ಇಂಗ್ಲಿಷ್ ಪುಸ್ತಕಗಳ ಲೈಬ್ರರಿಯೂ, ಇಷ್ಟವಾದ, ಕಷ್ಟವಾದ ಮೇಶ್ಟ್ರುಗಳ ನೆನಪೂ, ಬೇಡವಾದ ಹಾಸ್ಟೆಲ್ ವಾಸದ ಪೀಯುಸಿಯೂ, ಮನೆಯೇ ಆಗಿಹೋದ ಇಂಜಿನಿಯರಿಂಗ್ ಹಾಸ್ಟಲ್ಲೂ, ದೂರವಾದ ದಾರಿಗಳೂ, ಹತ್ತಿಹೊರಟ ವಿಮಾನಗಳೂ, ಸಿಕ್ಕಿದ ತಂಗುದಾಣಗಳೂ ಎಲ್ಲ ಒಂದೊಂದೇ ಬಂದು ರೆಕ್ಕೆಯರಳಿಸಿದವು..

ಹಾಗೇ ಭೇಟಿಯ ಸಮಯವೂ ಮುಗಿಯುತ್ತ ಬಂದಿತು. ಹೊರಗೆಲ್ಲ ದೀಪಗಳೂ ಹೊತ್ತಿಕೊಂಡಿದ್ದವು. ಒಳಗೆ ಕತ್ತಲು ಕತ್ತಲಾಗುತ್ತಿತ್ತು. ನೆನಪಿನ ದೀಪದ ಮಂದ ಬೆಳಕು ಬೆಚ್ಚಗೆ ಮೂಲೆಯಲ್ಲಿ.. ಬಯಲಿಗಿಟ್ಟ ಹಣತೆಯಂತಹ ಬದುಕನ್ನ ಕಾಲ ಎಷ್ಟು ಉಪಾಯವಾಗಿ ಕಾದು ಎತ್ತಿ ಮನಸ್ಸಿನೊಳಗಿಟ್ಟು ನೆನಪಿನ ಪ್ರಿಸರ್ವೆಂಟಲ್ಲಿ ಅದ್ದಿ ಜೋಪಾನ ಮಾಡುತ್ತದೆ.. ಮತ್ತು ಅದು ಹೇಗೆ ಒಳಗಿನ ಕತ್ತಲಿಗೆಲ್ಲ ಉತ್ತರವಾಗಿ ಈ ನೆನಪಿನ ಹಣತೆ ಮಿಣುಕು ಬೆಳಕಿಂದಲೇ ಸಂತೈಸುತ್ತದೆ ಅಲ್ಲವೇ...
ಮನದ ಮಾತು ಬಾಯಲ್ಲೂ ಬಂತೇನೋ ಚೈ ನಕ್ಕ.. ಹೌದಲ್ಲ ವೈ.. ನೀನು ಈಗಲೂ ವೈದೇಹಿಯವರ ಹಾಗೆಯೇ.. ಕಣ್ಣು ಮೇಲಕ್ಕೆ ಹೋಗುವ ಕಾವ್ಯದ ಹಾಗಿನ ಮಾತೇ ಆಡುತ್ತಿರುತ್ತೀಯ.. ಎಂದವನೇ ಮತ್ತೆ ಕೋಡಂಗಿಯ ನಗು ನಕ್ಕ..
ನಾಳೆ ಬರುತ್ತೀಯಾ ಅಂತ ಕೇಳಬೇಕೆಂದುಕೊಂಡವಳು ಸುಮ್ಮನಾಗಿಬಿಟ್ಟೆ.. ಬಂದರೆ ಬರಲಿ ಎಂಬ ನಿರೀಕ್ಷೆಯ ಸುಖವನ್ನ ಇವತ್ತೇ ಕೊಲ್ಲಲಿ ಯಾಕೆ ಎಂಬಂತೆ..
ಹೀಗೆನಾದ್ರೂ ಕೇಳಿದರೆ ಹಾಗೆ ಹೇಳಬೇಕಲ್ಲಾ ಎಂಬ ಯೋಚನೆಯ ನಿರಿಗೆ ಮೂಡಿದಂತಿದ್ದ ಅವನೂ ಹೇಳಲಿಲ್ಲ, ನಾಳೆ ಹೋದರಾಗಿತ್ತು ಎಂಬ ಮನಸಿನ ಜೀಕು ಉಲ್ಲಸಕ್ಕೆ ಯಾಕೆ ಇವತ್ತೆ ಕಡಿವಾಣ ಹಾಕಲಿ ಅಂತ ಇರಬಹುದು..

ರಿಸೆಪ್ಷನ್ನಿನಲ್ಲಿ ಡ್ಯಾಫೋಡಿಲ್ ನಗುತ್ತ ಕುಳಿತಿದ್ದಳು, ಅವಳನ್ನು ನೋಡಿದ ಕೂಡಲೆ ನೆನಪಾಯಿತು. ನಿರಿಗೆಯಲ್ಲಿ ಸಿಕ್ಕಿಸಿ ಇಟ್ಟಿದ್ದ ಪೇಪರ್ ಕವರಿನಲ್ಲಿ ಸುತ್ತಿದ ಹಸಿರುಬಣ್ಣದ ಹೆಣಿಗೆಯ ಮಫ್ಲರ್ ತೆಗೆದು ಅವನ ಕೈಗಿಟ್ಟೆ. ಮಾಗಿಯಲ್ಲಿ ಚೈತ್ರನಿಗೂ ಚಳಿಯಾಗತ್ತೆ ಆಗ ಬೇಕಾಗುತ್ತೆ ನೋಡು ನಾನೆ ಹೆಣೆದಿದ್ದು ಅಂತ.. ಮತ್ತೆ ಕೋಡಂಗಿಯ ನಗು ನಗಲು ಹೊರಟವನ ಸ್ವರವೇಕೋ ಬಂದಾಗಿ, ಕಣ್ಣಲ್ಲಿ ತೆಳ್ಳಗೆ ನೀರಿನ ಪಸೆಯಂತಹದೇನೋ ಮೂಡತೊಡಗಿ ಎರಡೂ ಕೈಗಳ ಮಧ್ಯೆ ಆ ಮಫ್ಲರನ್ನ ಇಟ್ಟುಕೊಂಡು ನೀವುತ್ತಾ ಗೋಡೆಯ ಕಡೆಗೆ ಮುಖಮಾಡಿದ. ತುಟಿಕಚ್ಚಿ ಹಿಡಿಯುತ್ತ ಬಂದ ನೀರನ್ನ ಬಂದ ಕಡೆಗೇ ಹೋಗುವಂತೆ ಮಾಡಲು ಮೈಂಡ್ ಕಂಟ್ರೋಲ್ ಮಾಡುವ ಯೋಗಿಯಂತೆ ಕಾಣಿಸಿದವನ ಹೆಗಲು ಬಿಗಿದೆ ತಾನು... ಇರಲಿ ಬಿಡೋ ಚೈ, ಕಣ್ಣೀರು ಬರುವುದು ಕೆಡವಲಿಕ್ಕೆ.. ಗೆಳೆಯರಲ್ಲವೆ ನಾವು ಅಡಗಿಸಿಡುವುದೇಕೆ.. ಅನ್ನುತ್ತಾ ನಗು ಬಂತು ತನಗೂ. ನಗುವಿನಿಂದ ಮುಖದ ನೆರಿಗೆಗಳು ಒತ್ತಿದ ಕೂಡಲೇ ತನ್ನ ಕಣ್ಣಲ್ಲಿ ಅಲ್ಲಿಯವರೆಗೂ ಅಡಗಿದ್ದು ಕೆನ್ನೆಗಿಳಿಯಿತು. ಬನ್ನಿ-ಮೊಲದ ಮುಖದ ನಗು ನಗುತ್ತಾ ಬರಲೇನೆ ವೈ ಮತ್ತೆ ಸಿಗೋಣ ಅನ್ನುತ್ತಾ ಹೊರಟ.. ಕಾಂಪೌಂಡಿನಾಚೆ ನಿಲ್ಲಿಸಿದ್ದ ಟ್ಯಾಕ್ಸಿಯ ಇಂಜಿನ್ನಿಗೆ ಜೀವ ಬಂತು.. ಇಲ್ಲಿ ಸಂದರ್ಶಕರ ಸಮಯ ಮುಗಿದು ಎಲ್ಲರ ಜೀವಗಳೂ ಮತ್ತೆ ಮುದುಡತೊಡಗಿದವು.

ಅವತ್ತು ರಾತ್ರೆ ಯಾಕೋ ಊಟ ಸೇರಲಿಲ್ಲ. ಹಾಲನ್ನಷ್ಟೇ ಕುಡಿದು ಮಲಗಿದವಳು ಕಿಟಕಿಯ ತೆರೆ ಸರಿಸಿ ಚುಕ್ಕಿಗಳಿಂದ ತುಂಬಿದ ಆಕಾಶ ನೋಡತೊಡಗಿದೆ.

ಎಂದೂ ಹೆಚ್ಚಿಗೆ ಮಾತನಾಡಿಸದ ಶಾಂತಮ್ಮ, ಯಾರವರು ನಿಮ್ಮ ಸ್ನೇಹಿತರಾ ಬಂದಿದ್ದವರು ಅಂದ ಕೂಡಲೆ ನಗುಬಂತು. ಡ್ಯಾಫೋಡಿಲ್ಲೇ ಬೇರೆ ಶಾಂತಮ್ಮನೇ ಬೇರೆ.. ಅವಳು ಈ ಕ್ಷಣದಲ್ಲಿ ಮುಳುಗಿ ತೇಲುವ ಹಾರು ಹಕ್ಕಿ, ಶಾಂತಮ್ಮನೋ ಪ್ರತೀ ಸಾಲಿಗೂ, ಹೆಜ್ಜೆಗೂ ಭಾಷ್ಯವನ್ನೇ ಗ್ರಹಿಸುವ ಗಜಗಾಮಿನೀ...
ನನ್ನ ನಗುವಷ್ಟೇ ನೋಡಿ ಅವರಿಗೆ ಸಿಟ್ಟು ಬರುವ ಮೊದಲೇ ಹೇಳಿದೆ. ಚೈತ್ರನೆಂಬವನು ನನ್ನ ಸೋದರತ್ತೆಯ ಮಗನೂ, ಅಣ್ಣನೂ, ಗೆಳೆಯನೂ, ನನ್ನೆಲ್ಲ ಬಾಲ್ಯದ ಪಾಪಕಾರ್ಯಗಳಲ್ಲಿ ಸಹಭಾಗಿಯೂ, ಬೆಳೆವ ಕಾಲದ ಲೈಬ್ರರಿಯಾಗಿಯೂ,ನನ್ನ ಮದುವೆ ಮಂಟಪದ ಉಸ್ತುವಾರಿದಾರನಾಗಿಯೂ, ಈಗ ತನ್ನಂತೆಯೇ ಸಂಧ್ಯಾರಾಗದ ಹಾಗೇ ಇರುವ ಯೂರೋಪಿಯನ್ ಮನೆಯೊಂದರಲ್ಲಿ ನಿವಾಸಿಯಾಗಿಯೂ, ಸಮೃದ್ಧ ಕುಟುಂಬದ ಹಿರಿಯ ತಲೆಯಾಗಿಯೂ ಉಳಿದಿರುವ ವಿಷಯ..

ಓಹ್ ಹಾಗೇನೂ ಎಂದವರ ಮಾತಿನಲ್ಲಿ ಪಿಶ್...ಇಷ್ಟೇಯಾ ಎಂಬ ಉಪೇಕ್ಷೆಯಿತ್ತು. ಅವರಿಗೆ ಜಾಸ್ತಿ ಸಂದರ್ಶಕರಿಲ್ಲದ್ದರಿಂದಲೂ ಹೊತ್ತು ಮುಳುಗಿದ ಮೇಲೆ ಪವಿತ್ರ ಗ್ರಂಥಗಳನ್ನೆಲ್ಲ ಜೋಪಾನವಾಗಿ ಕಟ್ಟಿಡುತ್ತಿದ್ದುದರಿಂದಲೂ ಅವರ ಸಂಜೆಗಳ ತುಂಬ ಟೀವಿ ಧಾರಾವಾಹಿಗಳಿದ್ದವು. ಇದು ಯಾವ ಧಾರಾವಾಹಿಯ ಕತೆಯ ಲೆಕ್ಕಕ್ಕೂ ಬರದೆ ಇದ್ದುದರಿಂದ ಅವರ ಉತ್ಸುಕತೆ ಕಡಿಮೆಯಾಗಿ ಮಲಗುವ ಮುಂಚಿನ ಶ್ಲೋಕಾಚರಣೆ ಶುರುಮಾಡಿಕೊಂಡರು..

ತಾನು ಮತ್ತೆ ಕಿಟಕಿಯಾಚೆಗೆ ಕಣ್ಣು ನೆಟ್ಟಳು. ಶೈಲ ಚಿಕ್ಕಿ ಪುಟ್ಟ ವೈದೇಹಿಯ ಉದ್ದ ಜಡೆ ಹೆಣೆಯುತ್ತಾ ಕೇಳುತ್ತಿದ್ದಾಳೆ.. ಹೌದಾ ಅಮ್ಮಕ್ಕಾ ನಿನ್ನ ಮದುವೆಯಾಗುವುದ್ಯಾರು...? ಹಿಂದೆಮುಂದೆ ನೋಡದೆ ವೈದೇಹಿಯ ಉತ್ತರ ಬರುತ್ತದೆ - ಇನ್ಯಾರು ಅನ್ನತ್ತೆಯ ಮಗ ಚೈತ್ರಣ್ಣಯ್ಯನೇ ಅಲ್ದಾ.. ಎಲ್ಲರೂ ಖಿಲ್ಲನೆ ನಗುತ್ತಾರೆ.. ಆದರೆ ಅವನು ಚೂರೂಬೆಳ್ಳಗೆ ಇಲ್ಲವಲ್ಲಾ, ನಮ್ಮ ವೈದು ನೋಡಿದರೆ ಅಕೋ ಅಂಗಳದ ಪಾರಿಜಾತದ ಹಾಗಿದ್ದಾಳೆ... - ಅಯ್ಯೋ ಬಿಡು ಚಿಕ್ಕಿ, ಅವನೇನು ಅಂತ ಕಪ್ಪಿಲ್ಲ, ಚೂರೇ ಚೂರು ಪಾಂಡ್ಸ್ ಪವುಡರು ಹಚ್ಚಿದರೆ ಸಾಕು ಬೆಳ್ಳಗೆ ಕಾಣುತ್ತಾನೆ.. ವೈದೇಹಿಯ ಮಾತಿಗೆ ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ.. ಅನ್ನತ್ತೆಗೆ ನಕ್ಕೂ ನಕ್ಕೂ ಕಣ್ಣಲ್ಲಿ ನೀರೇ ಬಂದಿದೆ. ವೈ ಬೇಗ ಬಂದ್ರೆ, ಬೆಟ್ಟಕ್ಕೆ ಕರ್ಕಂಡು ಹೋಪುದು, ಇಲ್ದೆ ಇದ್ರೆ, ನೀ ಇಲ್ಲೆ ಅಡಿಗೆ ಆಟ ಆಡಿಕೊಂಡಿರು ನಾವೆಲ್ಲ ಹೋಗುತ್ತೇವೆ ಹೆದರಿಸುವ ಹಾಗೆ ಬಾಗಿಲಲ್ಲಿ ನಿಂತ ಚೈತ್ರನ ಮಾತಿಗೆ ಪೂರ್ತಿ ಹೆಣೆಯದ ಜಡೆಯಲ್ಲೇ ಎದ್ದು ಓಡಿದಳು ಅವಳು.. ಪಾಂಡ್ಸ್ ಪೌಡರು ಬ್ಯಾಡ್ದನೇ ಶೈಲಚಿಕ್ಕಿಯ ಮಾತು ಕೇಳುತ್ತಲ್ಲೂ ಹೆಚ್ಚು ಕಮ್ಮಿ ಚೈತ್ರನನ್ನು ಅಲ್ಲಿಂದ ದಬ್ಬಿಕೊಂಡೇ ಹೊರಟಳು... ಅಗೋ ಅಲ್ಲಿ ಧ್ರುವ ನಕ್ಷತ್ರ ಮತ್ತು ಶುಕ್ರದ ಮಧ್ಯದ ಆಕಾಶದಂಗಳದಲ್ಲಿ ಮಿನುಗುವ ಎರಡು ಪುಟಾಣಿ ಚುಕ್ಕಿಗಳು ಅವರಿಬ್ಬರೇ ಅಲ್ಲವೇ... ವೈ..ಮತ್ತು ಚೈ.. ಅರೇ ಅಲ್ಲೆಲ್ಲ ಹರಡಿಕೊಂಡ ಉಳಿದ ಚುಕ್ಕಿಗಳ್ಯಾರು... ಚಿಕ್ಕಿ, ಅನ್ನತ್ತೆ, ಅಮ್ಮ, ಅಮ್ಮಮ್ಮ..ಎಲ್ಲರೂ ಇಲ್ಲೆ ಇದ್ದಾರೆ ಅನ್ನಿಸಿ ಹಾಯಾಗಿ ಕಣ್ಣು ಮುಚ್ಚತೊಡಗಿತು.

9 comments:

shreeshum said...

super

Priyanka said...

kathe tumbha chennagidhe.. nimma prayythna niranthara heege saagali..

SHREE (ಶ್ರೀ) said...

ಚೆಂದದ ಕಥೆ... ಸುಪ್ಪರ್ಬ್...!

sunaath said...

ಭಾವಪ್ರಪಂಚದ ನವಿರಾದ ಅಲೆ.

ಮನಸ್ವಿನಿ said...

ವಾಹ್! ಚಂದ ಚಂದ

ಸಿಂಧು Sindhu said...

ಎಲ್ಲರ ಸ್ಪಂದನೆಗಳಿಗೂ

ಪ್ರೀತಿಯ ವಂದನೆಗಳು.

ಪ್ರೀತಿಯಿಂದ
ಸಿಂಧು

ಸುಶ್ರುತ ದೊಡ್ಡೇರಿ said...

nice.. typical sindhu akkan kathe! :-)

ಸಿಂಧು Sindhu said...

ಸುಶ್ರುತ,

ಧನ್ಯವಾದಗಳು.. :)

Usha said...

Tumba chennagide... :)